ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಖಿನ್ನತೆ ಔಷಧೋಪಚಾರ?

ಖಿನ್ನತೆ ಔಷಧೋಪಚಾರ?

ಖಿನ್ನತೆ ಔಷಧೋಪಚಾರ?

“ನನಗೆ ಯಾವ ಔಷಧೋಪಚಾರ ಒಳ್ಳೆದೆಂದು ನಾನೂ ನನ್ನ ಗಂಡನೂ ತುಂಬ ಹುಡುಕಿದೆವು, ಜೀವನ ಶೈಲಿಯನ್ನು ಬದಲಾಯಿಸಿದೆವು, ನಿಭಾಯಿಸಬಲ್ಲ ದಿನಚರಿಯನ್ನು ರೂಢಿಸಿಕೊಳ್ಳಲು ಪರಿಶ್ರಮಪಟ್ಟೆವು” ಎನ್ನುತ್ತಾಳೆ ಹಲವಾರು ವರ್ಷಗಳಿಂದ ಖಿನ್ನತೆಯಿಂದ ಬಳಲುತ್ತಿರುವ ರೂತ್‌. “ಒಳ್ಳೇ ಚಿಕಿತ್ಸೆ ದೊರೆತಂತೆ ಕಂಡಿತು. ನನಗೆ ತುಸು ಒಳ್ಳೆಯದೂ ಆಗಿದೆ. ಆದರೆ ಯಾವ ಚಿಕಿತ್ಸೆಯೂ ಫಲಕಾರಿಯಾಗದಂತೆ ಕಂಡ ಸಮಯದಲ್ಲಿ ನನ್ನ ಗಂಡ, ಮಿತ್ರರು ಸದಾ ತೋರಿಸಿದ ಪ್ರೀತಿಯೇ ನನಗೆ ನಿರಾಶೆಯಿಂದ ಕುಗ್ಗಿಹೋಗದಂತೆ ನೆರವಾಯಿತು.”

ರೂತಳ ಅನುಭವವು ತೋರಿಸುವಂತೆ, ತೀವ್ರ ಖಿನ್ನತೆಯಿಂದ ಬಳಲುವವರಿಗೆ ಸೂಕ್ತವಾದ ಯಾವುದೇ ಚಿಕಿತ್ಸೆಯೂ ಸೇರಿದಂತೆ ಆದಷ್ಟು ಹೆಚ್ಚಿನವರ ಬೆಂಬಲ ಅಗತ್ಯ. ಖಿನ್ನತೆಯನ್ನು ಅಲಕ್ಷಿಸುವುದು ಅಪಾಯಕರ ಏಕೆಂದರೆ ಕೆಲವು ಸಂದರ್ಭಗಳಲ್ಲಿ ಅದಕ್ಕೆ ಚಿಕಿತ್ಸೆ ನೀಡದಿರುವುದು ಜೀವಕ್ಕೆ ಗಂಡಾಂತರ. “ಆರೋಗ್ಯವಂತರಿಗೆ ವೈದ್ಯನ ಆವಶ್ಯಕತೆ ಇಲ್ಲ, ಆದರೆ ರೋಗಿಗಳಿಗೆ ಇದೆ” ಎಂದು ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಯೇಸು ಕ್ರಿಸ್ತನು ಹೇಳಿದಾಗ ರೋಗಿಗಳಿಗೆ ವೈದ್ಯಕೀಯ ಸಹಾಯವು ಅಗತ್ಯವೆಂಬುದನ್ನು ಒಪ್ಪಿದನು. (ಮಾರ್ಕ 2:17) ಖಿನ್ನತೆಯ ಕಾಯಿಲೆಯಿರುವ ಅನೇಕ ರೋಗಿಗಳ ಬೇನೆಯನ್ನು ಕಡಿಮೆಗೊಳಿಸಲು ವೈದ್ಯರಲ್ಲಿ ಹೆಚ್ಚಿನ ಚಿಕಿತ್ಸೆಗಳಿವೆ ಎಂಬುದು ವಾಸ್ತವಿಕ. *

