ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭೂಗ್ರಹಕ್ಕೆ ವಿಪತ್ತು ಕಾದಿದೆಯೋ?

ಭೂಗ್ರಹಕ್ಕೆ ವಿಪತ್ತು ಕಾದಿದೆಯೋ?

ಭೂಗ್ರಹಕ್ಕೆ ವಿಪತ್ತು ಕಾದಿದೆಯೋ?

ಮಾನವಕುಲವು ಎದುರಿಸುತ್ತಿರುವ ಅತ್ಯಂತ ಮಹಾ ವಿಪತ್ತು ಭೂಮಿ ಬಿಸಿಯೇರುವಿಕೆಯೇ ಎಂದು ವರ್ಣಿಸಲಾಗಿದೆ. ಈ ಬಿಸಿಯೇರುವಿಕೆಯಿಂದಾಗಿ “ನಿಧಾನವಾಗಿ ಮುಂದರಿಯುವ, ಆದರೆ ತಡೆದು ನಿಲ್ಲಿಸಲಾಗದ ಬದಲಾವಣೆಗಳ ಪ್ರಪಾತವು ನಮ್ಮ ಮುಂದಿರುವುದೇ” ಸಂಶೋಧಕರನ್ನು ಚಿಂತೆಗೀಡುಮಾಡುತ್ತಿದೆ ಎಂದು ಸೈಅನ್ಸ್‌ ಪತ್ರಿಕೆಯು ಹೇಳುತ್ತದೆ. ಆದರೆ ಸಂದೇಹವಾದಿಗಳು ಈ ಹೇಳಿಕೆಯನ್ನು ನಿಜವೆಂದು ನಂಬುವುದಿಲ್ಲ. ಭೂಮಿಯ ತಾಪಮಾನವು ಹೆಚ್ಚುತ್ತಾ ಬರುತ್ತಿದೆಯೆಂದು ಅನೇಕರು ಒಪ್ಪುತ್ತಾರೆ ನಿಜ. ಆದರೆ ಅದಕ್ಕೆ ಕಾರಣವೇನು ಮತ್ತು ಅದರ ಪರಿಣಾಮಗಳು ಏನಾಗಲಿವೆ ಎಂದು ಅವರಿಗೆ ಗೊತ್ತಿಲ್ಲ. ಮಾನವರ ಚಟುವಟಿಕೆಗಳು ಅದಕ್ಕೆ ಒಂದು ಕಾರಣವಾಗಿರಬಹುದೆಂದು ಅವರು ಒಪ್ಪುತ್ತಾರಾದರೂ ಅದೇ ಮುಖ್ಯ ಕಾರಣವಾಗಬೇಕೆಂದಿಲ್ಲ ಎಂದವರ ಹೇಳಿಕೆ. ಈ ಭಿನ್ನಾಭಿಪ್ರಾಯಗಳೇಕೆ?

ಭೂಮಿಯ ಹವಾಮಾನವನ್ನು ಉಂಟುಮಾಡುವ ಭೌತಿಕ ಕಾರ್ಯವಿಧಾನಗಳು ಬಹುಜಟಿಲ, ಅವನ್ನು ನಾವಿನ್ನೂ ಸರಿಯಾಗಿ ತಿಳಿದಿಲ್ಲ. ಅದಲ್ಲದೆ, ತಾಪಮಾನಗಳು ಏರುತ್ತಿರುವ ಕಾರಣವನ್ನು ತೋರಿಸುವಂಥ ವೈಜ್ಞಾನಿಕ ವಿವರಗಳಿಗೆ ಪರಿಸರ ಪ್ರೇಮಿಗಳು ತಮ್ಮದೇ ಆದ ಅರ್ಥವನ್ನು ಕೊಡುತ್ತಿದ್ದಾರೆ.

ತಾಪಮಾನದ ಏರಿಕೆ—ನಿಜವೋ?

ವಿಶ್ವಸಂಸ್ಥೆಯಿಂದ ಪ್ರಾಯೋಜಿತವಾದ ‘ಹವಾಮಾನ ಬದಲಾವಣೆಯ ಕುರಿತ ಅಂತರಸರಕಾರಿ ಮಂಡಲಿ’ಯ (IPCC) ಇತ್ತೀಚಿನ ವರದಿಗೆ ಅನುಸಾರವಾಗಿ, ಭೂಮಿ ಬಿಸಿಯೇರುವಿಕೆಯು “ತಪ್ಪು ಗ್ರಹಿಕೆಯಲ್ಲ” ನಿಜವಾದ ವಾಸ್ತವಾಂಶ. ಅದಕ್ಕೆ ಅತಿಹೆಚ್ಚು ಕಾರಣ ಮಾನವರ ಚಟುವಟಿಕೆಗಳೇ ಎಂಬುದು “ಅತಿ ಸಂಭಾವ್ಯ.” ಮಾನವರೇ ಹೆಚ್ಚಿನಮಟ್ಟಿಗೆ ಕಾರಣರು ಎಂಬುದನ್ನು ಒಪ್ಪದ ಕೆಲವರು, ನಗರಗಳ ಗಾತ್ರವು ಬೆಳೆಯುತ್ತಿರುವುದೇ ತಾಪಮಾನದ ಏರಿಕೆಗೆ ಕಾರಣ ಎನ್ನುತ್ತಾರೆ. ಅದಲ್ಲದೆ, ಸಿಮೆಂಟು ಮತ್ತು ಉಕ್ಕು ಸೂರ್ಯನ ಶಾಖವನ್ನು ಸುಲಭವಾಗಿ ಹೀರಿಕೊಳ್ಳುತ್ತವೆ ಮತ್ತು ರಾತ್ರಿಯಲ್ಲಿ ನಿಧಾನವಾಗಿ ತಂಪಗಾಗುತ್ತವೆ. ಮಾತ್ರವಲ್ಲ ನಗರಗಳ ತಾಪಮಾನ ಅಂಕಿ​ಅಂಶಗಳು ಹಳ್ಳಿಗಳ ತಾಪಮಾನಕ್ಕೆ ಸಮಾನವಾಗಿರುವುದಿಲ್ಲ. ಆದ್ದರಿಂದ ಭೌಗೋಳಿಕ ತಾಪಮಾನದ ಅಂಕಿಅಂಶವನ್ನು ಇದು ತಪ್ಪಾಗಿ ಪ್ರತಿನಿಧಿಸಬಲ್ಲದು.

