ನಂಬಿಕೆಯನ್ನು ಬದಲಾಯಿಸುವುದು ತಪ್ಪೋ?
ಬೈಬಲಿನ ದೃಷ್ಟಿಕೋನ
ನಂಬಿಕೆಯನ್ನು ಬದಲಾಯಿಸುವುದು ತಪ್ಪೋ?
ಅವ್ತಾರ್ ಎಂಬಾಕೆ ಬೈಬಲನ್ನು ಅಭ್ಯಾಸಿಸಲು ಆರಂಭಿಸಿದಾಗ ಅವಳ ಸಿಖ್ ಧರ್ಮೀಯ ಪರಿವಾರಕ್ಕೆ ಧಕ್ಕೆ ಉಂಟಾಯಿತು. ಅವಳನ್ನುವುದು: “ಧಾರ್ಮಿಕ ನಂಬಿಕೆಗಳನ್ನು ಬದಲಾಯಿಸುವವರನ್ನು ನಮ್ಮ ಸ್ವದೇಶದಲ್ಲಿ ಸಮಾಜದಿಂದಲೇ ಬಹಿಷ್ಕರಿಸುತ್ತಾರೆ. ನಮ್ಮ ಹೆಸರುಗಳಿಗೂ ಧರ್ಮ ಸಂಬಂಧವಾದ ಅರ್ಥಗಳಿವೆ. ಹೊಸ ನಂಬಿಕೆಯ ಸ್ವೀಕಾರ ನಮ್ಮ ವ್ಯಕ್ತಿಪರಿಚಯದ ತಿರಸ್ಕಾರ ಮಾತ್ರವಲ್ಲ ನಮ್ಮ ಕುಟುಂಬಕ್ಕೆ ಅವಹೇಳನ.”
ಅವ್ತಾರ್ ಕೊನೆಗೆ ಯೆಹೋವನ ಸಾಕ್ಷಿಯಾದಳು. ಅವಳು ತನ್ನ ನಂಬಿಕೆಯನ್ನು ಬದಲಾಯಿಸಿದ್ದು ತಪ್ಪೋ? ಪ್ರಾಯಶಃ ಅವಳ ಕುಟುಂಬದವರಂತೆ ನೀವೂ ಅದನ್ನು ಒಪ್ಪಲಿಕ್ಕಿಲ್ಲ. ಧರ್ಮವು ನಿಮ್ಮ ಕುಟುಂಬ ಮತ್ತು ಸಂಸ್ಕೃತಿಯ ಅವಿಭಾಜ್ಯ ಭಾಗ, ಅದನ್ನು ಬದಲಾಯಿಸಲೇಬಾರದು ಎಂದು ನಿಮಗೂ ಅನಿಸಬಹುದು.
ಕುಟುಂಬದ ಕಡೆಗೆ ಗೌರವವಿರುವುದು ಪ್ರಾಮುಖ್ಯ. “ಹೆತ್ತ ತಂದೆಯ ಮಾತಿಗೆ ಕಿವಿಗೊಡು” ಎನ್ನುತ್ತದೆ ಬೈಬಲ್. (ಜ್ಞಾನೋಕ್ತಿ 23:22) ಆದರೆ ನಮ್ಮ ನಿರ್ಮಾಣಿಕನ ಮತ್ತು ಆತನ ಉದ್ದೇಶದ ಕುರಿತ ಸತ್ಯವನ್ನು ಹುಡುಕುವುದು ನಮ್ಮ ಕುಟುಂಬಕ್ಕಿಂತಲೂ ಹೆಚ್ಚು ಮಹತ್ವದ್ದು. (ಯೆಶಾಯ 55:6) ಆ ಹುಡುಕಾಟವು ಶಕ್ಯವೋ? ಹಾಗಿದ್ದಲ್ಲಿ ಅದು ಎಷ್ಟು ಪ್ರಾಮುಖ್ಯ?
