ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯಶಸ್ಸು ಕೈಗೆ ನಿಲುಕದಾಗ

ಯಶಸ್ಸು ಕೈಗೆ ನಿಲುಕದಾಗ

ಯಶಸ್ಸು ಕೈಗೆ ನಿಲುಕದಾಗ

ಆಕೆ ಖ್ಯಾತ ಸಂಗೀತಗಾರ್ತಿ. ಅವಳಿಗೆ 20ರ ಹರೆಯದಲ್ಲೇ ಶ್ರೀಮಂತಿಕೆ ಕೈಗೆಟಕ್ಕಿತ್ತು. ಚಿಕ್ಕ ವಯಸ್ಸಿನಲ್ಲೇ ಅಷ್ಟೊಂದು ಖ್ಯಾತಿ ಮತ್ತು ಐಶ್ವರ್ಯ ಕಂಡವರು ಕೇವಲ ಕೊಂಚ ಜನ. ಆದರೆ ಸ್ವಲ್ಪದರಲ್ಲೇ ಅವಳ ಬದುಕಿನ ಬಣ್ಣ ಬದಲಾಯಿತು. ಎರಡು ಮದುವೆಗಳು ವೈಫಲ್ಯಗೊಂಡಾಗ ಆಕೆ ಮದ್ಯಸಾರ ಮತ್ತು ಡ್ರಗ್‌ನ ಮರೆಹೊಕ್ಕಳು. ಆ ಚಟದಿಂದ ಹೊರಬರಲು ಪುನರ್ವಸತಿ ಕೇಂದ್ರಗಳನ್ನು ಸೇರಬೇಕಾಯಿತು. ಹೀಗೆ ಅವಳ ಇಡೀ ಜೀವನವೇ ನೆಲಕಚ್ಚಿತು.

ದುಃಖಕರವಾಗಿ ಈ ಯೌವನಸ್ಥೆಯ ಸನ್ನಿವೇಶ ಅಷ್ಟೇನೂ ಹೊಸದಲ್ಲವೆನ್ನಬೇಕು. ಯಾಕೆಂದರೆ ಪ್ರಖ್ಯಾತ ವ್ಯಕ್ತಿಗಳ ದುರಂತಕಥೆಯು ಮಾಧ್ಯಮದಲ್ಲಿ ಕಂಡುಬರುವುದು ಸರ್ವಸಾಮಾನ್ಯ. ವ್ಯಾಪಾರ ರಂಗದಲ್ಲಿ ಮೇಲುಗೈ ಹೊಂದಿರುವಂತೆ ಕಾಣುವ ಜನರ ಜೀವಿತಗಳು ಕೂಡಾ ಕಷ್ಟನಷ್ಟಗಳಿಂದ ತುಂಬಿವೆ. ನ್ಯೂಯಾರ್ಕ್‌ ಸಿಟಿಯ ಆರ್ಥಿಕ ರಂಗದಲ್ಲಿ ಉತ್ತುಂಗಕ್ಕೇರಿದ ವ್ಯಕ್ತಿಗಳ ಕುರಿತು ಒಂದು ವಾರ್ತಾಪತ್ರವು ಹೇಳಿದ್ದು: “ಅತ್ಯಂತ ಹೆಚ್ಚು ಲಾಭಕ್ಕಾಗಿ ನಡೆಸಲ್ಪಡುವ ದೌಡಿನಿಂದಾಗಿ ಉದ್ದಿಮೆಗಳು ಬಿದ್ದುಹೋಗುತ್ತಿವೆ, ಕುಟುಂಬಗಳು ಛಿದ್ರಗೊಳ್ಳುತ್ತಿವೆ ಮತ್ತು ಜನರು ಅಧಿಕಾಧಿಕವಾಗಿ ಅಮಲೌಷಧಕ್ಕೆ ಗುಲಾಮರಾಗುತ್ತಿದ್ದಾರೆ. . . . ಅತ್ಯಧಿಕ ಲಾಭಗಳು ಕೆಲವು ವಾಲ್‌ ಸ್ಟ್ರೀಟ್‌ ಬ್ಯಾಂಕರುಗಳನ್ನು ಅಭೇದ್ಯರನ್ನಾಗಿ ಮಾಡುತ್ತವಾದರೂ ಇತರರು ಕೆಲಸದ ಒತ್ತಡದಿಂದಾಗಿ ಮಾನಸಿಕ ಆಘಾತಕ್ಕೊಳಗಾಗಿ ಜರ್ಜರಿತರಾಗಿ ಹೋಗುತ್ತಾರೆ.”

