ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾನೇಕೆ ಬದುಕಿರಬೇಕು?

ನಾನೇಕೆ ಬದುಕಿರಬೇಕು?

ಯುವ ಜನರು ಪ್ರಶ್ನಿಸುವುದು

ನಾನೇಕೆ ಬದುಕಿರಬೇಕು?

ಪ್ರತಿ ವರುಷ ಲಕ್ಷಾಂತರ ಯುವ ಜನರು ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ. ಸಾವಿರಾರು ಮಂದಿ ಜೀವವನ್ನೂ ಕಳಕೊಳ್ಳುತ್ತಾರೆ. ಇಂದು ಹದಿಹರೆಯದವರ ಆತ್ಮಹತ್ಯೆ ಹೆಚ್ಚುತ್ತಿರುವುದರಿಂದ, “ಎಚ್ಚರ!” ಪತ್ರಿಕೆಯ ಪ್ರಕಾಶಕರು ಈ ವಿಷಯದ ಕುರಿತು ಚರ್ಚಿಸುವುದು ಪ್ರಾಮುಖ್ಯವೆಂದು ಎಣಿಸುತ್ತಾರೆ.

“ನನ್ನ ಪ್ರಾಣವನ್ನು ತೆಗೆ, ನಾನು ಬದುಕುವದಕ್ಕಿಂತ ಸಾಯುವದೇ ಲೇಸು.” ಈ ಮಾತನ್ನು ಹೇಳಿದ್ದು ಯಾರು? ದೇವರಲ್ಲಿ ನಂಬಿಕೆಯಿಲ್ಲದ ವ್ಯಕ್ತಿಯೊ? ದೇವರನ್ನು ತೊರೆದು ಬಿಟ್ಟಿದ್ದ ಒಬ್ಬನೊ? ಅಥವಾ ದೇವರಿಂದಲೇ ತಿರಸ್ಕಾರಕ್ಕೆ ಒಳಗಾದ ಒಬ್ಬ ಮನುಷ್ಯನೊ? ಇವರು ಯಾರೂ ಅಲ್ಲ. ಬದಲಾಗಿ ದೇವಭಕ್ತನಾಗಿದ್ದರೂ ಅತೀವ ಬೇಗುದಿಯಲ್ಲಿದ್ದ ಯೋನ ಎಂಬ ಹೆಸರಿನ ವ್ಯಕ್ತಿಯೇ ಅವನು. * (ಯೋನ 4:​3) ಯೋನನು ಆತ್ಮಹತ್ಯೆ ಮಾಡಿಕೊಳ್ಳಲಿಕ್ಕಿದ್ದನು ಎಂದು ಬೈಬಲ್‌ತಿಳಿಸುವುದಿಲ್ಲ. ಆದರೂ, ನಿರಾಶೆಯಿಂದ ಅವನು ಮಾಡಿದ ಬಿನ್ನಹ ನಮಗೆ ಒಂದು ಪ್ರಾಮುಖ್ಯ ವಾಸ್ತವಾಂಶವನ್ನು ತಿಳಿಸುತ್ತದೆ. ಅದೇನೆಂದರೆ, ದೇವರ ಸೇವಕನೊಬ್ಬನು ಸಹ ಕೆಲವೊಮ್ಮೆ ಮಾನಸಿಕ ನೋವಿನಿಂದಾಗಿ ತನ್ನ ಚಿತ್ತಸ್ಥೈರ್ಯವನ್ನು ಕಳೆದುಕೊಳ್ಳಸಾಧ್ಯವಿದೆ.​—⁠ಕೀರ್ತನೆ 34:19.

ಕೆಲವು ಯುವ ಜನರು ಎಷ್ಟೊಂದು ತೀವ್ರವಾಗಿ ನಿರಾಶರಾಗುತ್ತಾರೆಂದರೆ ಬದುಕುವ ಆಶೆಯನ್ನೇ ಸಂಪೂರ್ಣವಾಗಿ ಕಳೆದುಕೊಳ್ಳುತ್ತಾರೆ. 16 ವರ್ಷ ಪ್ರಾಯದ ಲರಾಳಂತೆಯೇ * ಅವರಿಗೂ ಅನಿಸಬಹುದು. ಅವಳಂದದ್ದು: “ಅನೇಕ ವರುಷಗಳಿಂದ ಖಿನ್ನತೆ ನನ್ನನ್ನು ಆಗಾಗ್ಗೆ ಕಾಡುತ್ತಲೇ ಇದೆ. ಅನೇಕ ಬಾರಿ ನನಗೆ ಸಾಯಬೇಕೆಂದು ಅನಿಸುತ್ತದೆ.” ಒಂದುವೇಳೆ ಯಾರಾದರೊಬ್ಬರು ತಾನು ಸಾಯಲು ಬಯಸುತ್ತೇನೆ ಎಂದು ನಿಮಗೆ ಹೇಳಿರುವುದಾದರೆ ಅಥವಾ ಅಂಥ ವಿಚಾರ ನಿಮ್ಮ ಮನಸ್ಸಿಗೇ ಬಂದಿರುವುದಾದರೆ ಆಗೇನು ಮಾಡಸಾಧ್ಯವಿದೆ? ಮೊದಲಾಗಿ ಅಂಥ ವಿಚಾರ ಮನಸ್ಸಿಗೆ ಬರಲು ಕಾರಣವೇನು ಎಂಬುದನ್ನು ಪರಿಗಣಿಸೋಣ.

