ಕೇರಳದ ಹಿನ್ನೀರಿನಲ್ಲಿ ದೋಣಿವಿಹಾರ
ಕೇರಳದ ಹಿನ್ನೀರಿನಲ್ಲಿ ದೋಣಿವಿಹಾರ
ಭಾರತದ ಎಚ್ಚರ! ಲೇಖಕರಿಂದ
ನೀವೊಂದು ದೋಣಿಮನೆಯಲ್ಲಿ ವಿಹರಿಸುತ್ತಿರುವುದನ್ನು ಸ್ವಲ್ಪ ಕಲ್ಪಿಸಿಕೊಳ್ಳಿ. ಸುಂದರವಾಗಿ ಸಜ್ಜುಗೊಳಿಸಲ್ಪಟ್ಟಿರುವ ಆ ದೋಣಿಯು ನಿಮ್ಮನ್ನು 44 ನದಿಗಳ ನದೀ ಮುಖಜ ಭೂಮಿಗಳನ್ನು ಸುತ್ತುಬಳಸುತ್ತಾ ಕೊಂಡೊಯ್ಯುತ್ತದೆ. ಆ ಕಲ್ಪನೆ ನಿಜವಾಗಬೇಕಾದರೆ ಭಾರತದ ನೈರುತ್ಯ ಭಾಗದಲ್ಲಿರುವ ಕೇರಳ ರಾಜ್ಯದ 900 ಕಿಲೊಮೀಟರ್‌ಗಳಷ್ಟು ಉದ್ದದ ಹಿನ್ನೀರಿನಲ್ಲಿ ನೀವು ಸಂಚರಿಸಬೇಕು. ಇದೊಂದು ಉಲ್ಲಾಸಕರವಾದ ಅಪೂರ್ವ ಅನುಭವವೇ ಸರಿ! ಪ್ರಕೃತಿಯ ಮಡಿಲಲ್ಲಿ ತೇಲುತ್ತಿರುವ ಅನಿಸಿಕೆಯಾಗುತ್ತದೆ. ನಿಮ್ಮ ದೋಣಿಯು ನಿಧಾನಗತಿಯಲ್ಲಿ ಸಾಗುತ್ತಾ ಹೋದಂತೆ ಪಕ್ಕದಲ್ಲಿ ಸಾಲುಸಾಲಾಗಿ ತೆಂಗಿನ ಮರಗಳಿರುವ ಜಲಭಾಗಗಳು (ಲಗೂನ್‌ಗಳು) ಕಣ್ಣಿಗೆ ಬೀಳುತ್ತವೆ. ಸೊಂಪಾಗಿ ಬೆಳೆದು ಗಾಳಿಗೆ ತೊಯ್ದಾಡುತ್ತಿರುವ ಹಚ್ಚಹಸಿರಿನ ಬತ್ತದ ಗದ್ದೆಗಳು, ಸಿಹಿನೀರಿನ ಸರೋವರಗಳು ಮತ್ತು ಮಾನವನಿರ್ಮಿತ ಕಾಲುವೆಗಳನ್ನು ನೀವು ಮೆಚ್ಚಿಕೊಳ್ಳದೇ ಇರಲಾರಿರಿ. ಬಹುಶಃ ಈ ಮನಸೂರೆಗೊಳಿಸುವ ಹಿನ್ನೀರಿನ ಕಾರಣದಿಂದಲೇ ನ್ಯಾಷನಲ್ ಜಿಯೊಗ್ರ್ಯಾಫಿಕ್ ಟ್ರ್ಯಾವೆಲರ್ ಪತ್ರಿಕೆಯು ಕೇರಳವನ್ನು “ ‘ಜೀವಮಾನಕಾಲದಲ್ಲಿ ನೋಡಲೇ ಬೇಕಾಗಿರುವ’ 50 ಮುಖ್ಯ ಪ್ರವಾಸಿತಾಣಗಳಲ್ಲಿ ಒಂದು” ಎಂದು ಪಟ್ಟಿಮಾಡಿರುತ್ತದೆ.
ಇಲ್ಲಿನ ಅನೇಕ ಕಾಲುವೆಗಳ ತೀರದಲ್ಲಿ ವಾಸಿಸುತ್ತಿರುವ ಜನರನ್ನು ಗಮನಿಸುವುದು ಸಹ ಮಹತ್ತ್ವಪೂರ್ಣ ಸಂಗತಿ. ತಮ್ಮ ನೆರೆಹೊರೆಯಲ್ಲಿ ಪ್ರವಾಸಿಗರಾಗಲಿ ಪಂಚತಾರಾ ಹೋಟೆಲುಗಳಾಗಲಿ ಇಲ್ಲದಿದ್ದಂಥ ಕಾಲವನ್ನು ಅವರು ಜ್ಞಾಪಿಸಿಕೊಳ್ಳುತ್ತಾರೆ. ಆದರೆ ಈಗಲೂ ಅವರ ಬದುಕಿನಲ್ಲಿ ಹೆಚ್ಚೇನೂ ಬದಲಾವಣೆಯಾಗಿಲ್ಲ. ಈಗ ಅವರಲ್ಲಿ ಕೆಲವರು ಹೊಸದಾಗಿ ಕಟ್ಟಲ್ಪಟ್ಟಿರುವ ಹೋಟೆಲುಗಳಲ್ಲಿ ಅಥವಾ ಪ್ರವಾಸೋದ್ಯಮಕ್ಕೆ ಸಂಬಂಧಪಟ್ಟ ಸಂಸ್ಥೆಗಳಲ್ಲಿ ಉದ್ಯೋಗಕ್ಕೆ ಸೇರಿದ್ದಾರಾದರೂ, ಅವರ ಸಂಸ್ಕೃತಿ ಮತ್ತು ದೈನಂದಿನ ಜೀವನ ಹಾಗೆಯೇ ಉಳಿದಿದೆ. ಅಲ್ಲಿನ ಜನರು ತಮ್ಮ ಬತ್ತದ ಗದ್ದೆಗಳನ್ನು ಮತ್ತು ತೆಂಗಿನ ತೋಪುಗಳನ್ನು ನೋಡಿಕೊಳ್ಳುತ್ತಾರೆ. ಅಲ್ಲದೆ ತಮ್ಮ ದೈನಂದಿನ ಆಹಾರಕ್ಕಾಗಿ ಮತ್ತು ಆದಾಯಕ್ಕಾಗಿ ಮೀನು ಹಿಡಿಯುವುದು ಹಾಗೂ ಮೀನು ಮಾರಾಟವನ್ನೂ ಮಾಡುವುದಿದೆ.