ಯಶಸ್ಸು ಮತ್ತು ಸಂತೋಷವನ್ನು ಕಂಡುಕೊಳ್ಳಲು ದಾರಿತಪ್ಪಿದ್ದೇ ಈ ಸಮಸ್ಯೆಗಳಿಗೆ ಕಾರಣವೋ? ಸ್ವಲ್ಪಮಟ್ಟಿನ ಹಣಕಾಸಿನ ಭದ್ರತೆ ನಮಗೆ ಬೇಕೆಂಬುದು ನಿಜ. ಆದರೆ ಜೀವನದಲ್ಲಿ ನಮ್ಮ ಯಶಸ್ಸು ಧನಸಂಚಯದ ಮೇಲೆ ಹೊಂದಿಕೊಂಡಿದೆಯೋ? ಇಲ್ಲವೆಂದು ಅಧ್ಯಯನಗಳು ತಿಳಿಸುತ್ತವೆ. ಉದಾಹರಣೆಗೆ, ಚೈನಾದಲ್ಲಿ ಇತ್ತೀಚೆಗೆ ಜನರ ಸರಾಸರಿ ಆದಾಯದಲ್ಲಿ 250 ಪ್ರತಿಶತ ವೃದ್ಧಿಯಾಯಿತು. ಆದರೆ ಜನರು ಖುಷಿಪಡುವ ಬದಲು ಕಾರ್ಯತಃ ಜೀವಿತದಲ್ಲಿ ಅತೃಪ್ತರಾದರು ಎಂದು ಒಂದು ಅಧ್ಯಯನ ತಿಳಿಸಿತು.

ಹಾಗಾದರೆ ನಿಜ ಯಶಸ್ಸು ನಮ್ಮ ಐಹಿಕ ಕೆಲಸಗಳಿಂದ, ನಮ್ಮ ಬೆಲೆಬಾಳುವ ಮನೆ ಅಥವಾ ಕಾರು ಮುಂತಾದ ವಸ್ತುಗಳಿಂದ ಬರುವುದಿಲ್ಲ ನಿಶ್ಚಯ. ಅದಕ್ಕಿಂತ ಹೆಚ್ಚು ಮಹತ್ವವಿರುವ ವಿಷಯಗಳಿಂದಲೇ ಬರುತ್ತವೆ. ಒಬ್ಬನ ಯಶಸ್ಸು ಅವನ ಸೊತ್ತುಗಳ ಮೇಲಲ್ಲ ಬದಲಾಗಿ ಅವನ ಜೀವನದ ತತ್ತ್ವಗಳು ಹಾಗೂ ಜೀವಿತದ ಉದ್ದೇಶಗಳು ಸೇರಿದಂತೆ ಅವನ ಇಡೀ ವ್ಯಕ್ತಿತ್ವದ ಮೇಲೆ ಹೊಂದಿಕೊಂಡಿದೆ ಎಂದು ಹೇಳುವುದು ತರ್ಕಬದ್ಧವಲ್ಲವೇ? ದೃಷ್ಟಾಂತಕ್ಕಾಗಿ ವ್ಯಕ್ತಿಯೊಬ್ಬನು ಚತುರನೂ ಶಕ್ತಿಶಾಲಿಯೂ ಆಗಿರಬಹುದು. ಆದರೂ ಅವನು ನೈತಿಕ ಗುಣವಿಲ್ಲದವನೂ ಪ್ರೀತಿರಹಿತನೂ ಹಾಗೂ ನಿಜ ಸ್ನೇಹಿತರಿಲ್ಲದವನೂ ಆಗಿರಬಹುದು. ಇನ್ನೊಬ್ಬನಲ್ಲಿ ಕೀರ್ತಿ ಅಥವಾ ಧನಸಂಪತ್ತಿರಬಹುದು ಆದರೆ ಅವನಿಗೆ ಸಂತೃಪ್ತಿ ಇಲ್ಲದಿರಬಹುದು. ತನ್ನ ಜೀವಿತವನ್ನು ಹಿನ್ನೋಡುತ್ತಾ ‘ಇದೆಲ್ಲಾ ಯಾತಕ್ಕಾಗಿ? ನನ್ನ ಜೀವಿತದ ಅರ್ಥವೇನು?’ ಎಂದು ಕೇಳಲೂಬಹುದು.

