ದೇವರ ಸೇವೆಯ ಧನ್ಯತೆ
ದೇವರ ಸೇವೆಯ ಧನ್ಯತೆ
ಪೈರ್ ವಾರೂ ಅವರು ಹೇಳಿದಂತೆ
“ಬಾಂಸೂರ್!” ಈ ಫ್ರೆಂಚ್ ವಂದನೆಯನ್ನು ನಾನು ನನ್ನ ಜೀವಮಾನವಿಡೀ ಬಳಸಿದ್ದೇನೆ. ಆದರೆ ಈ ವಂದನೆ ಹೇಳಿದ್ದಕ್ಕಾಗಿಯೇ ನಾನು 1975ರಲ್ಲಿ ಬಂದಿಯಾದೆ. ಅದು ಸಂಭವಿಸಿದ್ದು ಹೇಗೆ? ಅಂದಿನಿಂದ ಜೀವನದಲ್ಲಿ ಏನೆಲ್ಲಾ ನಡೆಯಿತು ಎಂದು ನಾನು ಹೇಳಲೋ?
ಮಧ್ಯ ಬೆನಿನ್‌ನ ಸ್ಯಾವೇ ಉಪನಗರದ ಮೆಲೇಟೆ ಎಂಬಲ್ಲಿ ಜನವರಿ 1, 1944ರಲ್ಲಿ ನಾನು ಜನಿಸಿದೆ. * ನನ್ನ ಹೆತ್ತವರು ನನಗೆ ಆಬೀಓಲಾ ಎಂಬ ಯೊರಬದ ಸಾಂಪ್ರದಾಯಿಕ ಹೆಸರಿನ್ನಿಟ್ಟರು. ನಾನು ಚಿಕ್ಕವನಿದ್ದಾಗಲೇ ಅದನ್ನು ಬದಲಾಯಿಸಿ ಪೈರ್ ಎಂಬ ಹೆಸರನ್ನಿಟ್ಟುಕೊಂಡೆ. ಏಕೆಂದರೆ ಅದು ಹೆಚ್ಚು ನವೀನ ಹಾಗೂ ಜನಪ್ರಿಯ ಹೆಸರೆಂದು ನಾನು ನೆನೆಸಿದೆ.
ನಮ್ಮ ಊರಿನವರು ಎಲ್ಲಾ ಯುವಜನರಿಗೆ ಒಂದೊಂದು ಅಡ್ಡಹೆಸರನ್ನು ಇಡುತ್ತಿದ್ದರು. ನನ್ನನ್ನು ಅವರು ಕರೆಯುತ್ತಿದ್ದದ್ದು ಪಾದ್ರಿ ಎಂದು. ಏಕೆಂದರೆ ಹುಟ್ಟಿದಾಗ ನನ್ನ ಚಹರೆ ಸ್ಥಳಿಕ ಪಾದ್ರಿಯನ್ನೇ ಹೋಲುತ್ತಿತ್ತು. ಆದರೆ ನನಗೆ ಮತಬೋಧೆ (ಕ್ಯಾಟಿಕಿಸೆಮ್) ಕ್ಲಾಸಿಗಿಂತ ಫುಟ್‌ಬಾಲ್ ಆಡುವುದೇ ಅಚ್ಚುಮೆಚ್ಚಿನದ್ದಾಗಿತ್ತು.
1959ರಲ್ಲಿ ನಾನು ನನ್ನ ವಿದ್ಯಾಭ್ಯಾಸ ಮುಂದರಿಸಲು ಸಾಕೇಟೇ ಎಂಬ ನಗರಕ್ಕೆ ಸ್ಥಳಾಂತರಿಸಿದೆ. ಅಲ್ಲಿ ನಾನು ನನ್ನ ದೊಡ್ಡಪ್ಪನ ಮಗನಾದ ಸೀಮಾನ್ ಮನೆಯಲ್ಲಿ ಉಳಿದುಕೊಂಡೆ. ಅವನೊಬ್ಬ ಉಪಾಧ್ಯಾಯನಾಗಿದ್ದು, ಇತ್ತೀಚೆಗೆ ಯೆಹೋವನ ಸಾಕ್ಷಿಗಳೊಂದಿಗೆ ಅಧ್ಯಯನವನ್ನು ಆರಂಭಿಸಿದ್ದನು. ಅವರೊಂದಿಗೆ ಕೂಡಿ ಅಧ್ಯಯನ ನಡೆಸಲು ನನಗೆ ಮೊದಮೊದಲು ಇಷ್ಟವಿರಲಿಲ್ಲ. ಆದರೆ ಸೀಮಾನ್‌ನ ತಮ್ಮ ಮೀಶೆಲ್‌ನನ್ನು ಅಧ್ಯಯನಕ್ಕೆ ಬರುತ್ತಿಯಾ ಎಂದು ಕೇಳಿದಾಗ ಅವನು ಒಪ್ಪಿದ್ದರಿಂದ ನಾನೂ ಒಪ್ಪಿದೆ. ದೇವರ ಹೆಸರು ಯೆಹೋವ ಎಂದು ನಾನು ಮೊತ್ತಮೊದಲು ಕಲಿತದ್ದು ಆಗಲೇ.
