ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿಶ್ವಾಸಾರ್ಹ ಮಾರ್ಗದರ್ಶನ ಎಲ್ಲಿದೆ?

ವಿಶ್ವಾಸಾರ್ಹ ಮಾರ್ಗದರ್ಶನ ಎಲ್ಲಿದೆ?

ವಿಶ್ವಾಸಾರ್ಹ ಮಾರ್ಗದರ್ಶನ ಎಲ್ಲಿದೆ?

ನಿಜ ಯಶಸ್ಸಿಗೆ ನಮ್ಮನ್ನು ನಡಿಸುವವರು ಯಾರು? ಅದು ಲೌಕಿಕ ರೀತಿಯ ಯಶಸ್ಸಲ್ಲ ಬದಲಿಗೆ ಒಬ್ಬನ ಖಾಸಗಿ ಜೀವನವೂ ಸೇರಿದಂತೆ ವ್ಯಕ್ತಿಯೋಪಾದಿ ಅವನ ಯಶಸ್ಸು ಆಗಿದೆ. ಹಿಂದಿನ ಲೇಖನದಲ್ಲಿ ತಿಳಿಸಿದ ಪ್ರಕಾರ, ನಿಜ ಯಶಸ್ಸು ವಿಶ್ವಾಸಾರ್ಹ ನೈತಿಕ ತತ್ತ್ವಗಳಿಗನುಸಾರ ಜೀವಿಸುವ ಹಾಗೂ ಜೀವಿತದಲ್ಲಿ ಉದಾತ್ತ ಉದ್ದೇಶವನ್ನು ಹೊಂದಿರುವುದರ ಮೇಲೆ ಅವಲಂಬಿಸಿದೆಯೇ ಹೊರತು ಕೀರ್ತಿ, ಸಿರಿಸಂಪತ್ತು, ಅಧಿಕಾರಬಲದ ಮೇಲಲ್ಲ.

ಜೀವಿತದ ಉದ್ದೇಶದ ಕುರಿತ ಪ್ರಶ್ನೆಗಳಿಗೆ ಭರವಸಾರ್ಹ ಉತ್ತರಗಳನ್ನು ಮತ್ತು ಮೂಲತತ್ತ್ವಗಳನ್ನು ನಾವೆಲ್ಲಿ ಕಂಡುಕೊಳ್ಳುತ್ತೇವೆ? ನಾವು ಸ್ವತಃ ಕಂಡುಹಿಡಿಯ ಸಾಧ್ಯವೋ? ಖಂಡಿತ ಇಲ್ಲ. ಏಕೆಂದರೆ ನಾವು ಅಪರಿಪೂರ್ಣರಾಗಿರುವುದರಿಂದ ತಪ್ಪು ದಾರಿಗೆ ನಡಿಸಬಲ್ಲ ದುರಿಚ್ಛೆಗಳು ನಮ್ಮಲ್ಲಿವೆ. (ಆದಿಕಾಂಡ 8:21) ಆದಕಾರಣ, “ಶರೀರದಾಶೆ ಕಣ್ಣಿನಾಶೆ ಬದುಕುಬಾಳಿನ ಡಂಬ” ಎಂದು ಬೈಬಲ್‌ ಕರೆಯುವಂಥ ವ್ಯರ್ಥತೆಗಳನ್ನು ಲಕ್ಷಾಂತರ ಜನರು ಬೆನ್ನಟ್ಟುತ್ತಾ ಇದ್ದಾರೆ. (1 ಯೋಹಾನ 2:16) ಇದು ನಿಜ ಯಶಸ್ಸಿನ ದಾರಿಯಲ್ಲ ಬದಲಿಗೆ ನಿರಾಶೆ ಮತ್ತು ಅಸಂತೋಷಕ್ಕೆ ನಡೆಸುವ ನಕಲಿ ಯಶಸ್ಸು. ಆದುದರಿಂದ ಸಕಾರಣದಿಂದಲೇ ಜೀವಿತದ ಬಹುಮುಖ್ಯ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಲು ಅನೇಕರು ನಮ್ಮ ಸೃಷ್ಟಿಕರ್ತನ ಮಾರ್ಗದರ್ಶನವನ್ನು ಕೋರುತ್ತಾರೆ. *

ದೇವರ ಮಾರ್ಗದರ್ಶನ ಕೋರಬೇಕೋ?

