ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನನ್ನ ಪ್ರಾರ್ಥನೆಯನ್ನು ಹೇಗೆ ಉತ್ತಮಗೊಳಿಸಲಿ?

ನನ್ನ ಪ್ರಾರ್ಥನೆಯನ್ನು ಹೇಗೆ ಉತ್ತಮಗೊಳಿಸಲಿ?

ಯುವ ಜನರು ಪ್ರಶ್ನಿಸುವುದು

ನನ್ನ ಪ್ರಾರ್ಥನೆಯನ್ನು ಹೇಗೆ ಉತ್ತಮಗೊಳಿಸಲಿ?

“ಶಾಲೆ, ಕೆಲಸ, ಸ್ನೇಹಿತರು, ಕುಟುಂಬ ಅಂತ ನೂರಾರು ಜಂಜಾಟದಲ್ಲಿ ಸಿಕ್ಕಿ ಬಿದ್ದಾಗ, ಯಾರು ನಿಜವಾಗಿ ಮುಖ್ಯನೋ ಆ ದೇವರನ್ನೇ ನಾವು ಮರೆತುಬಿಡುತ್ತೇವೆ.”—ಫ್ಯಾವ್ಯೋಲ, 15 ವರ್ಷ, ಅಮೆರಿಕ.

“ಎಡೆಬಿಡದೆ ಪ್ರಾರ್ಥನೆಮಾಡಿರಿ.” (1 ಥೆಸಲೊನೀಕ 5:16) “ಬೇಸರಗೊಳ್ಳದೆ ಪ್ರಾರ್ಥನೆ ಮಾಡಿರಿ.” (ರೋಮಾಪುರ 12:12) “ನಿಮಗೆ ಬೇಕಾದದ್ದನ್ನು [ದೇವರಿಗೆ] ತಿಳಿಯಪಡಿಸಿರಿ.” (ಫಿಲಿಪ್ಪಿ 4:6) ನೀವು ಕ್ರೈಸ್ತರಾಗಿರುವಲ್ಲಿ ಈ ವಚನಗಳು ನಿಮಗೆ ಚೆನ್ನಾಗಿ ತಿಳಿದಿರಬಹುದು. ಪ್ರಾರ್ಥನೆಯು ಬೇರೆಲ್ಲಾ ಸಂವಾದ ಮಾಧ್ಯಮಕ್ಕಿಂತ ಅತಿ ವಿಸ್ಮಯಕರವೆಂದೂ ಅರಿತಿರಬಹುದು. ಯೋಚಿಸಿ, ನೀವು ಸರ್ವಶಕ್ತ ದೇವರೊಂದಿಗೆ ಹಗಲಿರುಳೆನ್ನದೆ ಯಾವುದೇ ಸಮಯದಲ್ಲಿ ಮಾತಾಡಸಾಧ್ಯವಿದೆ! ಮತ್ತು ಬೈಬಲ್‌ ಅನ್ನುವುದು: “ಆತನು ನಮ್ಮ ವಿಜ್ಞಾಪನೆಯನ್ನು ಕೇಳುತ್ತಾನೆ.” *1 ಯೋಹಾನ 5:14.

ಆರಂಭದಲ್ಲಿ ತಿಳಿಸಲಾದ ಹುಡುಗಿಯು ಹೇಳಿದಂತೆ, ಪ್ರಾರ್ಥನೆಮಾಡುವುದು ನಿಮಗೂ ಹೆಚ್ಚು ಕಷ್ಟವಾಗಿದ್ದೀತು. ಹಾಗಿರುವಲ್ಲಿ ನೀವೇನು ಮಾಡಬಹುದು? (1) ಸಮಸ್ಯೆಯೇನೆಂದು ಗುರುತಿಸಿ, (2) ನಿಮ್ಮ ಪ್ರಾರ್ಥನೆಗೆ ಸಂಬಂಧಿಸಿದ ಗುರಿಗಳನ್ನಿಡಿ, (3) ಆ ಗುರಿಗಳನ್ನು ಮುಟ್ಟಲು ಅಡ್ಡಿಯಾಗಿರುವ “ತಡೆ”ಗಳನ್ನು ತೆಗೆದುಹಾಕಿ. ಇವುಗಳನ್ನು ಮಾಡಲು ಈ ಲೇಖನವು ನಿಮಗೆ ನೆರವಾಗುವುದು.