ಇನ್ನೊಂದು ಕಡೆ, ಅಲಾಸ್ಕ ಕರಾವಳಿಯಾಚೆ ಒಂದು ದ್ವೀಪದಲ್ಲಿ ವಾಸಿಸುವ ಹಳ್ಳಿಯ ಮುಖ್ಯಸ್ಥ ಕ್ಲಿಫರ್ಡ್‌ ಎಂಬವನು ತಾಪಮಾನದ ಬದಲಾವಣೆಗಳನ್ನು ತಾನು ಕಣ್ಣಾರೆ ಕಂಡಿದ್ದೇನೆ ಎನ್ನುತ್ತಾನೆ. ಅವನ ಹಳ್ಳಿಯ ಜನರು ಹಿಮಸಾರಂಗ ಅಥವಾ ಹೆಗ್ಗಡವೆಯ ಬೇಟೆಗಾಗಿ ಸಮುದ್ರದ ನೀರ್ಗಲ್ಲ ಮೇಲೆ ನಡೆದು ಮುಖ್ಯಭೂಮಿಗೆ ಹೋಗುತ್ತಾರೆ. ತಾಪಮಾನದ ಏರಿಕೆಗಳಾದರೋ ಈಗ ಅವರ ಸಾಂಪ್ರದಾಯಿಕ ಜೀವನಶೈಲಿಯನ್ನು ಅಸಾಧ್ಯಗೊಳಿಸುತ್ತವೆ. “ನೀರು-ಗಾಳಿಗಳ ಹರಿವುಗಳು ಬದಲಾಗಿವೆ, ನೀರ್ಗಲ್ಲುಗಳ ಸ್ಥಿತಿಗಳು ಮಾರ್ಪಟ್ಟಿವೆ, ಚೆಕ್‌ಚೇ ಸಾಗರದ ಹೆಪ್ಪುಗಟ್ಟುವಿಕೆಯಲ್ಲಿ . . . ವ್ಯತ್ಯಾಸವಾಗಿದೆ” ಎನ್ನುತ್ತಾನೆ ಕ್ಲಿಫರ್ಡ್‌. ಸಮುದ್ರವು ಮುಂಚೆ ಅಕ್ಟೋಬರ್‌ ತಿಂಗಳಿನ ಅಂತ್ಯದೊಳಗೆ ಸಂಪೂರ್ಣವಾಗಿ ಹೆಪ್ಪುಗಟ್ಟುತ್ತಿತ್ತು, ಆದರೆ ಈಗ ಡಿಸೆಂಬರ್‌ ಅಂತ್ಯದ ತನಕವೂ ಹೆಪ್ಪುಗಟ್ಟುವುದಿಲ್ಲ ಎಂದು ಅವನು ಹೇಳುತ್ತಾನೆ.

2007ರಲ್ಲಿ ಇತಿಹಾಸದ ದಾಖಲೆಯಲ್ಲೇ ಮೊತ್ತಮೊದಲಾಗಿ ಸಮುದ್ರಯಾನಕ್ಕೆ ಪೂರ್ಣವಾಗಿ ತೆರೆಯಲ್ಪಟ್ಟ ವಾಯುವ್ಯ ಹಡಗುಮಾರ್ಗದಲ್ಲಿ ಸಹ ತಾಪಮಾನದ ಏರಿಕೆಯು ತೋರಿಬಂದಿತ್ತು. “ಹಿಮಗಡ್ಡೆಗಳು ಕರಗಿಹೋಗುವ ಅಥವಾ ಹಿಮಗಡ್ಡೆಗಳೇ ಇರದ ಋತುಗಳು ಮುಂಚಿಗಿಂತ ದೀರ್ಘವಾಗುತ್ತಾ ಬರುವುದಕ್ಕೆ ನಾವು ಈ ವರ್ಷದಲ್ಲಿ ಕಂಡ ವಿಷಯಗಳು ಸಾಕ್ಷ್ಯವಾಗಿವೆ” ಎಂದು ಅಮೆರಿಕದ ನ್ಯಾಶನಲ್‌ ಸ್ನೋ ಎಂಡ್‌ ಐಸ್‌ ಡೇಟ ಸೆಂಟರ್‌ನ ಹಿರಿಯ ವಿಜ್ಞಾನಿಯೊಬ್ಬರು ಹೇಳಿದರು.

ಹಸಿರುಮನೆ ಪರಿಣಾಮ​—⁠ಜೀವಕ್ಕೆ ಅತ್ಯಾವಶ್ಯಕ

ಅಂಥ ಬದಲಾವಣೆಗಳಿಗೆ ಕೊಡಲಾದ ಒಂದು ಕಾರಣವು, ಸಾಮಾನ್ಯವಾಗಿ ಸಂಭವಿಸುವಂಥ ಜೀವನಾವಶ್ಯಕ ಹಸಿರುಮನೆ ಪರಿಣಾಮವೇ. ಸೂರ್ಯನ ಶಾಖವು ಭೂಮಿಯನ್ನು ತಲಪುವಾಗ ಅದರಲ್ಲಿ ಸುಮಾರು 70 ಪ್ರತಿಶತ ಶಾಖವು ಗಾಳಿ, ನೆಲ ಮತ್ತು ಸಮುದ್ರದಿಂದ ಹೀರಲ್ಪಡುತ್ತದೆ. ಈ ರೀತಿಯಾಗಿ ಶಾಖವು ಹೀರಲ್ಪಡದೆ ಇದ್ದಲ್ಲಿ, ಭೂಮಿಯ ತಾಪಮಾನವು ಸುಮಾರು -18 ಡಿಗ್ರಿ ಸೆಲ್ಸಿಯಸ್‌ ಕನಿಷ್ಠಮಾನಕ್ಕೆ ಇಳಿಯಬಲ್ಲದು. ಹೀರಲ್ಪಟ್ಟ ಈ ಶಾಖವು ಕೊನೆಗೆ ರಕ್ತವರ್ಣಾತೀತ ವಿಕಿರಣದ ರೂಪದಲ್ಲಿ ಹಿಂದೆ ಬಾಹ್ಯಾಕಾಶಕ್ಕೆ ಬಿಡಲ್ಪಡುತ್ತದೆ. ಹೀಗೆ ಭೂಮಿಯು ಅತಿಯಾಗಿ ಬಿಸಿಯೇರದಂತೆ ತಡೆಯುತ್ತದೆ. ಆದರೆ ಮಲಿನಕಾರಿಗಳು ವಾತಾವರಣದ ಘಟಕಗಳನ್ನು ಬದಲಾಯಿಸುವಾಗ ಬಾಹ್ಯಾಕಾಶಕ್ಕೆ ಬಿಡಲ್ಪಡುವ ಶಾಖದ ಪ್ರಮಾಣ ಕಡಿಮೆಯಾಗುತ್ತದೆ. ಇದು ಭೂಮಿಯ ತಾಪಮಾನದ ಏರಿಕೆಗೆ ಕಾರಣ.

