ದಾಂಪತ್ಯ ನಿಷ್ಠೆ ನಿಜಾರ್ಥವೇನು?
ಬೈಬಲಿನ ದೃಷ್ಟಿಕೋನ
ದಾಂಪತ್ಯ ನಿಷ್ಠೆ ನಿಜಾರ್ಥವೇನು?
ದಂಪತಿಗಳು ಲೈಂಗಿಕ ಸಂಬಂಧದಲ್ಲಿ ಪರಸ್ಪರ ನಿಷ್ಠೆಯಿಂದಿರುವಂತೆ ಬಹುತೇಕ ಜನರು ಅಪೇಕ್ಷಿಸುತ್ತಾರೆ. ದಾಂಪತ್ಯ ನಿಷ್ಠೆಯ ಈ ನೋಟವು ಬೈಬಲಿನೊಂದಿಗೆ ಸಹಮತದಲ್ಲಿದೆ. ಬೈಬಲ್ ಅನ್ನುವುದು: “ವಿವಾಹವು ಎಲ್ಲರಲ್ಲಿಯೂ ಗೌರವಾರ್ಹವಾಗಿರಲಿ ಮತ್ತು ದಾಂಪತ್ಯದ ಹಾಸಿಗೆಯು ಮಾಲಿನ್ಯವಿಲ್ಲದ್ದಾಗಿರಲಿ.”—ಇಬ್ರಿಯ 13:4.
ಪರಸ್ತ್ರೀ ಅಥವಾ ಪರಪುರುಷನೊಂದಿಗೆ ಲೈಂಗಿಕ ಸಂಬಂಧವನ್ನು ಇಟ್ಟುಕೊಳ್ಳದಿರುವುದು ಮಾತ್ರವೇ ದಾಂಪತ್ಯ ನಿಷ್ಠೆಯ ನಿಜಾರ್ಥವೋ? ನಿಮ್ಮ ವಿವಾಹ ಜೊತೆಯಲ್ಲದ ಬೇರೆಯವರೊಂದಿಗೆ ಲೈಂಗಿಕ ಸುಖಪಡೆಯುವ ಕುರಿತು ಮನಸ್ಸಿನಲ್ಲಿ ಆಲೋಚಿಸುವುದರ ಕುರಿತೇನು? ಗಂಡ ಅಥವಾ ಹೆಂಡತಿ ಬೇರೆ ಸ್ತ್ರೀಪುರುಷರೊಂದಿಗೆ ಅತ್ಯಾಪ್ತ ಸ್ನೇಹದಿಂದಿರುವುದು ಒಂದು ಬಗೆಯ “ದಾಂಪತ್ಯದ್ರೋಹ” ಆಗಿರಸಾಧ್ಯವೋ?
ಲೈಂಗಿಕ ಭ್ರಮೆಗಳು ಹಾನಿಕರವಲ್ಲವೋ?
ಲೈಂಗಿಕ ಸಂಬಂಧವು ವೈವಾಹಿಕ ಜೀವನದಲ್ಲಿ ಸ್ವಾಭಾವಿಕವೂ ಹಿತಕರವೂ ಆಗಿದ್ದು ಅದು ಪರಸ್ಪರ ಸಂತೋಷ ಮತ್ತು ಸಂತೃಪ್ತಿಯ ಮೂಲವೆಂದು ಬೈಬಲು ಹೇಳುತ್ತದೆ. (ಜ್ಞಾನೋಕ್ತಿ 5:18, 19) ವಿವಾಹಿತ ವ್ಯಕ್ತಿಯೊಬ್ಬನು ಬೇರೆಯವರೊಂದಿಗೆ ಲೈಂಗಿಕ ಸುಖಪಡೆಯುವ ಕುರಿತು ಮನಸ್ಸಿನಲ್ಲಿ ಆಲೋಚಿಸುವ ಅಥವಾ ಕನಸು ಕಾಣುವ ವಿಷಯವು ಸ್ವಾಭಾವಿಕ, ಅದು ಹಾನಿಕರವೂ ಅಲ್ಲ ಎಂದು ಅನೇಕ ಪರಿಣತರು ಹೇಳುತ್ತಾರೆ. ಅಂಥ ವಿಚಾರಗಳನ್ನು ಕೇವಲ ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುವುದರಿಂದ ಹಾನಿಯೇ ಇಲ್ಲವೋ? ಅವನ್ನು ಕಾರ್ಯತಃ ಮಾಡಿದರೆ ಮಾತ್ರ ಹಾನಿಯೋ?