ಮೊದಲು ಸಮಸ್ಯೆ ಏನೆಂಬದನ್ನು ಗುರುತಿಸೋಣ. ಯಾವಾಗ ಪ್ರಾರ್ಥನೆ ಮಾಡುವುದು ನಿಮಗೆ ಹೆಚ್ಚು ಕಷ್ಟಕರ? ಕೆಳಗೆ ಉತ್ತರ ಬರೆಯಿರಿ.

.....

ಮುಂದಿನ ಹೆಜ್ಜೆಯು ಗುರಿಯನ್ನು ಇಡುವುದಾಗಿದೆ. ನೀವು ಇಡಬಯಸುವ ಗುರಿಯನ್ನು ಕೆಳಗೆ ಗುರುತಿಸಿ ಅಥವಾ ಇನ್ನೊಂದನ್ನು “ಇತರೆ” ಪಕ್ಕದ ಖಾಲಿ ಜಾಗದಲ್ಲಿ ಬರೆಯಿರಿ.

❑ ಹೆಚ್ಚು ಸಲ ಪ್ರಾರ್ಥಿಸಲು ಬಯಸುತ್ತೇನೆ.

❑ ಪ್ರಾರ್ಥನೆಯಲ್ಲಿ ಹೇಳಿದ್ದನ್ನೇ ಹೇಳದಿರಲು ಬಯಸುತ್ತೇನೆ.

❑ ಪ್ರಾರ್ಥನೆಯಲ್ಲಿ ಇನ್ನಷ್ಟು ಮನಸ್ಸು ಬಿಚ್ಚಿ ಮಾತಾಡಲು ನನಗಿಷ್ಟ.

❑ ಇತರೆ .....

“ತಡೆ” ನಿವಾರಣೆ

ನೀವು ಯಾವುದೇ ಸಮಯದಲ್ಲಿ ಪ್ರಾರ್ಥಿಸಸಾಧ್ಯವಿದೆ. ಆದುದರಿಂದ ಪದೇಪದೇ ಮುಕ್ತವಾಗಿ ಪ್ರಾರ್ಥಿಸಬೇಕು. ಆದರೆ ಅನೇಕ ಯುವಜನರು ತಾವು ಹಾಗೆ ಮಾಡುತ್ತಿಲ್ಲವೆಂದು ಹೇಳುತ್ತಾರೆ. ನಿಮಗೂ ಅದೇ ಸಮಸ್ಯೆಯಿರುವಲ್ಲಿ ಅದನ್ನು ಅಷ್ಟಕ್ಕೆ ಬಿಟ್ಟುಬಿಡದೆ ಸರಿಪಡಿಸಲು ಪ್ರಯತ್ನಿಸಿ. ನೀವು ಈಗಾಗಲೇ ಸಮಸ್ಯೆ ಏನೆಂದು ಗುರುತಿಸಿ, ಒಂದು ಗುರಿಯನ್ನಿಟ್ಟಿದ್ದೀರಿ. ಈಗ ನಿಮಗೆ “ತಡೆ” ಆಗಿರುವ ಸಮಸ್ಯೆಯನ್ನು ತೆಗೆದುಹಾಕಲು ಮಾರ್ಗವನ್ನು ಕಂಡುಕೊಳ್ಳಬೇಕಷ್ಟೇ. ನಿಮಗಿರುವ ತಡೆಗಲ್ಲಿನಂಥ ಸಮಸ್ಯೆಗಳನ್ನು ಮತ್ತು ಅವುಗಳನ್ನು ತೆಗೆದುಹಾಕುವ ಮಾರ್ಗಗಳನ್ನು ಪರಿಗಣಿಸಿ.

ತಡೆ: ಅಸಡ್ಡೆ. “ಪುರುಸೊತ್ತೇ ಇಲ್ಲದಷ್ಟು ಕೆಲಸ ಇರುವುದರಿಂದ ಪ್ರಾರ್ಥನೆ ಮಾಡುವ ಬಗ್ಗೆ ನನಗೆ ಅಸಡ್ಡೆ.”—ಪ್ರೀಟೀ, 20 ವರ್ಷ, ಬ್ರಿಟನ್‌.