ಒಂದು ಭಾನುವಾರ ಸೀಮಾನ್, ಮೀಶೆಲ್ ಮತ್ತು ನಾನು ಚರ್ಚಿಗೆ ಹೋಗದೆ ಯೆಹೋವನ ಸಾಕ್ಷಿಗಳ ಕೂಟಕ್ಕೆ ಹಾಜರಾಗಲು ನಿರ್ಣಯಿಸಿದೆವು. ಅಲ್ಲಿದ್ದದ್ದು ಇಬ್ಬರು ಸಾಕ್ಷಿಗಳು ಮತ್ತು ನಾವು ಮೂವರು. ಕೇವಲ ಐದು ಮಂದಿಯ ಚಿಕ್ಕ ಗುಂಪನ್ನು ಕಂಡು ನಮಗಾದ ನಿರಾಶೆ ಅಷ್ಟಿಷ್ಟಲ್ಲ. ಆದರೂ ನಾವು ಅಲ್ಲಿ ಕಿವಿಗೊಟ್ಟ ವಿಷಯದಲ್ಲಿ ಬೈಬಲ್ ಸತ್ಯದ ನಾದವಿತ್ತು. ಆದ್ದರಿಂದ ನಾವು ಅಧ್ಯಯನವನ್ನು ಮುಂದರಿಸಿದೆವು. ದೇವರಿಗೆ ತನ್ನ ಸಮರ್ಪಣೆಯ ಸೂಚಕವಾಗಿ ಮೊದಲು ದೀಕ್ಷಾಸ್ನಾನ ಪಡೆದವನು ಮೀಶೆಲ್. ಇಂದು ಅವನು ಪಯನೀಯರ್ ಅಂದರೆ ಯೆಹೋವನ ಸಾಕ್ಷಿಗಳಲ್ಲಿ ಪೂರ್ಣ ಸಮಯ ದೇವರ ಸೇವೆ ಮಾಡುತ್ತಿದ್ದಾನೆ.
ಉತ್ತರದಲ್ಲಿದ್ದ ಕೋಕಾರೋ ನಗರಕ್ಕೆ ಸೀಮಾನ್ ಸ್ಥಳಾಂತರಿಸಿದಾಗ ನಾನೂ ಹೋದೆ. ಹ್ವಾನ್ಸೂಗಾ ಹಳ್ಳಿಯಲ್ಲಿ ಒಂದು ಸಮ್ಮೇಳನವು ಜರಗಲಿತ್ತು. ಸೀಮಾನ್ ಟ್ಯಾಕ್ಸಿಯಲ್ಲಿ ಹೋದ. ನಾನು 220 ಕಿಲೋಮೀಟರ್ ದೂರ ಸೈಕಲ್ ತುಳಿದೇ ಸಮ್ಮೇಳನಕ್ಕೆ ಹಾಜರಾದೆ. ಅಲ್ಲಿ ನಾವಿಬ್ಬರೂ ಸೆಪ್ಟೆಂಬರ್ 15, 1961ರಲ್ಲಿ ದೀಕ್ಷಾಸ್ನಾನ ಪಡೆದುಕೊಂಡೆವು.
ಪೂರ್ಣ ಸಮಯದ ಸೇವಾ ಸವಾಲು
ಚಿತ್ರಗಳನ್ನು ಬಿಡಿಸಿ ಮಾರಿದೆ, ವ್ಯವಸಾಯ ಮಾಡಿದೆ ಈ ಮೂಲಕ ನನ್ನ ಜೀವನೋಪಾಯ ನಡೆಯುತ್ತಿತ್ತು. ಒಮ್ಮೆ ಸಂಚರಣ ಮೇಲ್ವಿಚಾರಕರಾದ ಫೀಲೀವ್ ಸಾನೂ ನಮ್ಮ ಸಭೆಯನ್ನು ಸಂದರ್ಶಿಸಿದಾಗ ‘ಪೂರ್ಣ ಸಮಯದ ಪಯನೀಯರ್ ಸೇವೆಯ ಬಗ್ಗೆ ನೀನೆಂದಾದರೂ ಆಲೋಚಿಸಿದ್ದಿಯಾ’ ಎಂದು ನನ್ನನ್ನು ಕೇಳಿದರು. ಆ ಕುರಿತು ನಾನು ಮತ್ತು ನನ್ನ ಫ್ರೆಂಡ್ ಏಮಾನ್‌ವ್ಯೆಲ್ ಫಾಟುನ್‌ಬೀ ಒಟ್ಟಿಗೆ ಚರ್ಚಿಸಿದ ಬಳಿಕ ಇಬ್ಬರೂ ಫೆಬ್ರವರಿ 1966ರಲ್ಲಿ ಪೂರ್ಣ ಸಮಯದ ದೇವರ ಸೇವೆಯನ್ನು ಆರಂಭಿಸಿದೆವು. ಸಮಯಾನಂತರ ನಾನು ಸಂಚರಣ ಮೇಲ್ವಿಚಾರಕನಾಗಿ ಫಾನ್, ಗನ್, ಯೊರಬ ಮತ್ತು ಫ್ರೆಂಚ್ ಭಾಷೆಗಳ ಸಭೆಗಳನ್ನು ಸಂದರ್ಶಿಸತೊಡಗಿದೆ.