ಹಿನ್ನೀರಿನಲ್ಲಿ ಮೀನು ಹಿಡಿಯುವುದು
ಮೀನು ಹಿಡಿಯುವುದು ಇಲ್ಲಿನ ಜನರ ಜೀವನದ ಅವಿಭಾಜ್ಯ ಅಂಗ. ಬೇರೆಲ್ಲಿಯೂ ಕಾಣಸಿಗದ ಒಂದು ದೃಶ್ಯ ಯಾವುದೆಂದರೆ, ಸ್ತ್ರೀಯರು ಬಲೆಯ ಸಹಾಯವಿಲ್ಲದೆ ಬರಿಗೈಯಲ್ಲಿ ಕರಿಮೀನನ್ನು ಹಿಡಿಯುವುದೇ ಆಗಿದೆ. ಕೇರಳದ ಹಿನ್ನೀರಿನಲ್ಲಿ ಮಾತ್ರವೇ ಸಿಗುವಂಥ ಈ ಕರಿಮೀನು ಭಾರತೀಯರಿಗೆ ಮಾತ್ರವಲ್ಲದೆ ವಿದೇಶೀಯರಿಗೂ ತುಂಬ ಸ್ವಾದಿಷ್ಟಕರ ರಸಭಕ್ಷ್ಯ. ಈ ಮೀನನ್ನು ಹುಡುಕಲಿಕ್ಕಾಗಿ ಸ್ತ್ರೀಯರು ತಮ್ಮ ಹಿಂದೆ ಕೊಡಗಳನ್ನು ತೇಲಿಸಿಕೊಂಡು ಹಿನ್ನೀರಿನಲ್ಲಿ ದಾರಿಮಾಡಿಕೊಂಡು ಮುಂದೆ ಸಾಗುತ್ತಾರೆ. ಸ್ತ್ರೀಯರು ಹತ್ತಿರ ಬರುತ್ತಿರುವುದನ್ನು ನೋಡಿ ಮೀನುಗಳು ಥಟ್ಟನೆ ಕೆಳಗೆ ಮುಳುಗಿ ಕೆಸರಿನಲ್ಲಿ ತಮ್ಮ ತಲೆಗಳನ್ನು ಹುದುಗಿಸುತ್ತವೆ. ಈ ತಂತ್ರಕ್ಕೆ ಸ್ತ್ರೀಯರು ಮೋಸಹೋಗುವುದಿಲ್ಲ. ಅವರು ತಮ್ಮ ಪಾದಗಳಿಂದಲೇ ತಡಕಾಡಿ ಮೀನುಗಳು ಕೆಸರಿನಲ್ಲಿ ಎಲ್ಲಿ ಅಡಗಿಕೊಂಡಿವೆ ಎಂಬುದನ್ನು ಕಂಡುಹಿಡಿಯುತ್ತಾರೆ. ತದನಂತರ ಸರಕ್ಕನೆ ನೀರೊಳಗೆ ಮುಳುಗಿ ಅಜಾಗರೂಕ ಕೊಳ್ಳೆಯನ್ನು ಬರಿಗೈಯಿಂದ ಗಬಕ್ಕನೆ ಹಿಡಿದು, ವಿಲಿವಿಲಿ ಒದ್ದಾಡುತ್ತಿರುವ ಮೀನುಗಳನ್ನು ತೇಲುತ್ತಿರುವ ಕೊಡಗಳೊಳಗೆ ಹಾಕುತ್ತಾರೆ. ಅವರು ಸಾಕಷ್ಟು ಸಂಖ್ಯೆಯಲ್ಲಿ ಮೀನುಗಳನ್ನು ಹಿಡಿದ ಬಳಿಕ ದಡಕ್ಕೆ ಹಿಂದಿರುಗುತ್ತಾರೆ. ಗಿರಾಕಿಗಳು ಕಾತುರದಿಂದ ಅವರು ಬರುವುದನ್ನೆ ಕಾಯುತ್ತಿರುತ್ತಾರೆ. ಹೆಚ್ಚು ದುಬಾರಿಯಾದ ದೊಡ್ಡ ದೊಡ್ಡ ಮೀನುಗಳನ್ನು ಪಂಚತಾರಾ ಹೋಟೆಲುಗಳಿಗೆ ಕಳುಹಿಸಲಾಗುತ್ತದೆ ಮತ್ತು ಶ್ರೀಮಂತರು ಅವುಗಳನ್ನು ಆಸ್ವಾದಿಸುತ್ತಾರೆ. ಸ್ವಲ್ಪ ಚಿಕ್ಕ ಮೀನುಗಳು ಸಾಧಾರಣ ಜನರಿಗೆ ರುಚಿಕರವಾದ ಭೋಜನವಾಗುತ್ತವೆ.
