ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನನ್ನ ಒಡಹುಟ್ಟಿದವರಲ್ಲಿ ಒಬ್ಬರು ಆತ್ಮಹತ್ಯೆ ಮಾಡಿಕೊಂಡಲ್ಲಿ?

ನನ್ನ ಒಡಹುಟ್ಟಿದವರಲ್ಲಿ ಒಬ್ಬರು ಆತ್ಮಹತ್ಯೆ ಮಾಡಿಕೊಂಡಲ್ಲಿ?

ಯುವ ಜನರು ಪ್ರಶ್ನಿಸುವುದು

ನನ್ನ ಒಡಹುಟ್ಟಿದವರಲ್ಲಿ ಒಬ್ಬರು ಆತ್ಮಹತ್ಯೆ ಮಾಡಿಕೊಂಡಲ್ಲಿ?

ಕ್ಯಾರನ್‌ಳ ತಂದೆ ಅವಳಿಗೆ ಆ ಸುದ್ದಿ ತಿಳಿಸಿದ ದಿನ ಅವಳ ಜೀವನವೇ ಬದಲಾಯಿತು. “ಶೀಲ ನಮ್ಮನ್ನೆಲ್ಲಾ ಬಿಟ್ಟು ಹೋದಳು” ಎಂದಷ್ಟೇ ಅವರು ಹೇಳಶಕ್ತರಾದರು. ದುಃಖವನ್ನು ತಾಳಲಾರದೆ ಅವರು ಒಬ್ಬರನ್ನೊಬ್ಬರು ಅಪ್ಪಿಕೊಂಡರು. ಕ್ಯಾರನ್‌ಳ ತಂಗಿ ಆತ್ಮಹತ್ಯೆ ಮಾಡಿಕೊಂಡಿದ್ದಳು. * ಅವಳೇಕೆ ಹೀಗೆ ಮಾಡಿಕೊಂಡಳು ಎಂಬ ವಿಷಯವನ್ನು ಅವರಿಗೆ ಅರ್ಥಮಾಡಿಕೊಳ್ಳಲು ಆಗಲಿಲ್ಲ.

ಒಬ್ಬ ಯುವ ವ್ಯಕ್ತಿ ಸತ್ತಾಗ, ಸಹೃದಯದ ಸಾಂತ್ವನಗಾರರು ಹೆಚ್ಚಾಗಿ ಅವನ/ಳ ಹೆತ್ತವರ ಕುರಿತು ಚಿಂತಿಸುತ್ತಾರೆ. ಮೃತಪಟ್ಟವನ ಒಡಹುಟ್ಟಿದವರ ಬಳಿ, “ನಿಮ್ಮ ತಂದೆ ತಾಯಿ ಈಗ ಹೇಗಿದ್ದಾರೆ?” ಎಂದು ಕೇಳುತ್ತಾರೆಯೇ ಹೊರತು “ನೀನು ಹೇಗಿದ್ದಿ?” ಎಂದು ಕೇಳುವುದಿಲ್ಲ. ಒಡಹುಟ್ಟಿದವರನ್ನು ವಿಚಾರಿಸಲು ಅವರು ಮರೆತುಬಿಡುತ್ತಾರೆ.

ಆದರೆ, ಒಡಹುಟ್ಟಿದವರ ಮರಣವು ಯುವ ಜನರ ಮೇಲೆ ಗಾಢವಾದ ಪ್ರಭಾವವನ್ನು ಬೀರುತ್ತದೆಂದು ಸಂಶೋಧನೆಯು ತಿಳಿಸುತ್ತದೆ. “ಇಂಥ ದೊಡ್ಡ ನಷ್ಟವು ಉಳಿದ ಮಕ್ಕಳ ಆರೋಗ್ಯ, ವರ್ತನೆ, ಶಾಲಾಚಟುವಟಿಕೆ, ಸ್ವಗೌರವ ಮತ್ತು ಬೆಳವಣಿಗೆಯನ್ನು ಪ್ರತಿಕೂಲವಾಗಿ ಬಾಧಿಸುತ್ತದೆ” ಎಂದು ಡಾ. ಪಿ. ಗಿಲ್‌ ವೈಟ್‌ರವರು ಒಡಹುಟ್ಟಿದವರ ದುಃಖ​—⁠ಸಹೋದರ ಅಥವಾ ಸಹೋದರಿಯ ಮರಣಾನಂತರ ಗುಣಮುಖರಾಗುವುದು (ಇಂಗ್ಲಿಷ್‌) ಎಂಬ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