ಹಸಿರುಮನೆ ಪರಿಣಾಮಕ್ಕೆ ಕಾರ್ಬನ್‌ ಡೈಆಕ್ಸೈಡ್‌, ನೈಟ್ರಸ್‌ ಆಕ್ಸೈಡ್‌, ಮೀಥೇನ್‌ ಅನಿಲಗಳು ಹಾಗೂ ನೀರಿನ ತೇವ ನೆರವಾಗುತ್ತವೆ. ಕಳೆದ 250 ವರ್ಷಗಳಲ್ಲಿ ಆಗಿರುವ ಕೈಗಾರಿಕಾ ಕ್ರಾಂತಿ ಹಾಗೂ ಪಳೆಯುಳಿಕೆಯ ಇಂಧನಗಳಾದ ಕಲ್ಲಿದ್ದಲು ಮತ್ತು ತೈಲದ ಅಧಿಕ ಬಳಸುವಿಕೆಯು ವಾತಾವರಣದಲ್ಲಿ ಹಸಿರುಮನೆ ಅನಿಲಗಳ ಪ್ರಮಾಣವನ್ನು ಗಮನಾರ್ಹವಾಗಿ ಹೆಚ್ಚಿಸಿದೆ. ಭೂಮಿಯು ಅಧಿಕ ಉಷ್ಣತೆಯನ್ನು ಉಳಿಸಿಕೊಳ್ಳಲು ಇನ್ನೊಂದು ಕಾರಣವು, ಪ್ರಾಣಿಸಂಗೋಪನೆಗಳ ಸಂಖ್ಯೆಯು ವೃದ್ಧಿಯಾಗುತ್ತಿರುವುದೇ ಆಗಿದೆ. ಹೇಗೆಂದರೆ ಅವುಗಳ ಜೀರ್ಣ ಪ್ರಕ್ರಿಯೆಯು ಮೀಥೇನ್‌ ಮತ್ತು ನೈಟ್ರಸ್‌ ಆಕ್ಸೈಡ್‌ಗಳನ್ನು ಉತ್ಪಾದಿಸುತ್ತದೆ. ಕೆಲವು ವಿಷಯಗಳು ಮಾನವರು ವಾತಾವರಣವನ್ನು ಪ್ರಭಾವಿಸುವ ಮೊದಲೇ ಭೂಮಿಯ ಉಷ್ಣತೆಯನ್ನು ಹೆಚ್ಚುಮಾಡಿವೆ ಎಂದೂ ಕೆಲವು ಸಂಶೋಧಕರು ತಿಳಿಸುತ್ತಾರೆ.

ಕೇವಲ ಇನ್ನೊಂದು ಏರುಪೇರೋ?

ಇತ್ತೀಚಿನ ತಾಪಮಾನ ಬದಲಾವಣೆಗಳಿಗೆ ಮಾನವರು ಕಾರಣರಲ್ಲ ಎಂಬುದನ್ನು ಬೆಂಬಲಿಸುವವರು, ಈ ಮುಂಚೆಯೂ ಭೂಮಿಯ ತಾಪಮಾನದಲ್ಲಿ ಗಮನಾರ್ಹ ಏರುಪೇರುಗಳಾಗಿವೆ ಎಂದು ಹೇಳುತ್ತಾರೆ. ಅವರು ಹಿಮಯುಗಕ್ಕೆ ಕೈತೋರಿಸುತ್ತಾ ಆಗ ಭೂಮಿಯು ಇಂದಿಗಿಂತ ಹೆಚ್ಚು ತಂಪಾಗಿತ್ತೆಂದು ಹೇಳುತ್ತಾರೆ. ಸ್ವಾಭಾವಿಕವಾಗಿ ಭೂಮಿ ಬಿಸಿಯಾಗುವುದಕ್ಕೆ ಆಧಾರವನ್ನು ಕೊಡುತ್ತಾ ಗ್ರೀನ್‌ಲ್ಯಾಂಡ್‌ನಂತಹ ಹಿಮಪ್ರದೇಶವನ್ನು ರುಜುವಾತಾಗಿ ತೋರಿಸಿ, ಸಾಮಾನ್ಯವಾಗಿ ಬೆಚ್ಚಗಿನ ಪ್ರದೇಶದಲ್ಲಿ ಕಂಡುಬರುವ ಸಸ್ಯಗಳು ಒಂದೊಮ್ಮೆ ಅಲ್ಲಿಯೂ ಬೆಳೆಯುತ್ತಿದ್ದವು ಎಂದು ಹೇಳುತ್ತಾರೆ. ಹಿಂದಿನ ಕಾಲದ ಹವಾಮಾನ ಹೇಗಿತ್ತೆಂದು ತಿಳಿಯಲು ಪ್ರಯತ್ನಿಸಿದರೂ ನಮಗೆ ಅದರ ಕುರಿತು ತಿಳಿಯುವುದು ಕೊಂಚವೇ ಎಂದು ವಿಜ್ಞಾನಿಗಳು ಒಪ್ಪುತ್ತಾರೆ.

ತಾಪಮಾನದ ಏರುಪೇರಿಗೆ ಮಾನವ ಚಟುವಟಿಕೆ ಕಾರಣವಾಗುವ ಮುಂಚೆ ಬೇರೆ ಏನಾದರೂ ಕಾರಣವಾಗಿದ್ದಿರಬಹುದೋ? ಸೂರ್ಯನ ಶಾಖದಲ್ಲಿನ ಏರುಪೇರಿಗೆ ಸಂಬಂಧಿಸಿದ ಸೌರಕಲೆಗಳು ಮತ್ತು ಸೌರಜ್ವಾಲೆಗಳು ಇದಕ್ಕೆ ಸಂಭಾವ್ಯ ಕಾರಣವಾಗಿರಬಹುದು. ಅದಲ್ಲದೆ, ಭೂಕಕ್ಷೆಯು ಆವರ್ತಿಸುತ್ತಾ ಇರಲು ಅನೇಕ ಸಾವಿರ ವರ್ಷಗಳು ತಗಲುತ್ತವೆ ಮತ್ತು ಅದು ಸೂರ್ಯನಿಂದ ನಮ್ಮ ಭೂಗ್ರಹಕ್ಕಿರುವ ಅಂತರವನ್ನು ಪ್ರಭಾವಿಸುತ್ತದೆ. ಜ್ವಾಲಾಮುಖಿಯ ಧೂಳಿನಿಂದಾಗಿ ಮತ್ತು ಸಾಗರದ ಗಾಳಿ-ನೀರಿನ ಸೆಳೆತದಲ್ಲಾಗುವ ಬದಲಾವಣೆಗಳು ಸಹ ಇದನ್ನು ಪ್ರಭಾವಿಸುತ್ತದೆ.

