ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹದಿವಯಸ್ಕರನ್ನು ಬೆಳೆಸುವುದು ವಿವೇಕದ ಪಾತ್ರ

ಹದಿವಯಸ್ಕರನ್ನು ಬೆಳೆಸುವುದು ವಿವೇಕದ ಪಾತ್ರ

ಹದಿವಯಸ್ಕರನ್ನು ಬೆಳೆಸುವುದು ವಿವೇಕದ ಪಾತ್ರ

“ನಮ್ಮ ಮಗನಿಗೆ ಮತ್ತು ಮಗಳಿಗೆ ಮಾರ್ಗದರ್ಶನ ಕೊಡಲು ತುಂಬ ಪ್ರಯಾಸಪಡುತ್ತೇವೆ. ಆದರೆ, ಯಾವಾಗ ನೋಡಿದರೂ ನಾವು ಅವರನ್ನು ಬಯ್ಯುತ್ತಿರುವಂತೆ ತೋರುತ್ತದೆ. ಅವರ ಆತ್ಮವಿಶ್ವಾಸ ಕಟ್ಟುತ್ತಿದ್ದೇವೋ ಕೆಡುವುತ್ತಿದ್ದೇವೋ ಗೊತ್ತಾಗುತ್ತಿಲ್ಲ. ಸಮತೋಲನದ ಶಿಸ್ತು ಕೊಡುವುದು ತುಂಬ ಕಷ್ಟ.”—ಜಾರ್ಜ್‌ ಮತ್ತು ಲಾರೆನ್‌, ಆಸ್ಟ್ರೇಲಿಯ.

ಹದಿವಯಸ್ಸಿನ ಮಕ್ಕಳನ್ನು ಬೆಳೆಸುವುದು ಸುಲಭದ ಕೆಲಸವೇನಲ್ಲ. ಈ ವಯಸ್ಸಿನಲ್ಲಿ ಮಕ್ಕಳು ಒಡ್ಡುವ ಹೊಸಹೊಸ ರೀತಿಯ ಸಮಸ್ಯೆಗಳಲ್ಲದೆ, ಅವರು ದೊಡ್ಡವರಾಗುತ್ತಿದ್ದಾರಲ್ಲಾ ಎಂಬ ಚಿಂತೆ ಹೆತ್ತವರನ್ನು ಕಾಡುತ್ತಿರಬಹುದು. ಆಸ್ಟ್ರೇಲಿಯದಲ್ಲಿರುವ ಫ್ರ್ಯಾಂಕ್‌ ಎಂಬ ಹೆಸರಿನ ತಂದೆಯೊಬ್ಬನು ಒಪ್ಪಿಕೊಳ್ಳುವುದು: “ನಮ್ಮ ಮಕ್ಕಳು ದೊಡ್ಡವರಾಗಿ ಒಂದು ದಿನ ತಮ್ಮ ತಮ್ಮ ಹಾದಿ ಹಿಡಿಯುವರೆಂಬುದರ ಬಗ್ಗೆ ನೆನಸುವಾಗಲೇ ದುಃಖವಾಗುತ್ತದೆ. ಇನ್ನು ಮೇಲೆ ಅವರ ಜೀವನದ ಮೇಲೆ ನಮಗೆ ನಿಯಂತ್ರಣವಿರುವುದಿಲ್ಲ ಎಂಬ ಮಾತನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತದೆ.”

ಈ ವಿಚಾರವನ್ನು ಸಮ್ಮತಿಸುತ್ತಾ ಈ ಲೇಖನಮಾಲೆಯಲ್ಲಿ ಉಲ್ಲೇಖಿಸಲಾದ ಲೀಯಾ ಹೇಳುವುದು: “ನನ್ನ ಮಗನನ್ನು ಒಬ್ಬ ಯುವಕನಂತೆ ಉಪಚರಿಸಲು ಕಷ್ಟವಾಗುತ್ತದೆ. ನನಗೀಗಲೂ ಅವನು ಚಿಕ್ಕ ಮಗುವೇ. ಮೊನ್ನೆಮೊನ್ನೆಯೇ ಅವನನ್ನು ಶಾಲೆಗೆ ಸೇರಿಸಿದಂತೆ ಅನಿಸುತ್ತದೆ!”

ಹದಿವಯಸ್ಕರು ಚಿಕ್ಕ ಮಕ್ಕಳಲ್ಲ ಎಂಬ ಮಾತನ್ನು ಅರಗಿಸಿಕೊಳ್ಳಲು ಕಷ್ಟವಾಗುವುದಾದರೂ ಅದು ವಾಸ್ತವಾಂಶ. ಅವರು ವಯಸ್ಕರಾಗಲು ತರಬೇತಿ ಹೊಂದುತ್ತಿದ್ದಾರೆ ಮತ್ತು ಹೆತ್ತವರು ಅವರ ಶಿಕ್ಷಕರೂ ಬೆಂಬಲಿಗರೂ ಆಗಿದ್ದಾರೆ. ಆದರೆ ಜಾರ್ಜ್‌ ಮತ್ತು ಲಾರೆನ್‌ ಹೇಳಿದಂತೆ, ಒಂದು ಮಗುವಿನ ಆತ್ಮವಿಶ್ವಾಸವನ್ನು ಕಟ್ಟುವುದು ಇಲ್ಲವೇ ಕೆಡುವುದು ಹೆತ್ತವರ ಕೈಯಲ್ಲಿದೆ. ಈ ವಿಷಯದಲ್ಲಿ ಹೆತ್ತವರು ಹೇಗೆ ಸಮತೋಲನ ತೋರಿಸಬಲ್ಲರು? ಇದಕ್ಕಾಗಿ ಬೈಬಲಿನಲ್ಲಿ ಸಹಾಯಕಾರಿ ಸಲಹೆಗಳಿವೆ. (ಯೆಶಾಯ 48:17, 18) ಕೆಲವು ಉದಾಹರಣೆಗಳನ್ನು ನೋಡೋಣ.