ಚೀನೀ ಮೀನುಗಾರಿಕಾ ಬಲೆಗಳು
ಸುಂದರವಾದ ಚೀನೀ ಶೈಲಿಯ ಮೀನುಗಾರಿಕಾ ಬಲೆಗಳು ಹಿನ್ನೀರಿನ ತೀರಗಳಲ್ಲಿ ಸರ್ವಸಾಮಾನ್ಯವಾಗಿ ಕಂಡುಬರುತ್ತವೆ. ಇದು ಸಹ ಪ್ರವಾಸಿಗರ ಪ್ರಮುಖ ಆಕರ್ಷಣಾ ಕೇಂದ್ರವಾಗಿದೆ.
ಕುಬ್‌ಲೈ ಖಾನ್‌ನ ಆಸ್ಥಾನದಿಂದ ಬಂದ ಚೀನೀ ವ್ಯಾಪಾರಿಗಳು ಪ್ರಥಮವಾಗಿ ಈ ಬಲೆಗಳನ್ನು ಇಸವಿ 1400 ಕ್ಕೆ ಮುಂಚೆ ಕೊಚಿನ್‌ಗೆ (ಈಗ ಕೊಚ್ಚಿ) ತಂದರೆಂದು ನಂಬಲಾಗುತ್ತದೆ. ಕೈಯಿಂದ ನಡೆಸಲ್ಪಡುವ ಈ ಮೀನುಗಾರಿಕಾ ಸಾಧನಗಳನ್ನು ಮೊದಲು ಚೀನೀಯರು ಮತ್ತು ಸಮಯಾನಂತರ ಪೋರ್ಚುಗೀಸ್ ವಸಾಹತುಗಾರರು ಉಪಯೋಗಿಸಿದ್ದರು. ಸುಮಾರು 600 ಕ್ಕಿಂತ ಹೆಚ್ಚು ವರ್ಷಗಳ ಹಿಂದೆ ಮಾಡಿದಂತೆಯೇ ಇಂದಿಗೂ ಈ ಬಲೆಗಳು ಭಾರತದ ಅನೇಕ ಬೆಸ್ತರಿಗೆ ಜೀವನಾದಾಯವನ್ನು ಹಾಗೂ ಅಸಂಖ್ಯಾತ ಜನರಿಗೆ ಆಹಾರವನ್ನು ಒದಗಿಸುತ್ತವೆ. ಸೋಜಿಗದ ಸಂಗತಿಯೆಂದರೆ, ಇಂಥ ಒಂದು ಬಲೆಯಲ್ಲಿ ಹಿಡಿದ ಮೀನುಗಳ ಪ್ರಮಾಣವು ಒಂದು ಇಡೀ ಹಳ್ಳಿಗೇ ಉಣಿಸುವಷ್ಟಿರುತ್ತದೆ. ಅನೇಕ ಪ್ರವಾಸಿಗರಾದರೋ ಅಸ್ತಮಿಸುತ್ತಿರುವ ಸೂರ್ಯನ ಬೆಳಕಿನ
ಹಿನ್ನೆಲೆಯಲ್ಲಿ ಒಣಗುತ್ತಿರುವ ಈ ಬಲೆಗಳ ಸುಂದರ ಚಿತ್ರಗಳನ್ನು ತಮ್ಮ ಕ್ಯಾಮಾರಗಳಲ್ಲಿ ಸೆರೆಹಿಡಿಯಲು ಇಷ್ಟಪಡುತ್ತಾರೆ.ಚೀನೀ ಬಲೆಗಳ ಸುಂದರ ನೋಟ ಮಾತ್ರವೇ ಪ್ರವಾಸಿಗರನ್ನು ಹಿನ್ನೀರಿನ ತಾಣಕ್ಕೆ ಆಕರ್ಷಿಸುವುದಿಲ್ಲ. ಸಾಂಪ್ರದಾಯಿಕ ಹಾವುದೋಣಿ ಪಂದ್ಯಗಳಂಥ ಜಲಕ್ರೀಡಾ ಚಟುವಟಿಕೆಗಳು ಸಹ ಪ್ರತಿ ವರ್ಷ ಸಾವಿರಾರು ಮಂದಿಯನ್ನು ಇಲ್ಲಿಗೆ ಆಕರ್ಷಿಸಿ ಕರೆತರುತ್ತವೆ.
ಹಿನ್ನೀರಿನಲ್ಲಿ ದೋಣಿ ಪಂದ್ಯಗಳು
ಹಾವುದೋಣಿಗಳು ಉದ್ದವಾಗಿಯೂ ನೀಳವಾಗಿಯೂ ಇರುವ ದೋಣಿಗಳಾಗಿವೆ. ಅವುಗಳ ಹಿಂಭಾಗವು ಹಾವಿನ ಹೆಡೆಯಂತಿರುವುದರಿಂದಲೇ ಅವುಗಳನ್ನು ಹಾವುದೋಣಿ ಎಂದು ಕರೆಯಲಾಗುತ್ತದೆ. ಗತ ಸಮಯಗಳಲ್ಲಿ ಹಿನ್ನೀರಿನ ಪ್ರದೇಶದ ಪರಸ್ಪರ ವಿರೋಧಿ ಅರಸರು ಸುಗ್ಗಿಯ ನಂತರ ನಡೆಯುತ್ತಿದ್ದ ಕಾದಾಟಗಳಿಗಾಗಿ ಈ ದೋಣಿಗಳನ್ನು ಉಪಯೋಗಿಸುತ್ತಿದ್ದರು. ಇಂಥ ಕಾದಾಟಗಳು ನಿಂತುಹೋದಾಗ, ಈ ದೋಣಿಗಳ ಅಗತ್ಯವು ಕಡಿಮೆಯಾಯಿತು. ದೇವಸ್ಥಾನದ ಜಾತ್ರೆಗಳ ಸಮಯದಲ್ಲಿ ಮಾತ್ರವೇ ಈ ಭವ್ಯ ದೋಣಿಗಳು ನೀರಿನಲ್ಲಿ ಸತತವಾಗಿ ಸಂಚರಿಸುತ್ತಿದ್ದವು. ಆ ಸಮಯದಲ್ಲಿ ಬಹಳ ಆಡಂಭರದ ಪ್ರದರ್ಶನದೊಂದಿಗೆ ಇವುಗಳಿಗೆ ಚಾಲಕ ತಂಡವನ್ನು ನೇಮಿಸಿ, ಇವುಗಳನ್ನು ಅಲಂಕರಿಸಿ ಸ್ಥಳಿಕ ಸಂಸ್ಕೃತಿಯ ಪ್ರದರ್ಶನ ವಸ್ತುವಾಗಿ ಉಪಯೋಗಿಸಲಾಗುತ್ತಿತ್ತು. ಜಾತ್ರೆಯ ಕಾಲಾವಧಿಯಲ್ಲಿ, ಇಲ್ಲಿಗೆ ಬರುವ ಪ್ರತಿಷ್ಠಿತ ವ್ಯಕ್ತಿಗಳ ಗೌರವಾರ್ಥವಾಗಿ ದೋಣಿ ಪಂದ್ಯಗಳು ನಡೆಸಲ್ಪಡುತ್ತಿದ್ದವು. ಸುಮಾರು ಒಂದು ಸಾವಿರ ವರ್ಷಗಳ ಹಿಂದೆ ಆರಂಭವಾದ ಈ ಪದ್ಧತಿಯು ಇನ್ನೂ ವಿಜೃಂಭಣೆಯಿಂದ ನಡೆಯುತ್ತಿದೆ.
