ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನನ್ನ ಫ್ರೆಂಡ್‌ನ ತಪ್ಪನ್ನು ತಿಳಿಸಬೇಕೋ?

ನನ್ನ ಫ್ರೆಂಡ್‌ನ ತಪ್ಪನ್ನು ತಿಳಿಸಬೇಕೋ?

ಯುವ ಜನರು ಪ್ರಶ್ನಿಸುವುದು

ನನ್ನ ಫ್ರೆಂಡ್‌ನ ತಪ್ಪನ್ನು ತಿಳಿಸಬೇಕೋ?

“ಅದಂತೂ ತುಂಬಾ ಕಷ್ಟವಾಗಿತ್ತು. ಏಕೆಂದರೆ ಅವನು ನನ್ನ ಆಪ್ತಮಿತ್ರನಾಗಿದ್ದ.”—ಜೇಮ್ಸ್‌. *

“ಪರಿಸ್ಥಿತಿಯು ತುಂಬಾ ಬಿಗುವಾಗಿತ್ತು. ನನ್ನ ಫ್ರೆಂಡ್ಸ್‌ ನನ್ನೊಂದಿಗೆ ಅಪರಿಚಿತಳೋ ಎಂಬಂತೆ ವರ್ತಿಸುತ್ತಿದ್ದರು. ಏಕೆಂದರೆ ನನ್ನ ಗೆಳತಿಯ ತಪ್ಪನ್ನು ನಾನು ತಿಳಿಸಿದ್ದೆ.”—ಆ್ಯನ್‌.

“ಸಹೋದರನಿಗಿಂತಲೂ ಹತ್ತಿರ ಹೊಂದಿಕೊಳ್ಳುವ ಮಿತ್ರನುಂಟು” ಎಂದು ಹೇಳುತ್ತದೆ ಬೈಬಲ್‌. (ಜ್ಞಾನೋಕ್ತಿ 18:24) ನಿಮಗೆ ಅಂಥ ಮಿತ್ರರೊಬ್ಬರಿದ್ದಾರೋ? ಹಾಗಿರುವಲ್ಲಿ ನಿಮಗೊಂದು ಬೆಲೆಯುಳ್ಳ ವಸ್ತುವು ದೊರೆತಿದೆ ನಿಶ್ಚಯ.

ಆದರೆ ಕ್ರೈಸ್ತನಾಗಿರುವ ಒಬ್ಬ ಗೆಳೆಯನು ಯಾವುದಾದರೊಂದು ತಪ್ಪನ್ನು ಮಾಡಿದ್ದಲ್ಲಿ ಆಗೇನು? ಉದಾಹರಣೆಗೆ, ಅವನು ಅನೈತಿಕತೆ, ಧೂಮಪಾನ, ಮದ್ಯಸೇವನೆ, ಅಮಲೌಷಧಗಳ ದುರುಪಯೋಗ ಮಾಡಿದ್ದಲ್ಲಿ ಇಲ್ಲವೆ ಇನ್ನಿತರ ಘೋರ ತಪ್ಪನ್ನು ಮಾಡಿದ್ದಲ್ಲಿ ಆಗೇನು? (1 ಕೊರಿಂಥ 6:9, 10; 1 ತಿಮೊಥೆಯ 1:9, 10) ನೀವೇನು ಮಾಡಬೇಕು—ಮಿತ್ರನಿಗೆ ಅವನ ತಪ್ಪನ್ನು ತಿಳಿಸಬೇಕೋ? ನಿಮ್ಮ ಹೆತ್ತವರಿಗೆ ತಿಳಿಸಬೇಕೋ? ನಿಮ್ಮ ಫ್ರೆಂಡ್‌ನ ಹೆತ್ತವರಿಗೆ ಹೇಳಬೇಕೋ? ಸಭಾ ಹಿರಿಯರಿಗೆ ವರದಿಸಬೇಕೋ? * ಒಂದುವೇಳೆ ನೀವು ಹಾಗೆ ಮಾಡಿದ್ದಲ್ಲಿ ನಿಮ್ಮ ಗೆಳೆತನಕ್ಕೆ ಏನಾಗಬಹುದು? ಯಾರಿಗೂ ಏನೂ ಬಾಯಿಬಿಡದೆ ಸುಮ್ಮನಿರುವುದು ಸರಿಯೋ?

ಹೇಳಬೇಕೋ, ಬೇಡವೋ?

