ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರು ನಿಮ್ಮಿಂದ ಏನನ್ನು ನಿರೀಕ್ಷಿಸುತ್ತಾನೆ?

ದೇವರು ನಿಮ್ಮಿಂದ ಏನನ್ನು ನಿರೀಕ್ಷಿಸುತ್ತಾನೆ?

ಬೈಬಲಿನ ದೃಷ್ಟಿಕೋನ

ದೇವರು ನಿಮ್ಮಿಂದ ಏನನ್ನು ನಿರೀಕ್ಷಿಸುತ್ತಾನೆ?

ನಮ್ಮ ಕಾರ್ಯಮಗ್ನ ಬದುಕು ಬಹಳಷ್ಟು ಸಮಯ ಮತ್ತು ಶಕ್ತಿಯನ್ನು ಕಬಳಿಸಿಬಿಡುತ್ತದೆ. ಕೆಲವೊಮ್ಮೆ ನಮ್ಮೆಲ್ಲಾ ಜವಾಬ್ದಾರಿಗಳನ್ನು ಪೂರೈಸಲು ತುಂಬ ಹೆಣಗಾಡಬೇಕಾದೀತು. ಆದರೆ ನಾವು ಮನಸ್ಸಿನಲ್ಲಿಡಬೇಕಾದ ಸಂಗತಿಯೇನೆಂದರೆ ನಮಗೆ ಜೀವ ಕೊಟ್ಟವನು ದೇವರಾಗಿದ್ದಾನೆ. (ಕೀರ್ತನೆ 36:9) ಹೀಗಿರುವುದರಿಂದ ನಾವಾತನಿಗೆ ಎಷ್ಟು ಸಮಯ ಹಾಗೂ ಶಕ್ತಿಯನ್ನು ಕೊಡಬೇಕೆಂದು ಆತನು ನಿರೀಕ್ಷಿಸುತ್ತಾನೆ? ಇದಕ್ಕೆ ಬೈಬಲ್‌ ಕೊಡುವ ತರ್ಕಸಂಗತ ಉತ್ತರವು ಉತ್ತೇಜನದಾಯಕವಾಗಿದೆ.

ದೇವರು ಮಾನವರಿಂದ ಏನನ್ನು ನಿರೀಕ್ಷಿಸುತ್ತಾನೆ ಎಂಬುದು ಆತನ ಮಗನಾದ ಯೇಸುವಿಗಿಂತ ಚೆನ್ನಾಗಿ ಯಾರಿಗೂ ತಿಳಿದಿಲ್ಲ. (ಮತ್ತಾಯ 11:27) ಆದುದರಿಂದಲೇ, ಅತ್ಯಂತ ಶ್ರೇಷ್ಠ ಆಜ್ಞೆ ಯಾವುದೆಂದು ಒಬ್ಬನು ಕೇಳಿದಾಗ ಯೇಸು ಹೇಳಿದ್ದು: “ನಿನ್ನ ದೇವರಾದ ಕರ್ತನನ್ನು [ಯೆಹೋವನನ್ನು] ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಬುದ್ಧಿಯಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು.” (ಮಾರ್ಕ 12:30) ಈ ಆಜ್ಞೆಯ ಅರ್ಥವೇನು? ದೇವರು ನಮ್ಮಿಂದ ಅತಿಯಾದದ್ದನ್ನು ಕೇಳಿಕೊಳ್ಳುತ್ತಿದ್ದಾನೋ?

ಪೂರ್ಣಪ್ರಾಣದಿಂದ ದೇವರನ್ನು ಪ್ರೀತಿಸುವುದರಲ್ಲಿ ಏನೆಲ್ಲ ಸೇರಿದೆ?

