ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಗ್ನಪ್ರೇಮದ ದುಃಖದಿಂದ ಹೇಗೆ ಚೇತರಿಸಿಕೊಳ್ಳಲಿ?

ಭಗ್ನಪ್ರೇಮದ ದುಃಖದಿಂದ ಹೇಗೆ ಚೇತರಿಸಿಕೊಳ್ಳಲಿ?

ಯುವ ಜನರು ಪ್ರಶ್ನಿಸುವುದು

ಭಗ್ನಪ್ರೇಮದ ದುಃಖದಿಂದ ಹೇಗೆ ಚೇತರಿಸಿಕೊಳ್ಳಲಿ?

“ಐದು ವರ್ಷಗಳಿಂದ ನಾವು ಸ್ನೇಹಿತರು. ಆರು ತಿಂಗಳ ಹಿಂದೆಯೇ ನಮ್ಮಲ್ಲಿ ಪ್ರೇಮ ಅಂಕುರಿಸಿತು. ಆದರೆ ನಮ್ಮ ಪ್ರೇಮಸಂಬಂಧವನ್ನು ಅವನು ಮುರಿಯ ಬಯಸಿದಾಗ ಅದರ ಬಗ್ಗೆ ಒಂದು ಮಾತನ್ನೂ ನನಗೆ ಹೇಳಲಿಲ್ಲ. ಇದ್ದಕ್ಕಿದ್ದಂತೆ ಅವನು ಮಾತು ನಿಲ್ಲಿಸಿದ. ಏನು ಮಾಡಬೇಕೆಂದೇ ನನಗೆ ತೋಚಲಿಲ್ಲ. ನಿರಾಶೆಯಿಂದ ನಾನು ಎದೆಗುಂದಿ ಹೋದೆ. ‘ನಾನೇನು ತಪ್ಪು ಮಾಡ್ದೆ?’ ‘ನಾನೇನು ತಪ್ಪು ಮಾಡ್ದೆ?’ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿತ್ತು.”—ರೇಚೆಲ್‌. *

ಪ್ರೇಮಸಂಬಂಧ ಮುರಿದಾಗ ಸಂತೋಷವು ಕಣ್ಮರೆಯಾಗಿ ಕಣ್ಣೀರೇ ನಿಮ್ಮ ಸಂಗಾತಿಯಾಗಬಲ್ಲದು. ಎರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಜೆಫ್‌ ಮತ್ತು ಸೂಸನ್‌ರನ್ನು ಪರಿಗಣಿಸಿ. ಆ ಸಮಯದಲ್ಲಿ ಅವರ ಭಾವನಾತ್ಮಕ ಬಂಧವು ಬೆಳೆಯುತ್ತಾ ಬಂತು. ಜೆಫ್‌ ದಿನವಿಡೀ ಮೆಸೆಜ್‌ ಮೂಲಕ ಪ್ರೇಮಸಲ್ಲಾಪಗಳ ಸುರಿಮಳೆಗೆರೆಯುತ್ತಿದ್ದ. ಆಗಿಂದಾಗ್ಗೆ ತನ್ನ ಪ್ರೀತಿಯನ್ನು ತೋರಿಸಲು ಜೆಫ್‌ ಅವಳಿಗೆ ಗಿಫ್ಟ್‌ಗಳನ್ನೂ ಕೊಡುತ್ತಿದ್ದ. “ಜೆಫ್‌ ನನಗೆ ಕಿವಿಗೊಡಲು ಮತ್ತು ನನ್ನನ್ನು ಅರ್ಥಮಾಡಿಕೊಳ್ಳಲು ತುಂಬಾ ಪ್ರಯತ್ನಿಸುತ್ತಿದ್ದ. ಅವನು ನನ್ನನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಾನೆಂದು ನನಗನಿಸಿತು” ಎನ್ನುತ್ತಾಳೆ ಸೂಸನ್‌.