ಒಳ್ಳೇ ಸಂವಾದ ಅತ್ಯಾವಶ್ಯಕ

ಕ್ರೈಸ್ತರು “ಕಿವಿಗೊಡುವದರಲ್ಲಿ ತೀವ್ರವಾಗಿಯೂ ಮಾತಾಡುವದರಲ್ಲಿ ನಿಧಾನವಾಗಿಯೂ” ಇರಬೇಕೆಂದು ಬೈಬಲ್‌ ಹೇಳುತ್ತದೆ. (ಯಾಕೋಬ 1:19) ಯಾವುದೇ ವಯಸ್ಸಿನ ಮಕ್ಕಳೊಂದಿಗೆ ವ್ಯವಹರಿಸುವಾಗ ಈ ಸಲಹೆಯನ್ನು ಅನ್ವಯಿಸಬಹುದಾದರೂ ವಿಶೇಷವಾಗಿ ಹದಿವಯಸ್ಕರಿಗೆ ಕಿವಿಗೊಡುವುದು ತುಂಬ ಪ್ರಾಮುಖ್ಯವಾಗಿದೆ. ಇದಕ್ಕಾಗಿ ಭಾರೀ ಪ್ರಯತ್ನಮಾಡಬೇಕಾದೀತು.

ಬ್ರಿಟನ್‌ನಲ್ಲಿರುವ ಪೀಟರ್‌ ಎಂಬವರು ಹೇಳುವುದು: “ನನ್ನ ಹುಡುಗರು ಹದಿವಯಸ್ಕರಾದಾಗ ನಾನು ಅವರೊಂದಿಗೆ ಸಂವಾದಮಾಡುವ ವಿಧವನ್ನು ಇನ್ನಷ್ಟು ಉತ್ತಮಗೊಳಿಸಬೇಕಾಯಿತು. ಅವರು ಚಿಕ್ಕವರಾಗಿದ್ದಾಗ ಅವರೇನು ಮಾಡಬೇಕೆಂದು ಹೇಳಿದರೆ ಸಾಕಾಗುತ್ತಿತ್ತು, ಅದನ್ನು ಮಾಡುತ್ತಿದ್ದರು. ಆದರೆ ಈಗ ಅವರು ದೊಡ್ಡವರಾಗಿರುವುದರಿಂದ ಅವರೊಂದಿಗೆ ಎಲ್ಲವನ್ನೂ ಚರ್ಚಿಸಿ, ಸ್ಪಷ್ಟವಾಗಿ ವಿವರಿಸಬೇಕಾಗುತ್ತದೆ ಮತ್ತು ಅವರು ತಮ್ಮ ಸ್ವಂತ ಯೋಚನಾ ಸಾಮರ್ಥ್ಯವನ್ನು ಬಳಸಿ ಸಮಸ್ಯೆಗಳನ್ನು ಬಗೆಹರಿಸುವಂತೆ ಸಹಾಯ ಮಾಡಬೇಕಾಗುತ್ತದೆ. ಚುಟುಕಾಗಿ ಹೇಳುವುದಾದರೆ ನಾವು ಅವರ ಹೃದಯವನ್ನು ತಲಪಬೇಕು.”—2 ತಿಮೊಥೆಯ 3:14.

ಒಂದು ಭಿನ್ನಾಭಿಪ್ರಾಯ ಇರುವಾಗಲಂತೂ ಕಿವಿಗೊಡುವುದು ತುಂಬ ಆವಶ್ಯಕ. (ಜ್ಞಾನೋಕ್ತಿ 17:27) ಈ ಮಾತು ನಿಜವೆಂದು ಬ್ರಿಟನಿನ ಡ್ಯಾನಿಯೇಲಾ ಎಂಬವಳು ಕಂಡಳು. ಅವಳಂದದ್ದು: “ನನಗಿದ್ದ ಸಮಸ್ಯೆಯೇನೆಂದರೆ ನನ್ನ ಹೆಣ್ಮಕ್ಕಳಲ್ಲಿ ಒಬ್ಬಳು, ಅವಳಿಗೆ ಏನಾದರೂ ಕೆಲಸ ಹೇಳಿದಾಗ ಎದುರುತ್ತರ ಕೊಡುತ್ತಿದ್ದಳು. ಆದರೆ ಅವಳು ಹೇಳಿದ್ದೇನೆಂದರೆ ನಾನು ಯಾವಾಗಲೂ ಅವಳ ಮೇಲೆ ರೇಗಾಡುತ್ತೇನೆ ಮತ್ತು ‘ಅದು ಮಾಡು, ಇದು ಮಾಡು’ ಎಂದು ಬರೀ ಅಪ್ಪಣೆಕೊಡುತ್ತೇನೆ. ನಾವಿಬ್ಬರು ಕೂತುಕೊಂಡು ಒಬ್ಬರಿಗೊಬ್ಬರು ಕಿವಿಗೊಡುವ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಿದೆವು. ನಾನು ಅವಳೊಂದಿಗೆ ಹೇಗೆ ಮಾತಾಡುತ್ತೇನೆಂದೂ ಇದರಿಂದಾಗಿ ಅವಳಿಗೆ ಹೇಗನಿಸುತ್ತದೆ ಎಂಬುದನ್ನೂ ವಿವರಿಸಿದಳು. ನಾನು ಸಹ ನನಗೆ ಹೇಗನಿಸುತ್ತಿತ್ತೆಂಬುದನ್ನು ಹೇಳಿದೆ.”