ನಮ್ಮೆಡೆಗಿನ ದೇವರ ಅಪರಿಮಿತ ಒಳ್ಳೇತನದ ಬಗ್ಗೆ ಧ್ಯಾನಿಸುವಾಗ ಆತನ ಮೇಲಣ ನಮ್ಮ ಪ್ರೀತಿ ಹೆಚ್ಚಾಗುತ್ತದೆ. ನಮ್ಮ ಪ್ರೀತಿಯು ಪೂರ್ಣಪ್ರಾಣದ್ದಾಗಿರುವಲ್ಲಿ ನಮ್ಮ ಬಳಿ ಏನಿದೆಯೋ ಅದರಲ್ಲಿ ಅತ್ಯುತ್ತಮವಾದದ್ದನ್ನೇ ಆತನಿಗೆ ಕೊಡುವೆವು. ಆಗ ನಮಗೂ, “ಯೆಹೋವನ ಮಹೋಪಕಾರಗಳಿಗೆ ಬದಲೇನು ಮಾಡಲಿ?” ಎಂದು ಕೇಳಿದ ಬೈಬಲ್‌ ಲೇಖಕನಂತೆ ಅನಿಸುವುದು. (ಕೀರ್ತನೆ 116:12) ದೇವರ ಮೇಲೆ ನಮಗೆ ಅಂಥದ್ದೇ ಪ್ರೀತಿಯಿರುವಲ್ಲಿ ನಮ್ಮ ಸಮಯವನ್ನು ಹೇಗೆ ಉಪಯೋಗಿಸುವೆವು?

ಆರಾಧನೆಗಾಗಿ ನಾವು ಪ್ರತಿ ವಾರ ಇಂತಿಷ್ಟೇ ತಾಸುಗಳನ್ನು ಬದಿಗಿರಿಸಬೇಕೆಂದು ಬೈಬಲ್‌ ತಿಳಿಸುವುದಿಲ್ಲ. ಆದಾಗ್ಯೂ ಜೀವನದಲ್ಲಿ ನಾವು ಆದ್ಯತೆ ಕೊಡಬೇಕಾದ ಚಟುವಟಿಕೆಗಳಾವುವು ಮತ್ತು ಅವುಗಳಿಗೆ ಯಾಕೆ ಆದ್ಯತೆ ಕೊಡಬೇಕೆಂಬುದನ್ನು ಅದು ವಿವರಿಸುತ್ತದೆ. ಉದಾಹರಣೆಗೆ, ನಾವು ದೇವಜ್ಞಾನವನ್ನು ಪಡಕೊಳ್ಳಬೇಕೆಂದು ಯೇಸು ಹೇಳಿದನು ಏಕೆಂದರೆ ಅದು ‘ನಿತ್ಯಜೀವಕ್ಕೆ’ ನಡೆಸುವ ಪ್ರಮುಖ ಹೆಜ್ಜೆಯಾಗಿದೆ. (ಯೋಹಾನ 17:3) ತನ್ನ ಹಿಂಬಾಲಕರು ಈ ಜ್ಞಾನವನ್ನು ದೇವರನ್ನರಿಯದವರಿಗೆ ಕೊಡುವ ಮೂಲಕ ನಿತ್ಯಜೀವ ಪಡೆಯಲು ಅಂಥವರಿಗೂ ಸಹಾಯ ಮಾಡಬೇಕೆಂದು ಯೇಸು ಹೇಳಿದನು. (ಮತ್ತಾಯ 28:19, 20) ಆಧ್ಯಾತ್ಮಿಕ ಬಲ ಪಡೆಯಲು ಮತ್ತು ಪರಸ್ಪರರನ್ನು ಉತ್ತೇಜಿಸಲು ಜೊತೆ ವಿಶ್ವಾಸಿಗಳೊಂದಿಗೆ ಕ್ರಮವಾಗಿ ಕೂಡಿಬರಬೇಕೆಂದೂ ಬೈಬಲ್‌ ನಮಗೆ ಆದೇಶ ಕೊಡುತ್ತದೆ. (ಇಬ್ರಿಯ 10:24, 25) ಈ ಎಲ್ಲಾ ಚಟುವಟಿಕೆಗಳಿಗೆ ಸಮಯ ಬೇಕಾಗುತ್ತದೆ.