ಸ್ವಲ್ಪದರಲ್ಲೇ ಜೆಫ್‌ ಮತ್ತು ಸೂಸನ್‌ ವಿವಾಹದ ಬಗ್ಗೆ ಯೋಚಿಸಿದರು. ಗಂಡಹೆಂಡಿರಾದಾಗ ಎಲ್ಲಿ ಮನೆಮಾಡುವುದೆಂದು ಸಹ ಚರ್ಚಿಸಿದರು. ನಿಶ್ಚಿತಾರ್ಥಕ್ಕಾಗಿ ಉಂಗುರವನ್ನೂ ತರಲಿಕ್ಕಿದ್ದ ಜೆಫ್‌. ಅನಂತರ ಒಂದು ದಿನ ಯಾವ ಕಾರಣವನ್ನೂ ಕೊಡದೆ ದಿಢೀರನೆ ಜೆಫ್‌ ಸಂಬಂಧ ಮುರಿದುಬಿಟ್ಟ! ಸೂಸನ್‌ಗೆ ದಿಕ್ಕೇ ತೋಚಲಿಲ್ಲ. ದಿನನಿತ್ಯದ ಕೆಲಸವನ್ನು ಯಾಂತ್ರಿಕವಾಗಿ ಮಾಡಿದರೂ ಅವಳ ಭಾವನೆಗಳು ನಿರ್ಜೀವವಾಗಿದ್ದವು. “ಮಾನಸಿಕ, ದೈಹಿಕ ಶಕ್ತಿ ಇಂಗಿಹೋಗಿತ್ತು” ಎನ್ನುತ್ತಾಳೆ ಅವಳು. *

ದುಃಖಕರವೇಕೆ?

ಸೂಸನ್‌ನಂಥ ಸನ್ನಿವೇಶದಲ್ಲಿ ನೀವು ಇರುವುದಾದರೆ ‘ಈ ಆಘಾತದಿಂದ ನಾನೆಂದರೂ ಚೇತರಿಸಿಕೊಳ್ಳುವೆನೋ?’ ಎಂದು ನೀವು ಯೋಚಿಸಬಹುದು. (ಕೀರ್ತನೆ 38:6) ನಿಮ್ಮ ವ್ಯಥೆಯು ಸಹಜವಾದ್ದದ್ದೇ. ಪ್ರೇಮವು ಭಗ್ನಗೊಳ್ಳುವುದು ಅತ್ಯಂತ ವೇದನಾಮಯ ಅನುಭವ. ತಾಳಿಕೊಳ್ಳಲು ಬಲು ಕಷ್ಟ. ಅಂಥ ದುರಂತವು ಕೆಲವರ ಜೀವವನ್ನು ಹಿಂಡಿಹಾಕುತ್ತದೆ. ಯಾರಾದರೂ ಸತ್ತಾಗ ಹೇಗೋ ಹಾಗೆ ನೀವು ಶೋಕದ ಮಡುವಿನಲ್ಲಿ ಮುಳುಗಿಹೋದೀರಿ. ನಿಮಗೆ ಈ ಕೆಳಗಿನಂತೆಯೂ ಅನಿಸಬಹುದು:

ನಿರಾಕರಣೆ. ‘ಸಂಬಂಧ ಮುರಿಯಲು ಸಾಧ್ಯವೇ ಇಲ್ಲ. ಅವನು ಇವತ್ತಲ್ಲ ನಾಳೆ ಬಂದೇ ಬರ್ತಾನೆ.’

ಸಿಟ್ಟು. ‘ಹೀಗೆ ಮಾಡಲು ಅವನಿಗೆಷ್ಟು ಧೈರ್ಯ. ಅವನು ನನಗೆ ಬೇಡವೇ ಬೇಡ!’

ಖಿನ್ನತೆ. ‘ನನಗೆ ಯಾರೂ ಇಲ್ಲ. ಯಾರೂ ನನ್ನನ್ನು ಪ್ರೀತಿಸುವುದಿಲ್ಲ.’

ಅಂಗೀಕಾರ. ‘ನಾನು ಸರಿಹೋಗ್ತೇನೆ. ಮನಸ್ಸೇನೋ ಮುರಿದು ಹೋಗಿದೆ, ಆದರೆ ಪರ್ವಾಗಿಲ್ಲ ಚೇತರಿಸಿಕೊಳ್ತೇನೆ.’

