ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಯಶಸ್ಸಿಗಾಗಿ ಆರು ಕೀಲಿಕೈಗಳು

ನಿಮ್ಮ ಯಶಸ್ಸಿಗಾಗಿ ಆರು ಕೀಲಿಕೈಗಳು

ನಿಮ್ಮ ಯಶಸ್ಸಿಗಾಗಿ ಆರು ಕೀಲಿಕೈಗಳು

ನಿಜ ಯಶಸ್ಸು ಅತ್ಯುತ್ತಮ ಜೀವನಶೈಲಿಯ ಸಾಧನೆ. ಈ ಜೀವನಶೈಲಿ ದೇವರ ನೀತಿಯ ಮಟ್ಟಗಳ ಪಾಲನೆಯ ಫಲ. ಅದು ನಮಗಾಗಿರುವ ದೇವರ ಉದ್ದೇಶದೊಂದಿಗೆ ಅತ್ಯಂತ ಹೊಂದಿಕೆಯಲ್ಲಿದೆ. ಇಂಥ ಜೀವನವನ್ನು ನಡೆಸುವ ವ್ಯಕ್ತಿಯ ಕುರಿತು ಬೈಬಲ್‌ ಹೀಗನ್ನುತ್ತದೆ: “ಅವನು ನೀರಿನ ಕಾಲಿವೆಗಳ ಬಳಿಯಲ್ಲಿ ಬೆಳೆದಿರುವ ಮರದ ಹಾಗಿರುವನು. ಅಂಥ ಮರವು ತಕ್ಕ ಕಾಲದಲ್ಲಿ ಫಲಕೊಡುತ್ತದಲ್ಲಾ; ಅದರ ಎಲೆ ಬಾಡುವದೇ ಇಲ್ಲ, ಅದರಂತೆ ಅವನ ಕಾರ್ಯವೆಲ್ಲವೂ ಸಫಲವಾಗುವದು.”ಕೀರ್ತನೆ 1:3.

ಹೌದು, ನಾವು ಅಪರಿಪೂರ್ಣರೂ ತಪ್ಪು ಮಾಡುವವರೂ ಆಗಿದ್ದರು ಕೂಡ ನಮ್ಮ ಇಡೀ ಜೀವನವು ಜನಜನಿತ ಯಶಸ್ಸನ್ನು ಪಡೆಯಬಲ್ಲದು! ಅಂಥ ಪ್ರತೀಕ್ಷೆ ನಿಮಗೆ ಪ್ರಿಯವೋ? ಹಾಗಿದ್ದರೆ ಬೈಬಲಿನ ಈ ಆರು ಮೂಲತತ್ತ್ವಗಳು ಆ ಗುರಿಯನ್ನು ಮುಟ್ಟಲು ನಿಮಗೆ ನೆರವಾಗುವವು. ಹೀಗೆ ಬೈಬಲಿನ ಬೋಧನೆಗಳು ನಿಜವಾಗಿಯೂ ದೇವರ ವಿವೇಕವೇ ಎಂಬ ಸ್ಪಷ್ಟ ಪುರಾವೆಯು ಸಿಗುತ್ತದೆ.—ಯಾಕೋಬ 3:17.

1 ಹಣಕ್ಕೆ ಅದರ ತಕ್ಕ ಸ್ಥಳ

“ಹಣದಾಸೆಯು ಸಕಲವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ. ಕೆಲವರು ಅದಕ್ಕಾಗಿ ಆತುರಪಟ್ಟು . . . ಅನೇಕ ವೇದನೆಗಳಿಂದ ತಮ್ಮನ್ನು ತಿವಿಸಿಕೊಳ್ಳುತ್ತಾರೆ.” (1 ತಿಮೊಥೆಯ 6:10) ಸಮಸ್ಯೆಯು ಹಣದಿಂದಲ್ಲ ಹಣದಾಸೆಯಿಂದಲೇ. ಎಷ್ಟೆಂದರೂ ನಮ್ಮ ಕುಟುಂಬದ ಪರಿಪಾಲನೆಗೆ ಹಣ ಬೇಕಲ್ಲಾ. ಆದರೆ ಹಣದಾಸೆಯುಳ್ಳ ವ್ಯಕ್ತಿಗೆ ಧನವೇ ಧಣಿಯೂ ದೈವವೂ ಆಗಿದೆ.

ಈ ಲೇಖನಮಾಲೆಯ ಆರಂಭದ ಲೇಖನವು ತೋರಿಸಿದ ಪ್ರಕಾರ ಯಶಸ್ಸಿಗೆ ಐಶ್ವರ್ಯವೇ ಆಧಾರವೆಂದು ನೆನಸುವವರಿದ್ದಾರೆ. ಅವರು ಅದನ್ನು ಬೆನ್ನಟ್ಟುವ ಗೀಳಿಗೆ ಬಿದ್ದು ನಿಜವಾಗಿ ಬಿಸಿಲ್ಗುದುರೆಯನ್ನೇ ಬೆನ್ನಟ್ಟುತ್ತಾರೆ. ಇದರಿಂದ ಅವರು ನಿರಾಶೆಯಲ್ಲಿ ಮುಳುಗಿ, ಅನೇಕ ವೇದನೆಗಳಿಂದ ತಮ್ಮನ್ನು ತಿವಿಸಿಕೊಳ್ಳುತ್ತಾರೆ. ಉದಾಹರಣೆಗೆ, ಸಿರಿಸಂಪತ್ತನ್ನು ಅತ್ಯಾತುರದಿಂದ ಹುಡುಕುವ ಜನರು ಹೆಚ್ಚಾಗಿ ತಮ್ಮ ಕುಟುಂಬ ಮತ್ತು ಸ್ನೇಹಸಂಬಂಧವನ್ನೂ ಬಲಿಕೊಡುತ್ತಾರೆ. ಇನ್ನು ಕೆಲವರು ಹಣದ ಚಿಂತೆ ಮತ್ತು ಕಳವಳದಿಂದಾಗಿ ನಿದ್ರೆಗೆಡುತ್ತಾರೆ. “ದುಡಿಯುವವನು ಸ್ವಲ್ಪವೇ ಉಣ್ಣಲಿ ಹೆಚ್ಚೇ ಉಣ್ಣಲಿ ಹಾಯಾಗಿ ನಿದ್ರಿಸುವನು; ಐಶ್ವರ್ಯವಂತನ ಸಮೃದ್ಧಿಯೋ ಅವನಿಗೆ ನಿದ್ರೆ ಬರಲೀಸದು” ಎಂದು ಪ್ರಸಂಗಿ 5:12 ತಿಳಿಸುತ್ತದೆ.