ನಿವಾರಣೆ: “ನೀವು ನಡಕೊಳ್ಳುವ ರೀತಿಯನ್ನು ಕುರಿತು ಚೆನ್ನಾಗಿ ನೋಡಿಕೊಳ್ಳಿರಿ. ಜ್ಞಾನವಿಲ್ಲದವರಾಗಿರದೆ ಜ್ಞಾನವಂತರಾಗಿರ್ರಿ. ಈ ದಿನಗಳು ಕೆಟ್ಟವುಗಳಾಗಿವೆ; ಆದದರಿಂದ ಕಾಲವನ್ನು ಸುಮ್ಮನೆ ಕಳಕೊಳ್ಳದೆ ಅದನ್ನು ಬೆಲೆಯುಳ್ಳದ್ದೆಂದು ಉಪಯೋಗಿಸಿಕೊಳ್ಳಿರಿ.”​—⁠ಎಫೆಸ 5:15, 16.

ಸಲಹೆ: ಪ್ರತಿದಿನ ಪ್ರಾರ್ಥಿಸಲು ಯಾವ ಸಮಯ ಒಳ್ಳೇದು ಎಂಬುದನ್ನು ಮುಂಚಿತವಾಗಿಯೇ ಆರಿಸಿ. ಒಂದು ಕೆಲಸವನ್ನು ನೆನಪಿನಿಂದ ಮಾಡಲು ಹೇಗೆ ಬರೆದಿಡುತ್ತೇವೋ ಹಾಗೆಯೇ ಪ್ರಾರ್ಥನೆ ಮಾಡುವ ಸಮಯವನ್ನೂ ಬರೆದಿಡಿ. “ಒಂದು ನಿರ್ದಿಷ್ಟ ಸಮಯವನ್ನು ಇಡದಿದ್ದಲ್ಲಿ ನಾನು ಬೇರೆ ವಿಷಯಗಳಲ್ಲೇ ಮುಳುಗಿರುತ್ತೇನೆ” ಎಂದು ಹೇಳುತ್ತಾಳೆ ಜಪಾನಿನ 18 ವರ್ಷದ ಯೋಷಿಕೋ.

ತಡೆ: ಅಪಕರ್ಷಣೆ. “ನಾನು ಏಕಾಗ್ರತೆಯನ್ನು ಕಳಕೊಂಡು, ದೇವರಿಗೆ ಏನು ಹೇಳಬೇಕೋ ಅದನ್ನು ಬಿಟ್ಟು ಬೇರೇನನ್ನೊ ಯೋಚಿಸುತ್ತಿರುತ್ತೇನೆ.”—ಪ್ಯಾಮಲ, 17ವರ್ಷ, ಮೆಕ್ಸಿಕೊ.

ನಿವಾರಣೆ: “ಹೃದಯದಲ್ಲಿ ತುಂಬಿರುವದೇ ಬಾಯಲ್ಲಿ ಹೊರಡುವದು.”​—⁠ಮತ್ತಾಯ 12:34.

ಸಲಹೆ: ನಿಮ್ಮ ಮನಸ್ಸು ಇನ್ನೂ ಅತ್ತಿತ್ತ ಅಲೆದಾಡುತ್ತಿರುವಲ್ಲಿ ನಿಮ್ಮ ಏಕಾಗ್ರತೆಯು ಹೆಚ್ಚುವ ತನಕ ಚಿಕ್ಕ ಚಿಕ್ಕ ಪ್ರಾರ್ಥನೆಗಳನ್ನು ಮಾಡಿರಿ. ಇನ್ನೊಂದು ವಿಧಾನ: ನಿಮಗೆ ಅತಿ ಪ್ರಿಯವಾದ ವಿಷಯಗಳ ಕುರಿತು ಪ್ರಾರ್ಥಿಸಿರಿ. “ಪ್ರಾರ್ಥನೆ ಅಂದರೆ ದೇವರೊಂದಿಗೆ ಮಾಡುವ ಸಂಭಾಷಣೆ. ಈ ನಿಜತ್ವದ ಕುರಿತು ನಾನು ದೊಡ್ಡವಳಾಗುತ್ತಿದ್ದಂತೆ ಹೆಚ್ಚಾಗಿ ಧ್ಯಾನಿಸಿದೆ. ಇದು ನನ್ನನ್ನು ದೇವರೊಂದಿಗೆ ಮನಬಿಚ್ಚಿ ಪ್ರಾರ್ಥಿಸಲು ಪ್ರಚೋದಿಸಿತು” ಎನ್ನುತ್ತಾಳೆ ರಷ್ಯಾದ 14 ವಯಸ್ಸಿನ ಮರ್ಯೀನ.

