ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಎಷ್ಟೊಂದು ಹೋಮ್‌ವರ್ಕಪ್ಪಾ!’

‘ಎಷ್ಟೊಂದು ಹೋಮ್‌ವರ್ಕಪ್ಪಾ!’

‘ಎಷ್ಟೊಂದು ಹೋಮ್‌ವರ್ಕಪ್ಪಾ!’

ಒಲಿಂಪಿಕ್‌ ಕ್ರೀಡೆಯಲ್ಲಿ ಭಾಗವಹಿಸುವ ವೇಟ್‌ಲಿಫ್ಟರ್ಸ್‌ (ತೂಕ ಎತ್ತುವವರು) ಪ್ರತಿದಿನವೂ ತಮ್ಮ ಕ್ರೀಡಾ ದಾಖಲೆಯನ್ನು ಮೀರಿಸಲು ಪ್ರಯತ್ನಿಸುವುದಿಲ್ಲ. ಅವರು ಕ್ರಮವಾಗಿ ಚಿಕ್ಕ ಚಿಕ್ಕ ತೂಕವನ್ನು ಎತ್ತಲು ಪ್ರಯತ್ನಿಸುತ್ತಾ ಹೀಗೆ ದೊಡ್ಡ ದೊಡ್ಡ ತೂಕವನ್ನು ಎತ್ತಲು ಬೇಕಾದ ಶಕ್ತಿಯನ್ನು ಪಡೆಯುತ್ತಾರೆ. ಬಲವಂತವಾಗಿ ಒಮ್ಮೆಲೆ ತುಂಬಾ ತೂಕ ಎತ್ತುವಲ್ಲಿ ಅವರ ಸ್ನಾಯು ಮತ್ತು ಕೀಲುಗಳಿಗೆ ಅಪಾಯ ಖಂಡಿತ. ಅವರು ಮುಂದೆಂದೂ ತೂಕವನ್ನು ಎತ್ತಲು ಸಮರ್ಥರಾಗರು.

ತದ್ರೀತಿಯಲ್ಲಿ ವಿದ್ಯಾರ್ಥಿಗಳಾದ ನೀವು ಪ್ರಾಯಶಃ ಕಷ್ಟಪಟ್ಟು ಓದುತ್ತಿರಬಹುದು. ಕಷ್ಟದ ಪ್ರಾಜೆಕ್ಟ್‌ ನಿಮಗೆ ದೊರೆತಾಗ ಅಥವಾ ಶಾಲಾ ಪರೀಕ್ಷೆಗಳಿಗೆ ತಯಾರಿಸುವಾಗ ನೀವು ಬಹಳ ಹೆಚ್ಚಿನ ಪ್ರಯತ್ನಗಳನ್ನು ಮಾಡಲು ಸಿದ್ಧರೂ ಶಕ್ತರೂ ಆಗಿರುವಿರಿ. * ಆದರೆ ನಿಮ್ಮ ದಿನವೆಲ್ಲಾ ಹೋಮ್‌ವರ್ಕ್‌ ಮತ್ತು ಇತರ ಪ್ರಾಜೆಕ್ಟ್‌ಗಳಿಂದ ತುಂಬಿತುಳುಕಿದ್ದರೆ ಆಗೇನು? ನಿಮಗೆ ಸರಿಯಾಗಿ ತಿನ್ನಲೂ ಆಗದು, ಸಾಕಷ್ಟು ನಿದ್ದೆಯೂ ಸಿಗದು. ಈ ರೀತಿಯ ತೀವ್ರ ಒತ್ತಡವು ಕೊನೆಗೆ ನಿಮ್ಮನ್ನು ಅಸ್ವಸ್ಥರನ್ನಾಗಿ ಮಾಡಬಲ್ಲದು. ಪ್ರಾಯಶಃ ನಿಮಗೆ ಹಾಗೆಯೇ ಅನಿಸುತ್ತದೋ? *

ಎಂದೂ ಮುಗಿಯದ ಹೋಮ್‌ವರ್ಕ್‌

“ಮೇಲ್ತರಗತಿಗೆ ಹೋದಂತೆ ಹೋಮ್‌ವರ್ಕ್‌ ಜಾಸ್ತಿ ಆಗುತ್ತಾ ಇದೆ, ಹೆಚ್ಚು ಕಷ್ಟಕರ ಸಹ. ಗಂಟೆಗಟ್ಟಲೆ ಹಿಡಿಯುತ್ತದೆ ಅದನ್ನು ಮುಗಿಸಲು. ನಾನು ಮಾಡಬಯಸುವ ಅನೇಕ ವಿಷಯಗಳಿವೆ. ಆದರೆ ಹೋಮ್‌ವರ್ಕ್‌ ಮರುದಿನವೆ ರೆಡಿಯಾಗಬೇಕಲ್ಲಾ. ನನಗಂತೂ ಕೆಲವೊಮ್ಮೆ ಗಾಬರಿ ಗಾಬರಿ ಆಗುತ್ತೆ” ಎನ್ನುತ್ತಾಳೆ 15 ವಯಸ್ಸಿನ ಜಪಾನ್‌ನ ವಿದ್ಯಾರ್ಥಿನಿ ಹೀರೋಕೋ. * ರಷ್ಯಾದ ಸ್ವಿಯೆಟ್ಲಾನ ಎಂಬ 14ರ ಹುಡುಗಿ ತನ್ನ ಹೋಮ್‌ವರ್ಕ್‌ನ ಕುರಿತು ಹೇಳುವುದು: “ನನ್ನ ಹೋಮ್‌ವರ್ಕನ್ನು ಮಾಡಿ ಮುಗಿಸುವುದೇ ದೊಡ್ಡ ತಲೆಬಿಸಿ. ಪ್ರತಿವರ್ಷ ಹೆಚ್ಚು ಸಬ್ಜೆಕ್ಟ್‌ ಕಲಿಯಲಿಕ್ಕಿದೆ, ಟೀಚರ್ಸ್‌ ಹೆಚ್ಚೆಚ್ಚು ಲೆಸನ್ಸ್‌ ಕೊಡುತ್ತಾ ಇರುತ್ತಾರೆ. ಪ್ರತಿಯೊಬ್ಬ ಟೀಚರ್‌ಗೆ ತನ್ನ ಪಾಠವೇ ಹೆಚ್ಚು ಪ್ರಾಮುಖ್ಯ. ಆದರೆ ಪ್ರತಿಯೊಂದಕ್ಕೆ ಸಾಕಷ್ಟು ಗಮನಕೊಟ್ಟು ಅದನ್ನು ಮುಗಿಸುವುದು ತುಂಬಾ ಕಷ್ಟ.”

