ನಿಮ್ಮ ಭವಿಷ್ಯ ಪೂರ್ವನಿರ್ಧರಿತವೋ?
ಬೈಬಲಿನ ದೃಷ್ಟಿಕೋನ
ನಿಮ್ಮ ಭವಿಷ್ಯ ಪೂರ್ವನಿರ್ಧರಿತವೋ?
ಅನೇಕರು, ತಮ್ಮ ಜೀವನ ಮತ್ತು ಭವಿಷ್ಯವನ್ನು ದೇವರು ಮೊದಲೇ ನಿರ್ಧರಿಸಿದ್ದಾನೆ ಮತ್ತು ಅವನು ಆಡಿಸಿದಂತೆ ಅದು ಮುಂದೆಸಾಗುವುದೆಂದು ನಂಬುತ್ತಾರೆ. ನಾವು ಗರ್ಭದಲ್ಲಿ ರೂಪಿಸಲ್ಪಟ್ಟಂದಿನಿಂದ ಸಾಯುವ ವರೆಗೂ ದೇವರ ವಿಧಿಲೀಲೆಗೆ ತಕ್ಕಂತೆ ಆಡುತ್ತೇವೆಂದು ಅವರ ಎಣಿಕೆ. ‘ಎಷ್ಟೆಂದರೂ ದೇವರು ಸರ್ವಶಕ್ತ, ಸರ್ವಜ್ಞಾನಿ ಅಥವಾ ಸರ್ವಜ್ಞನಾಗಿರುವುದರಿಂದ ಭೂತ, ವರ್ತಮಾನ ಮತ್ತು ಭವಿಷ್ಯತ್ಕಾಲದ ಪ್ರತಿಯೊಂದು ವಿವರವನ್ನೂ ಆತನು ತಿಳಿದಿರುವುದು ನಿಶ್ಚಯ’ ಎಂದನ್ನುತ್ತಾರೆ ಅವರು.
ನಿಮ್ಮ ಅಭಿಪ್ರಾಯವೇನು? ದೇವರು ನಿಮ್ಮ ಜೀವನಮಾರ್ಗವನ್ನು ಮತ್ತು ಅಂತಿಮ ಗತಿಯನ್ನು ಪೂರ್ವನಿರ್ಧರಿಸುತ್ತಾನೆಯೆ? ಬೇರೊಂದು ಮಾತಿನಲ್ಲಿ ಹೇಳುವುದಾದರೆ, ನಮಗಿರುವ ಇಚ್ಛಾಸ್ವಾತಂತ್ರ್ಯ ನೈಜವೊ ಇಲ್ಲವೆ ಕೇವಲ ಭ್ರಮೆಯೋ? ಬೈಬಲ್ ಏನು ಹೇಳುತ್ತದೆ?
ದೇವರು ಎಲ್ಲವನ್ನೂ ಮುಂದಾಗಿಯೇ ತಿಳಿದಿರುತ್ತಾನೋ?