ಚೇತರಿಸಿಕೊಳ್ಳಲು ಮನಸ್ಸುಮಾಡುವುದು ಸಂತೋಷದ ವಿಷಯವೇ. ಆದರೆ ಆ ಹಂತವನ್ನು ಮುಟ್ಟಲು ತಗಲುವ ಸಮಯವು ಅನೇಕ ವಿಷಯಗಳ ಮೇಲೆ ಹೊಂದಿಕೊಂಡಿರುತ್ತದೆ. ಎಷ್ಟು ದೀರ್ಘ ಸಮಯದಿಂದ ಆ ಸಂಬಂಧವಿತ್ತು ಮತ್ತು ಎಷ್ಟು ಆಪ್ತವಾಗಿತ್ತು ಎಂಬುದೂ ಅದರಲ್ಲಿ ಸೇರಿರುತ್ತದೆ. ಆದರೆ ಆ ತನಕ ನಿಮ್ಮ ಹೃದಯವೇದನೆಯನ್ನು ಹೇಗೆ ನಿಭಾಯಿಸಬಲ್ಲಿರಿ?

ಮುಂದೆ ಸಾಗಿ

‘ಕಾಲ ಎಲ್ಲವನ್ನೂ ಮರೆಸುತ್ತದೆ’ ಎಂದು ಹೇಳುವುದನ್ನು ನೀವು ಕೇಳಿರಬಹುದು. ನಿಮ್ಮ ಪ್ರೇಮಬಂಧ ಮುರಿದ ಆರಂಭದ ದಿನಗಳಲ್ಲಿ ಈ ಮಾತುಗಳು ಹುರುಳಿಲ್ಲದ್ದಾಗಿ ತೋರಬಹುದು. ಏಕೆಂದರೆ ಕಾಲವು ಪರಿಹಾರದ ಕೇವಲ ಒಂದು ಅಂಶವಷ್ಟೇ. ಉದಾಹರಣೆಗಾಗಿ ನಿಮಗೆ ಒಂದು ಗಾಯವಾಗಿದೆ ಎಂದು ನೆನಸಿ. ಕಾಲಾನಂತರ ಅದು ವಾಸಿಯಾಗುವುದು. ಆದರೆ ಈಗ ಅದು ನೋಯುತ್ತದೆ. ರಕ್ತಸ್ರಾವ ನಿಲ್ಲಿಸಬೇಕು. ನೋವನ್ನು ಕಡಿಮೆಮಾಡಬೇಕು. ಸೋಂಕು ತಗಲಬಾರದು. ಭಾವನಾತ್ಮಕ ಗಾಯವೂ ಅದೇ ರೀತಿಯಲ್ಲಿದೆ. ಅದು ಸದ್ಯಕ್ಕೆ ನೋಯುತ್ತದೆ. ನೋವನ್ನು ಕಡಿಮೆಮಾಡಲು ಮತ್ತು ನಿರಾಶೆಯೆಂಬ ಸೋಂಕು ತಗಲದಂತೆ ನೋಡಿಕೊಳ್ಳಲು ನೀವು ಹೆಜ್ಜೆಯನ್ನು ತೆಗೆದುಕೊಳ್ಳಬೇಕು. ಆಗ ಸಮಯವು ತನ್ನ ಪಾಲಿನ ಕೆಲಸಮಾಡುತ್ತದೆ. ಆದರೆ ನೀವು ನಿಮ್ಮ ಪಾಲಿನ ಕೆಲಸಮಾಡುವುದು ಹೇಗೆ? ಕೆಳಗಿನವುಗಳನ್ನು ಪ್ರಯತ್ನಿಸಿ.

ಚೆನ್ನಾಗಿ ಅತ್ತುಬಿಡಿ. ಮನಸಾರೆ ಅತ್ತುಬಿಡುವುದರಲ್ಲಿ ಏನೂ ತಪ್ಪಿಲ್ಲ. “ಅಳುವ ಸಮಯ,” “ಗೋಳಾಡುವ ಸಮಯ” ಇದೆಯೆಂದು ಬೈಬಲ್‌ ಹೇಳುತ್ತದಲ್ಲಾ. (ಪ್ರಸಂಗಿ 3:1, 4) ಕಣ್ಣೀರು ಸುರಿಸುವುದು ನಿಮ್ಮ ಬಲಹೀನತೆಯಲ್ಲ. ರಣವೀರ ದಾವೀದನು ಸಹ ಭಾವನಾತ್ಮಕ ಸಂಕಟದಲ್ಲಿ ಅಂದದ್ದು: “ಪ್ರತಿರಾತ್ರಿಯೂ ನನ್ನ ಕಣ್ಣೀರಿನಿಂದ ಮಂಚವು ತೇಲಾಡುತ್ತದೆ. ಹಾಸಿಗೆಯು ಕಣ್ಣೀರಿನಿಂದ ನೆನೆದು ಹೋಗುತ್ತದೆ.”—ಕೀರ್ತನೆ 6:6.

ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ. ಭಾವನಾತ್ಮಕ ದುಃಖದಿಂದ ಉಡುಗಿಹೋದ ಶಕ್ತಿಯನ್ನು ಪುನಃ ಪಡೆಯಲು ದೈಹಿಕ ವ್ಯಾಯಾಮ ಮತ್ತು ಪೌಷ್ಠಿಕ ಆಹಾರ ಸಹಾಯಕರ. “ದೈಹಿಕ ತರಬೇತಿಯು . . . ಪ್ರಯೋಜನಕರ” ಎನ್ನುತ್ತದೆ ಬೈಬಲ್‌.—1 ತಿಮೊಥೆಯ 4:8.

ನಿಮ್ಮ ಆರೋಗ್ಯದ ಸಂಬಂಧದಲ್ಲಿ ಯಾವ ವಿಷಯಕ್ಕೆ ಹೆಚ್ಚು ಗಮನಕೊಡಬೇಕು?

.....

ಕಾರ್ಯಮಗ್ನರಾಗಿರಬೇಕು. ನಿಮಗೆ ಇಷ್ಟವಾದ ಕೆಲಸಗಳನ್ನು ಮಾಡಿರಿ, ನಿಲ್ಲಿಸಬೇಡಿ. ಬೇರೆಯವರೊಂದಿಗೆ ಹೆಚ್ಚಾಗಿ ಬೆರೆಯಬೇಕು. ಒಂಟಿಯಾಗಿರಲು ಪ್ರಯತ್ನಿಸಬಾರದು. (ಜ್ಞಾನೋಕ್ತಿ 18:1) ನಿಮ್ಮ ಹಿತಚಿಂತಕರೊಂದಿಗೆ ಸಹವಸಿಸುವಲ್ಲಿ ನೀವು ಒಳ್ಳೇ ಕೆಲಸಗಳನ್ನು ಮಾಡಲು ನಿಮ್ಮ ಮನಸ್ಸನ್ನು ಪ್ರೇರೇಪಿಸುವಿರಿ.

ಕಾರ್ಯಮಗ್ನರಾಗಿರಲು ಯಾವ ಯಾವ ಗುರಿಗಳನ್ನಿಡಬೇಕು?

.....

ನಿಮ್ಮ ದುಃಖವನ್ನು ದೇವರಿಗೆ ತಿಳಿಯಪಡಿಸಿರಿ. ಇದು ಕಷ್ಟಕರವಾದೀತು. ಆ ಸಮಯದಲ್ಲಿ, ದೇವರು ಕೈಬಿಟ್ಟಿದ್ದಾನೆಂದು ಕೆಲವರಿಗೆ ಅನಿಸುತ್ತದೆ. ‘ನನಗೆ ಒಳ್ಳೆಯವರೊಬ್ಬರು ಸಿಗಬೇಕೆಂದು ನಾನೆಷ್ಟು ಬೇಡಿಕೊಂಡೆ. ನೋಡು, ನನಗೆ ಸಿಕ್ಕಿದ್ದೇನು!’ ಎಂದಾರು ಅವರು. (ಕೀರ್ತನೆ 10:1) ಈ ರೀತಿ ದೇವರನ್ನು ಬರೇ ಜೋಡಿ ಕುದುರಿಸುವ ದಳ್ಳಾಳಿಯಾಗಿ ನೋಡುವುದು ಸರಿಯೋ? ಖಂಡಿತ ಸರಿಯಲ್ಲ. ಜೋಡಿಯಲ್ಲಿ ಒಬ್ಬರು ಆ ಸಂಬಂಧವನ್ನು ಮುರಿಯಲು ಬಯಸಿದಾಗ ಸಹ ದೇವರು ಅದಕ್ಕೆ ಜವಾಬ್ದಾರನಲ್ಲ. ಆದರೆ ಯೆಹೋವ ದೇವರ ಕುರಿತು ನಮಗೆ ಇದು ಮಾತ್ರ ತಿಳಿದಿದೆ: “ಆತನು ನಿಮಗೋಸ್ಕರ ಚಿಂತಿಸುತ್ತಾನೆ.” (1 ಪೇತ್ರ 5:7) ಆದ್ದರಿಂದ ನಿಮ್ಮ ಮನದಾಳದ ದುಃಖವನ್ನೆಲ್ಲ ಪ್ರಾರ್ಥನೆಯಲ್ಲಿ ದೇವರಿಗೆ ತಿಳಿಸಿರಿ. ಬೈಬಲ್‌ ಹೇಳುವುದು: “ಪ್ರಾರ್ಥನೆ ಮತ್ತು ಯಾಚನೆಗಳಿಂದ ನಿಮ್ಮ ಬಿನ್ನಹಗಳನ್ನು ದೇವರಿಗೆ ತಿಳಿಯಪಡಿಸಿರಿ. ಆಗ ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ನಿಮ್ಮ ಮಾನಸಿಕ ಶಕ್ತಿಗಳನ್ನೂ ಕ್ರಿಸ್ತ ಯೇಸುವಿನ ಮೂಲಕ ಕಾಯುವುದು.”—ಫಿಲಿಪ್ಪಿ 4:6, 7.

