ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಸ್ವರೂಪ ಹೇಗಿದೆ?

ದೇವರ ಸ್ವರೂಪ ಹೇಗಿದೆ?

ಬೈಬಲಿನ ದೃಷ್ಟಿಕೋನ

ದೇವರ ಸ್ವರೂಪ ಹೇಗಿದೆ?

“ದೇವರು ಆತ್ಮಸ್ವರೂಪನು; ಆತನನ್ನು ಆರಾಧಿಸುವವರು ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ ಆರಾಧಿಸಬೇಕು” ಎನ್ನುತ್ತದೆ ಬೈಬಲ್‌. ಈ ಹೇಳಿಕೆಯು ದೇವರ ಸ್ವರೂಪದ ಕುರಿತ ಮೂಲಭೂತ ಸತ್ಯವನ್ನು ಪ್ರಕಟಿಸುತ್ತದೆ. ಅದೇನೆಂದರೆ ದೇವರು ಆತ್ಮಸ್ವರೂಪನು! (ಯೋಹಾನ 4:19-24) ಹಾಗಿದ್ದರೂ ಬೈಬಲಿನಲ್ಲಿ ಆತನನ್ನು ಒಬ್ಬ ವ್ಯಕ್ತಿಯಾಗಿ ವರ್ಣಿಸಲಾಗಿದೆ. ಆತನ ಹೆಸರು ಯೆಹೋವ.—ಕೀರ್ತನೆ 83:18.

ಕೆಲವು ಬೈಬಲ್‌ ವಾಚಕರು ದೇವರ ಸ್ವರೂಪದ ಬಗ್ಗೆ ಗಲಿಬಿಲಿಯನ್ನು ವ್ಯಕ್ತಪಡಿಸಿದ್ದಾರೆ. ದೇವರು ಭೌತಿಕ ವ್ಯಕ್ತಿಯಾಗಿರದೆ ಅದೃಶ್ಯ ಆತ್ಮವಾಗಿರಲಾಗಿ, ಬೈಬಲಿನ ಎಷ್ಟೋ ವಾಕ್ಯಗಳು ಆತನಿಗೆ ಕಣ್ಣು, ಕಿವಿ, ಮೂಗು, ಹೃದಯ, ತೋಳು, ಕೈ, ಬೆರಳು ಮತ್ತು ಪಾದಗಳು ಇದ್ದಂತೆ ವರ್ಣಿಸಿರುವುದೇಕೆ? * ದೇವರು ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಉಂಟುಮಾಡಿದನು ಎಂದು ಬೈಬಲ್‌ ಹೇಳುವುದರಿಂದ ದೇವರ ಸ್ವರೂಪ ಮನುಷ್ಯರಂತಿರಬೇಕೆಂದು ಕೆಲವರು ನೆನಸಬಹುದು. ಆದರೆ ಬೈಬಲ್‌ ಹೇಳುವುದನ್ನು ಸೂಕ್ಷ್ಮವಾಗಿ ಪರಿಶೀಲಿಸುವ ಮೂಲಕ ನಾವು ಅಂಥಾ ಗಲಿಬಿಲಿಯನ್ನು ಹೋಗಲಾಡಿಸಬಲ್ಲೆವು.—ಆದಿಕಾಂಡ 1:26.

ದೇವರನ್ನು ಮನುಷ್ಯ ಸ್ವರೂಪದಲ್ಲಿ ವರ್ಣಿಸಿರುವುದೇಕೆ?