ತಡೆ: ಹೇಳಿದ್ದನ್ನೇ ಹೇಳುವುದು. “ನಾನು ಪ್ರಾರ್ಥನೆ ಮಾಡುವಾಗ ಹೇಳಿದ್ದನ್ನೇ ಹೇಳುತ್ತಿರುತ್ತೇನೆ.”—ಡೂಎಪ್‌, 17 ವರ್ಷ, ಬೆನಿನ್‌.

ನಿವಾರಣೆ: “ನಿನ್ನ ಕಾರ್ಯಗಳನ್ನೆಲ್ಲಾ ಧ್ಯಾನಿಸುವೆನು; ನಿನ್ನ ಪ್ರವರ್ತನೆಗಳನ್ನು ಸ್ಮರಿಸುವೆನು.”​—⁠ಕೀರ್ತನೆ 77:12.

ಸಲಹೆ: ನಿಮ್ಮ ಪ್ರಾರ್ಥನೆಗಳು ಯಾವಾಗಲೂ ಯಾಂತ್ರಿಕವಾಗಿರುವಂತೆ ತೋರಿದ್ದಲ್ಲಿ ನಿಮ್ಮ ಜೀವನದಲ್ಲಿ ದಿನದಿನವೂ ಸಿಗುತ್ತಿರುವ ಒಂದು ವಿಶಿಷ್ಟ ಆಶೀರ್ವಾದವನ್ನು ಬರೆದಿಟ್ಟುಕೊಳ್ಳಿ. ಅದಕ್ಕಾಗಿ ಯೆಹೋವನಿಗೆ ಕೃತಜ್ಞತೆ ಹೇಳಿ. ಒಂದು ವಾರದ ತನಕ ಹೀಗೆ ಮಾಡಿದರೆ, ಆಗ ನೀವು ಏಳು ಹೊಸ ಹೊಸ ವಿಷಯಗಳ ಕುರಿತು ದೇವರಿಗೆ ಪ್ರಾರ್ಥಿಸಿರುವಿರಿ. ಅಲ್ಲದೆ, ಹೇಳಿದ್ದನ್ನೇ ಹೇಳದಿರುವಿರಿ. ದಿನನಿತ್ಯ ಘಟನೆಗಳ ಕುರಿತೂ ಹೀಗೆಯೇ ಪ್ರಾರ್ಥಿಸಿ. “ನಾನು ಪ್ರಾರ್ಥಿಸುವಾಗ ಆ ದಿನದಲ್ಲಿ ನಡೆದ ಸಂಗತಿಗಳ ಕುರಿತೇ ದೇವರೊಂದಿಗೆ ಮಾತಾಡುತ್ತೇನೆ” ಎನ್ನುತ್ತಾಳೆ ಬ್ರಿಸಿಲ್‌ನ 21 ವರ್ಷದ ಬ್ರೂನೋ. ಅಮೆರಿಕದ 18 ವಯಸ್ಸಿನ ಸೆಮಾಂತ ಕೂಡ ಹೀಗೇ ಮಾಡುತ್ತಾಳೆ. “ಪ್ರತಿದಿನ ನಾನು ನಿನ್ನೆಗಿಂತ ಇಂದು ಭಿನ್ನವಾಗಿದ್ದ ವಿಷಯಗಳನ್ನು ನೆನಪಿಗೆ ತಂದು ಯೆಹೋವನಿಗೆ ಪ್ರಾರ್ಥಿಸಲು ಪ್ರಯತ್ನಿಸುತ್ತೇನೆ. ಇದು ಹೇಳಿದ್ದನ್ನೇ ಹೇಳದಿರಲು ನನಗೆ ಸಹಾಯಮಾಡುತ್ತದೆ.” *