ಭಗ್ನಪ್ರೇಮದ ದುಃಖದಿಂದ ಹೊರಬರಲು ಹೆಣಗಾಡುತ್ತಿರುವಾಗ ಯಾವ ನಿರ್ದಿಷ್ಟ ವಿಷಯಗಳ ಕುರಿತು ನೀವು ಪ್ರಾರ್ಥಿಸಬಹುದು?

.....

ಮುಂದಕ್ಕೆ ನೋಡಿ

ನೀವು ಚೇತರಿಸಿಕೊಂಡ ಮೇಲೆ ನಿಮ್ಮ ಹಿಂದಿನ ಪ್ರೇಮಬಂಧದ ವೈಫಲ್ಯಕ್ಕೆ ಕಾರಣವೇನೆಂದು ಸರಿಯಾಗಿ ತಿಳುಕೊಳ್ಳುವುದು ಹಿತಕರವಾದೀತು. ಅದನ್ನು ಸರಿಯಾಗಿ ತಿಳುಕೊಂಡಾಗ, ಕೆಳಗಿನ ಪ್ರಶ್ನೆಗಳಿಗೆ ಉತ್ತರಗಳನ್ನು ಬರೆಯುವುದು ನಿಮಗೆ ಸಹಾಯಕರ.

ಪ್ರೇಮಬಂಧ ಮುರಿಯಲು ನಿಮ್ಮ ಬಾಯ್‌ಫ್ರೆಂಡ್‌ ಕಾರಣ ಕೊಟ್ಟನೋ? ಕೊಟ್ಟಿದ್ದಲ್ಲಿ, ಅದು ಸರಿಯಿರಲಿ ತಪ್ಪಿರಲಿ ಕೆಳಗೆ ತಿಳಿಸಿರಿ.

.....

ಬೇರೆ ಯಾವ ಕಾರಣಗಳು ಇದ್ದಿರಬಹುದೆಂದು ನೀವು ನೆನಸುತ್ತೀರಿ?

.....

ಹಾಗಾಗದಿರಲು ನೀವೇನಾದರೂ ಮಾಡಬಹುದಿತ್ತೆಂದು ನೆನಸುತ್ತೀರೋ? ಹೌದೆಂದಾದರೆ ಅದೇನೆಂದು ತಿಳಿಸಿ.

.....

ಆ ಅನುಭವವು ಆಧ್ಯಾತ್ಮಿಕವಾಗಿ ಅಥವಾ ಭಾವನಾತ್ಮಕವಾಗಿ ಬೆಳೆಯುವ ಅಗತ್ಯ ನಿಮಗಿದೆಯೆಂದು ಯಾವ ರೀತಿಯಲ್ಲಾದರೂ ನಿಮಗೆ ತೋರಿಸಿಕೊಟ್ಟಿತೋ?

.....

ಒಂದು ವೇಳೆ ನಿಮ್ಮ ಮುಂದಿನ ಪ್ರೇಮಸಂಬಂಧದಲ್ಲಿ ಆ ತಪ್ಪನ್ನು ಹೇಗೆ ಸರಿಪಡಿಸಿಕೊಳ್ಳುವಿರಿ?

.....