ನಾವು ಮತಾಂಧರಂತೆ ಜೀವಿಸಬೇಕು ಅಂದರೆ ನಮ್ಮ ಜೀವನದಲ್ಲಿ ಆರಾಧನೆಯ ಹೊರತು ಬೇರಾವುದೇ ಚಟುವಟಿಕೆಗಳಿರಬಾರದು ಎಂದು ದೇವರು ನಿರೀಕ್ಷಿಸುತ್ತಾನೋ? ಖಂಡಿತ ಇಲ್ಲ! ದಿನನಿತ್ಯದ ಬದುಕಿಗೆ ಸಂಬಂಧಪಟ್ಟ ವಿಷಯಗಳಿಗೂ ನಾವು ಗಮನಕೊಡಬೇಕು. ಮನೆಯ ಯಜಮಾನನು ತನ್ನ ಕುಟುಂಬದ ಅಗತ್ಯಗಳನ್ನು ಪೂರೈಸಬೇಕೆಂದು ಬೋಧಿಸುತ್ತಾ ಬೈಬಲ್‌ ಹೇಳುವುದು: “ಯಾವನಾದರೂ ಸ್ವಂತ ಜನರನ್ನು, ವಿಶೇಷವಾಗಿ ತನ್ನ ಮನೆಯವರನ್ನು ಸಂರಕ್ಷಿಸದೆ ಹೋದರೆ” ಅಂದರೆ ಅವರ ಅಗತ್ಯಗಳನ್ನು ಪೂರೈಸದಿದ್ದರೆ ‘ಅವನು ನಂಬದವನಿಗಿಂತ ಕಡೆಯಾದವನು ಆಗಿದ್ದಾನೆ.’—1 ತಿಮೊಥೆಯ 5:8.

ದೇವರು ಮಾನವನನ್ನು ಸೃಷ್ಟಿಸಿದಾಗ ಸಂತೋಷಪಡುವ ಸಾಮರ್ಥ್ಯವನ್ನೂ ಅವನಿಗೆ ಕೊಟ್ಟನು. ಆದ್ದರಿಂದ ನಮ್ಮ ಬಂಧುಮಿತ್ರರೊಂದಿಗೆ ಕೂತು ಊಟ ಮಾಡುವುದರಲ್ಲಿ ಅಥವಾ ಮೋಜು ಮಾಡುವುದರಲ್ಲಿ ಸಮಯ ಕಳೆಯುವುದು ತಪ್ಪೇನಲ್ಲ. ರಾಜ ಸೊಲೊಮೋನನು ಹೇಳಿದ್ದು: “ಮನುಷ್ಯರು ತಮ್ಮ ಜೀವಮಾನದಲ್ಲೆಲ್ಲಾ ಉಲ್ಲಾಸವಾಗಿ ಸುಖವನ್ನನುಭವಿಸುವದಕ್ಕಿಂತ ಇನ್ನೇನೂ ಅವರಿಗೆ ಮೇಲಿಲ್ಲವೆಂದು ನಾನು ಗ್ರಹಿಸಿದ್ದೇನೆ. ಇದಲ್ಲದೆ ಪ್ರತಿಯೊಬ್ಬನು ಅನ್ನಪಾನಗಳನ್ನು ತೆಗೆದುಕೊಂಡು ತನ್ನ ನಾನಾ ಪ್ರಯಾಸಗಳಲ್ಲಿಯೂ ಸುಖವನ್ನನುಭವಿಸುವದು ದೇವರ ಅನುಗ್ರಹವೇ.”​—ಪ್ರಸಂಗಿ 3:12, 13.

ಅಲ್ಲದೇ ಯೆಹೋವನು, “ನಾವು ಧೂಳಿಯಾಗಿದ್ದೇವೆಂಬದನ್ನು ನೆನಪುಮಾಡಿಕೊಳ್ಳುತ್ತಾನೆ” ಅಂದರೆ ನಮ್ಮ ಇತಿಮಿತಿಗಳನ್ನು ಅರ್ಥಮಾಡಿಕೊಳ್ಳುತ್ತಾನೆ. (ಕೀರ್ತನೆ 103:14) ನಮಗೆ ಸಾಕಷ್ಟು ವಿಶ್ರಾಂತಿಯ ಅಗತ್ಯವಿದೆ ಎಂಬುದನ್ನೂ ಬೈಬಲ್‌ ಮಾನ್ಯಮಾಡುತ್ತದೆ. ಯೇಸು ಸಹ ತನ್ನ ಶಿಷ್ಯರು ದಣಿದಿದ್ದ ಸಂದರ್ಭದಲ್ಲಿ ಹೀಗಂದನು: “ನೀವು ಮಾತ್ರ ವಿಂಗಡವಾಗಿ ಅಡವಿಗೆ ಬಂದು ಸ್ವಲ್ಪ ದಣುವಾರಿಸಿಕೊಳ್ಳಿರಿ.”—ಮಾರ್ಕ 6:31.