ಯಾಕಪ್ಪಾ ಅಷ್ಟೊಂದು ಒತ್ತು ಹೋಮ್‌ವರ್ಕ್‌ನ ಮೇಲೆ? ಬ್ರಸಿಲ್‌ನ 18 ವರ್ಷದ ಹಿಲ್‌ಬರ್ಟೋ ಎಂಬವನು ಬರೆಯುವುದು: “ಇಂದು ನೌಕರಿ ಮಾರುಕಟ್ಟೆಯಲ್ಲಿ ಭಾರಿ ಪೈಪೋಟಿಯ ದೊಡ್ಡ ದೊಡ್ಡ ಕೆಲಸಕ್ಕಾಗಿ ಮಕ್ಕಳನ್ನು ಸಿದ್ಧಪಡಿಸುತ್ತೇವೆಂದು ಟೀಚರ್ಸ್‌ರ ಹೇಳಿಕೆ.” ವಿಷಯವು ಹಾಗಿದ್ದರೂ, ನಿಮಗೆ ಸಿಗುವ ಹೋಮ್‌ವರ್ಕ್‌ನ ಭಾರಿ ಹೊರೆಯಿಂದಾಗಿ ನೀವು ಒತ್ತಡದ ಸುಳಿಯಲ್ಲಿ ಮುಳುಗಿಹೋಗುವ ಸಂಭವವಿದೆ. ಇಂಥ ಒತ್ತಡವನ್ನು ಪ್ರಾಯಶಃ ಎರಡು ವಿಧಗಳಲ್ಲಿ ನೀವು ಕಡಿಮೆಗೊಳಿಸಬಹುದು. ಒಂದು, ಹೋಮ್‌ವರ್ಕ್‌ನ ಕುರಿತ ನಿಮ್ಮ ನೋಟವನ್ನು ಬದಲಾಯಿಸುವ ಮೂಲಕ. ಇನ್ನೊಂದು, ನಿಮ್ಮನ್ನು ಕ್ರಮಪಡಿಸಿಕೊಳ್ಳುವ ಮೂಲಕ.

ಹೋಮ್‌ವರ್ಕ್‌ ಎಷ್ಟೇ ಇರಲಿ ಅದು ನಿಮ್ಮ ಮುಂದಣ ಜೀವನದ ಯಶಸ್ಸಿಗಾಗಿ ತರಬೇತಿಯೆಂದು ಪರಿಗಣಿಸಿರಿ. ನಿಮ್ಮ ಹೋಮ್‌ವರ್ಕ್‌ ಎಂದೂ ಮುಗಿಯದೆಂದು ನಿಮಗೆ ಅನಿಸಬಹುದಾದರೂ ನಿಮ್ಮ ಶಾಲಾ ವರ್ಷಗಳು ನೀವು ನೆನಸುವುದಕ್ಕಿಂತ ಬೇಗನೇ ಕೊನೆಗೊಳ್ಳುವುದೆಂದು ನೆನಪಿಡಿ. ನಿಮ್ಮ ಜೀವನೋಪಾಯಕ್ಕಾಗಿ ನೀವು ದುಡಿಯಲು ಪ್ರಾರಂಭಿಸುವಾಗ, ಆ ಕಷ್ಟಕರ ಪ್ರಾಜೆಕ್ಟ್‌ಗಳನ್ನು ನೀವು ಮಾಡಿ ಮುಗಿಸಿದಕ್ಕಾಗಿ ಸಂತೋಷಪಡುವಿರಿ. ನಿಮ್ಮ ಶಾಲಾ ವ್ಯಾಸಂಗದಲ್ಲಿ ನೀವು ಪಟ್ಟ ‘ಪ್ರಯಾಸಕ್ಕಾಗಿ ಸುಖವನ್ನು’ ಕಾಣುವಿರಿ.—ಪ್ರಸಂಗಿ 2:24.

ಸ್ವಶಿಸ್ತು ಮತ್ತು ಕ್ರಮಬದ್ಧತೆಯಿರುವಲ್ಲಿ ನೀವು ಒತ್ತಡವನ್ನು ಬಹಳ ಕಡಿಮೆಗೊಳಿಸುವಿರಿ. (“ಒತ್ತಡ ತಗ್ಗಿಸುವ ಪ್ರಾಯೋಗಿಕ ವಿಧಾನ” ಚೌಕ ನೋಡಿ.) ಜಾಗ್ರತೆಯಿಂದ ತಪ್ಪದೆ ಹೋಮ್‌ವರ್ಕ್‌ ಮಾಡುವುದನ್ನು ರೂಢಿಮಾಡಿಕೊಂಡಲ್ಲಿ ಟೀಚರ್ಸ್‌ ಮೆಚ್ಚಿ ನಿಮಗೆ ಸಹಾಯ ಮಾಡಬಯಸುವರು. ಒಬ್ಬ ಟೀಚರ್‌ಗೆ ನಿಮ್ಮ ಬಗ್ಗೆ ಆ ರೀತಿಯ ಸದ್ಭಾವನೆ ಇದೆಯೆಂದು ನೆನಸಿ. ಅನಿರೀಕ್ಷಿತವಾಗಿ ಏನಾದರೂ ಸಂಭವಿಸಿದಲ್ಲಿ ಹೋಮ್‌ವರ್ಕನ್ನು ಮುಗಿಸಲಿಕ್ಕಾಗಲಿಲ್ಲವೆಂದು ನೀವು ಆ ಟೀಚರ್‌ಗೆ ಮುಂಚಿತವಾಗಿ ತಿಳಿಸುವುದಾದರೆ, ಅವರು ನಿಮಗೆ ಹೆಚ್ಚು ಪರಿಗಣನೆ ತೋರಿಸದಿರುವರೇ? ಉದಾಹರಣೆಗೆ ದಾನಿಯೇಲನೆಂಬ ದೇವಭಕ್ತ ಪುರುಷನನ್ನು ತೆಗೆದುಕೊಳ್ಳಿ. ಅವನು “ನಂಬಿಗಸ್ತನೇ ಆಗಿದ್ದನು, ಅವನಲ್ಲಿ ಆಲಸ್ಯವಾಗಲಿ ಅಕ್ರಮವಾಗಲಿ ಸಿಕ್ಕಲಿಲ್ಲ.” ದಾನಿಯೇಲನು ತನ್ನ ಕೆಲಸದಲ್ಲಿ ತೋರಿಸಿದ ಶ್ರದ್ಧೆಯಿಂದಾಗಿ ಅವನು ರಾಜನ ಹೊಗಳಿಕೆಗೂ ವಿಶ್ವಾಸಕ್ಕೂ ಪಾತ್ರನಾದನು. (ದಾನಿಯೇಲ 6:4) ನೀವೂ ಆಲಸ್ಯವಾಗಿರದೆ ನಿಮ್ಮ ಹೋಮ್‌ವರ್ಕನ್ನು ಶ್ರದ್ಧೆಯಿಂದ ಮಾಡುವುದಾದರೆ ಬೇಕಿದ್ದಾಗ ಹೆಚ್ಚಿನ ಪರಿಗಣನೆಯು ದೊರೆಕೀತು.