ದೇವರು ಎಲ್ಲವನ್ನೂ ಮುಂದಾಗಿ ತಿಳಿದುಕೊಳ್ಳಶಕ್ತನು ಎಂಬ ವಿಷಯದಲ್ಲಿ ಬೈಬಲ್ ಯಾವ ಸಂದೇಹಕ್ಕೂ ಎಡೆಗೊಡುವುದಿಲ್ಲ. ದೇವರು “ಆರಂಭದಿಂದ ಅಂತ್ಯವನ್ನು” ಬಲ್ಲನೆಂದು ಯೆಶಾಯ 46:10 ಹೇಳುತ್ತದೆ. ಅನೇಕ ಪ್ರವಾದನೆ ಅಂದರೆ ಭವಿಷ್ಯನುಡಿಗಳನ್ನು ಬರೆದಿಡಲು ಆತನು ಮಾನವ ಕಾರ್ಯದರ್ಶಿಗಳನ್ನೂ ಬಳಸಿದ್ದನು. (2 ಪೇತ್ರ 1:21) ಅಷ್ಟೇ ಏಕೆ, ಆ ಪ್ರವಾದನೆಗಳು ಯಾವಾಗಲೂ ಸತ್ಯವಾಗುತ್ತವೆ, ಏಕೆಂದರೆ ಅವನ್ನು ಚಾಚೂತಪ್ಪದೆ ನೆರವೇರಿಸುವ ವಿವೇಕವೂ ಶಕ್ತಿಯೂ ದೇವರಿಗಿದೆ. ಆದುದರಿಂದ ದೇವರು ವಿಷಯಗಳನ್ನು ಮುನ್ನರಿಯಶಕ್ತನು ಮಾತ್ರವಲ್ಲ ತನಗೆ ಬೇಕಾದಾಗ ಘಟನೆಗಳನ್ನು ಪೂರ್ವನಿರ್ಧರಿಸಲೂಬಲ್ಲನು. ಹಾಗಾದರೆ ಪ್ರತಿಯೊಬ್ಬ ಮನುಷ್ಯನ ಭವಿಷ್ಯವನ್ನು ದೇವರು ಮುಂದಾಗಿಯೇ ನಿರ್ಣಯಿಸುತ್ತಾನೋ ಅಥವಾ ರಕ್ಷಣೆಯನ್ನು ಪಡೆಯಲಿರುವ ಸಕಲರ ಪೂರ್ಣ ಸಂಖ್ಯೆಯನ್ನೂ ಪೂರ್ವನಿರ್ಧರಿಸುತ್ತಾನೋ? ಇಲ್ಲವೆನ್ನುತ್ತದೆ ಬೈಬಲ್.
ಭವಿಷ್ಯತ್ತನ್ನು ಮುಂದಾಗಿ ನಿರ್ಣಯಿಸುವ ವಿಷಯವನ್ನು ದೇವರು ಆರಿಸಿಕೊಳ್ಳುತ್ತಾನೆ ಎಂದು ಬೈಬಲ್ ಕಲಿಸುತ್ತದೆ. ದೃಷ್ಟಾಂತಕ್ಕಾಗಿ, ಈಗಿನ ವ್ಯವಸ್ಥೆಯ ಅಂತ್ಯದಲ್ಲಾಗುವ ದುಷ್ಟರ ನಾಶನದಲ್ಲಿ ನೀತಿವಂತರ “ಮಹಾಸಮೂಹ” ಪಾರಾಗಿ ಉಳಿಯುವುದೆಂದು ದೇವರು ಮುಂತಿಳಿಸಿದನು. (ಪ್ರಕಟನೆ 7:9, 14) ಆದರೂ, ದೇವರು ಆ ಮಹಾಸಮೂಹದ ನಿರ್ದಿಷ್ಟ ಸಂಖ್ಯೆಯನ್ನು ಕೊಡಲಿಲ್ಲ. ಇದಕ್ಕೆ ಕಾರಣ? ದೇವರು ವ್ಯಕ್ತಿಗಳನ್ನು ವೈಯಕ್ತಿಕವಾಗಿ ಪೂರ್ವನಿರ್ಧರಿಸುವುದಿಲ್ಲ. ಒಂದು ದೊಡ್ಡ ಕುಟುಂಬದ ಪ್ರೀತಿಪೂರ್ಣ ತಂದೆಯಂತಿದ್ದಾನೆ ದೇವರು. ತನ್ನ ಮಕ್ಕಳಲ್ಲಿ ಕಡಮೆಪಕ್ಷ ಕೆಲವರಾದರೂ ತನ್ನ ಪ್ರೀತಿಗೆ ಪ್ರತಿವರ್ತನೆ ತೋರಿಸುವರೆಂದು ಅವನಿಗೆ ಗೊತ್ತಿದೆ. ಆದರೆ ಆತನು ಇಂತಿಷ್ಟೇ ಮಂದಿ ಪ್ರತಿಕ್ರಿಯಿಸುತ್ತಾರೆಂದು ಪೂರ್ವನಿರ್ಧರಿಸುವುದಿಲ್ಲ.