ನಿರಾಶೆಗೆ ಕಾರಣ

ಆತ್ಮಹತ್ಯೆ ಮಾಡಿಕೊಳ್ಳಲು ಒಬ್ಬನು/ಳು ನೆನಸುವುದಾದರೂ ಏಕೆ? ಹಲವಾರು ಕಾರಣಗಳಿರಬಹುದು. ಒಂದು ಕಾರಣವೇನೆಂದರೆ, ನಿಭಾಯಿಸಲು ಕಷ್ಟಕರವಾಗಿರುವ ‘ಕಠಿನಕಾಲಗಳಲ್ಲಿ’ ನಾವು ಜೀವಿಸುತ್ತಿದ್ದೇವೆ ಮತ್ತು ತಾರುಣ್ಯದಲ್ಲಿರುವ ಅನೇಕರಿಗೆ ಜೀವನದ ಒತ್ತಡಗಳನ್ನು ಎದುರಿಸುವುದು ತೀರ ಕಷ್ಟಕರವಾಗಿ ತೋರುತ್ತದೆ. (2 ತಿಮೊಥೆಯ 3:⁠1) ಇದಲ್ಲದೆ, ಮಾನವ ಅಪರಿಪೂರ್ಣತೆಯ ಕಾರಣ ಕೆಲವರು ತಮ್ಮ ಬಗ್ಗೆ ಮತ್ತು ತಮ್ಮ ಸುತ್ತಲಿನ ಜಗತ್ತಿನ ಬಗ್ಗೆ ನಕಾರಾತ್ಮಕ ಭಾವನೆಗಳನ್ನು ಮನಸ್ಸಿನಲ್ಲಿ ಬೇರೂರಿಸಿಕೊಳ್ಳಸಾಧ್ಯವಿದೆ. (ರೋಮಾಪುರ 7:​22-24) ದೌರ್ಜನ್ಯದ ಕಾರಣದಿಂದಲೂ ಕೆಲವೊಮ್ಮೆ ಹೀಗಾಗುತ್ತದೆ. ಕೆಲವು ಸಂದರ್ಭದಲ್ಲಿ, ಆರೋಗ್ಯದ ಸಮಸ್ಯೆಯಿಂದಾಗಿಯೂ ಈ ರೀತಿಯ ನಕಾರಾತ್ಮಕ ಭಾವನೆಗಳು ಬರಬಹುದು. ಗಮನಾರ್ಹ ವಿಷಯವೆಂದರೆ, ಒಂದು ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡವರಲ್ಲಿ 90 ಪ್ರತಿಶತ ಜನರು ಒಂದಲ್ಲ ಒಂದು ರೀತಿಯ ಮನೋರೋಗದಿಂದ ಬಳಲುತ್ತಿದ್ದರು ಎಂದು ಅಂದಾಜುಮಾಡಲಾಗಿದೆ. *

ನೋವು-ದುಗುಡಗಳಿಂದ ಯಾರೂ ಮುಕ್ತರಲ್ಲ. ಬೈಬಲೇ ತಿಳಿಸುವುದು, “ಜಗತ್ತೆಲ್ಲಾ ಇಂದಿನ ವರೆಗೂ ನರಳುತ್ತಾ ಪ್ರಸವವೇದನೆ​ಪಡುತ್ತಾ” ಇದೆ. (ರೋಮಾಪುರ 8:22) ಯುವ ಜನರು ಸಹ ಇದರಲ್ಲಿ ಸೇರಿರುತ್ತಾರೆ. ವಾಸ್ತವದಲ್ಲಿ, ಕೆಳಗೆ ತಿಳಿಸಿರುವಂಥ ನಕಾರಾತ್ಮಕ ಘಟನೆಗಳಿಂದ ಹೆಚ್ಚಾಗಿ ಯುವ ಜನರು ತೀವ್ರವಾಗಿ ಬಾಧಿತರಾಗಸಾಧ್ಯವಿದೆ.

ಸಂಬಂಧಿಕರ ಇಲ್ಲವೆ ಸ್ನೇಹಿತರ ಮರಣ ಅಥವಾ ಮುದ್ದಿನಪ್ರಾಣಿಯ ಸಾವು

ಮನೆಯ ಗೊಂದಲಮಯ ವಾತಾವರಣ

ಕ್ಲಾಸ್‌ನಲ್ಲಿ ಫೇಲಾಗುವುದು

ಪ್ರೇಮ ವೈಫಲ್ಯ

ದುರುಪಚಾರ (ದೈಹಿಕ ಅಥವಾ ಲೈಂಗಿಕ ದೌರ್ಜನ್ಯವೂ ಸೇರಿದೆ)

ಮೇಲಿನ ಒಂದಲ್ಲ ಒಂದು ಸಮಸ್ಯೆಗಳನ್ನು ಯುವ ಜನರು ಇಂದಲ್ಲ ನಾಳೆ ಎದುರಿಸಬೇಕಾಗುತ್ತದೆ. ಆದರೆ ಸಮಸ್ಯೆಗಳನ್ನು ನಿಭಾಯಿಸಲು ಕೆಲವರಿಂದ ಸಾಧ್ಯವಾಗದಿರಲು ಕಾರಣವೇನು? ಪರಿಣತರು ಹೇಳುವ ಪ್ರಕಾರ, ಸಂಪೂರ್ಣವಾಗಿ ತಾವು ನಿಸ್ಸಹಾಯಕರು ಮತ್ತು ನಿರೀಕ್ಷಾ​ಹೀನರು ಎಂದು ನೆನಸುವ ಯುವ ಜನರೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ತಮ್ಮ ಪರಿಸ್ಥಿತಿಯನ್ನು ಸುಧಾರಿಸಲು ತಮ್ಮಿಂದ ಆಗುವುದೇ ಇಲ್ಲವೆಂದು ಅವರು ನೆನಸುತ್ತಾರೆ; ತಮ್ಮ ಕತ್ತಲ ಬದುಕಿನಲ್ಲಿ ಯಾವುದೇ ಆಶಾಕಿರಣವನ್ನು ಅವರು ಕಾಣುವುದಿಲ್ಲ. “ಹೆಚ್ಚಿನ ಸಂದರ್ಭಗಳಲ್ಲಿ ಇಂಥ ಯುವ ಜನರು ಸಾಯಲು ಬಯಸುವುದಿಲ್ಲ, ಕೇವಲ ನೋವಿನಿಂದ ಹೊರಬರಲು ಬಯಸುತ್ತಾರಷ್ಟೆ” ಎಂದು ಎಚ್ಚರ! ಪ್ರಕಾಶಕರಿಗೆ ಡಾಕ್ಟರ್‌ ಕ್ಯಾತ್ಲೀನ್‌ ಮೆಕ್ಕೋಯ್‌ತಿಳಿಸುತ್ತಾರೆ.