ಕ್ಲಾಸಿನಲ್ಲಿ ನಿಕಟ ಗಮನ, ಹೋಮ್‌ವರ್ಕ್‌ ಮಾಡುವುದು, ಪ್ರಾಜೆಕ್ಟನ್ನು ಸಮಯಕ್ಕೆ ಸರಿಯಾಗಿ ಮುಗಿಸುವುದು ಇವೆಲ್ಲವೂ ಶಾಲೆಯ ಎಲ್ಲ ಒತ್ತಡವನ್ನು ನೀಗಿಸುತ್ತದೋ? ಇಲ್ಲ. ಮೊದಲ ರ್ಯಾಂಕ್‌ ಬರಬೇಕೆಂಬ ನಿಮ್ಮ ಸ್ವಂತ ಅಪೇಕ್ಷೆಯಿಂದಲೂ ಒಂದು ರೀತಿಯ ಒತ್ತಡವು ನಿಮ್ಮಲ್ಲಿರಬಹುದು. ಶಾಲಾಕೆಲಸದಿಂದ ಮಾತ್ರವಲ್ಲ ನಿಮ್ಮ ಪಾಠಗಳನ್ನು ಕಲಿತು ಪ್ರಯೋಜನ ಹೊಂದಲು, ರ್ಯಾಂಕ್‌ ಪಡೆಯಲು ಪ್ರಯತ್ನಿಸುವ ನಿಮ್ಮ ಸ್ವಂತ ಅಪೇಕ್ಷೆಯಿಂದ ಸಹ ಒತ್ತಡವು ಬರಸಾಧ್ಯವಿದೆ.

ಆ ರೀತಿಯ ಒತ್ತಡವು ಸಕಾರಾತ್ಮಕವೂ ಅಪೇಕ್ಷಣೀಯವೂ ಆಗಿದೆ. ಆದರೂ ಹಾನಿಕರವಾದ ಅನಾವಶ್ಯಕ ಒತ್ತಡಗಳು ಕೂಡ ನಿಮಗೆ ಎದುರಾಗಬಲ್ಲವು.

ಪಠ್ಯೇತರ ಚಟುವಟಿಕೆಗಳಿಂದ ಒತ್ತಡ

ಒಬ್ಬನು ಯಾವಾಗಲೂ ಕಾರನ್ನು ಅತಿವೇಗದಿಂದ ಓಡಿಸುತ್ತಾನೆಂದು ನೆನಸಿ. ಅವನು ಸಿಗ್ನಲ್‌ ಬಳಿ ಬಂದಾಗ ತಟ್ಟನೆ ಬ್ರೇಕ್‌ ಒತ್ತುತ್ತಾನೆ. ಆಗ ಕಾರ್‌ ಕಿರ್ರನೆ ಕಿರುಚಿ ನಿಲ್ಲುತ್ತದೆ. ಆಮೇಲೆ ಪುನಃ ಎಕ್ಸಿಲೇಟರನ್ನು ರಭಸದಿಂದ ಒತ್ತಿದಾಗ ಚಕ್ರಗಳು ಗಿರ್ರನೆ ತಿರುಗುತ್ತಾ ಕಾರು ಮುಂದೆ ಓಡುತ್ತದೆ. ಆ ಹುಚ್ಚು ಡ್ರೈವರ್‌ ತನ್ನ ಕಾರ್‌ಗೆ ಮಾಡುತ್ತಿರುವುದೇನು? ಹಾನಿಯೇ ಅಲ್ಲದೆ ಮತ್ತೇನೂ ಅಲ್ಲ. ಎಂಜಿನೂ ಬೇರೆ ಭಾಗಗಳೂ ಹಾಳಾಗುತ್ತವೆ. ಮಾತ್ರವಲ್ಲ ಅವನು ಭೀಕರ ಅಪಘಾತದಲ್ಲಿ ಸಿಕ್ಕಿಬಿದ್ದು ಕಾರು ಪೂರ್ತಿಯಾಗಿ ನಜ್ಜುಗುಜ್ಜಾಗುವ ಸಂಭವವೂ ಇದೆ.