ತಡೆ: ಸಂಶಯ. “ಒಂದು ಸಮಸ್ಯೆ ಕುರಿತು ನಾನು ಶಾಲೆಯಲ್ಲಿ ಪ್ರಾರ್ಥಿಸಿದಾಗ ಏನೂ ಪ್ರಯೋಜನವಾಗಲಿಲ್ಲ. ಸಮಸ್ಯೆಗಳು ಇನ್ನೂ ಜಾಸ್ತಿಯಾದವಷ್ಟೆ. ಯೆಹೋವ ದೇವರು ಹೇಗೂ ಕೇಳುತ್ತಿಲ್ಲ. ಇನ್ನು ಮುಂದೆ ಯಾಕೆ ಪ್ರಾರ್ಥಿಸಬೇಕು ಎಂದು ನೆನಸಿದೆ.”—ಮೀನೋರೀ, 15 ವರ್ಷ, ಜಪಾನ್‌.

ನಿವಾರಣೆ: “ಶೋಧನೆಯನ್ನು . . . ನೀವು . . . ಸಹಿಸುವದಕ್ಕೆ ಶಕ್ತರಾಗುವಂತೆ ಶೋಧನೆಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನು [ಯೆಹೋವ ದೇವರು] ಸಿದ್ಧಮಾಡುವನು.”​—⁠1 ಕೊರಿಂಥ 10:13.

ಸಲಹೆ: ಯೆಹೋವನು ‘ಪ್ರಾರ್ಥನೆಯನ್ನು ಕೇಳುವವನು’ ಎಂಬುದಂತೂ ಸತ್ಯ. (ಕೀರ್ತನೆ 65:2) ಆದುದರಿಂದ ಒಂದು ವಿಷಯದ ಬಗ್ಗೆ ಪ್ರಾರ್ಥಿಸಿದ ಬಳಿಕ ಅದರಲ್ಲಿ ಕೂಡಿರುವ ಸನ್ನಿವೇಶವನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ನೀವು ನಿರೀಕ್ಷಿಸಿದ ಉತ್ತರ ಸಿಗಬೇಕೆಂದು ಕಾಯುವುದಕ್ಕಿಂತಲೂ ಈಗಾಗಲೇ ಸಿಕ್ಕಿರಬಹುದಾದ ಉತ್ತರವನ್ನು ಮನಗಾಣಿರಿ. ನೀವು ಕ್ರೈಸ್ತರಾಗಿದ್ದು ಅಂಥ ಸನ್ನಿವೇಶವನ್ನು ತಾಳಿಕೊಂಡಿರುವುದೇ ನಿಮ್ಮ ಪ್ರಾರ್ಥನೆಗೆ ಯೆಹೋವನು ಉತ್ತರಿಸಿದ್ದಾನೆಂದರ್ಥ. ಏಕೆಂದರೆ, ಸಮಸ್ಯೆಗಳನ್ನು ತೆಗೆದುಹಾಕುವ ಮೂಲಕವಲ್ಲ, ಸಹಿಸಿಕೊಳ್ಳಲು ನಿಮಗೆ ಬಲವನ್ನು ಕೊಡುವ ಮೂಲಕ ಆತನು ನಿಮ್ಮ ಪ್ರಾರ್ಥನೆಗೆ ಉತ್ತರ ಕೊಟ್ಟಿದ್ದಾನೆ.​—⁠ಫಿಲಿಪ್ಪಿ 4:13.

ತಡೆ: ಸಂಕೋಚ. “ಶಾಲೆಯಲ್ಲಿ ಮಧ್ಯಾಹ್ನ ಊಟಕ್ಕೆ ಮುಂಚೆ ನಾನು ಪ್ರಾರ್ಥಿಸುವುದನ್ನು ನನ್ನ ಫ್ರೆಂಡ್ಸ್‌ ಕಂಡರೆ ಏನನ್ನುವರೋ ಅಂತ ನನಗೆ ಸಂಕೋಚ.”—ಹೀಕಾರೂ, 17 ವರ್ಷ, ಜಪಾನ್‌

ನಿವಾರಣೆ: “ಪ್ರತಿಯೊಂದಕ್ಕೂ ಒಂದೊಂದು ಸಮಯವಿದೆ.”—ಪ್ರಸಂಗಿ 3:1, NIBV.