ತನ್ನ ಮಗಳಿಗೆ ‘ಕಿವಿಗೊಡಲು’ ಸಿದ್ಧಳಿದ್ದದರಿಂದ ಅವಳು ಎದುರುತ್ತರ ಕೊಡಲು ನಿಜವಾದ ಕಾರಣವೇನೆಂಬುದನ್ನು ಗ್ರಹಿಸಲು ಶಕ್ತಳಾದೆ ಎಂದು ಡ್ಯಾನಿಯೇಲಾಳಿಗೆ ತಿಳಿದುಬಂತು. ಅವಳನ್ನುವುದು: “ಈಗ ನನ್ನ ಮಗಳೊಂದಿಗೆ ತಾಳ್ಮೆಯಿಂದಿರಲು ಪ್ರಯತ್ನಿಸುತ್ತೇನೆ ಮತ್ತು ನನ್ನ ಸಿಟ್ಟು ಇಳಿದಾಗ ಮಾತ್ರ ಅವಳೊಂದಿಗೆ ಮಾತಾಡುತ್ತೇನೆ. ಈಗ ನಮ್ಮ ಸಂಬಂಧವು ಉತ್ತಮವಾಗುತ್ತಿದೆ.”

ಜ್ಞಾನೋಕ್ತಿ 18:13 ಹೇಳುವುದು: “ಗಮನಿಸದೆ ಉತ್ತರಕೊಡುವವನು ಮೂರ್ಖನೆಂಬ ಅವಮಾನಕ್ಕೆ ಗುರಿಯಾಗುವನು.” ಈ ಮಾತು ನಿಜವೆಂದು ಆಸ್ಟ್ರೇಲಿಯದಲ್ಲಿರುವ ಗ್ರೆಗ್‌ ಎಂಬವರಿಗೆ ಗೊತ್ತಾಯಿತು. “ಮೊದಲು ಮಕ್ಕಳಿಗೆ ಕಿವಿಗೊಟ್ಟು, ಅವರ ಭಾವನೆಗಳನ್ನು ಅಂಗೀಕರಿಸುವ ಬದಲಿಗೆ ನಾನೂ ನನ್ನ ಹೆಂಡತಿಯೂ ಕೂಡಲೇ ಭಾಷಣಬಿಗಿಯಲು ಆರಂಭಿಸುವುದರಿಂದಲೇ ಕೆಲವೊಮ್ಮೆ ಅವರೊಂದಿಗೆ ಘರ್ಷಣೆಯುಂಟಾಗುತ್ತದೆ. ಆದುದರಿಂದ, ಅವರ ಮನೋಭಾವಗಳು ನಮಗೆ ಸ್ವಲ್ಪವೂ ಇಷ್ಟವಾಗದಿದ್ದರೂ ಅವರಿಗೆ ತಿದ್ದುಪಾಟು ಇಲ್ಲವೇ ಸಲಹೆಕೊಡುವ ಮುಂಚೆ ಅವರು ತಮ್ಮ ಭಾವನೆಗಳನ್ನು ಮನಬಿಚ್ಚಿ ವ್ಯಕ್ತಪಡಿಸುವಂತೆ ಬಿಡುವುದೇ ಉತ್ತಮವೆಂದು ಕಂಡುಕೊಂಡಿದ್ದೇವೆ.”

ಎಷ್ಟು ಸ್ವಾತಂತ್ರ್ಯ ಕೊಡಬೇಕು?

ಹದಿವಯಸ್ಕರ ಮತ್ತು ಹೆತ್ತವರ ನಡುವಿನ ಘರ್ಷಣೆಗೆ ಹೆಚ್ಚಾಗಿ ಒಂದು ಕಾರಣ, ಹದಿವಯಸ್ಕರ ಸ್ವಾತಂತ್ರ್ಯಕ್ಕೆ ಸಂಬಂಧಿಸಿರಬಹುದು. ಅವರಿಗೆ ಎಷ್ಟು ಸ್ವಾತಂತ್ರ್ಯ ಕೊಡಬೇಕು? ಒಬ್ಬ ತಂದೆ ಹೇಳುವುದು: “ನನ್ನ ಮಗಳಿಗೆ ಸ್ವಲ್ಪ ಸಲಿಗೆ ಕೊಟ್ಟರೆ ತಲೆ ಮೇಲೆ ಕೂತುಕೊಳ್ಳುತ್ತಾಳೆಂದು ನನಗೆ ಕೆಲವೊಮ್ಮೆ ಅನಿಸುತ್ತದೆ.”

ಯುವ ಜನರಿಗೆ ಮಿತಿಯಿಲ್ಲದ ಸ್ವಾತಂತ್ರ್ಯ ಕೊಡುವುದು ನಿಶ್ಚಯವಾಗಿ ಕೆಟ್ಟ ಫಲಿತಾಂಶಗಳನ್ನು ತರುವುದು. “ಶಿಕ್ಷಿಸದೆ ಬಿಟ್ಟ ಹುಡುಗನು ತಾಯಿಯ ಮಾನವನ್ನು ಕಳೆಯುವನು” ಎಂದು ಬೈಬಲ್‌ ಎಚ್ಚರಿಸುತ್ತದೆ. (ಜ್ಞಾನೋಕ್ತಿ 29:15) ಯುವ ಜನರ ಪ್ರಾಯ ಎಷ್ಟೇ ಆಗಿರಲಿ ಅವರಿಗೆ ಖಡಾಖಂಡಿತ ನಿರ್ದೇಶನಗಳ ಅಗತ್ಯವಿದೆ. ಅವರು ಕುಟುಂಬದ ನಿಯಮಗಳನ್ನು ಪಾಲಿಸುತ್ತಾರೆಂಬುದನ್ನು ಹೆತ್ತವರು ಪ್ರೀತಿಯಿಂದ ಖಚಿತಪಡಿಸಬೇಕಾದರೂ, ಅವರ ತಾಳಕ್ಕೆ ತಕ್ಕಂತೆ ಕುಣಿಯುತ್ತಾ ನಿಯಮಗಳನ್ನು ಬದಲಾಯಿಸುತ್ತಾ ಇರಬಾರದು. (ಎಫೆಸ 6:4) ಆದರೆ ಅದೇ ಸಮಯದಲ್ಲಿ ಯುವ ಜನರಿಗೆ ಸ್ವಲ್ಪ ಮಟ್ಟಿಗಿನ ಸ್ವಾತಂತ್ರ್ಯವನ್ನೂ ಕೊಡಬೇಕು. ಹೀಗೆ, ಅವರು ವಯಸ್ಕರಾದಾಗ ವಿವೇಕಯುತ ನಿರ್ಣಯಗಳನ್ನು ಮಾಡಲು ಹೆಚ್ಚು ಸಮರ್ಥರಾಗುವರು.