ಎಲ್ಲರೂ ತಪ್ಪು ಮಾಡುತ್ತಾರೆ. ಆದ್ದರಿಂದ ಬೈಬಲ್‌ ಹೇಳುವುದು: “ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ.” (ರೋಮಾಪುರ 3:23) ಆದರೆ ಕೆಲವರು ಗಂಭೀರ ಪಾಪಗಳನ್ನು ಮಾಡುತ್ತಾರೆ. ಇತರರು ಸಮಸ್ಯೆಗಳ ಪ್ರಪಾತಕ್ಕೆ ನಡೆಸಬಲ್ಲ “ದೋಷದಲ್ಲಿ ಸಿಕ್ಕಿ”ಕೊಳ್ಳುತ್ತಾರೆ. ಇದನ್ನು ತಿದ್ದದೇ ಹೋದಲ್ಲಿ ಮುಂದೆ ಅಪಾಯ ಖಂಡಿತ. (ಗಲಾತ್ಯ 6:1) ಕೆಳಗಿನ ನಿಜ ಜೀವನ ಉದಾಹರಣೆಯನ್ನು ಪರಿಗಣಿಸಿ.

ಲೈಂಗಿಕ ಭಾವನೆಗಳನ್ನು ಕೆರಳಿಸುವ ಫೋಟೋಗಳು ಮತ್ತು ಸೆಕ್ಸನ್ನು ಸವಿವರವಾಗಿ ವರ್ಣಿಸುವ ಭಾವಗೀತೆಗಳು ಇರುವ ಒಂದು ವೆಬ್‌ಪೇಜನ್ನು ತನ್ನ ಕ್ರೈಸ್ತ ಸ್ನೇಹಿತೆ ಇಟ್ಟಿರುವುದನ್ನು ಸೂಸನ್‌ ಎಂಬ ಕ್ರೈಸ್ತ ಯುವತಿ ಕಂಡುಕೊಂಡಳು.

ಪರಿಗಣಿಸಿ: ನೀವು ಸೂಸನ್‌ ಆಗಿದ್ದರೆ ಏನು ಮಾಡುತ್ತಿದ್ದಿರಿ? ಆ ಸನ್ನಿವೇಶದ ಕುರಿತು ಏನಾದರೂ ಮಾಡುತ್ತಿದ್ದಿರೋ? ಅಥವಾ ಅದು ನಿಮ್ಮ ಗೆಳತಿಯ ಸ್ವಂತ ನಿರ್ಣಯ, ಅದರ ಗೊಡವೆ ನನಗೇಕೆ ಎಂದು ಸುಮ್ಮನಿರುತ್ತಿದ್ದಿರೋ? ಸೂಸನ್‌ ನಿಮ್ಮ ಬಳಿಗೆ ಬಂದು ಸಲಹೆ ಕೇಳುವುದಾದರೆ ನೀವೇನು ಹೇಳುವಿರಿ?

.....

ಸೂಸನ್‌ ಏನು ಮಾಡಿದಳು? ಆ ಸನ್ನಿವೇಶದ ಕುರಿತು ತುಸು ಯೋಚಿಸಿದ ಬಳಿಕ ಅದನ್ನು ತನ್ನ ಫ್ರೆಂಡ್‌ನ ಹೆತ್ತವರಿಗೆ ತಿಳಿಸಲು ನಿರ್ಣಯಿಸಿದಳು. “ಮೊದಮೊದಲು ನಾನು ತುಂಬಾ ಹೆದರಿದ್ದೆ. ಏಕೆಂದರೆ ಅವಳ ಹೆತ್ತವರೂ ನನ್ನ ಒಳ್ಳೇ ಫ್ರೆಂಡ್ಸ್‌ ಆಗಿದ್ದರು. ಹೇಳುವಾಗ ನನಗೆಷ್ಟು ಕಷ್ಟವಾಗಿತ್ತೆಂದರೆ ನಾನು ಅತ್ತೇ ಬಿಟ್ಟೆ” ಎಂದಳವಳು.

ನೀವೇನನ್ನುತ್ತೀರಿ? ಸೂಸನ್‌ ಮಾಡಿದ್ದು ಸರಿಯೋ? ಅಥವಾ ಅವಳು ಯಾರಿಗೂ ಬಾಯಿಬಿಡದೆ ಸುಮ್ಮನಿರಬೇಕಿತ್ತೋ?