ಧಾರ್ಮಿಕ ಸತ್ಯಕ್ಕಾಗಿ ಹುಡುಕಾಟ
ಲೋಕದ ಧರ್ಮಗಳು ಭಿನ್ನ ಭಿನ್ನ ನಂಬಿಕೆಗಳನ್ನು ಕಲಿಸುತ್ತವೆ. ಆ ಬೋಧನೆಗಳೆಲ್ಲವೂ ಸತ್ಯವಾಗಿರಸಾಧ್ಯವಿಲ್ಲ ಎಂಬುದು ತರ್ಕಬದ್ಧ. ಪರಿಣಾಮವಾಗಿ ಅನೇಕ ಜನರಿಗೆ ಬೈಬಲ್ ಅನ್ನುವ ಪ್ರಕಾರ “ದೇವರ ವಿಷಯದಲ್ಲಿ ಹುರುಪಿದೆ . . . ಆದರೆ ಅವರ ಹುರುಪು ನಿಷ್ಕೃಷ್ಟ ಜ್ಞಾನಕ್ಕನುಸಾರವಾದುದಲ್ಲ.” (ರೋಮನ್ನರಿಗೆ 10:2) ಆದ್ದರಿಂದ 1 ತಿಮೊಥೆಯ 2:4ರಲ್ಲಿ ದಾಖಲೆಯಾಗಿರುವ ಪ್ರಕಾರ “ಎಲ್ಲ ರೀತಿಯ ಜನರು ರಕ್ಷಣೆಯನ್ನು ಹೊಂದಬೇಕು ಮತ್ತು ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಬೇಕು” ಎಂಬುದೇ ದೇವರ ಚಿತ್ತವೆಂದು ಅಪೊಸ್ತಲ ಪೌಲನು ಹೇಳುತ್ತಾನೆ. ಅಂಥಾ ನಿಷ್ಕೃಷ್ಟ ಜ್ಞಾನವನ್ನು ನಾವು ಕಂಡುಕೊಳ್ಳುವುದು ಹೇಗೆ?
ಬೈಬಲನ್ನು ಪರೀಕ್ಷಿಸಲಿಕ್ಕಾಗಿರುವ ಕಾರಣಗಳನ್ನು ಪರಿಗಣಿಸಿರಿ. ದೇವರಿಂದ ಪ್ರೇರಿತನಾದ ಪೌಲನು ಬರೆದದ್ದು: “ಇಡೀ ಶಾಸ್ತ್ರಗ್ರಂಥವು ದೇವರಿಂದ ಪ್ರೇರಿತವಾಗಿದೆ ಮತ್ತು ಬೋಧಿಸುವುದಕ್ಕೂ . . . ಉಪಯುಕ್ತವಾಗಿದೆ.” (2 ತಿಮೊಥೆಯ 3:16) ಸತ್ಯಕ್ಕಾಗಿ ನಿಮ್ಮ ಹುಡುಕಾಟದಲ್ಲಿ ಬೈಬಲ್ನ ಸತ್ಯತೆಗೆ ಇರುವ ರುಜುವಾತನ್ನು ಪರೀಕ್ಷಿಸಿರಿ. ಅದರ ಸರಿಸಾಟಿಯಿಲ್ಲದ ಅಪಾರ ಜ್ಞಾನ, ಚಾರಿತ್ರಿಕ ನಿಷ್ಕೃಷ್ಟತೆ, ನೆರವೇರಿದ ಪ್ರವಾದನೆ ಇವುಗಳನ್ನು ನೀವೇ ಪರಿಶೋಧಿಸಿ ನೋಡಿ.
ಎಲ್ಲಾ ಧರ್ಮಗಳು ದೇವರ ಕಡೆಗೇ ನಡಿಸುತ್ತವೆ ಎಂಬುದು ಸಾಮಾನ್ಯ ನಂಬಿಕೆ. ಆದರೆ ಬೈಬಲ್ ಅದರ ಓದುಗರಿಗೆ ತಾವು ಕೇಳಿಸಿಕೊಳ್ಳುವುದನ್ನೆಲ್ಲಾ ನಂಬಬಾರದು ಎನ್ನುತ್ತದೆ. ಬದಲಿಗೆ “ಆ ಪ್ರೇರಿತ ನುಡಿಗಳು ದೇವರಿಂದ ಉಂಟಾದವುಗಳಾಗಿವೆಯೋ ಎಂದು ಕಂಡುಕೊಳ್ಳಲು ಅವುಗಳನ್ನು ಪರೀಕ್ಷಿಸಿರಿ” ಎಂದು ಸಲಹೆ ಕೊಡುತ್ತದೆ. (1 ಯೋಹಾನ 4:1) ಉದಾಹರಣೆಗೆ, ದೈವಿಕ ಮೂಲದ ಯಾವುದೇ ಬೋಧನೆಯು ಆತನ ಪ್ರಧಾನ ಗುಣ ಪ್ರೀತಿಯೂ ಸೇರಿದಂತೆ ಆತನ ವ್ಯಕ್ತಿತ್ವಕ್ಕೂ ಹೊಂದಿಕೆಯಲ್ಲಿರಲೇಬೇಕು.—1 ಯೋಹಾನ 4:8.