ಸಲಹೆ: ಎದ್ದುಕಾಣದಂತೆ ಮಾಡುವ ಮೌನ ಪ್ರಾರ್ಥನೆ ಒಳ್ಳೇ ಪ್ರತಿಕ್ರಿಯೆಯನ್ನು ತರುತ್ತದಾದರೂ, ನೀವು ನಿಮ್ಮ ಪ್ರಾರ್ಥನೆಯ ಬಹಿರಂಗ ಪ್ರದರ್ಶನವನ್ನು ಮಾಡಬೇಕೆಂದಿಲ್ಲ. ಉದಾಹರಣೆಗೆ, ನಂಬಿಗಸ್ತ ನೆಹೆಮೀಯನು ರಾಜ ಅಹಷ್ವೇರೊಷನ ಮುಂದೆ ಚುಟುಕಾದ ಮೌನ ಪ್ರಾರ್ಥನೆಯನ್ನು ಮಾಡಿದನು. ನೆಹೆಮೀಯನು ಪ್ರಾರ್ಥಿಸುತ್ತಿದ್ದಾನೆಂಬ ಕೊಂಚ ಅರಿವು ಕೂಡ ರಾಜನಿಗಾಗಿರಲಿಲ್ಲ. (ನೆಹೆಮೀಯ 2:1-5) ನೀವು ಕೂಡ ನಿಮ್ಮ ಕಡೆಗೆ ಗಮನಸೆಳೆಯದೇ ಯೆಹೋವನಿಗೆ ಮೌನ ಪ್ರಾರ್ಥನೆಯನ್ನು ಮಾಡಬಲ್ಲಿರಿ.—ಫಿಲಿಪ್ಪಿ 4:5.

ತಡೆ: ಅನರ್ಹ ಭಾವನೆ. “ಯೆಹೋವನಿಗೆ ನನ್ನ ಸಮಸ್ಯೆಗಳು ಈಗಾಗಲೇ ತಿಳಿದಿವೆ. ಅವುಗಳ ಬಗ್ಗೆ ನಾನೇ ಬೇಸತ್ತಿರುವಲ್ಲಿ ಆತನೂ ಬೇಸತ್ತಿರಬೇಕು! ಆತನೊಂದಿಗೆ ಮಾತಾಡಲು ನಾನು ಕೆಲವೊಮ್ಮೆ ಅನರ್ಹನೆಂದು ಭಾವಿಸುತ್ತೇನೆ.”—ಎಲಿಸಬೆತ್‌, 20 ವರ್ಷ, ಐರ್ಲಂಡ್‌.

ನಿವಾರಣೆ: “ನಿಮ್ಮ ಚಿಂತೆಯನ್ನೆಲ್ಲಾ [ದೇವರ] ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ.”​—⁠1 ಪೇತ್ರ 5:7.

ಸಲಹೆ: ವೈಯಕ್ತಿಕ ಅಧ್ಯಯನದ ಯೋಜನೆಯಲ್ಲಿ ಕೆಳಗಿನ ವಚನಗಳ ಮೇಲೆ ರಿಸರ್ಚ್‌ ಮಾಡಿ ಮನನಮಾಡಿರಿ: ಲೂಕ 12:6, 7; ಯೋಹಾನ 6:44; ಇಬ್ರಿಯ 4:16; 6:10; 2 ಪೇತ್ರ 3:9. ಈ ವಚನಗಳು ಯೆಹೋವನು ನೀವು ಮಾತಾಡುವುದನ್ನು ಕೇಳಲು ಬಯಸುತ್ತಾನೆ ಎಂದು ತೋರಿಸುತ್ತವೆ. ನಿಮ್ಮ ಪ್ರಾರ್ಥನೆಯನ್ನು ಆತನು ಕೇಳಲು ನೀವೊಬ್ಬ ಮಹಾನ್‌ ಕ್ರೈಸ್ತರಾಗಿರುವ ಅವಶ್ಯವಿಲ್ಲ. ಚಿಂತೆ, ಕಷ್ಟಗಳನ್ನು ಅನುಭವಿಸಿದ ದಾವೀದನು ಸಹ, “ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ; ಕುಗ್ಗಿಹೋದವರನ್ನು ಉದ್ಧಾರಮಾಡುತ್ತಾನೆ” ಎಂಬ ಭರವಸೆಯನ್ನು ವ್ಯಕ್ತಪಡಿಸಿದನು. *​—⁠ಕೀರ್ತನೆ 34:18.