ತರ್ಕಬದ್ಧವಾಗಿ ಯೋಚಿಸಲು ಈ ಕೆಳಗಿನ ಕೆಲವು ಅಂಶಗಳು ಸಹಾಯಮಾಡುತ್ತವೆ:

ನೀವು ನಿಜ ಸ್ನೇಹಿತರಾಗಿದ್ದರೆ ಏನು ಮಾಡುತ್ತಿದ್ದಿರಿ? “ಮಿತ್ರನ ಪ್ರೀತಿಯು ನಿರಂತರ; ಸಹೋದರನ ಜನ್ಮವು ಆಪತ್ತಿನಲ್ಲಿ ಸಾರ್ಥಕ” ಎಂದು ಜ್ಞಾನೋಕ್ತಿ 17:17 ಹೇಳುತ್ತದೆ. ಬೈಬಲ್‌ ಮೂಲತತ್ತ್ವಗಳನ್ನು ಉಲ್ಲಂಘಿಸುವ ಮಾರ್ಗವನ್ನು ಒಬ್ಬನು ಬೆನ್ನಟ್ಟುವಲ್ಲಿ ಅವನು ತಿಳಿದೋ ತಿಳಿಯದೆಯೋ ‘ಆಪತ್ತಿನಲ್ಲಿದ್ದಾನೆ.’ ಚಿಕ್ಕ ಪುಟ್ಟ ವಿಷಯಗಳನ್ನು ದೊಡ್ಡದು ಮಾಡುವ ಮೂಲಕ ‘ಧರ್ಮವನ್ನು ಅತಿಯಾಗಿ ಆಚರಿಸುವುದು’ ತಪ್ಪಾಗಿರುವುದಾದರೂ ನಿಜ ಮಿತ್ರನೊಬ್ಬನು ತನ್ನ ಫ್ರೆಂಡಿನ ಅಕ್ರೈಸ್ತ ನಡತೆಯನ್ನು ಕಂಡು ಸುಮ್ಮನಿರನು. (ಪ್ರಸಂಗಿ 7:16) ಅಂಥ ಸನ್ನಿವೇಶವನ್ನು ದುರ್ಲಕ್ಷಿಸುವುದಕ್ಕೆ ಸಾಧ್ಯವೇ ಇಲ್ಲ.​—⁠ಯಾಜಕಕಾಂಡ 5:1.

ಪಾತ್ರಗಳು ಅದಲು ಬದಲಾದಲ್ಲಿ? ನಿಮ್ಮನ್ನೇ ಕೇಳಿ: ‘ನಾನು ಹೆತ್ತವನಾಗಿದ್ದರೆ ಮತ್ತು ನನ್ನ ಮಕ್ಕಳು ಲೈಂಗಿಕ ಭಾವನೆಗಳನ್ನು ಕೆರಳಿಸುವ ವಿಷಯಗಳಿರುವ ವೆಬ್‌ಪೇಜನ್ನು ಹೊಂದಿರುವುದಾದರೆ, ಅದನ್ನು ಯಾರಾದರೂ ನನಗೆ ತಿಳಿಸಬೇಕೆಂದು ನಾನು ಬಯಸುವುದಿಲ್ಲವೇ? ಅದನ್ನು ತಿಳಿದಿರುವ ನನ್ನ ಮಕ್ಕಳ ಸ್ನೇಹಿತರು ನನಗದನ್ನು ತಿಳಿಸದೇ ಇದ್ದಲ್ಲಿ ನನಗೆ ಹೇಗನಿಸುತ್ತಿತ್ತು?’