ಹವಾಮಾನದ ಕಂಪ್ಯೂಟರ್‌ ಪ್ರೋಗ್ರ್ಯಾಮ್‌

ಭೂಮಿಯ ತಾಪಮಾನ ಹೆಚ್ಚಾಗಲು ಕಾರಣಗಳು ಏನೇ ಇರಲಿ, ಇದು ನಮ್ಮ ಮೇಲೆ ಮತ್ತು ನಮ್ಮ ವಾತಾವರಣದ ಮೇಲೆ ಯಾವ ಪರಿಣಾಮ ಬೀರುತ್ತದೆ? ಈಗಲಾದರೋ ವಿಜ್ಞಾನಿಗಳೊಂದಿಗೆ ಶಕ್ತಿಭರಿತ ಕಂಪ್ಯೂಟರ್‌ಗಳಿವೆ. ಅವುಗಳ ಸಹಾಯದಿಂದ ಹವಾಮಾನ ವ್ಯವಸ್ಥೆಯ ಗುಣಲಕ್ಷಣಗಳನ್ನು ಅವರು ಮುಂತಿಳಿಸಬಲ್ಲರು. ಭೌತನಿಯಮಗಳು, ಹವಾಮಾನದ ಅಂಕಿಅಂಶಗಳು ಮತ್ತು ಹವಾಮಾನವನ್ನು ಪ್ರಭಾವಿಸುವ ನೈಸರ್ಗಿಕ ಸಂಭವಗಳು ಅವರ ಕಂಪ್ಯೂಟರ್‌ ಪ್ರೋಗ್ರ್ಯಾಮ್‌ಗಳಲ್ಲಿ ಒಳಗೂಡಿವೆ.

ಹೀಗೆ ಕೃತಕ ವಾತಾವರಣವನ್ನು ನಿರ್ಮಿಸುವ ಮೂಲಕ, ಬೇರೆ ವಿಧಗಳಲ್ಲಿ ಮಾಡಸಾಧ್ಯವಿರದಂಥ ಹವಾಮಾನದ ಸಂಶೋಧನೆಯನ್ನು ವಿಜ್ಞಾನಿಗಳು ಮಾಡಿದ್ದಾರೆ. ಉದಾಹರಣೆಗೆ, ಅವರು ಸೂರ್ಯನ ಉಷ್ಣತೆಯನ್ನು ಕೃತಕವಾಗಿ “ಬದಲಾಯಿಸಿ” ಅದು ನೀರ್ಗಲ್ಲು, ಗಾಳಿ ಮತ್ತು ಸಾಗರದ ತಾಪಮಾನ, ಬಾಷ್ಪೀಕರಣದ ಗತಿ, ಪರಿಸರದಲ್ಲಿನ ಒತ್ತಡ, ಮೋಡ-ರಚನೆ, ವಾಯು ಮತ್ತು ಮಳೆಗಳ ಮೇಲೆ ಹೇಗೆ ಪ್ರಭಾವಿಸುತ್ತದೆ ಎಂಬುದನ್ನು ಅವರೀಗ ಕಾಣಬಲ್ಲರು. ಜ್ವಾಲಾಮುಖಿಯ ಸ್ಫೋಟವನ್ನು ಕೃತಕವಾಗಿ ರಚಿಸಿ ಜ್ವಾಲಾಮುಖಿಯ ಧೂಳು ಹವಾಮಾನದ ಮೇಲೆ ಮಾಡುವ ಪರಿಣಾಮವನ್ನು ಪರಿಶೀಲಿಸುತ್ತಾರೆ. ಜನಸಂಖ್ಯಾಭಿವೃದ್ಧಿ, ಅರಣ್ಯನಾಶ, ಭೂಪ್ರದೇಶದ ಉಪಯೋಗ, ಹಸಿರುಮನೆ ಅನಿಲಗಳ ಹೊರಸೂಸುವಿಕೆಯಲ್ಲಿರುವ ಬದಲಾವಣೆಯೇ ಮುಂತಾದವುಗಳನ್ನು ಪರೀಕ್ಷಿಸಬಲ್ಲರು. ತಮ್ಮ ಈ ಕಂಪ್ಯೂಟರ್‌ ಪ್ರೋಗ್ರ್ಯಾಮ್‌ಗಳು ಮುಂದಕ್ಕೆ ಅಧಿಕ ನಿಷ್ಕೃಷ್ಟವೂ ಭರವಸಾರ್ಹವೂ ಆಗುವವೆಂದು ವಿಜ್ಞಾನಿಗಳು ನಿರೀಕ್ಷಿಸುತ್ತಾರೆ.

ಇಂಥ ಕಂಪ್ಯೂಟರ್‌ ಪ್ರೋಗ್ರ್ಯಾಮ್‌ಗಳು ಎಷ್ಟು ನಿಷ್ಕೃಷ್ಟ? ಕಂಪ್ಯೂಟರ್‌ಗಳಿಗೆ ಅಳವಡಿಸಲ್ಪಟ್ಟ ಅಂಕಿಸಂಖ್ಯೆಯ ನಿಖರತೆ ಹಾಗೂ ಅದರ ಮೊತ್ತದ ಮೇಲೆ ಅದು ಹೊಂದಿಕೊಂಡಿದೆ. ಆದಕಾರಣ, ಹವಾಮಾನದ ಕಂಪ್ಯೂಟರ್‌ ಪ್ರೋಗ್ರ್ಯಾಮ್‌ಗಳಲ್ಲಿ ಕೆಲವೊಮ್ಮೆ ಚಿಕ್ಕ ಬದಲಾವಣೆಗಳು ಮತ್ತು ವಿಪತ್ಕರ ಫಲಿತಾಂಶಗಳೂ ತೋರಿಬರುತ್ತವೆ. ಹಾಗಿದ್ದರೂ, “ನೈಸರ್ಗಿಕ ಹವಾಮಾನ ವ್ಯವಸ್ಥೆಯು ನಾವು ನಿರೀಕ್ಷಿಸದಿದ್ದಂಥ ವಿಷಯಗಳನ್ನು ಮಾಡಬಲ್ಲದು” ಎಂದು ಸೈಅನ್ಸ್‌ ಪತ್ರಿಕೆ ಹೇಳುತ್ತದೆ. ಆರ್ಕಟಿಕ್‌ ಕರಗುವಿಕೆಯ ಅಸಾಮಾನ್ಯ ವೇಗವೇ ಮುಂತಾದ ಕೆಲವು ಅನಿರೀಕ್ಷಿತ ಸಂಗತಿಗಳನ್ನು ಅದು ಮುಂತಿಳಿಸಿರುವುದು ಅನೇಕ ಹವಾಮಾನ ತಜ್ಞರನ್ನು ಅಚ್ಚರಿಗೊಳಿಸಿದೆ. ಮನುಷ್ಯರು ಈಗ ಮಾಡುತ್ತಿರುವ ಅಥವಾ ಮಾಡದೆ ಇರುವ ವಿಷಯಗಳ ಫಲಿತಾಂಶಗಳ ಬಗ್ಗೆ ಶಾಸಕರಿಗೆ ಕೊಂಚವೇ ಅರಿವು ಇದ್ದರೂ ನಾಳಿನ ಸಮಸ್ಯೆಗಳನ್ನು ಕಡಿಮೆಗೊಳಿಸಬಲ್ಲ ಕಾಯಿದೆಗಳನ್ನು ಜಾರಿಗೆ ತರಬಲ್ಲರು.