ಬೇರೆ ದಾರಿಯಿಲ್ಲವೋ?

ನಿಮ್ಮ ಸ್ನೇಹಿತನೊಬ್ಬನು ‘ನೋವಿನಿಂದ ಮುಕ್ತನಾಗಲು ಬಯಸುತ್ತಿರಬಹುದು.’ ಅವನು ಬಹಳವಾಗಿ ನೊಂದುಬಳಲಿರುವುದರಿಂದ ಸಾಯುವುದೊಂದೇ ಪರಿಹಾರವೆಂದು ಹೇಳುವುದಾದರೆ ನೀವೇನು ಮಾಡಸಾಧ್ಯವಿದೆ?

ನಿಮ್ಮ ಸ್ನೇಹಿತನು ಸಾಯಲು ಬಯಸುವಷ್ಟರ ಮಟ್ಟಿಗೆ ನೊಂದಿರುವುದಾದರೆ ಸಹಾಯ ಪಡೆದುಕೊಳ್ಳುವಂತೆ ಅವನನ್ನು ಉತ್ತೇಜಿಸಿ. ಆ ವಿಷಯವನ್ನು ಕೂಡಲೇ ಯಾರಾದರೂ ದೊಡ್ಡವರಿಗೆ ತಿಳಿಸಿ. ನಿಮ್ಮ ಸ್ನೇಹಿತ ಏನು ನೆನಸುತ್ತಾನೋ ಎಂದು ಚಿಂತಿಸಬೇಡಿ. ನಿಮ್ಮ ಸ್ನೇಹ ಮುರಿದುಹೋಗುತ್ತದೆಂದು ಭಯಪಡಬೇಡಿ. ಆ ವಿಷಯವನ್ನು ದೊಡ್ಡವರಿಗೆ ಹೇಳುವ ಮೂಲಕ ‘ಆಪತ್ತಿನಲ್ಲಿ ಸಾರ್ಥಕನಾಗುವ’ ನಿಜ “ಮಿತ್ರ” ನೀವಾಗಿದ್ದೀರಿ ಎಂದು ತೋರಿಸಿಕೊಡುತ್ತೀರಿ. (ಜ್ಞಾನೋಕ್ತಿ 17:17) ಹೌದು, ನೀವು ಒಬ್ಬ ವ್ಯಕ್ತಿಯ ಜೀವವನ್ನು ಉಳಿಸುವಿರಿ!

ಆದರೆ ಒಂದುವೇಳೆ ನಿಮಗೇ ಸಾಯುವ ಆಲೋಚನೆ ಬರುತ್ತಿರುವುದಾದರೆ ಆಗೇನು? “ನಿಮ್ಮ ಕುರಿತು ಚಿಂತಿಸುವ, ನಿಮ್ಮ ಮಾತನ್ನು ತಾಳ್ಮೆಯಿಂದ ಕೇಳಿ ಗಂಭೀರವಾಗಿ ತೆಗೆದುಕೊಳ್ಳುವಂಥ ಯಾರ ಬಳಿಯಾದರೂ ಅಂದರೆ ನಿಮ್ಮ ತಂದೆ, ತಾಯಿ, ಸಂಬಂಧಿ, ಗೆಳೆಯ, ಶಿಕ್ಷಕ, ಧರ್ಮ ಗುರುಗಳು, ಹೀಗೆ ಯಾರಾದರೊಬ್ಬರೊಂದಿಗೆ ನಿಮ್ಮ ಮನಸ್ಸಿನಲ್ಲಿರುವುದೆಲ್ಲವನ್ನು ಬಿಚ್ಚಿಹೇಳಿ. ನಿಮ್ಮ ಜೀವನದಲ್ಲಿ ಪ್ರಮುಖರಾದ ವ್ಯಕ್ತಿಗಳು ನಿಮ್ಮನ್ನು ಅರ್ಥಮಾಡಿಕೊಳ್ಳಲು ಶಕ್ತರಾಗುವಂತೆ ನಿಮ್ಮ ಅನಿಸಿಕೆಯನ್ನು ಅವರಿಗೆ ತಿಳಿಸಿ” ಎಂದು ಡಾಕ್ಟರ್‌ ಮೆಕ್ಕೋಯ್‌ಉತ್ತೇಜಿಸುತ್ತಾರೆ.

ನಿಮ್ಮ ಸಮಸ್ಯೆಗಳ ಕುರಿತು ಮಾತಾಡುವುದರಿಂದ ನಿಮಗೇನೂ ನಷ್ಟವಿಲ್ಲ, ಲಾಭವೇ. ಒಂದು ಬೈಬಲ್‌ ಉದಾಹರಣೆಯನ್ನು ಪರಿಗಣಿಸಿರಿ. ನೀತಿವಂತನಾದ ಯೋಬನು ಜೀವನದ ಒಂದು ಹಂತದಲ್ಲಿ, “ನನ್ನ ಜೀವವೇ ನನಗೆ ಬೇಸರವಾಗಿದೆ” ಎಂದು ಹೇಳಿದನು. ನಂತರ ಅವನು, “ಎದೆಬಿಚ್ಚಿ ಮೊರೆಯಿಡುವೆನು; ಮನೋವ್ಯಥೆಯಿಂದ ನುಡಿಯುವೆನು” ಎಂದು ಕೂಡಿಸಿದನು. (ಯೋಬ 10:⁠1) ಹೌದು, ಯೋಬನು ತುಂಬಾ ನಿರಾಶನಾಗಿದ್ದನು. ಆದರೂ ತನ್ನ ಮನದಾಳದ ಅಳಲನ್ನು ತೋಡಿಕೊಳ್ಳಲು ಬಯಸಿದನು. ಅದೇ ರೀತಿ ನೀವು ಸಹ ಪ್ರೌಢ ಸ್ನೇಹಿತರೊಬ್ಬರೊಂದಿಗೆ ಮನಬಿಚ್ಚಿ ಮಾತಾಡುವ ಮೂಲಕ ಉಪಶಮನವನ್ನು ಪಡೆದುಕೊಳ್ಳಿ.

