ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬಿರುಗಾಳಿಗಿಂತಲೂ ಶಕ್ತಿಶಾಲಿಯಾದ ಪ್ರೀತಿ!

ಬಿರುಗಾಳಿಗಿಂತಲೂ ಶಕ್ತಿಶಾಲಿಯಾದ ಪ್ರೀತಿ!

ಬಿರುಗಾಳಿಗಿಂತಲೂ ಶಕ್ತಿಶಾಲಿಯಾದ ಪ್ರೀತಿ!

ಕಟ್ರೀನ ಮತ್ತು ರೀಟ ಎಂಬ ಹೆಸರಿನ ಬಿರುಗಾಳಿಗಳು ಅಮೆರಿಕದ ಗಲ್ಫ್‌ ಕರಾವಳಿಗೆ 2005ರಲ್ಲಿ ಅಪ್ಪಳಿಸಿದಾಗ ಮಹತ್ತಾದ ಹಾನಿಯನ್ನೂ ಹೆಚ್ಚು ಪ್ರಾಣನಷ್ಟವನ್ನೂ ತಂದೊಡ್ಡಿದವು. ಹೀಗೆ ಬಾಧಿಸಲ್ಪಟ್ಟವರಲ್ಲಿ ಸಾವಿರಾರು ಮಂದಿ ಯೆಹೋವನ ಸಾಕ್ಷಿಗಳೂ ಇದ್ದರು.

ಅಮೆರಿಕದ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸಿನ ನಿರ್ದೇಶನದಂತೆ, ವಿಪತ್ಪರಿಹಾರ ಕಮಿಟಿಗಳು ಒಡನೆ ಪರಿಹಾರ ಕಾರ್ಯಕ್ಕಿಳಿದವು. ಲೂಯ್ಸಿಯಾನದಲ್ಲಿ 13 ಪರಿಹಾರ ಕೇಂದ್ರಗಳನ್ನು, 9 ಉಗ್ರಾಣಗಳನ್ನು ಮತ್ತು 4 ಇಂಧನ ಡಿಪೋಗಳನ್ನು ಅವರು ನಿರ್ಮಿಸಿದರು. ಅವರ ಕಾರ್ಯಕ್ಷೇತ್ರವು 80,000 ಕಿಲೋಮೀಟರ್‌ನಷ್ಟು ವಿಸ್ತಾರವಾಗಿತ್ತು. ಅಮೆರಿಕದ ಎಲ್ಲ ಭಾಗಗಳಿಂದ ಮತ್ತು ಇತರ 13 ದೇಶಗಳಿಂದ ಸುಮಾರು 17,000 ಮಂದಿ ಸಾಕ್ಷಿ ಸ್ವಯಂಸೇವಕರು ತುರ್ತು ಸಹಾಯಕ್ಕಾಗಿ ಮತ್ತು ಪುನರ್ನಿರ್ಮಾಣ ಕೆಲಸಕ್ಕಾಗಿ ಬಂದರು. ನೈಸರ್ಗಿಕ ಶಕ್ತಿಗಳಿಗಿಂತ ಕ್ರೈಸ್ತ ಪ್ರೀತಿಯು ಹೆಚ್ಚು ಶಕ್ತಿಶಾಲಿ ಎಂಬುದನ್ನು ಅದರ ಫಲಿತಾಂಶಗಳು ತೋರಿಸಿದವು.​—⁠1 ಕೊರಿಂಥ 13:​1-8.

ಈ ಯೆಹೋವನ ಸಾಕ್ಷಿಗಳ ಸ್ವಯಂಸೇವಕರು ತಮ್ಮ ಜೊತೆವಿಶ್ವಾಸಿಗಳ 5,600ಕ್ಕಿಂತಲೂ ಹೆಚ್ಚು ಮನೆಗಳನ್ನು ಮತ್ತು ಅವರ ಕೂಟಗಳ ಸ್ಥಳಗಳಾದ 90 ರಾಜ್ಯ ಸಭಾಗೃಹಗಳನ್ನು ದುರಸ್ತುಮಾಡಿದರು. ನಷ್ಟಗೊಂಡಂಥ ಹೆಚ್ಚುಕಡಮೆ ಎಲ್ಲ ಕಟ್ಟಡಗಳನ್ನು ಅವರು ದುರಸ್ತುಮಾಡಿದರೆಂದು ಈ ಸಂಖ್ಯೆಯು ತೋರಿಸುತ್ತದೆ. ಗಲಾತ್ಯ 6:10ಕ್ಕನುಸಾರವಾಗಿ “ಎಲ್ಲರಿಗೆ ಒಳ್ಳೇದನ್ನು” ಮಾಡುವಂತೆ ಬೈಬಲ್‌ ಹೇಳಿರುವ ಕಾರಣ ಯೆಹೋವನ ಸಾಕ್ಷಿಗಳು ಇತರ ಅನೇಕ ಜನರಿಗೂ ಸಹಾಯ ನೀಡಿದರು.

ಈಪರಿಹಾರ ಕಾರ್ಯದಲ್ಲಿ ಭಾಗವಹಿಸುವುದು ಸ್ವತ್ಯಾಗವನ್ನು ಕೇಳಿಕೊಳ್ಳುತ್ತದಾದರೂ, ಪ್ರತಿಫಲವೊ ಅಪಾರ. ನಮ್ಮ ಪರಿಹಾರ ಕಾರ್ಯದ ವಿವಿಧ ವಿಭಾಗಗಳ ಮೇಲ್ವಿಚಾರಣೆ ಮಾಡುತ್ತಿದ್ದ ಏಳು ಮಂದಿ ಸಾಕ್ಷಿಗಳ ಈ ಹೇಳಿಕೆಗಳನ್ನು ಕೇಳಿರಿ.