ಸಾಮಾನ್ಯವಾಗಿ ಇಂಥ ಸುಮಾರು 20 ದೋಣಿಗಳು ಪಂದ್ಯದಲ್ಲಿ ಸ್ಪರ್ಧಿಸುತ್ತವೆ; ಪ್ರತಿಯೊಂದು ದೋಣಿಯನ್ನು ನಡೆಸಲು 100 ರಿಂದ 150 ಮಂದಿಯ ಒಂದು ತಂಡವಿರುತ್ತದೆ. ನೂರಕ್ಕಿಂತಲೂ ಹೆಚ್ಚು ಮಂದಿ ಚಿಕ್ಕದಾದ ಹುಟ್ಟುಗಳನ್ನು ಹಿಡಿದುಕೊಂಡು ಪ್ರತಿಯೊಂದು ದೋಣಿಯ ಉದ್ದಕ್ಕೂ ಇಕ್ಕಡೆಗಳಲ್ಲಿ ಸಾಲಾಗಿ ಕುಳಿತುಕೊಂಡಿರುತ್ತಾರೆ. ದೋಣಿಯನ್ನು ನಿರ್ದಿಷ್ಟ ದಿಕ್ಕಿನಲ್ಲಿ ನಡೆಸಲಿಕ್ಕಾಗಿ ನಾಲ್ಕು ಮಂದಿ ಚುಕ್ಕಾಣಿಗರು ಉದ್ದವಾದ ಹುಟ್ಟುಗಳನ್ನು ಹಿಡಿದುಕೊಂಡು ದೋಣಿಯ ಹಿಂಭಾಗದಲ್ಲಿ ನಿಂತುಕೊಂಡಿರುತ್ತಾರೆ. ಹುಟ್ಟುಹಾಕುವವರಿಗೆ ಸಮಯ ಗೊತ್ತುಮಾಡಲಿಕ್ಕಾಗಿ ಇನ್ನಿಬ್ಬರು ವ್ಯಕ್ತಿಗಳು ದೋಣಿಯ ಮಧ್ಯಭಾಗದಲ್ಲಿ ನಿಂತುಕೊಂಡು ನಾದವರ್ಧಕ ಫಲಕದ ಮೇಲೆ ಮರದ ಕೋಲುಗಳಿಂದ ಹೊಡೆಯುತ್ತಿರುತ್ತಾರೆ. ಈ ಶಬ್ದದಿಂದ ಮಾತ್ರವಲ್ಲದೆ ಜೊತೆಯಲ್ಲೇ ಪ್ರಯಾಣಿಸುವ ಇನ್ನೂ ಆರು ಮಂದಿ ಪುರುಷರಿಂದಲೂ ಹುಟ್ಟುಹಾಕುವವರು ಹುರಿದುಂಬಿಸಲ್ಪಡುತ್ತಾರೆ. ಹುಟ್ಟುಗಾರರ ತಂಡವು ವೇಗವಾಗಿ ಸಾಗಲು ಉತ್ತೇಜಿಸುತ್ತಾ ಈ ಪುರುಷರು ಚಪ್ಪಾಳೆ ತಟ್ಟುತ್ತಾರೆ, ಸಿಳ್ಳುಹಾಕುತ್ತಾರೆ, ಕಿರುಚುತ್ತಾರೆ ಮತ್ತು ಅಂಬಿಗರ ಹಾಡುಗಳನ್ನು ಹಾಡುತ್ತಾರೆ. ಆರಂಭದಲ್ಲಿ ತಾಳಗತಿಗನುಸಾರ ಹುಟ್ಟುಹಾಕಿದ ಯುವ
ಪುರುಷರು ಪಂದ್ಯದ ಕೊನೆಯ ಭಾಗದಲ್ಲಿ ತಮ್ಮ ಉಳಿದೆಲ್ಲಾ ಶಕ್ತಿಯಿಂದ ಹುಟ್ಟುಹಾಕಿ ಗೆಲ್ಲುವ ಸರ್ವಪ್ರಯತ್ನವನ್ನೂ ಮಾಡುತ್ತಾರೆ. ಹೀಗೆ ಪಂದ್ಯವನ್ನು ಮುಕ್ತಾಯ ಹಂತಕ್ಕೆ ತರುತ್ತಾರೆ.ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು 1952ರಲ್ಲಿ ಹಿನ್ನೀರಿನ ಆಲಪ್ಪಿ ಎಂಬ ಪ್ರಮುಖ ಪಟ್ಟಣಕ್ಕೆ ಭೇಟಿ ನೀಡಿದರು. ಅಲ್ಲಿ ಅವರು ದೋಣಿ ಪಂದ್ಯವನ್ನು ನೋಡಿ ಬಹಳವಾಗಿ ಪ್ರಭಾವಿತರಾದರು. ಅವರು ಎಷ್ಟು ಆಕರ್ಷಿತರಾದರೆಂದರೆ, ತಮ್ಮ ಭದ್ರತೆಗಾಗಿ ಒದಗಿಸಿದ ಎಲ್ಲ ಏರ್ಪಾಡುಗಳನ್ನೂ ಮರೆತು ಜಯಸಾಧಿಸುತ್ತಿರುವ ದೋಣಿಗೆ ಜಿಗಿದು ಅಂಬಿಗರೊಂದಿಗೆ ಚಪ್ಪಾಳೆ ತಟ್ಟುತ್ತಾ ಹಾಡತೊಡಗಿದರಂತೆ. ಅವರು ದೆಹಲಿಗೆ ಹಿಂದಿರುಗಿದ ಬಳಿಕ ಹಾವುದೋಣಿಯೊಂದರ ಬೆಳ್ಳಿಯ ಪ್ರತಿಕೃತಿಯನ್ನು ಉಡುಗೊರೆಯಾಗಿ ಕಳುಹಿಸಿದರು. ಅದರ ಮೇಲೆ “ಸಮುದಾಯ ಜೀವನದ ಒಂದು ಅಪೂರ್ವ ವೈಶಿಷ್ಟ್ಯವಾಗಿರುವ ದೋಣಿ ಪಂದ್ಯದ ವಿಜಯಿಗಳಿಗೆ” ಎಂಬ ಕೆತ್ತನೆಯೂ ಅವರ ಹಸ್ತಾಕ್ಷರವೂ ಇತ್ತು. ಈ ಬೆಳ್ಳಿಯ ದೋಣಿಯನ್ನು ವಾರ್ಷಿಕ ನೆಹರೂ ಟ್ರೋಫಿ ಪಂದ್ಯದಲ್ಲಿ ಟ್ರೋಫಿಯಾಗಿ ಅಥವಾ ಪಾರಿತೋಷಕವಾಗಿ ಉಪಯೋಗಿಸಲಾಗುತ್ತದೆ. ಇಂಥ ಪಂದ್ಯಗಳನ್ನು ನೋಡಲಿಕ್ಕಾಗಿ ಪ್ರತಿ ವರ್ಷ ಸುಮಾರು ಒಂದು ಲಕ್ಷದಷ್ಟು ಜನರು ಕೂಡಿಬರುತ್ತಾರೆ. ಸಾಮಾನ್ಯವಾಗಿ ನಿಧಾನಗತಿಯಲ್ಲಿರುವ ಹಿನ್ನೀರಿಗೆ ಇಂಥ ಸಮಯಗಳಲ್ಲಿ ಜೀವಕಳೆ ಬರುತ್ತದೆ.
ತೇಲುವ ಮತ್ತು ವಿಹಾರಯಾನದ ಸುಖವಿಲಾಸಿ ಹೋಟೆಲುಗಳು
ಹಿನ್ನೀರಿನ ದೋಣಿಗಳಲ್ಲಿ ಪ್ರವಾಸಿಗರನ್ನು ಆಕರ್ಷಿಸುವುದು ಹಾವುದೋಣಿಗಳು ಮಾತ್ರವೇ ಅಲ್ಲ. ಅಕ್ಕಿದೋಣಿಗಳು ಅತ್ಯಂತ ಜನಪ್ರಿಯವಾಗಿವೆ. ಇವು ಹಳೆಯ ಶೈಲಿಯ ದೋಣಿಗಳಾಗಿದ್ದು ಈಗ ಸುಖವಿಲಾಸದ ದೋಣಿಮನೆಗಳಾಗಿ ಮಾರ್ಪಟ್ಟಿವೆ.
