ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಧನ ನಿಮ್ಮ ಧಣಿಯೊ ದಾಸನೊ?

ಧನ ನಿಮ್ಮ ಧಣಿಯೊ ದಾಸನೊ?

ಧನ ನಿಮ್ಮ ಧಣಿಯೊ ದಾಸನೊ?

ಹಣರೋಗ ಎಂಬ ಹೊಸ ಕಾಯಿಲೆಯ ಲಕ್ಷಣಗಳಿಂದ ನೀವು ಬಾಧೆಪಡುತ್ತಿದ್ದೀರೋ? ಈ ರೋಗವು ಪ್ರಪಂಚದ ಜನಸಂಖ್ಯೆಯ ಬಹುಭಾಗದ ಜನರನ್ನು ಕಾಡುತ್ತಿದೆ ಎಂದು ವರದಿಸಲಾಗಿದೆ. ಈ ಹಣರೋಗ ಅಂದರೇನು?

ಬ್ರಿಟನ್‌ನ ಮಾನಸಿಕ ಸ್ವಾಸ್ಥ್ಯ ಸಂಶೋಧಕ ಡಾಕ್ಟರ್‌ ರೋಜರ್‌ ಹೆಂಡರ್‌ಸನ್‌ ಇವರು ಇತ್ತೀಚೆಗೆ “ಹಣದಾಸೆಯ ರೋಗಲಕ್ಷಣ” ಎಂಬ ಹೊಸ ಪದರಚನೆಯನ್ನು ಮಾಡಿದರು. ಹಣದ ಸಮಸ್ಯೆಗಳಿಂದ ಒತ್ತಡಕ್ಕೆ ಗುರಿಯಾದ ಜನರು ಅನುಭವಿಸುವ ಶಾರೀರಿಕ ಮತ್ತು ಮಾನಸಿಕ ವೇದನೆಗಳ ರೋಗಲಕ್ಷಣಗಳಿಗೆ ಅವರು ಈ ಹೆಸರನ್ನಿತ್ತರು. ಈ ರೋಗಲಕ್ಷಣಗಳಲ್ಲಿ ಉಸಿರಾಟದ ತೊಂದರೆ, ತಲೆಸಿಡಿತ, ಓಕರಿಕೆ, ಚರ್ಮರೋಗ, ಹಸಿವಿಲ್ಲದಿರುವಿಕೆ, ಮಾತುಮಾತಿಗೆ ಕೋಪ, ಗಾಬರಿ ಮತ್ತು ನಕಾರಾತ್ಮಕ ಭಾವನೆ ಮುಂತಾದವು ಸೇರಿವೆ. “ಹಣದ ಚಿಂತೆಗಳೇ ಒತ್ತಡಕ್ಕೆ ಪ್ರಮುಖ ಕಾರಣ” ಎಂದು ಹೆಂಡರ್‌ಸನ್‌ ವರದಿಸುತ್ತಾರೆ.

ಹಣದ ದುಷ್ಪರಿಣಾಮಗಳು ಹಾಗೂ ಅದರ ಚಿಂತೆದುರವಸ್ಥೆಗಳಿಗೆ ಇತ್ತೀಚಿನ ತಿಂಗಳುಗಳಲ್ಲಿ ಅಧಿಕಾಧಿಕ ಜನರು ಬಲಿಯಾಗುತ್ತಿರುವುದೇನು ಆಶ್ಚರ್ಯ ಸಂಗತಿಯಲ್ಲ. ಅನೇಕ ದೇಶಗಳಲ್ಲಿ ಇಂದು ಉಂಟಾಗಿರುವ ಆರ್ಥಿಕ ಕುಸಿತಗಳು ಹಾಗೂ ಉದ್ಯೋಗ, ಮನೆಮಠ, ಉಳಿತಾಯದ ನಷ್ಟಗಳು ಭೌಗೋಳಿಕ ಪ್ರಮಾಣವನ್ನು ತಲಪಿವೆ. ಅತಿ ದೊಡ್ಡ ದೊಡ್ಡ ಹಣಕಾಸಿನ ಸಂಘಸಂಸ್ಥೆಗಳು ಕುಸಿದು ಬಿದ್ದಿವೆ. ಅತ್ಯಂತ ಶ್ರೀಮಂತ ರಾಷ್ಟ್ರಗಳು ಸಹ ಆರ್ಥಿಕ ಮುಗ್ಗಟ್ಟಿನಲ್ಲಿ ಪೂರ್ತಿ ಮುಳುಗಿಹೋಗುವುದನ್ನು ತಡೆಯಲು ತುರ್ತು ಕ್ರಮಗಳನ್ನು ಕೈಗೊಂಡಿವೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಆಹಾರ ಮತ್ತು ಇತರ ಮೂಲಭೂತ ವಸ್ತುಗಳ ಬೆಲೆಯೇರಿಕೆಯು ಸಹ ಅತಿ ಚಿಂತಾಜನಕ.