ಧನ ಕೇವಲ ಕ್ರೂರ ಧಣಿ ಮಾತ್ರವಲ್ಲ ಮೋಸಗಾರನೂ ಹೌದು. ‘ಐಶ್ವರ್ಯದಿಂದುಂಟಾಗುವ ಮೋಸದ’ ಕುರಿತು ಯೇಸು ಕ್ರಿಸ್ತನು ಮಾತಾಡಿದನು. (ಮಾರ್ಕ 4:19) ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಐಶ್ವರ್ಯವು ಸುಖಸಂತೋಷದ ಭರವಸೆ ನೀಡುತ್ತದೆ ಆದರೆ ಅವನ್ನು ಕೊಡುವುದಿಲ್ಲ. ಇನ್ನಷ್ಟು ಹೆಚ್ಚು ಧನಕ್ಕಾಗಿ ಅತ್ಯಾಸೆಯನ್ನು ಹುಟ್ಟಿಸುತ್ತದಷ್ಟೇ. “ಬೆಳ್ಳಿಯನ್ನು ಆಶಿಸುವವನಿಗೆ ಎಷ್ಟು ಬೆಳ್ಳಿಯಿದ್ದರೂ ತೃಪ್ತಿಯಾಗದು” ಎನ್ನುತ್ತದೆ ಪ್ರಸಂಗಿ 5:10.

ಒಟ್ಟಿನಲ್ಲಿ, ಅತಿಆಸೆ ಗತಿಗೇಡು ಎಂಬ ಗಾದೆಗನುಸಾರ ಹಣದಾಸೆಯು ಸ್ವವೈಫಲ್ಯಕಾರಿ. ಕಟ್ಟಕಡೆಗೆ ನಿರಾಶೆ, ಆಶಾಭಂಗ ಮತ್ತು ಅಪರಾಧಕ್ಕೂ ನಡಿಸುತ್ತದೆ. (ಜ್ಞಾನೋಕ್ತಿ 28:20) ಆದರೆ ಉದಾರತೆ, ಕ್ಷಮಾಶೀಲತೆ, ನೈತಿಕ ಶುದ್ಧತೆ, ಪ್ರೀತಿ ಮತ್ತು ದೇವರೊಂದಿಗಿನ ಆಪ್ತಸಂಬಂಧವೇ ಸಂತೋಷ ಮತ್ತು ಯಶಸ್ಸಿನ ಒಳಗುಟ್ಟು!

2 ಉದಾರತೆಯನ್ನು ಬೆಳಿಸಿಕೊಳ್ಳಿ

“ತೆಗೆದುಕೊಳ್ಳುವದಕ್ಕಿಂತ ಕೊಡುವದೇ ಹೆಚ್ಚಿನ ಭಾಗ್ಯ [ಸಂತೋಷ].” (ಅ. ಕೃತ್ಯಗಳು 20:35) ಆಗೊಮ್ಮೆ ಈಗೊಮ್ಮೆ ದಾನಕೊಡುವುದು ಕ್ಷಣಿಕ ಸಂತೋಷ ತರುತ್ತದೆ ನಿಜ. ಆದರೆ ಔದಾರ್ಯವು ನಿರಂತರ ಸಂತೋಷದ ಮೂಲ. ಉದಾರತೆಯನ್ನು ಅನೇಕ ವಿಧಗಳಲ್ಲಿ ವ್ಯಕ್ತಪಡಿಸಬಹುದು ನಿಶ್ಚಯ. ಒಂದು ಅತ್ಯುತ್ತಮ ಹಾಗೂ ಅತಿ ಗಣ್ಯ ಮಾಡಲ್ಪಡುವ ಉದಾರತೆಯು ನಮ್ಮ ಸಮಯ ಮತ್ತು ಶಕ್ತಿಯನ್ನು ಇತರರಿಗಾಗಿ ವ್ಯಯಿಸುವುದೇ ಆಗಿದೆ.

ಪರೋಪಕಾರ, ಸಂತೋಷ ಮತ್ತು ಆರೋಗ್ಯದ ಕುರಿತು ಹಲವಾರು ಅಧ್ಯಯನಗಳನ್ನು ಪರಾಮರ್ಶಿಸಿದ ಬಳಿಕ ಸಂಶೋಧಕರಾದ ಸ್ಟೀವನ್‌ ಜಿ. ಪೋಸ್ಟ್‌ ಕೊನೆಯಲ್ಲಿ ಹೇಳಿದ್ದೇನಂದರೆ ಪರೋಪಕಾರಿ ಕೃತ್ಯಗಳು ಹತಾಶೆಯನ್ನು ತಗ್ಗಿಸುತ್ತವೆ ಮಾತ್ರವಲ್ಲದೆ ದೀರ್ಘಾಯುಷ್ಯ, ಆರೋಗ್ಯಸ್ವಾಸ್ಥ್ಯ, ಒಳ್ಳೆಯ ಶಾರೀರಿಕ ಮತ್ತು ಮಾನಸಿಕ ಸ್ವಸ್ಥತೆಯನ್ನು ಕೊಡುತ್ತವೆ.