ಯುವ ಜನರಲ್ಲಿ ತೀರ ಚಿಕ್ಕವರು ಮಾತ್ರವಲ್ಲ ದೊಡ್ಡವರು ಸಹ ಬಾಧಿತರಾಗುತ್ತಾರೆ. ಆರಂಭದಲ್ಲಿ ತಿಳಿಸಿದ ಕ್ಯಾರನಳ ತಂಗಿ ಶೀಲ ಆತ್ಮಹತ್ಯೆ ಮಾಡಿಕೊಂಡಾಗ, ಕ್ಯಾರನಳು 22 ವರ್ಷ ಪ್ರಾಯದವಳಾಗಿದ್ದಳು. ಹಾಗಿದ್ದರೂ, ಕೆಲವೊಮ್ಮೆ ಅವಳಿಂದ ಆ ದುಃಖವನ್ನು ಸಹಿಸಲಾಗುತ್ತಿರಲಿಲ್ಲ. “ನನ್ನ ಹೆತ್ತವರಿಗಿಂತ ನಾನು ಹೆಚ್ಚು ದುಃಖಿತಳಾಗಿದ್ದೆನೆಂದು ಹೇಳುತ್ತಿಲ್ಲ. ಆದರೆ ಆ ದುಃಖವನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಅವರಿಗಿಂತ ನನಗೆ ಕಡಿಮೆಯಿತ್ತು” ಎಂದು ಅವಳು ಹೇಳುತ್ತಾಳೆ.

ಕ್ಯಾರನಳಂತೆ, ಒಡಹುಟ್ಟಿದವರಲ್ಲಿ ಒಬ್ಬರನ್ನು ನೀವು ಮರಣದಲ್ಲಿ ಕಳೆದುಕೊಂಡಿದ್ದೀರೊ? ಹಾಗಿರುವಲ್ಲಿ ಕೀರ್ತನೆಗಾರನಾದ ದಾವೀದನಿಗೆ ಅನಿಸಿದಂತೆಯೇ ನಿಮಗೂ ಅನಿಸಬಹುದು. ಅವನು ಬರೆದದ್ದು: “ನಾನು ಬಹಳವಾಗಿ ಬಾಗಿ ಕುಗ್ಗಿದ್ದೇನೆ; ಯಾವಾಗಲೂ ದುಃಖದಿಂದ ವಿಕಾರಿಯಾಗಿ ಅಲೆಯುತ್ತೇನೆ.” (ಕೀರ್ತನೆ 38:6) ನೀವು ಆ ದುಃಖವನ್ನು ಹೇಗೆ ನಿಭಾಯಿಸಬಲ್ಲಿರಿ?

“ಒಂದುವೇಳೆ . . . ”

