ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಕ್ಕಳಲ್ಲಿ ಬೊಜ್ಜು ಪರಿಹಾರ?

ಮಕ್ಕಳಲ್ಲಿ ಬೊಜ್ಜು ಪರಿಹಾರ?

ಮಕ್ಕಳಲ್ಲಿ ಬೊಜ್ಜು ಪರಿಹಾರ?

ಮಕ್ಕಳಲ್ಲಿ ಬೊಜ್ಜು ಅನೇಕ ದೇಶಗಳಲ್ಲಿ ಪಿಡುಗಿನ ಪ್ರಮಾಣವನ್ನೇ ತಲಪಿದೆ. ಲೋಕಾರೋಗ್ಯ ಸಂಸ್ಥೆಗನುಸಾರ, ಐದು ವರ್ಷದೊಳಗಿನ ಸುಮಾರು 220 ಲಕ್ಷ ಮಕ್ಕಳು ವಿಪರೀತ ಮೈತೂಕವುಳ್ಳವರಾಗಿದ್ದಾರೆ.

ಸ್ಪೇನ್‌ ದೇಶದ ಒಂದು ಸಮೀಕ್ಷೆಗನುಸಾರ, ಅಲ್ಲಿಯ ಪ್ರತಿ 3 ಮಕ್ಕಳಲ್ಲಿ 1 ಮಗು ವಿಪರೀತ ದಪ್ಪ ಇಲ್ಲವೆ ಬೊಜ್ಜು ಮೈ ಉಳ್ಳದ್ದು. ಆಸ್ಟ್ರೇಲಿಯದಲ್ಲಿ ಕೇವಲ ಹತ್ತು ವರ್ಷಗಳೊಳಗೆ (1985-1995) ಬೊಜ್ಜುಳ್ಳ ಮಕ್ಕಳ ಸಂಖ್ಯೆ ಮೂರುಪಟ್ಟು ಬೆಳೆಯಿತು. ಅಮೆರಿಕದಲ್ಲಿ ಕಳೆದ ಮೂರು ದಶಕಗಳಲ್ಲಿ 6ರಿಂದ 11 ವಯಸ್ಸಿನ ಮಕ್ಕಳಲ್ಲಿ ಬೊಜ್ಜು ಮುಮ್ಮಡಿಗಿಂತಲೂ ಹೆಚ್ಚಾಗಿದೆ.

ಮಕ್ಕಳಲ್ಲಿ ಬೊಜ್ಜು ಅಭಿವೃದ್ಧಿಶೀಲ ರಾಷ್ಟ್ರಗಳಿಗೂ ಹರಡುತ್ತಿದೆ. ಅಂತಾರಾಷ್ಟ್ರೀಯ ಸ್ಥೂಲಕಾಯ ಕಾರ್ಯತಂಡಕ್ಕನುಸಾರ, ಆಫ್ರಿಕದ ಕೆಲವು ಭಾಗಗಳಲ್ಲಿ, ನ್ಯೂನ ಪೋಷಣೆ ಪೀಡಿತ ಮಕ್ಕಳಿಗಿಂತ ಬೊಜ್ಜು ಪೀಡಿತ ಮಕ್ಕಳು ಹೆಚ್ಚು. ಜಗತ್ತಿನಲ್ಲಿ ಅಮೆರಿಕವು ಮಕ್ಕಳ ಬೊಜ್ಜಿಗೆ ಪ್ರಥಮ ಸ್ಥಾನದಲ್ಲಿತ್ತು. 2007ರಲ್ಲಿ ಮೆಕ್ಸಿಕೊ ದೇಶ ಎರಡನೆಯ ಸ್ಥಾನವನ್ನು ತಲಪಿತು. ಮೆಕ್ಸಿಕೊ ಸಿಟಿ ಒಂದರಲ್ಲಿಯೇ ಮಕ್ಕಳಲ್ಲಿ ಮತ್ತು ತರುಣರಲ್ಲಿ 70 ಪ್ರತಿಶತ ಮಂದಿ ವಿಪರೀತ ಮೈ ತೂಕವುಳ್ಳವರು ಇಲ್ಲವೆ ಬೊಜ್ಜು ಮೈಯವರು ಎಂದು ಹೇಳಲಾಗಿದೆ. ಮಕ್ಕಳ ಶಸ್ತ್ರಚಿಕಿತ್ಸಕ ಡಾ. ಫ್ರಾನ್ಸಿಸ್ಕೊ ಗೊನ್ಸಾಲೆಸ್‌ ಎಚ್ಚರಿಸುವುದೇನಂದರೆ, “ಬೊಜ್ಜಿನಿಂದ ಬರುವ ರೋಗಗಳಿಂದಾಗಿ ತಮ್ಮ ಹೆತ್ತವರಿಗಿಂತ ಮೊದಲು ಸಾಯುವ ಪ್ರಥಮ ಪೀಳಿಗೆ ಇವರೇ” ಆಗಿರಲೂಬಹುದು.

