ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ನನ್ನ ಮಗಳಿಗೆ ಏನಾಗಿದೆ?”

“ನನ್ನ ಮಗಳಿಗೆ ಏನಾಗಿದೆ?”

“ನನ್ನ ಮಗಳಿಗೆ ಏನಾಗಿದೆ?”

ಮನೆಯ ಹಾಲ್‌ಗೆ ಕಾಲಿಟ್ಟ ತಮ್ಮ 15ರ ಹರೆಯದ ಮಗಳನ್ನು ನೋಡಿ ಸ್ಕಾಟ್‌ ಮತ್ತು ಸ್ಯಾಂಡ್ರರಿಗೆ * ಗರಬಡಿದಂತಾಯಿತು. ಆಕೆಗಿದ್ದ ಹೊಂಬಣ್ಣದ ಕೂದಲು ಈಗ ಕೆಂಪಾಗಿತ್ತು! ತದನಂತರ ನಡೆದ ಸಂಭಾಷಣೆಯಂತೂ ಅವರನ್ನು ಇನ್ನಷ್ಟು ಕಕ್ಕಾಬಿಕ್ಕಿಗೊಳಿಸಿತು.

“ಕೂದಲಿಗೆ ಬಣ್ಣಹಚ್ಚಲು ನಿನಗೆ ಯಾರು ಅನುಮತಿ ಕೊಟ್ಟರು?”

“ಹಚ್ಚಬಾರದು ಅಂತ ನೀವೇನು ಹೇಳಲಿಲ್ಲವಲ್ಲ!”

“ನೀನು ನಮ್ಮ ಹತ್ತಿರ ಏಕೆ ಕೇಳಲಿಲ್ಲ?”

“ಕೇಳಿದರೆ ನೀವು ಬಿಡುವುದಿಲ್ಲ ಅಂತ ನನಗೆ ಮೊದಲೇ ಗೊತ್ತಿತ್ತು!”

ಮಕ್ಕಳು ಹದಿವಯಸ್ಕರಾದಾಗ ಅವರಿಗೆ ಮಾತ್ರವಲ್ಲ ಅವರ ಹೆತ್ತವರಿಗೂ ಅದು ತುಮುಲದ ಸಮಯವಾಗಿದೆ ಎಂಬ ಮಾತು ನೂರಕ್ಕೆ ನೂರು ಸತ್ಯವೆಂದು ಸ್ಕಾಟ್‌ ಮತ್ತು ಸ್ಯಾಂಡ್ರ ಒಪ್ಪಿಕೊಳ್ಳುವರು. ವಾಸ್ತವದಲ್ಲಿ ಅನೇಕ ಹೆತ್ತವರು, ತಮ್ಮ ಮಗ ಅಥವಾ ಮಗಳು ಪ್ರೌಢಾವಸ್ಥೆಗೆ ಕಾಲಿಡುವಾಗ ಆಗುವ ಹಠಾತ್ತಾದ ಬದಲಾವಣೆಗಳಿಗೆ ಸ್ವಲ್ಪವೂ ಸಿದ್ಧರಾಗಿರುವುದಿಲ್ಲ. ಕೆನಡದಲ್ಲಿರುವ ಬಾರ್‌ಬ್ರ ಎಂಬ ತಾಯಿಯೊಬ್ಬಳು ಜ್ಞಾಪಿಸಿಕೊಳ್ಳುವುದು: “ಇದ್ದಕ್ಕಿದ್ದ ಹಾಗೆ ನಮ್ಮ ಮಗಳು ತುಂಬ ಬದಲಾಗಿಬಿಟ್ಟಳು. ‘ನನ್ನ ಮಗಳಿಗೆ ಏನಾಗಿದೆ?’ ಎಂದು ಯೋಚಿಸತೊಡಗಿದೆ. ನಾವೆಲ್ಲರೂ ಮಲಗಿದ್ದಾಗ ಯಾರೋ ಬಂದು ಅವಳ ಜಾಗದಲ್ಲಿ ಬೇರೊಬ್ಬಳನ್ನು ಇಟ್ಟುಹೋದಂತಿತ್ತು!”

ಬಾರ್‌ಬ್ರಳ ಅನುಭವವು ಅಸಾಮಾನ್ಯವಾದದ್ದೇನಲ್ಲ ಖಂಡಿತ. ಲೋಕದಾದ್ಯಂತದ ಕೆಲವು ಹೆತ್ತವರು ಎಚ್ಚರ! ಪತ್ರಿಕೆಗೆ ತಿಳಿಸಿದ ಈ ವಿಷಯಗಳನ್ನು ಪರಿಗಣಿಸಿರಿ.

“ನನ್ನ ಮಗ ತರುಣನಾದಾಗ, ಹಠಹಿಡಿಯುವ ಮತ್ತು ನಮ್ಮ ಅಧಿಕಾರವನ್ನು ಪ್ರಶ್ನಿಸುವ ಪ್ರವೃತ್ತಿ ಅವನಲ್ಲಿ ಇದ್ದಕ್ಕಿದ್ದಂತೆ ಹೆಚ್ಚಾಯಿತು.”​—⁠ಲೀಯಾ, ಬ್ರಿಟನ್‌.

“ನಮ್ಮ ಹೆಣ್ಣುಮಕ್ಕಳು ವಿಶೇಷವಾಗಿ ತಮ್ಮ ಹೊರತೋರಿಕೆಯ ವಿಷಯದಲ್ಲಿ ಅತಿಯಾಗಿ ಮುಜುಗರಪಡಲು ಆರಂಭಿಸಿದರು.”​—⁠ಜಾನ್‌, ಘಾನ.

“ನನ್ನ ಮಗನು ಸ್ವಂತ ನಿರ್ಣಯಗಳನ್ನು ಮಾಡಲು ಬಯಸಿದನು. ಏನು ಮಾಡಬೇಕೆಂದು ನಾವು ಹೇಳುವುದು ಅವನಿಗೆ ಹಿಡಿಸುತ್ತಿರಲಿಲ್ಲ.”​—⁠ಸೆಲೀನ, ಬ್ರಸಿಲ್‌.

“ಮುಂಚಿನಂತೆ ನಮ್ಮ ಮಗಳನ್ನು ಆಲಿಂಗಿಸಿದರೆ ಅಥವಾ ಮುದ್ದಿಟ್ಟರೆ ಅವಳಿಗೀಗ ಇಷ್ಟವಾಗುತ್ತಿರಲಿಲ್ಲ.”​—⁠ಆ್ಯಂಡ್ರೂ, ಕೆನಡ.

“ನಮ್ಮ ಹುಡುಗರು ಮಾತು ಮಾತಿಗೂ ನಮ್ಮೊಂದಿಗೆ ಜಗಳಕ್ಕಿಳಿಯುತ್ತಿದ್ದರು. ನಾವು ಮಾಡುವ ನಿರ್ಣಯಗಳನ್ನು ಒಪ್ಪಿಕೊಳ್ಳುವ ಬದಲು ಅವುಗಳನ್ನು ವಿರೋಧಿಸಿ ನಮ್ಮೊಂದಿಗೆ ವಾಗ್ವಾದಮಾಡುತ್ತಿದ್ದರು.”​—⁠ಸ್ಟೀವ್‌, ಆಸ್ಟ್ರೇಲಿಯ.

“ನನ್ನ ಮಗಳು ತನ್ನ ಭಾವನೆಗಳನ್ನು ಬಚ್ಚಿಡುತ್ತಿದ್ದಳು. ಅವಳು ತನ್ನದೇ ಆದ ಚಿಕ್ಕ ಪ್ರಪಂಚದಲ್ಲಿ ಮುಳುಗಿರುತ್ತಿದ್ದಳು ಮತ್ತು ನಾನದನ್ನು ಪ್ರವೇಶಿಸಲು ಪ್ರಯತ್ನಿಸಿದಾಗೆಲ್ಲ ರೇಗುತ್ತಿದ್ದಳು.”​—⁠ಜೊಆ್ಯನ್‌, ಮೆಕ್ಸಿಕೊ.

“ನಮ್ಮ ಮಕ್ಕಳು ಎಲ್ಲವನ್ನೂ ಗುಟ್ಟಾಗಿಡುತ್ತಿದ್ದರು ಮತ್ತು ಇತರರಿಂದ ದೂರವಾಗಿದ್ದು ಏಕಾಂತತೆಯನ್ನು ಬಯಸಿದರು. ಅನೇಕವೇಳೆ ಅವರು ನಮಗಿಂತಲೂ ಹೆಚ್ಚಾಗಿ ತಮ್ಮ ಸ್ನೇಹಿತರೊಂದಿಗೆ ಕಾಲ ಕಳೆಯಲು ಇಷ್ಟಪಟ್ಟರು.”​—⁠ಡ್ಯಾನಿಯಲ್‌, ಫಿಲಿಪ್ಪೀನ್ಸ್‌.