ನಿಮ್ಮ ಅಣ್ಣತಮ್ಮ ಅಥವಾ ಅಕ್ಕತಂಗಿ ಆತ್ಮಹತ್ಯೆ ಮಾಡಿಕೊಂಡಾಗ ಅದು ನಿಮ್ಮಲ್ಲಿ ತಪ್ಪಿತಸ್ಥ ಮನೋಭಾವವನ್ನು ಉಂಟುಮಾಡಬಹುದು. ‘ಒಂದುವೇಳೆ ನಾನೇನಾದರೂ ಸಹಾಯ ಮಾಡಿರುತ್ತಿದ್ದಲ್ಲಿ ನನ್ನ ಒಡಹುಟ್ಟಿದವನು ಸಾಯುತ್ತಿರಲಿಲ್ಲ’ ಎಂದು ನೀವು ನೆನಸಬಹುದು. ಆ ರೀತಿ ಯೋಚಿಸಲು ಕಾರಣಗಳೂ ಇವೆಯೆಂದು ನಿಮಗೆ ಅನಿಸಬಹುದು. 21 ವರ್ಷ ಪ್ರಾಯದ ಕ್ರಿಸ್‌ ಎಂಬವನನ್ನು ತೆಗೆದುಕೊಳ್ಳಿ. 18 ವಯಸ್ಸಿನ ತನ್ನ ತಮ್ಮ ಆತ್ಮಹತ್ಯೆ ಮಾಡಿಕೊಂಡಾಗ ಅವನಿಗೆ ಹಾಗೆಯೇ ಅನಿಸಿತು. ಅವನು ಹೇಳಿದ್ದು: “ನನ್ನ ತಮ್ಮ ಸಾಯುವ ಮುಂಚೆ ಅವನ ಹತ್ತಿರ ಕೊನೆ ಬಾರಿ ಮಾತಾಡಿದ ವ್ಯಕ್ತಿ ನಾನೇ ಆಗಿದ್ದೆ. ಹಾಗಾಗಿ ಅವನು ಏನೋ ಎಡವಟ್ಟು ಮಾಡಿಕೊಳ್ಳುತ್ತಿದ್ದಾನೆಂದು ನಾನು ತಿಳಿದುಕೊಳ್ಳಬೇಕಿತ್ತು ಅಂತ ನನಗನಿಸುತ್ತದೆ. ಒಂದುವೇಳೆ ನಾನು ಅವನೊಂದಿಗೆ ಸ್ನೇಹಭಾವದಿಂದ ಇರುತ್ತಿದ್ದಲ್ಲಿ ಅವನು ತನ್ನ ಸಮಸ್ಯೆಯನ್ನು ನನಗೆ ಮುಕ್ತವಾಗಿ ತಿಳಿಸುತ್ತಿದ್ದನೋ ಏನೋ ಎಂದು ನೆನಸಿದೆ.”

ಕ್ರಿಸ್‌ ಮತ್ತು ಅವನ ತಮ್ಮನು ಒಬ್ಬರಿಗೊಬ್ಬರು ಹೊಂದಿಕೊಂಡು ಹೋಗದಿದ್ದ ವಿಷಯವು ಸಹ ಕ್ರಿಸ್‌ನ ದುಃಖವನ್ನು ಮತ್ತಷ್ಟು ತೀವ್ರಗೊಳಿಸಿತು. ಕ್ರಿಸ್‌ ಅತೀವ ದುಃಖದಿಂದ ಜ್ಞಾಪಿಸಿಕೊಳ್ಳುವುದು: “ನನ್ನ ತಮ್ಮನು ಬರೆದಿಟ್ಟಿದ್ದ ಚೀಟಿಯಲ್ಲಿ, ನಾನೊಬ್ಬ ಒಳ್ಳೇ ಅಣ್ಣನಾಗಿರಲಿಲ್ಲ ಎಂಬ ಮಾತಿತ್ತು. ಅವನು ಮಾನಸಿಕವಾಗಿ ಅಸ್ವಸ್ಥನಾಗಿದ್ದನೆಂದು ನನಗೆ ತಿಳಿದಿದ್ದರೂ ಆ ಮಾತು ನನಗೆ ನೋವನ್ನುಂಟುಮಾಡುತ್ತಾ ಇತ್ತು.” ಕೆಲವೊಮ್ಮೆ ಇಂಥ ದುಃಖವನ್ನು ಇನ್ನಷ್ಟು ತೀವ್ರಗೊಳಿಸುವ ಮತ್ತೊಂದು ವಿಷಯವೇನೆಂದರೆ ಪರಸ್ಪರ ಆಡಿರುವ ಮನನೋಯಿಸುವ ಮಾತುಗಳೇ. ಈ ಮುಂಚೆ ಉಲ್ಲೇಖಿಸಿರುವ ಡಾ. ವೈಟ್‌ ಎಚ್ಚರ! ಪತ್ರಿಕೆಗೆ ಹೇಳುವುದು: “ತಾವು ತಿಂಗಳುಗಳ ಹಿಂದೆ ಅಥವಾ ವರ್ಷಗಳ ಹಿಂದೆಯೂ ಮಾಡಿದ ಜಗಳವನ್ನು ನೆನಪಿಸಿಕೊಂಡು ದೋಷಿ ಮನೋಭಾವದಿಂದ ಕೊರಗುತ್ತಾ ಇರುತ್ತೇವೆ ಎಂದು ಶೋಕಿತರಾದ ಒಡಹುಟ್ಟಿದವರಲ್ಲಿ ಅನೇಕರು ನನಗೆ ತಿಳಿಸಿದ್ದಾರೆ.”