ಅದಲ್ಲದೆ, ತಮ್ಮ ಆದಾಯಕ್ಕನುಸಾರವಾಗಿ ಉದಾರವಾಗಿ ಕೊಡುವವರು ಅದರಿಂದಾಗಿ ನಷ್ಟವನ್ನು ಅನುಭವಿಸರು. ಜ್ಞಾನೋಕ್ತಿ 11:25 ಹೇಳುವುದು: “ಉದಾರಿಯು ಪುಷ್ಟನಾಗುವನು; ನೀರು ಹಾಯಿಸುವವನಿಗೆ ನೀರು ಸಿಕ್ಕುವದು.” ಈ ಮಾತುಗಳಿಗೆ ಹೊಂದಿಕೆಯಲ್ಲಿ ಯಾರು ನಿಜವಾಗಿ ಉದಾರ ಹೃದಯಿಗಳೋ, ಯಾರು ಫಲಾಪೇಕ್ಷೆಯಿಲ್ಲದೆ ಉಪಕಾರ ಮಾಡುತ್ತಾರೋ ಅವರು ವಿಶೇಷವಾಗಿ ದೇವರಿಂದ ಮೆಚ್ಚಿಕೆಯನ್ನೂ ಪ್ರೀತಿಯನ್ನೂ ಗಳಿಸುತ್ತಾರೆ.—ಇಬ್ರಿಯ 13:16.

3 ಮನಸಾರೆ ಕ್ಷಮಿಸಿರಿ

“ಮತ್ತೊಬ್ಬನ ಮೇಲೆ ತಪ್ಪು ಹೊರಿಸುವದಕ್ಕೆ ಕಾರಣವಿದ್ದರೂ ತಪ್ಪು ಹೊರಿಸದೆ ಒಬ್ಬರಿಗೊಬ್ಬರು ಸೈರಿಸಿಕೊಂಡು ಕ್ಷಮಿಸಿರಿ. [ಯೆಹೋವನು] ನಿಮ್ಮನ್ನು ಕ್ಷಮಿಸಿದಂತೆಯೇ ನೀವೂ ಕ್ಷಮಿಸಿರಿ.” (ಕೊಲೊಸ್ಸೆ 3:13) ಈ ದಿನಗಳಲ್ಲಿ ಕ್ಷಮಿಸುವ ಸಿದ್ಧ ಮನಸ್ಸು ಜನರಲ್ಲಿಲ್ಲ, ಬದಲಿಗೆ ಸೇಡಿಗೆ ಪ್ರತಿಯಾಗಿ ಸೇಡುತೀರಿಸುತ್ತಾರೆ, ಕರುಣೆತೋರಿಸುವುದಿಲ್ಲ. ಪರಿಣಾಮ? ಮುಖಭಂಗಕ್ಕೆ ಪ್ರತಿಯಾಗಿ ಮುಖಭಂಗ. ಹಿಂಸೆಗೆ ಪ್ರತಿಯಾಗಿ ಹಿಂಸೆ!

ಹಾನಿಯು ಅಷ್ಟಕ್ಕೇ ನಿಲ್ಲದಿರಬಹುದು. “18-30 ವರ್ಷ ವಯಸ್ಸಿನ 4,600ಕ್ಕಿಂತಲೂ ಹೆಚ್ಚು ಮಂದಿಯ ಒಂದು ಸರ್ವೇಯ ಪ್ರಕಾರ, ಹೆಚ್ಚು ದ್ವೇಷಿಯೂ ಹೆಚ್ಚು ಆಶಾಭಂಗ ಹೊಂದಿದವನೂ ಹೆಚ್ಚು ಸಿಡುಕುಳ್ಳವನೂ ಆಗಿದ್ದ ವ್ಯಕ್ತಿಯ” ಶ್ವಾಸಕೋಶವು ಸಹ ಅಷ್ಟೇ ಹೆಚ್ಚು ಕೆಟ್ಟುಹೋಗಿತ್ತು ಎಂಬುದನ್ನು ಸಂಶೋಧಕರು ಕಂಡುಕೊಂಡರು ಎಂದು ಕೆನಡದ ದಿ ಗ್ಯಾಜೆಟ್‌ ಆಫ್‌ ಮಾಂಟ್ರಿಯಲ್‌ ಪತ್ರಿಕೆ ಹೇಳಿತು. ಅದರ ಕೆಲವು ಹಾನಿಕರ ಪರಿಣಾಮಗಳಾದರೋ ಧೂಮಪಾನ ಮಾಡುವ ವ್ಯಕ್ತಿಗೆ ಬರುವ ಹಾನಿಗಿಂತಲೂ ಅಧಿಕ! ನಿಜವೇನೆಂದರೆ ಕ್ಷಮಾಶೀಲತೆಯು ಕೇವಲ ಸಾಮಾಜಿಕ ಸೌಹಾರ್ದತೆಗೆ ಕೀಲಿಕೈ ಮಾತ್ರವೇ ಅಲ್ಲ ಅದು ಸಿದ್ಧೌಷಧವೂ ಹೌದು!

ನೀವು ಹೇಗೆ ಕ್ಷಮಾಶೀಲರಾಗಬಲ್ಲಿರಿ? ಮೊದಲು ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಿರಿ. ಕೆಲವೊಮ್ಮೆ ನೀವೂ ಬೇರೆಯವರ ಮನನೋಯಿಸುತ್ತೀರಲ್ಲಾ. ಆಗ ನಿಮ್ಮನ್ನು ಅವರು ಕ್ಷಮಿಸಬೇಕೆಂದು ನೀವು ಬಯಸುವುದಿಲ್ಲವೇ? ಹಾಗಾದರೆ ನೀವು ಸಹ ಇತರರನ್ನು ಏಕೆ ಉದಾರವಾಗಿ ಕ್ಷಮಿಸಬಾರದು? (ಮತ್ತಾಯ 18:21-35) ಇದಕ್ಕಾಗಿ ಸ್ವನಿಯಂತ್ರಣವನ್ನು ಬೆಳೆಸಿಕೊಳ್ಳುವುದು ಅತಿ ಪ್ರಾಮುಖ್ಯ. ಏರಿದ ಸಿಟ್ಟನ್ನು ಇಳಿಸಲು ಕೆಲವರು “10ರವರೆಗೆ ಎಣಿಸಬೇಕು” ಅನ್ನುತ್ತಾರೆ ಇಲ್ಲವೆ ಬೇರೆ ವಿಧಗಳಲ್ಲಿ ನಿಮ್ಮ ಕೋಪವನ್ನು ತಣ್ಣಗಾಗಿಸಿ. ಸ್ವನಿಯಂತ್ರಣವೇ ನಿಮ್ಮ ಬಲವಾಗಿರಲಿ. “ದೀರ್ಘಶಾಂತನು ಶೂರನಿಗಿಂತಲೂ ಶ್ರೇಷ್ಠ” ಎನ್ನುತ್ತದೆ ಜ್ಞಾನೋಕ್ತಿ 16:32. “ಶೂರನಿಗಿಂತಲೂ ಶ್ರೇಷ್ಠ” ಎಂದು ಹೇಳುವಾಗ ಅದು ಅವನಿಗೆ ಸಿಗುವ ಯಶಸ್ಸನ್ನು ಸೂಚಿಸುವುದಿಲ್ಲವೇ?