ಯಾವ ರೋಗಗಳು? ಮಧುಮೇಹ, ತೀವ್ರ ರಕ್ತದೊತ್ತಡ, ಹೃದ್ರೋಗ—ಈ ಮೂರು. ಈ ಹಿಂದೆ ಈ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ವಯಸ್ಕರ ರೋಗಗಳು ಎಂದೆಣಿಸಲಾಗುತ್ತಿದ್ದವು. ಅಮೆರಿಕದ ಇನ್‌ಸ್ಟಿಟ್ಯುಟ್‌ ಆಫ್‌ ಮೆಡಿಸಿನ್‌ಗೆ ಅನುಸಾರ, ಇಸವಿ 2000ದಲ್ಲಿ ಅಮೆರಿಕದಲ್ಲಿ ಜನಿಸಿದ 30 ಪ್ರತಿಶತ ಗಂಡು ಮಕ್ಕಳು ಮತ್ತು 40 ಪ್ರತಿಶತ ಹೆಣ್ಣು ಮಕ್ಕಳು ಬೊಜ್ಜು-ಸಂಬಂಧಿತ ಮಧುಮೇಹ ‘ಟೈಫ್‌-2’ರಿಂದ ಜೀವನಪರ್ಯಂತ ಬಾಧಿತರಾಗುವ ಅಪಾಯವಿದೆ.

ಮಕ್ಕಳಲ್ಲಿ ಈ ರೋಗ ಪ್ರವೃತ್ತಿಯು ಗಾಬರಿಹುಟ್ಟಿಸುವ ಪ್ರಮಾಣದಲ್ಲಿ ಬೆಳೆಯುತ್ತಿದೆ ಎಂದು ಸಮೀಕ್ಷೆಗಳು ತೋರಿಸುತ್ತವೆ. ಹೆಚ್ಚಾಗುತ್ತಿರುವ ಬೊಜ್ಜಿನ ಪ್ರಮಾಣಗಳು ತೀವ್ರ ರಕ್ತದೊತ್ತಡವನ್ನೂ ಏರಿಸುತ್ತವೆ. ಅಟ್ಲಾಂಟ, ಜಾರ್ಜಿಯದ ಮೋರೌಸ್‌ ಸ್ಕೂಲ್‌ ಆಫ್‌ ಮೆಡಿಸಿನ್‌—ಇದರ ಡಾ. ರೆಬೆಕ ಡಿನ್‌-ಜ್ಯಿಟಮ್‌ ಎಚ್ಚರಿಸುವುದು: “ಏರುತ್ತಿರುವ ಈ ತೀವ್ರ ರಕ್ತದೊತ್ತಡವನ್ನು ಕೆಳಮೊಗ ಮಾಡದಿರುವಲ್ಲಿ ತರುಣರಲ್ಲಿ ಹಾಗೂ ವಯಸ್ಕರಲ್ಲಿ ಹೃದಯರಕ್ತನಾಳದ ರೋಗದಲ್ಲಿ ತೀವ್ರವೃದ್ಧಿಯನ್ನು ನಾವು ಎದುರಿಸಬೇಕಾಗಬಹುದು.”