ನಮ್ಮ ಸೃಷ್ಟಿಕರ್ತನ ಮಾರ್ಗದರ್ಶನ ಕೋರುವುದು ನ್ಯಾಯಸಮ್ಮತವೇಕೆ? ಏಕೆಂದರೆ ನಮ್ಮನ್ನು ಸೃಷ್ಟಿಸಿದ ಕಾರಣವೇನೆಂದು ಆತನಿಗೆ ತಿಳಿದಿದೆ. ಆದುದರಿಂದ ನಮ್ಮ ಜೀವಿತದ ಉದ್ದೇಶವು ಏನಾಗಿರಬೇಕೆಂಬದನ್ನೂ ಆತನು ಬಲ್ಲನು. ಮಾತ್ರವಲ್ಲ, ನಮ್ಮನ್ನು ಶಾರೀರಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಹೇಗೆ ರೂಪಿಸಿದ್ದಾನೆಂಬುದು ಸಹ ಆತನಿಗೆ ಗೊತ್ತು. ಹೀಗೆ ಮಾನವರು ಅನುಸರಿಸಬೇಕಾದ ಅತ್ಯುತ್ತಮ ಮೂಲತತ್ತ್ವಗಳನ್ನು ಆತನು ಮಾತ್ರ ತಿಳಿಸಶಕ್ತನು. ಅಷ್ಟಲ್ಲದೆ ದೇವರು ಪ್ರೀತಿಸ್ವರೂಪಿಯಾಗಿದ್ದಾನೆ. ಆದ್ದರಿಂದ ನಾವು ನಿಜವಾಗಿಯೂ ಸಂತೋಷಿಗಳೂ ಯಶಸ್ವಿಗಳೂ ಆಗಿರಬೇಕೆಂದೇ ಆತನ ಅಪೇಕ್ಷೆ. (1 ಯೋಹಾನ 4:8) ಹಾಗಾದರೆ ಆತನ ಪ್ರೀತಿಪರ ಮಾರ್ಗದರ್ಶನಕ್ಕಾಗಿ ನಾವೆಲ್ಲಿಗೆ ತಿರುಗೋಣ? ಪವಿತ್ರ ಬೈಬಲಿನ ಕಡೆಗೇ. ಅದನ್ನು ದೇವರು 40 ಮಾನವ ಲೇಖಕರ ಅಥವಾ ಕಾರ್ಯದರ್ಶಿಗಳ ಮೂಲಕ ನಮಗಾಗಿ ಸಿದ್ಧಪಡಿಸಿದನು. * (2 ತಿಮೊಥೆಯ 3:16, 17) ಆದರೂ ಆ ಗ್ರಂಥದಲ್ಲಿರುವ ಮಾರ್ಗದರ್ಶನದಲ್ಲಿ ನಾವೇಕೆ ಭರವಸೆಯಿಡಬಲ್ಲೆವು?

“ವಿವೇಕವು ತನ್ನ ಕೆಲಸಗಳಿಂದ ವಿವೇಕವೇ ಎಂದು ಗೊತ್ತಾಗುವದು” ಎಂದು ದೇವರ ಪ್ರಮುಖ ಪ್ರತಿನಿಧಿಯಾದ ಯೇಸು ಕ್ರಿಸ್ತನು ಹೇಳಿದನು. (ಮತ್ತಾಯ 11:19; ಯೋಹಾನ 7:29) ದೇವರ ತತ್ವಾಧಾರಿತ ವಿವೇಕವು ನಮ್ಮನ್ನು ಯಶಸ್ಸಿನ ಮತ್ತು ಬಾಳುವ ಸಂತೋಷದ ದಾರಿಯಲ್ಲಿ ಅಂದರೆ ‘ಸಕಲ ಸನ್ಮಾರ್ಗದಲ್ಲಿ’ ನಡೆಸುತ್ತದೆ. ಆದರೆ ದೇವರನ್ನು ಕಡೆಗಣಿಸುವ ಮಾನವ ವಿವೇಕವಾದರೋ ನಮ್ಮನ್ನು ನಡಿಸುವುದು ವೈಫಲ್ಯ ಮತ್ತು ಅಸಂತೋಷಕ್ಕಷ್ಟೇ.—ಜ್ಞಾನೋಕ್ತಿ 2:8, 9; ಯೆರೆಮೀಯ 8:9.

