ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹದಿವಯಸ್ಕರನ್ನು ಬೆಳೆಸುವುದು ತಿಳಿವಳಿಕೆಯ ಪಾತ್ರ

ಹದಿವಯಸ್ಕರನ್ನು ಬೆಳೆಸುವುದು ತಿಳಿವಳಿಕೆಯ ಪಾತ್ರ

ಹದಿವಯಸ್ಕರನ್ನು ಬೆಳೆಸುವುದು ತಿಳಿವಳಿಕೆಯ ಪಾತ್ರ

ನೀವು ವಿದೇಶಕ್ಕೆ ಹೋಗಿದ್ದೀರಿ ಮತ್ತು ಅಲ್ಲಿನ ಭಾಷೆ ನಿಮಗೆ ಬರುವುದಿಲ್ಲ ಎಂದಿಟ್ಟುಕೊಳ್ಳಿ. ಅಲ್ಲಿನ ಜನರೊಂದಿಗೆ ಮಾತಾಡಲು ಕಷ್ಟವಾಗಬಹುದು ನಿಜ, ಆದರೆ ಅದೇನೂ ಅಸಾಧ್ಯ ಸಂಗತಿಯಲ್ಲ. ಏಕೆಂದರೆ ಭಾಷಾ-ಕಲಿಕೆಯ ಪುಸ್ತಕವೊಂದರ ಸಹಾಯದಿಂದ ನೀವು ಆ ಭಾಷೆಯ ಮುಖ್ಯ ಪದಗಳನ್ನು ಕಲಿಯಬಹುದು. ಅಥವಾ ಯಾರಾದರೂ ನಿಮ್ಮ ಮಾತುಗಳನ್ನು ಮತ್ತು ಇತರರು ಮಾತಾಡಿದ್ದನ್ನು ಭಾಷಾಂತರಮಾಡಿ ಹೇಳಬಹುದು.

ತರುಣಾವಸ್ಥೆಯಲ್ಲಿರುವ ಮಕ್ಕಳ ಹೆತ್ತವರಿಗೆ ತಾವು ಸಹ ಇದೇ ರೀತಿಯ ಸನ್ನಿವೇಶದಲ್ಲಿದ್ದೇವೆಂದು ಕೆಲವೊಮ್ಮೆ ಅನಿಸಬಹುದು. ಒಂದು ವಿದೇಶಿ ಭಾಷೆಯಂತೆ ಹದಿವಯಸ್ಕರ ವರ್ತನೆಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟಕರ ನಿಜ, ಆದರೆ ಅಸಾಧ್ಯವೇನಲ್ಲ. ಆದುದರಿಂದ, ಕೆಲವೊಮ್ಮೆ ರೋಮಾಂಚಕಾರಿ ಆದರೂ ಹೆಚ್ಚಾಗಿ ಗೊಂದಲಮಯವಾಗಿರುವ ಈ ಘಟ್ಟದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಹೆತ್ತವರು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದೇ ಸಮಸ್ಯೆಗೆ ಪರಿಹಾರ.

ಅವರು ಹಾಗೇಕೆ ವರ್ತಿಸುತ್ತಾರೆ?

ಒಬ್ಬ ಯುವ ವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಆಶಿಸುವುದು ತಾನೇ ಎಲ್ಲ ವಿದ್ಯಮಾನಗಳಲ್ಲಿ ದಂಗೆಯ ಸೂಚನೆಯಾಗಿರಲಿಕ್ಕಿಲ್ಲ. ನೆನಪಿಡಿ, ಕ್ರಮೇಣ ‘ಪುರುಷನು ತಂದೆತಾಯಿಗಳನ್ನು ಬಿಡುವನು’ ಎಂದು ಬೈಬಲ್‌ ಹೇಳುತ್ತದೆ. (ಆದಿಕಾಂಡ 2:24) ವಯಸ್ಕರಾದಾಗ ಹೆಚ್ಚಿನ ಜವಾಬ್ದಾರಿಗಳು ಹೆಗಲಿಗೇರುವುದರಿಂದ ನಿರ್ಣಯಗಳನ್ನು ಮಾಡಲು ಯುವ ಜನರಿಗೆ ಸ್ವಲ್ಪವಾದರೂ ಅನುಭವ ಸಿಗಬೇಕು.