ಬೊಜ್ಜಿಗೆ ಕಾರಣಗಳು

ಮಕ್ಕಳಲ್ಲಿ ಬೊಜ್ಜು ಎಂಬ ಈ ಲೋಕವ್ಯಾಪಕ ಪಿಡುಗಿನ ಹಿಂದಿರುವ ಕಾರಣವೇನು? ಇದಕ್ಕೆ ಅನುವಂಶೀಯ ಕಾರಣಗಳು ಇರಬಲ್ಲವಾದರೂ, ಇತ್ತೀಚಿನ ದಶಕಗಳಲ್ಲಿ ಬೊಜ್ಜು ಮೈಯ ಈ ಗಮನಾರ್ಹ ವೃದ್ಧಿಗೆ ವಂಶವಾಹಿನಿಗಳು ಮಾತ್ರ ಕಾರಣವಲ್ಲ ಎಂದು ತೋರಿಬರುತ್ತದೆ. ಇಂಗ್ಲೆಂಡಿನ ಕೇಂಬ್ರಿಜ್‌ ಯೂನಿವರ್ಸಿಟಿಯ ಕ್ಲಿನಿಕಲ್‌ ಬೈಓಕೆಮಿಸ್ಟ್ರಿ ಆ್ಯಂಡ್‌ ಮೆಡಿಸಿನ್‌ ವಿಭಾಗದ ಪ್ರೊಫೆಸರ್‌ ಸ್ಟೀವನ್‌ ಓರೇಹ್ಲೀ ಎಂಬವರು ಹೇಳುವುದು: “ಬೊಜ್ಜು ಮೈಗೆ ಅನುವಂಶೀಯತೆಯು ಪೂರ್ಣವಾಗಿ ಕಾರಣವಾಗಿರಲಿಕ್ಕಿಲ್ಲ. ಏಕೆಂದರೆ ನಮ್ಮ ವಂಶವಾಹಿ ಘಟಕವನ್ನು ನಾವು ಕೇವಲ 30 ವರುಷಗಳಲ್ಲಿ ಬದಲಾಯಿಸುವುದು ಅಸಾಧ್ಯ.”

ಇದಕ್ಕಿರುವ ಕಾರಣಗಳ ವಿಷಯದಲ್ಲಿ ಅಮೆರಿಕದ ಮೇಯೋ ಕ್ಲಿನಿಕ್‌ ಹೇಳುವುದು: “ಬಾಲ್ಯದ ಬೊಜ್ಜು ಸ್ಥಿತಿಗೆ ಕೆಲವು ಆನುವಂಶಿಕ ಮತ್ತು ಹಾರ್ಮೋನ್‌ ಸಂಬಂಧಿತ ಕಾರಣಗಳು ಇವೆಯಾದರೂ ಮಕ್ಕಳು ಹೆಚ್ಚಾಗಿ ಅತಿರೇಕ ತಿನ್ನುವುದರಿಂದ ಮತ್ತು ಅತಿ ಕಡಮೆ ವ್ಯಾಯಾಮ ಮಾಡುವುದರಿಂದ ವಿಪರೀತ ಬೊಜ್ಜು ಬೆಳೆಯುತ್ತದೆ.” ಕೆಳಗಿನ ಎರಡು ಉದಾಹರಣೆಗಳು ಇಂದಿನ ಆಹಾರಕ್ರಮದಲ್ಲಾಗಿರುವ ಪರಿವರ್ತನೆಯನ್ನು ಚಿತ್ರಿಸುತ್ತವೆ.