“ನನ್ನ ಜೀವನದ ಒಂದು ಉಜ್ವಲ ಅನುಭವ”

ರಾಬರ್ಟ್‌: ಆಪತ್ತು ಪರಿಹಾರ ಕಮಿಟಿಯಲ್ಲಿ ಸೇವೆಮಾಡುವುದು ನನ್ನ ಜೀವನದ ಒಂದು ಉಜ್ವಲ ಅನುಭವ. ನನಗೆ 67 ವರ್ಷ ಪ್ರಾಯವಾಗಿರುವುದರಿಂದ ನಾನು ಕಮಿಟಿಯಲ್ಲಿಯೇ ಹೆಚ್ಚು ವಯಸ್ಕ. ನಾನಿದ್ದ ಸ್ವಯಂಸೇವಕರ ಸಮೂಹದಲ್ಲಿ ಅಸಾಧಾರಣ ಸಾಮರ್ಥ್ಯ ಹಾಗೂ ಆಧ್ಯಾತ್ಮಿಕ ಮನಸ್ಸು ಇದ್ದ ಅನೇಕ ಯುವ ಸಾಕ್ಷಿಗಳಿದ್ದರು. ಈ ಯುವಜನರು ಯೆಹೋವನಿಗೆ ಮತ್ತು ಜೊತೆ ಕ್ರೈಸ್ತರಿಗಾಗಿ ತೋರಿಸುವ ಸ್ವತ್ಯಾಗದ ಪ್ರೀತಿಯನ್ನು ನೋಡುವುದು ಅದೆಷ್ಟೊ ಪ್ರೋತ್ಸಾಹನೀಯ!

ನನ್ನ ಪತ್ನಿ ವೆರಾನಿಕ ಅತ್ಯುತ್ತಮ ರೀತಿಯ ಸಹಕಾರಿಣಿಯಾದಳು. ನನ್ನ 40 ವರ್ಷದ ಉದ್ಯೋಗವನ್ನು ವಿಪತ್ತು ಪರಿಹಾರ ಸೇವೆಯ ಸಲುವಾಗಿ ಬಿಟ್ಟುಬಿಡುವ ನನ್ನ ನಿರ್ಣಯವನ್ನು ಆಕೆ ಬೆಂಬಲಿಸಿದಳು. ನಾವೀಗ ವಾರಕ್ಕೊಂದು ದಿನ ರಾತ್ರಿಯಲ್ಲಿ ಆಫೀಸುಗಳನ್ನು ಶುಚಿಮಾಡುವ ಕೆಲಸವನ್ನು ತಕ್ಕೊಂಡಿದ್ದೇವೆ. ನಾವು ಇದ್ದದರಲ್ಲಿಯೇ ಜೀವನ ನಡೆಸಲು ಕಲಿತು ಸರಳ ಬದುಕಿನಲ್ಲಿ ಆನಂದಿಸುತ್ತೇವೆ. ಯೆಹೋವನನ್ನು ಮೆಚ್ಚಿಸಲು ಬಯಸುವ ಜನರೊಂದಿಗೆ ಕೆಲಸಮಾಡುವ ಮೂಲಕ ದೇವರ ರಾಜ್ಯವನ್ನು ಪ್ರಥಮವಾಗಿಡುವಾಗ ನಮಗೆ ಸಿಗುವ ಪ್ರಯೋಜಗಳನ್ನು ಆಳವಾಗಿ ಗಣ್ಯಮಾಡುವಂತೆ ಸಾಧ್ಯಮಾಡಿದೆ. (ಮತ್ತಾಯ 6:33) ಯೆಹೋವನು ತನ್ನ ಜನರನ್ನು ಎಷ್ಟು ಉತ್ತಮವಾಗಿ ಪರಾಮರಿಸುತ್ತಾನೆ ಎಂಬುದನ್ನು ನಾವು ಪದೇ ಪದೇ ನೋಡಿದ್ದೇವೆ.

ಫ್ರ್ಯಾಂಕ್‌: ನಾನು ಬ್ಯಾಟನ್‌ ರೂಸ್‌ ಪರಿಹಾರ ಕೇಂದ್ರದಲ್ಲಿ ಊಟದ ವ್ಯವಸ್ಥೆಯ ಮೇಲ್ವಿಚಾರ ಮಾಡುತ್ತೇನೆ. ಆರಂಭದಲ್ಲಿ ಅಷ್ಟು ಮಂದಿ ಸ್ವಯಂ ಸೇವಕರಿಗೆ ಆಹಾರ ಪೂರೈಕೆಯನ್ನು ಮಾಡಲು ದಿನಕ್ಕೆ 10-12 ತಾಸುಗಳಂತೆ ವಾರದ ಏಳೂ ದಿನ ಕೆಲಸಮಾಡಲಿಕ್ಕಿತ್ತು. ಆದರೆ ಸಿಕ್ಕಿದ ಆಶೀರ್ವಾದಗಳೋ ಅನೇಕ. ಇದರಲ್ಲಿ ಕ್ರೈಸ್ತ ಪ್ರೀತಿಯ ಶಕ್ತಿಯನ್ನು ಕಣ್ಣಾರೆ ಕಾಣುವದೂ ಸೇರಿತ್ತು.

ಊಟವನ್ನು ಒದಗಿಸುವ ಸೇವೆಯಲ್ಲಿ ಒಂದೆರಡು ವಾರ ಸಹಾಯ ನೀಡಿದ ಸ್ವಯಂ-ಸೇವಕರಲ್ಲಿ ಅನೇಕರನ್ನು ಪುನಃ ಬರುವಂತೆ ಕೇಳಿಕೊಳ್ಳಲಾಯಿತು. ಕೆಲವರು ಈ ಸದವಕಾಶಕ್ಕಾಗಿ ಪತ್ರ ಮತ್ತು ಫೋನ್‌ ಮೂಲಕ ಹಾರ್ದಿಕ ಕೃತಜ್ಞತೆ ವ್ಯಕ್ತಪಡಿಸಿದರು. ನನ್ನ ಪತ್ನಿ ವೆರಾನಿಕ ಮತ್ತು ನಾನು ಅವರ ಸ್ವತ್ಯಾಗದ ಮನೋಭಾವದಿಂದ ನಿಜವಾಗಿಯೂ ಹೃದಯಸ್ಪರ್ಶಿತರು.