ಉದಾಹರಣೆಗಾಗಿ, ನೀವು ನಡೆಯಲು ಕಲಿತದ್ದರ ಕುರಿತು ಯೋಚಿಸಿ. ಕೂಸಾಗಿದ್ದಾಗ ನಿಮ್ಮನ್ನು ಎತ್ತಿಕೊಳ್ಳಬೇಕಾಗುತ್ತಿತ್ತು. ಅನಂತರ ನೀವು ಅಂಬೆಗಾಲಿಡಲಾರಂಭಿಸಿ, ನಿಧಾನವಾಗಿ ನಡೆಯಲು ಶುರುಮಾಡಿದಿರಿ. ಆದರೆ ಪುಟ್ಟ ಮಕ್ಕಳು ಆಸರೆಯಿಲ್ಲದೆ ನಡೆಯಲಾರಂಭಿಸುವಾಗ ಅಪಾಯಗಳು ಜಾಸ್ತಿ ಎಂದು ತಿಳಿದಿರುವ ಹೆತ್ತವರು ನಿಮ್ಮ ಮೇಲೆ ನಿಗಾ ಇಟ್ಟು, ಮೆಟ್ಟಲುಗಳಂಥ ಅಪಾಯಕಾರಿ ಸ್ಥಳಗಳಿಗೆ ನೀವು ಹೋಗದಂತೆ ತಡೆಗಳನ್ನು ಹಾಕುತ್ತಿದ್ದರು. ಆದರೆ ನೀವು ನಡೆಯದಂತೆ ಅವರು ನಿರ್ಬಂಧಿಸಲಿಲ್ಲ. ಈ ರೀತಿಯಲ್ಲಿ ನೂರು ಸಲ ಬಿದ್ದುಎದ್ದು ನೀವು ಕ್ರಮೇಣ ಸಲೀಸಾಗಿ ನಡೆಯಲು ಕಲಿತಿರಿ.

ಹೆತ್ತವರು ಮಕ್ಕಳಿಗೆ ಸ್ವಾತಂತ್ರ್ಯ ಕೊಡುವುದರಲ್ಲೂ ತದ್ರೀತಿಯ ಹಂತಗಳಿವೆ. ಮೊದಮೊದಲು, ಹೆತ್ತವರು ತಮ್ಮ ಮಕ್ಕಳಿಗಾಗಿ ನಿರ್ಣಯಗಳನ್ನು ಮಾಡುವ ಮೂಲಕ ಅವರನ್ನು ‘ಎತ್ತಿಕೊಳ್ಳುತ್ತಾರೆ.’ ಮಕ್ಕಳು ಸ್ವಲ್ಪ ಮಟ್ಟಿಗಿನ ಪರಿಪಕ್ವತೆ ತೋರಿಸುವಾಗ ಕೆಲವೊಂದು ಸ್ವಂತ ಆಯ್ಕೆಗಳನ್ನು ಮಾಡಲು ಅನುಮತಿಸುತ್ತಾ ‘ಅಂಬೆಗಾಲಿಡುವಂತೆ’ ಬಿಡುತ್ತಾರೆ. ಆದರೆ ಈ ಮಧ್ಯೆ ಕೆಲವು ನಿರ್ಬಂಧಗಳನ್ನೂ ಇಡುವ ಮೂಲಕ ಯುವ ಜನರನ್ನು ಹಾನಿಯಿಂದ ರಕ್ಷಿಸುತ್ತಾರೆ. ಮಕ್ಕಳು ಇನ್ನಷ್ಟು ಪರಿಪಕ್ವರಾದಂತೆ ಹೆತ್ತವರು ಅವರಿಗೆ ತಮ್ಮಷ್ಟಕ್ಕೆ ‘ನಡೆಯಲು’ ಬಿಡುತ್ತಾರೆ. ಹೀಗೆ ಮಕ್ಕಳು ವಯಸ್ಕರಾದಾಗ ‘ಸ್ವಂತ ಹೊರೆಯನ್ನು ಹೊತ್ತುಕೊಳ್ಳಲು’ ಪೂರ್ಣವಾಗಿ ಶಕ್ತರಾಗುತ್ತಾರೆ.​—ಗಲಾತ್ಯ 6:5.