ಮೊದಲನೆದಾಗಿ, ಹೆತ್ತವರಿಬ್ಬರೂ ಕೆಲಸಮಾಡುತ್ತಾರೆ. ಅಡುಗೆ ಮಾಡಲು ಸಮಯವೂ ಇಲ್ಲ ಶಕ್ತಿಯೂ ಇಲ್ಲ. ಫಾಸ್ಟ್‌ ಫುಡ್ಡೇ ಪರಿವಾರದ ಸರ್ವಸಾಮಾನ್ಯ ಊಟ. ಫಾಸ್ಟ್‌ ಫುಡ್‌ ಹೊಟೇಲುಗಳು ಲೋಕದಲ್ಲಿ ನಾಯಿಕೊಡೆಗಳಂತೆ ಎಲ್ಲೆಲ್ಲಿಯೂ ತಲೆಯೆತ್ತಿವೆ. ಒಂದು ಸಮೀಕ್ಷೆಗನುಸಾರ, ಅಮೆರಿಕದ 4ರಿಂದ 19 ಪ್ರಾಯದ ಎಲ್ಲಾ ಮಕ್ಕಳಲ್ಲಿ ಸುಮಾರು ಮೂರನೇ ಒಂದಂಶ ಪ್ರತಿದಿನ ಫಾಸ್ಟ್‌ ಫುಡ್‌ನ ಮರೆಹೋಗುತ್ತಾರೆ. ಇಂಥ ಆಹಾರದಲ್ಲಿ ಸಕ್ಕರೆ ಮತ್ತು ಕೊಬ್ಬು ಜಾಸ್ತಿ. ಮಾತ್ರವಲ್ಲ ಅವನ್ನು ತಟ್ಟೆ ತುಂಬ ನೀಡುವುದರಿಂದ ಮಕ್ಕಳು ಬಾಯಿ ಚಪ್ಪರಿಸಿ ತಿನ್ನುತ್ತಾರೆ.

ಎರಡನೆಯದಾಗಿ, ಹಾಲು ಮತ್ತು ನೀರಿಗಿಂತ ಸಾಫ್ಟ್‌ ಡ್ರಿಂಕ್ಸ್‌ ಈಗ ಹೆಚ್ಚು ಜನಪ್ರಿಯ. ದೃಷ್ಟಾಂತಕ್ಕೆ, ಮೆಕ್ಸಿಕನರು ಪ್ರತಿ ವರ್ಷ ಕೋಲಾದಂಥ ಪಾನೀಯಗಳಿಗೆ ವ್ಯಯಿಸುವ ಹಣವು ಹತ್ತು ಪೌಷ್ಟಿಕ ಆಹಾರಗಳಿಗೆ ವ್ಯಯಿಸುವ ಒಟ್ಟು ಮೊತ್ತಕ್ಕಿಂತ ಹೆಚ್ಚು. ಬಾಲ್ಯದ ಬೊಜ್ಜನ್ನು ಇಳಿಸುವುದು (ಇಂಗ್ಲಿಷ್‌) ಎಂಬ ಪುಸ್ತಕ ಹೇಳುವಂತೆ, ದಿನಕ್ಕೆ ಕೇವಲ ಅರ್ಧ ಲಿಟರ್‌ಗಿಂತ ಸ್ವಲ್ಪ ಹೆಚ್ಚು ಸಾಫ್ಟ್‌ ಡ್ರಿಂಕ್ಸ್‌ ಸೇವನೆಯು ಒಂದೇ ವರ್ಷದಲ್ಲಿ ಸುಮಾರು 12 ಕಿಲೊ ಬೊಜ್ಜನ್ನು ದೇಹಕ್ಕೆ ಕೂಡಿಸಬಲ್ಲದು!

ಸರಿಸುಮಾರು 3 ವಯಸ್ಸಿನವರು “ಮಿತವಾದ ಅಥವಾ ಹುರುಪಿನ ಚಟುವಟಿಕೆಯಲ್ಲಿ” ತೊಡಗುವುದು ದಿನಕ್ಕೆ ಕೇವಲ 20 ನಿಮಿಷ ಎಂದು ಶಾರೀರಿಕ ಚಟುವಟಿಕೆಯ ಇಳಿಮುಖದ ಸಂಬಂಧದಲ್ಲಿ ಸ್ಕಾಟ್ಲೆಂಡಿನ ಗ್ಲಾಸ್ಗೋ ಯೂನಿವರ್ಸಿಟಿಯ ಒಂದು ಅಧ್ಯಯನ ತಿಳಿಸುತ್ತದೆ. ಈ ಕುರಿತು ಯೂನಿವರ್ಸಿಟಿ ಆಫ್‌ ಕಾಲರಾಡೊದ ಪೀಡಿಯಾಟ್ರಿಕ್ಸ್‌ ಆ್ಯಂಡ್‌ ಮೆಡಿಸಿನ್‌ ವಿಭಾಗದ ಪ್ರೊಫೆಸರ್‌ ಡಾ. ಜೇಮ್ಸ್‌ ಹಿಲ್‌ ಹೇಳಿದ್ದು: “ಇಂಗ್ಲೆಂಡಿನ ಮಕ್ಕಳಲ್ಲಿ ಹೆಚ್ಚುತ್ತಿರುವ ವ್ಯಾಯಾಮರಹಿತ ಜಡತೆಯು ಅಸಾಮಾನ್ಯವೇನಲ್ಲ; ಅದನ್ನು ಜಗತ್ತಿನ ಹೆಚ್ಚಿನ ದೇಶಗಳಲ್ಲೂ ಕಾಣತ್ತೇವೆ.”