ದೇವರು ತನ್ನ ಪೂರ್ವನಿರ್ಧರಿಸುವ ಸಾಮರ್ಥ್ಯವನ್ನು ಹೇಗೆ ಬಳಸುತ್ತಾನೆ ಎಂಬುದನ್ನು, ಆತನು ತನ್ನ ಶಕ್ತಿಯನ್ನು ಬಳಸುವ ವಿಧಾನಕ್ಕೆ ಹೋಲಿಸಬಹುದು. ಆತನು ಸರ್ವಶಕ್ತನಾಗಿರುವುದರಿಂದ ಆತನಲ್ಲಿ ಅಪರಿಮಿತ ಶಕ್ತಿಯಿದೆ ನಿಜ. (ಕೀರ್ತನೆ 91:1; ಯೆಶಾಯ 40:26, 28) ಆದರೆ ಆತನು ತನ್ನ ಶಕ್ತಿಯನ್ನು ಬೇಕಾದಹಾಗೆ ನಿಯಂತ್ರಣವಿಲ್ಲದೆ ಬಳಸುತ್ತಾನೆಯೆ? ಖಂಡಿತ ಇಲ್ಲ. ದೃಷ್ಟಾಂತಕ್ಕಾಗಿ, ಪೂರ್ವಕಾಲದ ಇಸ್ರಾಯೇಲಿನ ವೈರಿಯಾದ ಬಾಬೆಲಿನ ಮೇಲೆ ಬರಲಿದ್ದ ನಾಶನವನ್ನು ತನ್ನ ಕ್ಲುಪ್ತ ಕಾಲ ಬರುವ ತನಕ ಯೆಹೋವನು ತಡೆದುಹಿಡಿದನು. “ನಾನು . . . ಸುಮ್ಮನೆ ಮೌನವಾಗಿ ನನ್ನನ್ನು ಬಿಗಿಹಿಡಿದಿದ್ದೆನು” ಎಂದನಾತನು. (ಯೆಶಾಯ 42:14) ಇದೇ ಮೂಲತತ್ತ್ವವು ಆತನಿಗಿರುವ ಮುನ್ನರಿವಿನ ಮತ್ತು ಪೂರ್ವನಿರ್ಣಯಮಾಡುವ ಸಾಮರ್ಥ್ಯಕ್ಕೂ ಅನ್ವಯಿಸುತ್ತದೆ. ನಮಗೆ ಕೊಡಲಾಗಿರುವ ಇಚ್ಛಾಸ್ವಾತಂತ್ರ್ಯವನ್ನು ನಾವು ಬಳಸುವಂತೆ ಬಿಡಲು ಯೆಹೋವನು ಆತ್ಮನಿಯಂತ್ರಣವನ್ನು ತೋರಿಸುತ್ತಾನೆ.
ದೇವರಿಗೆ ತನ್ನ ಶಕ್ತಿಯ ಮೇಲಿರುವ ಈ ನಿಯಂತ್ರಣವು ಆತನನ್ನು ಪರಿಮಿತಿಯುಳ್ಳವನಾಗಿ ಇಲ್ಲವೆ ಅಪರಿಪೂರ್ಣನನ್ನಾಗಿ ಮಾಡುವುದಿಲ್ಲ. ಬದಲಾಗಿ, ಅದು ಆತನ ಸರ್ವಶ್ರೇಷ್ಠತೆಯನ್ನು ಉತ್ಪ್ರೇಕ್ಷಿಸುತ್ತದೆ, ಆತನನ್ನು ನಮಗೆ ಪ್ರೀತಿಪಾತ್ರನಾಗಿ ಮಾಡುತ್ತದೆ. ಏಕೆಂದರೆ ಆತನು ಪರಮಾಧಿಕಾರಿ, ಸರ್ವಜ್ಞ, ಸರ್ವಶಕ್ತನು. ಆದರೂ ತನ್ನ ಬುದ್ಧಿಜೀವಿಗಳ ಇಚ್ಛಾಸ್ವಾತಂತ್ರ್ಯಕ್ಕಾಗಿ ಪ್ರೀತಿ ಮತ್ತು ಗೌರವವನ್ನು ತೋರಿಸುತ್ತಾನೆ.