ತದ್ರೀತಿಯಲ್ಲಿ ಅನೇಕ ವಿದ್ಯಾರ್ಥಿಗಳು ಶಾಲಾಪಾಠಕ್ಕೆ ಮುಂಚೆ ಮತ್ತು ನಂತರ ತಮ್ಮ ಮೈಮನಗಳನ್ನು ಅನೇಕಾನೇಕ ಕೆಲಸಗಳಿಂದ ಶ್ರಮಪಡಿಸಿ ರಭಸದಿಂದ ಮುಂದುವರಿಯಲು ಪ್ರಯತ್ನಿಸುತ್ತಾರೆ. ಡನೀಸ್‌ ಕ್ಲಾರ್ಕ್‌ ಪೋಪ್‌ ಎಂಬಾಕೆ ತಾನು ಭೇಟಿಯಾದ ಹಲವಾರು ವಿದ್ಯಾರ್ಥಿಗಳ ಕುರಿತು ಡೂಇಂಗ್‌ ಸ್ಕೂಲ್‌ ಎಂಬ ತನ್ನ ಪುಸ್ತಕದಲ್ಲಿ ಹೀಗೆ ಬರೆದರು: “ದೊಡ್ಡವರು ಕೆಲಸಕ್ಕೆ ಹೋಗುವ ಒಂದೆರಡು ತಾಸುಗಳ ಮುಂಚೆಯೇ ಬೆಳಬೆಳಗ್ಗೆ ಅವರ ಶಾಲೆ ಆರಂಭ. ಅದಲ್ಲದೆ ವಿದ್ಯಾರ್ಥಿಗಳ ದಿನವು ಮುಗಿಯುವುದು ಸಹ ರಾತ್ರಿ ತುಂಬಾ ಲೇಟು. ಅವರಿಗೆ ಫುಟ್‌ಬಾಲ್‌, ಡಾನ್ಸ್‌ ಪ್ರ್ಯಾಕ್ಟಿಸ್‌ ಮೊದಲಾದ ಪಠ್ಯೇತರ ಚಟುವಟಿಕೆ, ವಿದ್ಯಾರ್ಥಿಗಳ ಕೌನ್ಸಿಲ್‌ ಮೀಟಿಂಗ್‌, ಪಾರ್ಟ್‌ ಟೈಮ್‌ ಕೆಲಸ ಮತ್ತು ಹೋಮ್‌ವರ್ಕ್‌ ಎಲ್ಲವನ್ನೂ ಮಾಡಿ ಮುಗಿಸಬೇಕು.”

ವಿದ್ಯಾರ್ಥಿಗಳು ಈ ರೀತಿ ದಿನದಿನವೂ ಸ್ವಲ್ಪವೂ ಬಿಡುವಿಲ್ಲದ ಕೆಲಸದಲ್ಲಿ ತೊಡಗುವುದಾದರೆ ಸಮಸ್ಯೆಗಳು ಉಂಟಾಗುವುದು ಸಹಜ. ತೀವ್ರ ಒತ್ತಡ ತುಂಬಿರುವ ಜೀವನವು ಅವರನ್ನು ಹೊಟ್ಟೆನೋವು, ತಲೆನೋವಿನಿಂದ ನರಳಿಸಬಹುದು. ಸದಾ ಸುಸ್ತಾಗಿರುವ ಕಾರಣ ರೋಗನಿರೋಧಕ ಶಕ್ತಿ ಕಡಿಮೆಯಾಗಿ ಅವರು ಅಸ್ವಸ್ಥರಾಗಲೂಬಹುದು. ಚುರುಕಿನಿಂದ ಇದ್ದವರು ಈಗ ನಿಧಾನಿಸುತ್ತಾರೆ, ಪುನಃ ಚೇತರಿಸಿಕೊಳ್ಳಲು ಹೆಣಗಾಡುತ್ತಾರೆ. ನಿಮಗೂ ಹೀಗಾಗುತ್ತಿದೆಯೋ?

ಸಾರ್ಥಕ ಗುರಿಗಳಿಗಾಗಿ ಶ್ರಮಿಸುವುದು ಉತ್ತಮ. ಆದರೆ ನೀವು ಎಷ್ಟೇ ಆರೋಗ್ಯವಂತರಾಗಿದ್ದರೂ ದಿನವೊಂದರಲ್ಲಿ ಮಾಡಬಲ್ಲ ಕೆಲಸಕ್ಕೆ ಇತಿಮಿತಿ ಇದೆ. ಬೈಬಲ್‌ ಈ ಉತ್ತಮ ಸಲಹೆಯನ್ನು ಕೊಡುತ್ತದೆ: “ನಿಮ್ಮ ನ್ಯಾಯಸಮ್ಮತತೆಯು ಎಲ್ಲ ಮನುಷ್ಯರಿಗೆ ತಿಳಿದುಬರಲಿ.” (ಫಿಲಿಪ್ಪಿ 4:5) “ನ್ಯಾಯಸಮ್ಮತತೆ” ಎಂಬ ಪದದ ಎರಡು ಅರ್ಥಗಳು ಹೀಗಿವೆ: “ವಿಪರೀತಕ್ಕೆ ಅಥವಾ ಅತಿರೇಕಕ್ಕೆ ಹೋಗದಿರುವುದು” ಮತ್ತು “ಒಳ್ಳೆಯ ನಿರ್ಣಯ ಮಾಡುವುದು.” ಒಬ್ಬ ನ್ಯಾಯಸಮ್ಮತ ವ್ಯಕ್ತಿಯು ನಿರ್ಣಯಗಳನ್ನು ಮಾಡುವಾಗ ತನಗೂ ಬೇರೆಯವರಿಗೂ ಹಾನಿಯಾಗದಂತೆ ನೋಡಿಕೊಳ್ಳುತ್ತಾನೆ. ಅವನು ಪ್ರೌಢತೆಯನ್ನು ಪ್ರದರ್ಶಿಸುತ್ತಾನೆ. ಇದು ಇಂದಿನ ಅಸ್ಥಿರ ಲೋಕದಲ್ಲಿ ಅತ್ಯಂತ ಬೆಲೆಯುಳ್ಳದ್ದು. ಆದ್ದರಿಂದ ನಿಮ್ಮ ಆರೋಗ್ಯವನ್ನು ಉಳಿಸಿಕೊಳ್ಳಲು ನ್ಯಾಯಸಮ್ಮತತೆ ಇಲ್ಲವೆ ವಿವೇಚನೆ ಅಗತ್ಯ. ನೀವು ತೀರ ಬದ್ಧತೆಯಿಂದ ಮಾಡುತ್ತಿರುವ ಕೆಲವು ಅಪ್ರಾಮುಖ್ಯ ಚಟುವಟಿಕೆಗಳನ್ನು ಕಡಿಮೆಗೊಳಿಸುವುದು ಉಚಿತ.