ಈ ಸಾಧ್ಯತೆಯನ್ನು ಮನಸ್ಸಿನಲ್ಲಿಟ್ಟು, ಕಂಪ್ಯೂಟರ್‌ ನಿರ್ಮಿತ ಆರು ವಿವಿಧ ಕೃತಕ ಹವಾಮಾನ ದೃಶ್ಯಗಳನ್ನು IPCC ಪರೀಕ್ಷಿಸಿತು. ಅವುಗಳಲ್ಲಿ ಅನಿರ್ಬಂಧಿತ ಹಸಿರುಮನೆ ಅನಿಲ ಉತ್ಪಾದನೆ ಮತ್ತು ಮಾಮೂಲಾಗಿ ಉತ್ಪಾದನೆಯಾಗುವ ಅನಿಲ ಇವುಗಳು ಬೇರೆ ಬೇರೆ ವಾತಾವರಣ ಮತ್ತು ಪರಿಸರದಲ್ಲಿ ಉಂಟುಮಾಡುವ ಫಲಿತಾಂಶಗಳನ್ನು ಒಳಗೂಡಿದ್ದವು. ಈ ಕಾಲಜ್ಞಾನಗಳಿಂದಾಗಿ ವಿಶ್ಲೇಷಕರು ವಿವಿಧ ನಿಯಮಗಳನ್ನು ಒಳತರಲು ಉತ್ತೇಜಿಸುತ್ತಾರೆ. ಈ ನಿಯಮಗಳಲ್ಲಿ, ಪಳೆಯುಳಿಕೆಯ ಇಂಧನಗಳ ಬಳಸುವಿಕೆಯ ಮೇಲೆ ಕಟ್ಟುನಿಟ್ಟಿನ ಸೀಮಿತ, ಉಲ್ಲಂಘಿಸಿದವರಿಗೆ ದಂಡ, ಹೆಚ್ಚು ನ್ಯೂಕ್ಲಿಯರ್‌ ಶಕ್ತಿಯ ಉತ್ಪಾದನೆ, ಮತ್ತು ಪರಿಸರಕ್ಕೆ ಹಾನಿಕರವಲ್ಲದ ತಂತ್ರಜ್ಞಾನಗಳು ಸೇರಿರಬೇಕು ಎಂದು ಹೇಳುತ್ತಾರೆ.

ಈ ಕಂಪ್ಯೂಟರ್‌ ಪ್ರೋಗ್ರ್ಯಾಮ್‌ಗಳು ಭರವಸಾರ್ಹವೋ?

ಸದ್ಯದ ಮುನ್ಸೂಚನಾ ವಿಧಾನಗಳು “ಚೆನ್ನಾಗಿ ಅರ್ಥವಾಗಿರದ ಹವಾಮಾನ ಪ್ರಕ್ರಿಯೆಯನ್ನು ತೀರಾ ಲಘುವಾಗಿ ಪರಿಗಣಿಸಿ, ಬೇರೆ ಪ್ರಕ್ರಿಯೆಗಳನ್ನು ಪೂರ್ಣವಾಗಿ ಅಲಕ್ಷಿಸುತ್ತವೆ” ಎಂದು ಟೀಕಾಕಾರರು ಹೇಳುತ್ತಾರೆ. ಕಂಪ್ಯೂಟರೀಕೃತ ಮುಂತಿಳಿಸುವಿಕೆಗಳು ಹೊಂದಿಕೆಯಲ್ಲಿಲ್ಲ ಎಂದೂ ಅವರನ್ನುತ್ತಾರೆ. IPCC ಚರ್ಚೆಯಲ್ಲಿ ಭಾಗವಹಿಸಿದ ಒಬ್ಬ ವಿಜ್ಞಾನಿ ಹೇಳಿದ್ದು: “ಹವಾಮಾನ ವ್ಯವಸ್ಥೆಯ ಅಸಾಮಾನ್ಯ ಜಟಿಲತೆಯನ್ನು ಅಳೆಯುವ ಮತ್ತು ತಿಳುಕೊಳ್ಳುವ ವಿಧಾನದಿಂದ ನಮ್ಮಲ್ಲಿ ಕೆಲವರು ಎಷ್ಟು ವಿನೀತರಾಗಿ ಉಳಿಯುತ್ತೇವೆಂದರೆ ಅದೇನು ಮಾಡುತ್ತದೆ ಮತ್ತು ಏಕೆ ಮಾಡುತ್ತದೆ ಎಂದು ಗ್ರಹಿಸುವ ಶಕ್ತಿ ನಮ್ಮಲ್ಲಿಲ್ಲ.” *

ಸಮಸ್ಯೆಯ ಕಾರಣಗಳು ನಿಶ್ಚಯವಾಗಿ ತಿಳಿಯದೇ ಇರುವುದರಿಂದ ಅದನ್ನೇ ಸಮರ್ಥಿಸಿ ಯಾವುದೇ ಬದಲಾವಣೆ ಮಾಡದಿರುವುದು ಭವಿಷ್ಯತ್ತಿನಲ್ಲಾಗುವ ಅಪಾಯದೊಂದಿಗೆ ಆಟವಾಡುವಂತಿದೆ. “ಆ ಭೀಕರ ಮುನ್ಸೂಚನೆಗಳು ನಿಜವಾಗಿ ಸಂಭವಿಸುವುದಾದರೆ, ಆ ಎಚ್ಚರಿಕೆಗೆ ನಾವು ಕಿವಿಗೊಡಲಿಲ್ಲ ಎಂದು ನಮ್ಮ ಮಕ್ಕಳಿಗೆ ವಿವರಿಸುವುದು ಹೇಗೆ?” ಎಂದವರು ಹೇಳುತ್ತಾರೆ. ಹವಾಮಾನದ ಕಂಪ್ಯೂಟರ್‌ ಪ್ರೋಗ್ರ್ಯಾಮ್‌ಗಳು ನಿಷ್ಕೃಷ್ಟವಾಗಿರಲಿ ಇಲ್ಲದಿರಲಿ ಭೂಮಿಯು ಮಹಾ ವಿಪತ್ತಿನಲ್ಲಿದೆ ಎಂಬುದು ನಿಶ್ಚಯ. ಮಾಲಿನ್ಯ, ಅರಣ್ಯನಾಶ, ನಗರೀಕರಣ, ಪ್ರಾಣಿ ಸಂಕುಲದ ಅಳಿವುಗಳ ಕಾರಣದಿಂದ ಜೀವಪೋಷಕ ಪರಿಸರವು ಅಪಾಯಕ್ಕೊಳಗಾಗುತ್ತಿದೆ. ಇದನ್ನು ಯಾರೂ ಅಲ್ಲಗಳೆಯಸಾಧ್ಯವಿಲ್ಲ.

ಇಷ್ಟೆಲ್ಲಾ ತಿಳಿದ ಮೇಲೆ ನಮ್ಮನ್ನೂ ನಮ್ಮ ಸುಂದರ ಭೂಮಿಯನ್ನೂ ಉಳಿಸಲಿಕ್ಕಾಗಿ ಇಡೀ ಮಾನವಕುಲವು ತಮ್ಮ ಜೀವನರೀತಿಯನ್ನು ಬದಲಾಯಿಸುವಂತೆ ನಾವು ನಿರೀಕ್ಷಿಸಸಾಧ್ಯವೋ? ಭೂಮಿ ಬಿಸಿಯೇರುವಿಕೆಗೆ ಮಾನವ ಚಟುವಟಿಕೆಗಳೇ ಕಾರಣವಾಗಿರುವಲ್ಲಿ ಇದನ್ನು ಸರಿಪಡಿಸಲು ನಮಗಿರುವ ಕಾಲವಾದರೂ ಕೊಂಚವೇ. ಅಂಥ ಬದಲಾವಣೆ ತರಲು ಕನಿಷ್ಠಪಕ್ಷ ಭೂಮಿಯ ಸಮಸ್ಯೆಗಳ ಮೂಲ ಕಾರಣಗಳಾದ ಮಾನುಷ ಸ್ವಾರ್ಥ, ಸ್ವಹಿತ ಚಿಂತನೆ, ಅಜ್ಞಾನ, ಅಯುಕ್ತ ಸರಕಾರ ಮತ್ತು ನಿರಾಸಕ್ತಿ ಇವುಗಳ ಕಡೆಗೆ ಗಮನಕೊಡುವುದು ಅಗತ್ಯ. ಅಂಥ ಪ್ರತೀಕ್ಷೆಯು ಕೇವಲ ನನಸಾಗದ ಕನಸೋ? ಹೌದಾದರೆ ಬೇರೆ ನಿರೀಕ್ಷೆಯೇ ಇಲ್ಲವೋ? ಈ ಪ್ರಶ್ನೆಗೆ ಉತ್ತರವನ್ನು ಮುಂದಿನ ಲೇಖನದಲ್ಲಿ ಕಂಡುಕೊಳ್ಳುವಿರಿ. (g 8/08)

[ಪಾದಟಿಪ್ಪಣಿ]

^ ನವೆಂಬರ್‌ 1, 2007ರ ದಿ ವಾಲ್‌ ಸ್ಟ್ರೀಟ್‌ ಜರ್ನಲ್‌ ವರದಿಸಿದ ಪ್ರಕಾರ ಅಮೆರಿಕದ ಹಂಟ್ಸ್‌ವಿಲ್‌ನಲ್ಲಿರುವ ಯೂನಿವರ್ಸಿಟಿ ಆಫ್‌ ಅಲಬಾಮಾದಲ್ಲಿನ ಅರ್ತ್‌ ಸಿಸ್ಟಮ್‌ ಸೈಅನ್ಸ್‌ ಸೆಂಟರ್‌ನ ನಿರ್ದೇಶಕರಾದ ಜಾನ್‌ ಆರ್‌. ಕ್ರಿಸ್ಟಿ ಅವರು ಹೇಳಿದ್ದು.

[ಪುಟ 7ರಲ್ಲಿರುವ ಚಿತ್ರ]

Based on NASA/Visible Earth imagery

[ಪುಟ 5ರಲ್ಲಿರುವ ಚೌಕ/ಚಿತ್ರ]

ಭೂಮಿಯ ತಾಪಮಾನವನ್ನು ಅಳೆಯುವುದು ಹೇಗೆ?

ದೃಷ್ಟಾಂತಕ್ಕಾಗಿ, ಒಂದು ದೊಡ್ಡ ಕೋಣೆಯ ಉಷ್ಣತೆಯನ್ನು ನೀವು ಹೇಗೆ ಅಳೆಯುವಿರಿ? ಉಷ್ಣತಾಮಾಪಕವನ್ನು ಎಲ್ಲಿ ಇಡುವಿರಿ? ಉಷ್ಣತೆಯಲ್ಲಿ ಏರುಪೇರು ಆಗುತ್ತದೆ. ಆದ್ದರಿಂದ ಕೋಣೆಯ ಚಾವಣಿಯು ಅದರ ನೆಲಭಾಗಕ್ಕಿಂತ ಹೆಚ್ಚು ಬಿಸಿಯಾಗಿರುವುದು ಸಂಭಾವ್ಯ. ತಾಪ​ಮಾಪಕವನ್ನು ಕಿಟಿಕಿಯ ಬಳಿ, ನೇರ ಬಿಸಿಲಲ್ಲಿ ಇಲ್ಲವೆ ನೆರಳಿರುವ ಸ್ಥಳದಲ್ಲಿ ಇಡುವುದಾದರೆ ಅದು ತೋರಿಸುವ ಸೂಚ್ಯಂಕದಲ್ಲಿ ವ್ಯತ್ಯಾಸ ಕಂಡು​ಬರುತ್ತದೆ. ಬಣ್ಣಗಳು ಸಹ ಸೂಚ್ಯಂಕದ ಮೇಲೆ ಪರಿಣಾಮ ಬೀರಬಹುದು ಯಾಕೆಂದರೆ ಕರ್ರಗಿನ ನೆಲಭಾಗಗಳು ಹೆಚ್ಚು ಉಷ್ಣತೆಯನ್ನು ಹೀರಿಕೊಳ್ಳುತ್ತವೆ.

ಆದುದರಿಂದ ಕೋಣೆಯ ಒಂದೇ ಭಾಗದ ಮಾಪನವು ಸಾಕಾಗಲಿಕ್ಕಿಲ್ಲ. ಬೇರೆ ಬೇರೆ ಭಾಗಗಳ ಉಷ್ಣತೆಯನ್ನು ಅಳೆದು ಅದರ ಸರಾಸರಿಯನ್ನು ಲೆಕ್ಕಿಸಬೇಕು. ಸೂಚ್ಯಂಕಗಳು ದಿನದಿಂದ ದಿನಕ್ಕೂ ಕಾಲದಿಂದ ಕಾಲಕ್ಕೂ ಬದಲಾಗಬಹುದು. ಆದ್ದರಿಂದ ಸರಿಯಾದ ಸರಾಸರಿ ತಾಪಮಾನವು ಸಿಗಬೇಕಾದರೆ, ಹಲವಾರು ಸೂಚ್ಯಂಕಗಳನ್ನು ಹೆಚ್ಚು ಸಮಯದ ತನಕ ತೆಗೆಯಬೇಕಾದೀತು. ಹಾಗಾದರೆ ತುಸು ಯೋಚಿಸಿ. ಒಂದು ಕೋಣೆಯ ಸರಿಯಾದ ಉಷ್ಣತೆಯನ್ನು ಅಳೆಯಲು ಇಷ್ಟೊಂದು ಶ್ರಮಿಸಬೇಕಾದರೆ ಇಡೀ ಭೂಭಾಗ, ವಾತಾವರಣ ಮತ್ತು ಸಾಗರಗಳ ತಾಪಮಾನವನ್ನು ಅಳೆಯುವುದು ಎಷ್ಟೊಂದು ಕಷ್ಟಕರ! ಆದರೂ ಅಂಥ ಅಂಕಿಅಂಶಗಳು ಹವಾಮಾನದಲ್ಲಾಗುವ ಬದಲಾವಣೆಗಳನ್ನು ನಿಷ್ಕೃಷ್ಟವಾಗಿ ಅಳೆಯಲು ಅತ್ಯಾವಶ್ಯಕ.

[ಕೃಪೆ]

NASA photo

[ಪುಟ 6ರಲ್ಲಿರುವ ಚೌಕ]

ಪರಮಾಣು ಶಕ್ತಿ ಪರಿಹಾರಮಾರ್ಗವೋ?

ಭೂಮಿಯಾದ್ಯಂತ ಶಕ್ತಿಯ ಉಪಯೋಗವು ಅಧಿಕಾಧಿಕವಾಗಿ ಹೆಚ್ಚುತ್ತಾ ಬರುತ್ತಿದೆ. ತೈಲ ಮತ್ತು ಕಲ್ಲಿದ್ದಲಿನ ಉರಿಸುವಿಕೆಯು ಹಸಿರುಮನೆ ಅನಿಲಗಳನ್ನು ಉಂಟುಮಾಡುವುದರಿಂದ ಅನೇಕ ಸರಕಾರಗಳು ಪರಮಾಣು ಶಕ್ತಿಯನ್ನು ಬದಲಿಯಾಗಿ ಉಪಯೋಗಿಸುವುದರ ಕುರಿತು ಯೋಜಿಸುತ್ತಿವೆ. ಆದರೆ ಅದರಲ್ಲೂ ಸಮಸ್ಯೆಗಳಿವೆ.

ಇಂಟರ್‌ನ್ಯಾಷನಲ್‌ ಹೆರಾಲ್ಡ್‌ ಟ್ರಿಬ್ಯೂನ್‌ ವರದಿಸುವುದು: ವಿಶ್ವದಲ್ಲೇ ಅತಿಹೆಚ್ಚು ಪರಮಾಣು ಅವಲಂಬಿತ ದೇಶವಾದ ಫ್ರಾನ್ಸ್‌ನಲ್ಲಿ, ಪರಮಾಣು ಶಕ್ತಿ ಉತ್ಪಾದನೆಗಾಗಿ ಉಪಯೋಗಿಸುವ ರಿಯಾಕ್ಟರ್‌ಗಳನ್ನು ತಂಪು​ಮಾಡಲು 1900 ಕೋಟಿ ಘನ ಮೀಟರ್‌ ನೀರು ಬೇಕು. 2003ರಲ್ಲಿ ಫ್ರಾನ್ಸ್‌ನ ಕಡು​ಬೇಸಗೆಯಲ್ಲಿ, ರಿಯಾಕ್ಟರ್‌ಗಳಿಂದ ಸಾಮಾನ್ಯವಾಗಿ ಹೊರಸೂಸಲಾದ ಬಿಸಿನೀರು ನದಿಗಳ ತಾಪಮಾನವನ್ನು ಏರಿಸಿ ಪರಿಸರವನ್ನೇ ಅಪಾಯಕ್ಕೊಡ್ಡಿತು. ಆದುದರಿಂದ ಕೆಲವು ಅಣುಸ್ಥಾವರಗಳನ್ನು ಮುಚ್ಚಿಬಿಡಬೇಕಾಯಿತು. ಭೂಮಿಯ ತಾಪಮಾನಗಳು ಹೆಚ್ಚಾದಲ್ಲಿ ಪರಿಸ್ಥಿತಿ ಇನ್ನೂ ಕೆಟ್ಟುಹೋಗಬಲ್ಲದು.

“ಪರಮಾಣು ಶಕ್ತಿ ನಮಗೆ ಬೇಕೆಂದಾದರೆ ಮೊದಲಾಗಿ ನಾವು ಹವಾಮಾನ ಬದಲಾವಣೆಯ ಸಮಸ್ಯೆಯನ್ನು ಪರಿಹರಿಸಬೇಕು” ಎಂದು ಯೂನಿಯನ್‌ ಆಫ್‌ ಕನ್ಸರ್ನ್ಡ್‌ ಸೈಅಂಟಿಸ್ಟ್ಸ್‌ನ ನ್ಯೂಕ್ಲಿಯರ್‌ ಎಂಜಿನಿಯರ್‌ ಡೇವಿಡ್‌ ಲಾಕ್ಬಾಮ್‌ ಹೇಳಿದರು.

[ಪುಟ 7ರಲ್ಲಿರುವ ಚೌಕ/ಭೂಪಟ]

ಹವಾಮಾನ ಸಂಬಂಧಿತ ವಿಪತ್ತುಗಳು 2007ರಲ್ಲಿ

2007ರಲ್ಲಿ ಹವಾಮಾನ ಸಂಬಂಧಿತ ವಿಪತ್ತುಗಳು ಅತಿ ದೊಡ್ಡ ಸಂಖ್ಯೆಯಲ್ಲಿ ಸಂಭವಿಸಿದವು ಎಂದು ವರದಿಯಾಗಿದೆ. ಪರಿಹಾರ ಕಾರ್ಯಕ್ಕಾಗಿ ವಿಶ್ವಸಂಸ್ಥೆಯ ಕೋಆರ್ಡಿನೇಷನ್‌ ಆಫ್‌ ದಿ ಹ್ಯುಮಾನಿಟೇರಿಯನ್‌ ಅಫೇರ್ಸ್‌ ಆಫೀಸು, ಗುರುತರ​ವಾದ ಹಾಗೂ ತುರ್ತಿನ 14 ವಿನಂತಿಗಳನ್ನು ಹೊರಡಿಸಿತ್ತು. ಇದು ಹಿಂದಿನ 2005ರ ದಾಖಲೆಗಿಂತ 4 ಹೆಚ್ಚು ವಿನಂತಿಗಳು. ಈ ಕೆಳಗೆ, 2007ರಲ್ಲಿ ಸಂಭವಿಸಿದ ಕೇವಲ ಕೆಲವು ವಿಪತ್ತುಗಳನ್ನು ತಿಳಿಸಲಾಗಿದೆ. ಆದರೂ ಈ ಒಂದೊಂದು ಘಟನೆಗಳು ಒಂದು ದೀರ್ಘಾವಧಿಯ ತನಕ ನಡೆದವೆಂದು ಅರ್ಥವಲ್ಲ.

 ಬ್ರಿಟನ್‌: ಭೀಕರ ನೆರಹಾವಳಿಯಿಂದಾಗಿ 3,50,000 ಜನರು ಬಾಧಿಸಲ್ಪಟ್ಟದ್ದು ಕಳೆದ 60 ವರ್ಷಗಳಲ್ಲಿ ಇದು ಮೊದಲ ಬಾರಿ. ಬ್ರಿಟನ್‌ ಮತ್ತು ವೇಲ್ಸ್‌ನಲ್ಲಿ ಮಳೆಯ ದಾಖಲೆ ಇಡಲಾರಂಭಿಸಿದ್ದು 1766ರಿಂದ. ಆದರೆ 2007ರ ಮೇ ತಿಂಗಳಿನಿಂದ ಜುಲೈ ವರೆಗೆ ಬಿದ್ದ ಧಾರಾಕಾರ ಮಳೆಯು ಆ ಎಲ್ಲಾ ದಾಖಲೆಗಳನ್ನು ಮುರಿಯಿತು.

 ಪಶ್ಚಿಮ ಆಫ್ರಿಕ: 14 ದೇಶಗಳಲ್ಲಿ 8,00,000 ಜನರು ನೆರೆಯಿಂದ ಪೀಡಿತರಾದರು.

 ಲಿಸಾತೊ: ತಾಪಮಾನದ ಏರಿಕೆ ಮತ್ತು ಅನಾವೃಷ್ಟಿಯಿಂದಾಗಿ ಬೆಳೆಗಳೆಲ್ಲಾ ನಾಶವಾದವು. ಸುಮಾರು 5,53,000 ಜನರಿಗೆ ಆಹಾರ ವಸ್ತುಗಳ ಸರಬರಾಜು ಬೇಕಾಯಿತು.

 ಸೂಡಾನ್‌: ಭೀಕರ ಸುರಿಮಳೆಯಿಂದ 1,50,000 ಜನರು ತಮ್ಮ ಮನೆಮಾರುಗಳನ್ನು ಕಳೆದುಕೊಂಡರು. ಸುಮಾರು 5,00,000 ಜನರಿಗೆ ನೆರವು ನೀಡಲಾಯಿತು.

 ಮಡಗಾಸ್ಕರ್‌: ಚಂಡಮಾರುತಗಳು ಮತ್ತು ಹೆಚ್ಚುವರಿ ಮಳೆಗಾಳಿಗಳು ದ್ವೀಪಕ್ಕೆ ಅಪ್ಪಳಿಸಿದ್ದರಿಂದ 33,000 ಜನರು ನಿರಾಶ್ರಿತರಾದರು. 2,60,000 ಜನರ ಹೊಲಬೆಳೆಗಳು ನೀರುಪಾಲಾದವು.

 ಉತ್ತರ ಕೊರಿಯ: ಸುಮಾರು 9,60,000 ಜನರು ದೇಶಾದ್ಯಂತ ನೆರೆ, ಭೂಕುಸಿತ ಮತ್ತು ಮಣ್ಣು ಕುಸಿತದಿಂದಾಗಿ ತೀವ್ರವಾಗಿ ಬಾಧಿತರಾದರು.  ಬಾಂಗ್ಲಾದೇಶ: ನೆರೆಹಾವಳಿಯಿಂದ 85 ಲಕ್ಷ ಜನರು ಬಾಧಿತರಾದರು ಮತ್ತು 3,000ಕ್ಕಿಂತಲೂ ಹೆಚ್ಚು ಮಂದಿ ಕೊಲ್ಲಲ್ಪಟ್ಟರು. 12,50,000 ಪಶುಸಂಗೋಪನೆಯ ಪ್ರಾಣಿಗಳು ನಾಶವಾದವು. ಸುಮಾರು 15 ಲಕ್ಷ ಮನೆಗಳು ಹಾಳುಬಿದ್ದವು ಅಥವಾ ನಾಶವಾದವು.

 ಭಾರತ: ನೆರೆಹಾವಳಿಯು 3 ಕೋಟಿ ಜನರನ್ನು ಬಾಧಿಸಿತು.

 ಪಾಕಿಸ್ತಾನ್‌: ಬಿರುಮಳೆ ಸಹಿತ ಚಂಡಮಾರುತವು 3,77,000 ಜನರನ್ನು ನಿರ್ಗತಿಕರನ್ನಾಗಿ ಮಾಡಿ ನೂರಾರು ಜನರನ್ನು ಆಹುತಿತಕ್ಕೊಂಡಿತು.  ಬೊಲೀವಿಯ: 3,50,000ಕ್ಕಿಂತಲೂ ಹೆಚ್ಚು ಜನರು ನೆರೆಹಾವಳಿಯಿಂದ ಪೀಡಿತರಾದರು ಮತ್ತು 25,000 ಮಂದಿ ತಮ್ಮ ಮನೆಮಾರುಗಳನ್ನು ಕಳೆದುಕೊಂಡರು.

 ಮೆಕ್ಸಿಕೋ: ಪ್ರಾದೇಶಿಕ ನೆರೆಗಳು ಸುಮಾರು 5,00,000 ಜನರನ್ನು ನಿರಾಶ್ರಿತರನ್ನಾಗಿ ಮಾಡಿ 10 ಲಕ್ಷಕ್ಕಿಂತಲೂ ಹೆಚ್ಚು ಜನರನ್ನು ಬಾಧಿಸಿತು.  ಡೊಮಿನಿಕನ್‌ ರಿಪಬ್ಲಿಕ್‌: ದೀರ್ಘಾವಧಿಯ ಧಾರಾಕಾರ ಮಳೆಯು ನೆರೆಗಳನ್ನೂ ಭೂಕುಸಿತಗಳನ್ನೂ ಉಂಟುಮಾಡಿ 65,000 ಜನರನ್ನು ನಿರಾಶ್ರಿತರನ್ನಾಗಿ ಮಾಡಿತು.

 ಯುನೈಟೆಡ್‌ ಸ್ಟೇಟ್ಸ್‌: ಒಣಗಿ ಸೊಟ್ಟಾದ ಹೊಲಕಾಡುಗಳಿಗೆ ಬೆಂಕಿ ಹಿಡಿದ ಕಾರಣ ದಕ್ಷಿಣ ಕ್ಯಾಲಿಫೋರ್ನಿಯದಲ್ಲಿನ 5,00,000 ಜನರು ತಮ್ಮ ಮನೆಮಾರುಗಳನ್ನು ಬಿಟ್ಟು ಓಡಿಹೋಗಬೇಕಾಯಿತು.

[ಕೃಪೆ]

Based on NASA/​Visible Earth imagery