“ಪುಳಕಿತಗೊಂಡನು”

ಗ್ರೆಗರಿ: ನನ್ನ ಪತ್ನಿ ಕ್ಯಾಥೀ ಮತ್ತು ನಾನು ನೆವಾಡ ಪ್ರಾಂತ್ಯದ ಲಾಸ್‌ ವೇಗಸ್‌ನಲ್ಲಿದ್ದ ನಮ್ಮ ಮನೆಯನ್ನು ಮಾರಿ ಒಂದು ಚಿಕ್ಕ ಟ್ರಕ್‌ ಹಾಗೂ ಮೋಟಾರುಮನೆಯನ್ನು ಖರೀದಿಸಿದೆವು. ಈಗ ಇದೇ ನಮ್ಮ ಮನೆ. ನಮ್ಮ ಜೀವನವನ್ನು ಸರಳಗೊಳಿಸಿದ್ದರಿಂದ ಎರಡು ವರುಷಕ್ಕಿಂತ ಹೆಚ್ಚು ಸಮಯ ಲೂಯ್ಸಿಯಾನದ ಪರಿಹಾರಕಾರ್ಯದಲ್ಲಿ ಭಾಗವಹಿಸಲು ಸಾಧ್ಯವಾಯಿತು. ನಾವು ನಮ್ಮ ಜೀವನದ ಮೊತ್ತಮೊದಲ ಬಾರಿ ಬೈಬಲಿನ ಮಲಾಕಿಯ 3:10ರ ಈ ಮಾತುಗಳ ಸತ್ಯವನ್ನು ಇನ್ನೂ ಹೆಚ್ಚಾಗಿ ಅನುಭವಿಸುತ್ತಿದ್ದೇವೆ: “ನಾನು ಪರಲೋಕದ ದ್ವಾರಗಳನ್ನು ತೆರೆದು ನಿಮ್ಮಲ್ಲಿ ಸ್ಥಳಹಿಡಿಯಲಾಗದಷ್ಟು ಸುವರವನ್ನು ಸುರಿಯುವೆನೋ ಇಲ್ಲವೋ ನನ್ನನ್ನು ಹೀಗೆ ಪರೀಕ್ಷಿಸಿರಿ; ಇದು ಸೇನಾಧೀಶ್ವರ ಯೆಹೋವನ ನುಡಿ.”

“ನಿಮ್ಮದು ಎಂಥ ದೊಡ್ಡ ತ್ಯಾಗ!” ಎಂದು ಜನರು ನಮಗೆ ಹೇಳುವಾಗ ನಾವು ನಸುನಗುತ್ತೇವೆ. ಮೂವತ್ತು ವರುಷಗಳ ಹಿಂದೆ ನಾವು ಅಮೆರಿಕದ ನಮ್ಮ ಬ್ರಾಂಚ್‌ ಆಫೀಸಿನಲ್ಲಿ ಸೇವೆಮಾಡಲು ಬಯಸಿದ್ದೆವು. ಆದರೆ ಮಕ್ಕಳನ್ನು ಬೆಳೆಸುವ ಜವಾಬ್ದಾರಿ ನಮಗಿತ್ತು. ಈ ಪರಿಹಾರ ಕಾರ್ಯ ದೇವರ ಸೇವೆಯನ್ನು ಅಧಿಕಗೊಳಿಸುವ ನಮ್ಮ ಅಪೇಕ್ಷೆಯನ್ನು ತೃಪ್ತಿಗೊಳಿಸಿದೆ. ಕುಶಲಕರ್ಮಿಗಳಾದ ಕೆಲವು ಸಹೋದರರು ಸೇರಿರುವ ಜೊತೆಸಾಕ್ಷಿಗಳೊಂದಿಗೆ ಕೂಡಿ ಕೆಲಸ ಮಾಡುವುದೂ ನಮಗೆ ಸಿಕ್ಕಿದ ಇನ್ನೊಂದು ಸುಯೋಗ. ದೃಷ್ಟಾಂತಕ್ಕೆ, ನಮ್ಮ ಅಡುಗೆಯವರಲ್ಲಿ ಒಬ್ಬನು ಒಂದು ದೊಡ್ಡ ಹೊಟೇಲಿನಲ್ಲಿ ಮುಖ್ಯ ಬಾಣಸಿಗನೂ ಇನ್ನೊಬ್ಬನು ಅಮೆರಿಕದ ಇಬ್ಬರು ಅಧ್ಯಕ್ಷರ ಅಡುಗೆಯವನೂ ಆಗಿದ್ದನು.

ಅನೇಕ ಮಂದಿ ಸ್ವಯಂ ಸೇವಕರಿಗೆ ಈ ವಿಪತ್ತು ಪರಿಹಾರ ಕಾರ್ಯವು ಜೀವನಕ್ಕೆ ತಿರುವು ನೀಡಿತು. ಬಿರುಗಾಳಿಪೀಡಿತರ ಮಧ್ಯೆ ಮಾಡಿದ ತನ್ನ ಕೆಲಸವನ್ನು ವಿವರಿಸುವಾಗ 57 ವಯಸ್ಸಿನ ಒಬ್ಬ ಸಾಕ್ಷಿಯು ಅತ್ಯಂತ ಪುಳಕಿತಗೊಂಡನು. ಅಲ್ಲಿಗೆ ಬರಲು ಸಾಧ್ಯವಾಗದಿದ್ದ ಕೆಲವು ಸಾಕ್ಷಿಗಳು ಸಹ ಉತ್ತೇಜನದ ಚಿಲುಮೆಯಾಗಿದ್ದರು. ದೃಷ್ಟಾಂತಕ್ಕೆ, ಕಟ್ಟಡಗಳಿಂದ ಬೂಷ್ಟು ತೆಗೆಯುವ ಕೆಲಸದ ಇಬ್ಬರು ಸ್ವಯಂಸೇವಕರು ತಾವಿರುವ ನೆಬ್ರಾಸ್ಕ ಪ್ರಾಂತ್ಯದ ಮೂರು ಸಭೆಗಳಲ್ಲಿ ಪ್ರತಿಯೊಬ್ಬರೂ ಸಹಿ ಹಾಕಿದ ಒಂದು ದೊಡ್ಡ ಬ್ಯಾನರನ್ನು ನಮಗೆ ಕೊಟ್ಟರು. ಅದರಲ್ಲಿ ಮಕ್ಕಳ ಸಹಿಗಳೂ ಇದ್ದವು.