ಐಶ್ವರ್ಯದ ಬೆನ್ನಟ್ಟುವಿಕೆ

ಕೆಲವು ಯುವ ವಿದ್ಯಾರ್ಥಿಗಳಿಗಾದರೋ ನ್ಯಾಯಸಮ್ಮತತೆಯು ಒಂದು ಗುರಿ ಮುಟ್ಟುವ ಸಹಾಯಕವಲ್ಲ ಬದಲಾಗಿ ತಡೆಗಟ್ಟಾಗಿ ಕಾಣುತ್ತದೆ. ಏಕೆಂದರೆ ಕೈತುಂಬಾ ಸಂಬಳದ ಕೆಲಸ ಮತ್ತು ಆ ಕೆಲಸವು ಕೊಡುವ ಐಶ್ವರ್ಯವೇ ಯಶಸ್ಸಿಗೆ ಕೀಲಿಕೈ ಎಂದವರ ನಂಬಿಕೆ. ತಾನು ಭೇಟಿಯಾದ ಯುವಜನರಲ್ಲಿ ಇಂಥ ಭಾವನೆ ಇದ್ದದ್ದು ಈ ಮುಂಚೆ ತಿಳಿಸಿದ ಡನೀಸ್‌ ಪೋಪ್‌ರಿಗೆ ಕಂಡುಬಂತು. ಅವರಂದದ್ದು: “ಸಾಕಷ್ಟು ನಿದ್ದೆಯೂ ಉತ್ತಮ ಆರೋಗ್ಯವೂ ದೊರೆತಿದ್ದರೆ ಎಷ್ಟೋ ಒಳ್ಳೇದಿತ್ತು ಎಂದು ಈ ವಿದ್ಯಾರ್ಥಿಗಳು ಬಯಸಿದ್ದರು. ಆದರೆ ಶಾಲೆ, ಕುಟುಂಬ, ಕೆಲಸಗಳು ಸೇರಿದಂತೆ ಅವರ ಬಿಡುವಿಲ್ಲದ ಶೆಡ್ಯೂಲ್‌ಗಳಿಂದಾಗಿ ಅದು ಅವರಿಗೆ ದೊರೆಯಲಿಲ್ಲ. ತದ್ರೀತಿಯಲ್ಲಿ ಸ್ನೇಹಿತರೊಂದಿಗೆ ಹೆಚ್ಚು ಸಮಯ ಕಳೆಯುವುದು, ಬೇರೆ ಚಟುವಟಿಕೆಗಳನ್ನು ಮಾಡುವುದು, ಕೆಲವು ದಿನಗಳ ರಜೆಯಲ್ಲಿ ಹೋಗುವುದು ಮುಂತಾದವುಗಳನ್ನು ಅವರು ಬಯಸಿದ್ದರು. ಆದರೆ ಇವೆಲ್ಲವುಗಳನ್ನು ಮಾಡಿದಲ್ಲಿ ತಮಗೆ ರ್ಯಾಂಕ್‌ ಪಡೆಯಸಾಧ್ಯವಿಲ್ಲ ಎಂದವರು ನಂಬಿದ್ದರು. ತಾವು ಬೇರೇನಾದರೂ ನಿರ್ಣಯ ಮಾಡುವ ಅಗತ್ಯವಿತ್ತೆಂದು ಅವರು ಮನಗಂಡರು. ಆದರೆ ಅವರಿಗೆ ಸದ್ಯದ ಸಂತೋಷಕ್ಕಿಂತ ಮುಂದಿನ ಯಶಸ್ಸೇ ಹೆಚ್ಚು ಪ್ರಾಮುಖ್ಯವಾಗಿತ್ತು.”

ತಮ್ಮನ್ನು ಮಿತಿಮೀರಿ ದುಡಿಸಿಕೊಳ್ಳುವ ಅಂಥಾ ವಿದ್ಯಾರ್ಥಿಗಳು ಮಹಾ ವಿವೇಕಿಯಾದ ಯೇಸು ಕ್ರಿಸ್ತನು ಒಮ್ಮೆ ನುಡಿದ ಮಾತುಗಳನ್ನು ಜ್ಞಾಪಿಸಿಕೊಳ್ಳುವುದು ಒಳ್ಳೆಯದು: “ಒಬ್ಬ ಮನುಷ್ಯನು ಇಡೀ ಲೋಕವನ್ನೇ ಸಂಪಾದಿಸಿಕೊಂಡರೂ ಪ್ರಾಣನಷ್ಟಪಟ್ಟರೆ ಅವನಿಗೆ ಪ್ರಯೋಜನವೇನು? ಅಥವಾ ಒಬ್ಬನು ತನ್ನ ಪ್ರಾಣಕ್ಕೆ ಪ್ರತಿಯಾಗಿ ಏನನ್ನು ಕೊಡುವನು?” (ಮತ್ತಾಯ 16:26) ಆ ಮಾತುಗಳಿಂದ ಯೇಸು ಕ್ರಿಸ್ತನು ಎಚ್ಚರಿಸಿದ್ದೇನೆಂದರೆ, ಈ ಲೋಕದಲ್ಲಿ ಸಾಧಿಸ ಬಯಸುವ ಗುರಿಗಳಿಗೋಸ್ಕರ ನಾವು ಶಾರೀರಿಕವಾಗಿ, ಭಾವನಾತ್ಮಕವಾಗಿ ಮತ್ತು ಆಧ್ಯಾತ್ಮಿಕವಾಗಿ ನಾವೆಷ್ಟೇ ಬೆಲೆ ತೆತ್ತರೂ ಅವು ವ್ಯರ್ಥವೇ ಸರಿ.

ಪ್ರೈಸ್‌ ಆಫ್‌ ಪ್ರಿವಿಲಿಜ್‌ ಎಂಬ ತಮ್ಮ ಪುಸ್ತಕದಲ್ಲಿ ಮನೋತಜ್ಞೆ ಮ್ಯಾಡಲಿನ್‌ ಲಿವೈನ್‌ ಬರೆದದ್ದು: “ಹಣ, ಶಿಕ್ಷಣ, ಅಧಿಕಾರ, ಸ್ಥಾನಮಾನ, ಸ್ವತ್ತುಗಳೇ ಮುಂತಾದವುಗಳು ಅಸಂತೋಷ ಅಥವಾ ಭಾವನಾತ್ಮಕ ಅಸ್ವಸ್ಥಗಳನ್ನು ನಿವಾರಿಸಲಾರವು.” ಈ ಮುಂಚೆ ತಿಳಿಸಿದ ಡನೀಸ್‌ ಪೋಪ್‌ ಹೇಳಿದ್ದು: “ಎಷ್ಟೋ ಮಕ್ಕಳು ಮತ್ತು ಹೆತ್ತವರು ಪರಿಪೂರ್ಣತೆಯ ಶಿಖರ ಮುಟ್ಟಲು ಪ್ರಯಾಸಪಡುವುದನ್ನು ನಾನು ನೋಡುತ್ತೇನೆ. ಆದರೆ ಇದು ಯಶಸ್ಸನ್ನು ಪಡೆಯುವ ತಪ್ಪಾದ ಮಾರ್ಗ.” ಅವರು ಮತ್ತೂ ಹೇಳಿದ್ದು: “ನಾವು ಮುಖ್ಯವಾಗಿ ಪ್ರಯಾಸ ಪಡಬೇಕಾದದ್ದು ಮಾನಸಿಕ, ಶಾರೀರಿಕ ಮತ್ತು ಆಧ್ಯಾತ್ಮಿಕ ಆರೋಗ್ಯಕ್ಕಾಗಿಯೇ.”