ಪ್ರವಾಸಿಗರು ಉಪಯೋಗಿಸುವ ಹೆಚ್ಚಿನ ದೋಣಿಮನೆಗಳನ್ನು ಹೊಸದಾಗಿ ನಿರ್ಮಿಸಲಾಯಿತಾದರೂ ಇಂದು ಬಳಕೆಯಲ್ಲಿರುವ ಇತರ ಅಕ್ಕಿದೋಣಿಗಳು ನೂರಕ್ಕಿಂತಲೂ ಹೆಚ್ಚು ವರ್ಷಗಳಷ್ಟು ಹಳೆಯವುಗಳಾಗಿವೆ. ಅವನ್ನು ಪ್ರವಾಸೋದ್ಯಮಕ್ಕಾಗಿ ನವೀಕರಿಸಲಾಗಿದೆ. ಮೂಲತಃ ಅವುಗಳು ಕೆಟ್ಟುವಲ್ಲಮ್ ಅಂದರೆ “ಗಂಟು ಹೆಣೆದ ದೋಣಿ” ಎಂಬ ಹೆಸರಿನಿಂದ ಪ್ರಸಿದ್ಧವಾಗಿದ್ದವು. ಇಡೀ ದೋಣಿಯು ಹೆಬ್ಬಲಸಿನ ಮರದ ಹಲಗೆಗಳಿಂದ ರಚಿತವಾಗಿದ್ದು, ಮೊಳೆಯೇ ಇಲ್ಲದೆ ಕೇವಲ ಹುರಿಹಗ್ಗಗಳಿಂದ ಗಂಟುಹಾಕಿ ಒಂದಾಗಿ ಬಿಗಿಯಲ್ಪಟ್ಟಿತ್ತು. ಈ ದೋಣಿಗಳನ್ನು ಹಳ್ಳಿಯಿಂದ ಹಳ್ಳಿಗೆ ಅಕ್ಕಿ ಮತ್ತು ಇತರ ದಿನಸಿ ಪದಾರ್ಥಗಳನ್ನು ಹಾಗೂ ಬಹುದೂರದ ಸ್ಥಳಗಳಿಗೆ ಸಂಬಾರ ಸಾಮಗ್ರಿಗಳನ್ನು ಕೊಂಡೊಯ್ಯಲಿಕ್ಕಾಗಿ ಉಪಯೋಗಿಸಲಾಗುತ್ತಿತ್ತು. ಆಧುನಿಕ ವಾಹನಗಳು ಬಳಕೆಗೆ ಬಂದ ಕಾರಣ ಈ ದೋಣಿಗಳು ಬಹುಮಟ್ಟಿಗೆ ಬಳಕೆಯಲ್ಲಿಲ್ಲದೇ ಹೋದವು. ಆದರೆ, ಒಬ್ಬ ಪ್ರತಿಭಾವಂತ ವಾಣಿಜ್ಯೋದ್ಯಮಿಗೆ ಪ್ರವಾಸಿ ಉದ್ಯಮಕ್ಕಾಗಿ ಈ ದೋಣಿಗಳನ್ನು ದೋಣಿಮನೆಗಳಾಗಿ ಮಾರ್ಪಡಿಸುವ ಉಪಾಯ ಹೊಳೆಯಿತು. ಶೌಚಗೃಹದ ಸೌಕರ್ಯವಿರುವ ಸುಖಭೋಗದ ಬೆಡ್‌ರೂಮ್‌ಗಳು, ಸುಂದರವಾಗಿ ಸಜು ಗೊಳಿಸಲ್ಪಟ್ಟಿರುವ ವಾಸದ ಕೋಣೆಗಳು ಮತ್ತು ಬಾಲ್ಕನಿಗಳಿರುವ ದೋಣಿಮನೆಗಳನ್ನು ತೇಲುವ ಹೋಟೆಲುಗಳೆಂದು ಕರೆಯಸಾಧ್ಯವಿದೆ. ನಿಮಗೆ ಇಷ್ಟವಿರುವಲ್ಲಿಗೆ ದೋಣಿಯನ್ನು ಕೊಂಡೊಯ್ಯಲಿಕ್ಕಾಗಿ ಮತ್ತು ನೀವು ತಿನ್ನಲು ಬಯಸುವ ಆಹಾರವನ್ನು ಸಿದ್ಧಪಡಿಸಲಿಕ್ಕಾಗಿ ಪರಿಚಾರಕರು ಸಹ ಇದ್ದಾರೆ.
ಸಂಜೆಯಾದಾಗ ದೋಣಿಗಳನ್ನು ಹಿನ್ನೀರಿನ ತೀರದಲ್ಲಿ ಅಥವಾ ಹೆಚ್ಚು ಪ್ರಶಾಂತತೆ ಮತ್ತು ಏಕಾಂತತೆಯನ್ನು ಬಯಸುವವರಿಗಾಗಿ ಸರೋವರದ ಮಧ್ಯಭಾಗದಲ್ಲಿ ಲಂಗರುಹಾಕಿ ನಿಲ್ಲಿಸಲಾಗುತ್ತದೆ. ಅಲ್ಲಿ ಒಬ್ಬನು ಹಿನ್ನೀರಿನ ಆಹ್ಲಾದಕರವಾದ ನೀರವತೆಯನ್ನು ಆನಂದಿಸಸಾಧ್ಯವಿದೆ, ಆದರೆ ಮೀನುಗಳು ನೀರನ್ನು ಹಾರಿಸುವ ಸಪ್ಪಳವು ಕೆಲವೊಮ್ಮೆ ಆ ಪ್ರಶಾಂತತೆಯನ್ನು ಭಂಗಗೊಳಿಸುತ್ತದೆ.
ಹಿನ್ನೀರಿನ ಪ್ರದೇಶದಲ್ಲಿರುವ ಎಲ್ಲ ಜೀವರಾಶಿಯೂ ಆರಾಮವಾಗಿ
ವಿಶ್ರಮಿಸಿಕೊಳ್ಳುತ್ತಿರುವುದಿಲ್ಲ. ಈ ಕ್ಷೇತ್ರದಲ್ಲಿರುವ ‘ಮನುಷ್ಯರನ್ನು ಹಿಡಿಯುವ ಬೆಸ್ತರು’ ಎಚ್ಚರವಾಗಿರುತ್ತಾರೆ ಮತ್ತು ಹುರುಪುಳ್ಳವರಾಗಿದ್ದಾರೆ.ಹಿನ್ನೀರಿನಲ್ಲಿ ‘ಮನುಷ್ಯರನ್ನು ಹಿಡಿಯುವುದು’
‘ಮನುಷ್ಯರನ್ನು ಹಿಡಿಯುವ ಬೆಸ್ತರು’ ಎಂಬ ಅಭಿವ್ಯಕ್ತಿಯು ಬೆಸ್ತರಾಗಿದ್ದ ತನ್ನ ಶಿಷ್ಯರಿಗೆ ಯೇಸು ಹೇಳಿದ ಮಾತುಗಳಿಂದ ಬಂದದ್ದಾಗಿದೆ. “ನನ್ನ ಹಿಂದೆ ಬನ್ನಿರಿ; ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ನಿಮ್ಮನ್ನು ಮಾಡುವೆನು” ಎಂದು ಅವನು ಹೇಳಿದನು. ಯೇಸು ಹೀಗೆ ಹೇಳುವಾಗ ತನ್ನ ಶಿಷ್ಯರಾಗಲು ಜನರಿಗೆ ಸಹಾಯಮಾಡುವ ಒಂದು ಕೆಲಸವನ್ನು ಸೂಚಿಸುತ್ತಿದ್ದನು. (ಮತ್ತಾಯ 4:18, 19; 28:19, 20) ಈ ನೇಮಕವನ್ನು ಹಿನ್ನೀರಿನ ಕ್ಷೇತ್ರಗಳಲ್ಲಿರುವವರನ್ನೂ ಸೇರಿಸಿ ಲೋಕವ್ಯಾಪಕವಾಗಿರುವ ಯೆಹೋವನ ಸಾಕ್ಷಿಗಳು ಪೂರೈಸುತ್ತಿದ್ದಾರೆ.