‘ಕಷ್ಟದಲ್ಲಿರುವವರನ್ನು ದೇವರು ಪರಾಮರಿಸುವುದನ್ನು ಕಣ್ಣಾರೆ ಕಂಡೆವು’

ವೆಂಡಲ್‌: ಕಟ್ರೀನ ಅಪ್ಪಳಿಸಿದ ಮರುದಿನ ಅಮೆರಿಕದ ಬ್ರಾಂಚ್‌ ಆಫೀಸ್‌ ನನಗೆ ಲೂಯ್ಸಿಯಾನ ಮತ್ತು ಮಿಸಿಸಿಪಿಗೆ ಹೋಗುವಂತೆ ಕೇಳಿಕೊಂಡಿತು. ಯಾಕೆಂದರೆ ಅಲ್ಲಿ ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹಗಳಿಗೂ ಮನೆಗಳಿಗೂ ಎಷ್ಟು ಹಾನಿಯಾಗಿದೆಯೆಂದು ನಾನು ಪರಿಶೀಲಿಸಿ ನೋಡಬೇಕಿತ್ತು. ಹೀಗೆ ಅನುಭವದಿಂದ ಕಲಿಯುವ ನನ್ನ ನೇಮಕ ಆರಂಭಗೊಂಡಿತು. ರಾಜ್ಯ ಘೋಷಕರ ಹೆಚ್ಚು ಅಗತ್ಯವಿರುವ ಪ್ರದೇಶದಲ್ಲಿ 32 ವರ್ಷಕಾಲ ಜೀವಿಸಿರುವ ನಾನು ಮತ್ತು ನನ್ನ ಪತ್ನಿ ಜನೀನ್‌ ಯೆಹೋವನು ತನ್ನ ಜನರನ್ನು ಪರಾಮರಿಸುವುದನ್ನು ಕಣ್ಣಾರೆ ಕಂಡೆವು. ಆದರೆ ಈಗ ಮತ್ತಷ್ಟು ಅಧಿಕ ಪ್ರಮಾಣದಲ್ಲಿ ದೇವರ ಪರಾಮರಿಕೆಯನ್ನು ನೋಡುತ್ತಿದ್ದೇವೆ.

ನನಗೆ ಈಗ ಬ್ಯಾಟನ್‌ ರೂಸ್‌ ವಿಪತ್ತು ಪರಿಹಾರ ಕಮಿಟಿಯ ಅಧ್ಯಕ್ಷನಾಗಿ ಸೇವೆಮಾಡುವ ಸದವಕಾಶ ದೊರೆತಿದೆ. ಈ ನೇಮಕ ಕಷ್ಟಕರವಾಗಿದ್ದರೂ ನನಗೆ ಅಪಾರ ತೃಪ್ತಿ ಸಿಕ್ಕಿದೆ. ಹೌದು, ಈ ಪರಿಹಾರ ಕಾರ್ಯದಲ್ಲಿ ನೂರಾರು ಸಲ ನಾವು ದೇವರು ಸಮಸ್ಯೆಗಳನ್ನು ಪರಿಹರಿಸುವುದನ್ನೂ ಸಹಾಯದ ಅವಕಾಶಗಳನ್ನು ತೆರೆಯುವುದನ್ನೂ ಕಂಡೆವು. ಈ ರೀತಿಯಲ್ಲಿ ಕಷ್ಟಾನುಭವಿಗಳ ಪರಾಮರಿಕೆಯನ್ನು ಪ್ರೀತಿಪರ ಸರ್ವಶಕ್ತ ತಂದೆಯು ಮಾತ್ರ ಮಾಡಶಕ್ತನೆಂದು ನಾವು ನೋಡಿದ್ದೇವೆ.

“ಪರಿಹಾರ ಕಾರ್ಯದಲ್ಲಿ ನೀವೂ ನಿಮ್ಮ ಪತ್ನಿಯೂ ಎರಡು ವರುಷಗಳಿಗಿಂತ ಹೆಚ್ಚು ಸಮಯದಿಂದ ಪಾಲ್ಗೊಳ್ಳುತ್ತಾ ಇರಲು ಹೇಗೆ ಸಾಧ್ಯವಾಗಿದೆ?” ಎಂದು ಅನೇಕರು ಕೇಳಿರುತ್ತಾರೆ. ಇದು ಸದಾ ಸುಲಭವಾಗಿರಲಿಲ್ಲ. ನಮ್ಮ ಜೀವನದಲ್ಲಿ ನಾವು ಅನೇಕಾನೇಕ ಹೊಂದಾಣಿಕೆಗಳನ್ನು ಮಾಡಬೇಕಾಗಿತ್ತು. ಆದರೆ ನಿಜವಾಗಿ ‘ಸರಳವಾದ ಕಣ್ಣನ್ನು’ ಇಡುವುದರಿಂದ ದೊರೆಯುವ ಪ್ರಯೋಜನಗಳನ್ನು ನಾವು ನೋಡಿದ್ದೇವೆ.​—⁠ಮತ್ತಾಯ 6:⁠22.

