ಎಚ್ಚರ! ನೀಡಿದ ಅನಿರೀಕ್ಷಿತ ಸಹಾಯ
ಎಚ್ಚರ! ನೀಡಿದ ಅನಿರೀಕ್ಷಿತ ಸಹಾಯ
ಬೆನಿನ್‌ನ ಎಚ್ಚರ! ಲೇಖಕರಿಂದ
◼ ಇಪ್ಪತ್ತಮೂರು ವಯಸ್ಸಿನ ನೊಎಲ್ ಯೆಹೋವನ ಸಾಕ್ಷಿಗಳ ಪೂರ್ಣಸಮಯದ ಶುಶ್ರೂಷಕನಾಗಲಿಕ್ಕಾಗಿ ತನ್ನ ಶಾಲಾಶಿಕ್ಷಣವನ್ನು ಬಿಟ್ಟುಬಿಡಲು ನಿರ್ಣಯಿಸಿದನು. ಆದರೆ ಅವನ ಸಂಬಂಧಿಕರು ಹೆಚ್ಚು ಶಿಕ್ಷಣವಿಲ್ಲದೆ ಅವನು ತನ್ನ ಜೀವನೋಪಾಯವನ್ನು ಹೇಗೆ ನಡೆಸಾನು ಎಂದು ಸಂದೇಹಪಟ್ಟರು. ಅವನಿಗೆ ತಕ್ಕದಾದ ಪಾರ್ಟ್‌ಟೈಮ್ ಕೆಲಸ ದೊರೆಯುವುದು ಕೂಡ ಕಷ್ಟವಾಗಿತ್ತು. ಅದೇ ಸಮಯಕ್ಕೆ ಸರಿಯಾಗಿ ಎಚ್ಚರ! ಪತ್ರಿಕೆಯಲ್ಲಿ ಕೆಲಸದ ಕುರಿತ ಒಂದು ಲೇಖನ ಬಂತು. ಅದರ ವಿಷಯ “ನೌಕರಿ ಪಡೆಯಲು ಐದು ಕೀಲಿಕೈ” ಎಂದಾಗಿತ್ತು. ನೊಎಲ್ ಇದನ್ನು ಜಾಗರೂಕತೆಯಿಂದ ಅನೇಕ ಸಾರಿ ಓದಿದನು. * ಅದು ಅವನಿಗೆ ಸಹಾಯ ನೀಡಿತೊ? ಹೌದು, ಆದರೆ ಅವನು ನಿರೀಕ್ಷಿಸಿದಂತೆ ಅಲ್ಲ.
ಒಂದು ದಿನ ನೊಎಲ್ ಮನೆಯಿಂದ ಮನೆಗೆ ಹೋಗಿ ಸಾರುತ್ತಿದ್ದಾಗ ಒಬ್ಬ ಶಾಲಾ ನಿರ್ದೇಶಕನು ಅವನನ್ನು ಕಂಡು ‘ನೀನು ಯೆಹೋವನ ಸಾಕ್ಷಿಯೊ?’ ಎಂದು ಕೇಳಿದನು. ಆ ನಿರ್ದೇಶಕನಿಗೆ ಒಬ್ಬ ಉಪಾಧ್ಯಾಯನ ಅಗತ್ಯವಿತ್ತು. ಯೆಹೋವನ ಸಾಕ್ಷಿಗಳು ಉತ್ತಮವಾಗಿ ಕಲಿಸುತ್ತಾರೆಂದು ಅವನಿಗೆ ತಿಳಿದಿತ್ತು. ಆದ್ದರಿಂದ ಟೀಚರ್ ಆಗಿ ಕೆಲಸಮಾಡಲು ಬಯಸುವ ಯಾರಾದರೂ ಇದ್ದಾರೋ ಎಂದು ನೊಎಲ್‌ನನ್ನು ಕೇಳಿದನು. ಇಲ್ಲವೆಂದು ನೊಎಲ್ ಉತ್ತರ ಕೊಟ್ಟಾಗ, ಆ ನಿರ್ದೇಶಕನು “ನೀನು ಆ ಕೆಲಸ ಮಾಡುತ್ತೀಯಾ?” ಎಂದು ಕೇಳಿದನು.
ನೊಎಲ್ ಶಾಲೆಯಲ್ಲಿ ಎಂದೂ ಕಲಿಸಿರಲಿಲ್ಲ. ಮಾತ್ರವಲ್ಲ ಅವನು ಕೆಲವೊಮ್ಮೆ ಮಾತಾಡುವಾಗ ತೊದಲುತ್ತಿದ್ದನು. ಬೆನಿನ್ ದೇಶದ ಶಿಕ್ಷಣ ಸಂಸ್ಥೆಯಗನುಸಾರ ಉಪಾಧ್ಯಾಯರು ತೊದಲು ನುಡಿಯುತ್ತಿಲ್ಲವೆಂಬುದನ್ನು ದೃಢಪಡಿಸಲು ಒಂದು ಪರೀಕ್ಷೆಗೆ ಕುಳಿತುಕೊಳ್ಳಬೇಕಾಗಿತ್ತು. ಆದ್ದರಿಂದ ನೊಎಲ್‌ಗೆ ಅದು ಸಮಸ್ಯೆಯಾಗಿತ್ತು. ಆದರೆ ಆ ನಿರ್ದೇಶಕನು, “ಸರ್ಟಿಫಿಕೇಟ್ ತಕ್ಕೊಂಡು ಬಾ, ಆ ಕೆಲಸ ನಿನಗೇ” ಎಂದು ಮಾತುಕೊಟ್ಟನು.