ಕೇರಳದಲ್ಲಿ ಯೆಹೋವನ ಸಾಕ್ಷಿಗಳ 132 ಸಭೆಗಳಿದ್ದು, ಅವುಗಳಲ್ಲಿ 13 ಸಭೆಗಳು ಹಿನ್ನೀರಿನ ಪ್ರದೇಶದಾದ್ಯಂತ ಇವೆ. ಈ ಸಭೆಗಳ ಅನೇಕ ಸದಸ್ಯರ ಕಸುಬು ಮೀನು ಹಿಡಿಯುವುದಾಗಿದೆ. ಅವರಲ್ಲಿ ಒಬ್ಬನು ಮೀನು ಹಿಡಿಯುತ್ತಿರುವಾಗ ತನ್ನ ಜೊತೆಯಲ್ಲಿದ್ದವನಿಗೆ ದೇವರ ರಾಜ್ಯದ ಕುರಿತು ತಿಳಿಸಿದನು. ಸ್ವಲ್ಪದರಲ್ಲೇ ಆ ವ್ಯಕ್ತಿ ತನ್ನ ಚರ್ಚು ಹಾಗೂ ಬೈಬಲಿನ ಬೋಧನೆಗಳ ನಡುವಣ ವ್ಯತ್ಯಾಸವನ್ನು ಕಂಡುಕೊಂಡನು. ಅವನ ಹೆಂಡತಿ ಮತ್ತು ನಾಲ್ಕು ಮಕ್ಕಳಿಗೆ ಸಹ ಇದರಲ್ಲಿ ಆಸಕ್ತಿ ಉಂಟಾಯಿತು. ಅವರೊಂದಿಗೆ ಬೈಬಲ್ ಅಧ್ಯಯನವನ್ನು ಆರಂಭಿಸಲಾಯಿತು. ಅವರು ಬಹು ಬೇಗನೆ ಪ್ರಗತಿಯನ್ನು ಮಾಡಿದರು ಮತ್ತು ಆ ಆರು ಮಂದಿಯಲ್ಲಿ ನಾಲ್ವರು ಈಗಾಗಲೇ ದೀಕ್ಷಾಸ್ನಾನವನ್ನು ಪಡೆದುಕೊಂಡಿದ್ದಾರೆ. ಮಕ್ಕಳಲ್ಲಿ ಇನ್ನಿಬ್ಬರು ಈ ಗುರಿಯ ಕಡೆಗೆ ಪ್ರಗತಿಯನ್ನು ಮಾಡುತ್ತಿದ್ದಾರೆ.
ಒಂದು ಸಭೆಯ ಸದಸ್ಯರು ಸುವಾರ್ತೆಯನ್ನು ಸಾರಲಿಕ್ಕಾಗಿ ದೋಣಿಯ ಮೂಲಕ ಒಂದು ಚಿಕ್ಕ ದ್ವೀಪಕ್ಕೆ ಪ್ರಯಾಣಿಸಿದರು. ಈ ದ್ವೀಪಕ್ಕೆ ಹೋಗಿಬರಲು ದೋಣಿ ವ್ಯವಸ್ಥೆಯು ತೀರಾ ವಿರಳವಾಗಿರುವುದರಿಂದ, ಸ್ಥಳಿಕ ಜನರು ಇದನ್ನು ಕಡಮಕುಡಿ ಎಂದು ಕರೆಯುತ್ತಾರೆ. “ಒಳಗೆ ಬಂದರೆ ಸಿಕ್ಕಿಬೀಳುತ್ತೀರಿ” ಎಂಬುದೇ ಇದರ ಅರ್ಥ. ಈ ದ್ವೀಪದಲ್ಲಿ ಯೆಹೋವನ ಸಾಕ್ಷಿಗಳು ಜೋನಿ ಮತ್ತು ಅವನ ಹೆಂಡತಿಯಾದ ರಾಣಿಯನ್ನು ಭೇಟಿಯಾದರು. ಇವರು ಜನ್ಮತಃ ಕ್ಯಾಥೊಲಿಕರಾಗಿದ್ದರೂ ಒಂದು ಧ್ಯಾನ ಕೇಂದ್ರದೊಂದಿಗೆ ಸಹವಾಸಮಾಡುತ್ತಿದ್ದು ತಮ್ಮ ಎಲ್ಲ ಹಣವನ್ನು ಅದಕ್ಕೆ ದಾನಮಾಡಿದ್ದರು. ಬೈಬಲ್ ಸತ್ಯದ ಸಂದೇಶದಲ್ಲಿ ಜೋನಿ ಬಹಳವಾದ ಆಸಕ್ತಿಯನ್ನು ತೋರಿಸಿದನು ಮತ್ತು ಅವನೊಂದಿಗೆ ಬೈಬಲ್ ಅಧ್ಯಯನವು ಆರಂಭಿಸಲ್ಪಟ್ಟಿತು. ತಾನು ಹೊಸದಾಗಿ ಕಲಿತ ವಿಷಯಗಳನ್ನು ಅವನು ಇತರರಿಗೆ ತಿಳಿಸಲಾರಂಭಿಸಿದನು. ಬೈಬಲ್ ಸತ್ಯವು ಧೂಮಪಾನ ಹಾಗೂ ಮದ್ಯಪಾನ ಚಟವನ್ನು ಬಿಟ್ಟುಬಿಡುವಂತೆ ಅವನಿಗೆ ಸಹಾಯಮಾಡಿತು!