ದೇವರ ನೀತಿಯ ಮಟ್ಟಗಳ ಕುರಿತೇನು? ಈ ಸಂದರ್ಭದಲ್ಲಿ ನೀವೇನು ಮಾಡಬೇಕು? ಬಾಯಿಬಿಡದೆ ಮೌನವಾಗಿರಬೇಕೋ? ಖಂಡಿತ ಇಲ್ಲ, ಏಕೆಂದರೆ ಇದು ಸುಮ್ಮನಿರುವ ಸಮಯವಲ್ಲ. ಬೈಬಲಿನಲ್ಲಿ ಕೊಡಲಾದ ದೇವರ ನೈತಿಕ ನಿಯಮಗಳನ್ನು ನೀವು ಅನುಸರಿಸಬೇಕು. ಯೋಗ್ಯ ವಿಷಯಗಳನ್ನು ಮಾಡಲು ನೀವು ದೃಢನಿಲ್ಲುವಾಗ ನಿಮ್ಮ ನಿರ್ಮಾಣಿಕನ ಹೃದಯವನ್ನು ಹರ್ಷಗೊಳಿಸುತ್ತೀರಿ. (ಜ್ಞಾನೋಕ್ತಿ 27:11) ಮಾತ್ರವಲ್ಲ ನಿಮ್ಮ ಸ್ನೇಹಿತನ ಹಿತಕ್ಕಾಗಿ ಸರಿಯಾದದ್ದನ್ನೇ ಮಾಡಿರುವಿರಿ ಎಂಬ ಸಂತೃಪ್ತಿ ನಿಮಗಿರುವುದು.​—⁠ಯೆಹೆಜ್ಕೇಲ 33:8.

ಮಾತಾಡುವ ಸಮಯ”

“ಸುಮ್ಮನಿರುವ ಸಮಯ, ಮಾತಾಡುವ ಸಮಯ” ಉಂಟು ಎಂದು ಬೈಬಲ್‌ ತಿಳಿಸುತ್ತದೆ. (ಪ್ರಸಂಗಿ 3:7) ಒಂದು ನಿರ್ದಿಷ್ಟ ಸಂದರ್ಭದಲ್ಲಿ ಯಾವ ಮಾರ್ಗವನ್ನು ಅನುಸರಿಸಬೇಕೆಂದು ಚಿಕ್ಕ ಮಕ್ಕಳಿಗೆ ಹೆಚ್ಚಾಗಿ ತಿಳಿಯಲಾರದು. ಸಂಗಡಿಗನೊಬ್ಬನು ತಪ್ಪು ಮಾಡಿದಾಗ ಅವರು ತರ್ಕಿಸುವುದು: ‘ನನ್ನ ಸ್ನೇಹಿತನನ್ನು ತೊಂದರೆಗೆ ಒಳಪಡಿಸಲು ನಾನು ಬಯಸಲಾರೆ’ ಅಥವಾ ‘ನನ್ನ ಫ್ರೆಂಡನ್ನು ಕೋಪಗೊಳಿಸಲು ನನಗಿಷ್ಟವಿಲ್ಲ’. ಇವೆರಡೇ ಕಾರಣಗಳನ್ನು ಪರಿಗಣಿಸುವುದಾದರೆ ಇದು “ಸುಮ್ಮನಿರುವ ಸಮಯ” ಎಂದು ನೀವು ನೆನಸಬಹುದು.

ಆದರೂ ನೀವು ದೊಡ್ಡವರಾದಾಗ ಅಂಥ ವಿಷಯಗಳನ್ನು ಬಲಿತ ದೃಷ್ಟಿಯಿಂದ ನೋಡುತ್ತೀರಿ. ನಿಮ್ಮ ಮಿತ್ರ ಸಮಸ್ಯೆಯಲ್ಲಿ ಬಿದ್ದಿದ್ದಾನೆ ಮತ್ತು ಅವನಿಗೆ ಸಹಾಯ ಬೇಕಾಗಿದೆ ಎಂದು ನಿಮಗೆ ತಿಳಿದಿದೆ. ಪ್ರಾಯಶಃ ಆ ಸಹಾಯವನ್ನು ನೀವೇ ಕೊಡಬಲ್ಲಿರಿ. ನಿಮ್ಮ ಸ್ನೇಹಿತರೊಬ್ಬರು ಬೈಬಲ್‌ ಮೂಲತತ್ತ್ವವನ್ನು ಉಲ್ಲಂಘಿಸಿದ್ದಾರೆಂದು ನಿಮಗೆ ತಿಳಿದುಬಂದರೆ ನೀವು ಯಾವ ನಿರ್ದಿಷ್ಟ ಸಹಾಯವನ್ನು ಅವರಿಗೆ ನೀಡಬಲ್ಲಿರಿ?