ಯೆಹೋವನು ಸ್ವತಃ ನಿಮ್ಮ ಪ್ರಾರ್ಥನೆಗೆ ಕಿವಿಗೊಡುತ್ತಾನೆಂಬ ನಿಜತ್ವವು ನಿಮ್ಮಲ್ಲಿ ಆತನಿಗಿರುವ ಆಸಕ್ತಿಯನ್ನು ತೋರಿಸುತ್ತದೆ. ಇಟಲಿಯ 17 ವಯಸ್ಸಿನ ನೀಕೋಲ್‌ ಹೇಳುವುದು: “ಪ್ರಾರ್ಥನೆಗೆ ಕಿವಿಗೊಡುವ ವಿಷಯವನ್ನು ಯೆಹೋವನು ದೇವದೂತರಿಗೆ ವಹಿಸಿರುವುದಿಲ್ಲ. ಆತನು ವೈಯಕ್ತಿಕವಾಗಿ ನಮ್ಮ ಪ್ರಾರ್ಥನೆಗಳನ್ನು ಕೇಳುವುದರಿಂದ ಆತನದನ್ನು ಮಹತ್ವವೆಂದು ಎಣಿಸುತ್ತಾನೆಂಬುದು ಖಂಡಿತ.” (g 11/08)

“ಯುವ ಜನರು ಪ್ರಶ್ನಿಸುವುದು . . . ” ಲೇಖನಮಾಲೆಯ ಹೆಚ್ಚಿನ ಲೇಖನಗಳನ್ನು www.watchtower.org/ype ವೆಬ್‌ಸೈಟ್‌ನಲ್ಲಿ ಕಂಡುಕೊಳ್ಳಬಹುದು

[ಪಾದಟಿಪ್ಪಣಿಗಳು]

^ ನಮಗೆ ಕಿವಿಗೊಡಲು ಸೃಷ್ಟಿಕರ್ತನಿಗೆ ಧ್ವನಿ ತರಂಗಗಳ ಅಗತ್ಯವಿಲ್ಲ. ಆದುದರಿಂದ ನಮ್ಮ ಮನದಾಳದ ಮೌನ ಮಾತುಗಳನ್ನೂ ಆತನು ಕೇಳಿಸಿಕೊಳ್ಳಬಲ್ಲನು.—ಕೀರ್ತನೆ 19:14.

^ ಪುಟ 10ರಲ್ಲಿರುವ “ಬೈಬಲಿನ ದೃಷ್ಟಿಕೋನ: ಆರಾಧ್ಯ ವಸ್ತುಗಳ ಬಗ್ಗೆ ದೇವರ ನೋಟವೇನು?” ಎಂಬ ಲೇಖನ ನೋಡಿ.

^ ನಿಮ್ಮ ಗಂಭೀರ ಪಾಪದಿಂದಾಗಿ ಪ್ರಾರ್ಥನೆಗೆ ತಡೆಯಾಗಿದೆ ಎಂದು ನೀವು ನೆನಸುವುದಾದರೆ ನಿಮ್ಮ ಹೆತ್ತವರೊಂದಿಗೆ ಅವಶ್ಯವಾಗಿ ಮಾತಾಡಿ. ಅಲ್ಲದೆ, ‘ಸಭೆಯ ಹಿರಿಯರನ್ನು [ಸಹಾಯಕ್ಕಾಗಿ] ಕರೇಕಳುಹಿಸಿ.’ (ಯಾಕೋಬ 5:14) ದೇವರೊಂದಿಗಿನ ನಿಮ್ಮ ಸಂಬಂಧವನ್ನು ಪುನಃ ಗಳಿಸಲು ಹಿರಿಯರು ನಿಮಗೆ ನೆರವಾಗಬಲ್ಲರು.