ಹಾಗಾದರೆ ನಿಜ ಯಶಸ್ಸು ಪಡೆದಿರುವ ಜನರ ಜೀವಿತದಲ್ಲಿ ಅವರನ್ನು ಮಾರ್ಗದರ್ಶಿಸುವ ಉತ್ತಮ ಮೂಲತತ್ತ್ವಗಳೂ ಸೇರಿದಂತೆ ಯಾವುದೋ ಮಹತ್ವದ ವಿಷಯವು ಸೇರಿರಲೇಬೇಕೆಂಬುದು ನ್ಯಾಯಸಮ್ಮತ. ಆ ಮೂಲಕ ಅವರಿಗೆ ಆಂತರಿಕ ಶಾಂತಿ, ಸ್ವಗೌರವ ಮತ್ತು ಇತರರ ಮನ್ನಣೆ ಲಭಿಸುವುದು. ಅದಲ್ಲದೆ ಅವರಿಗೆ ಜೀವನದಲ್ಲಿ ನಿಸ್ವಾರ್ಥಪರವಾದ ಸಂತೃಪ್ತವೂ ಅರ್ಥಭರಿತವೂ ಆದ ಉದ್ದೇಶವಿರುವುದು. ‘ಅದು ಯಾವ ಉದ್ದೇಶ ಮತ್ತು ಯಾವ ಮೂಲತತ್ತ್ವಗಳು?’ ಎಂದು ಕೆಲವರು ಪ್ರಶ್ನಿಸಬಹುದು. ಈ ಪ್ರಶ್ನೆಗಳಿಗೆ ಉತ್ತರಗಳು ನಮ್ಮಲ್ಲಿವೆಯೋ ಅಥವಾ ನಾವು ಬೇರೆಡೆಗೆ ನೋಡಬೇಕೋ? ಇವನ್ನು ಮುಂದಿನ ಲೇಖನಗಳು ತಿಳಿಸುವವು. (g 11/08)

[ಪುಟ 3ರಲ್ಲಿರುವ ಚೌಕ]

ಯಶಸ್ಸಿನ ಸೊಟ್ಟನೋಟ

ವೈದ್ಯಕೀಯ ಸಂಶೋಧಕರಿಗನುಸಾರ ಅಧಿಕಾಧಿಕ ಯುವ ಕ್ರೀಡಾಪಟುಗಳು ಕ್ರೀಡೆಗಳಲ್ಲಿ ಉತ್ತಮ ಪ್ರದರ್ಶನ ತೋರಿಸಲಿಕ್ಕಾಗಿ ಅಮಲೌಷಧಗಳನ್ನು ಸೇವಿಸುತ್ತಾರೆ. ಅದು ಆರೋಗ್ಯಕ್ಕೆ ಹಾನಿಕರವಾಗಿದ್ದರೂ ಯಶಸ್ಸಿನ ಶಿಖರವನ್ನು ಮುಟ್ಟುವುದೇ ಅವರ ಧ್ಯೇಯ. ಎಡ್ಯುಕೇಶನ್‌ ಅಪ್‌ಡೇಟ್‌ ವಾರ್ತಾಪತ್ರಿಕೆ ವರದಿಸಿದ್ದು: “‘ಅಮಲೌಷಧ ಸೇವಿಸಿದರೆ ನಿಮ್ಮನ್ನು ಟೀಮ್‌ಗೆ ಸೇರಿಸಲಾಗುವುದು ಮತ್ತು ನೀವು ಗೆಲ್ಲುವಿರಿ, ಆದರೆ ಐದು ವರ್ಷಗಳಲ್ಲಿ ಕಾಯಿಲೆ ಬೀಳುವಿರೆಂದು ನಿಮಗೆ ತಿಳಿದಲ್ಲಿ ಆಗಲೂ ನೀವದನ್ನು ಸೇವಿಸುವಿರೋ?’ ಎಂದು ಇತ್ತೀಚಿನ ಸರ್ವೇ ಒಂದರಲ್ಲಿ ಕಾಲೇಜ್‌ ವಿದ್ಯಾರ್ಥಿಗಳನ್ನು ಕೇಳಲಾಯಿತು. ಆಗ ಬಹುಮಟ್ಟಿಗೆ ಎಲ್ಲರೂ ‘ಹೌದು’ ಎಂದರು. ‘ಐದು ವರ್ಷದೊಳಗೆ ನೀವು ಸಾಯುವಿರೆಂದು ನಿಮಗೆ ತಿಳಿದಾಗಲೂ ನೀವದನ್ನು ಸೇವಿಸುವಿರೋ’ ಎಂದು ಪ್ರಶ್ನೆಯನ್ನು ಬದಲಿಸಿ ಕೇಳಿದಾಗ ಆಗಲೂ 65 ಪ್ರತಿಶತದಷ್ಟು ಯುವಕರು ಹೌದೆಂದರು.”