ಬೈಬಲ್‌ ಉದಾಹರಣೆಯಿಂದ ಕಲಿಯುವುದು

ಯೇಸು ಹದಿವಯಸ್ಕನಾಗುವ ಮುಂಚೆಯೇ ಹೆತ್ತವರು ಅವನಿಗೆ ಸ್ವಲ್ಪ ಮಟ್ಟಿಗಿನ ಸ್ವಾತಂತ್ರ್ಯವನ್ನು ಕೊಟ್ಟಿದ್ದರೆಂದು ವ್ಯಕ್ತವಾಗುತ್ತದೆ. ಆದರೆ ಅದನ್ನು ಅವನು ದುರುಪಯೋಗಿಸಿಕೊಳ್ಳಲಿಲ್ಲ. ಅವನು “ಜ್ಞಾನದಲ್ಲಿಯೂ ದೇಹಬಲದಲ್ಲಿಯೂ ವೃದ್ಧಿಯಾಗುತ್ತಾ ಬಂದನು; ಇದಲ್ಲದೆ ದೇವರ ಮತ್ತು ಮನುಷ್ಯರ ದಯೆಯು ಆತನ ಮೇಲೆ ಹೆಚ್ಚಾಗುತ್ತಾ ಬಂತು.” ಈ ಎಲ್ಲ ಸಮಯದಲ್ಲೂ ಅವನು ತನ್ನ ಹೆತ್ತವರಿಗೆ “ಅಧೀನನಾಗಿದ್ದನು.”—ಲೂಕ 2:51, 52.

ಹೆತ್ತವರಾಗಿರುವ ನೀವು ಈ ಉದಾಹರಣೆಯಿಂದ ಒಂದು ವಿಷಯ ಕಲಿಯಬಲ್ಲಿರಿ. ಅದೇನೆಂದರೆ, ನಿಮ್ಮ ಮಕ್ಕಳು ನೀವು ಕೊಟ್ಟಿರುವ ಸ್ವಾತಂತ್ರ್ಯವನ್ನು ಯೋಗ್ಯ ರೀತಿಯಲ್ಲಿ ಉಪಯೋಗಿಸುವಾಗ ಅವರಿಗೆ ಇನ್ನಷ್ಟು ಸ್ವಾತಂತ್ರ್ಯವನ್ನು ಕೊಡಬಲ್ಲಿರಿ. ಈ ವಿಷಯದಲ್ಲಿ ಕೆಲವು ಹೆತ್ತವರ ಅನುಭವಗಳಿಗೆ ಗಮನಕೊಡಿ.

“ನನ್ನ ಮಕ್ಕಳ ಎಲ್ಲ ಚಟುವಟಿಕೆಗಳಲ್ಲಿ ತಲೆ ಹಾಕುತ್ತಿದ್ದೆ. ಆದರೆ ನಂತರ ನಾನು ಅವರಿಗೆ ಮೂಲತತ್ತ್ವಗಳನ್ನು ಕಲಿಸಿ, ಅವರು ಅವುಗಳಿಗನುಸಾರ ನಿರ್ಣಯಗಳನ್ನು ಮಾಡುವಂತೆ ಬಿಟ್ಟೆ. ಇದರಿಂದಾಗಿ ಅವರು ತಮ್ಮ ನಿರ್ಣಯಗಳನ್ನು ಗಂಭೀರವಾಗಿ ಪರಿಗಣಿಸಲು ಆರಂಭಿಸಿದ್ದನ್ನು ನೋಡಿದೆ.”—ಸು ಹ್ಯಾನ್‌, ಕೊರಿಯ.

“ನಾನೂ ನನ್ನ ಗಂಡನೂ ಮಕ್ಕಳಿಗೆ ಹೆಚ್ಚು ಸ್ವಾತಂತ್ರ್ಯ ಕೊಡಲು ಯಾವಾಗಲೂ ಹೆದರುತ್ತೇವೆ. ಅಂದಮಾತ್ರಕ್ಕೆ, ಅವರು ತಮ್ಮ ಸ್ವಾತಂತ್ರ್ಯವನ್ನು ಜವಾಬ್ದಾರಿಯುತವಾಗಿ ಬಳಸಲು ನಾವು ಅಡ್ಡಿಮಾಡುವುದಿಲ್ಲ. ಏಕೆಂದರೆ ಅವರದನ್ನು ತಮ್ಮ ಒಳ್ಳೇ ನಡತೆಯಿಂದ ಗಳಿಸಿಕೊಂಡಿದ್ದಾರೆ.”—ಡಾರ್ಯ, ಬ್ರಸಿಲ್‌.

“ನನ್ನ ಮಗನಿಗೆ ಕೊಟ್ಟಿರುವ ಸ್ವಾತಂತ್ರ್ಯವನ್ನು ಅವನು ಉತ್ತಮವಾಗಿ ಬಳಸುವಾಗ ಅವನನ್ನು ಶ್ಲಾಘಿಸುವುದು ಮಹತ್ತ್ವದ್ದೆಂದು ಕಂಡುಕೊಂಡಿದ್ದೇನೆ. ಅವನಿಗಿಟ್ಟಿರುವ ನಿಯಮಗಳನ್ನು ನಾನೂ ಪಾಲಿಸಲು ಪ್ರಯತ್ನಿಸುತ್ತೇನೆ. ಉದಾಹರಣೆಗೆ, ನಾನು ಎಲ್ಲಿ ಹೋಗುತ್ತಿದ್ದೇನೆ, ಏನು ಮಾಡುತ್ತಿದ್ದೇನೆ ಎಂಬುದನ್ನು ಅವನಿಗೆ ಹೇಳುತ್ತೇನೆ. ನಾನು ಮನೆಗೆ ಬರುವುದು ತಡವಾಗುವಲ್ಲಿ ಅವನಿಗೆ ಮುಂಚೆಯೇ ಹೇಳಿಬಿಡುತ್ತೇನೆ.”—ಆ್ಯನಾ, ಇಟಲಿ.

“ತಮಗೆ ಸ್ವಾತಂತ್ರ್ಯ ಬೇಕೆಂದು ನಮ್ಮ ಪುತ್ರರು ಹಕ್ಕಿನಿಂದ ಕೇಳಸಾಧ್ಯವಿಲ್ಲ ಬದಲಿಗೆ ಅದಕ್ಕಾಗಿ ತಾವು ಅರ್ಹರೆಂದು ಸಾಬೀತುಪಡಿಸಬೇಕೆಂದು ಮನೆಯಲ್ಲಿ ಹೇಳುತ್ತಿರುತ್ತೇವೆ.”—ಪೀಟರ್‌, ಬ್ರಿಟನ್‌.