ಸಮೃದ್ಧಭರಿತ ಕಾಲದಲ್ಲಿ ಕೂಡ ಕಷ್ಟಾಪತ್ತುಗಳು ಸಾಮಾನ್ಯ. ಆರ್ಥಿಕ ಸಮೃದ್ಧಿಯ ಇತ್ತೀಚಿನ ವರ್ಷಗಳಲ್ಲಿ ಸಹ ಅನೇಕ ಜನರು ಹಣದ ಚಿಂತೆ-ಸಂಕಟಗಳಿಂದ ಪೀಡಿತರಾಗಿದ್ದಾರೆ. ಉದಾಹರಣೆಗೆ, ದಕ್ಷಿಣ ಆಫ್ರಿಕದ ವಾರ್ತಾಪತ್ರಿಕೆ ದ ವಿಟ್ನೆಸ್‌ ವರದಿಸಿದ್ದು: “ಮಿತಿಮೀರಿದ ಖರ್ಚು, ವ್ಯಾಪಾರೀಕರಣ, ಐಷಾರಾಮದ ಬದುಕಿಗಾಗಿ ವ್ಯಾಮೋಹ ಇಂಥ ಸಾಮಾಜಿಕ ವ್ಯಾಧಿಯು” ಆಫ್ರಿಕದಲ್ಲಿ ಕಾಡ್ಗಿಚ್ಚಿನಂತೆ ಹರಡುತ್ತಿತ್ತು. ಈ ವಾರ್ತಾಪತ್ರಿಕೆಯು ಈ “ರೋಗ”ದ ಕೆಲವು ಲಕ್ಷಣಗಳನ್ನು ಪಟ್ಟಿಮಾಡಿತ್ತು. ಅದರಲ್ಲಿ “ಒತ್ತಡ, ಸಾಲದ ಹೊರೆ, ದುಂದುವೆಚ್ಚ, ಅಹೋರಾತ್ರಿ ದುಡಿತ, ಕೊರತೆಯುಳ್ಳ ಭಾವನೆ, ಮತ್ಸರ ಮತ್ತು ಖಿನ್ನತೆ” ಮುಂತಾದವುಗಳು ಸೇರಿವೆ. ಆಫ್ರಿಕದ ಜನಜೀವನ ಗುಣಮಟ್ಟದಲ್ಲಿ ಈಗ ಆಗುತ್ತಿರುವ ಅವನತಿಗೆ ಹಣವೇ ಮೂಲಕಾರಣವೆಂದು ಹೇಳಲಾಗಿದೆ.