ಮೊದಲನೆದಾಗಿ, ನೀವು ಕೇಳಿಸಿಕೊಂಡ ಸುದ್ದಿಯು ಸತ್ಯವೋ ಅಲ್ಲವೋ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಅದು ಬರೇ ಗಾಳಿಸುದ್ದಿ ಆಗಿರಲೂಬಹುದು. (ಜ್ಞಾನೋಕ್ತಿ 14:15) ಹದಿಹರೆಯದ ಕ್ಯಾಟಿ ಎಂಬವಳು ಜ್ಞಾಪಿಸಿಕೊಳ್ಳುವುದು: “ನನ್ನ ಗೆಳತಿಯೊಬ್ಬಳು ನನ್ನ ಬಗ್ಗೆ ಸುಳ್ಳು ಆರೋಪಗಳನ್ನು ಹರಡಿಸತೊಡಗಿದಳು. ನನ್ನ ಆಪ್ತರು ಸಹ ಅವಳು ಹೇಳಿದ್ದು ಸತ್ಯವೆಂದು ನೆನಸಿದರು. ಇನ್ನು ಮುಂದೆ ನನ್ನನ್ನು ಯಾರೂ ನಂಬುವುದಿಲ್ಲವೇನೋ ಎಂದು ನಾನು ಹೆದರಿಹೋದೆ!” ಯೇಸುವಿನ ಕುರಿತು ಬೈಬಲ್‌ ಮುಂತಿಳಿಸಿದ್ದು: “ಕಿವಿಗೆ ಬಿದ್ದಂತೆ [ಆತನು] ನಿರ್ಣಯಿಸುವದಿಲ್ಲ” ಅಥವಾ ಕಂಟೆಂಪರರಿ ಇಂಗ್ಲಿಷ್‌ ವರ್ಷನ್‌ ತಿಳಿಸುವಂತೆ “ಗಾಳಿಸುದ್ದಿಗಳಿಗೆ ಆತನು ಕಿವಿಗೊಡುವದಿಲ್ಲ.” (ಯೆಶಾಯ 11:3) ನಮಗೆ ಪಾಠ? ನಿಮ್ಮ ಕಿವಿಗೆ ಬಿದ್ದ ಸುದ್ದಿಯೆಲ್ಲವೂ ಸತ್ಯವೆಂದು ದುಡುಕಿ ನಂಬಬೇಡಿ. ಸತ್ಯಾಂಶ ಏನೆಂದು ತಿಳಿಯಲು ಪ್ರಯತ್ನಿಸಿ. ಕೆಳಗಿನ ನಿಜಜೀವನ ಸನ್ನಿವೇಶ ಒಂದನ್ನು ಪರಿಗಣಿಸಿ.

ಈ ಲೇಖನದ ಆರಂಭದಲ್ಲಿ ತಿಳಿಸಲಾದ ಜೇಮ್ಸ್‌ ಎಂಬವನು ತನ್ನ ಆಪ್ತಮಿತ್ರನು ಪಾರ್ಟಿಯೊಂದರಲ್ಲಿ ಡ್ರಗ್ಸ್‌ ಬಳಸಿದನೆಂಬ ಸುದ್ದಿ ಕೇಳಿದನು.

ಯೋಚಿಸಿ: ನೀವು ಜೇಮ್ಸ್‌ನ ಸ್ಥಾನದಲ್ಲಿರುತ್ತಿದ್ದರೆ ಏನು ಮಾಡುತ್ತಿದ್ದಿರಿ? ನೀವು ಕೇಳಿಸಿಕೊಂಡ ಸುದ್ದಿ ಸತ್ಯ ಎಂದು ಹೇಗೆ ಖಾತ್ರಿ ಮಾಡಿಕೊಳ್ಳುತ್ತಿದ್ದಿರಿ?

.....

ಜೇಮ್ಸ್‌ ಏನು ಮಾಡಿದನು? ಮೊದಮೊದಲು ಜೇಮ್ಸ್‌ ತನ್ನ ಕಿವಿಗೆ ಯಾವ ಸುದ್ದಿಯೂ ಬೀಳಲಿಲ್ಲ ಮತ್ತು ತನಗೇನೂ ತಿಳಿದಿಲ್ಲ ಎಂಬಂತೆ ನಟಿಸಿದನು. ಆದರೆ ಆಮೇಲೆ ಅವನಂದದ್ದು: “ಆಗ ನನ್ನ ಮನಸ್ಸಾಕ್ಷಿ ನನ್ನನ್ನು ಬಾಧಿಸಿತು. ಆ ವಿಷಯದ ಕುರಿತು ನನ್ನ ಮಿತ್ರನೊಂದಿಗೆ ಮಾತಾಡಿಯೇ ಬಿಡಬೇಕೆಂದು ನಿಶ್ಚೈಸಿದೆ.”