ಹೀಗೆ ದೇವರು ಮೆಚ್ಚುವಂಥ ಜೀವನರೀತಿಯಲ್ಲಿ ಸಮತೋಲನವಿದ್ದು ಅದರಲ್ಲಿ ಅನೇಕ ಚಟುವಟಿಕೆಗಳು ಒಳಗೂಡಿರುತ್ತವೆ. ಆದರೆ ನಾವೇನನ್ನು ಮಾಡುತ್ತೇವೋ ಅದೆಲ್ಲವೂ ಆರಾಧನೆಯೊಂದಿಗೆ ನೇರವಾಗಿ ಸಂಬಂಧಿಸಿರಲಿ ಇಲ್ಲದಿರಲಿ ಅದು ದೇವರ ಮೇಲಿನ ನಮ್ಮ ಪೂರ್ಣಪ್ರಾಣದ ಪ್ರೀತಿಯನ್ನು ಪ್ರತಿಬಿಂಬಿಸಬೇಕು. ಬೈಬಲಿನ ಸಲಹೆ ಇದಾಗಿದೆ: “ನೀವು ಉಂಡರೂ ಕುಡಿದರೂ ಇನ್ನೇನು ಮಾಡಿದರೂ ಎಲ್ಲವನ್ನೂ ದೇವರ ಘನತೆಗಾಗಿ ಮಾಡಿರಿ.”—1 ಕೊರಿಂಥ 10:31.

ಆದ್ಯತೆಗಳನ್ನು ಇಡುವುದರಲ್ಲಿ ಯಶಸ್ವಿಗಳಾಗುವುದು

ದೇವರ ಆರಾಧನೆಗೆ ಪ್ರಥಮ ಸ್ಥಾನ ಕೊಡುವುದು ಅಪ್ರಾಯೋಗಿಕವೂ ನಿಮ್ಮಿಂದಾಗದ ವಿಷಯವೆಂದೂ ನಿಮಗನಿಸುತ್ತದೋ? ದೇವರು ನಮ್ಮಿಂದ ನಿರೀಕ್ಷಿಸಿದ್ದನ್ನು ಕೊಡಲು ನಾವು ಸಮಯವನ್ನು ಉಪಯೋಗಿಸುವ ರೀತಿಯಲ್ಲಿ ಹೊಂದಾಣಿಕೆಗಳನ್ನು, ಕೆಲವೊಮ್ಮೆ ತ್ಯಾಗಗಳನ್ನೂ ಮಾಡಬೇಕಾಗಬಹುದು. ಆದರೆ ನಮ್ಮ ಪ್ರೀತಿಯ ಸೃಷ್ಟಿಕರ್ತನು ಅಸಾಧ್ಯವಾದದ್ದೇನನ್ನೂ ಖಂಡಿತ ನಮ್ಮಿಂದ ಕೇಳಿಕೊಂಡಿಲ್ಲ. ವಾಸ್ತವದಲ್ಲಿ ಆತನ ಚಿತ್ತವನ್ನು ಮಾಡಲು ಆತನೇ ನಮಗೆ ಹೇರಳ ಸಹಾಯ ಕೊಡುತ್ತಾನೆ. ನಾವು ‘ದೇವರ ಶಕ್ತಿಯ’ ಮೇಲೆ ಆತುಕೊಂಡರೆ ಆತನ ಚಿತ್ತವನ್ನು ಮಾಡುವುದರಲ್ಲಿ ಯಶಸ್ವಿಗಳಾಗಬಲ್ಲೆವು.—1 ಪೇತ್ರ 4:11.