ಹಿಂದಿನ ಲೇಖನದಲ್ಲಿ ಕೆಲವು ಮಂದಿ ಹೆತ್ತವರು ತಮ್ಮ ಹದಿವಯಸ್ಕ ಮಕ್ಕಳ ಬಗ್ಗೆ ಹೇಳಿಕೆಗಳನ್ನು ಮಾಡಿದ್ದರು. ಆ ಹದಿವಯಸ್ಕರ ವರ್ತನೆಗೆ ಕಾರಣಗ​ಳೇನೆಂಬುದನ್ನು ಪರಿಗಣಿಸಿರಿ.

ಬ್ರಿಟನ್‌ನಲ್ಲಿರುವ ಲೀಯಾ ಅಸಮಾಧಾನದಿಂದ ಹೇಳಿದ್ದು: “ನನ್ನ ಮಗ ತರುಣನಾದಾಗ, ಹಠಹಿಡಿಯುವ ಮತ್ತು ನಮ್ಮ ಅಧಿಕಾರವನ್ನು ಪ್ರಶ್ನಿಸುವ ಪ್ರವೃತ್ತಿ ಅವನಲ್ಲಿ ಇದ್ದಕ್ಕಿದ್ದಂತೆ ಹೆಚ್ಚಾಯಿತು.”

ಚಿಕ್ಕ ಮಕ್ಕಳಂತೆಯೇ ಹದಿವಯಸ್ಕರು ಸಹ ಎಲ್ಲದ್ದಕ್ಕೂ “ಯಾಕೆ?” ಎಂದು ಕೇಳುತ್ತಿರುತ್ತಾರೆ. ಆದರೆ ಚಿಕ್ಕ ಮಕ್ಕಳಿಗೆ ಉತ್ತರ ಕೊಡುವ ಹಾಗೆ ಈಗ ಚುಟುಕಾದ ಉತ್ತರ ಕೊಟ್ಟರೆ ಅವರು ಸುಮ್ಮನಾಗುವುದಿಲ್ಲ. ಈ ಬದಲಾವಣೆ ಏಕೆ? ಅಪೊಸ್ತಲ ಪೌಲನು ಹೇಳಿದಂತೆ, “ನಾನು ಬಾಲಕನಾಗಿದ್ದಾಗ . . . ಬಾಲಕನ ಆಲೋಚನೆಗಳನ್ನು ಮಾಡಿಕೊಂಡೆನು.” (1 ಕೊರಿಂಥ 13:11) ಯುವ ಜನರ ವಿವೇಚನಾ ಸಾಮರ್ಥ್ಯ ಬೆಳೆಯುತ್ತಾ ಹೋದಂತೆ ಅವರಿಗೆ ಹೆಚ್ಚು ಮನವರಿಕೆಯಾಗುವಂಥ ವಿವರಣೆಗಳು ಬೇಕಾಗುತ್ತವೆ. ಇದರಿಂದಾಗಿ ಅವರ ‘ಜ್ಞಾನೇಂದ್ರಿಯಗಳು’ ತರಬೇತಿಹೊಂದುತ್ತವೆ.—ಇಬ್ರಿಯ 5:14.

ಘಾನ ದೇಶದ ಜಾನ್‌ ಹೇಳಿದ್ದು: “ನಮ್ಮ ಹೆಣ್ಣುಮಕ್ಕಳು ವಿಶೇಷವಾಗಿ ತಮ್ಮ ಹೊರತೋರಿಕೆಯ ವಿಷಯದಲ್ಲಿ ಅತಿಯಾಗಿ ಮುಜುಗರಪಡಲು ಆರಂಭಿಸಿದರು.”