1960ರ ವರ್ಷಗಳಲ್ಲಿ ಲೋಕರಂಗವನ್ನು ಪ್ರವೇಶಿಸಿದ ಹಿಪ್ಪೀ ಯುಗವನ್ನು ಪರಿಗಣಿಸಿರಿ. ಹಿರೀ ಪೀಳಿಗೆಯ ನೀತಿಮಟ್ಟಗಳನ್ನು ಮತ್ತು ಅಧಿಕಾರವನ್ನು ತಿರಸ್ಕರಿಸುತ್ತಾ, ಅನೇಕ ಹಿಪ್ಪೀಗಳು ಬೇರೆ ವಿಷಯಗಳೂ ಸೇರಿದಂತೆ ಅಮಲೌಷಧದ ಉಪಯೋಗ, ಇವತ್ತಿಗಾಗಿ ಮಾತ್ರ ಜೀವಿಸುವ ತತ್ತ್ವ ಹಾಗೂ ಲೈಂಗಿಕ ಸ್ವೇಚ್ಛಾಚಾರವನ್ನು ಬಳಕೆಗೆ ತಂದರು. ಇಂಥ ಜೀವನ ಶೈಲಿಯು ನಿಜ ವಿವೇಕದ ಜೀವನರೀತಿಯಾಗಿತ್ತೋ? ಅದು ಜನರಿಗೆ ಜೀವನದಲ್ಲಿ ಶಾಂತಿ ಮತ್ತು ಬಾಳುವ ಸಂತೋಷವನ್ನು ಪ್ರವರ್ಧಿಸುವ ನಿಜ ಉದ್ದೇಶವನ್ನೂ ನೀತಿಯ ಮಟ್ಟಗಳನ್ನೂ ಒದಗಿಸಿತ್ತೋ? ಇಲ್ಲ, ಅದು ಜನರ ಜೀವನವನ್ನು ಒಳ್ಳೇದಕ್ಕಾಗಿ ಬದಲಾಯಿಸಲಿಲ್ಲ, ಬದಲಾಗಿ ಇಂದಿರುವ ಮಾನವ ಸಮಾಜದ ಹೆಚ್ಚಿನ ನೈತಿಕ ಅವನತಿಗೆ ಕಾರಣವಾಯಿತು.—2 ತಿಮೊಥೆಯ 3:1-5.

ಮಾನವ ತತ್ವಜ್ಞಾನಕ್ಕೆ ತದ್ವಿರುದ್ಧವಾಗಿ ಬೈಬಲಿನಲ್ಲಿ ಅಡಕವಾಗಿರುವ ವಿವೇಕವಾದರೋ ಸರ್ವಕಾಲಕ್ಕೂ ಪ್ರಯೋಜನಕರ. (ಯೆಶಾಯ 40:8) ಅದೇಕೆಂದು ಮುಂದಿನ ಲೇಖನವನ್ನು ಓದುವಾಗ ನೀವು ಕಾಣುವಿರಿ. ಅದು ಬಹುಮಟ್ಟಿಗೆ ಎಲ್ಲಾ ದೇಶಗಳ ಲಕ್ಷಾಂತರ ಜನರಿಗೆ ಸಹಾಯನೀಡಿದ ಆರು ಬೈಬಲ್‌ ಮೂಲತತ್ತ್ವಗಳನ್ನು ಚರ್ಚಿಸುತ್ತದೆ. ಅವರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳು ಏನೇ ಆಗಿರಲಿ ಆ ಮೂಲತತ್ತ್ವಗಳು ನಿಜ ಸಂತೋಷ ಮತ್ತು ಯಶಸ್ಸನ್ನು ಪಡೆಯಲು ಅನುವು ಮಾಡಿಕೊಟ್ಟಿವೆ. (g 11/08)

[ಪಾದಟಿಪ್ಪಣಿಗಳು]

^ “ಯಶಸ್ಸನ್ನು ಕುಂಠಿಸುವ ನಂಬಿಕೆಗಳು” ಚೌಕ ನೋಡಿ.

^ “ನೀವು ಬೈಬಲಿನಲ್ಲಿ ಭರವಸೆಯಿಡಬಲ್ಲಿರೋ?” ಎಂಬ ಮುಖ್ಯವಿಷಯವನ್ನು ಚರ್ಚಿಸುವ ಎಚ್ಚರ! (ಇಂಗ್ಲಿಷ್‌) ಪತ್ರಿಕೆಯ ನವೆಂಬರ್‌ 2007ರ ವಿಶೇಷ ಸಂಚಿಕೆಯನ್ನು ನೋಡಿ. ಪವಿತ್ರ ಬೈಬಲ್‌ ನಿಜವಾಗಿಯೂ ದೇವಪ್ರೇರಿತ ಎಂಬುದಕ್ಕೆ ಐತಿಹಾಸಿಕ, ವೈಜ್ಞಾನಿಕ, ಪ್ರಾಕ್ತನ ಶಾಸ್ತ್ರ ಹಾಗೂ ಇತರ ಪುರಾವೆಗಳನ್ನು ಆ ಸಂಚಿಕೆಯಲ್ಲಿ ಕೊಡಲಾಗಿದೆ.