ನ್ಯೂ ಆರ್ಲೀಅನ್ಸ್‌ನಲ್ಲಿ ನಾಪತ್ತೆಯಾದವರನ್ನು ಹುಡುಕಿ ರಕ್ಷಿಸುವ ಕಾರ್ಯದಲ್ಲಿ ಮೊದಲು ತೊಡಗಿದ್ದಾಗ ನಮಗೆ ವಿಶ್ರಾಂತಿಯೇ ಇರಲಿಲ್ಲ. ದಾರಿಯಲ್ಲಿ ನಡೆಯುತ್ತಿದ್ದ ಗಲಾಟೆ ಮತ್ತು ಸಿಕ್ಕಾಪಟ್ಟೆಯ ಕ್ರೂರ ಕೃತ್ಯಗಳ ಕಾರಣ ನಗರದಲ್ಲಿ ಜಾರಿಯಲ್ಲಿದ್ದ ಸೈನಿಕ ಶಾಸನವು ನಮ್ಮ ಪರಿಸ್ಥಿತಿಯನ್ನು ಇನ್ನಷ್ಟು ಜಟಿಲಗೊಳಿಸಿತು. ನಮ್ಮ ಮುಂದಿದ್ದ ಭಾರೀ ಪ್ರಮಾಣದ ಕೆಲಸದ ಕಾರಣ ನಾವು ಸುಲಭವಾಗಿಯೇ ಸ್ಥೈರ್ಯವನ್ನು ಕಳೆದುಕೊಳ್ಳಬಹುದಿತ್ತು.

ಮನೆಮಾರುಗಳನ್ನು ಕಳಕೊಂಡ ಸಾವಿರಾರು ಮಂದಿ ಸಾಕ್ಷಿಗಳನ್ನು ನಾವು ಭೇಟಿಯಾದೆವು. ಅವರೊಂದಿಗೆ ಪ್ರಾರ್ಥಿಸಿ ಸಾಂತ್ವನ ನೀಡಲು ಪ್ರಯತ್ನಿಸಿದೆವು. ಆ ಬಳಿಕ ಯೆಹೋವನ ಸಹಾಯದಿಂದ ನಮ್ಮ ಕೆಲಸದಲ್ಲಿ ತೊಡಗಿದೆವು. ಈ ಎಲ್ಲ ಅನುಭವಗಳ ಕಾರಣ, ನಾನು ಅಲ್ಲಿದ್ದ ಈ ಎರಡು ವರುಷಗಳಲ್ಲಿ ಎರಡು ಜೀವಮಾನಗಳನ್ನೇ ಕಳೆದಿರುವಂತೆ ಆಗಿದೆ.

ಅನೇಕಾವರ್ತಿ ನಾನು ದೈಹಿಕವಾಗಿಯೂ ಭಾವನಾತ್ಮಕವಾಗಿಯೂ ಕೆಲಸ ಮಾಡಲಾಗದಷ್ಟು ದಣಿದಿದ್ದೇನೆಂದು ನೆನಸಿದಾಗಲೇ ಹೊಸ ಹೊಸ ಸ್ವಯಂ ಸೇವಕರ ತಂಡಗಳೇ ಬರುತ್ತಿದ್ದವು. ಅವರಲ್ಲಿ ಕೆಲವರು ಕೆಲವು ತಿಂಗಳುಗಳಿಗಾಗಿ ಮತ್ತು ಇನ್ನಿತರರು ತುಂಬಾ ಸಮಯಕ್ಕಾಗಿ. ಯುವಕರೂ ಸೇರಿರುವ ಇಷ್ಟು ಹೆಚ್ಚು ಜನರು ಹರ್ಷಿತರೂ ಸಿದ್ಧಮನಸ್ಕರೂ ಆಗಿ ಕೆಲಸಮಾಡುವುದನ್ನು ನೋಡಿ ನಾವು ನವಚೈತನ್ಯವನ್ನು ಪಡೆದೆವು.

ಯೆಹೋವನು ಪದೇಪದೇ ನಮ್ಮ ನೆರವಿಗೆ ಬಂದನು. ಉದಾಹರಣೆಗೆ, ನಾವು ಬಂದ ಮೊದಲಲ್ಲಿ, ನಮ್ಮ ಸಹೋದರರ 1,000ಕ್ಕೂ ಹೆಚ್ಚು ಮನೆಗಳ ಮೇಲೆ ಮರಗಳು ಬಿದ್ದಿರುವುದನ್ನು ಕಂಡೆವು. ಆದರೆ ಮರಗಳನ್ನು ಎತ್ತಿ ತೆಗೆಯುವ ಅಪಾಯಕರವಾದ ಕೆಲಸಕ್ಕೆ ನಮ್ಮಲ್ಲಿ ಯಂತ್ರ ಸಾಧನಗಳೂ ಕೆಲಸಗಾರರೂ ಇದ್ದಿರದ ಕಾರಣ ನಮ್ಮ ಕಮಿಟಿ ಅದಕ್ಕಾಗಿ ಪ್ರಾರ್ಥಿಸಿತು. ಮರುದಿನವೇ ಒಬ್ಬ ಸಹೋದರನು ನಮಗೆ ಬೇಕಾಗಿದ್ದ ಸಲಕರಣೆಗಳನ್ನೇ ಲಾರಿಯಲ್ಲಿ ತೆಗೆದುಕೊಂಡು ಬಂದು ನಮಗೆ ನೆರವಾದನು. ಇನ್ನೊಂದು ಸಂದರ್ಭದಲ್ಲಿ ಕೇವಲ ಹದಿನೈದೇ ನಿಮಿಷಗಳಲ್ಲಿ ಪ್ರಾರ್ಥನೆಗೆ ಉತ್ತರ ದೊರೆಯಿತು. ಮತ್ತೊಮ್ಮೆ, ನಾವು ಪ್ರಾರ್ಥಿಸಿ ‘ಆಮೆನ್‌’ ಎಂದು ಹೇಳುವುದಕ್ಕೆ ಮುಂಚೆಯೇ ಬೇಕಾದ ಸಲಕರಣೆಯು ನಮ್ಮಲ್ಲಿಗೆ ಬಂತು! ಹೌದು, ಯೆಹೋವನು “ಪ್ರಾರ್ಥನೆಯನ್ನು ಕೇಳುವ” ದೇವರು ಎಂಬುದು ನಿಶ್ಚಯ.​—⁠ಕೀರ್ತನೆ 65:⁠2.