ನಿಮ್ಮ ದಿನಚರಿಯಲ್ಲಿ ಆಧ್ಯಾತ್ಮಿಕ ಚಟುವಟಿಕೆಗಳನ್ನು ಸೇರಿಸಲು ನಿಮಗೆ ಕಷ್ಟವಾಗಬಹುದು ನಿಜ. ಆದ್ದರಿಂದ ‘ಪ್ರಾರ್ಥನೆಯನ್ನು ಕೇಳುವವನಾದ’ ಯೆಹೋವ ದೇವರೊಂದಿಗೆ ಆಗಾಗ್ಗೆ ಮಾತಾಡಲು ಸಮಯ ಮಾಡಿಕೊಳ್ಳಿ. (ಕೀರ್ತನೆ 65:2) ನಿಮಗಿರುವ ಯಾವುದೇ ಚಿಂತೆಯನ್ನು ಪ್ರಾರ್ಥನೆಯ ಮೂಲಕ ಆತನಿಗೆ ತಿಳಿಸಿರಿ ಏಕೆಂದರೆ “ಆತನು ನಿಮಗೋಸ್ಕರ ಚಿಂತಿಸುತ್ತಾನೆ.” (1 ಪೇತ್ರ 5:7) “ನಿನ್ನ ಚಿತ್ತದಂತೆ ನಡಕೊಳ್ಳುವದನ್ನು ನನಗೆ ಕಲಿಸು; ನನ್ನ ದೇವರು ನೀನಲ್ಲವೋ?” ಎಂದು ರಾಜ ದಾವೀದನು ಪ್ರಾರ್ಥಿಸಿದನು. (ಕೀರ್ತನೆ 143:10) ನಿಮ್ಮ ಜೀವನದಲ್ಲಿ ಅಗತ್ಯವಿರುವ ಹೊಂದಾಣಿಕೆಗಳನ್ನು ಮಾಡಲು ಬೇಕಾದ ಸಹಾಯಕ್ಕಾಗಿ ನೀವು ಸಹ ದೇವರಲ್ಲಿ ಬೇಡಿಕೊಳ್ಳಬಹುದು.

“ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು” ಎಂಬ ಹಾರ್ದಿಕ ಆಮಂತ್ರಣ ಬೈಬಲ್‌ನಲ್ಲಿದೆ. (ಯಾಕೋಬ 4:8) ದೇವರನ್ನು ಮೆಚ್ಚಿಸುವ ಚಟುವಟಿಕೆಗಳಲ್ಲಿ ಭಾಗವಹಿಸಲು ಆರಂಭಿಸುವಾಗ, ಉದಾಹರಣೆಗೆ ಬೈಬಲ್‌ ಅಧ್ಯಯನ ಮಾಡುವಾಗ ಮತ್ತು ಕ್ರೈಸ್ತ ಕೂಟಗಳಿಗೆ ಹಾಜರಾಗುವಾಗ ನೀವು ದೇವರಿಗೆ ಇನ್ನಷ್ಟು ಸಮೀಪವಾಗಬಲ್ಲಿರಿ. ಹಾಗೆ ಮಾಡುವಾಗ ಹೆಚ್ಚಿನ ಪ್ರಗತಿ ಮಾಡುವಂತೆ ಆತನು ನಿಮ್ಮನ್ನು ಬಲಪಡಿಸುವನು.