ಇನ್ನೊಂದು ಕಡೆ, ದೇವರು ಸಕಲವನ್ನೂ, ಅಂದರೆ ಇದುವರೆಗೆ ಸಂಭವಿಸಿರುವ ಪ್ರತಿಯೊಂದು ಭೀಕರ ದುರಂತ ಮತ್ತು ದುಷ್ಕಾರ್ಯವನ್ನು ಪೂರ್ವನಿರ್ಧರಿಸಿರುವುದಾದರೆ, ಈ ಲೋಕದ ಸಕಲ ದುರವಸ್ಥೆಗೆ ಆತನೇ ಕಾರಣನೆಂದು ನ್ಯಾಯವಾಗಿ ದೂರಬಹುದಲ್ಲವೇ? ಹೀಗೆ, ಸೂಕ್ಷ್ಮವಾಗಿ ಪರೀಕ್ಷಿಸುವಲ್ಲಿ, ಈ ವಿಧಿನಿರ್ಣಯವೆಂಬ ಬೋಧನೆ ದೇವರನ್ನು ಗೌರವಿಸುವ ಬದಲಿಗೆ ಆತನ ಮೇಲೆ ಕರ್ರಗಿನ ಮುಸುಕನ್ನು ಹೊದಿಸುತ್ತದೆ. ಇದು ಆತನನ್ನು ಕ್ರೂರಿ, ಅನ್ಯಾಯಿ, ಪ್ರೀತಿರಹಿತನಾಗಿ ಚಿತ್ರಿಸುತ್ತದೆ. ಆದರೆ ಇದು ಬೈಬಲ್ ಆತನ ಕುರಿತು ಹೇಳುವ ವಿಷಯಕ್ಕೆ ತೀರ ವಿರುದ್ಧ.—ಧರ್ಮೋಪದೇಶಕಾಂಡ 32:4.
ಆಯ್ಕೆ ನಿಮ್ಮದು
ದೇವರು ತನ್ನ ಸೇವಕ ಮೋಶೆಯ ಮೂಲಕ ಇಸ್ರಾಯೇಲ್ ಜನಾಂಗಕ್ಕೆ ಹೇಳಿದ್ದು: “ನಾನು ಜೀವಮರಣಗಳನ್ನು . . . ನಿಮ್ಮ ಮುಂದೆ ಇಟ್ಟಿದ್ದೇನೆ . . . ಆದದರಿಂದ . . . ಜೀವವನ್ನೇ ಆದುಕೊಳ್ಳಿರಿ; ನಿಮ್ಮ ದೇವರಾದ ಯೆಹೋವನನ್ನು ಪ್ರೀತಿಸಿ ಆತನ ಮಾತಿಗೆ ವಿಧೇಯರಾಗಿರ್ರಿ, ಆತನನ್ನು ಹೊಂದಿಕೊಂಡೇ ಇರ್ರಿ . . . ನೀವು ಬದುಕಿಕೊಳ್ಳುವದಕ್ಕೂ ಬಹುಕಾಲ ಇರುವದಕ್ಕೂ ಆತನೇ ಆಧಾರ.” (ಧರ್ಮೋಪದೇಶಕಾಂಡ 30:19, 20) ಪ್ರತಿಯೊಬ್ಬ ಇಸ್ರಾಯೇಲ್ಯನು ಆತನನ್ನು ಪ್ರೀತಿಸಿ ಜೀವ ಪಡೆಯುವಂತೆ ಇಲ್ಲವೆ ಅಲಕ್ಷಿಸಿ ಮರಣಕ್ಕೆ ಪಾತ್ರನಾಗುವಂತೆ ದೇವರೇ ಪೂರ್ವನಿರ್ಣಯಿಸಿದ್ದಲ್ಲಿ, ಮೇಲಿನ ಆತನ ಮಾತುಗಳು ಅರ್ಥರಹಿತವೂ ಅಪ್ರಾಮಾಣಿಕವೂ ಆಗಿರುತ್ತಿದ್ದವು. “ನ್ಯಾಯವನ್ನು ಮೆಚ್ಚುವ” ಮತ್ತು ಪ್ರೀತಿಯ ವ್ಯಕ್ತೀಕರಣವೇ ಆಗಿರುವ ದೇವರು ಹೀಗೆ ವಿವೇಚನೆಯಿಲ್ಲದೆ ವರ್ತಿಸುವನೆಂದು ನೀವು ನಂಬುತ್ತೀರೊ?—ಕೀರ್ತನೆ 37:28; 1 ಯೋಹಾನ 4:8.