ಫಲವನ್ನು ಅನುಭವಿಸುವುದು

ಬೈಬಲ್‌ ಹೇಳುವುದು: “ಯೌವನದಲ್ಲಿ ನೊಗಹೊರುವದು ಮನುಷ್ಯನಿಗೆ ಲೇಸು.” (ಪ್ರಲಾಪಗಳು 3:27) ಒಬ್ಬ ಯುವ ವ್ಯಕ್ತಿ ಜವಾಬ್ದಾರಿ ಎಂಬ ನೊಗವನ್ನು ಅತ್ಯುತ್ತಮವಾಗಿ ಹೊರಬೇಕಾದರೆ, ‘ತಾನು ಏನು ಬಿತ್ತುತ್ತೇನೋ ಅದನ್ನೇ ಕೊಯ್ಯಬೇಕು’ ಎಂಬ ಹೇಳಿಕೆಯ ಸತ್ಯತೆಯನ್ನು ಅನುಭವದಿಂದ ಕಲಿಯಬೇಕು.—ಗಲಾತ್ಯ 6:7.

ಕೆಲವು ಹೆತ್ತವರು ಬಹುಶಃ ಸದುದ್ದೇಶದಿಂದಲೇ, ತಮ್ಮ ಹದಿವಯಸ್ಕರ ಬುದ್ಧಿಗೇಡಿತನದ ಪರಿಣಾಮಗಳಿಂದ ಅವರನ್ನು ಬಚಾವುಮಾಡುತ್ತಾರೆ. ಉದಾಹರಣೆಗೆ, ಒಬ್ಬ ಮಗನು ಅನಗತ್ಯ ವಸ್ತುಗಳಿಗಾಗಿ ಹಣ ಪೋಲುಮಾಡಿ, ಸಾಲದಲ್ಲಿ ಬೀಳುತ್ತಾನೆಂದು ಇಟ್ಟುಕೊಳ್ಳಿ. ತಂದೆತಾಯಿ ಅವನ ಸಾಲ ತೀರಿಸಿಬಿಟ್ಟರೆ ಅವನು ಪಾಠ ಕಲಿಯುವನೋ ಇಲ್ಲವೇ ಆ ಸಾಲವನ್ನು ಅವನೇ ತೀರಿಸುವ ಹಾಗೆ ಯೋಜಿಸಲು ಅವರು ಸಹಾಯ ಮಾಡಿದರೆ ಪಾಠ ಕಲಿಯುವನೋ?

ಮಕ್ಕಳು ತಮ್ಮ ಕೃತ್ಯಗಳ ಫಲವನ್ನು ಅನುಭವಿಸುವುದರಿಂದ ಹೆತ್ತವರು ತಡೆದರೆ ಮಕ್ಕಳಿಗೇನೂ ಒಳಿತಾಗುವುದಿಲ್ಲ. ಹೀಗೆ ಮಾಡಿದರೆ ತಮ್ಮ ಮಕ್ಕಳನ್ನು ವಯಸ್ಕರಾಗಲು ಸಿದ್ಧಗೊಳಿಸುವ ಬದಲು, ಅವರು ಯಾವುದೇ ತಪ್ಪುಮಾಡಿದರೆ ಬಿಡಿಸಲು, ತೊಂದರೆಯಲ್ಲಿ ಸಿಕ್ಕಿಬಿದ್ದರೆ ಪಾರುಮಾಡಲು ಮತ್ತು ತಪ್ಪುಗಳನ್ನು ಮುಚ್ಚಿಹಾಕಲು ಯಾರಾದರೂ ಇದ್ದೇ ಇರುತ್ತಾರೆ ಎಂಬುದನ್ನು ಕಲಿಸಿಕೊಡುವರು. ಇದರ ಬದಲು ಹದಿವಯಸ್ಕರು ಬಿತ್ತಿದ್ದನ್ನು ಕೊಯ್ಯುವಂತೆ ಮತ್ತು ತಮ್ಮ ಸಮಸ್ಯೆಗಳನ್ನು ತಾವೇ ಬಗೆಹರಿಸುವುದು ಹೇಗೆಂಬುದನ್ನು ಕಲಿಯುವಂತೆ ಅವಕಾಶ ಕೊಡುವುದು ಹೆಚ್ಚು ಉತ್ತಮ. ಇದು ಅವರ “ಜ್ಞಾನೇಂದ್ರಿಯಗಳನ್ನು ಸಾಧನೆಯಿಂದ ಶಿಕ್ಷಿಸಿಕೊಂಡು ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು ತಿಳಿ”ಯುವುದಕ್ಕೆ ಅತ್ಯಗತ್ಯವಾಗಿದೆ.—ಇಬ್ರಿಯ 5:14.

“ಬದಲಾಗುತ್ತಿರುವ ಮತ್ತು ಬೆಳೆಯುತ್ತಿರುವ ವ್ಯಕ್ತಿ”

ಹದಿವಯಸ್ಕ ಮಕ್ಕಳಿರುವ ಹೆತ್ತವರಿಗೆ ಒಂದು ದೊಡ್ಡ ಕೆಲಸವಿದೆ ಎಂಬುದರಲ್ಲಿ ಸಂದೇಹವಿಲ್ಲ. “ಕರ್ತನಿಗೆ ಮೆಚ್ಚಿಗೆಯಾಗಿರುವ ಬಾಲಶಿಕ್ಷೆಯನ್ನೂ ಬಾಲೋಪದೇಶವನ್ನೂ ಮಾಡುತ್ತಾ” ತಮ್ಮ ಮಕ್ಕಳನ್ನು ಬೆಳೆಸಲು ಪ್ರಯತ್ನಿಸುವಾಗ ಅವರು ಕೆಲವೊಮ್ಮೆ ಹತಾಶೆಯಿಂದ ಕಣ್ಣೀರಿಡಲೂಬಹುದು.—ಎಫೆಸ 6:4.