ವ್ಯಥೆಗೀಡಾಗಿರುವ ಕ್ರೈಸ್ತರಾದರೊ ಸಭಾ ಹಿರಿಯರಿಂದ ಸಹ ಸಹಾಯವನ್ನು ಪಡಕೊಳ್ಳಸಾಧ್ಯವಿದೆ. (ಯಾಕೋಬ 5:​14, 15) ಅವರೊಂದಿಗೆ ನಿಮ್ಮ ಸಮಸ್ಯೆಯ ಕುರಿತು ಮಾತಾಡುವ ಮೂಲಕ ನಿಮ್ಮ ಸಮಸ್ಯೆ ಕಣ್ಮರೆಯಾಗುವುದಿಲ್ಲ ನಿಜ. ಆದರೆ ಸಮತೂಕದ ನೋಟವನ್ನು ಹೊಂದಲು ಅದು ಸಹಾಯಮಾಡಬಹುದು. ವ್ಯಾವಹಾರಿಕ ಪರಿಹಾರಗಳನ್ನು ಕಂಡುಕೊಳ್ಳಲು ಆ ಸಮಯದಲ್ಲಿ ನಿಮಗೆ ಅಗತ್ಯವಾಗಿರುವ ಬೆಂಬಲ ಭರವಸಾರ್ಹ ವ್ಯಕ್ತಿಯಿಂದ ನಿಮಗೆ ಸಿಗಬಹುದು.

ಪರಿಸ್ಥಿತಿಗಳು ಬದಲಾಗುತ್ತವೆ

ನಿರಾಶೆಯಿಂದ ಕುಗ್ಗಿಹೋಗಿರುವಾಗ ಈ ವಿಷಯವನ್ನು ಮನಸ್ಸಿನಲ್ಲಿಡಿ: ಸನ್ನಿವೇಶ ಎಷ್ಟೇ ಕಠಿನವೆಂದನಿಸಿದರೂ ಮುಂದೆ ಅದು ಖಂಡಿತ ಬದಲಾಗುತ್ತದೆ. ಒಂದರ ಮೇಲೊಂದು ಕಷ್ಟತೊಂದರೆಗಳನ್ನು ಎದುರಿಸಿದ ಕೀರ್ತನೆಗಾರ ದಾವೀದನು ಪ್ರಾರ್ಥನೆಯಲ್ಲಿ ಹೇಳಿದ್ದು: “ನಾನು ನರನರಳಿ ದಣಿದಿದ್ದೇನೆ; ಪ್ರತಿರಾತ್ರಿಯೂ ನನ್ನ ಕಣ್ಣೀರಿನಿಂದ ಮಂಚವು ತೇಲಾಡುತ್ತದೆ. ಹಾಸಿಗೆಯು ಕಣ್ಣೀರಿನಿಂದ ನೆನೆದು ಹೋಗುತ್ತದೆ.” (ಕೀರ್ತನೆ 6:⁠6) ಹಾಗಿದ್ದರೂ ಇನ್ನೊಂದು ಕೀರ್ತನೆಯಲ್ಲಿ ಅವನು ಹೇಳಿದ್ದು: “ನೀನು ನನ್ನ ಗೋಳಾಟವನ್ನು ತಪ್ಪಿಸಿ ಸಂತೋಷದಿಂದ ಕುಣಿದಾಡುವಂತೆ ಮಾಡಿದಿ.”​—⁠ಕೀರ್ತನೆ 30:11.

ಜೀವನದಲ್ಲಿ ಸಮಸ್ಯೆಗಳು ಬರುತ್ತಾ ಹೋಗುತ್ತಾ ಇರುತ್ತವೆಂದು ದಾವೀದನು ಅನುಭವದಿಂದ ತಿಳಿದಿದ್ದನು. ಕೆಲವು ಸಮಸ್ಯೆಗಳು ಸದ್ಯಕ್ಕೆ ಸಹಿಸಲಸಾಧ್ಯವಾಗಿ ಕಾಣಬಹುದು ನಿಜ. ಆದರೂ ತಾಳ್ಮೆಯಿಂದಿರಿ. ಪರಿಸ್ಥಿತಿಗಳು ಬದಲಾಗುತ್ತವೆ, ಹೆಚ್ಚಾಗಿ ಒಳ್ಳೇದಕ್ಕಾಗಿ. ಕೆಲವೊಂದು ಸಂದರ್ಭಗಳಲ್ಲಿ ನೀವು ನೆನಸಿರದ ರೀತಿಯಲ್ಲಿ ಸಮಸ್ಯೆಗಳು ಹಗುರವಾಗಿಬಿಡಬಹುದು. ಬೇರೆ ಸಂದರ್ಭಗಳಲ್ಲಿ, ಅದನ್ನು ಎದುರಿಸಲು ಬೇಕಾಗಿರುವ ವಿಧಾನವನ್ನು ನೀವು ಕಂಡುಹಿಡಿಯಬಹುದು. ನಿಜತ್ವವೇನೆಂದರೆ, ವ್ಯಥೆಯನ್ನು ಉಂಟುಮಾಡುವ ಸಮಸ್ಯೆಗಳು ನಿರಂತರಕ್ಕೂ ಹಾಗೆಯೇ ಉಳಿಯುವುದಿಲ್ಲ.​—⁠2 ಕೊರಿಂಥ 4:17.