[ಪುಟ 5ರಲ್ಲಿರುವ ಚೌಕ]

ಯಶಸ್ಸನ್ನು ಕುಂಠಿಸುವ ನಂಬಿಕೆಗಳು

ಅನೇಕ ಜನರು ದೇವರೇ ಇಲ್ಲವೆಂದು ಕಂಠೋಕ್ತವಾಗಿ ಹೇಳುತ್ತಾರೆ. ಅಸಹಜ ವಿಕಾಸವಾದವೇ ಜೀವದ ಮೂಲವೆಂದು ಅವರ ಹೇಳಿಕೆ. ಇದು ಸತ್ಯವಾಗಿದ್ದಲ್ಲಿ ಜೀವವು ರಾಸಾಯನಿಕ ಮತ್ತು ಜೈವಿಕ ಪ್ರಕ್ರಿಯೆಗಳ ಆಕಸ್ಮಿಕ ಘರ್ಷಣೆಯಿಂದ ಥಟ್ಟನೆ ಉದ್ಭವಿಸಿತೆನ್ನಬೇಕು. ಹಾಗಿರುವಲ್ಲಿ ಭೌತಿಕ ನಿಯಮ ಮತ್ತು ಉದ್ದೇಶಕ್ಕಾಗಿ ನಮ್ಮ ಹುಡುಕಾಟವು ನಿರರ್ಥಕವೇ ಸರಿ.

ದೇವರು ನಮ್ಮನ್ನು ಸೃಷ್ಟಿಸಿ ನಡುದಾರಿಯಲ್ಲಿ ಕೈಬಿಟ್ಟನೆಂದು ಬೇರೆ ಕೆಲವರ ನಂಬಿಕೆ. ಈ ಅಭಿಪ್ರಾಯವು ನಮ್ಮನ್ನು ಆಧ್ಯಾತ್ಮಿಕವಾಗಿ ಅನಾಥರನ್ನಾಗಿ ಮತ್ತು ಜೀವನದ ನಿಜ ಉದ್ದೇಶ, ಮಟ್ಟಗಳ ವಿಷಯದಲ್ಲಿ ಅಜ್ಞಾನಿಗಳನ್ನಾಗಿ ಮಾಡುತ್ತದೆ. ಈ ಕುರಿತು ಯೋಚಿಸಿ: ದೇವರು ನಿಸರ್ಗದಲ್ಲಿ ಪ್ರಾಣಿಜಗತ್ತಿನ ಪ್ರತಿಯೊಂದು ಜೀವಿಗೆ ತನ್ನ ಸಾಮಾನ್ಯ ನೆಲೆಯನ್ನು ಕಂಡುಕೊಳ್ಳಲು ಹುಟ್ಟರಿವನ್ನು ನೀಡಿದ್ದಾನೆ. ಇದರಿಂದಾಗಿ ಆತನ ಅಪಾರ ವಿವೇಕವು ನಮ್ಮ ಸುತ್ತಮುತ್ತಲು ಸ್ಪಷ್ಟ ಗೋಚರ. ಹಾಗಿರುವಲ್ಲಿ ಅದೇ ಸೃಷ್ಟಿಕರ್ತನು ನಮ್ಮನ್ನು ನಿರ್ಮಿಸಿದ ಮೇಲೆ ತನ್ನ ಮಾರ್ಗದರ್ಶನ ಕೊಡದೆ ತಬ್ಬಲಿಗಳನ್ನಾಗಿ ತಡಕಾಡುವಂತೆ ಬಿಟ್ಟುಬಿಡುವನೋ? ಖಂಡಿತವಾಗಿಯೂ ಇಲ್ಲ!—ರೋಮಾಪುರ 1:19, 20.

ನಾಸ್ತಿಕ ತತ್ತ್ವಜ್ಞಾನವು ಜೀವಿತದ ಉದ್ದೇಶಕ್ಕಾಗಿ ಮತ್ತು ಭೌತಿಕ ನಿಯಮಗಳಿಗಾಗಿ ನಮ್ಮ ಹುಡುಕಾಟವನ್ನು ವ್ಯರ್ಥಗೊಳಿಸುವ ಮೂಲಕ ನಿಜ ಯಶಸ್ಸಿನ ಕಲ್ಪನೆಯನ್ನೇ ಕುಂಠಿತಗೊಳಿಸುತ್ತದೆ.

[ಪುಟ 5ರಲ್ಲಿರುವ ಚಿತ್ರ]

ಬೈಬಲಿನಲ್ಲಿರುವ ವಿವೇಕವು ವಿಶ್ವಾಸಾರ್ಹವೆಂದು ಅದರ ಸತ್ಪರಿಣಾಮಗಳಿಂದ ಸಾಬೀತಾಗಿದೆ