ಯೆಹೋವನ ಸಾಕ್ಷಿಗಳಿಂದ ಬೈಬಲ್‌ ಅಧ್ಯಯನ ತೆಗೆದುಕೊಳ್ಳುತ್ತಿರುವ ಜೆಲೆನಾ ತನ್ನ ಆದ್ಯತೆಗಳನ್ನು ಬದಲಾಯಿಸಲು ಮಾಡಿದ ಪ್ರಯತ್ನದ ಬಗ್ಗೆ ಹೇಳುವುದು: “ಇದನ್ನು ಮಾಡುವುದು ಸುಲಭವಾಗಿರಲಿಲ್ಲ.” ಆದರೆ ಆಕೆಯಂದದ್ದು: “ಕ್ರೈಸ್ತ ಕೂಟಗಳನ್ನು ಹಾಜರಾಗಲು ಆರಂಭಿಸಿದಾಗಲಂತೂ ಬೈಬಲಿನ ವಿಚಾರಗಳನ್ನು ಅನ್ವಯಿಸಿಕೊಳ್ಳಲು ನನಗೆ ಬಲ ಸಿಕ್ಕಿತು. ಇತರರು ಪಟ್ಟುಹಿಡಿದು ಕೊಟ್ಟ ಬೆಂಬಲವೂ ನೆರವು ನೀಡಿತು.” ಅಲ್ಲದೇ, ಯೆಹೋವನನ್ನು ಸೇವಿಸುವುದರಿಂದ ಬರುವ ಪ್ರಯೋಜನಗಳಿಂದಲೂ ಸರಿಯಾದ ಆದ್ಯತೆಗಳನ್ನಿಡಲು ಹೆಚ್ಚಿನ ಪ್ರೇರಣೆ ಸಿಗುತ್ತದೆ. (ಎಫೆಸ 6:10) ಜೆಲೆನಾ ತಿಳಿಸುವುದು: “ನನ್ನ ಗಂಡನೊಂದಿಗಿನ ಸಂಬಂಧ ಉತ್ತಮಗೊಂಡಿದೆ ಮತ್ತು ನಾನು ಮಕ್ಕಳನ್ನು ಶಿಸ್ತುಗೊಳಿಸುವ ರೀತಿಯೂ ಸುಧಾರಣೆಗೊಂಡಿದೆ.”

ನಮ್ಮ ಆದ್ಯತೆಗಳನ್ನು ಸರಿಹೊಂದಿಸಿ, ಆಧುನಿಕ ದಿನದ ಜೀವನ​ರೀತಿಯ ಒತ್ತಡಗಳ ಮಧ್ಯೆಯೂ ದೇವರನ್ನು ಸೇವಿಸಲಿಕ್ಕಾಗಿ ‘ಸಮಯವನ್ನು ಸದ್ವಿನಿಯೋಗಿಸಿಕೊಳ್ಳಬಲ್ಲೆವು.’ ಇದನ್ನು ಮಾಡಲು ಯೆಹೋವನ ಶಕ್ತಿಯುತ ಪವಿತ್ರಾತ್ಮವು ನಿಮ್ಮನ್ನು ಬಲಪಡಿಸಿ ಪ್ರಚೋದಿಸಬಲ್ಲದು. (ಎಫೆಸ 3:16; 5:15-17, NIBV) ಯೇಸು ಹೇಳಿದ್ದು: “ಮನುಷ್ಯರಿಗೆ ಅಸಾಧ್ಯವಾದ ಕಾರ್ಯಗಳು ದೇವರಿಗೆ ಸಾಧ್ಯ.”—ಲೂಕ 18:27. (g 4/08)

ಇದರ ಬಗ್ಗೆ ನೀವು ಯೋಚಿಸಿದ್ದುಂಟೋ?

ದೇವರ ಚಿತ್ತವನ್ನು ಮಾಡುವುದು ನಿಮ್ಮ ಜೀವನದಲ್ಲಿ ಪ್ರಥಮವಾಗಿರಬೇಕು ಏಕೆ?ಕೀರ್ತನೆ 116:12; ಮಾರ್ಕ 12:30.

ನೀವು ಯಾವೆಲ್ಲ ಚಟುವಟಿಕೆಗಳಲ್ಲಿ ಭಾಗವಹಿಸಬೇಕೆಂದು ದೇವರು ನಿರೀಕ್ಷಿಸುತ್ತಾನೆ?ಮತ್ತಾಯ 28:19, 20; ಯೋಹಾನ 17:3; ಇಬ್ರಿಯ 10:24, 25.

ದೇವರನ್ನು ಮೆಚ್ಚಿಸಲು ನಿಮ್ಮ ಆದ್ಯತೆಗಳನ್ನು ಸರಿಹೊಂದಿಸುವುದರಲ್ಲಿ ಹೇಗೆ ಯಶಸ್ವಿಗಳಾಗಬಲ್ಲಿರಿ?ಎಫೆಸ 5:15-17; ಯಾಕೋಬ 4:8.

[ಪುಟ 14ರಲ್ಲಿರುವ ಚಿತ್ರ]

ದೇವರನ್ನು ಮೆಚ್ಚಿಸಲು ಸಮತೋಲನ ಅವಶ್ಯ