ಮಾನವರು ದೇವರ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಸಹಾಯಮಾಡಲಿಕ್ಕಾಗಿ ಬೈಬಲ್‌ ಲೇಖಕರು ಸರ್ವಶಕ್ತ ದೇವರನ್ನು ಮಾನವ ವ್ಯಕ್ತಿತ್ವದಲ್ಲಿ ವರ್ಣಿಸುವಂತೆ ದೇವರಿಂದ ಪ್ರೇರಿಸಲ್ಪಟ್ಟರು. ವಿದ್ವಾಂಸರು ಅಂಥ ವರ್ಣನೆಯನ್ನು ಮಾನವೀಕರಣ ಅಂದರೆ “ಮನುಷ್ಯ ಸ್ವರೂಪ ಅಥವಾ ಗುಣಲಕ್ಷಣಗಳು ಇರುವಂತೆ ವರ್ಣಿಸುವುದು” ಎಂದು ಅರ್ಥ ವಿವರಿಸಿದ್ದಾರೆ. ಈ ವರ್ಣನೆಗಳು ಸತ್ಯ ದೇವರಾದ ಯೆಹೋವನನ್ನು ವರ್ಣಿಸಲು ಮಾನವ ಭಾಷೆಗಿರುವ ಇತಿಮಿತಿಯನ್ನು ತೋರಿಸುತ್ತವೆ. ಅವುಗಳ ಉದ್ದೇಶವೇನೆಂದರೆ, ದೇವರ ಸ್ವರೂಪ ಮತ್ತು ವ್ಯಕ್ತಿತ್ವದ ವಾಸ್ತವಾಂಶವನ್ನು ಮಾನವರು ಗ್ರಹಿಸುವ ರೀತಿಯಲ್ಲಿ ಸಾದರಪಡಿಸುವುದು. ನಾವದನ್ನು ಅಕ್ಷರಾರ್ಥಕವಾಗಿ ಅರ್ಥಮಾಡಬೇಕೆಂದಿಲ್ಲ. ಏಕೆಂದರೆ ದೇವರನ್ನು “ಬಂಡೆ,” “ಸೂರ್ಯ” ಮತ್ತು “ಗುರಾಣಿ” ಎಂದು ಬೈಬಲ್‌ ವರ್ಣಿಸುವಾಗ ನಾವು ಹೇಗೆ ಅಕ್ಷರಶಃ ಅರ್ಥಮಾಡುವುದಿಲ್ಲವೋ ಅದೇ ರೀತಿಯಲ್ಲೇ.—ಕೀರ್ತನೆ 18:2; 84:11.

ತದ್ರೀತಿಯಲ್ಲಿ, ಯೆಹೋವನು ಪರಿಪೂರ್ಣ ಮಟ್ಟದಲ್ಲಿ ಹೊಂದಿರುವ ಗುಣಗಳನ್ನು ಮಾನವನು ಸೀಮಿತ ಮಟ್ಟದಲ್ಲಿ ಹೊಂದಿದ್ದಾನೆ ಎಂಬ ವಿಚಾರವನ್ನು ತಿಳಿಯಪಡಿಸಲಿಕ್ಕಾಗಿ ಮನುಷ್ಯನು ದೇವರ ಸ್ವರೂಪದಲ್ಲಿ ಉಂಟುಮಾಡಲ್ಪಟ್ಟನು ಎಂದು ಬೈಬಲ್‌ ತಿಳಿಸುತ್ತದೆ. ಮನುಷ್ಯರು ಆತ್ಮಜೀವಿಗಳು ಅಥವಾ ದೇವರಿಗೆ ಮನುಷ್ಯ ಸ್ವರೂಪವಿದೆ ಎಂದು ಇದರ ಅರ್ಥವಲ್ಲ ಎಂಬುದು ಸ್ಪಷ್ಟ.

ದೇವರು ಪುರುಷನೋ ಸ್ತ್ರೀಯೋ?

ದೇವರನ್ನು ಮಾನವ ಸ್ವರೂಪದಿಂದ ನಿರ್ದೇಶಿಸುವುದನ್ನು ಹೇಗೆ ಅಕ್ಷರಾರ್ಥಕವಾಗಿ ತೆಗೆದುಕೊಳ್ಳಬಾರದೋ ಅದೇರೀತಿ ದೇವರನ್ನು ಪುಲ್ಲಿಂಗರೂಪದಲ್ಲಿ ವರ್ಣಿಸಿರುವುದನ್ನು ಅಕ್ಷರಶಃ ತೆಗೆದುಕೊಳ್ಳಬಾರದು. ಲಿಂಗ ಪ್ರಭೇದವು ಭೌತಿಕ ಜೀವಿಗಳಲ್ಲಿರುವ ವಿಶೇಷ ಲಕ್ಷಣ. ಆದರೆ ಮಾನವ ಭಾಷೆಯಲ್ಲಿರುವ ಸೀಮಿತಗಳು ಸರ್ವಶಕ್ತ ದೇವರಾದ ಯೆಹೋವನ ವ್ಯಕ್ತಿತ್ವದ ತಿರುಳನ್ನು ಪೂರ್ಣವಾಗಿ ವರ್ಣಿಸಲು ಶಕ್ತವಾಗಿಲ್ಲ.

ಬೈಬಲ್‌ ನಮ್ಮ ಸೃಷ್ಟಿಕರ್ತನನ್ನು “ತಂದೆ” ಎಂದು ಸಂಭೋದಿಸಿರುವುದರಿಂದ ಆತನು ಒಬ್ಬ ಪ್ರೀತಿಯುಳ್ಳ, ಸಂರಕ್ಷಕ ಹಾಗೂ ಚಿಂತನೆಯುಳ್ಳ ಮಾನವ ತಂದೆಯಂತೆ ಇದ್ದಾನೆ ಎಂದು ನಾವು ತಿಳಿಯುತ್ತೇವೆ. (ಮತ್ತಾಯ 6:9) ನಾವು ದೇವರನ್ನು ಅಥವಾ ಸ್ವರ್ಗದಲ್ಲಿರುವ ಆತ್ಮಜೀವಿಗಳನ್ನು ಪುರುಷರಾಗಿ ಅಥವಾ ಸ್ತ್ರೀಯರಾಗಿ ವೀಕ್ಷಿಸಬೇಕೆಂದು ಇದರ ಅರ್ಥವಲ್ಲ. ಅವರ ಗುಣಲಕ್ಷಣಗಳು ಲಿಂಗಾಧಾರಿತವಲ್ಲ. ಕುತೂಹಲಕರವಾಗಿ, ಕ್ರಿಸ್ತನೊಂದಿಗೆ ಸ್ವರ್ಗೀಯ ರಾಜ್ಯದಲ್ಲಿ ಸಹಬಾಧ್ಯರಾಗಲು ಕರೆಯಲ್ಪಟ್ಟವರು ದೇವರ ಆತ್ಮಿಕ ಪುತ್ರರಾಗಿ ಮಹಿಮೆಗೇರಿದಾಗ ಅವರಲ್ಲಿ ಪುರುಷ ಯಾ ಸ್ತ್ರೀ ಎಂಬ ಲಿಂಗ ಪ್ರಬೇಧವಿಲ್ಲ ಎಂದು ಬೈಬಲ್‌ ಸೂಚಿಸುತ್ತದೆ. ಅವರು ದೇವರ ಆತ್ಮ ಪುತ್ರರಾಗಿ ಮಹಿಮೆಗೇರಿಸಲ್ಪಡುವಾಗ ಅವರೊಳಗೆ “ಗಂಡು ಹೆಣ್ಣು ಎಂದೂ ಬೇಧವಿಲ್ಲ” ಎಂದು ಅಪೊಸ್ತಲ ಪೌಲನು ಹೇಳಿದನು. ಕುರಿಮರಿಯಾದ ಯೇಸುಕ್ರಿಸ್ತನ “ಮದಲಗಿತ್ತಿ” ಎಂದೂ ಅವರು ಸಾಂಕೇತಿಕವಾಗಿ ವರ್ಣಿಸಲ್ಪಟ್ಟಿದ್ದಾರೆ. ಇವೆಲ್ಲವೂ ಸ್ಪಷ್ಟವಾಗಿ ಸೂಚಿಸುತ್ತದೇನೆಂದರೆ, ದೇವರನ್ನು ಮತ್ತು ಆತನ ಒಬ್ಬನೇ ಪುತ್ರನಾದ ಯೇಸುವನ್ನು ಹಾಗೂ ಇತರ ಆತ್ಮ ಜೀವಿಗಳನ್ನು ಪುಲ್ಲಿಂಗ ರೂಪದಲ್ಲಿ ಸಂಬೋಧಿಸಿರುವುದಾದರೂ ನಾವು ಅದನ್ನು ಅಕ್ಷರಶಃ ಅರ್ಥಮಾಡಬಾರದೆಂದೇ.—ಗಲಾತ್ಯ 3:26, 28; ಪ್ರಕಟನೆ 21:9; 1 ಯೋಹಾನ 3:1, 2.

ಪುರುಷನ ಪಾತ್ರವನ್ನು ಸರಿಯಾಗಿ ಅರ್ಥಮಾಡಿಕೊಳ್ಳುತ್ತಾ, ಬೈಬಲ್‌ ಲೇಖಕರು ದೇವರನ್ನು ಪುಲ್ಲಿಂಗರೂಪದಲ್ಲಿ ಸಂಬೋಧಿಸಿದ್ದಾರೆ. ಯೆಹೋವನು ಒಬ್ಬ ತಂದೆಯಾಗಿ ತನ್ನ ಭೂಮಕ್ಕಳಲ್ಲಿ ವಹಿಸುವ ಪ್ರೀತಿಭರಿತ ಆಸಕ್ತಿಯ ಪ್ರತಿಬಿಂಬವನ್ನು, ದೇವರ ಮೂಲತತ್ತ್ವಗಳಿಗನುಸಾರ ಜೀವಿಸುವ ಪುರುಷನಲ್ಲಿ ಅವರು ಕಂಡರು.—ಮಲಾಕಿಯ 3:17; ಮತ್ತಾಯ 5:45; ಲೂಕ 11:11-13.

ದೇವರ ಪ್ರಧಾನ ಗುಣ

ಪರಮಾಧಿಕಾರಿ ಪ್ರಭುವು ಆತ್ಮಸ್ವರೂಪನಾಗಿದ್ದರೂ ಆತನು ನಮಗೆಂದೂ ದೂರವಾದವನಲ್ಲ, ನಿಗೂಢನೂ ಅಲ್ಲ, ಸಂಪರ್ಕಿಸಲಸಾಧ್ಯನೂ ಅಲ್ಲ. ಆತನನ್ನು ತಿಳಿಯ ಬಯಸಿ, ಸೃಷ್ಟಿಯಲ್ಲಿ ಕಂಡುಬರುವ ಆತನ ಪ್ರಧಾನ ಗುಣಗಳಾದ ಪ್ರೀತಿ, ಶಕ್ತಿ, ವಿವೇಕ ಮತ್ತು ನ್ಯಾಯವನ್ನು ಗಣ್ಯಮಾಡುವ ಸಹೃದಯಿಗಳಿಗೆ ಆತನು ಆತ್ಮಸ್ವರೂಪನಾಗಿರುವುದು ಒಂದು ಅಬೇಧ್ಯ ತಡೆಯಲ್ಲ.—ರೋಮಾಪುರ 1:19-21.

ದೇವರ ವ್ಯಕ್ತಿತ್ವವನ್ನು ಆತನ ಪ್ರಧಾನ ಗುಣವಾದ ಪ್ರೀತಿಯಿಂದ ಸಾರಾಂಶಿಸಬಹುದು. ಆತನ ಪ್ರೀತಿಯು ಎಷ್ಟು ಮಹತ್ತಾಗಿದೆಯೆಂದರೆ ಆತನು ಪ್ರೀತಿಯ ವ್ಯಕ್ತೀಕರಣವೇ ಆಗಿದ್ದಾನೆ. (1 ಯೋಹಾನ 4:8) ಈ ಗುಣವು ಆತನ ಇತರ ಗುಣಗಳಾದ ಕರುಣೆ, ಕ್ಷಮಾಭಾವ ಮತ್ತು ದೀರ್ಘಶಾಂತಿಯನ್ನು ಆವರಿಸಿರುತ್ತದೆ. (ವಿಮೋಚನಕಾಂಡ 34:6; ಕೀರ್ತನೆ 103:8-14; ಯೆಶಾಯ 55:7; ರೋಮಾಪುರ 5:8) ನಿಶ್ಚಯವಾಗಿಯೂ, ನಮ್ಮನ್ನು ಆತನ ಸಮೀಪಕ್ಕೆ ಬರುವಂತೆ ಆಮಂತ್ರಿಸುವ ಪ್ರೀತಿಯ ದೇವರು ಯೆಹೋವನಾಗಿದ್ದಾನೆ.—ಯೋಹಾನ 4:23. (g 10/08)

[ಪಾದಟಿಪ್ಪಣಿ]

ನೀವೇನು ಹೇಳುತ್ತೀರಿ?

◼ ದೇವರ ಹೆಸರೇನು?—ಕೀರ್ತನೆ 83:18.

◼ ದೇವರ ಗುಣಗಳು ಎಲ್ಲಿ ಸ್ಪಷ್ಟವಾಗಿ ತೋರಿಬರುತ್ತವೆ?—ರೋಮಾಪುರ 1:19-21.

◼ ದೇವರ ಪ್ರಧಾನ ಗುಣ ಯಾವುದು?—1 ಯೋಹಾನ 4:8.