ಒಡಹುಟ್ಟಿದವನ ಆತ್ಮಹತ್ಯೆಯ ಕಾರಣ ನೀವು ದೋಷಿ ಮನೋಭಾವದಿಂದ ಸಂಕಟಪಡುತ್ತಿರುವುದಾದರೆ, ನಿಮ್ಮನ್ನು ಹೀಗೆ ಕೇಳಿಕೊಳ್ಳಿ: ‘ಇನ್ನೊಬ್ಬ ವ್ಯಕ್ತಿಯ ವರ್ತನೆಯನ್ನು ಬೇರೆ ಯಾರಾದರೂ ಪೂರ್ಣವಾಗಿ ನಿಯಂತ್ರಿಸಸಾಧ್ಯವೋ?’ ಕ್ಯಾರನ್‌ ತಿಳಿಸುವುದು: “ವ್ಯಕ್ತಿಯು ಕಷ್ಟಾನುಭವದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವ ರೀತಿ ಮತ್ತು ಅದನ್ನು ಕೊನೆಗಾಣಿಸಲು ತೆಗೆದುಕೊಂಡ ಭಯಾನಕ ಹೆಜ್ಜೆಯು ನಿಮ್ಮ ಹತೋಟಿಯಲ್ಲಿಲ್ಲದ ಕಾರಣ ನೀವು ಅದನ್ನು ತಡೆಗಟ್ಟಸಾಧ್ಯವಿರಲಿಲ್ಲ.”

ನೀವು ಒಡಹುಟ್ಟಿದವನಿಗೆ ಆಡಿದ ಮನನೋಯಿಸುವ ಮಾತನ್ನು ನಿಮ್ಮಿಂದ ಮರೆಯಲಾಗದಿದ್ದರೆ ಆಗೇನು? ವಿಷಯವನ್ನು ಸರಿಯಾದ ದೃಷ್ಟಿಕೋನದಲ್ಲಿ ನೋಡಲು ಬೈಬಲ್‌ ಸಹಾಯಮಾಡಬಲ್ಲದು. ಅದು ಹೇಳುವುದು: ‘ಅನೇಕ ವಿಷಯಗಳಲ್ಲಿ ನಾವೆಲ್ಲರೂ ತಪ್ಪುವುದುಂಟು. ಒಬ್ಬನು ಮಾತಿನಲ್ಲಿ ತಪ್ಪದಿದ್ದರೆ ಅವನು ಪರಿಪೂರ್ಣನು.’ (ಯಾಕೋಬ 3:​2, NIBV; ಕೀರ್ತನೆ 130:⁠3) ಒಡಹುಟ್ಟಿದವನಿಗೆ ನೀವು ಆಡಿರುವ ಮನನೋಯಿಸುವ ಮಾತಿನ ಅಥವಾ ವರ್ತನೆಯ ಕುರಿತು ನೆನಸಿ ನೆನಸಿ ಕೊರಗುವುದು ನಿಮ್ಮ ದುಃಖವನ್ನು ಇನ್ನಷ್ಟು ತೀವ್ರಗೊಳಿಸುತ್ತದಷ್ಟೆ. ಆ ನೆನಪುಗಳು ಎಷ್ಟೇ ನೋವುಂಟುಮಾಡುವುದಾದರೂ ನಿಮ್ಮ ಒಡಹುಟ್ಟಿದವರ ಮರಣಕ್ಕೆ ನೀವು ಕಾರಣರಲ್ಲ ಎಂಬುದು ನಿಜ ಸಂಗತಿ. *