ನೊಎಲ್ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಒಳ್ಳೆಯ ಪ್ರಗತಿಯನ್ನು ಮಾಡಿದ್ದನು. ಈ ಶಾಲೆ ವಿದ್ಯಾರ್ಥಿಗಳ ಸಾರ್ವಜನಿಕ ಭಾಷಣ ಸಾಮರ್ಥ್ಯವನ್ನು ಉತ್ತಮಗೊಳಿಸುವ ಉದ್ದೇಶದ್ದಾಗಿದ್ದು ಯೆಹೋವನ ಸಾಕ್ಷಿಗಳ ಸಭೆಗಳಲ್ಲಿ ಪ್ರತಿ ವಾರ ನಡೆಯುತ್ತದೆ. ಇದರಿಂದ ನೊಎಲ್ ತನ್ನ ಸ್ವಂತ ಊರಿನ ಸಭೆಯಲ್ಲಿ ಸಾರ್ವಜನಿಕ ಭಾಷಣವನ್ನೂ ಕೊಡುವಷ್ಟು ಪ್ರಗತಿಹೊಂದಿದನು. ಆದರೂ ಅವನು ಪರೀಕ್ಷೆಗೆ ಕುಳಿತಾಗ ಅವನಿಗೆ ನಡುಕವುಂಟಾಯಿತು.
ಪರೀಕ್ಷಕನು ಅವನಿಗೆ ಒಂದು ಪತ್ರಿಕೆಯನ್ನು ಕೊಟ್ಟು ಕೆಂಪು ಬಣ್ಣದಿಂದ ಗುರುತಿಸಿದ್ದ ಪರಿಚ್ಛೇದವನ್ನು ಓದುವಂತೆ ಕೇಳಿಕೊಂಡನು. ಅಲ್ಲಿ “ನೌಕರಿ ಪಡೆಯಲು ಐದು ಕೀಲಿಕೈ” ಎಂಬ ಲೇಖನವನ್ನು ನೋಡಿದಾಗ ಅವನಿಗೆ ಅದನ್ನು ನಂಬಲಿಕ್ಕಾಗಲಿಲ್ಲ. ಅವನು ಆ ಪರಿಚ್ಛೇದವನ್ನು ಸರಾಗವಾಗಿ ಓದಿದನು ಮತ್ತು ಅವನಿಗೆ ಸರ್ಟಿಫಿಕೇಟ್ ದೊರೆಯಿತು.
ಯೆಹೋವನ ಸಾಕ್ಷಿಗಳ ಪತ್ರಿಕೆಗಳನ್ನು ತಾನು ಕ್ರಮವಾಗಿ ಓದುತ್ತೇನೆಂದು ಆ ಪರೀಕ್ಷಕನೂ ತರುವಾಯ ಹೇಳಿದನು. “ಈ ಪತ್ರಿಕೆಗಳು ಬೋಧಪ್ರದವಾಗಿವೆ ಮಾತ್ರವಲ್ಲ ಅದರ ಭಾಷಾಶೈಲಿಯೂ ಉತ್ತಮ. ಆದ್ದರಿಂದ ಪರೀಕ್ಷೆಯಲ್ಲಿ ನಾನು ಅವನ್ನು ಆಗಾಗ್ಗೆ ಉಪಯೋಗಿಸುತ್ತೇನೆ” ಎಂದನವನು.
ನೊಎಲ್ ಉಪಾಧ್ಯಾಯನಾಗಿ ಕೆಲಸಮಾಡಿದನು. ನಿರ್ದೇಶಕನು, ಅವನು ಮುಂದಿನ ವರ್ಷವೂ ಕೆಲಸಮಾಡುವಂತೆ ಬಯಸಿದನು. ಆದರೆ ನೊಎಲ್‌ನ ಯೋಜನೆ ಬೇರೆಯಾಗಿತ್ತು. ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸಿನಲ್ಲಿ ಕೆಲಸ ಮಾಡುವಂತೆ ಅವನಿಗೆ ಕರೆ ಬಂತು. ಅವನು ಈಗ ಅಲ್ಲಿ ಸೇವೆಮಾಡುತ್ತಿದ್ದಾನೆ. (g 9/08)
[ಪಾದಟಿಪ್ಪಣಿ]