ನೀವೇನನ್ನುತ್ತೀರಿ? ಅಕ್ರೈಸ್ತ ನಡತೆಯವನು ಎಂದು ಸುದ್ದಿಯಾದ ವ್ಯಕ್ತಿಯೊಂದಿಗೆ ಮೊದಲಾಗಿ ಮಾತಾಡಿ ನೋಡುವುದರಿಂದ ಯಾವ ಪ್ರಯೋಜನಗಳಿವೆ?

.....

ಆ ವ್ಯಕ್ತಿಯೊಂದಿಗೆ ಮಾತಾಡುವುದು ನಿಮಗೆ ತುಂಬಾ ಕಷ್ಟವೆನಿಸಿದರೆ, ನೀವು ಬೇರೇನನ್ನು ಮಾಡಬಹುದು?

.....

ತಾನು ಪಾರ್ಟಿಯೊಂದರಲ್ಲಿ ನಿಜವಾಗಿ ಡ್ರಗ್‌ ಸೇವಿಸಿದ್ದೆನೆಂದು ಜೇಮ್ಸ್‌ನ ಮಿತ್ರನು ಒಪ್ಪಿಕೊಂಡನು. ಆದರೆ ಅದರ ಬಗ್ಗೆ ಯಾರಿಗೂ ತಿಳಿಸಬಾರದೆಂದು ಅವನು ಜೇಮ್ಸ್‌ನೊಂದಿಗೆ ಅಂಗಲಾಚಿದ. ಆದರೆ ಯಾವುದು ಸರಿಯೊ ಅದನ್ನು ಮಾಡಲು ಜೇಮ್ಸ್‌ ಬಯಸಿದನು. ತನ್ನ ಮಿತ್ರನು ಕೂಡ ಸರಿಯಾದದ್ದನ್ನೇ ಮಾಡುವಂತೆ ಜೇಮ್ಸ್‌ನ ಅಪೇಕ್ಷೆಯಾಗಿತ್ತು. ಆದ್ದರಿಂದ ತನ್ನ ಮಿತ್ರನೇ ಆ ವಿಷಯವನ್ನು ಸಭೆಯ ಹಿರಿಯರಿಗೆ ವರದಿ ಮಾಡುವಂತೆ ಒಂದು ವಾರ ಟೈಮ್‌ ಕೊಟ್ಟನು. ಹಾಗೆ ಮಾಡದಿದ್ದಲ್ಲಿ ತಾನೇ ಅದನ್ನು ಹಿರಿಯರಿಗೆ ತಿಳಿಸುವೆನೆಂದು ಜೇಮ್ಸ್‌ ಅಂದನು.

ಜೇಮ್ಸ್‌ ಮಾಡಿದ್ದು ಸರಿಯೆಂದು ನೀವು ನೆನಸುತ್ತೀರೋ? ಯಾಕೆ ಸರಿ ಅಥವಾ ಯಾಕೆ ಸರಿಯಲ್ಲವೆಂದು ಕೆಳಗೆ ಬರೆಯಿರಿ.

.....

ಜೇಮ್ಸ್‌ನ ಫ್ರೆಂಡ್‌ ತನ್ನ ತಪ್ಪನ್ನು ಹಿರಿಯರಿಗೆ ತಿಳಿಸಲಿಲ್ಲ. ಆದ್ದರಿಂದ ಜೇಮ್ಸ್‌ ಅದನ್ನು ಹಿರಿಯರಿಗೆ ತಿಳಿಸಿದನು. ಸ್ವಲ್ಪ ಸಮಯದಲ್ಲಿ ಅವನ ಫ್ರೆಂಡ್‌ಗೆ ತನ್ನ ತಪ್ಪಿನ ಅರಿವಾಯಿತು. ಪಶ್ಚಾತ್ತಾಪಪಡುವ ಮತ್ತು ಯೆಹೋವನೊಂದಿಗೆ ಶುದ್ಧಸಂಬಂಧವನ್ನು ಪುನಃಸ್ಥಾಪಿಸುವ ಅಗತ್ಯವನ್ನು ಮನಗಾಣುವಂತೆ ಹಿರಿಯರು ಅವನಿಗೆ ಸಹಾಯನೀಡಿದರು.

ಚಾಡಿಕೋರರೋ?