ದುಃಖವನ್ನು ನಿಭಾಯಿಸುವುದು

ಪ್ರತಿಯೊಬ್ಬರು ದುಃಖಿಸುವಂಥ ರೀತಿಯು ಭಿನ್ನವಾಗಿರುತ್ತದೆ. ಕೆಲವರು ದುಃಖ ತಡೆಯಲಾರದೆ ಎಲ್ಲರ ಮುಂದೆ ಕಣ್ಣೀರು ಸುರಿಸುತ್ತಾರೆ; ಅದರಲ್ಲಿ ಯಾವುದೇ ತಪ್ಪಿಲ್ಲ. ದಾವೀದನು ತನ್ನ ಮಗನಾದ ಅಮ್ನೋನನ ಮರಣಾನಂತರ ‘ಬಹಳವಾಗಿ ಗೋಳಾಡಿದನು’ ಎಂದು ಬೈಬಲ್‌ಹೇಳುತ್ತದೆ. (2 ಸಮುವೇಲ 13:36) ಯೇಸು ಸಹ ತನ್ನ ಸ್ನೇಹಿತನಾದ ಲಾಜರನ ಮರಣವು ಉಂಟುಮಾಡಿದ ವೇದನೆಯನ್ನು ನೋಡಿ “ಕಣ್ಣೀರು ಬಿಟ್ಟನು.”​—⁠ಯೋಹಾನ 11:​33-35.

ಆದರೆ ಇನ್ನು ಕೆಲವರು ಆ ಕೂಡಲೇ ಅಳುವುದಿಲ್ಲ. ಪ್ರೀತಿಪಾತ್ರರ ದಿಢೀರ್‌ ಮರಣ ಆಘಾತವನ್ನು ಉಂಟುಮಾಡಿದಾಗಲಂತೂ ದುಃಖ ಮಡುಗಟ್ಟಿ ಮೂಕರಾಗಿಬಿಡುತ್ತಾರೆ. ಕ್ಯಾರನ್‌ ನೆನಪಿಸಿಕೊಳ್ಳುವುದು, “ನನ್ನ ಭಾವನೆಗಳು ಮರಗಟ್ಟಿ ಹೋದಂತಿದ್ದವು. ಸ್ವಲ್ಪ ಸಮಯ ಏನೂ ಮಾಡಲಿಕ್ಕೆ ಆಗದೆ ಕಲ್ಲಿನಂತೆ ನಿಂತುಬಿಟ್ಟೆ.” ಒಡಹುಟ್ಟಿದವರಲ್ಲಿ ಒಬ್ಬರು ಆತ್ಮಹತ್ಯೆ ಮಾಡಿಕೊಂಡಾಗ ಅಂಥ ಪ್ರತಿಕ್ರಿಯೆಯು ಸಹಜವಾಗಿದೆ. “ಆತ್ಮಹತ್ಯೆಯು ಮಾನಸಿಕ ಆಘಾತವನ್ನು ಉಂಟುಮಾಡುತ್ತದೆ; ದುಃಖಿತರನ್ನು ಸಮಾಧಾನಪಡಿಸುವ ಮುಂಚೆ ಆ ಮಾನಸಿಕ ಆಘಾತದಿಂದ ಅವರು ಹೊರಬರುವಂತೆ ಮಾಡುವುದು ಅಗತ್ಯ. ಆದುದರಿಂದಲೇ ಕೆಲವು ವೃತ್ತಿಪರ ಸಹಾಯಕರು, ಆಘಾತದಿಂದ ಜನರು ಇನ್ನೂ ಮರಗಟ್ಟಿದ ಸ್ಥಿತಿಯಲ್ಲಿರುವಾಗ ಅವರನ್ನು ಅಳುವಂತೆ ಮಾಡುತ್ತಾರೆ” ಎಂದು ಡಾ. ವೈಟ್‌ ಎಚ್ಚರ! ಪತ್ರಿಕೆಗೆ ತಿಳಿಸಿದರು.