ಲೈಂಗಿಕ ಭ್ರಮೆಗಳು ಮೂಲತಃ ಒಬ್ಬನ ಸ್ವಂತ ಸುಖದಲ್ಲಿ ಮಾತ್ರ ಕೇಂದ್ರೀಕೃತವಾಗಿರುತ್ತವೆ. ಅಂಥ ಸ್ವಾರ್ಥಚಿಂತನೆಯು ವಿವಾಹಿತರಿಗೆ ಬೈಬಲ್ ಕೊಡುವ ಬುದ್ಧಿವಾದಕ್ಕೆ ವಿರುದ್ಧವಾಗಿದೆ. ಲೈಂಗಿಕ ಸಂಬಂಧಗಳ ಕುರಿತು ದೇವರ ವಾಕ್ಯ ಹೇಳುವುದು: “ಹೆಂಡತಿಗೆ ತನ್ನ ಸ್ವಂತ ದೇಹದ ಮೇಲೆ ಅಧಿಕಾರವಿಲ್ಲ, ಆದರೆ ಅವಳ ಗಂಡನಿಗಿದೆ; ಅದೇ ರೀತಿಯಲ್ಲಿ ಗಂಡನಿಗೆ ತನ್ನ ಸ್ವಂತ ದೇಹದ ಮೇಲೆ ಅಧಿಕಾರವಿಲ್ಲ, ಆದರೆ ಅವನ ಹೆಂಡತಿಗಿದೆ.” (1 ಕೊರಿಂಥ 7:4) ಯಾರು ಈ ಬೈಬಲ್ ಬುದ್ಧಿವಾದವನ್ನು ಪಾಲಿಸುತ್ತಾರೋ ಅವರು ಭ್ರಮೆಯಿಂದ ಪ್ರೇರಿತವಾದ ಕಾಮಾಸಕ್ತಿ ಮತ್ತು ಸ್ವಾರ್ಥಾಭಿಲಾಷೆ ಪೂರೈಸಿಕೊಳ್ಳುವುದನ್ನು ತೊರೆಯುತ್ತಾರೆ. ಇದರ ಫಲಿತಾಂಶವಾಗಿ ಗಂಡಹೆಂಡತಿ ಇಬ್ಬರೂ ಹೆಚ್ಚಿನ ಸಂತೋಷವನ್ನು ಅನುಭವಿಸುವರು.—ಅಪೊಸ್ತಲರ ಕಾರ್ಯಗಳು 20:35; ಫಿಲಿಪ್ಪಿ 2:4.
ವಿವಾಹದ ಹೊರಗಿನ ಲೈಂಗಿಕ ಸಂಬಂಧದ ಕುರಿತ ಭ್ರಮೆಗಳಲ್ಲಿ ಆ ಕೃತ್ಯವೆಸಗುವುದನ್ನು ಮನಸ್ಸಿನಲ್ಲಿ ಪದೇ ಪದೇ ಯೋಚಿಸುತ್ತಾ ಇರುವುದೂ ಸೇರಿರುತ್ತದೆ. ಆದರೆ ಅದನ್ನು ಕಾರ್ಯತಃ ಮಾಡುವಲ್ಲಿ ಏನಾಗಬಹುದು? ಇನ್ನೊಬ್ಬ ಸಂಗಾತಿಗೆ ಬಹಳವಾಗಿ ಭಾವಾನಾತ್ಮಕ ಬೇನೆಯುಂಟಾಗುವುದು ನಿಶ್ಚಯ. ಲೈಂಗಿಕ ಭ್ರಮೆಗಳಿಂದಾಗಿ ಒಬ್ಬನು ಕಾರ್ಯತಃ ವ್ಯಭಿಚಾರಕ್ಕಿಳಿಯಬಲ್ಲನೋ? ಖಂಡಿತ ಹೌದು. ಯೋಚನೆ ಮತ್ತು ಕ್ರಿಯೆಯ ಮಧ್ಯೆ ಇರುವ ಸಂಬಂಧವನ್ನು ಬೈಬಲ್ ಹೀಗೆ ತಿಳಿಸುತ್ತದೆ: “ಪ್ರತಿಯೊಬ್ಬನು ತನ್ನ ಸ್ವಂತ ಆಶೆಯಿಂದ ಸೆಳೆಯಲ್ಪಟ್ಟು ಮರುಳುಗೊಳಿಸಲ್ಪಟ್ಟವನಾಗಿ ಪರೀಕ್ಷಿಸಲ್ಪಡುತ್ತಾನೆ. ಬಳಿಕ ಆಶೆಯು ಬಸುರಾದಾಗ ಪಾಪವನ್ನು ಹೆರುತ್ತದೆ.”—ಯಾಕೋಬ 1:14, 15.