ಕೊನೆಯದಾಗಿ ಹೇಳುವುದಾದರೆ, ಒಳ್ಳೇ ಹೆತ್ತವರಾಗಿರುವುದರ ಅರ್ಥ ಮಕ್ಕಳನ್ನು ಕೇವಲ ಹದ್ದುಬಸ್ತಿನಲ್ಲಿಡುವುದು ಮಾತ್ರವಲ್ಲ, ಅವರಲ್ಲಿ ಉತ್ತಮ ಮೌಲ್ಯಗಳನ್ನು ಬೇರೂರಿಸುವುದೂ ಆಗಿದೆ. (ಧರ್ಮೋಪದೇಶಕಾಂಡ 6:6-9) ಇದನ್ನು ಮಾಡುವುದು ಹೇಳಿದಷ್ಟು ಸುಲಭವೋ? ಖಂಡಿತವಾಗಿಯೂ ಇಲ್ಲ! ಈ ಹಿಂದೆ ಉಲ್ಲೇಖಿಸಲಾಗಿರುವ ಗ್ರೆಗ್‌ ಹೇಳುವುದು: “ನಾವು ಬದಲಾಗುತ್ತಿರುವ ಮತ್ತು ಬೆಳೆಯುತ್ತಿರುವ ವ್ಯಕ್ತಿಯೊಂದಿಗೆ ವ್ಯವಹರಿಸುತ್ತಿದ್ದೇವೆ. ಇದರರ್ಥ ನಾವು ಆ ಹೊಸ ವ್ಯಕ್ತಿಯ ಬಗ್ಗೆ ಸತತವಾಗಿ ತಿಳಿದುಕೊಳ್ಳುತ್ತಾ, ಅವನಿಗೆ ಹೊಂದಿಕೊಳ್ಳುತ್ತಾ ಇರಬೇಕು.”

ಈ ಲೇಖನದಲ್ಲಿ ಚರ್ಚಿಸಲಾದ ಬೈಬಲ್‌ ಮೂಲತತ್ತ್ವಗಳನ್ನು ಅನ್ವಯಿಸಿಕೊಳ್ಳಲು ಪ್ರಯತ್ನಿಸಿರಿ. ನಿಮ್ಮ ಮಕ್ಕಳ ಬಗ್ಗೆ ವಾಸ್ತವಿಕ ನಿರೀಕ್ಷಣೆಗಳನ್ನಿಡಿ. ಆದರೆ ಅವರ ಜೀವನದಲ್ಲಿರಬೇಕಾದ ಪ್ರಮುಖ ಆದರ್ಶ ವ್ಯಕ್ತಿಯಾಗಿ ನಿಮಗಿರುವ ಸ್ಥಾನವನ್ನು ಬೇರಾರಿಗೂ ಬಿಟ್ಟುಕೊಡಬೇಡಿ. ಬೈಬಲ್‌ ಹೇಳುವುದು: “ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು; ಮುಪ್ಪಿನಲ್ಲಿಯೂ ಓರೆಯಾಗನು.”—ಜ್ಞಾನೋಕ್ತಿ 22:6. (g 6/08)

[ಪುಟ 23ರಲ್ಲಿರುವ ಸಂಕ್ಷಿಪ್ತ ವಿವರಣೆ]

ಸ್ವಾತಂತ್ರ್ಯ ಪಡೆಯುವುದು ನಡೆಯಲು ಕಲಿಯುವಂತಿದೆ. ಅದು ನಿಧಾನವಾದ ಕಾರ್ಯಗತಿ ಆಗಿದೆ

[ಪುಟ 24ರಲ್ಲಿರುವ ಸಂಕ್ಷಿಪ್ತ ವಿವರಣೆ]

ಯೇಸು ಹದಿವಯಸ್ಕನಾಗುವ ಮುಂಚೆ ಅವನಿಗೆ ಸ್ವಲ್ಪಮಟ್ಟಿಗೆ ಸ್ವಾತಂತ್ರ್ಯ ಕೊಡಲಾಗಿತ್ತು

[ಪುಟ 23ರಲ್ಲಿರುವ ಚೌಕ]

“ನಿಮ್ಮ ಅಧಿಕಾರವನ್ನು ದೃಢೀಕರಿಸುವುದು”

ನೀವು ಹೇರಿದ ನಿರ್ಬಂಧಗಳಿಂದಾಗಿ ನಿಮ್ಮ ಹದಿವಯಸ್ಕನಿಗೆ ಸಿಟ್ಟುಬಂದ ಮಾತ್ರಕ್ಕೆ ನೀವು ನಿರ್ಬಂಧ ಹಾಕುವುದನ್ನು ನಿಲ್ಲಿಸಿಬಿಡಬಾರದು. ಹದಿವಯಸ್ಕರಿಗೆ ಅನುಭವ ಕಡಿಮೆ, ಆದುದರಿಂದ ಅವರಿಗಿನ್ನೂ ಮಾರ್ಗದರ್ಶನದ ಅಗತ್ಯವಿದೆ ಎಂಬುದನ್ನು ನೆನಪಿನಲ್ಲಿಡಿ.—ಜ್ಞಾನೋಕ್ತಿ 22:15.