4 ದೇವರ ನೀತಿಯ ಮಟ್ಟಗಳನ್ನು ಅನುಸರಿಸಿ ನಡೆಯಿರಿ

“ಯೆಹೋವನ ಆಜ್ಞೆ ಪವಿತ್ರವಾದದ್ದು; ಕಣ್ಣುಗಳನ್ನು ಕಳೆಗೊಳಿಸುತ್ತದೆ.” (ಕೀರ್ತನೆ 19:8) ಸರಳವಾಗಿ ಹೇಳುವುದಾದರೆ, ದೇವರ ನೀತಿಯ ಮಟ್ಟಗಳು ನಮ್ಮ ಶಾರೀರಿಕ, ಮಾನಸಿಕ, ಭಾವನಾತ್ಮಕ ಹಿತಕ್ಕಾಗಿಯೇ ಇವೆ. ಅವು ಅಮಲೌಷಧಗಳ ದುರುಪಯೋಗ, ಕುಡಿಕತನ, ಲೈಂಗಿಕ ದುರ್ನಡತೆ, ಅಶ್ಲೀಲ ಸಾಹಿತ್ಯಗಳ ವೀಕ್ಷಣೆ ಮುಂತಾದ ಹಾನಿಕರ ಚಾಳಿಗಳಿಂದ ನಮಗೆ ಸುರಕ್ಷೆಯನ್ನು ಕೊಡುತ್ತವೆ. (2 ಕೊರಿಂಥ 7:1; ಕೊಲೊಸ್ಸೆ 3:5) ಈ ಹಾನಿಕರ ಚಾಳಿಗಳಿಂದಾಗಿ ಹಿಂಸಾಚಾರ, ಬಡತನ, ಅಪನಂಬಿಕೆ, ಕೌಟುಂಬಿಕ ಒಡೆತ, ಮಾನಸಿಕ ಮತ್ತು ಭಾವನಾತ್ಮಕ ಸಮಸ್ಯೆಗಳು, ರೋಗರುಜಿನಗಳು, ಅಕಾಲಿಕ ಮರಣವೂ ಉಂಟಾಗಬಲ್ಲವು.

ಆದರೆ ದೇವರ ನೀತಿಯ ಮಟ್ಟಗಳನ್ನು ಅನುಸರಿಸುವವರಾದರೋ ಹಿತಕರವೂ ಭದ್ರವೂ ಆದ ಸಂಬಂಧವನ್ನು ಹಾಗೂ ಸ್ವಗೌರವ ಮತ್ತು ಆಂತರಿಕ ಶಾಂತಿಯನ್ನು ಗಳಿಸುತ್ತಾರೆ. ಯೆಶಾಯ 48:17, 18ರಲ್ಲಿ ದೇವರು ಹೇಳುವುದೇನೆಂದರೆ, ‘ನಿನಗೆ ವೃದ್ಧಿಮಾರ್ಗವನ್ನು ಬೋಧಿಸಿ ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಯಿಸುವವನಾಗಿದ್ದೇನೆ. ನೀನು ನನ್ನ ಆಜ್ಞೆಗಳನ್ನು ಕೇಳಿದ್ದರೆ ಎಷ್ಟೋ ಚೆನ್ನಾಗಿತ್ತು! ನಿನ್ನ ಸುಖವು ದೊಡ್ಡ ನದಿಯಂತೆಯೂ ನಿನ್ನ ಕ್ಷೇಮವು ಸಮುದ್ರದ ಅಲೆಗಳ ಹಾಗೂ ಇರುತ್ತಿದ್ದವು.’ ಹೌದು, ನಮ್ಮ ನಿರ್ಮಾಣಿಕನು ನಮಗೆ ಅತ್ಯುತ್ತಮವಾದುದ್ದನ್ನೇ ಬಯಸುತ್ತಾನೆ. ನಾವು ನಿಜ ಯಶಸ್ಸಿನ “ದಾರಿಯಲ್ಲಿ” ನಡೆಯಬೇಕೆಂದು ಆತನ ಅಪೇಕ್ಷೆ.

5 ನಿಸ್ವಾರ್ಥ ಪ್ರೀತಿಯನ್ನು ತೋರಿಸಿರಿ

“ಪ್ರೀತಿಯು ಭಕ್ತಿವೃದ್ಧಿಯನ್ನುಂಟುಮಾಡುತ್ತದೆ.” (1 ಕೊರಿಂಥ 8:1) ಪ್ರೀತಿಯಿಲ್ಲದ ಬರಡು ಜೀವನವನ್ನು ನೀವು ನೆನಸಬಲ್ಲಿರೋ? ಎಂತಹ ನಿರರ್ಥಕವಾದ ಅಸಂತುಷ್ಟ ಜೀವನವದು! “ನಾನು [ಇತರರ ಕಡೆಗೆ] ಪ್ರೀತಿಯಿಲ್ಲದವನಾಗಿದ್ದರೆ ಏನೂ ಅಲ್ಲದವನಾಗಿದ್ದೇನೆ . . . ಪ್ರೀತಿಯು ನನಗಿಲ್ಲದಿದ್ದರೆ ನನಗೇನೂ ಪ್ರಯೋಜನವಾಗುವದಿಲ್ಲ” ಎಂದು ಕ್ರೈಸ್ತ ಅಪೊಸ್ತಲ ಪೌಲನು ದೇವರ ಪ್ರೇರಣೆಯಿಂದ ಬರೆದನು.​—⁠1 ಕೊರಿಂಥ 13:2, 3.