ಯೇಸು ಹೇಳಿದ್ದು: “ಒಬ್ಬ ಸ್ತ್ರೀಯನ್ನು ಕಾಮೋದ್ರೇಕಭಾವದಿಂದ ನೋಡುತ್ತಾ ಇರುವ ಪ್ರತಿಯೊಬ್ಬನು ಈಗಾಗಲೇ ತನ್ನ ಹೃದಯದಲ್ಲಿ ಅವಳೊಂದಿಗೆ ವ್ಯಭಿಚಾರ ಮಾಡಿದವನಾಗಿದ್ದಾನೆ.” (ಮತ್ತಾಯ 5:28) ವ್ಯಭಿಚಾರಕ್ಕೆ ನಡೆಸುವ ಭ್ರಮೆಗಳನ್ನು ಮನಸ್ಸಿನಿಂದ ತೆಗೆದುಹಾಕುವ ಮೂಲಕ ನೀವು ನಿಮ್ಮ ‘ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೊಳ್ಳುವಿರಿ’ ಮತ್ತು ನಿಮ್ಮ ವಿವಾಹಬಂಧವನ್ನು ಸಂರಕ್ಷಿಸುವಿರಿ.—ಜ್ಞಾನೋಕ್ತಿ 4:23.
ಭಾವಾನಾತ್ಮಕ ನಿಷ್ಠೆ ನಿಮ್ಮ ಸಂಗಾತಿಗೆ ಮಾತ್ರ
ವೈವಾಹಿಕ ಜೀವನದಲ್ಲಿ ಯಶಸ್ಸು ಹೊಂದಲು ನಿಮ್ಮ ಸಂಗಾತಿಗೆ ಸಂಪೂರ್ಣ ನಿಷ್ಠೆ ತೋರಿಸುವುದು ಅಗತ್ಯ. (ಪರಮ ಗೀತ 8:6; ) ಇದರ ಅರ್ಥವೇನು? ವಿವಾಹದ ಹೊರಗೆ ನಿಮಗೆ ಬೇರೆ ಸ್ತ್ರೀಯರೂ ಪುರುಷರೂ ಸ್ನೇಹಿತರಾಗಿರುವುದು ಸ್ವಾಭಾವಿಕವಾದರೂ ನಿಮ್ಮ ಸಮಯ, ಗಮನ ಮತ್ತು ಭಾವಾನಾತ್ಮಕ ಬೆಂಬಲವನ್ನು ಅಧಿಕವಾಗಿ ಕೇಳಿಕೊಳ್ಳುವ ಹಕ್ಕು ನಿಮ್ಮ ವಿವಾಹ ಸಂಗಾತಿಗೆ ಮಾತ್ರ ಇದೆ. ಅವರಿಗೆ ನ್ಯಾಯವಾಗಿ ಸಲ್ಲತಕ್ಕದ್ದನ್ನು ನೀವು ಬೇರೆ ಯಾರಿಗಾದರೂ ಕೊಡುವುದಾದರೆ ಅದು ಒಂದು ರೀತಿಯ “ದಾಂಪತ್ಯದ್ರೋಹ.” ಅದರಲ್ಲಿ ಲೈಂಗಿಕ ಸಂಭೋಗವು ಕೂಡಿರದಿದ್ದರೂ ಅದು ದ್ರೋಹವೇ ಸರಿ. ಜ್ಞಾನೋಕ್ತಿ 5:15-18 *