“ಯೆಹೋವನ ಸಾಕ್ಷಿಯಾಗಿರಲು ನನಗೆ ಹೆಮ್ಮೆಯೆನಿಸುತ್ತದೆ”

ಮಾಥ್ಯೂ: ಕಟ್ರೀನ ಅಪ್ಪಳಿಸಿದ ಮರುದಿನ, ವಿಪತ್ತಿಗೀಡಾದ ಆ ಕ್ಷೇತ್ರದ ಜನರಿಗೆ ಸಹಾಯವಾಗಿ ಕೊಡಲ್ಪಟ್ಟ 15 ಟನ್‌ ಆಹಾರ, ನೀರು ಮತ್ತು ಇತರ ಅಗತ್ಯ ವಸ್ತುಗಳನ್ನು ವಿತರಿಸುವುದರಲ್ಲಿ ನಾನು ನೆರವು ನೀಡಿದೆ. ಯೆಹೋವನ ಜನರು ತಮ್ಮ ಔದಾರ್ಯವನ್ನು ತೋರಿಸಿಕೊಟ್ಟರೆಂಬುದು ನಿಶ್ಚಯ!

ನಮ್ಮ ಪ್ರಯತ್ನ ಹೆಚ್ಚು ಕಾರ್ಯಸಾಧಕವಾಗುವ ಉದ್ದೇಶದಿಂದ ನನ್ನ ಪತ್ನಿ ಡಾರ್ಲೀನ್‌ ಮತ್ತು ನಾನು ಈ ಬಾಧಿತ ಕ್ಷೇತ್ರದಿಂದ ಎರಡು ತಾಸು ಪ್ರಯಾಣದಷ್ಟು ದೂರದ ಸ್ಥಳದಲ್ಲಿ ಬಂದು ತಂಗಿದೆವು. ನಮ್ಮ ಹೆಚ್ಚಿನ ಸಮಯವನ್ನು ಪರಿಹಾರ ಕಾರ್ಯದಲ್ಲಿ ವ್ಯಯಿಸಲು ಸಾಧ್ಯವಾಗುವಂತೆ ಸ್ಥಳಿಕ ಸಹೋದರನೊಬ್ಬನು ನಮಗೆ ಪಾರ್ಟ್‌ಟೈಮ್‌ ಕೆಲಸ ಕೊಟ್ಟನು. ಇನ್ನೊಬ್ಬ ಸಹೋದರನು ನಮಗೆ ವಸತಿಯನ್ನು ಒದಗಿಸಿದನು. ಇಂಥ ಪ್ರೀತಿಯ ಸಹೋದರತ್ವದ ಭಾಗವಾಗಿರುವುದು ನನ್ನ ಹೃದಯವನ್ನು ಕೃತಜ್ಞತೆಯಿಂದ ತುಂಬಿಸುತ್ತದೆ. ಯೆಹೋವನ ಸಾಕ್ಷಿಯಾಗಿರಲು ನನಗೆ ಹೆಮ್ಮೆಯೆನಿಸುತ್ತದೆ.

ಟೆಡ್‌: ಕಟ್ರೀನ ಬಿರುಗಾಳಿ ಹೊಡೆತದ ಸ್ವಲ್ಪದರಲ್ಲಿ, ನನ್ನ ಪತ್ನಿ ಡೆಬಿ ಮತ್ತು ನಾನು ಪರಿಹಾರ ಕಾರ್ಯದಲ್ಲಿ ಸಹಾಯ ನೀಡಲು ಮುಂದೆ ಬಂದೆವು. ನಮಗೆ ಕೆಲವೇ ದಿನಗಳೊಳಗೆ ನಮ್ಮ ಟ್ರಕ್‌ ಎಳೆಯಸಾಧ್ಯವಿರುವಷ್ಟು ಹಗುರವಾಗಿದ್ದ 9 ಮೀಟರ್‌ ಉದ್ದದ ಸೆಕೆಂಡ್‌ಹ್ಯಾಂಡ್‌ ಟ್ರೇಲರ್‌ ಅರ್ಧಬೆಲೆಗೆ ಸಿಕ್ಕಿತು. ನಮ್ಮಲ್ಲಿದ್ದ ಹಣವೂ ಅಷ್ಟೇ. ಮಾತ್ರವಲ್ಲ ನಮ್ಮ ಪ್ರಾರ್ಥನೆಗೆ ಉತ್ತರವೂ ಅದಾಗಿತ್ತು. ಈಗ ಎರಡು ವರ್ಷಗಳಿಂದ ಆ ಟ್ರೇಲರೇ ನಮ್ಮ ಮನೆಯಾಗಿದೆ.

ಕೆಲಸದ ಒಂದು ಬಿಡುಸಮಯದಲ್ಲಿ ನಾವು ನಮ್ಮ ಮನೆಯನ್ನೂ ಹೆಚ್ಚಿನ ಸ್ವತ್ತುಗಳನ್ನೂ ಮಾರಿದೆವು. ಇದು ನಮಗೆ ನ್ಯೂ ಆರ್ಲಿಅನ್ಸ್‌ನಲ್ಲಿ ಹೆಚ್ಚಿನ ಕೆಲಸಕ್ಕೆ ಅವಕಾಶ ಮಾಡಿಕೊಟ್ಟಿತು. ನಾನು ಅಲ್ಲಿ ಪ್ರಾಜೆಕ್ಟ್‌ ಕೊಆರ್ಡಿನೇಟರ್‌ ಆಗಿ ಸೇವೆ ಮಾಡುತ್ತಿದ್ದೇನೆ. ಯೆಹೋವನು ತನ್ನ ಆರಾಧಕರಿಗೆ ಹೇಗೆ ‘ಸಕಲ ವಿಧವಾಗಿ ಸಂತೈಸುವ ದೇವರಾಗಿದ್ದಾನೆಂದು’ ನೋಡುವುದು ನಮ್ಮನ್ನು ಬೆರಗಾಗಿಸಿದ ಅನುಭವ. ಅನೇಕರು ತಮ್ಮ ಮನೆ ಮತ್ತು ರಾಜ್ಯ ಸಭಾಗೃಹಗಳನ್ನು ಕಳೆದುಕೊಂಡರು. ಮಾತ್ರವಲ್ಲ, ತೆರವು ಮಾಡಿಸಿದ ಕಾರಣ ತಮ್ಮ ಸಭೆಗಳನ್ನೂ ತಾವು ಸುವಾರ್ತೆ ಸಾರಿದ್ದ ಪೂರ್ತಿ ಟೆರಿಟೊರಿಯನ್ನೂ ಕಳಕೊಂಡರು.​—⁠2 ಕೊರಿಂಥ 1:⁠3.