ಇಲ್ಲಿ ತಿಳಿಸಲಾದ ಪ್ರೀತಿಯು ದೇವರ ನೀತಿಯ ಮಟ್ಟಗಳ ಮೇಲೆ ಆಧರಿತವಾದ ಪ್ರೀತಿ, ಲೈಂಗಿಕ ಪ್ರೀತಿಯಲ್ಲ. ಲೈಂಗಿಕ ಪ್ರೀತಿಗೆ ಅದರದ್ದೇ ಆದ ಸ್ಥಾನವಿದೆಯಾದರೂ ಮೇಲೆ ತಿಳಿಸಲಾದ ಪ್ರೀತಿಯು ಹೆಚ್ಚು ಶ್ರೇಷ್ಠವೂ ಬಾಳುವಂಥದ್ದೂ ಆಗಿದೆ. * (ಮತ್ತಾಯ 22:37-39) ಅಷ್ಟಲ್ಲದೆ, ಅದು ಬರೆ ನಿಷ್ಕ್ರಿಯವಾದ ಪ್ರೀತಿಯಲ್ಲ, ಸಕ್ರಿಯ ಪ್ರೀತಿ. ಅಂದರೆ ಕೇವಲ ಇತರರಿಂದ ಪಡೆದುಕೊಳ್ಳುವ ಪ್ರೀತಿಯಲ್ಲ, ಇತರರಿಗೆ ತೋರಿಸುವ ಪ್ರೀತಿಯಾಗಿದೆ. ಇಂಥ ಪ್ರೀತಿ ಬಹು ತಾಳ್ಮೆಯುಳ್ಳದ್ದೂ ದಯೆತೋರಿಸುವಂಥದ್ದೂ ಆಗಿದೆಯೆಂದು ಪೌಲನು ಹೇಳಿದನು. ಅದು ಹೊಟ್ಟೆಕಿಚ್ಚುಪಡುವುದಿಲ್ಲ, ಹೊಗಳಿಕೊಳ್ಳುವುದಿಲ್ಲ, ಉಬ್ಬಿಕೊಳ್ಳುವುದಿಲ್ಲ. ಅದು ನಿಸ್ವಾರ್ಥಭಾವದಿಂದ ಇತರರ ಹಿತಕ್ಷೇಮವನ್ನೇ ಹಾರೈಸುತ್ತದೆ. ಮುಂಗೋಪ ತೋರಿಸದೆ ಕ್ಷಮಿಸುತ್ತದೆ. ಭಕ್ತಿವೃದ್ಧಿ ಮಾಡುತ್ತದೆ. ಅಲ್ಲದೆ ಇತರರೊಂದಿಗೆ ಅದರಲ್ಲೂ ವಿಶೇಷವಾಗಿ ಕುಟುಂಬದವರೊಂದಿಗೆ ಸುಸಂಬಂಧವನ್ನು ಬೆಸೆಯುತ್ತದೆ.—1 ಕೊರಿಂಥ 13:4-8.

ಹೆತ್ತವರು ಮಕ್ಕಳಿಗೆ ತೋರಿಸುವ ಪ್ರೀತಿಯಲ್ಲಿ ಹೃತ್ಪೂರ್ವಕವಾದ ಮಮತೆಯಿದೆ. ಬೈಬಲಾಧಾರಿತ ನೈತಿಕತೆಗೆ ಹಾಗೂ ಇತರ ನಡವಳಿಕೆಗೆ ಸಂಬಂಧಿಸಿದ ಕಟ್ಟುಪಾಡುಗಳನ್ನು ಹೆತ್ತವರು ಇಡುವುದೂ ಅದರಲ್ಲಿ ಸೇರಿದೆ. ಅಂಥ ಪರಿಸರದಲ್ಲಿ ಬೆಳೆಸಲ್ಪಟ್ಟ ಮಕ್ಕಳು ಸುಭದ್ರವೂ ಸುದೃಢವೂ ಆದ ಕುಟುಂಬದಲ್ಲಿ ಆನಂದಿಸುತ್ತಾರೆ ಮತ್ತು ನಿಜವಾಗಿ ಪ್ರೀತಿಸಲ್ಪಡುವ, ಮೆಚ್ಚಲ್ಪಡುವ ಅನಿಸಿಕೆ ಅವರಿಗಾಗುತ್ತದೆ.—ಎಫೆಸ 5:33–6:4; ಕೊಲೊಸ್ಸೆ 3:20.

ಅಮೆರಿಕದ ಜ್ಯಾಕ್‌ ಎಂಬ ಯುವಕನು ಬೈಬಲ್‌ ತತ್ತ್ವಗಳಿಗೆ ಅನುಸಾರವಾಗಿ ಜೀವಿಸಿದ ಕುಟುಂಬದಲ್ಲಿ ಬೆಳೆಸಲ್ಪಟ್ಟನು. ಮನೆಯಿಂದ ದೂರ ಇದ್ದಾಗ ಅವನು ತನ್ನ ಹೆತ್ತವರಿಗೆ ಬರೆದ ಪತ್ರದಲ್ಲಿ ಹೇಳಿದ್ದು: “‘ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು; ಸನ್ಮಾನಿಸಿದರೆ . . . ನಿನಗೆ ಮೇಲಾಗುವದು’ ಎಂಬ ಬೈಬಲಿನ ಆಜ್ಞೆಯನ್ನು ನಾನು ಯಾವಾಗಲೂ ಪಾಲಿಸಲು ಪ್ರಯತ್ನಿಸಿದೆ. (ಧರ್ಮೋಪದೇಶಕಾಂಡ 5:16) ಇದರಿಂದ ನನಗೆ ಜೀವನದಲ್ಲಿ ಮೇಲೇ ಆಗಿದೆ. ಇದು ನಿಮ್ಮ ಕಟ್ಟಕ್ಕರೆಯ ಗಾಢ ಪ್ರೀತಿಯ ಫಲಿತಾಂಶವೆಂದು ನನಗೀಗ ಚೆನ್ನಾಗಿ ತಿಳಿದುಬಂದಿದೆ. ನನ್ನನ್ನು ಬೆಳೆಸಲಿಕ್ಕಾಗಿ ನೀವು ಪಟ್ಟ ಪರಿಶ್ರಮ ಮತ್ತು ಕೊಟ್ಟ ಬೆಂಬಲಕ್ಕೆ ನಾನು ಚಿರಋಣಿ.” ಹೆತ್ತವರಾಗಿರುವ ನಿಮಗೆ ನಿಮ್ಮ ಮಕ್ಕಳಿಂದ ಅಂಥ ಒಂದು ಪತ್ರ ಬಂದಲ್ಲಿ ನಿಮಗೆ ಹೇಗನಿಸುತ್ತದೆ? ನಿಮ್ಮ ಹೃದಯವು ಸಂತೋಷದಿಂದ ಉಕ್ಕೇರದೇ?