ಜೋನಿ ಮಾಡುತ್ತಿದ್ದ ಕೆಲಸವು ಬೈಬಲ್ ಬೋಧನೆಯೊಂದಿಗೆ ಹೊಂದಿಕೆಯಲ್ಲಿರಲಿಲ್ಲವಾದುದರಿಂದ ಅವನು ಆ ಕೆಲಸವನ್ನು ಬಿಟ್ಟುಬಿಟ್ಟನು. ಆರಂಭದಲ್ಲಿ ಇದು ಹಣಕಾಸಿನ ತೊಂದರೆಯನ್ನು ತಂದೊಡ್ಡಿತು. ಆದರೆ ಸ್ವಲ್ಪದರಲ್ಲೇ ಜೋನಿಯು ಏಡಿಗಳನ್ನು ಹಿಡಿದು ಮಾರತೊಡಗಿದನು. ಹೀಗೆ ಅವನು ತನ್ನ ಕುಟುಂಬದ ಆವಶ್ಯಕತೆಯನ್ನು ಪೂರೈಸಲು ಶಕ್ತನಾದನು. ಅವನು 2006ರ ಸೆಪ್ಟಂಬರ್ ತಿಂಗಳಿನಲ್ಲಿ ದೀಕ್ಷಾಸ್ನಾನ ಪಡೆದುಕೊಂಡನು ಮತ್ತು ಒಂದು ವರ್ಷದ ಬಳಿಕ ಅವನ ಹೆಂಡತಿಯೂ ಇಬ್ಬರು ಮಕ್ಕಳೂ ದೀಕ್ಷಾಸ್ನಾನ ಪಡೆದುಕೊಂಡರು. ಭೂಪರದೈಸಿನಲ್ಲಿ ಅಂದರೆ ಇಡೀ ಭೂಮಿಯಲ್ಲಿ ಒಂದು ಉದ್ಯಾನವನದಂಥ ಪರಿಸ್ಥಿತಿ ಬರುವಾಗ ಅದರಲ್ಲಿ ನಿತ್ಯಕ್ಕೂ ಜೀವಿಸುವ ಪ್ರತೀಕ್ಷೆಯು ಜೀವನದ ಕುರಿತಾದ ಅವರ ದೃಷ್ಟಿಕೋನವನ್ನೇ ಸಂಪೂರ್ಣವಾಗಿ ಬದಲಾಯಿಸಿತು.—ಕೀರ್ತನೆ 97:1; 1 ಯೋಹಾನ 2:17.
ಕೇರಳದ ಹಿನ್ನೀರಿನ ಪ್ರದೇಶಕ್ಕೆ ಭೇಟಿ ನೀಡುವುದು ನಿಜವಾಗಿಯೂ ಆಹ್ಲಾದಕರವಾದ ಅನುಭವ. ಚೀನೀ ಮೀನುಗಾರಿಕಾ ಬಲೆಗಳು, ಹಾವುದೋಣಿಗಳು ಮತ್ತು ದೋಣಿಮನೆಗಳು ಅಲ್ಲಿರುವುದರಿಂದ ಮಾತ್ರವೇ ಅಲ್ಲ, ‘ಮನುಷ್ಯರನ್ನು ಹಿಡಿಯುವ ಬೆಸ್ತರು’ ಅಂದರೆ ಯೆಹೋವನ ನಂಬಿಗಸ್ತ ಸಾಕ್ಷಿಗಳು ಅಲ್ಲಿರುವುದರಿಂದಲೂ ಇದು ಆಹ್ಲಾದಕರ ಅನುಭವವಾಗಿದೆ. (g 4/08)
[ಪುಟ 10, 11ರಲ್ಲಿರುವ ಭೂಪಟ]
(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)
ಭಾರತ
ಕೇರಳ
[ಪುಟ 11ರಲ್ಲಿರುವ ಚಿತ್ರ]
ಮೀನು ಹಿಡಿಯುವುದು ಕೇರಳದವರ ಜೀವನದ ಅವಿಭಾಜ್ಯ ಅಂಗ
[ಕೃಪೆ]
Top photo Salim Pushpanath
[ಪುಟ 11ರಲ್ಲಿರುವ ಚಿತ್ರ]
ಬರಿಗೈಯಲ್ಲಿ ಮೀನನ್ನು ಹಿಡಿಯುವ ಸ್ತ್ರೀಯರ ಕೈಚಳಕ
[ಪುಟ 12ರಲ್ಲಿರುವ ಚಿತ್ರ]
ಹಾವುದೋಣಿ ಪಂದ್ಯ
[ಪುಟ 12ರಲ್ಲಿರುವ ಚಿತ್ರ]
“ಕೆಟ್ಟುವಲ್ಲಮ್”
[ಪುಟ 12, 13ರಲ್ಲಿರುವ ಚಿತ್ರ]
ದೋಣಿಮನೆ
[ಪುಟ 12, 13ರಲ್ಲಿರುವ ಚಿತ್ರ]
ಜೋನಿ ಮತ್ತು ಅವನ ಹೆಂಡತಿ ರಾಣಿ
[ಪುಟ 12ರಲ್ಲಿರುವ ಚಿತ್ರ ಕೃಪೆ]
ಸಲೀಂ ಪುಷ್ಪನಾಥ್