“ಅವರಿಗಿದ್ದ ನಂಬಿಕೆ . . . ನಮ್ಮ ಹೃದಯವನ್ನು ಸ್ಪರ್ಶಿಸಿತು”

ಜಸ್ಟಿನ್‌: ಅಕ್ಟೋಬರ್‌ 2005ರಲ್ಲಿ, ಗಲ್ಫ್‌ ಕೋಸ್ಟ್‌ನ ವಿಪತ್ತು ಪರಿಹಾರ ಪ್ರದೇಶದಲ್ಲಿ ಸಹಾಯ ಮಾಡಲು ಸ್ವಯಂ ಸೇವಕರಿಗಾಗಿ ಕರೆಹೋಯಿತು. ಆ ಕೂಡಲೇ ನನ್ನ ಪತ್ನಿ ಟಿಫನಿ ಮತ್ತು ನಾನು ಅರ್ಜಿ ಹಾಕಿದೆವು. ಫೆಬ್ರವರಿ 2006ರಲ್ಲಿ, ನ್ಯೂ ಆರ್ಲಿಅನ್ಸ್‌ನ ಕೆನರ್‌ ವಿಪತ್ತು ಪರಿಹಾರ ಕೇಂದ್ರದಲ್ಲಿ ಮೇಲ್ಚಾವಣಿಯ ಕೆಲಸಮಾಡುವಂತೆ ನಮಗೆ ಕರೆ ಬಂತು.

ನಾವು ಪ್ರತಿದಿನ ಒಂದೊಂದು ಮನೆಯನ್ನು ದುರಸ್ತು ಮಾಡಿ ಸ್ಥಳಿಕ ಸಹೋದರರನ್ನು ಭೇಟಿಮಾಡುತ್ತಿದ್ದೆವು. ದೇವರಲ್ಲಿ ಅವರಿಗಿದ್ದ ನಂಬಿಕೆ ಮತ್ತು ಭರವಸೆ ನಮ್ಮ ಹೃದಯವನ್ನು ಸ್ಪರ್ಶಿಸಿತು. ಪ್ರಾಪಂಚಿಕ ವಸ್ತುಗಳ ಮೇಲೆ ಭರವಸೆಯಿಡುವುದು ಎಷ್ಟು ಅವಿವೇಕತನವೆಂದು ನಮಗೆ ದಿನದಿನವೂ ಬಲವಾದ ಮರುಜ್ಞಾಪನ ದೊರೆಯಿತು. ಇಂಥ ಭಾರೀ ಕೆಲಸವನ್ನು ಮಾಡಲು ಹಾಗೂ ತಮ್ಮ ಜೊತೆ ಕ್ರೈಸ್ತರಿಗೆ ಸಹಾಯ ಕೊಡಲು ಯೆಹೋವನು ತನ್ನ ಜನರು ಶಕ್ತರನ್ನಾಗಿ ಮಾಡಿರುವುದನ್ನು ನೋಡುವಾಗ ಸಿಗುವ ಸಂತೋಷವನ್ನು ಮಾತುಗಳಿಂದ ವರ್ಣಿಸಲು ಸಾಧ್ಯವಿಲ್ಲ.” (g 8/08)

[ಪುಟ 20ರಲ್ಲಿರುವ ಚೌಕ/ಚಿತ್ರ]

ಪರಿಹಾರ ಕೇಂದ್ರದಲ್ಲಿ ಒಂದು ದಿನ

ವಿಪತ್ತು ಪರಿಹಾರ ಕೇಂದ್ರದ ಅಡುಗೆಮನೆಯಲ್ಲಿ ಬೆಳಿಗ್ಗೆ 4:30ಕ್ಕೆ ಕೆಲಸ ಆರಂಭ. ಉಪಹಾರಕ್ಕೆ ಮೊದಲು ಬೆಳಿಗ್ಗೆ 7 ಗಂಟೆಗೆ ಕೆಲಸಗಾರರ ಇಡೀ ಗುಂಪು ಹತ್ತು ನಿಮಿಷಗಳ ಬೈಬಲ್‌ ವಚನದ ಚರ್ಚೆಗಾಗಿ ಭೋಜನಶಾಲೆಯಲ್ಲಿ ಕೂಡಿಬರುತ್ತದೆ. ಈ ಸಂದರ್ಭವನ್ನು ಅಧ್ಯಕ್ಷನು ಹೊಸಬರನ್ನು ಸ್ವಾಗತಿಸಲು ಹಾಗೂ ಒಂದು ಉತ್ತೇಜಕವಾದ ಹೊಸ ಅನುಭವವನ್ನು ಹೇಳಲೂ ಬಳಸಬಹುದು.

ಕೃತಜ್ಞತಾ ಪ್ರಾರ್ಥನೆಯ ಬಳಿಕ ಎಲ್ಲರೂ ಪೌಷ್ಟಿಕ ಉಪಹಾರ ಮಾಡಿ ತಮ್ಮ ತಮ್ಮ ಕೆಲಸಕ್ಕೆ ಹೋಗುತ್ತಾರೆ. ಕೆಲವರು ಪರಿಹಾರ ಕೇಂದ್ರದಲ್ಲಿಯೇ ಉಳಿದು ಆಫೀಸ್‌ನಲ್ಲೊ ಲಾಂಡ್ರಿಯಲ್ಲೊ ಅಡುಗೆಮನೆಯಲ್ಲೊ ಕೆಲಸ ಮಾಡುತ್ತಾರೆ. ದೂರದಲ್ಲಿ ಕೆಲಸಮಾಡುವವರಿಗಾಗಿ ಆಯಾ ತಂಡದ ಒಬ್ಬನು ಮಧ್ಯಾಹ್ನದೂಟವನ್ನು ಒಯ್ಯಲಿಕ್ಕಾಗಿ ಬಾಣಸಿಗರು ಲಂಚ್‌ ಪ್ಯಾಕೆಟ್‌ಗಳನ್ನು ಸಿದ್ಧಪಡಿಸುತ್ತಾರೆ.