ಆದರೂ ನೀವು ಕೇಳಬಹುದು: ‘ನನ್ನ ಮಿತ್ರನ ತಪ್ಪನ್ನು ಬೇರೆಯವರಿಗೆ ಹೇಳಿದ್ದಲ್ಲಿ ನಾನು ಚಾಡಿಕೋರನಾಗುವುದಿಲ್ಲವೋ? ನನಗೇನೂ ಗೊತ್ತಿಲ್ಲ ಎಂಬಂತೆ ನಟಿಸುವುದು ಬಹುಸುಲಭವಲ್ಲವೇ?’ ಅಂಥ ಸನ್ನಿವೇಶದಲ್ಲಿ ನೀವು ಇರುವುದಾದರೆ ಏನು ಮಾಡಬಲ್ಲಿರಿ?

ಒಂದನೇದಾಗಿ, ಕೆಲಸವು ಸುಲಭವಾಗಿದ್ದರೂ ಅದು ಯಾವಾಗಲೂ ಪ್ರೀತಿಪರವೆಂದು ಹೇಳಸಾಧ್ಯವಿಲ್ಲ. ಅದೇ ರೀತಿ ಪ್ರೀತಿಪರ ಕೆಲಸವನ್ನು ಮಾಡುವುದು ಕೂಡಾ ಯಾವಾಗಲೂ ಸುಲಭವಲ್ಲ. ಆಪ್ತ ಮಿತ್ರನ ತಪ್ಪನ್ನು ವರದಿಸುವುದಕ್ಕೆ ಧೈರ್ಯವು ಬೇಕು. ಆ ವಿಷಯದ ಕುರಿತು ಪ್ರಾರ್ಥನೆಯಲ್ಲಿ ದೇವರ ಸಹಾಯವನ್ನು ಏಕೆ ಕೋರಬಾರದು? ಬೇಕಾದ ವಿವೇಕ ಮತ್ತು ಧೈರ್ಯಕ್ಕಾಗಿ ಬೇಡಿಕೊಳ್ಳಿ. ಆತನು ಖಂಡಿತ ಸಹಾಯಮಾಡುವನು.—ಫಿಲಿಪ್ಪಿ 4:6.

ಎರಡನೇದಾಗಿ, ತಪ್ಪನ್ನು ವರದಿಸುವುದರಿಂದ ನಿಮ್ಮ ಮಿತ್ರನಿಗೆ ಹೇಗೆ ಪ್ರಯೋಜನವಾದೀತೆಂದು ಯೋಚಿಸಿರಿ. ದೃಷ್ಟಾಂತಕ್ಕೆ, ಗುಡ್ಡದ ಕಡಿದಾದ ಪ್ರದೇಶದಲ್ಲಿ ನೀವು ನಿಮ್ಮ ಮಿತ್ರನೊಂದಿಗೆ ನಡೆಯುತ್ತಿದ್ದೀರೆಂದು ನೆನಸಿ. ಫಕ್ಕನೆ ಅವನು ಕಾಲೆಡವಿ ಕೆಳಗೆ ಬೀಳುತ್ತಾನೆ. ಮೇಲೆ ಹತ್ತಲು ಈಗ ಅವನಿಗೆ ನಿಮ್ಮ ಸಹಾಯ ಬೇಕೇಬೇಕು. ಆದರೆ ಮುಜುಗರದಿಂದಾಗಿ ಅವನು ತಾನಾಗಿಯೇ ಹತ್ತುತ್ತೇನೆಂದು ಹೇಳಿಕೊಂಡಲ್ಲಿ ಆಗೇನು? ತಾನಾಗಿಯೇ ಹತ್ತಿ ತನ್ನ ಜೀವವನ್ನು ಅಪಾಯಕ್ಕೆ ಒಡ್ಡುವಂತೆ ನೀವು ಬಿಡುವಿರೋ?