ಇಂಥ ಅಯೋಗ್ಯ ಸಂಬಂಧವೊಂದು ಬೆಳೆಯುವುದು ಹೇಗೆ? ಮೊದಮೊದಲು ಪರಸ್ತ್ರೀ ಅಥವಾ ಪರಪುರುಷ ನಿಮ್ಮ ಸಂಗಾತಿಗಿಂತ ಹೆಚ್ಚು ಆಕರ್ಷಕರಾಗಿ ಅಥವಾ ದಯಾಪರರಾಗಿ ಕಂಡುಬಂದಾರು. ಅವರೊಂದಿಗೆ ಕೆಲಸದ ಸ್ಥಳದಲ್ಲಿ ಅಥವಾ ವಿನೋದ ವಿಹಾರಗಳಲ್ಲಿ ಸಮಯ ಕಳೆಯುವುದು ನಿಮ್ಮ ವೈವಾಹಿಕ ಸಮಸ್ಯೆ ಅಥವಾ ವಿರಸಗಳಂಥ ನಿಮ್ಮ ವೈಯಕ್ತಿಕ ವಿಷಯಗಳನ್ನು ಚರ್ಚಿಸುವಂತೆ ಮಾಡೀತು. ಭಾವನಾತ್ಮಕ ಬೆಂಬಲಕ್ಕಾಗಿ ನೀವು ಹೆಚ್ಚೆಚ್ಚಾಗಿ ಆ ವ್ಯಕ್ತಿಯ ಮೇಲೆ ಆತುಕೊಳ್ಳುವಂತೆಯೂ ಮಾಡಬಹುದು. ಅವರೊಂದಿಗೆ ಮುಖಾಮುಖಿಯಾಗಿ, ಫೋನ್ ಅಥವಾ ಆನ್‌ಲೈನ್ ಮೂಲಕ ಮಾಡುವ ಸಂವಾದವು ನಿಮ್ಮ ವಿವಾಹ ಸಂಗಾತಿಗೆ ವಿಶ್ವಾಸಘಾತಕವಾಗಬಲ್ಲದು. ನಿರ್ದಿಷ್ಟ ವಿಷಯಗಳನ್ನು ನೀವಿಬ್ಬರೇ ಒಟ್ಟುಗೂಡಿ ಚರ್ಚಿಸಬೇಕು ಮತ್ತು ನಿಮ್ಮ “ಗುಟ್ಟನ್ನೂ” ನೀವು ನಿಮ್ಮಲ್ಲೇ ಇಟ್ಟುಕೊಳ್ಳಬೇಕು.—ಜ್ಞಾನೋಕ್ತಿ 25:9.
ಪ್ರಣಯ ಭಾವನೆಗಳು ನಿಮ್ಮಲ್ಲಿಲ್ಲ ಎಂದು ಸಮರ್ಥಿಸಿಕೊಳ್ಳಬೇಡಿ. ವಾಸ್ತವದಲ್ಲಿ ಅವು ಇರಲೂಬಹುದು! “ಹೃದಯವು ಎಲ್ಲಕ್ಕಿಂತಲೂ ವಂಚಕ” ಎಂದು ಯೆರೆಮೀಯ 17:9 ಹೇಳುತ್ತದೆ. ಒಂದುವೇಳೆ ನಿಮಗೆ ಬೇರೆ ಗಂಡು/ಹೆಣ್ಣಿನೊಂದಿಗೆ ಆಪ್ತ ಸ್ನೇಹವಿರುವಲ್ಲಿ ಹೀಗೆ ಕೇಳಿಕೊಳ್ಳಿ: ‘ಆ ಸಂಬಂಧದ ಕುರಿತು ಇತರರು ಪ್ರಶ್ನಿಸುವಲ್ಲಿ ನಾನು ಅದನ್ನು ಗುಟ್ಟಾಗಿಡಲು ಪ್ರಯತ್ನಿಸಿ ನನ್ನನ್ನು ಸಮರ್ಥಿಸಿಕೊಳ್ಳುತ್ತೇನೋ? ನಮ್ಮಿಬ್ಬರ ಸಂಭಾಷಣೆಯನ್ನು ನನ್ನ ಸಂಗಾತಿ ಕೇಳಿಬಿಟ್ಟಲ್ಲಿ ನನಗೆ ಕಸಿವಿಸಿಯಾಗುತ್ತದೋ? ನನ್ನ ಸಂಗಾತಿ ಬೇರೆಯವರೊಂದಿಗೆ ಅಂಥಾದ್ದೇ ಸಂಬಂಧವನ್ನು ಇಟ್ಟುಕೊಂಡಲ್ಲಿ ನನಗೆ ಹೇಗೆನಿಸುವುದು?’—ಮತ್ತಾಯ 7:12.
ಒಂದು ಅಯೋಗ್ಯ ಸಂಬಂಧವು ದಾಂಪತ್ಯವನ್ನು ನುಚ್ಚುನೂರಾಗಿಸಬಹುದು. ಏಕೆಂದರೆ ಭಾವನಾತ್ಮಕ ಆಪ್ತತೆಯು ಕ್ರಮೇಣ ಲೈಂಗಿಕ ಸಂಬಂಧಕ್ಕೂ ನಡೆಸುತ್ತದೆ. ಯೇಸು ಎಚ್ಚರಿಸಿದ ಪ್ರಕಾರ “ಹೃದಯದಿಂದ . . . ವ್ಯಭಿಚಾರ, ಹಾದರ . . . ಹೊರಬರುತ್ತವೆ.” (ಮತ್ತಾಯ 15:19) ಒಂದುವೇಳೆ ವ್ಯಭಿಚಾರ ಮಾಡದಿದ್ದರೂ ವಿಶ್ವಾಸಘಾತದಿಂದಾಗುವ ಹಾನಿಯನ್ನು ಸರಿಪಡಿಸಲು ತೀರಾ ಕಷ್ಟಕರ. ಕ್ಯಾರನ್ * ಎಂಬ ಪತ್ನಿಯೊಬ್ಬಳು ಹೇಳಿದ್ದು: “ನನ್ನ ಪತಿ ಮಾರ್ಕ್ ಇನ್ನೊಬ್ಬಳೊಂದಿಗೆ ದಿನದಲ್ಲಿ ಅನೇಕಾವರ್ತಿ ಕದ್ದುಮುಚ್ಚಿ ಮಾತಾಡುವುದು ನನಗೆ ಗೊತ್ತಾದಾಗ ನನ್ನ ಎದೆಯೊಡೆದು ಹೋಯಿತು. ಅವರ ಮಧ್ಯೆ ಲೈಂಗಿಕ ಸಂಬಂಧ ಇರಲಿಲ್ಲ ಎಂಬುದನ್ನು ನಂಬಲಸಾಧ್ಯ. ಇನ್ನು ಮುಂದೆ ಅವರ ಮೇಲೆ ಭರವಸೆಯಿಡುವುದು ಕಷ್ಟ ಎಂದೆಣಿಸುತ್ತದೆ.”
ಬೇರೆ ಗಂಡು/ಹೆಣ್ಣಿನೊಂದಿಗಿನ ಸ್ನೇಹಕ್ಕೆ ಒಂದು ಸೂಕ್ತ ಎಲ್ಲೆಯಿರಲಿ. ಅಯೋಗ್ಯ ಭಾವನೆಗಳು ಅಥವಾ ಕೆಟ್ಟ ಹೇತುಗಳಿದ್ದಲ್ಲಿ ಅವನ್ನು ನಿರ್ಲಕ್ಷಿಸಬೇಡಿ. ಹೊರಗಿನ ಸ್ನೇಹ ಸಂಬಂಧವು ನಿಮ್ಮ ವಿವಾಹಕ್ಕೆ ಕುತ್ತುತರುವಂತೆ ಕಂಡಬಂದಲ್ಲಿ ಅದನ್ನು ಸೀಮಿತಗೊಳಿಸಲು ಅಥವಾ ಕಡಿದುಹಾಕಲು ತ್ವರಿತವಾಗಿ ಕ್ರಿಯೆಗೈಯಿರಿ. ಬೈಬಲ್ ಹೇಳುವುದು: “ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು; ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು.”—ಜ್ಞಾನೋಕ್ತಿ 22:3.