ಪ್ರತಿ ಸೋಮವಾರ ರಾತ್ರಿ ಸ್ವಯಂಸೇವಕರು ಇಡೀ ಗುಂಪಾಗಿ ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾದ ಕಾವಲಿನಬುರುಜು ಪತ್ರಿಕೆಯ ಒಂದು ಲೇಖನದ ಆಧಾರದಲ್ಲಿ ಬೈಬಲ್‌ ಅಧ್ಯಯನ ಮಾಡಲು ಕೂಡಿಬರುತ್ತಾರೆ. ಇಂಥ ಅಧ್ಯಯನಗಳು ಎಲ್ಲರನ್ನೂ ಆಧ್ಯಾತ್ಮಿಕವಾಗಿ ಬಲಪಡಿಸುತ್ತವೆ. ಒಬ್ಬನು ಸಂತೋಷದಿಂದ ತಾಳಿಕೊಳ್ಳುವಂತೆ ಮತ್ತು ತನ್ನ ಕೆಲಸದ ಬಗ್ಗೆ ಯೋಗ್ಯ ಮನೋಭಾವನ್ನಿಟ್ಟುಕೊಳ್ಳುವಂತೆ ಮಾಡುವ ರಹಸ್ಯ ಇದೇ ಆಗಿದೆ.​—⁠ಮತ್ತಾಯ 4:4; 5:⁠3.

[ಪುಟ 21ರಲ್ಲಿರುವ ಚೌಕ]

“ನಾನು ನಿಮ್ಮ ಬಗ್ಗೆ ತಪ್ಪು ತಿಳುಕೊಂಡಿದ್ದೆ”

ನ್ಯೂ ಆರ್ಲಿಅನ್ಸ್‌ನ ಒಬ್ಬಾಕೆ ಮಹಿಳೆಯ ಮನೆಬಾಗಿಲ ಮೇಲೆ “ಯೆಹೋವನ ಸಾಕ್ಷಿಗಳೇ​—⁠ಬಾಗಿಲು ತಟ್ಟಬೇಡಿ” ಎಂಬ ಫಲಕವಿತ್ತು. ಒಂದು ದಿನ ಆಕೆ ತನ್ನ ಮನೆಯ ಹತ್ತಿರ ಸ್ವಯಂ ಸೇವಕರ ತಂಡವೊಂದು ಬಿರುಗಾಳಿಯಿಂದ ಹಾನಿಗೊಂಡಿದ್ದ ಮನೆಯನ್ನು ದುರಸ್ತಿ ಮಾಡುತ್ತಿರುವುದನ್ನು ಕಂಡಳು. ಪ್ರತಿದಿನವೂ ಆ ಕೆಲಸಗಾರರ ಹಾರ್ದಿಕ ಆತ್ಮೀಯತೆಯನ್ನು ಗಮನಿಸಿದಳು. ಆಕೆ ಕುತೂಹಲದಿಂದ ಅಲ್ಲಿ ಏನು ನಡೆಯುತ್ತಿದೆಯೆಂದು ನೋಡಲು ಹೋದಳು. ಆ ಸ್ವಯಂಸೇವಕರು ಯೆಹೋವನ ಸಾಕ್ಷಿಗಳೆಂದು ಆಕೆಗೆ ತಿಳಿಯಿತು. ಬಿರುಗಾಳಿ ಬಡಿದ ಬಳಿಕ ತನ್ನ ಚರ್ಚಿನಿಂದ ಇಷ್ಟರ ವರೆಗೆ ಯಾರೂ ಫೋನ್‌ ಕೂಡ ಮಾಡಲಿಲ್ಲ ಎಂದು ಹೇಳುತ್ತಾ “ನಾನು ನಿಮ್ಮ ಬಗ್ಗೆ ತಪ್ಪು ತಿಳುಕೊಂಡಿದ್ದೆ” ಎಂದಳಾಕೆ. ಪರಿಣಾಮ? ಆಕೆಯ ಬಾಗಿಲಿನ ಮೇಲಿದ್ದ ಫಲಕ ಕೆಳಗಿಳಿಯಿತು ಮತ್ತು ಸಾಕ್ಷಿಗಳು ಭೇಟಿಯಾಗುವಂತೆ ಅವಳು ಕೇಳಿಕೊಂಡಳು.

[ಪುಟ 18, 19ರಲ್ಲಿರುವ ಚಿತ್ರ]

ರಾಬರ್ಟ್‌ ಮತ್ತು ವೆರಾನಿಕ

[ಪುಟ 18, 19ರಲ್ಲಿರುವ ಚಿತ್ರ]

ಫ್ರ್ಯಾಂಕ್‌ ಮತ್ತು ವೆರಾನಿಕ

[ಪುಟ 19ರಲ್ಲಿರುವ ಚಿತ್ರ]

ಗ್ರೆಗರಿ ಮತ್ತು ಕ್ಯಾಥೀ

[ಪುಟ 19ರಲ್ಲಿರುವ ಚಿತ್ರ]

ವೆಂಡಲ್‌ ಮತ್ತು ಜನೀನ್‌

[ಪುಟ 20ರಲ್ಲಿರುವ ಚಿತ್ರ]

ಮಾಥ್ಯೂ ಮತ್ತು ಡಾರ್ಲೀನ್‌

[ಪುಟ 20ರಲ್ಲಿರುವ ಚಿತ್ರ]

ಟೆಡ್‌ ಮತ್ತು ಡೆಬಿ

[ಪುಟ 20ರಲ್ಲಿರುವ ಚಿತ್ರ]

ಜಸ್ಟಿನ್‌ ಮತ್ತು ಟಿಫನಿ