ಮಕ್ಕಳು ಬೇಗನೆ, ತಡವಾಗಿ, ಇಲ್ಲವೇ “ಸರಿಯಾದ ಸಮಯಕ್ಕೇ” ಪ್ರೌಢಾವಸ್ಥೆ ತಲಪಲಿ, ಆಗ ಸಂಭವಿಸುವ ತಟ್ಟನೆಯ ದೈಹಿಕ ಬೆಳವಣಿಗೆಯಿಂದಾಗಿ ಅನೇಕ ಯುವ ಜನರಿಗೆ ತಮ್ಮ ತೋರಿಕೆಯ ಬಗ್ಗೆ ಅತಿಯಾದ ಮುಜುಗರವಿರುತ್ತದೆ. ಹುಡುಗಿಯರಿಗೆ ತಮ್ಮ ದೇಹದಲ್ಲಾಗುವ ಬದಲಾವಣೆಗಳನ್ನು ನೋಡಿ ಸಂಭ್ರಮ, ಹೆದರಿಕೆ ಇಲ್ಲವೇ ಈ ಎರಡೂ ಭಾವನೆಗಳು ಹುಟ್ಟಬಹುದು. ಈ ಪ್ರಾಯದಲ್ಲಿ ಹದಿವಯಸ್ಕರಿಗೆ ಮುಖದಲ್ಲಿ ಮೊಡವೆಗಳು ಮೂಡುತ್ತವೆ ಮತ್ತು ಅವರು ಮೇಕಪ್‌ ಹಚ್ಚುತ್ತಾ ಇರುತ್ತಾರೆ. ಬಹುಶಃ ಈ ಕಾರಣದಿಂದಲೇ ಅವರು ಪಠ್ಯಪುಸ್ತಕಕ್ಕಿಂತ ಇಡೀ ದಿನ ಕನ್ನಡಿ ಮುಂದೆ ಕಾಲ ಕಳೆಯುತ್ತಾರೆ.

ಫಿಲಿಪ್ಪೀನ್ಸ್‌ನ ಡ್ಯಾನಿಯಲ್‌ ವಿವರಿಸಿದ್ದು: “ನಮ್ಮ ಮಕ್ಕಳು ಎಲ್ಲವನ್ನೂ ಗುಟ್ಟಾಗಿಡುತ್ತಿದ್ದರು ಮತ್ತು ಇತರರಿಂದ ದೂರವಾಗಿದ್ದು ಏಕಾಂತತೆಯನ್ನು ಬಯಸಿದರು. ಅನೇಕವೇಳೆ ಅವರು ನಮಗಿಂತಲೂ ಹೆಚ್ಚಾಗಿ ತಮ್ಮ ಸ್ನೇಹಿತರೊಂದಿಗೆ ಕಾಲ ಕಳೆಯಲು ಇಷ್ಟಪಟ್ಟರು.”

ಎಲ್ಲವನ್ನೂ ಗುಟ್ಟಾಗಿಡುವ ಸ್ವಭಾವ ಅಪಾಯಕಾರಿ ಆಗಿರಬಲ್ಲದು. (ಎಫೆಸ 5:12) ಆದರೆ ಏಕಾಂತವನ್ನು ಅಪೇಕ್ಷಿಸುವುದು ಒಂದು ಭಿನ್ನ ವಿಷಯ. ಇತರರಿಂದ “ವಿಂಗಡ” ಹೋಗಿ ಏಕಾಂತದಲ್ಲಿ ಸಮಯ ಕಳೆಯುವ ಮಹತ್ತ್ವ ಯೇಸುವಿಗೂ ತಿಳಿದಿತ್ತು. (ಮತ್ತಾಯ 14:13) ಯುವ ಜನರು ಬೆಳೆಯುತ್ತಾ ಹೋದಂತೆ ಅವರಿಗೆ ತಮ್ಮಷ್ಟಕ್ಕಿರಲು ಸಮಯ ಬೇಕಾಗುತ್ತದೆ ಮತ್ತು ವಯಸ್ಕರಿದಕ್ಕೆ ಅವಕಾಶ ಮಾಡಿಕೊಡಬೇಕು. ಸ್ವಲ್ಪ ಮಟ್ಟಿಗಿನ ಏಕಾಂತತೆಯು ಯುವ ಜನರಿಗೆ ಯಾವುದಾದರೊಂದು ​ವಿಷಯದ ಕುರಿತು ವಿವೇಚಿಸುವುದು ಹೇಗೆಂಬುದನ್ನು ಕಲಿಸಿಕೊಡುತ್ತದೆ. ಈ ಪ್ರಮುಖ ಕೌಶಲವು ಅವರು ವಯಸ್ಕರಾದಾಗ ಬಹಳ ಉಪಯುಕ್ತವಾಗಿರುವುದು.