ತನ್ನನ್ನು ‘ನಿಜವಾಗಿಯೂ ಕಂಡುಹಿಡಿಯುವಂತೆ’ ದೇವರು ಬಯಸುತ್ತಾನೆಂದು ಬೈಬಲ್ ನಮಗೆ ಆಶ್ವಾಸನೆ ಕೊಡುತ್ತದೆ. (ಅ. ಕಾರ್ಯಗಳು 17:26, 27) ನಾವು ಸತ್ಯಕ್ಕಾಗಿ ಹುಡುಕುವಂತೆ ನಮ್ಮ ನಿರ್ಮಾಣಿಕನು ಬಯಸುತ್ತಾನೆ. ಆದ್ದರಿಂದ ನಾವು ಕಂಡುಕೊಳ್ಳುವ ಪುರಾವೆಗನುಸಾರ ಕ್ರಿಯೆಗೈಯಬೇಕು. ಅದಕ್ಕಾಗಿ ನಮ್ಮ ಧಾರ್ಮಿಕ ನಂಬಿಕೆಗಳನ್ನು ಬದಲಾಯಿಸಬೇಕಾದರೂ ಅದು ತಪ್ಪಾಗಲಾರದು. ಆದರೆ ಇದರಿಂದಾಗಿ ಏಳಬಹುದಾದ ಸಮಸ್ಯೆಗಳ ಕುರಿತೇನು?
ಕುಟುಂಬ ನಿಷ್ಠೆಯ ಸಮಚಿತ್ತ ನೋಟ?
ಜನರು ತಮ್ಮ ನಂಬಿಕೆಗಳನ್ನು ಬದಲಾಯಿಸುವಾಗ ಇನ್ನು ಮುಂದೆ ನಿರ್ದಿಷ್ಟ ಧಾರ್ಮಿಕ ರೀತಿರಿವಾಜುಗಳಲ್ಲಿ ಅಥವಾ ಹಬ್ಬಗಳಲ್ಲಿ ತಾವು ಭಾಗವಹಿಸಲಾರೆವು ಎಂಬ ತೀರ್ಮಾನಕ್ಕೆ ಬರಬಹುದು. ಇದರಿಂದಾಗಿ ಕುಟುಂಬದಲ್ಲಿ ಮನಸ್ತಾಪಗಳು ಎದ್ದೇಳುವುದು ಸಹಜ. ಯೇಸು ಇದನ್ನು ಒಪ್ಪಿದ್ದನು. ಅವನು ತನ್ನ ಹಿಂಬಾಲಕರಿಗೆ ಹೇಳಿದ್ದು: “ಮಗನಿಗೂ ಅವನ ತಂದೆಗೂ, ಮಗಳಿಗೂ ಅವಳ ತಾಯಿಗೂ, ಯುವ ಪತ್ನಿಗೂ ಅವಳ ಅತ್ತೆಗೂ ಒಡಕನ್ನು ಉಂಟುಮಾಡಲು ನಾನು ಬಂದೆನು.” (ಮತ್ತಾಯ 10:35) ಬೈಬಲ್ ಬೋಧನೆಗಳು ಕುಟುಂಬದಲ್ಲಿ ಅನಿವಾರ್ಯ ಒಡಕನ್ನುಂಟುಮಾಡಲಿಕ್ಕಾಗಿ ರಚಿಸಲ್ಪಟ್ಟಿವೆ ಎಂಬ ಅರ್ಥದಲ್ಲಿ ಯೇಸು ಇದನ್ನು ನುಡಿದನೋ? ಖಂಡಿತ ಇಲ್ಲ. ಒಬ್ಬನು ತನ್ನ ನಂಬಿಕೆಗಿಂತ ಬೇರೆಯಾದ ವಿಷಯಕ್ಕಾಗಿ ದೃಢ ನಿಲುವನ್ನು ತಕ್ಕೊಳ್ಳುವಾಗ ಅವನ ಮನೆಮಂದಿ ಹೇಗೆ ನಕಾರಾತ್ಮಕವಾಗಿ ಪ್ರತಿಕ್ರಿಯಿಸುವರು ಎಂಬುದನ್ನು ಯೇಸು ಬರೇ ಮುಂಗಂಡನಷ್ಟೆ.