ಕೊನೆಗೆ, ಗುಣರೂಪಿನ ಹಾಗೂ ನನ್ನಂತೆ ಸರಳ ಜೀವಿಯಾಗಿದ್ದ
ಸ್ಯೂಲ್ಯೆನ್ ಎಂಬ ಯುವ ಕ್ರೈಸ್ತ ಸಹೋದರಿಯ ಪರಿಚಯ ನನಗಾಯಿತು. ಅವಳು ಆಗಸ್ಟ್ 12, 1971ರಲ್ಲಿ ನನ್ನ ಪತ್ನಿಯಾಗಿ ನನ್ನೊಂದಿಗೆ ಸಭೆಗಳ ಸಂದರ್ಶನದಲ್ಲಿ ನೆರವಾದಳು. ಆಗಸ್ಟ್ 18, 1972ರಲ್ಲಿ ನಮ್ಮ ಮಗ ಬೋಲಾ ಜನಿಸಿದ. ಸಭೆಗಳನ್ನು ಸಂದರ್ಶಿಸುತ್ತಿದ್ದಾಗ ನಾವು ಸೈಕಲ್‌ನಲ್ಲಿ ಅಂದರೆ ಸ್ಯೂಲ್ಯೆನ್ ನನ್ನ ಹಿಂದೆ ಮತ್ತು ಬೋಲಾ ಅವಳ ಬೆನ್ನ ಹಿಂದೆ ಕೂತು ಪ್ರಯಾಣಿಸುತ್ತಿದ್ದೆವು. ಸ್ಥಳಿಕ ಸಾಕ್ಷಿಯೊಬ್ಬನು ಸಾಮಾನ್ಯವಾಗಿ ನಮ್ಮ ಗಂಟುಮೂಟೆಯನ್ನು ತನ್ನ ಸೈಕಲ್‌ನಲ್ಲಿ ಕಟ್ಟಿ ತರುತ್ತಿದ್ದನು. ನಾವು ಈ ರೀತಿಯಾಗಿ ನಾಲ್ಕು ವರ್ಷಗಳ ತನಕ ಸಭೆಗಳನ್ನು ಸಂದರ್ಶಿಸಿದೆವು.ಒಮ್ಮೆ ಸ್ಯೂಲ್ಯೆನ್ ಕಾಯಿಲೆ ಬಿದ್ದು, ರಾತ್ರಿಯಿಡೀ ನೋವಿನಿಂದ ನರಳಿದಳು. ಮರುದಿನ ನಾನು ಸಹಾಯಕ್ಕಾಗಿ ಹುಡುಕುತ್ತಾ ದಾರಿನಡೆಯುತ್ತಿದ್ದಾಗ ತಕ್ಷಣ ಟ್ಯಾಕ್ಸಿಯೊಂದು ಗೋಚರಿಸಿತು. ಆ ಕ್ಷೇತ್ರದಲ್ಲಿ ಟ್ಯಾಕ್ಸಿಯೇ ಅಪರೂಪದ ಸಂಗತಿ. ಅದೂ ಖಾಲಿ ಟ್ಯಾಕ್ಸಿ! ನಾನು ಡ್ರೈವರಿಗೆ ಸನ್ನಿವೇಶವನ್ನು ವಿವರಿಸಿ 25 ಕಿ. ಮೀ. ದೂರವಿದ್ದ ಪೋರ್ಟೋ ನೋವೋ ಪಟ್ಟಣಕ್ಕೆ ನಮ್ಮನ್ನು ಒಯ್ಯುವನೋ ಎಂದು ಕೇಳಿದಾಗ ಅವ ಕೂಡಲೇ ಒಪ್ಪಿದ. ತಲುಪಿದ ಮೇಲೆ ನಾನು ಚಾರ್ಜ್ ಎಷ್ಟೆಂದು ಕೇಳಿದಾಗ ಅವನು ನಗುತ್ತಾ ಅಂದದ್ದು: “ನೀವೇನೂ ಕೊಡಬೇಕಾಗಿಲ್ಲ, ಇದು ನನ್ನ ಗಿಫ್ಟ್.”
ಸಾಕ್ಷಿಯೊಬ್ಬರ ಮನೆಯಲ್ಲಿ ಎರಡು ವಾರಗಳ ತನಕ ಸ್ಯೂಲ್ಯೆನ್ ಉಳಿದಳು. ಡಾಕ್ಟರ್ ಪ್ರತಿದಿನ ಬಂದು ಹೋಗುತ್ತಿದ್ದರು. ಬೇಕಾದ ಔಷಧಗಳನ್ನು ತಂದುಕೊಡುತ್ತಿದ್ದರು. ಸ್ಯೂಲ್ಯೆನ್‌ಳ ಕಡೇ ತಪಾಸಣೆಯಲ್ಲಿ ನಾನು ಡಾಕ್ಟರ್ ಹತ್ತಿರ ಬಿಲ್ ಕೇಳಿದೆ. ಅವರು “ಏನೂ ಕೊಡುವುದು ಬೇಡ, ಪರ್ವಾಗಿಲ್ಲ ಇರಲಿ” ಎಂದಾಗ ನನಗೆ ನಂಬಲಿಕ್ಕೇ ಆಗಲಿಲ್ಲ.
ಹಠಾತ್ತಾಗಿ ಬದಲಾವಣೆ
1975ರಲ್ಲಿ ಡಹೋಮಿ ದೇಶವು ಕಮ್ಯೂನಿಸ್ಟ್ ಸರ್ಕಾರವನ್ನು ಜಾರಿಗೆ ತಂದಿತು. ದೇಶದ ಹೆಸರು ಪೀಪಲ್ಸ್ ರಿಪಬ್ಲಿಕ್ ಆಫ್ ಬೆನಿನ್ ಎಂದಾಯಿತು. ದೈನಂದಿನ ಜೀವನವು ಸಹ ಬದಲಾಯಿತು. “ಪೂರ್ ಲಾ ರೆವಲ್ಯೂಸ್ಯೊನ್?” (ಕ್ರಾಂತಿಗೆ ಸಿದ್ಧರೋ?) ಎಂಬ ಹೊಸ ರೀತಿಯಲ್ಲಿ ವಂದಿಸುವಂತೆ ನಿರ್ಬಂಧಿಸಲ್ಪಟ್ಟೆವು. “ಪ್ರಿ!” (ಹೌದು, ನಾನು ಸಿದ್ಧ!) ಎಂದು ಜನರು ಉತ್ತರಿಸಬೇಕಿತ್ತು. ಆದರೆ ನಮ್ಮ ಬೈಬಲ್ ಶಿಕ್ಷಿತ ಮನಸ್ಸಾಕ್ಷಿಯ ಕಾರಣದಿಂದ ನಾವು ಅಂಥ ರಾಜಕೀಯ ಧ್ಯೇಯಮಂತ್ರಗಳನ್ನು ಹೇಳಲಿಲ್ಲ. ಇದರಿಂದಾಗಿ ತುಂಬಾ ವಿರೋಧ ಬಂತು.