ಹಣಕ್ಕಿಂತ ಹೆಚ್ಚು ಪ್ರಾಮುಖ್ಯವಾದ ವಿಷಯಗಳೂ ಇವೆ. ಅವು ಯಾವುವೆಂದರೆ, ಭಾವನಾತ್ಮಕ ಮತ್ತು ಶಾರೀರಿಕ ಸ್ವಾಸ್ಥ್ಯ, ಒಳ್ಳೇ ಮನಸ್ಸಾಕ್ಷಿ, ನಮ್ಮ ನಿರ್ಮಾಣಿಕನೊಂದಿಗಿನ ಸ್ನೇಹಸಂಬಂಧ. ಇವು ದೇವರಿಂದ ದೊರೆತಿರುವ ಅಮೂಲ್ಯ ಉಡುಗೊರೆಗಳು. ಇವನ್ನು ಕೀರ್ತಿ ಅಥವಾ ಸಿರಿಸಂಪತ್ತುಗಳ ಬೆನ್ನಟ್ಟುವಿಕೆಯಲ್ಲಿ ನೀವು ಕಳಕೊಳ್ಳುವುದಾದರೆ ಅವು ಪುನಃ ಎಂದೂ ದೊರೆಯಲಾರವು. ಈ ಕುರಿತು ಯೇಸು ಏನು ಹೇಳಿದನೆಂದು ಗಮನಿಸಿ: “ತಮ್ಮ ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು ಸಂತೋಷಿತರು; ಸ್ವರ್ಗದ ರಾಜ್ಯವು ಅವರದು.”—ಮತ್ತಾಯ 5:3.

ಅನೇಕ ಯುವ ಜನರು ಈಗ ಆ ಸತ್ಯವನ್ನು ತಿಳುಕೊಂಡಿದ್ದಾರೆ. ಶಾಲೆಯಲ್ಲಿ ಅವರು ಚೆನ್ನಾಗಿ ಕಲಿಯುತ್ತಾರಾದರೂ ಶೈಕ್ಷಣಿಕ ಉತ್ಕೃಷ್ಟತೆ ಮತ್ತು ಲೌಕಿಕ ಐಶ್ವರ್ಯಗಳು ಬಾಳುವ ಸಂತೋಷವನ್ನು ತರಲಾರವು ಎಂದು ಅವರಿಗೆ ಗೊತ್ತಿದೆ. ಅಂಥಾ ಗುರಿಗಳನ್ನು ಬೆನ್ನಟ್ಟುವುದರಿಂದ ಅನಾವಶ್ಯಕ ಒತ್ತಡಗಳ ಸುಳಿಯಲ್ಲಿ ತಾವು ಸಿಕ್ಕಿಬೀಳುತ್ತೇವೆ ಎಂದವರು ಮನಗಂಡಿದ್ದಾರೆ. ಆ ವಿದ್ಯಾರ್ಥಿಗಳು ಕಲಿತಿದ್ದಾರೆ ಏನೆಂದರೆ ‘ಆಧ್ಯಾತ್ಮಿಕ ಅಗತ್ಯವನ್ನು’ ತೃಪ್ತಿಪಡಿಸುವುದೇ ನಿಜ ಸಂತೋಷದ ಭವಿಷ್ಯಕ್ಕೆ ತಳಪಾಯ. ನಿಮ್ಮ ಆಧ್ಯಾತ್ಮಿಕ ಅಗತ್ಯವನ್ನು ತೃಪ್ತಿಪಡಿಸುತ್ತಾ ಸಂತೋಷವನ್ನು ಕಂಡುಕೊಳ್ಳುವುದು ಹೇಗೆಂದು ತೋರಿಸಲು ಈ ಪತ್ರಿಕೆಯ ಪ್ರಕಾಶಕರು ಅಥವಾ ನಿಮ್ಮ ಕ್ಷೇತ್ರದಲ್ಲಿರುವ ಯೆಹೋವನ ಸಾಕ್ಷಿಗಳು ಇಷ್ಟಪಡುತ್ತಾರೆ. (g 4/09)

[ಪಾದಟಿಪ್ಪಣಿಗಳು]

^ ಪಾಠದಲ್ಲಿ ಹಿಂದೆಬಿದ್ದಿರುವ ಅಥವಾ ಕಲಿಯಲು ಪ್ರಯತ್ನಿಸದೇ ಇರುವ ವಿದ್ಯಾರ್ಥಿಗಳಿಗಾಗಿ 1998, ಏಪ್ರಿಲ್‌ 8ರ ಎಚ್ಚರ! ಪುಟ 15-17ರಲ್ಲಿರುವ “ಯುವ ಜನರು ಪ್ರಶ್ನಿಸುವುದು . . . ನಾನು ಶಾಲೆಯಲ್ಲಿ ಹೆಚ್ಚು ಉತ್ತಮವಾಗಿ ಕಲಿಯಶಕ್ತನಾಗಿರುವೆನೊ?” ಲೇಖನ ನೋಡಿ.

^ ಇದರ ಕುರಿತ ಹೆಚ್ಚಿನ ಮಾಹಿತಿಗಾಗಿ 1993, ಜುಲೈ 8ರ ಎಚ್ಚರ! ಪುಟ 13-15ರಲ್ಲಿರುವ “ಯುವ ಜನರು ಪ್ರಶ್ನಿಸುವುದು . . . ಇಷ್ಟೊಂದು ಶಾಲಾ ಮನೆಗೆಲಸದ ಕುರಿತು ನಾನು ಏನು ಮಾಡಬಲ್ಲೆ?” ಲೇಖನ ನೋಡಿ.

^ ಕೆಲವು ಹೆಸರುಗಳು ಬದಲಾಗಿವೆ.