ನ್ಯೂ ಪೇರೆಂಟ್‌ ಪವರ್‌! ಎಂಬ ಪುಸ್ತಕದಲ್ಲಿ ಜಾನ್‌ ರೋಸ್‌ಮಂಡ್‌ ಎಂಬವರು ಬರೆಯುವುದು: “ಹೆತ್ತವರು ತಮ್ಮ ಮಕ್ಕಳಲ್ಲಾಗುವ ಭಾವನಾತ್ಮಕ ಏರುಪೇರುಗಳಿಗೆ ಹೆದರಿ, ಮನೆಯಲ್ಲಿ ಜಗಳಗಳಾಗದಂತೆ ಮಕ್ಕಳ ಸಾಮರ್ಥ್ಯಕ್ಕೆ ಮೀರಿದ ಜವಾಬ್ದಾರಿಯನ್ನು ಅವರಿಗೆ ಕೊಟ್ಟುಬಿಡುವುದು ಸುಲಭ. ಆದರೆ ವಾಸ್ತವದಲ್ಲಿ ಹೆತ್ತವರು ಇದಕ್ಕೆ ತದ್ವಿರುದ್ಧವಾದದ್ದನ್ನೇ ಮಾಡಬೇಕು. ಇದು ನಿಮ್ಮ ಅಧಿಕಾರವನ್ನು ದೃಢೀಕರಿಸುವ ಸಮಯವಾಗಿದೆ ಹೊರತು ನಿಮ್ಮ ಮಕ್ಕಳು ಅದನ್ನು ಕೆಡವಿಬಿಡಲು ಅನುಮತಿಸುವ ಸಮಯವಲ್ಲ. ಹೆತ್ತವರು ತಮ್ಮನ್ನು ಸರಿಯಾದ ದಿಕ್ಕಿಗೆ ತಿರುಗಿಸುವ ವಿಚಾರವನ್ನು ಮಕ್ಕಳು ಖಂಡಿತ ತಳ್ಳಿಹಾಕುವರು. ಆದರೂ ಹೆತ್ತವರು ತಮ್ಮ ಈ ಜವಾಬ್ದಾರಿಯನ್ನು ಪೂರೈಸಲು ಸಿದ್ಧರಿದ್ದಾರೆಂಬುದನ್ನು ಮಕ್ಕಳು ತಿಳಿಯಬೇಕಾದ ಸಮಯ ಇದಾಗಿದೆ.”

[ಪುಟ 24ರಲ್ಲಿರುವ ಚೌಕ]

ಹದಿವಯಸ್ಕರಿಗೆ ಸ್ವಾತಂತ್ರ್ಯ ಕೊಡುವುದು

ಅನೇಕ ಹದಿವಯಸ್ಕರು ಹೆಚ್ಚಿನ ಸ್ವಾತಂತ್ರ್ಯ ಬಯಸುತ್ತಾರೆ ಮತ್ತು ಕೆಲವು ಹೆತ್ತವರು ಹದಿವಯಸ್ಕರಿಗೆ ಕಡಿಮೆ ಸ್ವಾತಂತ್ರ್ಯ ಕೊಡುತ್ತಾರೆ. ಈ ಎರಡೂ ವೈಪರೀತ್ಯಗಳ ನಡುವಿರುವ ಸಮತೋಲನವನ್ನು ನಾವು ಕಂಡುಹಿಡಿಯಬೇಕು. ಇದನ್ನು ಹೇಗೆ ಮಾಡಸಾಧ್ಯ? ಅದಕ್ಕಾಗಿ ಮೊದಲು, ಕೆಳಗೆ ಕೊಡಲಾಗಿರುವ ಪಟ್ಟಿಯನ್ನು ಪರಿಗಣಿಸಿರಿ. ನಿಮ್ಮ ಮಗನು/ಳು ಯಾವ ಕ್ಷೇತ್ರಗಳಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿದ್ದಾನೆ/ಳೆ?

ಸ್ನೇಹಿತರನ್ನು ಆಯ್ಕೆಮಾಡುವುದರಲ್ಲಿ

ಬಟ್ಟೆಬರೆ ಆಯ್ಕೆಮಾಡುವುದರಲ್ಲಿ

ಹಣ ಖರ್ಚು ಮಾಡುವುದರಲ್ಲಿ

ಸರಿಯಾದ ಸಮಯಕ್ಕೆ ಮನೆಗೆ ಹಿಂದಿರುಗುವ ವಿಷಯದಲ್ಲಿ

ಮನೆಯಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿಮುಗಿಸುವುದರಲ್ಲಿ

ಶಾಲಾಕೆಲಸವನ್ನು ಪೂರ್ಣಗೊಳಿಸುವುದರಲ್ಲಿ

ತಪ್ಪುಗಳಿಗೆ ಕ್ಷಮೆಕೇಳುವುದರಲ್ಲಿ

ಇತರೆ .....

ನಿಮ್ಮ ಹದಿವಯಸ್ಕ ಮಗನು/ಳು, ಮೇಲೆ ಕೊಡಲಾಗಿರುವ ಹಲವಾರು ಕ್ಷೇತ್ರಗಳಲ್ಲಿ ಈಗಾಗಲೇ ಪ್ರೌಢತೆಯನ್ನು ತೋರಿಸುತ್ತಿರುವಲ್ಲಿ ಅವರಿಗೆ ಹೆಚ್ಚಿನ ಸ್ವಾತಂತ್ರ್ಯ ಕೊಡುವುದರ ಕುರಿತು ಏಕೆ ಯೋಚಿಸಬಾರದು?

[ಪುಟ 23ರಲ್ಲಿರುವ ಚಿತ್ರ]

ಅಗತ್ಯವಿರುವ ಯಾವುದೇ ತಿದ್ದುಪಾಟು ಇಲ್ಲವೇ ಬುದ್ಧಿವಾದ ಕೊಡುವ ಮುಂಚೆ ಅವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಅವಕಾಶಕೊಡಿ