ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಶಾಲೆಯ ಒತ್ತಡವನ್ನು ನಾನು ಹೇಗೆ ನಿಭಾಯಿಸಬಲ್ಲೆ?

ಶಾಲೆಯ ಒತ್ತಡವನ್ನು ನಾನು ಹೇಗೆ ನಿಭಾಯಿಸಬಲ್ಲೆ?

ಯುವ ಜನರು ಪ್ರಶ್ನಿಸುವುದು

ಶಾಲೆಯ ಒತ್ತಡವನ್ನು ನಾನು ಹೇಗೆ ನಿಭಾಯಿಸಬಲ್ಲೆ?

“ಶಾಲೆಯಲ್ಲಿ ಬರುವ ಒತ್ತಡ ನೀವು ದೊಡ್ಡವರಾದ ಮೇಲೆ ಕಡಿಮೆಯಾಗುವುದಿಲ್ಲ. ಅದರ ಕಾರಣಗಳು ಮಾತ್ರವೇ ಬೇರೆಯಾಗುತ್ತವೆ.”​—⁠ ಜೇಮ್ಸ್‌, ನ್ಯೂ ಸೀಲೆಂಡ್‌. *

“ಶಾಲೆಯಲ್ಲಿ ಎಷ್ಟೊಂದು ಒತ್ತಡದ ಪರಿಸ್ಥಿತಿಯಿತ್ತೆಂದರೆ ಕೆಲವೊಮ್ಮೆ ಜೋರಾಗಿ ಚೀರಿ ಅತ್ತುಬಿಡಬೇಕು ಎಂದೆಣಿಸುತ್ತಿತ್ತು.”​—⁠ ಶಾರನ್‌, ಅಮೆರಿಕ.

ಶಾಲೆಯಲ್ಲಿ ನೀವೆಷ್ಟು ಒತ್ತಡವನ್ನು ಅನುಭವಿಸುತ್ತೀರಿ ಎಂಬುದನ್ನು ನಿಮ್ಮ ಹೆತ್ತವರು ಅರ್ಥಮಾಡಿಕೊಳ್ಳುವುದೇ ಇಲ್ಲ ಎಂದು ನಿಮಗನಿಸುತ್ತದೋ? ನಿಜ, ಬ್ಯಾಂಕ್‌ ಲೋನ್‌ ಕಟ್ಟುವ, ಮನೆಯವರನ್ನು ನೋಡಿಕೊಳ್ಳುವ ಅಥವಾ ಧನಿಯನ್ನು ಮೆಚ್ಚಿಸುವ ಜಂಜಾಟವೇನೂ ನಿಮಗಿಲ್ಲವೆಂದು ಅವರು ಹೇಳಬಹುದು. ಆದರೆ, ನಿಮಗೆ ಶಾಲೆಯಲ್ಲಿ ಹೆತ್ತವರಷ್ಟೇ ಒತ್ತಡವಿದೆ ಅಥವಾ ಕೆಲವೊಮ್ಮೆ ಅದಕ್ಕಿಂತಲೂ ಹೆಚ್ಚು ಇದೆ ಎಂದು ನಿಮಗನಿಸಬಹುದು.

ಶಾಲೆಗೆ ಹೋಗಿಬರುವುದೇ ಸಾಕಷ್ಟು ಒತ್ತಡಕೊಡುತ್ತದೆ. ​ಅಮೆರಿಕದ ನಿವಾಸಿ ಟಾರ ಹೇಳುವುದು, “ಜಗಳಗಳು ಹೆಚ್ಚಾಗಿ ಸ್ಕೂಲ್‌ ಬಸ್ಸಿನಲ್ಲೇ ಆರಂಭಿಸುತ್ತವೆ. ಒಡನೆ ಡ್ರೈವರ್‌ ಬಸ್ಸನ್ನು ನಿಲ್ಲಿಸಿ ಎಲ್ಲರನ್ನು ಇಳಿಸಿ ಬಿಡುತ್ತಾನೆ. ನಾವೆಲ್ಲರೂ ಅರ್ಧ ಗಂಟೆ ಅಥವಾ ಇನ್ನೂ ಲೇಟಾಗಿ ಶಾಲೆಗೆ ತಲಪುತ್ತೇವೆ.”

ಶಾಲೆಗೆ ಬಂದೊಡನೆ ಸಮಸ್ಯೆ ನಿಲ್ಲುತ್ತದೋ? ಖಂಡಿತ ಇಲ್ಲ! ಈ ಕೆಳಗಿನ ಹೇಳಿಕೆಗಳಂತೆ ನೀವೂ ಭಾವಿಸುತ್ತಿರಬಹುದು.

ಶಿಕ್ಷಕರಿಂದ ಬರುವ ಒತ್ತಡ.

“ನಾನು ಚೆನ್ನಾಗಿ ಓದಿ ಎಲ್ಲರಿಗಿಂತಲೂ ಫಸ್ಟ್‌ ರ್ಯಾಂಕ್‌ ಬರಬೇಕೆಂದು ಟೀಚರ್ಸ್‌ ಹೇಳುತ್ತಾರೆ. ಅವರನ್ನು ಮೆಚ್ಚಿಸುವುದೂ ಒಂದು ಒತ್ತಡವೇ.”​—⁠ಸಾಂಡ್ರ, ಫಿಜಿ.

“ವಿಶೇಷವಾಗಿ ವಿದ್ಯಾರ್ಥಿಯಲ್ಲಿ ಸ್ವಲ್ಪ ಪ್ರತಿಭೆಯಿದ್ದಲ್ಲಿ ಅವರು ಓದಿ ಮುಂದೆ ಬರುವಂತೆ ಟೀಚರ್ಸ್‌ ಒತ್ತಾಯಮಾಡುತ್ತಾರೆ. ಹೆಚ್ಚಿನ ಅಂಕ ಪಡೆಯುವಂತೆ ಟೀಚರ್ಸ್‌ ನಮ್ಮ ಬೆನ್ನುಹಿಡಿಯುತ್ತಾರೆ.”​—⁠ಏಪ್ರಿಲ್‌, ಅಮೆರಿಕ.

“ಜೀವನದಲ್ಲಿ ನೀವು ಸಾರ್ಥಕ ಗುರಿಗಳನ್ನು ಇಟ್ಟಿರಬಹುದು. ಆದರೂ ಶಿಕ್ಷಣದ ವಿಷಯದಲ್ಲಿ ಕೆಲವು ಟೀಚರ್ಸ್‌ ಹೇಳಿದ ಗುರಿಗಳನ್ನು ನೀವು ಬೆನ್ನಟ್ಟದಿದ್ದರೆ ನೀವು ಯಾವುದಕ್ಕೂ ಲಾಯಕ್ಕಿಲ್ಲವೆಂದು ಭಾವಿಸುವಂತೆ ಅವರು ಮಾಡುತ್ತಾರೆ.”​—⁠ನೆಓಮೀ, ಅಮೆರಿಕ.

ಶಿಕ್ಷಕರಿಂದ ಬರುವ ಒತ್ತಡವು ನಿಮ್ಮನ್ನು ಹೇಗೆ ಬಾಧಿಸಿದೆ?

.....

ಸಮಪ್ರಾಯದವರಿಂದ ಬರುವ ಒತ್ತಡ.

“ಹೈಸ್ಕೂಲ್‌ನಲ್ಲಿ ಮಕ್ಕಳಿಗೆ ಸ್ವಲ್ಪ ಹೆಚ್ಚು ಸ್ವಾತಂತ್ರ್ಯವಿರುವುದರಿಂದ ಪುಂಡಾಟವೂ ಜಾಸ್ತಿ. ನೀವು ಅವರೊಂದಿಗೆ ಸೇರದಿದ್ದರೆ ಸಾಕು, ನೀವು ಅವರಂತಿಲ್ಲ ಎಂದು ಹೇಳಿ ನಿಮ್ಮನ್ನು ಬದಿಗೊತ್ತುತ್ತಾರೆ.”​—⁠ಕೆವನ್‌, ಅಮೆರಿಕ.

“ಪ್ರತಿದಿನ ನನ್ನ ಸ್ನೇಹಿತರು ಡ್ರಿಂಕ್ಸ್‌ ಮತ್ತು ಸೆಕ್ಸ್‌ನ ಆಮಿಷ ಒಡ್ಡುತ್ತಾರೆ. ಕೆಲವೊಮ್ಮೆ ಬೇಡ ಎಂದು ಅವರಿಗೆ ಹೇಳುವುದಕ್ಕೆ ನನಗೆ ಕಷ್ಟ.”​—⁠ಆ್ಯರನ್‌, ನ್ಯೂ ಸೀಲೆಂಡ್‌.

“ನನಗೆ ಈಗ 12 ವರ್ಷ. ನನಗಿರುವ ದೊಡ್ಡ ತೊಂದರೆಯೆಂದರೆ ಡೇಟಿಂಗ್‌ ಮಾಡುವಂತೆ ಇತರರು ನನ್ನನ್ನು ಒತ್ತಾಯಿಸುವುದೇ. ‘ಎಷ್ಟು ದಿನ ನೀನು ಒಬ್ಬಳೇ ಇರುತ್ತಿಯಾ?’ ಎಂದು ಸ್ಕೂಲ್‌ನಲ್ಲಿರುವ ಎಲ್ಲರೂ ಕೇಳುತ್ತಾರೆ.”​—⁠ಅಲಿಕ್ಸಾಂಡ್ರಿಯ, ಅಮೆರಿಕ.

“ಒಬ್ಬ ಹುಡುಗನೊಂದಿಗೆ ಡೇಟಿಂಗ್‌ ಮಾಡುವಂತೆ ನನ್ನನ್ನು ಒತ್ತಾಯಿಸಿದರು. ನಾನು ನಿರಾಕರಿಸಿದಾಗ, ನನಗೆ ಸಲಿಂಗಿಕಾಮಿಯೆಂದು ಹೆಸರಿಟ್ಟರು. ಆಗಿನ್ನೂ ನನಗೆ ಹತ್ತು ವರ್ಷ!”​—⁠ಕ್ರಿಸ್ಟ, ಆಸ್ಟ್ರೇಲಿಯ.

ಸಮಪ್ರಾಯದವರ ಒತ್ತಡವು ನಿಮ್ಮನ್ನು ಹೇಗೆ ಬಾಧಿಸಿದೆ?

.....

ನಿಮ್ಮ ಧಾರ್ಮಿಕ ನಂಬಿಕೆಗಳಿಗೆ ಸಹಪಾಠಿಗಳ ಪ್ರತಿವರ್ತನೆಯಿಂದ ಬರುವ ಒತ್ತಡ

“ನಮ್ಮ ಧಾರ್ಮಿಕ ನಂಬಿಕೆಗಳ ಕುರಿತು ಕ್ಲಾಸ್‌ಮೇಟ್‌ಗಳಿಗೆ ಹೇಳೋದು ತುಂಬಾ ಕಷ್ಟ. ಏಕೆಂದರೆ ಹೇಳಿದ ಮೇಲೆ ಅವರು ನಮ್ಮ ಬಗ್ಗೆ ಏನು ತಿಳುಕೊಳ್ಳುತ್ತಾರೋ ಗೊತ್ತಿಲ್ಲ. ನಮ್ಮನ್ನು ವಿಚಿತ್ರವಾಗಿ ನೋಡುತ್ತಾರೆಂಬ ಚಿಂತೆ ನಮ್ಮನ್ನು ಕಾಡುತ್ತದೆ.”​—⁠ಕ್ಯಾರಲ್‌, ಹವಾಯಿ.

“ಮಕ್ಕಳು ಪ್ರೈಮರಿ ಮತ್ತು ಹೈಸ್ಕೂಲ್‌ನಲ್ಲೇ ಸೆಕ್ಸ್‌, ಡ್ರಗ್ಸ್‌, ಡ್ರಿಂಕ್ಸ್‌ ಮುಂತಾದವುಗಳಲ್ಲಿ ತೊಡಗುತ್ತಾರೆ. ಅದು ನಿಜವಾಗಿ ಒತ್ತಡವನ್ನು ತರುತ್ತದೆ ಯಾಕೆಂದರೆ ನಾವು ಬೈಬಲ್‌ ಮಟ್ಟಗಳಿಗೆ ಅನುಸಾರ ಜೀವಿಸುವ ಕಾರಣ ಬೇರೆಯವರಿಗಿಂತ ಭಿನ್ನರೆಂದು ಅವರು ನಮಗೆ ಹಾಸ್ಯಮಾಡುವುದು ನಮಗೆ ಇಷ್ಟವಾಗುವುದಿಲ್ಲ.”​—⁠ಸೂಸನ್‌, ಅಮೆರಿಕ.

ನಿಮ್ಮ ಧಾರ್ಮಿಕ ನಂಬಿಕೆಗಳಿಂದಾಗಿ ಏಳುವ ಸಮಸ್ಯೆಗಳಿಂದ ಹೇಗೆ ಬಾಧಿಸಲ್ಪಡುತ್ತೀರಿ?

.....

ಒತ್ತಡದ ಇತರ ಕಾರಣಗಳು. ಕೆಳಗಿನ ಕಾರಣಗಳಲ್ಲಿ ನಿಮ್ಮನ್ನು ಹೆಚ್ಚಾಗಿ ಬಾಧಿಸುವ ಒಂದನ್ನು ಗುರುತಿಸಿ ಅಥವಾ ಬೇರೆ ಕಾರಣವನ್ನು ಬರೆಯಿರಿ.

❑ ಪರೀಕ್ಷೆಗಳ ಭಯ

❑ ಹೋಮ್‌ವರ್ಕ್‌

❑ ಹೆತ್ತವರ ಅತಿಮಹತ್ವಾಕಾಂಕ್ಷೆ

❑ ನಿಮ್ಮ ಸ್ವಂತ ಮಹತ್ವಾಕಾಂಕ್ಷೆಗಳು

❑ ಗೂಂಡಾತನ ಅಥವಾ ಲೈಂಗಿಕ ಪೀಡಕರು

❑ ಇತರೆ .....

ಒತ್ತಡ ಕಡಿಮೆಗೊಳಿಸಲು ಐದು ಹೆಜ್ಜೆಗಳು

ಯಾವುದೇ ಒತ್ತಡಗಳಿಲ್ಲದೇ ಶಾಲಾ ಜೀವನ ಕಳೆಯಬಹುದೆಂದು ನಿರೀಕ್ಷಿಸಬೇಡಿ. ಮಿತಿಮೀರಿದ ಒತ್ತಡವನ್ನು ಸಹಿಸುವುದು ಕಷ್ಟಕರ ನಿಜ. ಜ್ಞಾನಿ ರಾಜ ಸೊಲೊಮೋನನು ಬರೆದುದು: “ಖಂಡಿತವಾಗಿಯೂ ಬಲಾತ್ಕಾರವೂ ಜ್ಞಾನಿಯನ್ನು ಹುಚ್ಚನನ್ನಾಗಿ ಮಾಡುತ್ತದೆ.” (ಪ್ರಸಂಗಿ 7:​7, NIBV) ಆದರೆ, ಒತ್ತಡವು ನಿಮ್ಮನ್ನು ಹುಚ್ಚುತನಕ್ಕೆ ನಡೆಸದಂತೆ ನೀವು ನೋಡಿಕೊಳ್ಳಬಲ್ಲಿರಿ. ಯಶಸ್ಸಿನ ಕೀಲಿಕೈ ಏನೆಂದರೆ ಒತ್ತಡವನ್ನು ನಿಭಾಯಿಸುವುದು ಹೇಗೆಂದು ಕಲಿತು​ಕೊಳ್ಳುವುದೇ.

ಒತ್ತಡ ನಿಭಾಯಿಸುವುದನ್ನು ತೂಕ ಎತ್ತುವುದಕ್ಕೆ ಹೋಲಿಸ​ಬಹುದು. ಯಶಸ್ವಿಯಾಗಬೇಕಾದರೆ ತೂಕ ಎತ್ತುವವನು ಸರಿಯಾಗಿ ಪೂರ್ವಸಿದ್ಧತೆ ಮಾಡಬೇಕು. ಆಮೇಲೆ ಅವನು ತೂಕವನ್ನು ಸರಿಯಾಗಿ ಎತ್ತುತ್ತಾನೆ ಮತ್ತು ಅತಿ ಹೆಚ್ಚಿನ ಭಾರವನ್ನು ಎತ್ತಲು ಪ್ರಯತ್ನಿಸುವುದಿಲ್ಲ. ಈ ಹೆಜ್ಜೆಗಳನ್ನು ತೆಗೆದುಕೊಳ್ಳುವಾಗ ಅವನ ದೇಹಕ್ಕೆ ಯಾವ ಹಾನಿಯೂ ಆಗುವುದಿಲ್ಲ ಬದಲಾಗಿ ಅವನ ಮಾಂಸಖಂಡಗಳು ಗಟ್ಟಿಮುಟ್ಟಾಗಿ ಬೆಳೆಯುತ್ತವೆ. ಇಂಥ ಹೆಜ್ಜೆಗಳನ್ನು ತೆಗೆದುಕೊಳ್ಳದಿದ್ದರೆ ಅವನ ಮಾಂಸಖಂಡವು ಬಿರಿಯಬಹುದು ಇಲ್ಲವೆ ಮೂಳೆ ಸಹ ಮುರಿಯಬಹುದು.

ಅದೇ ರೀತಿ, ನಿಮಗೆ ಎದುರಾಗುವ ಮಾನಸಿಕ ಒತ್ತಡಗಳನ್ನು ನೀವು ನಿಭಾಯಿಸಿಕೊಳ್ಳಬಲ್ಲಿರಿ ಮತ್ತು ನಿಮಗೆ ಯಾವುದೇ ಹಾನಿಮಾಡಿಕೊಳ್ಳದೆ ಮಾಡಬೇಕಾದ ಕೆಲಸವನ್ನು ಯಶಸ್ವಿಕರವಾಗಿ ಪೂರೈಸಬಲ್ಲಿರಿ. ಹೇಗೆ? ಕೆಳಗಿನ ಹೆಜ್ಜೆಗಳನ್ನು ಪಾಲಿಸಿ:

1. ಒತ್ತಡದ ನಿರ್ದಿಷ್ಟ ಕಾರಣಗಳನ್ನು ಗುರುತಿಸಿ. “ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು” ಎಂದು ಒಂದು ವಿವೇಕಪರ ನಾಣ್ಣುಡಿ ತಿಳಿಸುತ್ತದೆ. (ಜ್ಞಾನೋಕ್ತಿ 22:⁠3) ಒತ್ತಡದ ಸಂಭಾವ್ಯ ಕಾರಣ ನಿಮಗೆ ಮೊದಲು ತಿಳಿಯದ ಹೊರತು ಅದರ ದಾರುಣ ಹೊರೆಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಲಾರಿರಿ. ಆದ್ದರಿಂದ ನೀವು ಮೇಲೆ ಗುರುತಿಸಿದ ಅಥವಾ ಬರೆದ ವಿಷಯವನ್ನು ನೋಡಿ. ಯಾವ ವಿಷಯವು ನಿಮ್ಮ ಮನಸ್ಸಿನ ಮೇಲೆ ಹೆಚ್ಚು ಒತ್ತಡವನ್ನು ಹಾಕುತ್ತದೆ?

2. ಸಂಶೋಧನೆ ಮಾಡಿ. ಉದಾಹರಣೆಗೆ, ತುಂಬಾ ಹೋಮ್‌ವರ್ಕ್‌ ನಿಮಗೆ ಒತ್ತಡವನ್ನು ಕೊಡುತ್ತಿರುವುದಾದರೆ, ಏಪ್ರಿಲ್‌ 8, 2004 ರ ಎಚ್ಚರ! ಪತ್ರಿಕೆಯಲ್ಲಿರುವ “ಯುವ ಜನರು ಪ್ರಶ್ನಿಸುವುದು​—⁠ನನ್ನ ಹೋಮ್‌ವರ್ಕ್‌ ಮಾಡಲು ನಾನು ಸಮಯವನ್ನು ಹೇಗೆ ಕಂಡುಕೊಳ್ಳಬಲ್ಲೆ?” ಎಂಬ ಲೇಖನದಲ್ಲಿರುವ ಸಲಹೆಗಳನ್ನು ಸಂಶೋಧನೆ ಮಾಡಿ. ಸಹಪಾಠಿಯೊಂದಿಗೆ ಲೈಂಗಿಕ ದುರ್ನಡತೆಯಲ್ಲಿ ಒಳಗೂಡುವಂತೆ ನಿಮಗೆ ಒತ್ತಾಯ ಬರುತ್ತಿರುವುದಾದರೆ, ಏಪ್ರಿಲ್‌-ಜೂನ್‌, 2007 ರ ಎಚ್ಚರ! ಪತ್ರಿಕೆಯಲ್ಲಿರುವ “ಯುವ ಜನರು ಪ್ರಶ್ನಿಸುವುದು​—⁠‘ಹುಕಪ್‌’ ಗೆ ಕರೆದರೆ ನಾನೇನು ಮಾಡಲಿ?” ಎಂಬ ಲೇಖನದಲ್ಲಿ ಸಹಾಯಕರ ಸಲಹೆಯನ್ನು ಕಂಡುಕೊಳ್ಳುವಿರಿ.

3. ಏನು ಮಾಡುವುದೆಂದು ಮೊದಲೇ ಯೋಚಿಸಿ. ನಿಮ್ಮ ಧಾರ್ಮಿಕ ನಂಬಿಕೆಗಳ ಕುರಿತು ತಿಳಿದುಕೊಂಡಾಗ ನಿಮ್ಮ ಸಹಪಾಠಿ​ಗಳು ಹೇಗೆ ಪ್ರತಿಕ್ರಿಯಿಸುವರೋ ಎಂಬ ಚಿಂತೆ ನಿಮಗಿರುವುದಾದರೆ, ಅಂಥ ಸಮಸ್ಯೆಗಳು ಏಳುವ ತನಕ ಕಾಯದೆ ಏನು ಹೇಳಬೇಕು ಮತ್ತು ಹೇಗೆ ಪ್ರತಿವರ್ತಿಸಬೇಕೆಂದು ಮೊದಲೇ ಯೋಚಿಸಿ. (ಜ್ಞಾನೋಕ್ತಿ 29:25) “ಅಂಥ ಪರಿಸ್ಥಿತಿ ಏಳುವ ಮೊದಲೇ ನನ್ನನ್ನು ಸಿದ್ಧಪಡಿಸಿಕೊಂಡದ್ದರಿಂದ ನನಗೆ ತುಂಬಾ ಸಹಾಯವಾಯಿತು. ನನ್ನ ನಂಬಿಕೆಯನ್ನು ಹೇಗೆ ತಿಳಿಸಬೇಕು ಎಂದು ನಾನು ಮುಂಚೆಯೇ ನಿರ್ಧರಿಸಿದ್ದೆ” ಎಂದು 18 ವರ್ಷದ ಕೆಲ್ಸೀ ಹೇಳುತ್ತಾಳೆ. ಬೆಲ್ಜಿಯಮ್‌ ದೇಶದ 18 ವರ್ಷದ ಆ್ಯರನ್‌ ಕೂಡ ಹೀಗೆ ಮಾಡಿದನು. “ನನ್ನ ಸಹಪಾಠಿಗಳು ಯಾವ ಪ್ರಶ್ನೆಗಳನ್ನು ಕೇಳಬಹುದೆಂದು ನಾನು ಮೊದಲೇ ಯೋಚನೆಮಾಡಿ ನಂತರ ಆ ಪ್ರಶ್ನೆಗಳಿಗೆ ಉತ್ತರ ತಯಾರಿಸಿದೆ. ನಾನು ಹಾಗೆ ಮಾಡಿರದೆ ಇದ್ದಲ್ಲಿ ನನ್ನ ನಂಬಿಕೆಯನ್ನು ಧೈರ್ಯದಿಂದ ತಿಳಿಸಲು ಆಗುತ್ತಿರಲಿಲ್ಲ” ಎಂದು ಅವನು ಹೇಳುತ್ತಾನೆ.

4. ಮುಂದೂಡಬೇಡಿ. “ಸಮಸ್ಯೆಗಳನ್ನು ನೀವು ಅಲಕ್ಷಿಸಿದ್ದಲ್ಲಿ ಅವು ಕಣ್ಮರೆಯಾಗಿ ಹೋಗಲಾರವು. ಬದಲಾಗಿ ಅವು ಇನ್ನಷ್ಟು ದೊಡ್ಡದಾಗಿ ನಿಮ್ಮ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತವೆ. ಉದಾಹರಣೆಗೆ, ನೀವು ಒಬ್ಬ ಯೆಹೋವನ ಸಾಕ್ಷಿಯಾಗಿರುವಲ್ಲಿ, ಆದಷ್ಟು ಬೇಗನೆ ಇತರರಿಗೆ ಅದನ್ನು ತಿಳಿಯಪಡಿಸುವುದು ನಿಮಗೆ ನಿಜ ಸುರಕ್ಷೆಯನ್ನು ನೀಡಬಲ್ಲದು. ಈಗ 20 ರ ಹರೆಯದಲ್ಲಿರುವ ಮಾರ್ಶೆ ಎಂಬವಳ ಅನುಭವವನ್ನು ಕೇಳಿ. ಆಕೆ ಹೇಳುವುದು: “ಪ್ರತಿ ವರ್ಷವೂ ಶಾಲೆಯ ಆರಂಭದಿಂದಲೇ ಬೈಬಲ್‌ ಮಟ್ಟಗಳ ಕುರಿತು ಚರ್ಚಿಸಲು ದಾರಿಮಾಡುವ ಕೆಲವೊಂದು ವಿಷಯಗಳ ಕುರಿತು ನಾನು ಇತರರೊಂದಿಗೆ ಮಾತುಬೆಳೆಸಿದೆ. ನಾನೊಬ್ಬಳು ಯೆಹೋವನ ಸಾಕ್ಷಿಯೆಂದು ತಿಳಿಸದೆ ಮುಂದೂಡಿದಾಗ ಅದನ್ನು ತಿಳಿಸುವುದು ಇನ್ನೂ ಕಷ್ಟಕರವಾಗುತ್ತಾ ಬರುತ್ತಿತ್ತೆಂದು ಕಂಡುಕೊಂಡೆ. ನನ್ನ ನಂಬಿಕೆಗಳನ್ನು ಸಹಪಾಠಿಗಳಿಗೆ ತಿಳಿಸಿದಾಗ ಮತ್ತು ಅದಕ್ಕನುಸಾರ ನಡೆದುಕೊಂಡಾಗ ನಿಜವಾಗಿಯೂ ನನಗೆ ತುಂಬಾ ಸಹಾಯವಾಯಿತು.”

5. ಸಹಾಯ ಕೇಳಿ. ತೂಕ ಎತ್ತುವ ಅತಿ ಗಟ್ಟಿಮುಟ್ಟಾದ ವ್ಯಕ್ತಿಗೂ ತನ್ನದೇ ಆದ ಇತಿಮಿತಿಗಳಿವೆ. ನಿಮಗೂ ಅಷ್ಟೇ. ಆದರೆ ನಿಮ್ಮ ಭಾರವನ್ನು ನೀವೊಬ್ಬರೇ ಹೊತ್ತುಕೊಳ್ಳಬೇಕಾಗಿಲ್ಲ. (ಗಲಾತ್ಯ 6:⁠2) ಸಹಾಯಕ್ಕಾಗಿ ನಿಮ್ಮ ಹೆತ್ತವರನ್ನೋ ಪ್ರೌಢ ಕ್ರೈಸ್ತರನ್ನೋ ಯಾಕೆ ಕೇಳಬಾರದು? ಈ ಲೇಖನದಲ್ಲಿ ಹಿಂದೆ ನೀವು ಬರೆದ ಉತ್ತರಗಳನ್ನು ಅವರಿಗೆ ತೋರಿಸಿ. ಆ ಒತ್ತಡಗಳನ್ನು ನಿಭಾಯಿಸಲು ಸಹಾಯಮಾಡುವಂತೆ ಅವರೊಂದಿಗೆ ಚರ್ಚಿಸಿ. ಐರ್ಲಂಡ್‌ ದೇಶದ ಲಿಸ್‌ ಎಂಬವಳು ತನ್ನ ಧಾರ್ಮಿಕ ನಂಬಿಕೆಗಾಗಿ ಇತರರು ಅಪಹಾಸ್ಯ ಮಾಡುತ್ತಿರುವ ಬಗ್ಗೆ ತಂದೆಯೊಂದಿಗೆ ಮಾತಾಡಿದಳು. ಲಿಸ್‌ ಹೇಳುವುದು: “ಪ್ರತಿ ದಿನ ಶಾಲೆಗೆ ಬಿಟ್ಟುಹೋಗುವ ಮುನ್ನ ಅಪ್ಪ ನನ್ನೊಂದಿಗೆ ಪ್ರಾರ್ಥಿಸುತ್ತಿದ್ದರು. ಅದು ಯಾವಾಗಲೂ ನನ್ನನ್ನು ಧೈರ್ಯಗೊಳಿಸಿತು.”

ಒತ್ತಡ ಒಳ್ಳೆಯದೋ?

ಒಳ್ಳೆಯ ಒತ್ತಡವೂ ಇದೆಯೆಂದು ಕೇಳಿ ನಿಮಗೆ ಆಶ್ಚರ್ಯವಾಗಬಹುದು. ಆದರೆ ನೀವು ಅನುಭವಿಸುವ ಕೆಲವೊಂದು ಒತ್ತಡವು ಒಳ್ಳೆಯದೇ. ಏಕೆ? ಏಕೆಂದರೆ, ನೀವು ಶ್ರಮಶೀಲರಾಗಿದ್ದೀರಿ ಮತ್ತು ನಿಮ್ಮ ಮನಸ್ಸಾಕ್ಷಿ ಕ್ರಿಯಾಶೀಲವೆಂದು ಇದು ತೋರಿಸುತ್ತದೆ. ಮಾನಸಿಕ ಒತ್ತಡವೇ ಇಲ್ಲದ ವ್ಯಕ್ತಿಯ ಕುರಿತು ಬೈಬಲ್‌ ಹೇಗೆ ವಿವರಿಸುತ್ತದೆ ಎಂಬುದನ್ನು ಗಮನಿಸಿ: “ಎಷ್ಟು ಹೊತ್ತು ನೀನು ನಿದ್ರೆ ಮಾಡುವುದು? ನಿನ್ನ ನಿದ್ರೆಯಿಂದ ಯಾವಾಗ ಎಚ್ಚರಗೊಳ್ಳುವೆ? ಇನ್ನೂ ಸ್ವಲ್ಪ ನಿದ್ರೆ, ಇನ್ನು ಸ್ವಲ್ಪ ತೂಕಡಿಕೆ, ನಿದ್ರೆಗಾಗಿ ಇನ್ನು ಸ್ವಲ್ಪ ಕೈ ಮುದುರಿಕೊಳ್ಳುವೆ ಎಂದುಕೊಳ್ಳುತ್ತೀಯಾ? ಹೀಗೆ ದಾರಿದ್ರ್ಯವು ಹಾದಿಗಳ್ಳನಂತೆಯೂ ಹಾಗೂ ನಿನ್ನ ಕೊರತೆಯು ಶಸ್ತ್ರಧಾರಿಯಂತೆಯೂ ಬರುವುದು.”​—⁠ಜ್ಞಾನೋಕ್ತಿ 6:​9-11, NIBV.

ಹದಿನಾರು ವಯಸ್ಸಿನ ಹೈಡೀ ವಿಷಯವನ್ನು ಸರಿಯಾಗಿ ಸಮಾಪ್ತಿಗೊಳಿಸುತ್ತಾಳೆ. ಅವಳು ಹೇಳುವುದು, “ಶಾಲೆಯು ತುಂಬಾ ಕೆಟ್ಟ ಸ್ಥಳವೆಂದು ಅನಿಸಬಹುದು. ಆದರೆ, ಶಾಲೆಯಲ್ಲಿ ನಿಮಗಿರುವ ಒತ್ತಡಗಳು ಉದ್ಯೋಗ ಸ್ಥಳದಲ್ಲಿ ಎದುರಾಗುವ ಒತ್ತಡಗಳಂತೆಯೇ ಇವೆ.” ಹೌದು, ಒತ್ತಡಗಳನ್ನು ನಿಭಾಯಿಸುವುದು ಅಷ್ಟೊಂದು ಸುಲಭವಲ್ಲ. ಆದರೆ ಒತ್ತಡಗಳನ್ನು ಯೋಗ್ಯವಾಗಿ ನಿಭಾಯಿಸುವಲ್ಲಿ ಅದು ನಿಮಗೆ ಹಾನಿಕಾರಕವಾಗದು. ಬದಲಾಗಿ ಎದೆಗಾರಿಕೆಯುಳ್ಳ ವ್ಯಕ್ತಿಯಾಗಿ ನಿಮ್ಮನ್ನು ರೂಪಿಸಬಲ್ಲದು. (g 9/08)

“ಯುವ ಜನರು ಪ್ರಶ್ನಿಸುವುದು . . . ” ಲೇಖನಮಾಲೆಯ ಹೆಚ್ಚಿನ ಲೇಖನಗಳನ್ನು www.watchtower.org/ype ವೆಬ್‌ಸೈಟ್‌ನಲ್ಲಿ ಕಂಡುಕೊಳ್ಳಬಹುದು

[ಪಾದಟಿಪ್ಪಣಿ]

^ ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.

ಇದರ ಕುರಿತು ಯೋಚಿಸಿರಿ

ನೀವು ಒತ್ತಡಕ್ಕೊಳಗಾಗಿದ್ದೀರಿ ಎಂಬುದನ್ನು ಯಾವುದು ಸೂಚಿಸಬಹುದು?

ಪರಿಪೂರ್ಣತೆ ಸಾಧಿಸುವ ದೃಢಸಂಕಲ್ಪ ಹೊಂದಿರುವುದು ಒತ್ತಡವನ್ನು ಏಕೆ ಹೆಚ್ಚಿಸುತ್ತದೆ?

ಒತ್ತಡವನ್ನು ತಡೆಯಲು ಅಸಾಧ್ಯವೆಂದು ಎಣಿಸುವಾಗ ಯಾರ ಬಳಿ ಮಾತಾಡಬಹುದು?

[ಪುಟ 25ರಲ್ಲಿರುವ ಚಿತ್ರ]

ಒತ್ತಡವನ್ನು ನಿಭಾಯಿಸುವುದು ತೂಕವನ್ನು ಎತ್ತುವಂತಿದೆ​—⁠ಅದನ್ನು ಸರಿಯಾಗಿ ಎತ್ತುವಲ್ಲಿ ಅದು ನಿಮ್ಮನ್ನು ಗಟ್ಟಿಮುಟ್ಟಾಗಿಸುವುದು