[ಪುಟ 6ರಲ್ಲಿರುವ ಸಂಕ್ಷಿಪ್ತ ವಿವರಣೆ]

ನೀವು ಎಷ್ಟೇ ಆರೋಗ್ಯವಂತರಾಗಿದ್ದರೂ ದಿನವೊಂದರಲ್ಲಿ ಮಾಡಬಲ್ಲ ಕೆಲಸಕ್ಕೆ ಇತಿಮಿತಿ ಇದೆ

[ಪುಟ 8ರಲ್ಲಿರುವ ಸಂಕ್ಷಿಪ್ತ ವಿವರಣೆ]

ನಿಮ್ಮ ನಿರ್ಮಾಣಿಕನ ಕುರಿತ ಜ್ಞಾನವನ್ನು ಪಡಕೊಳ್ಳುವುದೇ ನೀವು ಪಡೆಯಬಲ್ಲ ಅತ್ಯುತ್ತಮ ಶಿಕ್ಷಣ

[ಪುಟ 5ರಲ್ಲಿರುವ ಚೌಕ/ಚಿತ್ರ]

ಒತ್ತಡ ತಗ್ಗಿಸುವ ಪ್ರಾಯೋಗಿಕ ವಿಧಾನ

❑ ಪೇಪರ್‌ಗಳ ಕಂತೆಯಲ್ಲಿ ಮತ್ತು ನೋಟ್‌ ಬುಕ್‌ಗಳಲ್ಲಿ ನಿಮಗೆ ಬೇಕಾದದ್ದನ್ನು ಹುಡುಕಲು ನೀವು ಗಂಟೆಗಟ್ಟಲೆ ಸಮಯವನ್ನು ವ್ಯಯಿಸುತ್ತೀರೋ? ಕೆಲವರಿಗೆ ಎಲ್ಲವನ್ನು ಕ್ರಮವಾಗಿಯೂ ವ್ಯವಸ್ಥಿತವಾಗಿಯೂ ಇಡಲು ಸಹಾಯ ಬೇಕು. ಆದುದರಿಂದ ಇತರರ ಸಲಹೆ ಕೇಳಲು ಸಂಕೋಚಪಡಬೇಡಿ.

❑ ಹೋಮ್‌ವರ್ಕ್‌ ಮಾಡುವುದನ್ನು ಮುಂದೂಡುತ್ತಾ ಇರುತ್ತೀರೋ? ಹಾಗಾದರೆ ಅದನ್ನು ಸಮಯಕ್ಕೆ ಮುಂಚಿತವಾಗಿ ಮುಗಿಸಲು ಒಮ್ಮೆ ಪ್ರಯತ್ನಿಸಿ ನೋಡಿ. ಆಗ ನಿಮಗೆ ದೊರಕುವ ಸಂತೃಪ್ತಿ ಮತ್ತು ನೆಮ್ಮದಿಯನ್ನು ಕಂಡು ನಿಮಗೇ ಆಶ್ಚರ್ಯವಾಗುವುದು. ಮುಂದಿನ ಸಲ ನೀವು ಹೋಮ್‌ವರ್ಕ್‌ ಮುಂದೂಡಲು ಬಯಸುವುದಿಲ್ಲ.

❑ ಪಾಠ ನಡೆಯುವಾಗ ಕೆಲವೊಮ್ಮೆ ಹಗಲುಗನಸು ಕಾಣುತ್ತಿರುತ್ತೀರೋ? ಒಂದು ತಿಂಗಳ ತನಕ ಈ ಕೆಳಗಿನವುಗಳನ್ನು ಪ್ರಯತ್ನಿಸಿ ನೋಡಿ: ಕ್ಲಾಸಿನಲ್ಲಿ ನಡೆಯುವ ಪಾಠಕ್ಕೆ ನಿಕಟವಾಗಿ ಕಿವಿಗೊಡಿ. ಮುಂದೆ ಉಪಯೋಗಿಸಲಿಕ್ಕಾಗಿ ಸರಿಯಾದ ಟಿಪ್ಪಣಿಗಳನ್ನು ಬರೆಯಿರಿ. ಆಗ ನಿಮ್ಮ ಹೋಮ್‌ವರ್ಕ್‌ ಎಷ್ಟು ಸುಲಭವಾಗುವುದೆಂದರೆ ನಿಮಗೇ ಆಶ್ಚರ್ಯವಾದೀತು. ಆ ಉತ್ತಮ ಫಲಿತಾಂಶವು ನಿಮ್ಮ ಒತ್ತಡವನ್ನು ಕಡಿಮೆಗೊಳಿಸುವುದು.

❑ ನಿಮಗೆ ಹೆಚ್ಚಿನ ವಿಷಯವನ್ನು ಕಲಿಸಿಕೊಡುವ ಆದರೆ ಅಧಿಕ ಸಮಯ ಮತ್ತು ಪ್ರಯತ್ನವನ್ನು ಅವಶ್ಯಪಡಿಸುವ ಒಂದು ಕೋರ್ಸನ್ನು ನೀವು ಆರಿಸಿಕೊಂಡಿದ್ದೀರೋ? ಆ ಕೋರ್ಸನ್ನು ನೀವು ತೆಗೆದುಕೊಳ್ಳಲೇ ಬೇಕೋ? ನಿಮ್ಮ ಹೆತ್ತವರೊಂದಿಗೆ ಮಾತಾಡಿ ನೋಡಿ. ಶಿಕ್ಷಣದ ಬಗ್ಗೆ ಯೋಗ್ಯ ನೋಟವಿರುವ ಯಾರಾದರೊಬ್ಬರ ಅಭಿಪ್ರಾಯ ಪಡೆಯಿರಿ. ಒಂದುವೇಳೆ ಆ ಐಚ್ಛಿಕ ಕೋರ್ಸುಗಳು ಪದವಿ ಪಡೆಯಲು ಹೆಚ್ಚು ಸಹಾಯಕರವಲ್ಲ ಎಂಬುದಾಗಿ ಕಂಡುಕೊಂಡೀರಿ.

[ಪುಟ 5ರಲ್ಲಿರುವ ಚೌಕ]

ಐಶ್ವರ್ಯ ಬಲವಾದ ಕೋಟೆಯೋ?

