ಖಿನ್ನತೆ ರೋಗಲಕ್ಷಣಗಳೇನು?
ಖಿನ್ನತೆ ರೋಗಲಕ್ಷಣಗಳೇನು?
“ಆಗ ನನಗೆ ಹನ್ನೆರಡು ವರ್ಷ. ಒಂದು ದಿನ ಬೆಳಿಗ್ಗೆ ಹಾಸಿಗೆಯಿಂದ ಎದ್ದಾಕ್ಷಣವೇ ಒಂಥರಾ ಬೇಸರ. ‘ನಾನಿವತ್ತೇ ಸಾಯುತ್ತೇನೋ ಏನೋ?’ ಎಂಬ ಭಯ ಮನಸ್ಸನ್ನು ಕದಡಿತು” ಎಂದು ನೆನಪಿಸಿಕೊಳ್ಳುತ್ತಾನೆ ಜೇಮ್ಸ್. * ಅವನು ಕಡು ಖಿನ್ನತೆಯಿಂದ (ಮೇಜರ್ ಡಿಪ್ರೆಷನ್) ಬಳಲುತ್ತಿದ್ದನು. 30 ವರ್ಷಗಳ ನಂತರ ಅವನನ್ನುವುದು: “ಭಾವನಾತ್ಮಕ ಮತ್ತು ಮಾನಸಿಕ ಒತ್ತಡದೊಂದಿಗೆ ನಾನು ಹೋರಾಡದೆ ಇದ್ದ ದಿನವೇ ಇರಲಿಲ್ಲ.” ನಿಷ್ಪ್ರಯೋಜಕನೆಂಬ ಭಾವನೆ ಅವನನ್ನೆಷ್ಟು ಕಾಡಿತ್ತೆಂದರೆ ತನ್ನ ಬಾಲ್ಯದ ಫೋಟೋಗಳನ್ನು ಕೂಡ ಹರಿದು ಬಿಸಾಡಿಬಿಟ್ಟಿದ್ದನು. “ನನ್ನನ್ನು ಯಾರೂ ನೆನಸುವುದು ಬೇಡವಾಗಿತ್ತು” ಎನ್ನುತ್ತಾನೆ ಅವನು.
ನಾವೆಲ್ಲರೂ ಒಂದಲ್ಲ ಒಂದು ತರದ ದುಃಖದುಮ್ಮಾನವನ್ನು ಅನುಭವಿಸುತ್ತೇವಾದ್ದರಿಂದ ಖಿನ್ನತೆ ಅಂದರೇನೆಂದು ನಮಗೆ ಗೊತ್ತಿದೆ ಎಂದೆನ್ನಬಹುದು. ಆದರೆ ತೀವ್ರ ಖಿನ್ನತೆಯ (ಕ್ಲಿನಿಕಲ್ ಡಿಪ್ರೆಷನ್) ವಿಷಯವೇ ಬೇರೆ. ಅದರ ರೋಗಲಕ್ಷಣಗಳೇನು?
ಪೀಡಕ ಆಸಾಮಿ
ತೀವ್ರ ಖಿನ್ನತೆ ಎಂಬುದು ಆಗಿಂದಾಗ್ಗೆ ಬರುವ ಸಾಮಾನ್ಯ ಬೇಸರವಲ್ಲ, ಅದೊಂದು ಗಂಭೀರ ಕಾಯಿಲೆ. ಇದರಿಂದ ಒಬ್ಬನಿಗೆ ದೈನಂದಿನ ಕೆಲಸ-ಕಾರ್ಯಗಳನ್ನೂ ಮಾಡಲು ಮನಸ್ಸಿಲ್ಲದೆ ಹೋಗುತ್ತದೆ.
ದೃಷ್ಟಾಂತಕ್ಕೆ ಆಲ್‌ವರೂ ಎಂಬವನು 40ಕ್ಕಿಂತಲೂ ಹೆಚ್ಚು ವರ್ಷಗಳಿಂದ “ಭಯ, ಗೊಂದಲ, ಬೇಗುದಿ, ತೀವ್ರ ದುಃಖ”ದಿಂದ ಬಳಲಿದ್ದ. ಅವನು ಹೇಳುವುದು: “ಬೇರೆಯವರು ಏನಂದರೂ ಅದು ನನ್ನ ಮನಸ್ಸನ್ನು ಕಸಿವಿಸಿಗೊಳಿಸುತ್ತಿತ್ತು. ಏನಾದರೂ ಒಂದು ತಪ್ಪಾದರೆ ಅದಕ್ಕೆ ನಾನೇ ಹೊಣೆ ಎಂದು ನನಗನಿಸುತ್ತಿತ್ತು.” ಅವನು ಖಿನ್ನತೆಯನ್ನು ತನ್ನ ಮಾತುಗಳಲ್ಲಿ ವಿವರಿಸುತ್ತಾ ಅಂದದ್ದು: “ಸಹಿಸಲಾಗದ ನೋವು ಆದರೆ ಎಲ್ಲಿ ಅಂತ ಗೊತ್ತಿಲ್ಲ, ತೀವ್ರ ಭಯ ಆದರೆ ಯಾಕೆ ಅಂತ ಗೊತ್ತಿಲ್ಲ. ತೀರಾ ಕೆಟ್ಟದ್ದೆಂದರೆ, ಅದರ ಬಗ್ಗೆ ಬೇರೆಯವರಿಗೆ ಹೇಳುವುದೇ ಬೇಡ ಎಂಬ ಅನಿಸಿಕೆ.” ಈಗಲಾದರೋ ಆಲ್‌ವರೂಗೆ ಒಂದಿಷ್ಟು ಉಪಶಮನ ಸಿಕ್ಕಿದೆ. ಆ ರೋಗಲಕ್ಷಣಗಳ ಕಾರಣ ಅವನಿಗೆ ತಿಳಿದಿದೆ. “ನನಗಿರುವ ಅದೇ ಸಮಸ್ಯೆ ಬೇರೆಯವರಿಗೂ ಇದೆ ಎಂದು ತಿಳಿದಾಗ ನನಗೆ ತುಸು ನೆಮ್ಮದಿಯಾಯಿತು” ಎಂದವನು ಹೇಳುತ್ತಾನೆ.