ಅದೇ ರೀತಿಯಲ್ಲಿ ಸ್ನೇಹಬಂಧಗಳನ್ನು ಬೆಸೆಯಲು ಕಲಿಯುವುದು ಬೆಳವಣಿಗೆಯ ಒಂದು ಭಾಗವಾಗಿದೆ. “ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ” ನಿಜ. (1 ಕೊರಿಂಥ 15:33) ಆದರೆ ಅದೇ ಸಮಯದಲ್ಲಿ, “ಒಬ್ಬ ನಿಜ ಒಡನಾಡಿಯು ಯಾವಾಗಲೂ ಪ್ರೀತಿಸುತ್ತಾನೆ, ಮತ್ತು ಸಂಕಟದ ಸಮಯದಲ್ಲಿ ಸಹಾಯಮಾಡಲಿಕ್ಕಾಗಿ ಹುಟ್ಟಿರುವ ಸಹೋದರನಾಗಿದ್ದಾನೆ” ಎಂದು ಬೈಬಲ್‌ ಹೇಳುವ ಮಾತೂ ನಿಜ. (ಜ್ಞಾನೋಕ್ತಿ 17:17, NW) ಆದುದರಿಂದ ಒಳ್ಳೇ ಸ್ನೇಹಿತರನ್ನು ಮಾಡಿ ಅವರೊಂದಿಗಿನ ಸ್ನೇಹವನ್ನು ಉಳಿಸಿಕೊಳ್ಳುವುದು ಹೇಗೆಂಬುದನ್ನು ಕಲಿಯುವುದು ಸಹ ಒಂದು ಪ್ರಮುಖ ಕೌಶಲವಾಗಿದೆ. ಯುವ ಜನರು ವಯಸ್ಕರಾದಾಗಲೂ ಈ ಕೌಶಲ ಅವರೊಂದಿಗೆ ಉಳಿಯುವುದು.

ಮೇಲೆ ತಿಳಿಸಲಾಗಿರುವ ಯಾವುದೇ ಸನ್ನಿವೇಶವನ್ನು ಎದುರಿಸುವಾಗ, ತಮ್ಮ ಹದಿವಯಸ್ಕ ಮಕ್ಕಳ ವರ್ತನೆಯನ್ನು ತಪ್ಪರ್ಥ ಮಾಡಿಕೊಳ್ಳಬಾರದಾದರೆ ಹೆತ್ತವರು ಸರಿಯಾದ ತಿಳಿವಳಿಕೆ ಪಡೆಯುವುದು ಒಳ್ಳೇದು. ತಿಳಿವಳಿಕೆಯೊಂದಿಗೆ ಹೆತ್ತವರಲ್ಲಿ ವಿವೇಕವೂ ಇರಬೇಕು. ವಿವೇಕವೆಂದರೆ, ಒಂದು ಸನ್ನಿವೇಶದಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ತರುವಂಥ ರೀತಿಯಲ್ಲಿ ಪ್ರತಿಕ್ರಿಯಿಸುವ ಸಾಮರ್ಥ್ಯವೇ ಆಗಿದೆ. ಹದಿವಯಸ್ಕ ಮಕ್ಕಳಿರುವ ಹೆತ್ತವರು ಈ ಸಾಮರ್ಥ್ಯವನ್ನು ಹೇಗೆ ಬೆಳೆಸಿಕೊಳ್ಳಬಲ್ಲರು? (g 6/08)

[ಪುಟ 21ರಲ್ಲಿರುವ ಸಂಕ್ಷಿಪ್ತ ವಿವರಣೆ]

ಯುವ ಜನರ ವಿವೇಚನಾ ಸಾಮರ್ಥ್ಯ ಬೆಳೆಯುತ್ತಾ ಹೋದಂತೆ, ಕುಟುಂಬದ ನಿಯಮಗಳ ಬಗ್ಗೆ ಅವರಿಗೆ ಹೆಚ್ಚು ವಿಸ್ತಾರವಾದ ವಿವರಣೆಗಳನ್ನು ಕೊಡಬೇಕಾಗುತ್ತದೆ