ಕೆಲವು ಸಹಾಯಕರ ಆಯ್ಕೆಗಳು

ಖಿನ್ನತೆ ಕಾಯಿಲೆಗೆ ಹಲವಾರು ಔಷಧೋಪಚಾರಗಳಿವೆ. ರೋಗಲಕ್ಷಣಗಳು ಮತ್ತು ಅದರ ತೀವ್ರತೆಗೆ ಅನುಸಾರ ಅವು ಬೇರೆಬೇರೆಯಾಗಿವೆ. (“ಯಾವ ರೀತಿಯ ಖಿನ್ನತೆ?” ಪುಟ 5ರ ಚೌಕ ನೋಡಿ.) ಅನೇಕರು ತಮ್ಮ ಪರಿಚಿತ ವೈದ್ಯರಿಂದ ಸಹಾಯ ಪಡೆಯುತ್ತಿರಬಹುದು. ಆದರೆ ಇನ್ನು ಕೆಲವರಿಗೆ ಹೆಚ್ಚಿನ ವಿಶೇಷ ಔಷಧೋಪಚಾರದ ಅಗತ್ಯವಿರುತ್ತದೆ. ವೈದ್ಯರು ಖಿನ್ನತೆ ಕುಗ್ಗಿಸುವ ಮದ್ದನ್ನು ಕೊಡಬಹುದು ಅಥವಾ ಇನ್ನಿತರ ಸಹಾಯವನ್ನು ಶಿಫಾರಸು ಮಾಡಬಹುದು. ಕೆಲವು ಜನರಿಗೆ ಗಿಡಮೂಲಿಕೆಗಳ ಔಷಧಿಗಳು, ಆಹಾರ ಪಥ್ಯಗಳು ಅಥವಾ ವೈದ್ಯರು ಸೂಚಿಸುವ ವ್ಯಾಯಾಮದಿಂದ ಹೆಚ್ಚು ಉಪಶಮನ ದೊರೆತಿದೆ.

ಎದುರಾಗುವ ಸವಾಲುಗಳು

1. ಹಿತೈಷಿಗಳು ಅರೆಬರೆ ಅಥವಾ ಸ್ವಲ್ಪವೂ ವೈದ್ಯಕೀಯ ಜ್ಞಾನವಿಲ್ಲದೆ, ಯಾವ ರೀತಿಯ ಚಿಕಿತ್ಸೆಯನ್ನು ಪಡೆಯಬೇಕು ಬಾರದು ಎಂದು ನಿಮಗೆ ಸಲಹೆ ಕೊಟ್ಟಾರು. ನೀವು ಗಿಡಮೂಲಿಕೆಗಳನ್ನೋ, ವೈದ್ಯರು ಕೊಡುವ ಮದ್ದನ್ನೋ ಸೇವಿಸಬೇಕು ಇಲ್ಲವೆ ಯಾವ ಮದ್ದೂ ಅವಶ್ಯವಿಲ್ಲವೆಂದು ಆ ಹಿತೈಷಿಗಳು ಖಚಿತವಾಗಿ ನುಡಿಯಲೂಬಹುದು.

ಪರಿಗಣಿಸಿ: ನೀವು ಸ್ವೀಕರಿಸುವ ಯಾವುದೇ ಸಲಹೆಯು ನಂಬಲರ್ಹ ಮೂಲದಿಂದ ಬಂದಿದೆ ಎಂದು ಖಚಿತಪಡಿಸಿಕೊಳ್ಳಿ. ಕೊನೆಗೆ ವಿವೇಕಯುತ ಆಯ್ಕೆಯನ್ನು ನೀವೇ ಮಾಡಬೇಕು.

2. ನಿರುತ್ತೇಜನವು ರೋಗಿಗಳನ್ನು ಚಿಕಿತ್ಸೆ ಅಥವಾ ಔಷಧವನ್ನು ನಿಲ್ಲಿಸಿಬಿಡುವಂತೆ ಮಾಡಬಹುದು. ಏಕೆಂದರೆ ಅವರಿಗೆ ಎಳ್ಳಷ್ಟೂ ಗುಣವಾಗುತ್ತಿಲ್ಲ ಇಲ್ಲವೆ ಅಹಿತಕರ ಅಡ್ಡ ಪರಿಣಾಮಗಳೂ ಉಂಟಾಗುತ್ತಿವೆ ಎಂದು ತೋರಬಹುದು.

ಪರಿಗಣಿಸಿ: “ಯೋಚನೆ ಹೇಳುವವರಿಲ್ಲದೆ ಉದ್ದೇಶಗಳು ನೆರವೇರವು, ಬಹು ಮಂದಿ ಆಲೋಚನಾಪರರಿರುವಲ್ಲಿ ಈಡೇರುವವು.” (ಜ್ಞಾನೋಕ್ತಿ 15:22) ವೈದ್ಯ ಮತ್ತು ರೋಗಿಗಳ ನಡುವೆ ಒಳ್ಳೆ ಸಂವಾದ ಇರುವುದಾದರೆ ಒಂದು ಔಷಧೋಪಚಾರವು ಯಶಸ್ವಿಯಾಗುವ ಸಾಧ್ಯತೆಯಿದೆ. ನಿಮ್ಮ ಅನಿಸಿಕೆ ಅಥವಾ ರೋಗಲಕ್ಷಣಗಳನ್ನು ಮರೆಮಾಚದೆ ವೈದ್ಯರಿಗೆ ತಿಳಿಸಿರಿ. ಔಷಧಿಗಳನ್ನು ಬದಲಾಯಿಸಬೇಕೋ ಇಲ್ಲವೆ ಗುಣವಾಗುವ ತನಕ ಮುಂಚಿನ ಔಷಧಿಗಳನ್ನೇ ತಕ್ಕೊಳ್ಳಬೇಕೋ ಎಂದು ಕೇಳಿರಿ.