ತನ್ನ ಸೇವಕರು ಜೀವವನ್ನು ಆರಿಸಿಕೊಳ್ಳಬೇಕೆಂಬ ದೇವರ ಕೇಳಿಕೆ ನಮಗೆ ಅಂದಿಗಿಂತಲೂ ಇಂದು ಇನ್ನೂ ಹೆಚ್ಚಾಗಿ ಅನ್ವಯಿಸುತ್ತದೆ. ಏಕೆಂದರೆ ನಾವು ಈಗಿನ ವ್ಯವಸ್ಥೆಯ ಅಂತ್ಯವನ್ನು ತ್ವರೆಯಾಗಿ ಸಮೀಪಿಸುತ್ತಿದ್ದೇವೆಂದು ಬೈಬಲ್ ಪ್ರವಾದನೆ ತಿಳಿಸುತ್ತದೆ. (ಮತ್ತಾಯ 24:3-9; 2 ತಿಮೊಥೆಯ 3:1-5) ಆದರೆ ನಾವು ಜೀವವನ್ನು ಆರಿಸಿಕೊಳ್ಳುವುದಾದರೂ ಹೇಗೆ? ಪುರಾತನ ಇಸ್ರಾಯೇಲ್ಯರು ಏನು ಮಾಡಿದರೋ ಅದನ್ನು ಮಾಡುವ ಮೂಲಕವೇ.
‘ಜೀವವನ್ನೇ ಆದುಕೊಳ್ಳುವುದು’ ಹೇಗೆ?
ನಾವು “ಯೆಹೋವನನ್ನು ಪ್ರೀತಿಸಿ” “ಆತನ ಮಾತಿಗೆ ವಿಧೇಯರಾಗಿ” “ಆತನನ್ನು ಹೊಂದಿಕೊಂಡೇ” ಇರುವ ಮೂಲಕ ಜೀವವನ್ನು ಆರಿಸಿಕೊಳ್ಳುತ್ತೇವೆ. ದೇವರು ಒಬ್ಬ ಆತ್ಮಿಕ ವ್ಯಕ್ತಿಯೆಂದು ತಿಳಿದುಕೊಂಡು ಆತನು ನಮಗಾಗಿ ಇಟ್ಟಿರುವ ಆವಶ್ಯಕತೆಗಳನ್ನು ಅರಿತುಕೊಳ್ಳುವ ಮೂಲಕ ಮಾತ್ರ ನಾವು ಇವನ್ನು ಮಾಡಬಲ್ಲೆವು. ದೇವರಿಗೆ ಪ್ರಾರ್ಥಿಸುತ್ತ ಯೇಸು ಕ್ರಿಸ್ತನು ಹೇಳಿದ್ದು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.”—ಯೋಹಾನ 17:3.
ದೇವರ ವಾಕ್ಯವೆಂದು ಸೂಕ್ತವಾಗಿ ಕರೆಯಲ್ಪಡುವ ಪವಿತ್ರ ಬೈಬಲಿನಲ್ಲಿ ನಾವು ಆ ಅಮೂಲ್ಯ ಜ್ಞಾನವನ್ನು ಕಂಡುಕೊಳ್ಳುತ್ತೇವೆ. (ಯೋಹಾನ 17:17; 2 ತಿಮೊಥೆಯ 3:16) ಹೌದು, ಈ ಅಮೂಲ್ಯ ಕೊಡುಗೆ ದೇವರು ನಮ್ಮ ಭವಿಷ್ಯತ್ತನ್ನು ಪೂರ್ವನಿರ್ಧಾರ ಮಾಡಿರುವುದಿಲ್ಲವೆಂಬುದಕ್ಕೆ ಸ್ಪಷ್ಟ ಸಾಕ್ಷ್ಯ. ಮಾತ್ರವಲ್ಲ ಆತನು ಒದಗಿಸಿರುವಂಥ ಮಾಹಿತಿಯ ಮೇಲೆ ತಿಳಿವಳಿಕೆಯುಳ್ಳ ಆಯ್ಕೆಯನ್ನು ನಾವು ಮಾಡುವಂತೆ ದೇವರು ಬಯಸುತ್ತಾನೆ ಎಂಬುದಕ್ಕೂ ಅದು ಪುರಾವೆ.—ಯೆಶಾಯ 48:17, 18.