1975ರ ಕೊನೆಯಲ್ಲಿ ಒಂದು ಭಾನುವಾರ ಸೆಂಟ್ ಮಿಷಲ್ ಎಂಬ ಸ್ಥಳದ ಬಳಿ ಮನೆ-ಮನೆಗೆ ಸಾರುವ ಕೆಲಸದಲ್ಲಿ ತೊಡಗಿದ್ದಾಗ ನನ್ನನ್ನು ಬಂದಿಸಲಾಯಿತು. ಆರಂಭದಲ್ಲಿ ತಿಳಿಸಿದಂತೆ, “ಪೂರ್ ಲಾ ರೆವಲ್ಯೂಸ್ಯೊನ್?” ಎಂದು ವಂದಿಸಿದ ವ್ಯಕ್ತಿಯೊಬ್ಬನಿಗೆ ನಾನು “ಬಾಂಸೂರ್!” ಎಂದು ಉತ್ತರಿಸಿದೆ. ಆ ಕಾರಣದಿಂದ ನನ್ನನ್ನು ಪೊಲೀಸ್ ಠಾಣೆಗೆ ಒಯ್ದು ಹೊಡೆದರು. ಸ್ವಲ್ಪ ಸಮಯದ ನಂತರ ಮೂವರು ಸ್ಥಳಿಕ ಯೆಹೋವನ ಸಾಕ್ಷಿಗಳು ನನ್ನನ್ನು ಬಿಡಿಸಿದರು.
ಈ ರೀತಿ ಬಂದಿಸಲ್ಪಟ್ಟ ಯೆಹೋವನ ಸಾಕ್ಷಿಗಳಲ್ಲಿ ನಾನು ಮೊದಲಿಗನು. ಸ್ವಲ್ಪದರಲ್ಲೇ ದೇಶದಾದ್ಯಂತ ಇನ್ನೂ ಅನೇಕರು ಬಂದಿಸಲ್ಪಟ್ಟರು. ಸರ್ಕಾರವು ರಾಜ್ಯ ಸಭಾಗೃಹಗಳನ್ನು ವಶಪಡಿಸಿಕೊಂಡಿತು. ಮಿಷನೆರಿಗಳನ್ನು ಗಡಿಪಾರುಮಾಡಿತು. ಬ್ರಾಂಚ್ ಆಫೀಸನ್ನು ಕೂಡ ಮುಚ್ಚಲಾಯಿತು. ಅನೇಕ ಸಾಕ್ಷಿಗಳು ದೇಶವನ್ನು ಬಿಟ್ಟು ಪಶ್ಚಿಮದ ಟೋಗೊ ಅಥವಾ ಪೂರ್ವದ ನೈಜಿರೀಯಕ್ಕೆ ಓಡಿಹೋಗಬೇಕಾಯಿತು.
ಪರಿವಾರ ವೃದ್ಧಿ ನೈಜಿರೀಯದಲ್ಲಿ
ನಮ್ಮ ಎರಡನೇ ಮಗ ಕೋಲಾ 1976ರ ಏಪ್ರಿಲ್ 25ರಂದು ಹುಟ್ಟಿದ. ಎರಡೇ ದಿನಗಳಲ್ಲಿ ಸರ್ಕಾರದ ಕಾಯಿದೆ ನಂ. 111 ಯೆಹೋವನ ಸಾಕ್ಷಿಗಳ ಕಾರ್ಯವನ್ನು ನಿಷೇಧಿಸಿತು. ನಾವು ನೈಜಿರೀಯಕ್ಕೆ ಹೊರಟೆವು. ಅಲ್ಲಿ ನಾವು ಹೋದ ರಾಜ್ಯ ಸಭಾಗೃಹವೊಂದು ನಿರಾಶ್ರಿತರಿಂದ ಕಿಕ್ಕಿರಿದಿತ್ತು. ಮರುದಿನ ನಮ್ಮನ್ನು ಪಕ್ಕದೂರಿನ ಸಭೆಗಳಿಗೆ ಕಳುಹಿಸಲು ಏರ್ಪಾಡುಗಳನ್ನು ಮಾಡಲಾಯಿತು. ನಿರಾಶ್ರಿತರ ಒಂದು ಗುಂಪು ಹಾಲ್‌ನಿಂದ ಹೊರಟುಹೋದಂತೆ ಇನ್ನೊಂದು ಗುಂಪು ಬಂದಿಳಿಯುತ್ತಿತ್ತು. ಹೊಸತಾಗಿ ಬಂದವರನ್ನು ಸಮೀಪದ ಸಭೆಗಳಿಗೆ ಟ್ರಕ್‌ಗಳ ಮೂಲಕ ಒಯ್ಯುತ್ತಿದ್ದರು.