3. ಅತಿ ಆತ್ಮವಿಶ್ವಾಸವು ರೋಗಿಗಳನ್ನು ಸ್ವಲ್ಪ ಒಳ್ಳೇದಾದ ಕೂಡಲೇ ಥಟ್ಟನೆ ಔಷಧೋಪಚಾರವನ್ನು ನಿಲ್ಲಿಸಿಬಿಡುವಂತೆ ಮಾಡಬಲ್ಲದು. ಔಷಧಿಗಳನ್ನು ತಕ್ಕೊಳ್ಳಲಾರಂಭಿಸುವ ಮೊದಲು ತಾವೆಷ್ಟು ನಿಶ್ಶಕ್ತರಾಗಿದ್ದೆವೆಂಬುದನ್ನು ಅವರು ಮರೆತುಬಿಡುತ್ತಾರೆ.

ಪರಿಗಣಿಸಿ: ವೈದ್ಯರನ್ನು ಸಂಪರ್ಕಿಸದೆ ಔಷಧಿಗಳನ್ನು ಒಮ್ಮೆಲೆ ನಿಲ್ಲಿಸಿಬಿಡುವುದರಿಂದ ಗಂಭೀರ ಹಾಗೂ ಪ್ರಾಣಾಂತಿಕ ಪರಿಣಾಮಗಳೂ ಉಂಟಾಗಬಹುದು.

ಬೈಬಲ್‌ ಒಂದು ವೈದ್ಯಶಾಸ್ತ್ರದ ಪುಸ್ತಕವಲ್ಲದಿದ್ದರೂ ಅದರ ಕರ್ತೃ ನಮ್ಮ ನಿರ್ಮಾಣಿಕನಾದ ಯೆಹೋವ ದೇವರೇ. ಮುಂದಿನ ಲೇಖನವು, ಖಿನ್ನತೆಯಿಂದ ಬಳಲುವವರಿಗೆ ಮತ್ತು ಅವರ ಆರೈಕೆ ಮಾಡುವವರಿಗೆ ದೇವರ ವಾಕ್ಯವು ಯಾವ ಸಾಂತ್ವನ ಹಾಗೂ ಮಾರ್ಗದರ್ಶನವನ್ನು ಒದಗಿಸುತ್ತದೆ ಎಂಬುದನ್ನು ಚರ್ಚಿಸುತ್ತದೆ. (g 7/09)

[ಪಾದಟಿಪ್ಪಣಿ]

^ ಎಚ್ಚರ! ಯಾವುದೇ ನಿರ್ದಿಷ್ಟ ಚಿಕಿತ್ಸೆಯನ್ನು ಶಿಫಾರಸು ಮಾಡುವುದಿಲ್ಲ. ಪ್ರತಿಯೊಬ್ಬನೂ ವೈಯಕ್ತಿಕ ನಿರ್ಣಯವನ್ನು ಮಾಡುವ ಮುಂಚೆ ಚಿಕಿತ್ಸಾ ಆಯ್ಕೆಗಳನ್ನು ಜಾಗರೂಕತೆಯಿಂದ ಪರಿಶೀಲಿಸಬೇಕು.

[ಪುಟ 5ರಲ್ಲಿರುವ ಚೌಕ]

ಯಾವ ರೀತಿಯ ಖಿನ್ನತೆ?

ಯಾವುದೇ ನಿರ್ದಿಷ್ಟ ವೈದ್ಯಕೀಯ ಚಿಕಿತ್ಸೆಯಿಂದ ಗುಣವಾಗಬೇಕಾದರೆ ಒಬ್ಬ ರೋಗಿಯು ಯಾವ ರೀತಿಯ ಖಿನ್ನತೆಯಿಂದ ಬಳಲುತ್ತಿದ್ದಾನೆಂದು ಗೊತ್ತಿರಬೇಕು.