“ಧನವಂತನು ತನ್ನ ಐಶ್ವರ್ಯವನ್ನು ಬಲವಾದ ಕೋಟೆಯೆಂದೂ ಎತ್ತರವಾದ ಗೋಡೆಯೆಂದೂ ಭಾವಿಸಿಕೊಳ್ಳುತ್ತಾನೆ.” (ಜ್ಞಾನೋಕ್ತಿ 18:11) ಪುರಾತನ ಕಾಲಗಳಲ್ಲಿ ಜನರು ಶತ್ರುಗಳ ಆಕ್ರಮಣದಿಂದ ಸುರಕ್ಷೆಗಾಗಿ ಭದ್ರವಾದ ಎತ್ತರ ಗೋಡೆಗಳ ಮೇಲೆ ಆತುಕೊಳ್ಳುತ್ತಿದ್ದರು. ಆದರೆ ನೀವು ಗೋಡೆಯೇ ಇರದ ಪಟ್ಟಣದಲ್ಲಿ ಜೀವಿಸುತ್ತೀರೆಂದು ನೆನಸಿ. ಸುತ್ತ ಗೋಡೆ ಇದೆ ಎಂದು ನೀವು ಬರೇ ಊಹಿಸುತ್ತೀರಿ. ಅದು ನಿಮಗೆ ನಿಜವಾಗಿ ಸಂರಕ್ಷಣೆಯನ್ನು ಕೊಡುತ್ತದೋ? ಖಂಡಿತ ಇಲ್ಲ. ಆ ಗೋಡೆ ನಿಮ್ಮ ಸುತ್ತಲೂ ಇದೆ ಎಂದು ನೀವೆಷ್ಟೇ ಖಾತ್ರಿಯಿಂದಿದ್ದರೂ ಶತ್ರುಗಳಿಂದ ಅದು ನಿಮ್ಮನ್ನು ರಕ್ಷಿಸಲಾರದು.

ಅಂಥ ಅಸುರಕ್ಷಿತ ಸ್ಥಳದಲ್ಲಿ ಜೀವಿಸುವ ಜನರಂತೆ ಐಶ್ವರ್ಯವನ್ನೇ ಬೆನ್ನಟ್ಟುವ ಯುವ ಜನರಿಗೆ ಆಶಾಭಂಗವು ಕಟ್ಟಿಟ್ಟ ಬುತ್ತಿ. ಹೆತ್ತವರು ನೀವೋ? ಹಾಗಿದ್ದರೆ ನಿಮ್ಮ ಮಕ್ಕಳು ಪ್ರಾಪಂಚಿಕತೆಯ ಪಾಶವನ್ನು ತಪ್ಪಿಸಿಕೊಳ್ಳುವಂತೆ, ಕಾಲ್ಪನಿಕ ಗೋಡೆಯುಳ್ಳ ಒಂದು ಪಟ್ಟಣದಲ್ಲಿ ಅವರು ವಾಸಿಸದಂತೆ ಸಹಾಯ ಮಾಡುವುದು ನಿಮಗೆ ಹಿತಕರ.

ಕೆಳಗಿನ ಬೈಬಲ್‌ ಆಧಾರಿತ ಸತ್ಯಗಳು ನಿಮ್ಮ ಮಕ್ಕಳೊಂದಿಗೆ ಚರ್ಚಿಸಲು ನಿಮಗೆ ಸಹಾಯವಾಗಬಲ್ಲದು:

◼ ಅಪಾರ ಐಶ್ವರ್ಯವು ಹೆಚ್ಚಾಗಿ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ ಬದಲಿಗೆ ಹೆಚ್ಚಿಸುತ್ತದಷ್ಟೇ. “ಐಶ್ವರ್ಯವಂತನ ಸಮೃದ್ಧಿಯೋ ಅವನಿಗೆ ನಿದ್ರೆ ಬರಲೀಸದು.”ಪ್ರಸಂಗಿ 5:12; 1 ತಿಮೊಥೆಯ 6:9, 10.

◼ ಸರಿಯಾಗಿ ಯೋಜಿಸಿ ಕ್ರಮಬದ್ಧ ಜೀವನ ನಡೆಸುವ ವ್ಯಕ್ತಿಗೆ ಸುಖದಿಂದಿರಲು ಐಶ್ವರ್ಯ ಬೇಕಿಲ್ಲ. “ಶ್ರಮಶೀಲರಿಗೆ ತಮ್ಮ ಯತ್ನಗಳಿಂದ ಸಮೃದ್ಧಿ.”ಜ್ಞಾನೋಕ್ತಿ 21:5; ಲೂಕ 14:28.

◼ ನಮ್ಮ ಅಗತ್ಯಗಳನ್ನು ಪೂರೈಸಶಕ್ತವಾದ ಮಿತವಾದ ಆದಾಯವೇ ಸಂತೃಪ್ತಿಯನ್ನು ತರುತ್ತದೆ. ‘ಬಡತನವನ್ನಾಗಲಿ ಐಶ್ವರ್ಯವನ್ನಾಗಲಿ ಕೊಡಬೇಡ.’ಜ್ಞಾನೋಕ್ತಿ 30:8. *

[ಪಾದಟಿಪ್ಪಣಿ]

^ ಪ್ರಾಪಂಚಿಕತೆಯ ಪಾಶದ ಕುರಿತಾದ ಹೆಚ್ಚಿನ ಮಾಹಿತಿಗಾಗಿ 2003, ಏಪ್ರಿಲ್‌ 8ರ ಎಚ್ಚರ! (ಇಂಗ್ಲಿಷ್‌) ಪುಟ 20-21 ನೋಡಿ.

[ಪುಟ 7ರಲ್ಲಿರುವ ಚಿತ್ರಗಳು]

ಹೋಮ್‌ವರ್ಕನ್ನು ಒಂದು ಸಮಸ್ಯೆಯೆಂದು ಎಣಿಸಬೇಡಿ, ಮುಂದಿನ ಉದ್ಯೋಗಕ್ಕಾಗಿ ತರಬೇತಿಯೆಂದೆಣಿಸಿ

[ಪುಟ 7ರಲ್ಲಿರುವ ಚಿತ್ರ]

ಇತಿಮಿತಿಯಿಲ್ಲದೆ ಶಕ್ತಿಮೀರಿ ಕೆಲಸಮಾಡುವುದರಿಂದ ನೀವು ಏನನ್ನೂ ಸಾಧಿಸಲಾರಿರಿ