ಬೆನಿನ್‌ನಿಂದ ಬಂದ ಎಲ್ಲಾ ನಿರಾಶ್ರಿತ ಸಾಕ್ಷಿಗಳನ್ನು ಸಂದರ್ಶಿಸುವಂತೆ ನೈಜಿರೀಯದ ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸು ನನ್ನನ್ನು ಕೇಳಿಕೊಂಡಿತು. ಅನಂತರ ನೈಜಿರೀಯದಲ್ಲಿ ಯೊರಬ ಭಾಷೆಯನ್ನಾಡುವ ಸಭೆಗಳನ್ನು ಸಂದರ್ಶಿಸುವಂತೆ ನನ್ನನ್ನು ಸಂಚರಣ ಮೇಲ್ವಿಚಾರಕನಾಗಿ ನೇಮಿಸಲಾಯಿತು. ತದನಂತರ ಗನ್ ಭಾಷೆಯನ್ನಾಡುವ ಸಭೆಗಳನ್ನೂ ನಾನು ಸಂದರ್ಶಿಸಿದೆ. ನಾವು ಮೋಟರ್‌ಬೈಕ್‌ನಲ್ಲಿ ಪ್ರಯಾಣಿಸಿದೆವು. ಬೋಲಾ ನನ್ನ ಮುಂದೆ, ನನ್ನ ಮತ್ತು ಸ್ಯೂಲ್ಯೆನ್ ಮಧ್ಯೆ ಕೋಲಾ ಇರುಕಿಕೊಂಡಿದ್ದ.
1979ರಲ್ಲಿ ನಮ್ಮ ಮಗಳು ಜಮೈಮ ಹುಟ್ಟಿದಳು. ಇದರಿಂದ ನಮಗೆ ಸಂಚರಣ ಸೇವೆಯನ್ನು ಮಾಡಲಾಗಲಿಲ್ಲ. ಸ್ಯೂಲ್ಯೆನ್‌ನ ತಂಗಿಯ ಹೆಸರು ಪೇಪೇ. ಅವಳು ಬೆನಿನ್‌ನಿಂದ ಬಂದು ನಮ್ಮೊಂದಿಗೆ ವಾಸಿಸಿದಳು. ನಮ್ಮ ಪರಿವಾರ ಹೀಗೆ ಬೆಳೆಯುತ್ತಾ ಬಂತು. 1983ರಲ್ಲಿ ಕಾಲೆಬ್ ಮತ್ತು 1987ರಲ್ಲಿ ಸೀಲಾಸ್ ಎಂಬ ಇನ್ನಿಬ್ಬರು ಗಂಡುಮಕ್ಕಳಾದರು. ಹೀಗೆ ನಮ್ಮ ಪರಿವಾರದ ಸಂಖ್ಯೆ ಎಂಟಕ್ಕೇರಿತು. ನಾನು, ಸ್ಯೂಲ್ಯೆನ್ ಒಳ್ಳೇ ಹೆತ್ತವರಾಗಲು ಬಯಸಿದೆವು. ಅದೇ ಸಮಯ ಸಾಧ್ಯವಾದಲ್ಲಿ ಪೂರ್ಣ ಸಮಯದ ಸೇವೆಯನ್ನು ಮುಂದುವರಿಸಲೂ ಬಯಸಿದೆವು. ಆದರೆ ಅದು ಹೇಗೆ ಸಾಧ್ಯವಿತ್ತು? ಒಂದು ಗದ್ದೆಯನ್ನು ಗುತ್ತಿಗೆಗೆ ತೆಗೆದುಕೊಂಡೆವು. ಅದರಲ್ಲಿ ಮರಗೆಣಸು, ಜೋಳ ಮತ್ತು ಕೆಸವುಗಡ್ಡೆಗಳನ್ನು ಬೆಳೆಸಿದೆವು. ಆ ಬಳಿಕ ಈಲೋಗ್ಬೋ-ಏರೇಮೀ ಎಂಬ ಹಳ್ಳಿಯಲ್ಲಿ ಒಂದು ಚಿಕ್ಕ ಮನೆಯನ್ನು ಕಟ್ಟಿದೆವು.