ಭಾರತವು ಇತ್ತೀಚೆಗಿನ ಆರ್ಥಿಕ ಬಿಕ್ಕಟಿಗೆ ಮುಂಚೆ ಮಹತ್ತರವಾದ ಆರ್ಥಿಕ ಅಭಿವೃದ್ಧಿಯನ್ನು ಪಡೆದಿತ್ತು. ಇಂಡಿಯ ಟುಡೇ ಇಂಟರ್‌ನ್ಯಾಷನಲ್‌ ಪತ್ರಿಕೆ ಅಂದದ್ದು: ದೇಶವು 2007ರಲ್ಲಿ ಆರ್ಥಿಕವಾಗಿ “ಒಂದು ವಿಪರೀತ ವೆಚ್ಚದ ಹೊಸಮಟ್ಟವನ್ನು ತೀವ್ರವಾಗಿ ತಲಪಿತು.” ಭಾರತದ ಈ ಸಮೃದ್ಧ ಸ್ಥಿತಿಯು ಅಸಮಾಧಾನ ಮತ್ತು ಹಿಂಸಾಚಾರಕ್ಕೆ ಸಹ ನಡಿಸಬಹುದೆಂದು ಆಗ ಅಧಿಕಾರಿಗಳಿಗೆ ದಿಗಿಲು ಹುಟ್ಟಿತ್ತು.

ಅದೇ ಸಮಯಾವಧಿಯಲ್ಲಿ ಅಮೆರಿಕದ ಹೊಸ ಯುವ ಪೀಳಿಗೆಯು ಸುಖಭೋಗದ ವಸ್ತುಗಳಿಗಾಗಿ ತುಂಬ ಹಣ ಖರ್ಚುಮಾಡುವುದು ಕಂಡುಬಂದಿದೆ. ಆದರೂ ವಿಪರೀತ ಹಣಖರ್ಚು ಮಾಡಲು ಅವರಿಗಿರುವ ತಾಕತ್ತು ಅವರಿಗೆ ಸಂತೋಷವನ್ನು ತಂದಿಲ್ಲವೆಂಬುದು ವಿಷಾದಕರ. ಕೈತುಂಬಿ ಸೋರಿಹೋಗುವಷ್ಟು ಇರುವ ಹಣವೇ ಕುಡಿಕತನ, ಖಿನ್ನತೆ, ಆತ್ಮಹತ್ಯೆಗೆ ಪ್ರಮುಖ ಕಾರಣವಾಗಿತ್ತೆಂದು ಸಂಶೋಧಕರು ಹೇಳಿದರು. ಒಂದು ಅಧ್ಯಯನವು ಹೇಳಿದ್ದೇನೆಂದರೆ, ಸಮೃದ್ಧಿ ಮತ್ತು ಐಶ್ವರ್ಯದ ಹೊರತೂ “ನಿಜವಾಗಿ ಸಂತೋಷಿತರಾಗಿದ್ದವರು ಮೂವರಲ್ಲಿ ಒಬ್ಬರಿಗಿಂತಲೂ ಕಡಿಮೆ ಅಮೆರಿಕನರು” ಎಂಬುದಾಗಿ.

ವಿರುದ್ಧ ದೃಷ್ಟಿಕೋನ

ಇನ್ನೊಂದು ಕಡೆ, ಧನಿಕ-ಬಡವರೆನ್ನದೆ ಅನೇಕ ಜನರು ಸುಖದ ಸಮಯದಲ್ಲೂ ಸಂಕಷ್ಟದ ಸಮಯದಲ್ಲೂ ಹಣ ಮತ್ತು ಲೌಕಿಕ ಸ್ವತ್ತುಗಳ ಬಗ್ಗೆ ಚಿಂತೆ ತಳಮಳದಿಂದ ಮುಕ್ತರಾಗಿದ್ದಾರೆ. ಈ ವ್ಯತ್ಯಾಸವೇಕೆ?