ಪರಿಹಾರವೇನು?

ಮಕ್ಕಳನ್ನು ನಿರ್ಬಂಧಿತ ಆಹಾರಕ್ರಮದಲ್ಲಿ ಇರಿಸಬೇಕೆಂದು ಪೋಷಣ-ಶಾಸ್ತ್ರಜ್ಞರು ಶಿಫಾರಸ್ಸು ಮಾಡುವುದಿಲ್ಲ. ಏಕೆಂದರೆ ಇದು ಅವರ ಬೆಳವಣಿಗೆ ಮತ್ತು ಆರೋಗ್ಯವನ್ನು ಕೆಡಿಸಬಹುದು. ಮೇಯೋ ಕ್ಲಿನಿಕ್‌ ಹೇಳುವುದು: “ನಿಮ್ಮ ಮಕ್ಕಳ ಅತಿರೇಕ ತೂಕದೊಂದಿಗೆ ಹೋರಾಡಲು ಇರುವ ಅತ್ಯುತ್ತಮ ಮಾರ್ಗವು ಇಡೀ ಕುಟುಂಬದ ಆಹಾರಕ್ರಮ ಮತ್ತು ವ್ಯಾಯಾಮದ ಮಟ್ಟವನ್ನು ಉತ್ತಮಗೊಳಿಸುವುದೇ.”—12 ಪುಟದಲ್ಲಿರುವ ಚೌಕ ನೋಡಿ.

ಆರೋಗ್ಯಕರ ಹವ್ಯಾಸಗಳಿಗೆ ಕುಟುಂಬವಾಗಿ ಆದ್ಯತೆ ಕೊಡಿ. ಹಾಗೆ ಮಾಡುವಲ್ಲಿ ಅದು ನಿಮ್ಮ ಮಕ್ಕಳಿಗೆ ಜೀವನಪಥವಾಗಿ ಪರಿಣಮಿಸಿ ಅವರದನ್ನು ಮುಂದಣ ದಿನಗಳಲ್ಲೂ ಅನುಸರಿಸುವರು. (g 3/09)

[ಪುಟ 12ರಲ್ಲಿರುವ ಚೌಕ/ಚಿತ್ರ]

ಹೆತ್ತವರು ಏನು ಮಾಡಬೇಕು?

1 ದಿಢೀರ್‌ ತಿಂಡಿತಿನಸುಗಳನ್ನು ಕೊಳ್ಳುವುದಕ್ಕಿಂತ ಕಾಯಿಪಲ್ಯ, ಹಣ್ಣುಹಂಪಲುಗಳನ್ನು ಹೆಚ್ಚು ಬಳಸಿ.

2 ಸಾಫ್ಟ್‌ ಡ್ರಿಂಕ್ಸ್‌, ಜ್ಯೂಸ್‌, ಸಿಹಿ ಮತ್ತು ಕೊಬ್ಬು ಜಾಸ್ತಿಯಿರುವ ತಿಂಡಿಗಳನ್ನು ಮಿತಿಯಲ್ಲಿಡಿ. ನೀರು ಹಾಗೂ ಕೊಬ್ಬಿನಾಂಶ ಕಡಿಮೆಯಿರುವ ಹಾಲು ಮತ್ತು ಆರೋಗ್ಯಕರ ತಿಂಡಿಗಳನ್ನು ಕೊಡಿ.