ನಿಮ್ಮ ಒಡಹುಟ್ಟಿದವರಲ್ಲಿ ಒಬ್ಬರು ಇನ್ನಿಲ್ಲ ಎಂಬ ವಾಸ್ತವಿಕತೆಯ ಮನವರಿಕೆಯಾಗಲು ನಿಮಗೆ ಸಮಯ ತಗಲುತ್ತದೆ. ಏಕೆಂದರೆ ​ಮರಣವು ಒಂದು ಆಘಾತಕರ ದುರಂತ. ಕ್ರಿಸ್‌ ಹೇಳುವುದು: “ಒಮ್ಮೆ ಒಡೆದು ನುಚ್ಚುನೂರಾದ ಹೂಕುಂಡವನ್ನು ಮತ್ತೆ ಅಂಟು ಬಳಿದು ಜೋಡಿಸಿದಂತೆ ನಾವಿದ್ದೇವೆ. ಸ್ವಲ್ಪ ಒತ್ತಡ ಬಿದ್ದರೂ ನಾವು ರಪ್ಪನೆ ಬಿದ್ದುಹೋಗುವಂತಿದ್ದೇವೆ.” ಇಂಥ ಪರಿಸ್ಥಿತಿಯನ್ನು ನಿಭಾಯಿಸಲಿಕ್ಕಾಗಿ ಈ ಮುಂದಿನ ಸಲಹೆಗಳನ್ನು ಅನ್ವಯಿಸಲು ಪ್ರಯತ್ನಿಸಿ:

ಬೈಬಲಿನಲ್ಲಿರುವ ಸಾಂತ್ವನದಾಯಕ ವಚನಗಳ ಒಂದು ಪಟ್ಟಿಯನ್ನು ಮಾಡಿಟ್ಟುಕೊಂಡು ದಿನಕ್ಕೆ ಒಮ್ಮೆಯಾದರೂ ಅದನ್ನು ಓದಿ.​—ಕೀರ್ತನೆ 94:19.

ಅನುಕಂಪವಿರುವ ಭರವಸಾರ್ಹ ವ್ಯಕ್ತಿಯ ಬಳಿ ಮಾತಾಡಿ. ದುಃಖವನ್ನು ತೋಡಿಕೊಳ್ಳುವುದರಿಂದ ನಿಮ್ಮ ಭಾರ ಹಗುರವಾಗಬಹುದು.​—ಜ್ಞಾನೋಕ್ತಿ 17:17.

ಪುನರುತ್ಥಾನದ ಕುರಿತ ಬೈಬಲ್‌ ವಾಗ್ದಾನವನ್ನು ಧ್ಯಾನಿಸಿ.​—ಯೋಹಾನ 5:​28, 29.

ಕಡಿಮೆಪಕ್ಷ ಕೆಲವು ದಿನಗಳ ವರೆಗಾದರೂ ಒಂದು ಪುಸ್ತಕದಲ್ಲಿ ನಿಮ್ಮ ಅಂತರಂಗದ ವ್ಯಥೆಯನ್ನು ಬರವಣಿಗೆಯಲ್ಲಿ ಹಾಕುವುದು ಸಹ ದುಃಖವನ್ನು ಸರಿಯಾದ ನೋಟದಲ್ಲಿ ವೀಕ್ಷಿಸಲು ಸಹಾಯ​ಮಾಡುತ್ತದೆ. ಇದಕ್ಕಾಗಿ, ಕೆಳಗೆ ಕೊಡಲಾಗಿರುವ ಚೌಕವನ್ನು ದಯವಿಟ್ಟು ಉಪಯೋಗಿಸಿ.