ದ ಮೀನಿಂಗ್‌ ಆಫ್‌ ಮನಿ ಎಂಬ ಹೆಸರಿನ ವರದಿಯಲ್ಲಿ ಸಂಶೋಧಕರು ಗಮನಿಸಿದ ಪ್ರಕಾರ ಕೆಲವು ಜನರಿಗೆ “ಅತ್ಯಧಿಕ ಸ್ಫೂರ್ತಿ, ಹುಮ್ಮಸ್ಸು ದೊರೆಯುವುದು ಹಣದಿಂದಲೇ ಮತ್ತು ದುಡ್ಡೇ ಅವರ ಧಣಿ. ಇದು ಅವರನ್ನು ಒತ್ತಡ ಮತ್ತು ಮಾನಸಿಕ ರೋಗಗಳಿಗೆ ನಡಿಸಬಲ್ಲದು.” ಇದಕ್ಕೆ ವ್ಯತಿರಿಕ್ತವಾಗಿ, “ಯಾರು ತಮ್ಮ ಹಣವನ್ನು ಜಾಗ್ರತೆಯಿಂದ ಬಜೆಟ್‌ ಮಾಡುತ್ತಾರೋ ಅವರಿಗೆ ಹೆಚ್ಚು ಚಿತ್ತ ಸ್ವಾಸ್ಥ್ಯವಿದೆ ಮತ್ತು ತಮ್ಮ ಬಗ್ಗೆ ಸಕಾರಾತ್ಮಕ ಭಾವನೆಯನ್ನು ಹೊಂದುತ್ತಾರೆ. ಅವರು ದುಡ್ಡಿನ ಧಣಿಯಾಗಿರುತ್ತಾರೆಯೇ ಹೊರತು ದಾಸರಲ್ಲ . . . ಯಾರು ತಮ್ಮ ಹಣವನ್ನು ಜಾಗ್ರತೆಯಿಂದ ಬಜೆಟ್‌ ಮಾಡುತ್ತಾರೋ ಅವರಿಗೆ ಹೆಚ್ಚು ಒತ್ತಡ ಇರುವುದಿಲ್ಲ, ಚಿಂತೆ ಕಳವಳಗಳೂ ಕಡಿಮೆ” ಎಂದು ಸಂಶೋಧಕರು ಕೂಡಿಸಿ ಹೇಳಿದರು.

ಹಣದ ಕುರಿತು ನಿಮ್ಮ ಮನೋಭಾವ ಏನು? ಲೋಕದ ಆರ್ಥಿಕತೆಯ ಈ ಭುಗಿಲೇಳುವ ಪರಿಸ್ಥಿತಿಯು ನಿಮ್ಮನ್ನು ಹೇಗೆ ಪ್ರಭಾವಿಸುತ್ತದೆ? ಧನ ನಿಮ್ಮ ಧಣಿಯೊ ದಾಸನೊ? ಹಣರೋಗ ಎನ್ನಲಾಗುವ ಈ ಹೊಸ ಕಾಯಿಲೆಯ ಲಕ್ಷಣಗಳು ಪ್ರಾಯಶಃ ನಿಮಗೆ ಇರಲಿಕ್ಕಿಲ್ಲ. ಆದರೂ ಧನಿಕ-ಬಡವರೆನ್ನದೆ ನಾವೆಲ್ಲರೂ ಹಣದ ಚಿಂತೆಗಳ ಕೆಟ್ಟ ಪ್ರಭಾವಗಳಿಗೆ ಒಳಗಾಗುತ್ತೇವೆ. ನಿಮ್ಮ ಹಣಕಾಸನ್ನು ನಿರ್ವಹಿಸುವ ವಿಧದಲ್ಲಿ ಕೆಲವು ಹೊಂದಾಣಿಕೆ ಮಾಡುವಲ್ಲಿ ಹೆಚ್ಚು ಮನಶ್ಶಾಂತಿ ಮತ್ತು ಸುಖಸಂತೋಷದ ಜೀವನ ಹೇಗೆ ನಿಮ್ಮದಾಗಬಹುದು ಎಂಬುದನ್ನು ಪರಿಗಣಿಸಿರಿ. (g 3/09)

[ಪುಟ 4ರಲ್ಲಿರುವ ಚೌಕ/ಚಿತ್ರ]

ಧನ ನಿಮ್ಮ ಧಣಿಯಾಗಿದ್ದಲ್ಲಿ . . .

ಹಣಕಾಸಿನ ಚರ್ಚೆಮಾಡುವುದು ನಿಮಗಿಷ್ಟವಾಗದು ಏಕೆಂದರೆ ಅದು ನಿಮ್ಮ ಚಿಂತೆಯನ್ನು ಹೆಚ್ಚಿಸುತ್ತದೆ

ನಿಮ್ಮ ಕುಟುಂಬದ ಜಗಳಕ್ಕೆ ಹೆಚ್ಚಿನ ಕಾರಣ ಹಣವೇ

ಹಣವನ್ನು ನೀವು ಸಿಕ್ಕಾಪಟ್ಟೆ ಖರ್ಚು ಮಾಡುತ್ತೀರಿ

ಬಿಲ್‌ ಪಾವತಿಯ ಬಗ್ಗೆ ನೀವು ಸದಾ ತಲೆಗೆಡಿಸಿಕೊಳ್ಳುತ್ತೀರಿ

ನಿಮ್ಮ ಸಂಪಾದನೆ ಎಷ್ಟೆಂದೇ ನಿಮಗೆ ಗೊತ್ತಿರುವುದಿಲ್ಲ

ಕೈಯಲ್ಲಿರುವ ದುಡ್ಡು ಹೇಗೆ ಖರ್ಚಾಗುತ್ತದೆಂದೇ ನಿಮಗೆ ಗೊತ್ತಾಗುವುದಿಲ್ಲ

ನಿಮಗಿರುವ ಸಾಲ ಎಷ್ಟೆಂದು ನಿಮಗೆ ತಿಳಿದಿರುವುದಿಲ್ಲ

‘ಇಷ್ಟು ದೊಡ್ಡ ಬಿಲ್‌ ಹೇಗೆ ಬಂತಪ್ಪಾ’ ಎಂದು ಒದರುತ್ತಿರುತ್ತೀರಿ

ಬಿಲ್‌ ಕಟ್ಟುವಾಗ ನೀವು ಯಾವಾಗಲೂ ಲೇಟೇ

ಕ್ರೆಡಿಟ್‌ ಕಾರ್ಡ್‌ ಬಿಲ್‌ಗಳನ್ನು ಪೂರ್ತಿಯಾಗಿ ನೀವು ಪಾವತಿಮಾಡುವುದಿಲ್ಲ

ಬೇರೆ ಕೆಲಸಕ್ಕಾಗಿ ಇಟ್ಟ ಹಣವನ್ನು ತೆಗೆದು ಬಿಲ್‌ ಪಾವತಿಮಾಡುತ್ತೀರಿ

ಬರೇ ಬಿಲ್‌ ಪಾವತಿ ಮಾಡಲಿಕ್ಕಾಗಿ ಓವರ್‌ ಟೈಮ್‌ ಮಾಡುತ್ತೀರಿ

ಹಳೇ ಲೋನನ್ನು ತೀರಿಸಲಿಕ್ಕಾಗಿ ಹೊಸ ಲೋನ್‌ ತಕ್ಕೊಳ್ಳುತ್ತೀರಿ

ದಿನನಿತ್ಯದ ಖರ್ಚಿಗಾಗಿಯೂ ಉಳಿತಾಯ ಮಾಡಿಟ್ಟ ಹಣ ಬಳಸುತ್ತೀರಿ

ತಿಂಗಳ ಕೊನೆಯಲ್ಲಿ ಯಾವಾಗಲೂ ನಿಮ್ಮ ಜೇಬು ಖಾಲಿ

ತುಂಬಾ ಹಣ ಕೂಡಿಸಿಡಲು ನೀವು ಸದಾ ಪ್ರಯಾಸಪಡುತ್ತೀರಿ

ಹಣ ಸಂಬಂಧಿತ ಒತ್ತಡದಿಂದಾಗಿ ದೈಹಿಕ ಅಥವಾ ಮಾನಸಿಕ ರೋಗಗಳಿಗೆ ತುತ್ತಾಗುತ್ತೀರಿ

[ಕೃಪೆ]

ಮೂಲ: ಮನಿ ಸಿಕ್‌ನೆಸ್‌ ಸಿನ್‌ಡ್ರಮ್‌, ಡಾ. ರೋಜರ್‌ ಹೆಂಡರ್‌ಸನ್‌ರಿಂದ