ತತ್ವಾಧರಿತ ಪ್ರೀತಿಯು “ಸತ್ಯದೊಂದಿಗೆ ಸಂತೋಷಪಡುತ್ತದೆ” ಅಂದರೆ ಬೈಬಲಿನಲ್ಲಿ ಕಂಡುಬರುವ ಆಧ್ಯಾತ್ಮಿಕ ಸತ್ಯದೊಂದಿಗೆ ಸಂತೋಷಪಡುತ್ತದೆ. (1 ಕೊರಿಂಥ 13:6; ಯೋಹಾನ 17:17) ದೃಷ್ಟಾಂತ: ವೈವಾಹಿಕ ಸಮಸ್ಯೆಗಳಿದ್ದ ದಂಪತಿಯು “ದೇವರು [ವಿವಾಹದಲ್ಲಿ] ಕೂಡಿಸಿದ್ದನ್ನು ಮನುಷ್ಯರು ಅಗಲಿಸಬಾರದು” ಎಂದು ಹೇಳಿರುವ ಮಾರ್ಕ 10:9ರ ಯೇಸುವಿನ ಮಾತುಗಳನ್ನು ಒಟ್ಟಿಗೆ ಓದುತ್ತಾರೆಂದು ನೆನಸಿ. ಈಗ ಅವರು ತಮ್ಮ ಹೃದಮನಗಳನ್ನು ಪರೀಕ್ಷಿಸಬೇಕು. ಅವರು ನಿಜವಾಗಿಯೂ ‘ಬೈಬಲ್‌ ಸತ್ಯದೊಂದಿಗೆ ಸಂತೋಷಪಡುತ್ತಿದ್ದಾರೋ’? ಅವರು ತಮ್ಮ ಮದುವೆಯನ್ನು ದೇವರು ವೀಕ್ಷಿಸುವಂತೆ ಪವಿತ್ರಬಂಧವಾಗಿ ವೀಕ್ಷಿಸುತ್ತಾರೋ? ತಮ್ಮ ವೈವಾಹಿಕ ಸಮಸ್ಯೆಯನ್ನು ಪ್ರೀತಿಯಿಂದ ಬಗೆಹರಿಸಲು ಅವರು ಸಿದ್ಧರೋ? ಹಾಗಿರುವಲ್ಲಿ, ಅವರು ತಮ್ಮ ವೈವಾಹಿಕ ಜೀವನದಲ್ಲಿ ಯಶಸ್ವಿಯಾಗುವರು ಮತ್ತು ಅದರ ಫಲಿತಾಂಶಗಳಲ್ಲಿ ಖಂಡಿತ ಹರ್ಷಿಸುವರು.

6 ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯಿರಲಿ

“ತಮ್ಮ ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು ಸಂತೋಷಿತರು.” (ಮತ್ತಾಯ 5:3, NW) ಪ್ರಾಣಿಗಳಿಗಿಂತ ಭಿನ್ನವಾಗಿ ಮನುಷ್ಯರಿಗಾದರೋ ಆಧ್ಯಾತ್ಮಿಕ ವಿಷಯಗಳನ್ನು ಗಣ್ಯಮಾಡುವ ಸಾಮರ್ಥ್ಯವಿದೆ. ಆದುದರಿಂದ ನಾವಿಂಥಾ ಪ್ರಶ್ನೆಗಳನ್ನು ಕೇಳುತ್ತೇವೆ: ಜೀವನದ ಉದ್ದೇಶವೇನು? ಸೃಷ್ಟಿಕರ್ತನೊಬ್ಬನು ಇದ್ದಾನೋ? ನಾವು ಸತ್ತಾಗ ಏನಾಗುತ್ತದೆ? ಭವಿಷ್ಯತ್ತಿನಲ್ಲಿ ನಮಗೆ ಏನು ಕಾದಿದೆ?

ಲೋಕದಾದ್ಯಂತ ಲಕ್ಷಾಂತರ ಪ್ರಾಮಾಣಿಕ ಜನರು ಆ ಪ್ರಶ್ನೆಗಳಿಗೆ ಬೈಬಲ್‌ ಉತ್ತರ ಕೊಡುತ್ತದೆಂದು ಕಂಡುಕೊಂಡಿದ್ದಾರೆ. ಉದಾಹರಣೆಗೆ, ಮೇಲೆ ತಿಳಿಸಿದ ಕೊನೆಯ ಪ್ರಶ್ನೆಯು ಮಾನವಕುಲಕ್ಕಾಗಿ ದೇವರಿಗಿರುವ ಉದ್ದೇಶದೊಂದಿಗೆ ಜತೆಗೂಡಿದೆ. ಆ ಉದ್ದೇಶವೇನು? ಏನೆಂದರೆ ಭೂಮಿಯು ಉದ್ಯಾನವನದ ಹಾಗಿರುವ ಪರದೈಸ್‌ ಆಗಿ, ದೇವರನ್ನೂ ಆತನ ನೀತಿಯ ಮಟ್ಟಗಳನ್ನೂ ಪ್ರೀತಿಸುವ ಜನರಿಂದ ತುಂಬಿರಬೇಕೆಂಬುದೇ. ಕೀರ್ತನೆ 37:29 ಹೀಗೆ ಹೇಳುತ್ತದೆ: “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.”