ಬೆಳಗ್ಗೆ ಮಕ್ಕಳನ್ನು ಶಾಲೆಗೆ ಕಳುಹಿಸಿದ ಮೇಲೆ ನಾನು ಮತ್ತು ಸ್ಯೂಲ್ಯೆನ್ ಸಾರುವ ಕೆಲಸವನ್ನು ಮಾಡುತ್ತಿದ್ದೆವು. ಒಟ್ಟಾಗಿ
ಊಟಮಾಡಲು ಸಮಯಕ್ಕೆ ಸರಿಯಾಗಿ ಯಾವಾಗಲೂ ಮನೆಗೆ ಬರುತ್ತಿದ್ದೆವು. ಊಟದ ಬಳಿಕ ಲಘುವಿಶ್ರಾಂತಿ ಪಡೆದು ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದೆವು. ಬೆಳೆಯನ್ನು ಸ್ಯೂಲ್ಯೆನ್ ಮತ್ತು ಪೇಪೇ ಸಹ ಮಾರುಕಟ್ಟೆಯಲ್ಲಿ ಮಾರುತ್ತಿದ್ದರು. ನಾವೆಲ್ಲರೂ ಕಷ್ಟಪಟ್ಟು ದುಡಿಯುತ್ತಿದ್ದೆವು. ಆ ವರ್ಷಗಳಲ್ಲಿ ನಾವು ಅಸ್ವಸ್ಥ ಬೀಳದಕ್ಕಾಗಿ ಆಭಾರಿಗಳು.ಉನ್ನತ ಶಿಕ್ಷಣದ ಹೊರತೂ ಸಾಫಲ್ಯ
ಮಕ್ಕಳು ಉನ್ನತ ಶಿಕ್ಷಣ ಪಡೆಯುವಂತೆ ನಾವೆಂದೂ ಉತ್ತೇಜಿಸಲಿಲ್ಲ. ದೇವರ ಸೇವೆಯನ್ನು ಪ್ರಥಮವಾಗಿಡುವುದು, ಕ್ರೈಸ್ತ ಗುಣಗಳನ್ನು ಬೆಳೆಸಿಕೊಳ್ಳುವುದು, ಕಷ್ಟಪಟ್ಟು ದುಡಿಯುವುದು ಇವೇ ಸಾಫಲ್ಯ ಜೀವನದ ಗುಟ್ಟು ಎಂದು ನಮಗೆ ತಿಳಿದಿತ್ತು. ಇಂಥ ಆದರ್ಶ ಗುಣಗಳನ್ನು ನಮ್ಮ ಮಕ್ಕಳ ಹೃದಯಗಳಲ್ಲಿ ಅಚ್ಚೊತ್ತಲು ಪ್ರಯತ್ನಿಸಿದೆವು. ಮಕ್ಕಳೊಂದಿಗೆ ನಾನು ಅಧ್ಯಯನ ಮಾಡಿದೆ. ಅವರು ಯೆಹೋವನನ್ನು ಪ್ರೀತಿಸಿ, ಆತನಿಗೆ ತಮ್ಮ ಜೀವನವನ್ನು ಸಮರ್ಪಿಸಿ, ಅದರ ಸಂಕೇತವಾಗಿ ದೀಕ್ಷಾಸ್ನಾನ ಹೊಂದಿದ್ದನ್ನು ನೋಡುವಾಗ ನನಗೆ ಎಲ್ಲಿಲ್ಲದ ಸಂತೋಷ!
ಪೇಪೇ ನಮ್ಮ ಮಕ್ಕಳಿಗಿಂತ ದೊಡ್ಡವಳಾಗಿದ್ದರಿಂದ ಬೇಗನೆ ಮದುವೆಯಾಗಿ ಹೋದಳು. ಆರಂಭದಲ್ಲಿ ನಮ್ಮೊಂದಿಗೆ ಇದ್ದಾಗ ನಾನು ಅವಳಿಗೆ ಓದುಬರಹ ಕಲಿಸಿದ್ದೆ. ಅವಳಿಗೆ ಸ್ವಲ್ಪವೇ ಶಿಕ್ಷಣವಿತ್ತಾದರೂ ಬೈಬಲ್ ಅಧ್ಯಯನ ಮತ್ತು ಇತರ ಆಧ್ಯಾತ್ಮಿಕ ವಿಷಯಗಳ ಮೇಲೆ ಏಕಾಗ್ರ ಮನಸ್ಸಿಟ್ಟಳು. ಸ್ವಲ್ಪ ಸಮಯ ಪಯನೀಯರ್ ಸೇವೆಮಾಡಿದ ಮೇಲೆ ಸಂಚರಣ ಮೇಲ್ವಿಚಾರಕ ಮಂಡೇ ಆಕಿನ್ರಾ ಅವರನ್ನು ಮದುವೆಯಾಗಿ ಅವರ ಕೆಲಸದಲ್ಲಿ ಜತೆಗೂಡಿದಳು. ಈಗ ಅವರಿಗೆ ತಿಮೋಥಿ ಎಂಬ ಮಗನಿದ್ದಾನೆ. ಪೇಪೇ ಮತ್ತು ಮಂಡೇ ತಮ್ಮ ಪೂರ್ಣ ಸಮಯದ ಸೇವೆಯನ್ನು ಮುಂದುವರಿಸಿದ್ದಾರೆ ಮತ್ತು ಸಮ್ಮೇಳನಗಳಲ್ಲಿ ಅನೇಕ ಜವಾಬ್ದಾರಿಗಳನ್ನು ಪೂರೈಸುವುದರಲ್ಲಿ ಮಂಡೇ ಆನಂದಿಸುತ್ತಾರೆ.
ದೊಡ್ಡ ಕಂಪನೆಯೊಂದರಲ್ಲಿ ಬೋಲಾ ಒಬ್ಬ ಬಾಣಸಿಗನ ಕೈಕೆಳಗೆ ಕೆಲಸ ಮಾಡುತ್ತಾ ಕಲಿಯುತ್ತಾ ಇದ್ದ. ಸ್ವಲ್ಪದರಲ್ಲಿ ಆ ಕಂಪನಿಯ ಡೈರೆಕ್ಟರ್‌ರೊಬ್ಬರು ಬೋಲಾನ ಒಳ್ಳೇ ಕೆಲಸ, ಜವಾಬ್ದಾರಿಯುತ ನಡತೆ, ಸತ್ಕ್ರೈಸ್ತ ಗುಣಗಳನ್ನು ಗುರುತಿಸಿದರು. ಸಮಯಾನಂತರ ಅವನಿಗೆ ಜವಾಬ್ದಾರಿಯುತ ಸ್ಥಾನಕ್ಕೆ ಬಡ್ತಿ ಸಿಕ್ಕಿತು. ಅದಕ್ಕಿಂತಲೂ ಹೆಚ್ಚಾಗಿ ಅವನು ತನ್ನ ಸುಂದರಿ ಪತ್ನಿ ಜೇನ್‌ಗೆ ಒಳ್ಳೇ ಪತಿಯೂ ತನ್ನ ಮೂರು ಮಕ್ಕಳಿಗೆ ಒಳ್ಳೇ ತಂದೆಯೂ ಆಗಿದ್ದಾನೆ. ಮಾತ್ರವಲ್ಲ ನೈಜಿರೀಯದ ಲಾಗೋಸ್‌ನಲ್ಲಿರುವ ಒಂದು ಸಭೆಯಲ್ಲಿ ಜವಾಬ್ದಾರಿಯುತ ಹಿರಿಯನಾಗಿದ್ದಾನೆ.