“ಒಂದೇ ಶರೀರ” ಬಂಧವನ್ನು ಕಾಪಾಡಿರಿ
ಮದುವೆಯು ಗಂಡು-ಹೆಣ್ಣು ಇಬ್ಬರ ನಡುವಿನ ಅತ್ಯಾಪ್ತ ಸಂಬಂಧ ಆಗಿರಬೇಕೆಂದೇ ನಿರ್ಮಾಣಿಕನ ಉದ್ದೇಶವಾಗಿತ್ತು. ಗಂಡ ಮತ್ತು ಹೆಂಡತಿ “ಒಂದೇ ಶರೀರವಾಗಿರುವರು” ಎಂದು ದೇವರು ಹೇಳಿದನು. (ಆದಿಕಾಂಡ 2:24) ಒಂದೇ-ಶರೀರ ಬಂಧವು ಲೈಂಗಿಕ ಆಪ್ತತೆಗಿಂತ ಹೆಚ್ಚಿನದ್ದು. ಅದರಲ್ಲಿ ಅತಿ ಹತ್ತಿರದ ಭಾವನಾತ್ಮಕ ಬಂಧವೂ ಒಳಗೂಡಿದೆ. ಅದನ್ನು ನಿಸ್ವಾರ್ಥತೆ, ಭರವಸೆ, ಪರಸ್ಪರ ಗೌರವದಿಂದ ಬಲಪಡಿಸಬೇಕು. (ಜ್ಞಾನೋಕ್ತಿ 31:11; ಮಲಾಕಿಯ 2:14, 15; ಎಫೆಸ 5:28, 33) ಈ ಮೂಲತತ್ತ್ವಗಳನ್ನು ಅನ್ವಯಿಸುವುದಾದರೆ, ಮಾನಸಿಕ ಮತ್ತು ಭಾವನಾತ್ಮಕ ದ್ರೋಹದಿಂದ ಆಗುವ ಹಾನಿಯಿಂದ ನಿಮ್ಮ ವೈವಾಹಿಕ ಜೀವನವನ್ನು ಸಂರಕ್ಷಿಸುವಿರಿ. (g 4/09)
[ಪಾದಟಿಪ್ಪಣಿಗಳು]
^ ಆದರೆ ವಿವಾಹ ವಿಚ್ಛೇದನೆಗೆ ಬೈಬಲ್ ಕೊಡುವ ಒಂದೇ ಒಂದು ಕಾರಣ ವಿವಾಹಬಾಹಿರ ಲೈಂಗಿಕ ಸಂಭೋಗ ಮಾತ್ರ.—ಮತ್ತಾಯ 19:9.
^ ಹೆಸರು ಬದಲಾಗಿದೆ.
ನೀವೇನು ಹೇಳುತ್ತೀರಿ?
◼ ಲೈಂಗಿಕ ಭ್ರಮೆಗಳು ಅನೈತಿಕ ಸಂಬಂಧಕ್ಕೆ ನಡಿಸಬಲ್ಲವೋ?—ಯಾಕೋಬ 1:14, 15.
◼ ಪರಸ್ತ್ರೀ/ಪುರುಷನೊಂದಿಗಿನ ಆಪ್ತಸ್ನೇಹ ನಿಮ್ಮ ವೈವಾಹಿಕ ಜೀವನವನ್ನು ಕೆಡಿಸಬಲ್ಲದೊ?—ಯೆರೆಮೀಯ 17:9; ಮತ್ತಾಯ 15:19.
◼ ವಿವಾಹ ಬಂಧವನ್ನು ನೀವು ಹೇಗೆ ಬಲಪಡಿಸಬಹುದು?—1 ಕೊರಿಂಥ 7:4; 13:8; ಎಫೆಸ 5:28, 33.
[ಪುಟ 19ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಒಬ್ಬ ಸ್ತ್ರೀಯನ್ನು ಕಾಮೋದ್ರೇಕಭಾವದಿಂದ ನೋಡುತ್ತಾ ಇರುವ ಪ್ರತಿಯೊಬ್ಬನು ಈಗಾಗಲೇ ತನ್ನ ಹೃದಯದಲ್ಲಿ ಅವಳೊಂದಿಗೆ ವ್ಯಭಿಚಾರ ಮಾಡಿದವನಾಗಿದ್ದಾನೆ.”—ಮತ್ತಾಯ 5:28