ಪ್ರಾರ್ಥನೆಯ ಮಹತ್ವ

ನಿಮ್ಮ ಹೃದಯದಲ್ಲಿರುವುದನ್ನೆಲ್ಲಾ ತೋಡಿಕೊಳ್ಳಲಿಕ್ಕಾಗಿರುವ ಅತ್ಯುತ್ತಮ ಮಾರ್ಗ ಪ್ರಾರ್ಥನೆಯಾಗಿದೆ. ದಾವೀದನಂತೆ ನೀವು ಸಹ ಪ್ರಾರ್ಥಿಸಸಾಧ್ಯವಿದೆ: “ದೇವಾ, ನನ್ನನ್ನು ಪರೀಕ್ಷಿಸಿ ನನ್ನ ಹೃದಯವನ್ನು ತಿಳಿದುಕೋ; ನನ್ನನ್ನು ಶೋಧಿಸಿ ನನ್ನ ಆಲೋಚನೆಗಳನ್ನು ಗೊತ್ತುಮಾಡು. ನಾನು ಕೇಡಿನ ಮಾರ್ಗದಲ್ಲಿರುತ್ತೇನೋ ಏನೋ ನೋಡಿ ಸನಾತನಮಾರ್ಗದಲ್ಲಿ ನನ್ನನ್ನು ನಡಿಸು.”​—⁠ಕೀರ್ತನೆ 139:23, 24.

ಪ್ರಾರ್ಥನೆಯು ನಮ್ಮ ಸಮಸ್ಯೆಗಳನ್ನು ನಿವಾರಿಸುವ ಬರಿಯ ಒಂದು ಸಾಧನವಲ್ಲ. ಅದು ನಮ್ಮ ಸ್ವರ್ಗೀಯ ತಂದೆಯೊಂದಿಗೆ ಮಾಡುವ ನಿಜವಾದ ಸಂವಾದವಾಗಿದೆ. ನಾವು ‘ಹೃದಯವನ್ನು ಆತನ ಮುಂದೆ ಬಿಚ್ಚಬೇಕೆಂದು’ ಆತನು ಬಯಸುತ್ತಾನೆ. (ಕೀರ್ತನೆ 62:⁠8) ದೇವರ ಕುರಿತಾದ ಮೂಲಭೂತ ಸತ್ಯಗಳನ್ನು ಪರಿಗಣಿಸಿರಿ:

ನಿಮ್ಮ ಕಷ್ಟನೋವುಗಳ ಕಾರಣವನ್ನು ಆತನು ಅರಿತಿದ್ದಾನೆ.​—⁠ಕೀರ್ತನೆ 103:14.

ನೀವು ನಿಮ್ಮನ್ನು ತಿಳಿದುಕೊಂಡಿರುವುದಕ್ಕಿಂತಲೂ ಉತ್ತಮವಾಗಿ ಆತನು ನಿಮ್ಮನ್ನು ತಿಳಿದಿದ್ದಾನೆ.​—⁠1 ಯೋಹಾನ 3:20.

“ಆತನು ನಿಮಗೋಸ್ಕರ ಚಿಂತಿಸುತ್ತಾನೆ.”​—⁠1 ಪೇತ್ರ 5:⁠7.

ದೇವರು ತನ್ನ ನೂತನ ಲೋಕದಲ್ಲಿ ನಿಮ್ಮ “ಕಣ್ಣೀರನ್ನೆಲ್ಲಾ ಒರಸಿಬಿಡುವನು.”​—⁠ಪ್ರಕಟನೆ 21:⁠4.

ಸಮಸ್ಯೆಯು ಆರೋಗ್ಯಕ್ಕೆ ಸಂಬಂಧಿಸಿರುವಲ್ಲಿ

ಹಿಂದೆ ತಿಳಿಸಿದಂತೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಅನಿಸಿಕೆಗೆ ಕಾರಣ ಕೆಲವೊಮ್ಮೆ ಅನಾರೋಗ್ಯವಾಗಿರುತ್ತದೆ. ಹಾಗಿರುವಲ್ಲಿ ಸಹಾಯವನ್ನು ಪಡೆದುಕೊಳ್ಳಲು ಹಿಂಜರಿಯಬೇಡಿ. ಕ್ಷೇಮವಿಲ್ಲದವರಿಗೆ ವೈದ್ಯನ ಅಗತ್ಯವಿದೆ ಎಂದು ಯೇಸು ಸಹ ಒಪ್ಪಿಕೊಂಡನು. (ಮತ್ತಾಯ 9:12) ಸಂತೋಷದ ಸಂಗತಿಯೇನೆಂದರೆ ಅನೇಕ ತೊಂದರೆಗಳನ್ನು ಚಿಕಿತ್ಸೆಯ ಮೂಲಕ ಸರಿಪಡಿಸಸಾಧ್ಯವಿದೆ. ಚಿಕಿತ್ಸೆಯು ನೀವು ಸುಧಾರಿಸಿಕೊಳ್ಳುವಂತೆ ಮಾಡಬಲ್ಲದು!

ದೇವರ ನೂತನ ಲೋಕದಲ್ಲಿ “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು” ಎಂಬುದಾಗಿ ಬೈಬಲ್‌ ವಾಗ್ದಾನಿಸುತ್ತದೆ. (ಯೆಶಾಯ 33:24) ಅಷ್ಟರ ವರೆಗೆ, ಜೀವನದ ಪಂಥಾಹ್ವಾನಗಳನ್ನು ಎದುರಿಸಲು ನಿಮ್ಮಿಂದಾದಷ್ಟನ್ನು ಮಾಡಿರಿ. ಜರ್ಮನಿಯಲ್ಲಿ ವಾಸಿಸುವ ಹೈಡಿ ಹಾಗೆಯೇ ಮಾಡಿದಳು. ಅವಳು ಹೇಳುವುದು: “ಕೆಲವೊಮ್ಮೆ ನನ್ನ ಖಿನ್ನತೆಯು ಎಷ್ಟು ತೀವ್ರವಾಗುತ್ತಿತ್ತೆಂದರೆ ನನಗೆ ಸಾಯಬೇಕೆಂದು ಅನಿಸುತ್ತಿತ್ತು. ಆದರೆ ನಾನು ಪ್ರಾರ್ಥನೆಯಲ್ಲಿ ನಿರತಳಾದ ಕಾರಣ ಮತ್ತು ಚಿಕಿತ್ಸೆಯನ್ನು ಪಡೆದುಕೊಂಡ ಕಾರಣ ಈಗ ಎಲ್ಲರಂತೆ ಜೀವನವನ್ನು ನಡೆಸುತ್ತಿದ್ದೇನೆ.” ನಿಮ್ಮ ವಿಷಯದಲ್ಲಿಯೂ ಇದು ನಿಜವಾಗಸಾಧ್ಯವಿದೆ! * (g 5/08)

ಮುಂದಿನ ಲೇಖನವು, ಒಡಹುಟ್ಟಿದವರಲ್ಲಿ ಯಾರಾದರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವಲ್ಲಿ ಆ ನೋವನ್ನು ಹೇಗೆ ನಿಭಾಯಿಸುವುದು ಎಂಬ ವಿಷಯವನ್ನು ಚರ್ಚಿಸುವುದು.