ನಿಮ್ಮ ಹಿಂದಿನ ಪ್ರೇಮಬಂಧವು ನೀವು ನಿರೀಕ್ಷಿಸಿದಂತೆ ಆಗಲಿಲ್ಲವೆಂಬುದು ಒಪ್ಪತಕ್ಕದ್ದೇ. ಆದರೆ ಇದನ್ನು ನೆನಪಿಡಿ: ಭಾರೀ ಗಾಳಿಮಳೆಯಲ್ಲಿ ನಮಗೆ ಕಾಣಿಸುವುದು ಕಾರ್ಮೋಡಗಳ ಆಕಾಶ ಮತ್ತು ಧಾರಾಕಾರ ಸುರಿಯುವ ಮಳೆ ಮಾತ್ರ. ಸಮಯ ಕಳೆದಂತೆ ಮಳೆ ನಿಲ್ಲುತ್ತದೆ, ಆಕಾಶ ಶುಭ್ರವಾಗುತ್ತದೆ. ಈ ಲೇಖನದ ಆರಂಭದಲ್ಲಿ ತಿಳಿಸಲಾದ ಯುವಜನರು ಸಮಯಾನಂತರ ಹಿಂದಿನದನ್ನು ಮರೆತು ಮುಂದೆಸಾಗಿದರು. ನಿಮ್ಮ ವಿಷಯದಲ್ಲೂ ಹಾಗಾಗಬಹುದೆಂಬ ಭರವಸೆ ನಿಮಗಿರಲಿ! (g 2/09)

“ಯುವ ಜನರು ಪ್ರಶ್ನಿಸುವುದು . . . ” ಲೇಖನಮಾಲೆಯ ಹೆಚ್ಚಿನ ಲೇಖನಗಳನ್ನು www.watchtower.org/ype ವೆಬ್‌ಸೈಟ್‌ನಲ್ಲಿ ಕಂಡುಕೊಳ್ಳಬಹುದು

[ಪಾದಟಿಪ್ಪಣಿಗಳು]

^ ಹೆಸರುಗಳು ಬದಲಾಗಿವೆ.

^ ಈ ಲೇಖನದ ಉಲ್ಲೇಖನಗಳು ಹುಡುಗಿಯರದ್ದು. ಆದರೂ ಚರ್ಚಿಸಲಾದ ಮೂಲತತ್ತ್ವಗಳು ಹುಡುಗರಿಗೂ ಅನ್ವಯಿಸುತ್ತವೆ.

ಯೋಚಿಸಿ

◼ ನಿಮ್ಮ ಹಿಂದಿನ ಸಂಬಂಧದಿಂದಾಗಿ ನೀವು ನಿಮ್ಮ ಕುರಿತು ಏನು ಕಲಿತಿರಿ?

◼ ಗಂಡು/ಹೆಣ್ಣು ಸಂಬಂಧದ ಕುರಿತಾಗಿ ನೀವು ಕಲಿತದ್ದೇನು?

◼ ಭಗ್ನಪ್ರೇಮದಿಂದಾಗುವ ದುಃಖವು ಸಹಿಸಲಸಾಧ್ಯವೆಂದು ತೋರುವಾಗ ಅದನ್ನು ಯಾರಿಗೆ ಭರವಸೆಯಿಂದ ತಿಳಿಸಬಲ್ಲಿರಿ?

[ಪುಟ 24ರಲ್ಲಿರುವ ಚೌಕ]

ಸಲಹೆ

ಆರಂಭದಲ್ಲಿ ತಿಳಿಸಲಾದ ಸೂಸನ್‌ ಬೈಬಲ್‌ ವಚನಗಳ ಒಂದು ಪಟ್ಟಿಮಾಡಿದಳು. ಆ ಕಹಿ ನೆನಪುಗಳು ಬಂದಾಗಲೆಲ್ಲ ಅವನ್ನು ಓದಲಾಗುವಂತೆ ತನ್ನ ಬಳಿ ಇಟ್ಟುಕೊಂಡಳು. ನೀವು ಸಹ ಈ ಲೇಖನದಲ್ಲಿ ಕೊಡಲಾದ ಕೆಲವು ಶಾಸ್ತ್ರವಚನಗಳನ್ನು ಪಟ್ಟಿಮಾಡಿ ಓದಸಾಧ್ಯವಿದೆ.

[ಪುಟ 23ರಲ್ಲಿರುವ ಚಿತ್ರ]

ಭಗ್ನಪ್ರೇಮವು ಒಂದು ನೋವುಭರಿತ ಗಾಯದಂತಿದೆ, ಸಮಯ ಕಳೆದಂತೆ ಅದು ವಾಸಿಯಾಗುವುದು