ಬ್ರಸಿಲ್‌ನ 49 ವಯಸ್ಸಿನ ಮಾರೀಯ ಸಹ ಖಿನ್ನತೆಯಿಂದ ಬಳಲುತ್ತಿದ್ದಳು. ಇದು ಅವಳಲ್ಲಿ ನಿದ್ರಾಹೀನತೆ, ನೋವು, ಮುಂಗೋಪ, ಮತ್ತು “ನಿರಂತರ ಬೇಸರಿಕೆಯನ್ನು” ಹುಟ್ಟಿಸಿತು. ವೈದ್ಯಕೀಯ ತಪಾಸಣೆಯಿಂದ ತನ್ನ ರೋಗಸ್ಥಿತಿಗೆ ಖಿನ್ನತೆಯೇ ಕಾರಣ ಎಂದು ತಿಳಿದಾಗ ಅವಳಿಗೆ ಸ್ವಲ್ಪ ಸಮಾಧಾನವಾಯಿತು. ಆದರೂ ಅವಳು ವಿವರಿಸುವುದು: “ಆ ಬಳಿಕ ನನ್ನ ಕಳವಳ ಇನ್ನೂ ಹೆಚ್ಚಾಯಿತು ಏಕೆಂದರೆ, ಖಿನ್ನತೆಯನ್ನು ಅರ್ಥಮಾಡುವವರು ಕೊಂಚವೇ ಜನ. ಮತ್ತು ಅದು ಸಾಮಾಜಿಕ ನಿಂದನೆಗಳಿಗೂ ಕಾರಣವಾಗಿದೆ.”
ಬೇಸರ ಮಾಡಲೇಬಾರದೊ?
ಖಿನ್ನತೆಗೆ ಕೆಲವೊಮ್ಮೆ ನಿಜ ಕಾರಣಗಳಿರುತ್ತವೆ. ಆದರೂ ಅದು ಹೆಚ್ಚಾಗಿ ಯಾವ ಎಚ್ಚರಿಕೆಯನ್ನೂ ಕೊಡದೆ ಒಬ್ಬರ ಜೀವಿತವನ್ನು ಆಕ್ರಮಿಸುತ್ತದೆ. “ಥಟ್ಟನೆ ನಿಮ್ಮ ಜೀವಿತವು ಯಾವ ಕಾರಣವೂ ಇಲ್ಲದೆ ಬೇಸರದ ಕಾರ್ಮೋಡದಿಂದ ಕವಿದುಬಿಡುತ್ತದೆ. ವಾಸ್ತವದಲ್ಲಿ ನಿಮ್ಮ ಪರಿಚಿತರಾರೂ ಸತ್ತಿರುವುದಿಲ್ಲ ಮತ್ತು ದುಃಖದ ಘಟನೆಗಳಾವುವೂ ನಡೆದಿರುವುದಿಲ್ಲ. ಆದರೂ ನಿಮ್ಮನ್ನು ನಿರುತ್ಸಾಹ, ನಿರಾಸಕ್ತಿ ಕಾಡುತ್ತಿರುತ್ತದೆ. ಏನೇ ಮಾಡಿದರೂ ಕವಿದ ಕಾರ್ಮೋಡಗಳು ಕದಲುವುದಿಲ್ಲ. ನೀವು ನಿರಾಶೆಯ ಮಡುವಿನಲ್ಲಿ ಕಂಗೆಟ್ಟು ಹೋಗುತ್ತೀರಿ. ಏಕೆಂದೇ ನಿಮಗೆ ಗೊತ್ತಿರುವುದಿಲ್ಲ” ಎಂದು ವಿವರಿಸುತ್ತಾನೆ ದಕ್ಷಿಣ ಆಫ್ರಿಕದ ರಿಚರ್ಡ್.