“ಯುವ ಜನರು ಪ್ರಶ್ನಿಸುವುದು” ಲೇಖನಮಾಲೆಯ ಹೆಚ್ಚಿನ ಲೇಖನಗಳನ್ನು www.watchtower.org/ype ವೆಬ್‌ಸೈಟ್‌ನಲ್ಲಿ ಕಂಡುಕೊಳ್ಳಬಹುದು.

ಇದರ ಕುರಿತು ಯೋಚಿಸಿರಿ

ಆತ್ಮಹತ್ಯೆಯು ನಿಮ್ಮ ಸಮಸ್ಯೆಯನ್ನು ಕೊನೆಗಾಣಿಸುವುದಿಲ್ಲ; ಬೇರೆಯವರಿಗೆ ಸಮಸ್ಯೆಯನ್ನು ಉಂಟುಮಾಡುತ್ತದಷ್ಟೇ. ಹೇಗೆ?

ಅತೀವ ಚಿಂತೆ ನಿಮ್ಮನ್ನು ಕಾಡುತ್ತಿರುವುದಾದರೆ ನೀವು ಯಾರೊಂದಿಗೆ ಮಾತಾಡಬಹುದು?

[ಪಾದಟಿಪ್ಪಣಿಗಳು]

^ ರೆಬೆಕ್ಕ, ಮೋಶೆ, ಎಲೀಯ ಮತ್ತು ಯೋಬ ಸಹ ಇದೇ ರೀತಿಯ ಹೇಳಿಕೆಗಳನ್ನು ಮಾಡಿದ್ದಾರೆ.​—⁠ಆದಿಕಾಂಡ 25:22; 27:46; ಅರಣ್ಯಕಾಂಡ 11:15; 1 ಅರಸುಗಳು 19:4; ಯೋಬ 3:21; 14:13.

^ ಈ ಲೇಖನದಲ್ಲಿ ಹೆಸರುಗಳನ್ನು ಬದಲಾಯಿಸಲಾಗಿದೆ.

^ ಮನೋರೋಗವಿರುವ ಹೆಚ್ಚಿನ ಯುವ ಜನರು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಎಂಬುದನ್ನು ನೆನಪಿನಲ್ಲಿಡುವುದು ಪ್ರಾಮುಖ್ಯ.

^ ದುಃಖದ ಭಾವನೆಗಳನ್ನು ಹೇಗೆ ನಿಭಾಯಿಸುವುದು ಎಂಬ ಹೆಚ್ಚಿನ ಮಾಹಿತಿಗಾಗಿ 2001, ಸೆಪ್ಟೆಂಬರ್‌ 8 ರ ಎಚ್ಚರ! (ಇಂಗ್ಲಿಷ್‌) ಪತ್ರಿಕೆಯಲ್ಲಿನ “ಖಿನ್ನತೆಯಿರುವ ಹದಿಹರೆಯದವರಿಗೆ ಸಹಾಯ” ಎಂಬ ಲೇಖನಮಾಲೆಯನ್ನು ಮತ್ತು 2004, ಜನವರಿ 8 ರ ಎಚ್ಚರ! (ಇಂಗ್ಲಿಷ್‌) ಪತ್ರಿಕೆಯಲ್ಲಿನ “ಮೂಡ್‌ ವೈಪರೀತ್ಯವನ್ನು ಅರ್ಥಮಾಡಿಕೊಳ್ಳುವುದು” ಎಂಬ ಲೇಖನಮಾಲೆಯನ್ನು ನೋಡಿ.

[ಪುಟ 28ರಲ್ಲಿರುವ ಚೌಕ/ಚಿತ್ರ]

ಹೆತ್ತವರಿಗೊಂದು ಸೂಚನೆ

ಲೋಕದ ಕೆಲವು ಭಾಗಗಳಲ್ಲಿ ಆತ್ಮಹತ್ಯೆಗೆ ಶರಣಾಗುತ್ತಿರುವ ಯುವ ಜನರ ಸಂಖ್ಯೆ ಬಹಳ ಹೆಚ್ಚಾಗುತ್ತಿದೆ. ಉದಾಹರಣೆಗೆ, ಅಮೆರಿಕದಲ್ಲಿ 15ರಿಂದ 25 ವರ್ಷ ಪ್ರಾಯದ ಯುವ ಜನರ ಮರಣಕ್ಕೆ ನಡೆಸುವ ಮುಖ್ಯ ಕಾರಣಗಳಲ್ಲಿ ಆತ್ಮಹತ್ಯೆಯು ಮೂರನೆಯದ್ದಾಗಿದೆ. ಅಲ್ಲಿ, ಕಳೆದ ಎರಡು ದಶಕಗಳಲ್ಲಿ 10ರಿಂದ 14 ವರ್ಷ ಪ್ರಾಯದವರಲ್ಲಿ ಆತ್ಮಹತ್ಯೆಯ ಸಂಖ್ಯೆಯು ದ್ವಿಗುಣವಾಗಿದೆ. ಮಾನಸಿಕ ತೊಂದರೆಯಿಂದ ಬಳಲುತ್ತಿರುವ, ಈ ಮುಂಚೆ ಆತ್ಮಹತ್ಯೆಗೆ ಪ್ರಯತ್ನಿಸಿರುವ ಹಾಗೂ ಆತ್ಮಹತ್ಯೆ ನಡೆದಿರುವ ಕುಟುಂಬದಿಂದ ಬಂದಿರುವ ಯುವ ಜನರು ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು. ಒಬ್ಬ ಯುವ ವ್ಯಕ್ತಿಯು ಆತ್ಮಹತ್ಯೆ ಮಾಡಲು ಯೋಚಿಸುತ್ತಿದ್ದಾನೆಂದು ಸೂಚಿಸುವ ಕೆಲವು ಚಿಹ್ನೆಗಳು:

ಕುಟುಂಬದೊಂದಿಗೆ ಮತ್ತು ಗೆಳೆಯರೊಂದಿಗೆ ಬೆರೆಯದಿರುವುದು

ಊಟ ಮತ್ತು ನಿದ್ರೆಯಲ್ಲಿ ಬದಲಾವಣೆಗಳು

ಈ ಮುಂಚೆ ಇಷ್ಟಪಟ್ಟು ಮಾಡುತ್ತಿದ್ದ ಕೆಲಸಗಳನ್ನು ಈಗ ಮಾಡದಿರುವುದು

ವ್ಯಕ್ತಿತ್ವದಲ್ಲಿ ಗಮನಾರ್ಹ ಮಾರ್ಪಾಟು

ಅಮಲೌಷಧ ಅಥವಾ ಮದ್ಯದ ದುರುಪಯೋಗ

ತಮ್ಮಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಇತರರಿಗೆ ಕೊಟ್ಟುಬಿಡುವುದು

ಸಾವಿನ ಕುರಿತು ಮಾತಾಡುವುದು ಅಥವಾ ಅದಕ್ಕೆ ಸಂಬಂಧಿಸಿದ ವಿಷಯಗಳಿಗೇ ಹೆಚ್ಚು ಗಮನಕೊಡುವುದು

ಇಂಥ ಚಿಹ್ನೆಗಳು ಕಾಣಿಸುವಾಗ ಅದನ್ನು ನಿರ್ಲಕ್ಷಿಸುವುದೇ ಹೆತ್ತವರು ಮಾಡುವ ಅತಿ ದೊಡ್ಡ ತಪ್ಪಾಗಿದೆ ಎಂದು ಡಾಕ್ಟರ್‌ ಕ್ಯಾತ್ಲೀನ್‌ ಮೆಕ್ಕೋಯ್‌ ಎಚ್ಚರ! ಪತ್ರಿಕೆಯ ಪ್ರಕಾಶಕರಿಗೆ ತಿಳಿಸಿದರು. ಅವರು ಹೇಳುವುದು: “ಯಾರೂ ತಮ್ಮ ಮಗ/ಮಗಳಿಗೆ ಸಮಸ್ಯೆಯಿದೆ ಎಂದು ನೆನಸಲು ಬಯಸುವುದಿಲ್ಲ. ಆದುದರಿಂದಲೇ ಸಮಸ್ಯೆಯಿದೆ ಎಂದು ಸಹ ಹೆತ್ತವರು ಒಪ್ಪುವುದಿಲ್ಲ. ‘ಈ ವಯಸ್ಸಿನಲ್ಲಿ ಇದು ಸಹಜ’ ಅಥವಾ ‘ಮತ್ತೆ ಎಲ್ಲ ಸರಿಯಾಗುತ್ತದೆ’ ಅಥವಾ ‘ಅವಳು ಯಾವಾಗಲು ನಾಟಕ ಮಾಡುವುದು ಸ್ವಲ್ಪ ಜಾಸ್ತಿ’ ಇಂಥ ಮಾತುಗಳನ್ನು ಹೇಳಿ ತಮ್ಮನ್ನು ಸಮಾಧಾನಪಡಿಸಿಕೊಳ್ಳುತ್ತಾರೆ. ಆದರೆ ಹೀಗೆ ಯೋಚಿಸುವುದು ಅಪಾಯಕಾರಿ. ಎಲ್ಲ ಸೂಚನೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು.”

ನಿಮ್ಮ ಮಗನೋ ಮಗಳೋ ತೀವ್ರವಾದ ಖಿನ್ನತೆ ಅಥವಾ ಯಾವುದೇ ಮಾನಸಿಕ ಅಸ್ವಸ್ಥತೆಯಿಂದ ನರಳುತ್ತಿರುವುದಾದರೆ ಅವರಿಗಾಗಿ ಸಹಾಯವನ್ನು ಪಡೆದುಕೊಳ್ಳಲು ಹಿಂಜರಿಯಬೇಡಿ. ನಿಮ್ಮ ಹದಿಹರೆಯದ ಮಗನೋ ಮಗಳೋ ​ಆತ್ಮಹತ್ಯೆ ಮಾಡಿಕೊಳ್ಳಲು ನೆನಸುತ್ತಿದ್ದಾರೆ ಎಂದು ನಿಮಗನಿಸುವುದಾದರೆ ಅದರ ಕುರಿತು ಅವರೊಟ್ಟಿಗೆ ಮಾತಾಡಿ. ಆತ್ಮಹತ್ಯೆ ಕುರಿತು ಮಾತಾಡಿದರೆ ಅದು ಆತ್ಮಹತ್ಯೆ ಮಾಡುವಂತೆ ಪ್ರೇರೇಪಿಸುತ್ತದೆ ಎಂಬ ಅಭಿಪ್ರಾಯ ಸುಳ್ಳು. ಈ ವಿಷಯದ ಕುರಿತು ಹೆತ್ತವರು ಮಾತಾಡಿದಾಗ ಎಷ್ಟೋ ಮಕ್ಕಳು ತಮ್ಮ ಮನಸ್ಸನ್ನು ಹಗುರಮಾಡಿಕೊಂಡಿದ್ದಾರೆ. ಆತ್ಮಹತ್ಯೆಯ ಯೋಚನೆ ಬಂದಿದೆ ಎಂದು ನಿಮ್ಮ ಹದಿಹರೆಯದ ಮಗನೋ ಮಗಳೋ ಒಪ್ಪುವುದಾದರೆ, ಹಾಗೆ ಮಾಡಿಕೊಳ್ಳಲು ಅವರು ಈಗಾಗಲೇ ಏನಾದರೂ ಯೋಜನೆ ಮಾಡಿದ್ದಾರೊ, ಹಾಗೇನಾದರೂ ಮಾಡಿರುವಲ್ಲಿ ಏನೆಲ್ಲಾ ತಯಾರಿಮಾಡಿದ್ದಾರೆ ಎಂಬುದನ್ನು ಕಂಡುಹಿಡಿಯಿರಿ. ಈಗಾಗಲೇ ಹೆಚ್ಚು ಸಿದ್ಧತೆ ಮಾಡಿರುವಲ್ಲಿ ನೀವು ತುರ್ತಾಗಿ ಅಡ್ಡಬರುವ ಅಗತ್ಯವಿದೆ. *