ನಿಜವಾಗಿ ಬೈಬಲಿನ ಮೂಲಕ ದೇವರು ನಮಗೆ ಹೀಗೆನ್ನುತ್ತಿದ್ದಾನೆ: ‘ಮಾನವಕುಲಕ್ಕೂ ಭೂಮಿಗೂ ನನ್ನ ಉದ್ದೇಶ ಇದೇ ಆಗಿದೆ. ನಿತ್ಯಜೀವ ಪಡೆಯಬೇಕಾದರೆ ನೀವು ಇವುಗಳನ್ನೆಲ್ಲಾ ಮಾಡಬೇಕು. ನನಗೆ ಕಿವಿಗೊಡಬೇಕೊ ಇಲ್ಲವೆ ಬೆನ್ನುಹಾಕಬೇಕೊ ಎಂದು ನಿರ್ಣಯಿಸುವುದು ನಿಮಗೆ ಬಿಟ್ಟದ್ದು.’ ಹೌದು, ನಮ್ಮ ಇಚ್ಛಾಸ್ವಾತಂತ್ರ್ಯವನ್ನು ಗೌರವಿಸುತ್ತ ದೇವರು ಪೂರ್ವನಿರ್ಧರಿಸುವ ತನ್ನ ಸಾಮರ್ಥ್ಯವನ್ನು ಎಷ್ಟೊಂದು ಪರಿಪೂರ್ಣವಾಗಿ ಸರಿದೂಗಿಸುತ್ತಾನೆ! ಹೀಗಿರುವುದರಿಂದ, ‘[ದೇವರ] ಮಾತಿಗೆ ವಿಧೇಯರಾಗಿ, ಆತನನ್ನು ಹೊಂದಿಕೊಂಡು’ ಇರುವ ಮೂಲಕ ನೀವು ಜೀವವನ್ನು ಆರಿಸಿಕೊಳ್ಳುವಿರೋ? (g 2/09)
ನೀವೇನು ಹೇಳುತ್ತೀರಿ?
◼ ಮುಂದಾಗಿ ತಿಳಿದುಕೊಳ್ಳುವ ತನ್ನ ಸಾಮರ್ಥ್ಯವನ್ನು ದೇವರು ಎಷ್ಟರ ಮಟ್ಟಿಗೆ ಬಳಸುತ್ತಾನೆ?—ಧರ್ಮೋಪದೇಶಕಾಂಡ 30:19, 20; ಯೆಶಾಯ 46:10.
◼ ಜನರಿಗೆ ಸಂಭವಿಸುವ ಕಷ್ಟಾಪತ್ತುಗಳೂ ಸೇರಿದಂತೆ ಪ್ರತಿಯೊಂದನ್ನೂ ದೇವರು ಏಕೆ ಪೂರ್ವನಿರ್ಧರಿಸುವುದಿಲ್ಲ?—ಧರ್ಮೋಪದೇಶಕಾಂಡ 32:4.
◼ ಅಂತಿಮವಾಗಿ ನಮ್ಮ ಭವಿಷ್ಯತ್ತನ್ನು ಯಾವುದು ನಿರ್ಣಯಿಸುವುದು?—ಯೋಹಾನ 17:3.
[ಪುಟ 28ರಲ್ಲಿರುವ ಸಂಕ್ಷಿಪ್ತ ವಿವರಣೆ]
ಭವಿಷ್ಯತ್ತನ್ನು ಮುಂದಾಗಿ ನಿರ್ಣಯಿಸುವ ವಿಷಯವನ್ನು ದೇವರು ಆರಿಸಿಕೊಳ್ಳುತ್ತಾನೆ ಎಂದು ಬೈಬಲ್ ಕಲಿಸುತ್ತದೆ