ದರ್ಜಿ ಕೆಲಸ ಕಲಿಯುತ್ತಾ ಅದನ್ನು ಮಾಡುತ್ತಾ ಇದ್ದ ಕೋಲಾ ಕ್ರಮೇಣ ಪಯನೀಯರ್ ಸೇವೆಯನ್ನು ಆರಂಭಿಸಿದ. 1995ರಲ್ಲಿ ಬೆನಿನ್‌ನ ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸಿನ ಟ್ರಾನ್ಸ್‌ಲೇಷನ್ ವಿಭಾಗದಲ್ಲಿ ಸೇವೆಮಾಡಲು ಅವನು ಆಮಂತ್ರಿಸಲ್ಪಟ್ಟನು. ಕಳೆದ 13 ವರ್ಷಗಳಿಂದ ಅಲ್ಲಿ ಸೇವೆಮಾಡುತ್ತಿದ್ದಾನೆ.
ಮರಳಿ ಬೆನಿನ್‌ನಲ್ಲಿ ಸೇವೆ
ಜನವರಿ 23, 1990ರಲ್ಲಿ ಬೆನಿನ್ ಸರಕಾರವು ಜಾರಿಗೆ ತಂದ ಕಾಯಿದೆಯಿಂದ ನಾವು ಪುಳಕಿತಗೊಂಡೆವು. ನಮ್ಮ ಕೆಲಸಕ್ಕಿದ್ದ ನಿಷೇಧವು ರದ್ದಾಗಿದೆಯೆಂಬ ಘೋಷಣೆಯಾಯಿತು. ನಿರಾಶ್ರಿತರಾಗಿ ಹೋಗಿದ್ದ ಅನೇಕರು ಹಿಂದೆ ಬಂದರು. ಅಲ್ಲದೆ ಹೊಸ ಮಿಷನೆರಿಗಳು ಬೆನಿನ್‌ಗೆ ಆಗಮಿಸಿದರು, ಬ್ರಾಂಚ್ ಆಫೀಸ್ ತೆರೆಯಲ್ಪಟ್ಟಿತು. 1994ರಲ್ಲಿ ನಮ್ಮ ಕುಟುಂಬ ಪುನಃ ಬೆನಿನ್‌ಗೆ ಹಿಂದಿರುಗಿತು. ಆದರೆ ಪೇಪೇ, ಬೋಲಾ ಮತ್ತು ಅವರ ಕುಟುಂಬಗಳು ನೈಜಿರೀಯದಲ್ಲೆ ಉಳಿದವು.
ನಾನು ಪಾರ್ಟ್ ಟೈಮ್ ಕೆಲಸ ಮಾಡುತ್ತಲಿದ್ದೆ. ನೈಜಿರೀಯದಲ್ಲಿದ್ದ ನಮ್ಮ ಮನೆಯಿಂದ ಬಾಡಿಗೆ ಸಿಗುತ್ತಿತ್ತು. ಬೋಲಾ ಕೂಡ ಉದಾರ ಸಹಾಯವನ್ನು ನೀಡುತ್ತಿದ್ದ. ಆದ್ದರಿಂದ ಬ್ರಾಂಚ್ ಆಫೀಸಿನ ಹತ್ತಿರವೇ ಐದು ಮಂದಿಗಾಗಿ ಒಂದು ಮನೆಯನ್ನು ಕಟ್ಟಶಕ್ತರಾದೆವು. ಜಮೈಮ 6 ವರ್ಷಗಳಿಗಿಂತಲೂ ಹೆಚ್ಚು ಸಮಯ ಪಯನೀಯರ್ ಸೇವೆಮಾಡಿದಳು. ಹೊಲಿಗೆ ಕೆಲಸಮಾಡಿ ತನ್ನ ಜೀವನೋಪಾಯ ನಡೆಸುತ್ತಿದ್ದಳು. ಸಮಯಾನಂತರ ಆಕೆ ಕಾಕೂ ಅಹಿಮೆನು ಎಂಬವನನ್ನು ವಿವಾಹವಾದಳು. ಅವರೀಗ ಸಮೀಪದ ಬ್ರಾಂಚ್ ಆಫೀಸಿನಲ್ಲಿ ಕೆಲಸಮಾಡುತ್ತಿದ್ದಾರೆ. ಕಾಲೆಬ್ ಮತ್ತು ಸೀಲಾಸ್ ತಮ್ಮ ಶಾಲಾಭ್ಯಾಸವನ್ನು ಮುಗಿಸುತ್ತಾ ಇದ್ದಾರೆ. ದೇವರ ಸಹಾಯ ಮತ್ತು ನಮ್ಮ ಕುಟುಂಬದ ಸಹಕಾರದಿಂದ ಸ್ಯೂಲ್ಯೆನ್ ಮತ್ತು ನಾನು ಈಗ 40ಕ್ಕೂ ಹೆಚ್ಚು ವರ್ಷಗಳಿಂದ ಪೂರ್ಣ ಸಮಯ ದೇವರ ಸೇವೆಮಾಡುತ್ತಿದ್ದೇವೆ.