ಹಾಗೆ ದೃಢ ನಿಲುವನ್ನು ತಕ್ಕೊಳ್ಳುವಾಗ ಕುಟುಂಬದಲ್ಲಿ ಸಂಘರ್ಷಣೆಯಾದರೆ ಆಗೇನು? ನಂಬಿಕೆಯನ್ನು ಬದಲಾಯಿಸಲೇ ಬಾರದೋ? ಮಕ್ಕಳು ತಮ್ಮ ತಂದೆತಾಯಿಗೆ ವಿಧೇಯರಾಗಿರಬೇಕು ಮತ್ತು ಹೆಂಡತಿಯರು ತಮ್ಮ ಗಂಡಂದಿರಿಗೆ ಅಧೀನರಾಗಿರಬೇಕೆಂದು ಬೈಬಲ್ ಕಲಿಸುತ್ತದೆ. (ಎಫೆಸ 5:22; 6:1) ಆದರೂ, ದೇವರನ್ನು ಪ್ರೀತಿಸುವವರು “ಮನುಷ್ಯರಿಗಿಂತ ಹೆಚ್ಚಾಗಿ ಪ್ರಭುವಾಗಿರುವ ದೇವರಿಗೆ ವಿಧೇಯರಾಗುವುದು ಅಗತ್ಯ” ಎಂದೂ ಅದು ಬೋಧಿಸುತ್ತದೆ. (ಅ. ಕಾರ್ಯಗಳು 5:29) ಹೀಗೆ ದೇವರ ಕಡೆಗೆ ನಿಮಗಿರುವ ನಿಷ್ಠೆಯ ಕಾರಣ ಕೆಲವೊಮ್ಮೆ ನೀವು ಮಾಡುವ ನಿರ್ಣಯವು ನಿಮ್ಮ ಮನೆಮಂದಿಗೆ ಇಷ್ಟವಾಗದೇ ಹೋದೀತು.
ಸತ್ಯ ಮತ್ತು ಸುಳ್ಳು ಬೋಧನೆಗಳ ನಡುವಣ ಸ್ಪಷ್ಟವಾದ ವ್ಯತ್ಯಾಸವನ್ನು ಬೈಬಲ್ ತೋರಿಸುತ್ತದಾದರೂ ಅದಕ್ಕೆ ಪ್ರತಿಕ್ರಿಯಿಸುವ ವಿಷಯದಲ್ಲಿ ಪ್ರತಿಯೊಬ್ಬರು ತಮ್ಮ ಸ್ವಂತ ನಿರ್ಣಯವನ್ನು ಮಾಡುವಂತೆ ದೇವರು ಅನುಮತಿಸುತ್ತಾನೆ. (ಧರ್ಮೋಪದೇಶಕಾಂಡ 30:19, 20) ತಮಗೆ ಸ್ವೀಕೃತವಲ್ಲದ ಆರಾಧನೆ ನಡೆಸುವಂತೆ ಯಾರೂ ಯಾರನ್ನೂ ಬಲವಂತಪಡಿಸಬಾರದು ಅಥವಾ ತನ್ನ ಕುಟುಂಬ ಮತ್ತು ನಂಬಿಕೆಗಳ ನಡುವೆ ಒಂದನ್ನು ಆರಿಸುವಂತೆ ಒತ್ತಾಯಿಸಬಾರದು. ಬೈಬಲ್ ಅಧ್ಯಯನವು ಕುಟುಂಬದ ಒಡಕಿಗೆ ಕಾರಣವಾಗುತ್ತದೋ? ನಿಶ್ಚಯವಾಗಿ ಇಲ್ಲ. ವಾಸ್ತವದಲ್ಲಿ, ಬೇರೆ ಬೇರೆ ಧಾರ್ಮಿಕ ನಂಬಿಕೆಗಳನ್ನು ಅನುಸರಿಸುವ ಗಂಡ ಹೆಂಡತಿ ಒಂದು ಕುಟುಂಬವಾಗಿ ಸಹಬಾಳ್ವೆಯನ್ನು ನಡಿಸುವಂತೆ ಬೈಬಲ್ ಉತ್ತೇಜಿಸುತ್ತದೆ. —1 ಕೊರಿಂಥ 7:12, 13.