ಮಿತ್ರನೊಬ್ಬನು ಕ್ರೈಸ್ತ ಪಥದಿಂದ ಎಡವಿಬಿದ್ದಾಗಲೂ ವಿಷಯವು ಹೀಗೆಯೇ ಇದೆ. ಅವನು ಅಥವಾ ಅವಳು ಯಾವ ಸಹಾಯವೂ ಇಲ್ಲದೆ ತಾನಾಗಿಯೇ ಆಧ್ಯಾತ್ಮಿಕವಾಗಿ ಚೇತರಿಸಿಕೊಳ್ಳುವೆ ಎಂದು ನೆನಸಬಹುದು. ಆದರೆ ಅದು ಅವಿವೇಕತನದ ತರ್ಕ. ನಡೆದ ಸಂಗತಿಯ ಬಗ್ಗೆ ನಿಮ್ಮ ಮಿತ್ರನಿಗೆ ಮುಜುಗರವೆನಿಸಬಹುದು ನಿಜ. ಆದರೆ ನೀವು ಸಹಾಯಕ್ಕಾಗಿ ಕೇಳಿಕೊಳ್ಳುವ ಮೂಲಕ ನಿಮ್ಮ ಮಿತ್ರನ ಜೀವವು ಉಳಿದೀತು!—ಯಾಕೋಬ 5:15.

ಆದುದರಿಂದ ನಿಮ್ಮ ಫ್ರೆಂಡ್‌ ಕೆಟ್ಟ ನಡತೆಯಲ್ಲಿ ಸಿಕ್ಕಿಕೊಂಡಿರುವಲ್ಲಿ ಅದರ ಕುರಿತು ಹೇಳಲು ಹೆದರಬೇಡಿ. ಅವನಿಗೆ ಸಹಾಯವನ್ನು ಕೊಡುವ ಮೂಲಕ ನೀವು ಯೆಹೋವನಿಗೆ ನಿಷ್ಠೆಯನ್ನು ಮತ್ತು ನಿಮ್ಮ ಮಿತ್ರನಿಗೆ ನಿಷ್ಠೆಯನ್ನು ತೋರಿಸುತ್ತೀರಿ. ಒಂದಲ್ಲ ಒಂದು ದಿನ ಅವನು ನಿಮ್ಮ ಪ್ರೀತಿಪರ ಸಹಾಯಕ್ಕಾಗಿ ಆಭಾರಿಯಾಗಿರುವನು ನಿಶ್ಚಯ. (g 12/08)

“ಯುವ ಜನರು ಪ್ರಶ್ನಿಸುವುದು . . . ” ಲೇಖನಮಾಲೆಯ ಹೆಚ್ಚಿನ ಲೇಖನಗಳನ್ನು www.watchtower.org/ype ವೆಬ್‌ಸೈಟ್‌ನಲ್ಲಿ ಕಂಡುಕೊಳ್ಳಬಹುದು

[ಪಾದಟಿಪ್ಪಣಿಗಳು]

^ ಹೆಸರುಗಳನ್ನು ಬದಲಾಯಿಸಲಾಗಿದೆ.

^ ಯೆಹೋವನ ಸಾಕ್ಷಿಗಳಲ್ಲಿರುವ ಸಭಾ ಹಿರಿಯರು ಗಂಭೀರ ಪಾಪವನ್ನು ಮಾಡಿದವರಿಗೆ ಆಧ್ಯಾತ್ಮಿಕ ನೆರವನ್ನು ನೀಡುತ್ತಾರೆ.—ಯಾಕೋಬ 5:14-16.

ಯೋಚಿಸಿ

◼ ಮಿತ್ರನ ದುರ್ನಡತೆಯ ಬಗ್ಗೆ ತಿಳಿಸುವುದು ನಿಜವಾಗಿ ಅವನ ಬಗ್ಗೆ ನಿಮಗಿರುವ ನಿಷ್ಠೆಯ ಪುರಾವೆಯಾಗಿದೆ ಹೇಗೆ?

◼ ಮಿತ್ರನಿಗೆ ನಿಜ ನಿಷ್ಠೆಯನ್ನು ತೋರಿಸಿದ ಯಾವ ಬೈಬಲ್‌ ವ್ಯಕ್ತಿಗಳನ್ನು ನೀವು ನೆನಪಿಗೆ ತರಬಲ್ಲಿರಿ? ಅವರಿಂದ ಯಾವ ಪಾಠ ಕಲಿಯುತ್ತೀರಿ?

[ಪುಟ 30ರಲ್ಲಿರುವ ಚಿತ್ರ]

ಮಿತ್ರನೊಬ್ಬನು ಕ್ರೈಸ್ತ ಪಥದಿಂದ ಎಡವಿಬಿದ್ದಲ್ಲಿ ಅವನಿಗೆ ಸಹಾಯವು ಸಿಗುವಂತೆ ನೀವು ಖಚಿತಪಡಿಸಿಕೊಳ್ಳಿ