“ದೇವರು ನಮ್ಮ ಹೃದಯಕ್ಕಿಂತ ದೊಡ್ಡವನಾಗಿದ್ದು ಎಲ್ಲವನ್ನೂ ಬಲ್ಲವನಾಗಿದ್ದಾನೆ” ಎಂಬ ಆಶ್ವಾಸನೆ ನಿಮಗಿರಲಿ. (1 ಯೋಹಾನ 3:20) ನಿಮ್ಮ ಒಡಹುಟ್ಟಿದವನ ಹತಾಶೆಯ ಸ್ಥಿತಿಯ ಹಿಂದಿದ್ದ ಕಾರಣಗಳನ್ನೂ ಸನ್ನಿವೇಶಗಳನ್ನೂ ಯಾವನೇ ಮನುಷ್ಯನಿಗಿಂತ ಹೆಚ್ಚು ಉತ್ತಮವಾಗಿ ದೇವರು ತಿಳಿದಿದ್ದಾನೆ. ನಿಮ್ಮ ಬಗ್ಗೆಯೂ ಆತನು ಚೆನ್ನಾಗಿ ಬಲ್ಲವನಾಗಿದ್ದಾನೆ. ನಿಮ್ಮನ್ನು ನೀವು ತಿಳಿದಿರುವುದಕ್ಕಿಂತಲೂ ಹೆಚ್ಚು ಉತ್ತಮವಾಗಿ ಆತನು ತಿಳಿದಿದ್ದಾನೆ. (ಕೀರ್ತನೆ 139:​1-3) ಹಾಗಾಗಿ, ನೀವಿರುವ ಪರಿಸ್ಥಿತಿಯನ್ನು ಆತನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲನು ಎಂಬ ಭರವಸೆ ನಿಮಗಿರಸಾಧ್ಯವಿದೆ. ನಿಮಗೆ ದುಃಖವನ್ನು ಸಹಿಸಲು ಸಾಧ್ಯವೇ ಇಲ್ಲವೆಂದನಿಸುವಾಗ ಕೀರ್ತನೆ 55:22 ನ್ನು ನೆನಪಿಸಿಕೊಳ್ಳಿರಿ. ಅದು ಹೇಳುವುದು: “ನಿನ್ನ ಚಿಂತಾ​ಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರ​ಮಾಡುವನು. ನೀತಿವಂತನನ್ನು ಎಂದಿಗೂ ಕದಲಗೊಡಿಸನು.” (g 6/08)

“ಯುವ ಜನರು ಪ್ರಶ್ನಿಸುವುದು” ಲೇಖನಮಾಲೆಯ ಹೆಚ್ಚಿನ ಲೇಖನಗಳನ್ನು www.watchtower.org/ype ವೆಬ್‌ಸೈಟ್‌ನಲ್ಲಿ ಕಂಡುಕೊಳ್ಳಬಹುದು

ಇದರ ಕುರಿತು ಯೋಚಿಸಿ

ದುಃಖವನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲವೆಂದು ನಿಮಗನಿಸುವಲ್ಲಿ ನೀವು ಯಾರೊಂದಿಗೆ ಮಾತಾಡಬಲ್ಲಿರಿ?

ಶೋಕಿಸುತ್ತಿರುವ ಯುವ ವ್ಯಕ್ತಿಗೆ ನೀವು ಹೇಗೆ ಬೆಂಬಲವನ್ನು ನೀಡಬಲ್ಲಿರಿ?

[ಪಾದಟಿಪ್ಪಣಿಗಳು]

^ ಈ ಲೇಖನದಲ್ಲಿ ಹೆಸರುಗಳನ್ನು ಬದಲಾಯಿಸಲಾಗಿದೆ.