ಸ್ಪಷ್ಟವಾಗಿ ನಮ್ಮ ಸೃಷ್ಟಿಕರ್ತನು ನಮಗೆ ಬರೇ 70, 80 ವರ್ಷಗಳ ತಾತ್ಕಾಲಿಕ ಯಶಸ್ಸನ್ನಲ್ಲ ಅದಕ್ಕಿಂತಲೂ ಹೆಚ್ಚನ್ನು ಬಯಸುತ್ತಾನೆ. ನಾವು ನಿತ್ಯನಿರಂತರ ಯಶಸ್ಸನ್ನು ಗಳಿಸಬೇಕೆಂಬುದು ಆತನ ಇಚ್ಛೆ! ಆದುದರಿಂದ ನಮ್ಮ ಸೃಷ್ಟಿಕರ್ತನ ಕುರಿತು ಕಲಿಯುವ ಸಮಯವು ಇದೇ. ಯೇಸು ಅಂದದ್ದು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.” (ಯೋಹಾನ 17:3) ನೀವು ಆ ಜ್ಞಾನವನ್ನು ಪಡೆದುಕೊಂಡು ನಿಮ್ಮ ಜೀವಿತದಲ್ಲಿ ಅನ್ವಯಿಸುವುದಾದರೆ ಈ ಮಾತುಗಳ ಸತ್ಯತೆಯನ್ನು ಸ್ವತಃ ಅನುಭವಿಸುವಿರಿ: “ಯೆಹೋವನ ಆಶೀರ್ವಾದವು ಐಶ್ವರ್ಯವನ್ನುಂಟುಮಾಡುವುದು. ಅದರೊಂದಿಗೆ ಆತನು ಯಾವ ದುಃಖವನ್ನೂ ಸೇರಿಸುವುದಿಲ್ಲ.”—ಜ್ಞಾನೋಕ್ತಿ 10:22 NIBV. (g 11/08)

[ಪಾದಟಿಪ್ಪಣಿ]

^ ಕ್ರೈಸ್ತ ಗ್ರೀಕ್‌ ಶಾಸ್ತ್ರ ಅಥವಾ “ಹೊಸ ಒಡಂಬಡಿಕೆಯಲ್ಲಿ” “ಪ್ರೀತಿ”ಯು ಗ್ರೀಕ್‌ ಪದವಾದ ಅಗಾಪೆ ಎಂಬುದರ ಭಾಷಾಂತರ. ಈ ಅಗಾಪೆಯು ತತ್ತ್ವ, ಕರ್ತವ್ಯ, ಯುಕ್ತತೆಯ ಮೇಲೆ ಆಧಾರಿತವಾದ ನೈತಿಕ ಪ್ರೀತಿ. ಇತರರು ನಮಗೆ ಪ್ರೀತಿ ತೋರಿಸಲಿ ತೋರಿಸದಿರಲಿ ನಾವು ಪ್ರೀತಿ ತೋರಿಸುವಂತೆ ಅದು ನಿರ್ಬಂಧಿಸುತ್ತದೆ. ಆದರೂ ಅಗಾಪೆ ಭಾವಶೂನ್ಯವಲ್ಲ ಬದಲಾಗಿ ಹೃತ್ಪೂರ್ವಕವಾದ ಗಾಢ ಪ್ರೀತಿಯಾಗಿದೆ.—1 ಪೇತ್ರ 1:22.

[ಪುಟ 7ರಲ್ಲಿರುವ ಚೌಕ]

ಯಶಸ್ಸನ್ನು ವರ್ಧಿಸುವ ಇನ್ನಿತರ ಸೂತ್ರಗಳು

ಹಿತಕರವಾದ ದೇವಭಯವಿರಲಿ. “ಯೆಹೋವನ ಭಯವೇ ಜ್ಞಾನಕ್ಕೆ ಮೂಲವು.”—ಜ್ಞಾನೋಕ್ತಿ 9:10.

ಸ್ನೇಹಿತರನ್ನು ವಿವೇಕದಿಂದ ಆರಿಸಿಕೊಳ್ಳಿ. “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು.”—ಜ್ಞಾನೋಕ್ತಿ 13:20.

ಮಿತಿಯುಳ್ಳವರಾಗಿರ್ರಿ. “ಕುಡುಕನೂ ಹೊಟ್ಟೆಬಾಕನೂ ದುರ್ಗತಿಗೆ ಬರುವರು.”—ಜ್ಞಾನೋಕ್ತಿ 23:21.

ಸೇಡುತೀರಿಸಬೇಡಿ. “ಯಾರಿಗೂ ಅಪಕಾರಕ್ಕೆ ಅಪಕಾರವನ್ನು ಮಾಡಬೇಡಿರಿ.”—ರೋಮಾಪುರ 12:17.

ಶ್ರಮಶೀಲರಾಗಿರ್ರಿ. ‘ಕೆಲಸಮಾಡಲೊಲ್ಲದವನು ಊಟಮಾಡಬಾರದು.’ —2 ಥೆಸಲೊನೀಕ 3:10.

ಸುವರ್ಣ ನಿಯಮವನ್ನು ಪಾಲಿಸಿರಿ. “ಅಂತು ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ.”—ಮತ್ತಾಯ 7:12.

ನಾಲಿಗೆಯನ್ನು ಅಂಕೆಯಲ್ಲಿಡಿ. “ಜೀವದಲ್ಲಿ ಸಂತೋಷಪಟ್ಟು ಸುದಿನಗಳನ್ನು ನೋಡುವದಕ್ಕೆ ಇಷ್ಟವುಳ್ಳವನು ಕೆಟ್ಟದ್ದನ್ನು ನುಡಿಯದಂತೆ ತನ್ನ ನಾಲಿಗೆಯನ್ನೂ . . . ಬಿಗಿಹಿಡಿಯಲಿ.”—1 ಪೇತ್ರ 3:10.