ಮೇಜರ್‌ ಡಿಪ್ರೆಷನ್‌ ಅಂದರೆ ಕಡು ಖಿನ್ನತೆಗೆ ಔಷಧೋಪಚಾರ ಸಿಗದಿದ್ದಲ್ಲಿ ಆರು ತಿಂಗಳ ವರೆಗೆ ಅಥವಾ ಅದಕ್ಕಿಂತ ಹೆಚ್ಚು ಸಮಯದ ವರೆಗೆ ರೋಗಲಕ್ಷಣಗಳು ಮುಂದರಿಯುತ್ತವೆ. ಅವು ಗಂಭೀರವಾಗಿದ್ದು ರೋಗಿಯ ಜೀವನದ ಹೆಚ್ಚಿನಾಂಶಗಳ ಮೇಲೆ ಪರಿಣಾಮಬೀರುವುವು.

ಬೈಪೋಲರ್‌ ಡಿಸ್‌ಆರ್ಡರ್‌ ಇದನ್ನು ಉನ್ಮಾದಗ್ರಸ್ತ ಖಿನ್ನತೆ ಎನ್ನುತ್ತಾರೆ. ಈ ರೋಗಿಗಳು ಭಾವನಾತ್ಮಕ ಅತಿರೇಕಗಳನ್ನು ಅನುಭವಿಸುತ್ತಾರೆ. ಒಮ್ಮೆ ಅತ್ಯುತ್ಸಾಹವನ್ನೂ ಇನ್ನೊಮ್ಮೆ ಅತಿಖಿನ್ನತೆಯನ್ನೂ ದೀರ್ಘಾವಧಿಯ ತನಕ ತೋರಿಸುತ್ತಾರೆ.—2004, ಜನವರಿ 8ರ ಎಚ್ಚರ! (ಇಂಗ್ಲಿಷ್‌) ಪತ್ರಿಕೆಯ “ಲಿವಿಂಗ್‌ ವಿತ್‌ ಮೂಡ್‌ ಡಿಸ್‌ಆರ್ಡರ್‌” ಎಂಬ ಲೇಖನ ನೋಡಿ.

ಡಿಸ್‌ಥೈಮಿಯಾ ಎಂಬುದು ಕಡು ಖಿನ್ನತೆಯಂತೆ ಶಕ್ತಿಗುಂದಿಸುವ ಕಾಯಿಲೆಯಲ್ಲ, ಆದರೂ ಅದರ ಕುಗ್ಗಿಸುವ ರೋಗಲಕ್ಷಣಗಳು ರೋಗಿಯನ್ನು ಯಥಾವತ್ತಾಗಿ ಕೆಲಸನಡೆಸಲು ಬಿಡುವುದಿಲ್ಲ. ಕೆಲವರು ಆಗಾಗ್ಗೆ ಕಡು ಖಿನ್ನತೆಯ ಲಕ್ಷಣಗಳನ್ನೂ ಅನುಭವಿಸಬಹುದು.

ಪೋಸ್ಟ್‌ಪಾರ್ಟಮ್‌ ಡಿಪ್ರೆಷನ್‌ ಪ್ರಸವಾನಂತರ ಅನೇಕ ತಾಯಂದಿರನ್ನು ಬಾಧಿಸುತ್ತದೆ. ಇದು ಶಕ್ತಿಗುಂದಿಸುವ ಭಾವನಾತ್ಮಕ ಸ್ಥಿತಿ.—2003, ಜೂನ್‌ 8ರ ಎಚ್ಚರ! (ಇಂಗ್ಲಿಷ್‌) ಪತ್ರಿಕೆಯ “ಅಂಡರ್‌ಸ್ಟ್ಯಾಂಡಿಂಗ್‌ ಪೋಸ್ಟ್‌ಪಾರ್ಟಮ್‌ ಡಿಪ್ರೆಷನ್‌” ಎಂಬ ಲೇಖನ ನೋಡಿ.

ಸೀಸನಲ್‌ ಅಫೆಕ್ಟಿವ್‌ ಡಿಸ್‌ಆರ್ಡರ್‌ ಶರತ್ಕಾಲ ಮತ್ತು ಚಳಿಗಾಲದಲ್ಲಿ ಸೂರ್ಯನ ಬೆಳಕು ಕಡಿಮೆಯಾಗಿರುವ ಪರಿಣಾಮವಾಗಿ ಈ ಖಿನ್ನತೆಯು ಸಂಭವಿಸುತ್ತದೆಂದು ಹೇಳುತ್ತಾರೆ. ವಸಂತಕಾಲ ಮತ್ತು ಬೇಸಗೆಯಲ್ಲಿ ಸಾಮಾನ್ಯವಾಗಿ ಅದು ಗುಣವಾಗುತ್ತದೆ.