ಖಿನ್ನತೆಯು ತನ್ನಿಂದ ತಾನೇ ಸರಿಯಾಗುತ್ತದೆ ಎಂದು ನೆನಸಬೇಡಿ. ಒಂದುವೇಳೆ ಅದು ಸರಿಯಾದರೂ, ಸಮಸ್ಯೆಯು ಅಲ್ಲಿಗೆ ಪರಿಹಾರವಾಯಿತು ಎಂದು ನೆನಸಬೇಡಿ. ಏಕೆಂದರೆ ಖಿನ್ನತೆಯು ಸರಿಯಾದಂತೆ ತೋರುವ ಸಮಯವೇ ಅತಿ ಅಪಾಯಕಾರಿ ಸಮಯವಾಗಿದೆ ಎಂದು ಕೆಲವು ಪರಿಣತರು ತಿಳಿಸುತ್ತಾರೆ. ಹಾಗೇಕೆ? “ತೀವ್ರವಾಗಿ ಖಿನ್ನನಾಗಿರುವ ಹದಿಹರೆಯದ ವ್ಯಕ್ತಿಗೆ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಶಕ್ತಿಯಿರಲಿಕ್ಕಿಲ್ಲ. ಆದರೆ ಖಿನ್ನತೆಯಿಂದ ಅವನು ಹೊರಬರುವಾಗ ಆ ಅನಿಸಿಕೆಯನ್ನು ಕಾರ್ಯರೂಪಕ್ಕೆ ಹಾಕಲು ಅವನಲ್ಲಿ ಸಾಕಷ್ಟು ಶಕ್ತಿಯಿರುತ್ತದೆ” ಎಂದು ಡಾ. ಮೆಕ್ಕೋಯ್‌ ತಿಳಿಸುತ್ತಾರೆ.

ನಿರಾಶೆಯ ಕಾರಣ ಕೆಲವು ಯುವ ಜನರು ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸುವುದು ತೀರ ದುಃಖಕರ. ಹೆತ್ತವರು ಮತ್ತು ಇತರರು ಆತ್ಮಹತ್ಯೆಯ ಸೂಚನೆಗಳನ್ನು ಗಮನಿಸಿ ಸಹಾಯಮಾಡುವ ಮೂಲಕ ಅಂಥ ‘ಮನಗುಂದಿದವರನ್ನು ಧೈರ್ಯಪಡಿಸಬಹುದು.’ ಅಲ್ಲದೆ, ನಿಜವಾಗಿಯೂ ಯುವ ಜನರಿಗೆ ಆಸರೆಯಾಗಿರುವರು.​—⁠1 ಥೆಸಲೊನೀಕ 5:14. (g 5/08)

[ಪಾದಟಿಪ್ಪಣಿ]

^ ಮಾರಕ ಔಷಧಿಗಳು ಅಥವಾ ಗುಂಡು ತುಂಬಿದ ಬಂದೂಕು ಕೈಗೆಟಕುವಂತಿರುವ ಮನೆಗಳಲ್ಲಿರುವವರು ಹೆಚ್ಚು ಅಪಾಯದಲ್ಲಿದ್ದಾರೆ ಎಂಬುದು ಪರಿಣತರ ಸೂಚನೆ. ಬಂದೂಕಿನಿಂದಾಗುವ ಅಪಾಯದ ಕುರಿತು ಅಮೇರಿಕನ್‌ ಫೌಂಡೇಷನ್‌ ಫಾರ್‌ ಸುಸೈಡ್‌ ಪ್ರಿವೆನ್ಷನ್‌ ಹೇಳುವುದು: “ಬಂದೂಕನ್ನು ಹೊಂದಿರುವವರು ಹೆಚ್ಚಾಗಿ ‘ಭದ್ರತೆಗಾಗಿ’ ಅಥವಾ ‘ಸ್ವರಕ್ಷಣೆಗಾಗಿ’ ಅದನ್ನು ಇಟ್ಟುಕೊಂಡಿರುವುದಾದರೂ, ಅಂಥ ಮನೆಗಳಲ್ಲಿ ಬಂದೂಕಿನೇಟಿನಿಂದಾಗುವ ಮರಣಗಳಲ್ಲಿ 83 ಪ್ರತಿಶತ ಮರಣಗಳು ಆತ್ಮಹತ್ಯೆಯಾಗಿರುತ್ತವೆ. ಹೆಚ್ಚಾಗಿ ಬಂದೂಕಿನ ಮಾಲಿಕನಲ್ಲ ಬದಲಾಗಿ ಮನೆಯಲ್ಲಿರುವ ಇತರ ಸದಸ್ಯರ ಆತ್ಮಹತ್ಯೆಯಾಗಿದೆ.”

[ಪುಟ 27ರಲ್ಲಿರುವ ಚಿತ್ರ]

ಪ್ರಾರ್ಥನೆಯು ಒಂದು ಅತ್ಯುತ್ತಮ ಸಂವಾದವಾಗಿದೆ