ನಿಮ್ಮ ಮಕ್ಕಳು ಹದಿವಯಸ್ಕರಾಗಿರುವಲ್ಲಿ, ಈ ಮೇಲಿನ ಹೇಳಿಕೆಗಳಲ್ಲಿ ಕೆಲವು ನಿಮ್ಮ ಸ್ವಂತ ಹೇಳಿಕೆಗಳಾಗಿರುವಂತೆ ತೋರಬಹುದು. ಹಾಗಿರುವಲ್ಲಿ, ನಿಮ್ಮೊಟ್ಟಿಗಿರುವ ಈ “ಅಪರಿಚಿತ” ವ್ಯಕ್ತಿಯನ್ನು ಅಂದರೆ ಹದಿಪ್ರಾಯದ ನಿಮ್ಮ ಮಗ/ಮಗಳನ್ನು ಅರ್ಥಮಾಡಿಕೊಳ್ಳುವ ಪ್ರಯತ್ನದಲ್ಲಿ ನೀವು ನಿಸ್ಸಹಾಯಕರಲ್ಲ ಎಂಬ ಖಾತ್ರಿ ನಿಮಗಿರಲಿ. ಈ ವಿಷಯದಲ್ಲಿ ಬೈಬಲ್‌ ಸಹಾಯ ಮಾಡಬಲ್ಲದು. ಹೇಗೆ?

ವಿವೇಕ ಮತ್ತು ತಿಳಿವಳಿಕೆ

“ವಿವೇಕವನ್ನು ಪಡೆ, ತಿಳಿವಳಿಕೆಯನ್ನು ಹೊಂದು” ಎಂದು ಬೈಬಲಿನ ಒಂದು ಜ್ಞಾನೋಕ್ತಿಯು ತಿಳಿಸುತ್ತದೆ. (ಜ್ಞಾನೋಕ್ತಿ 4:5, NW) ಹದಿವಯಸ್ಕರೊಂದಿಗೆ ವ್ಯವಹರಿಸುವಾಗ ಈ ಎರಡೂ ಗುಣಗಳು ಅತ್ಯಾವಶ್ಯಕ. ನಿಮ್ಮ ಮಗ ಅಥವಾ ಮಗಳ ವರ್ತನೆಗಳನ್ನು ಮಾತ್ರ ನೋಡದೆ, ಅವರ ಮಾನಸಿಕ ತುಮುಲವನ್ನು ಅರ್ಥಮಾಡಿಕೊಳ್ಳಲು ತಿಳಿವಳಿಕೆ ಆವಶ್ಯಕ. ಹದಿಪ್ರಾಯದ ನಿಮ್ಮ ಮಗನೊ ಮಗಳೊ ಜವಾಬ್ದಾರಿಯುತ ವಯಸ್ಕರಾಗುವಂತೆ ನೀವು ಪರಿಣಾಮಕಾರಿಯಾಗಿ ಸಹಾಯಮಾಡುತ್ತಾ ಇರಲು ವಿವೇಕ ಸಹ ಆವಶ್ಯಕ.

ಮಕ್ಕಳೊಂದಿಗಿನ ನಿಮ್ಮ ಸಂಬಂಧದಲ್ಲಿ ಅಂತರ ಹೆಚ್ಚಾಗುತ್ತಿದೆ ಎಂದು ತೋರಿಬಂದ ಮಾತ್ರಕ್ಕೆ ಅವರಿಗೆ ನಿಮ್ಮ ಅಗತ್ಯವಿಲ್ಲ ಎಂಬ ನಿರ್ಧಾರಕ್ಕೆ ಬರಬೇಡಿ. ವಾಸ್ತವಾಂಶವೇನೆಂದರೆ, ಜೀವನದ ಈ ಕಷ್ಟಕರ ಘಟ್ಟದಲ್ಲಿ ಹದಿವಯಸ್ಕರಿಗೆ ತಮ್ಮ ಹೆತ್ತವರ ನೆರವಿನ ಅಗತ್ಯವಿದೆ ಮಾತ್ರವಲ್ಲ ಅವರದನ್ನು ಬಯಸುತ್ತಾರೆ ಕೂಡ. ಇಂಥ ಮಾರ್ಗದರ್ಶನ ಕೊಡಲು, ತಿಳಿವಳಿಕೆ ಮತ್ತು ವಿವೇಕವು ನಿಮಗೆ ಹೇಗೆ ಸಹಾಯ ಮಾಡುವುದು? (g 6/08)

[ಪಾದಟಿಪ್ಪಣಿ]

^ ಈ ಲೇಖನಮಾಲೆಯಲ್ಲಿ ಹೆಸರುಗಳನ್ನು ಬದಲಾಯಿಸಲಾಗಿದೆ.