ಖಿನ್ನತೆಗಾಗಿ ಮುಜುಗರಪಡುವ ಆವಶ್ಯಕತೆ ಇಲ್ಲ. ಬ್ರಸಿಲ್‌ನ ಆ್ಯನ ಎಂಬವಳು ತನಗೆ ಖಿನ್ನತೆಯ ಕಾಯಿಲೆಯಿದೆ ಎಂದು ಗೊತ್ತಾದಾಗ ನಾಚಿಕೆಪಟ್ಟಳು. “ಅದಾಗಿ ಈಗ ಎಂಟು ವರ್ಷಗಳು ಕಳೆದಿವೆ, ಆದರೂ ನನಗಿನ್ನೂ ಮುಜುಗರ” ಎಂದಳಾಕೆ. ಮುಖ್ಯವಾಗಿ ಭಾವನಾತ್ಮಕ ಬೇಗುದಿಯನ್ನು ತಾಳಿಕೊಳ್ಳಲು ಅವಳಿಗೆ ಬಹಳ ಕಷ್ಟ. ಅವಳು ವಿವರಿಸುವುದು “ಅದು ಕೆಲವೊಮ್ಮೆ ಎಷ್ಟು ತೀಕ್ಷ್ಣವಾಗಿರುತ್ತದೆಂದರೆ ನನ್ನ ದೇಹದ ಕಣಕಣವೆಲ್ಲಾ ನೋವಿನಿಂದ ಜರ್ಜರಿತಗೊಳ್ಳುತ್ತವೆ.” ಆ ಸಮಯದಲ್ಲಿ ಮಂಚದಿಂದ ಏಳಲೂ ಅವಳಿಗೆ ಶಕ್ತಿಯಿರುವುದಿಲ್ಲ. ಆ್ಯನಳು ತನ್ನ ಅಳುವನ್ನು ತಡೆಯಲಾಗದ ಸಮಯಗಳೂ ಇವೆ. “ನಾನು ಗಟ್ಟಿಯಾಗಿ ಅಳುತ್ತಿದ್ದದರಿಂದ ತೀರ
ಬಳಲಿ ಬೆಂಡಾಗಿ ಜೀವವೇ ಹಿಂಡಿಹೋಗುತ್ತದೋ ಎಂಬಂತೆ ಭಾಸವಾಗುತ್ತಿತ್ತು.”ಖಿನ್ನತೆ ಕಾಯಿಲೆಯ ಜನರು ಅಪಾಯಕರವಾಗಿ ಕುಗ್ಗಿದ ಸ್ಥಿತಿಗಿಳಿಯುತ್ತಾರೆ ಎಂದು ಬೈಬಲ್ ಒಪ್ಪುತ್ತದೆ. ಉದಾಹರಣೆಗೆ, ಒಬ್ಬ ಮನುಷ್ಯನ ಕುರಿತು ದೇವರ ಸೇವಕನಾದ ಅಪೊಸ್ತಲ ಪೌಲನು ಕಳಕಳಿಯಿಂದ ಹೇಳಿದ್ದು: “ಅವನು ವಿಪರೀತವಾಗಿ ದುಃಖಿತನಾಗಿರುವ ಕಾರಣ [ವಿಪರೀತ ಖಿನ್ನತೆಯಿಂದಾಗಿ] ಹೇಗೋ ಕಬಳಿಸಲ್ಪಟ್ಟಾನು.” (2 ಕೊರಿಂಥ 2:7) ಖಿನ್ನರಾದ ಕೆಲವು ಜನರು ಎಷ್ಟು ಕಂಗೆಟ್ಟು ಹೋಗುತ್ತಾರೆಂದರೆ ‘ಸತ್ತರೆ ಒಳ್ಳೆಯದು’ ಎಂದು ಅವರು ಬಯಸುತ್ತಾರೆ. ಪ್ರವಾದಿಯಾದ ಯೋನನು ಹೇಳಿದಂತೆ “ಬದುಕುವದಕ್ಕಿಂತ ಸಾಯುವದೇ ಲೇಸು” ಎಂದು ಅನೇಕರಿಗೆ ಅನಿಸುತ್ತದೆ.—ಯೋನ 4:3.
ಖಿನ್ನರಾದವರು ತಮ್ಮ ಕುಗ್ಗಿದ ಮನೋಸ್ಥಿತಿಯ ನಿವಾರಣೆ ಮತ್ತು ನಿಭಾವಣೆಗೆ ಏನು ಮಾಡಬಲ್ಲರು? (g 7/09)
[ಪಾದಟಿಪ್ಪಣಿ]
^ ಈ ಲೇಖನಮಾಲೆಯಲ್ಲಿ ಹೆಸರುಗಳು ಬದಲಾಗಿವೆ.
[ಪುಟ 3ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಥಟ್ಟನೆ ನಿಮ್ಮ ಜೀವಿತವು ಯಾವ ಕಾರಣವೂ ಇಲ್ಲದೆ ಬೇಸರದ ಕಾರ್ಮೋಡದಿಂದ ಕವಿದುಬಿಡುತ್ತದೆ”