^ ಅನಾರೋಗ್ಯ ಇಲ್ಲವೆ ಅಪಘಾತದಿಂದಾಗಿ ಉಂಟಾಗುವ ಮರಣದಂತೆಯೇ ಇದು ಸಹ. ನೀವು ನಿಮ್ಮ ಒಡಹುಟ್ಟಿದವರನ್ನು ಎಷ್ಟೇ ಪ್ರೀತಿಸಿರಲಿ “ಕಾಲವೂ ಪ್ರಾಪ್ತಿಯೂ” ನಿಮ್ಮ ಹತೋಟಿಯಲ್ಲಿಲ್ಲ.​—⁠ಪ್ರಸಂಗಿ 9:11.

[ಪುಟ 30ರಲ್ಲಿರುವ ಚೌಕ]

ನಿಮ್ಮ ಮನದ ಯೋಚನೆಗಳನ್ನು ಬರೆದಿಡುವುದು ದುಃಖವನ್ನು ನಿಭಾಯಿಸಲು ಬಹಳ ಸಹಾಯಮಾಡಬಲ್ಲದು. ಈ ಕೆಳಗಿನ ವಿಷಯಗಳ ಕುರಿತ ನಿಮ್ಮ ಅನಿಸಿಕೆಗಳನ್ನು ಖಾಲಿ ಸ್ಥಳದಲ್ಲಿ ಬರೆಯಿರಿ. ಪ್ರಶ್ನೆಗಳನ್ನೂ ಉತ್ತರಿಸಿ.

ನನ್ನ ಒಡಹುಟ್ಟಿದವನ/ಳ ಬಗ್ಗೆ ನನಗಿರುವ ಮೂರು ಸವಿ ನೆನಪುಗಳು

1 .....

2 .....

3 .....

ನನ್ನ ಒಡಹುಟ್ಟಿದವನೋ/ಳೋ ಜೀವದಿಂದಿರುವಾಗ ನಾನು ಹೀಗೆ ಹೇಳಿರಬೇಕಿತ್ತೆಂದು ಅನಿಸುತ್ತದೆ:

.....

ಒಡಹುಟ್ಟಿದವರಲ್ಲಿ ಒಬ್ಬರ ಮರಣಕ್ಕೆ ನಾನೇ ಕಾರಣ ಎಂದು ನೆನಸುತ್ತಿರುವ ತಮ್ಮನಿಗೆ (ಅಥವಾ ತಂಗಿಗೆ) ನೀವು ಏನು ಹೇಳುವಿರಿ?

.....

ಕೆಳಗಿರುವ ವಚನಗಳಲ್ಲಿ ನಿಮಗೆ ಯಾವುದು ಹೆಚ್ಚು ಸಾಂತ್ವನದಾಯಕವಾಗಿದೆ ಮತ್ತು ಏಕೆ?

“ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ; ಕುಗ್ಗಿಹೋದವರನ್ನು ಉದ್ಧಾರಮಾಡುತ್ತಾನೆ.”​—⁠ಕೀರ್ತನೆ 34:18.

“ಆತನು ಕುಗ್ಗಿಹೋದವನ ದುರವಸ್ಥೆಯನ್ನು ತಿರಸ್ಕರಿಸಲಿಲ್ಲ, ಅದಕ್ಕೆ ಅಸಹ್ಯಪಡಲಿಲ್ಲ; ತನ್ನ ಮುಖವನ್ನು ಅವನಿಗೆ ಮರೆಮಾಡದೆ ಅವನ ಪ್ರಾರ್ಥನೆಗೆ ಕಿವಿಗೊಟ್ಟನು.”​—⁠ಕೀರ್ತನೆ 22:24.

“ಸಮಾಧಿಗಳಲ್ಲಿರುವವರೆಲ್ಲರು ಆತನ [ಯೇಸುವಿನ] ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ ಕಾಲ ಬರುತ್ತದೆ.”​—⁠ಯೋಹಾನ 5:28, 29.