ಯೋಚಿಸಿ

ಯೆಹೋವನು ಪ್ರಾಮುಖ್ಯವೆಂದೆಣಿಸುವ ಯಾವ ಕೆಲವು ವಿಷಯಗಳ ಕುರಿತು ನೀವು ಪ್ರಾರ್ಥಿಸಬಹುದು?

◼ ಇತರರಿಗೆ ಸಂಬಂಧಿಸಿದ ಯಾವ ವಿಷಯಗಳ ಬಗ್ಗೆ ನೀವು ಯೆಹೋವನಿಗೆ ಪ್ರಾರ್ಥಿಸಬಲ್ಲಿರಿ?

[ಪುಟ 26ರಲ್ಲಿರುವ ಚೌಕ/ಚಿತ್ರಗಳು]

ನಿಮ್ಮ ಸಮಪ್ರಾಯದವರು ಹೇಳುವುದು. . .

“ಪ್ರಾರ್ಥನೆಯು ಒಂದು ಗುಟ್ಟಾದ ಡೈರಿಯಂತಿದ್ದು, ಕೇವಲ ನಿಮಗೆ ಮತ್ತು ಯೆಹೋವನಿಗೆ ಮಾತ್ರ ಅದರಲ್ಲಿರುವುದು ತಿಳಿದಿದೆ.”—ಒಲಾಯಿಂಕ, ನೈಜೀರಿಯ.

“ನಿಮಗೊಬ್ಬ ಆಪ್ತ ಮಿತ್ರನಿದ್ದಾನೆಂದು ನೆನಸಿ. ನೀವು ಅವನಿಗೆ ಅನೇಕ ಗಿಫ್ಟ್‌ಗಳನ್ನು ಕೊಟ್ಟಿದ್ದೀರಿ. ಇದ್ದಕ್ಕಿದ್ದ ಹಾಗೆ ಒಂದು ದಿನ ಅವನು ನಿಮ್ಮೊಂದಿಗೆ ಮಾತೇ ನಿಲ್ಲಿಸಿಬಿಡುತ್ತಾನೆ. ಆಗ ನಿಮಗೆ ಹೇಗನಿಸುತ್ತದೆ? ನಾವು ಯೆಹೋವ ದೇವರೊಂದಿಗೆ ಪ್ರಾರ್ಥಿಸುವುದನ್ನು ನಿಲ್ಲಿಸಿದರೆ ಆತನಿಗೂ ಹಾಗೆಯೇ ಅನಿಸುತ್ತದೆ.”—ಚಿಂಟ, ಆಸ್ಟ್ರೇಲಿಯ.

“ನನ್ನ ಭಾವನೆಗಳನ್ನು ವ್ಯಕ್ತಗೊಳಿಸುವುದು ತಪ್ಪೆಂದು ನಾನು ಯಾವಾಗಲೂ ನೆನಸಿದ್ದೆ. ನಮ್ಮ ಸುಖದುಃಖಗಳ ಭಾವನೆಗಳನ್ನು ಯೆಹೋವನಿಗೆ ವ್ಯಕ್ತಪಡಿಸುವುದರಲ್ಲಿ ಏನೂ ತಪ್ಪಿಲ್ಲ ಎಂಬುದನ್ನು ಪ್ರಾರ್ಥನೆಮಾಡುವ ಸುಯೋಗದಿಂದ ನಾನು ಕಲಿತೆ. ಈಗ ನಾನು ನನ್ನ ಭಾವನೆಗಳನ್ನು ಹೆಚ್ಚು ಉತ್ತಮವಾಗಿ ಹಾಗೂ ಪ್ರಯೋಜನಕರವಾಗಿ ತಿಳಿಸಶಕ್ತಳಾಗಿದ್ದೇನೆ.”—ಆ್ಯಂಬರ್‌, ಅಮೆರಿಕ.

[ಪುಟ 27ರಲ್ಲಿರುವ ಚಿತ್ರ]

ಪ್ರಾರ್ಥನೆಗಿರುವ ತಡೆಯನ್ನು ನಿವಾರಿಸಲು ದೇವರ ವಾಕ್ಯದಲ್ಲಿರುವ ಕೀಲಿಕೈಯನ್ನು ಉಪಯೋಗಿಸಿ