3 ಕಡಿಮೆ ಕೊಬ್ಬು ಬಳಸಲ್ಪಡುವ ಪಾಕ ವಿಧಾನಗಳನ್ನು, ಅಂದರೆ ಎಣ್ಣೆಯಲ್ಲಿ ಹುರಿಯುವ ಬದಲು ಬೇಯಿಸಿದ, ಸುಟ್ಟ, ಹಬೆಯಲ್ಲಿ ಬೇಯಿಸಿದ ವಿಧಾನಗಳನ್ನು ಬಳಸಿ.

4 ಆಹಾರವನ್ನು ಮಿತವಾಗಿ ಬಡಿಸಿ.

5 ಆಹಾರವನ್ನು ಕಾರ್ಯಸಾಧನೆಗೋ ಬಹುಮಾನವಾಗಿಯೋ ಬಳಸಬೇಡಿ.

6 ಮಕ್ಕಳು ಬೆಳಗ್ಗಿನ ಉಪಹಾರವನ್ನು ತಪ್ಪಿಸದಂತೆ ನೋಡಿಕೊಳ್ಳಿ. ಉಪಹಾರ ಮಾಡದಿದ್ದಲ್ಲಿ ಬಳಿಕ ಮಿತಿಮೀರಿ ತಿಂದಾರು.

7 ಟಿವಿ ಅಥವಾ ಕಂಪ್ಯೂಟರ್‌ ಮುಂದೆ ಕೂತು ತಿನ್ನುವುದು ಮಿತಿಮೀರಿ ತಿನ್ನುವಂತೆ ನಡೆಸಬಹುದು, ಹೊಟ್ಟೆ ತುಂಬಿದ್ದೂ ಗೊತ್ತಾಗದು. ಆದ್ದರಿಂದ ಸೂಕ್ತ ಸ್ಥಳದಲ್ಲಿ ಕೂತು ಊಟಮಾಡಿ.

8 ದೈಹಿಕ ಚಟುವಟಿಕೆಗಳನ್ನು, ಅಂದರೆ ಸೈಕಲ್‌ ಸವಾರಿ, ಚೆಂಡಾಟ, ಜಿಗಿಹಗ್ಗದಾಟವನ್ನು ಪ್ರೋತ್ಸಾಹಿಸಿ.

9 ಟೆಲಿವಿಷನ್‌ ವೀಕ್ಷಣ, ಕಂಪ್ಯೂಟರ್‌ ಬಳಕೆ ಮತ್ತು ವಿಡಿಯೊ ಆಟಗಳಲ್ಲಿ ವ್ಯಯಿಸುವ ಸಮಯಕ್ಕೆ ಮಿತಿಯಿರಲಿ.

10 ಮೃಗಾಲಯಕ್ಕೆ ಭೇಟಿ, ಈಜು ಅಥವಾ ಪಾರ್ಕ್‌ನಲ್ಲಿ ಆಡುವುದು ಮುಂತಾದ ಕ್ರಿಯಾಶೀಲ ಕುಟುಂಬ ವಿಹಾರಗಳನ್ನು ಏರ್ಪಡಿಸಿ.

11 ನಿಮ್ಮ ಮಕ್ಕಳಿಗೆ ಚಟುವಟಿಕೆಭರಿತ ಕೆಲಸಗಳನ್ನು ನೇಮಿಸಿ.

12 ಆರೋಗ್ಯಕರ ಊಟ ಮತ್ತು ವ್ಯಾಯಾಮಗಳಲ್ಲಿ ನೀವೇ ಮಕ್ಕಳಿಗೆ ಮಾದರಿಯನ್ನಿಡಿ.

[ಕೃಪೆ]

ಮೂಲಗಳು: ದ ನ್ಯಾಷನಲ್‌ ಇನ್‌ಸ್ಟಿಟ್ಯುಟ್‌ ಆಫ್‌ ಹೆಲ್ತ್‌ ಆ್ಯಂಡ್‌ ಮೇಯೋ ಕ್ಲಿನಿಕ್‌