ಭಯ ನಿವಾರಣೆ
ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್ ಅಧ್ಯಯನಿಸಿದ್ದಲ್ಲಿ ಸಮಾಜವು ಹೇಗೆ ಪ್ರತಿಕ್ರಿಯಿಸುವುದು ಎಂದು ನೀವು ಭಯಪಡಬಹುದು. ಮರಿಯಮ್ಮ ಎಂಬಾಕೆ ಹೇಳುವುದು: “ನನಗೆ ತಕ್ಕದಾದ ಗಂಡ ಸಿಕ್ಕಲಿಕ್ಕಿಲ್ಲ ಎಂದು ನನ್ನ ಕುಟುಂಬ ಚಿಂತಿಸಿತ್ತಾದ್ದರಿಂದ ಅವರು ಬೈಬಲ್ ಅಧ್ಯಯನ ಮಾಡಬಾರದೆಂದು ನನ್ನನ್ನು ವಿರೋಧಿಸಿದರು.” ಯೆಹೋವ ದೇವರಲ್ಲಿ ತನ್ನ ಭರವಸೆಯನ್ನಿಟ್ಟು ಮರಿಯಮ್ಮ ಅಧ್ಯಯನವನ್ನು ಮುಂದುವರಿಸಿದಳು. (ಕೀರ್ತನೆ 37:3, 4) ನೀವೂ ಹಾಗೆಯೇ ಮಾಡಬಲ್ಲಿರಿ. ಭವಿಷ್ಯದ ಕುರಿತು ಭಯಪಡುವ ಬದಲು ಪ್ರಯೋಜನಗಳನ್ನು ಪರಿಗಣಿಸಿರಿ. ಬೈಬಲ್ ಸಂದೇಶವು ಜನರ ಜೀವಿತ ಮತ್ತು ವ್ಯಕ್ತಿತ್ವಗಳ ಗುಣಮಟ್ಟವನ್ನು ಉತ್ತಮಗೊಳಿಸುತ್ತದೆ. ಜನರು ತಮ್ಮ ಕುಟುಂಬಕ್ಕಾಗಿ ನಿಸ್ವಾರ್ಥ ಪ್ರೀತಿಯನ್ನು ತೋರಿಸಲು ಕಲಿಯುತ್ತಾರೆ. ಬೈಗುಳ, ಶಾರೀರಿಕ ಹಿಂಸಾಚಾರ, ಮದ್ಯಸಾರದ ಮತ್ತು ಮಾದಕದ್ರವ್ಯಗಳ ದುರುಪಯೋಗದಂಥ ದುಶ್ಚಟಗಳನ್ನೂ ಹೋಗಲಾಡಿಸಬಹುದು. (2 ಕೊರಿಂಥ 7:1) ನಿಷ್ಠೆ, ಪ್ರಾಮಾಣಿಕತೆ ಮತ್ತು ಶ್ರಮಶೀಲತೆಯಂಥ ಸದ್ಗುಣಗಳನ್ನು ಬೈಬಲ್ ಪ್ರವರ್ಧಿಸುತ್ತದೆ. (ಜ್ಞಾನೋಕ್ತಿ 31:10-31; ಎಫೆಸ 4:24, 28) ಬೈಬಲನ್ನು ಅಧ್ಯಯನ ಮಾಡಿ ಅದರ ಬೋಧನೆಗಳನ್ನು ನಿಮ್ಮ ಜೀವನದಲ್ಲಿ ಅನ್ವಯಿಸುವುದರಿಂದ ಸಿಗುವ ಪ್ರಯೋಜನಗಳನ್ನು ಏಕೆ ಸವಿದುನೋಡಬಾರದು? (g 7/09)
ನೀವೇನು ಹೇಳುತ್ತೀರಿ?
◼ ನಿಮ್ಮ ಧಾರ್ಮಿಕ ನಂಬಿಕೆಗಳನ್ನು ಏಕೆ ಪರೀಕ್ಷಿಸಿ ನೋಡಬೇಕು?—ಜ್ಞಾನೋಕ್ತಿ 23:23; 1 ತಿಮೊಥೆಯ 2:3, 4.
◼ ಸತ್ಯ ಬೋಧನೆಗಳನ್ನು ನೀವು ಗುರುತಿಸುವುದು ಹೇಗೆ?—2 ತಿಮೊಥೆಯ 3:16; 1 ಯೋಹಾನ 4:1.
◼ ಕುಟುಂಬದಿಂದ ಬರುವ ವಿರೋಧವು ಬೈಬಲ್ ಅಧ್ಯಯನ ಮಾಡದಂತೆ ನಿಮ್ಮನ್ನು ತಡೆಯಬೇಕೋ?—ಅ. ಕಾರ್ಯಗಳು 5:29.
[ಪುಟ 31ರಲ್ಲಿರುವ ಸಂಕ್ಷಿಪ್ತ ವಿವರಣೆ]
ಬೈಬಲ್ ಸಂದೇಶವು ಜನರ ಜೀವಿತ ಮತ್ತು ವ್ಯಕ್ತಿತ್ವಗಳ ಗುಣಮಟ್ಟವನ್ನು ಉತ್ತಮಗೊಳಿಸುತ್ತದೆ
[ಪುಟ 31ರಲ್ಲಿರುವ ಚಿತ್ರ]
ಮರಿಯಮ್ಮ ಮತ್ತು ಆಕೆಯ ಗಂಡ