[ಪುಟ 8ರಲ್ಲಿರುವ ಚೌಕ/ಚಿತ್ರ]

ಪ್ರೀತಿಯೇ ಒಳ್ಳೇ ಮದ್ದು

ವೈದ್ಯರೂ ಲೇಖಕರೂ ಆದ ಡೀನ್‌ ಆರ್ನಿಷ್‌ ಬರೆದದ್ದು: “ಪ್ರೀತಿ ಮತ್ತು ಆತ್ಮೀಯತೆ ಈ ಕೆಳಗಿನವುಗಳಿಗೆ ಮೂಲಕಾರಣ. ಅವು ಅಸ್ವಸ್ಥಗೊಳಿಸುತ್ತವೆ, ಸ್ವಸ್ಥವನ್ನೂ ಮಾಡುತ್ತವೆ. ದುಃಖ ಕೊಡುತ್ತವೆ ಸಂತೋಷವನ್ನೂ ತರುತ್ತವೆ. ನರಳಿಸುತ್ತವೆ, ವಾಸಿಕಾರಕವೂ ಹೌದು. ಇದೇ ಪರಿಣಾಮವನ್ನುಂಟುಮಾಡುವ ಹೊಸ ಮದ್ದು ಇದ್ದಲ್ಲಿ ವೈದ್ಯರು ತಮ್ಮ ರೋಗಿಗಳಿಗೆ ಅದನ್ನೇ ಶಿಫಾರಸ್ಸುಮಾಡುತ್ತಿದ್ದರು. ಅದನ್ನು ಶಿಫಾರಸ್ಸು ಮಾಡದಿರುವವನು ಒಳ್ಳೇ ವೈದ್ಯನಲ್ಲ.”

[ಪುಟ 9ರಲ್ಲಿರುವ ಚೌಕ/ಚಿತ್ರಗಳು]

ನಿರಾಶೆಯಿಂದ ಯಶಸ್ಸಿನ್ನತ್ತ

ಬಾಲ್ಕನ್ಸ್‌ನ ನಿವಾಸಿ ಮೀಲಾಂಕೊ ತನ್ನ ಸ್ವದೇಶದಲ್ಲಿ ಯುದ್ಧವು ಆರಂಭಗೊಂಡಾಗ ಸೇನೆಗೆ ಸೇರಿಕೊಂಡನು. ಅವನ ಧೀರ ಸಾಹಸಗಳಿಂದಾಗಿ ಆ್ಯಕ್ಷನ್‌ ಮೂವಿಯ ಹೀರೊ ‘ರ್ಯಾಂಬೊ’ ಎಂಬ ಅಡ್ಡಹೆಸರಿನಿಂದ ಜನರು ಅವನನ್ನು ಕರೆಯುತ್ತಿದ್ದರು. ಕಾಲಾನಂತರ ಮೀಲಾಂಕೊ ಮಿಲಿಟರಿಯ ಭ್ರಷ್ಟಾಚಾರ ಮತ್ತು ಕಪಟದ ಕಾರಣ ಆಶಾಭಂಗಪಟ್ಟು ಮಿಲಿಟರಿಯನ್ನು ಬಿಟ್ಟುಬಿಟ್ಟನು. “ಅದು ನನ್ನನ್ನು ದುಶ್ಚಟಗಳಾದ ಮದ್ಯಪಾನ, ಧೂಮಪಾನ, ಅಮಲೌಷಧ, ಜೂಜಾಟ ಮತ್ತು ಅನೈತಿಕತೆಗಳಿಗೆ ನಡೆಸಿತು. ನನ್ನ ಜೀವನವು ಎಷ್ಟು ಅಧಃಪತನಕ್ಕೆ ಇಳಿದಿತ್ತೆಂದರೆ ಪಾರಾಗುವ ಮಾರ್ಗವೇ ತಿಳಿದಿರಲಿಲ್ಲ” ಎಂದು ಅವನು ಬರೆದನು.

ಜೀವನದ ಆ ಕಷ್ಟಕಾಲದಲ್ಲಿ ಮೀಲಾಂಕೊ ಬೈಬಲನ್ನು ಓದಲಾರಂಭಿಸಿದ. ಒಮ್ಮೆ ಸಂಬಂಧಿಕರನ್ನು ಭೇಟಿಯಾದಾಗ ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾದ ಕಾವಲಿನಬುರುಜು ಪತ್ರಿಕೆ ಕಾಣಸಿಕ್ಕಿತು. ಅದರಲ್ಲಿ ಅವನು ಓದಿದ ವಿಷಯ ಅವನ ಮನಸ್ಸಿಗೆ ಹಿಡಿಸಿತು. ಕೂಡಲೆ ಅವನು ಸಾಕ್ಷಿಗಳೊಂದಿಗೆ ಬೈಬಲನ್ನು ಅಧ್ಯಯನ ಮಾಡಲು ಆರಂಭಿಸಿದನು. ಬೈಬಲ್‌ ಸತ್ಯದಿಂದ ಅವನು ಸಂತೋಷವನ್ನೂ ನಿಜ ಯಶಸ್ಸನ್ನೂ ಕಂಡುಕೊಂಡನು. ಅವನು ಹೇಳಿದ್ದು: “ಅದು ನನಗೆ ನವಚೈತನ್ಯವನ್ನು ಒದಗಿಸಿತು. ನಾನು ಎಲ್ಲ ದುಶ್ಚಟಗಳನ್ನು ಬಿಟ್ಟುಬಿಟ್ಟೆ. ಒಬ್ಬ ಯೆಹೋವನ ಸಾಕ್ಷಿಯಾಗಿ ದೀಕ್ಷಾಸ್ನಾನ ಪಡೆದೆ. ನನ್ನನ್ನು ಜನರು ಈಗ ‘ರ್ಯಾಂಬೊ’ ಎಂದು ಕರೆಯುವುದಿಲ್ಲ. ನನ್ನ ಈಗಿನ ಸಾಧುಸ್ವಭಾವಕ್ಕಾಗಿ ಬಾಲ್ಯದ ಮುದ್ದಿನ ಹೆಸರಾದ ‘ಬನಿ’ ಎಂದೇ ಕರೆಯುತ್ತಾರೆ.”