ಬೆನಿನ್‌ನಲ್ಲಿ ಸಾರುವ ಕೆಲಸವನ್ನು ದೇವರು ಹೇರಳವಾಗಿ ಆಶೀರ್ವದಿಸಿದ್ದಾನೆ. 1961ರಲ್ಲಿ ನನಗೆ ದೀಕ್ಷಾಸ್ನಾನವಾದಾಗ ಆ ದೇಶದಲ್ಲಿ 871 ಯೆಹೋವನ ಸಾಕ್ಷಿಗಳು ದೇವರ ರಾಜ್ಯದ ಸಂದೇಶವನ್ನು ಸಾರುತ್ತಿದ್ದರು. ನಾನು ಬಂದಿಸಲ್ಪಟ್ಟಾಗ ಆ ಸಂಖ್ಯೆಯು 2,381ಕ್ಕೆ ಏರಿತ್ತು. 1994ರಲ್ಲಿ ನಾವು ಬೆನಿನ್‌ಗೆ ಹಿಂದಿರುಗಿದ ಸಮಯದಷ್ಟಕ್ಕೆ, 14 ವರ್ಷಗಳ ನಿಷೇಧದ ಮಧ್ಯೆಯೂ ಆ ಸಂಖ್ಯೆ 3,858ಕ್ಕೆ ಏರಿತು. ಇಂದು ಅದು 9,000 ಅಂದರೆ ಎರಡು ಪಟ್ಟುಗಿಂತಲೂ ಹೆಚ್ಚಾಗಿದೆ ಮತ್ತು 2008ರಲ್ಲಿ ಕ್ರಿಸ್ತನ ಮರಣದ ಜ್ಞಾಪಕಾಚರಣೆಗೆ 35,752 ಮಂದಿ ಹಾಜರಾದರು.
ಮೂವತ್ತು ವರ್ಷಗಳ ಹಿಂದೆ ನಾನು ಎಲ್ಲಿ ಬಂದಿಸಲ್ಪಟ್ಟಿದ್ದೆನೋ ಆ ಸ್ಥಳಕ್ಕೆ ಕೆಲವೊಮ್ಮೆ ಹೋಗಿ ಆಗ ನಡೆದ ಎಲ್ಲಾ ಘಟನೆಗಳನ್ನು ನಾನು ಮರುಕಳಿಸುತ್ತೇನೆ. ದೇವರು ನನ್ನ ಕುಟುಂಬವನ್ನು ಆಶೀರ್ವದಿಸಿದ್ದಕ್ಕಾಗಿ ಆತನಿಗೆ ಕೃತಜ್ಞತೆ ಹೇಳುತ್ತೇನೆ. ನಮಗೆ ಏನೂ ಕೊರತೆಯಾಗದಂತೆ ಆತನು ನೋಡಿಕೊಂಡನು. ಮತ್ತು ಇವತ್ತಿಗೂ ನಾನು ಪ್ರತಿಯೊಬ್ಬರಿಗೂ “ಬಾಂಸೂರ್!” ಎಂದೇ ವಂದಿಸುತ್ತೇನೆ. (g 3/09)
[ಪಾದಟಿಪ್ಪಣಿ]
^ ಆ ಸಮಯದಲ್ಲಿ ಬೆನಿನ್ ದೇಶವನ್ನು ಡಹೋಮಿ ಎಂದು ಕರೆಯುತ್ತಿದ್ದರು. ಅದು ಫ್ರೆಂಚ್ ವೆಸ್ಟ್ ಆಫ್ರಿಕದ ಭಾಗವಾಗಿತ್ತು.
[ಪುಟ 27ರಲ್ಲಿರುವ ಸಂಕ್ಷಿಪ್ತ ವಿವರಣೆ]
ಅವನು ನಗುತ್ತಾ ಅಂದದ್ದು: “ನೀವೇನೂ ಕೊಡಬೇಕಾಗಿಲ್ಲ, ಅದು ನನ್ನ ಗಿಫ್ಟ್”
[ಪುಟ 28ರಲ್ಲಿರುವ ಸಂಕ್ಷಿಪ್ತ ವಿವರಣೆ]
ಮಕ್ಕಳು ಉನ್ನತ ಶಿಕ್ಷಣ ಪಡೆಯುವಂತೆ ನಾವೆಂದೂ ಉತ್ತೇಜಿಸಲಿಲ್ಲ
[ಪುಟ 29ರಲ್ಲಿರುವ ಚಿತ್ರ]
1970ರಲ್ಲಿ ಸಂಚರಣ ಮೇಲ್ವಿಚಾರಕನಾಗಿ ಸೇವೆಮಾಡುತ್ತಿದ್ದಾಗ
[ಪುಟ 29ರಲ್ಲಿರುವ ಚಿತ್ರ]
1976ರಲ್ಲಿ, ನಮ್ಮ ಇಬ್ಬರು ಗಂಡುಮಕ್ಕಳು ಬೋಲಾ ಮತ್ತು ಕೋಲಾರೊಂದಿಗೆ
[ಪುಟ 29ರಲ್ಲಿರುವ ಚಿತ್ರ]
ಇಂದು ನನ್ನ ಇಡೀ ಕುಟುಂಬ—ನನ್ನ ಪತ್ನಿ, ಐದು ಮಕ್ಕಳು, ಮೂರು ಮೊಮ್ಮಕ್ಕಳು ಮತ್ತು ಪೇಪೇಯ ಕುಟುಂಬ