ಮಕ್ಕಳ ಜೀವಿತಕ್ಕೆ ಒಳ್ಳೆಯ ಆರಂಭ ಕೊಡಿ
ಮಕ್ಕಳ ಜೀವಿತಕ್ಕೆ ಒಳ್ಳೆಯ ಆರಂಭ ಕೊಡಿ
ಕೆನಡದ ಎಚ್ಚರ! ಲೇಖಕರಿಂದ
◼ “ಟೆಲಿವಿಷನ್ ಒಂದು ಆಶ್ಚರ್ಯಕರ ಕಲಿಕಾ ಸಾಧನವಾಗಿರಬಲ್ಲದು” ಎನ್ನುತ್ತದೆ ದ ನ್ಯೂ ಯಾರ್ಕ್ ಟೈಮ್ಸ್ನ ಒಂದು ವರದಿ. ಆದರೂ “ಟಿವಿ ಮುಂದೆ ಗಂಟೆಗಟ್ಟಲೆ ನಿಶ್ಚೇತವಾಗಿ ಕಾಲಕಳೆಯುವುದು ಮಕ್ಕಳ ದೈಹಿಕ, ಮಾನಸಿಕ ಹಾನಿಗೆ ಕಾರಣ.” ಅದು ಸೃಜನಾತ್ಮಕ, ಕಲಿಕೆ, ಸಮಾಜದಲ್ಲಿ ಬೆರೆಯುವ ಸದವಕಾಶಗಳನ್ನು ಅವರಿಂದ ಅಪಹರಿಸುತ್ತದೆ.
2,500 ಮಕ್ಕಳ ವೀಕ್ಷಣ ಹವ್ಯಾಸಗಳನ್ನು ಅಧ್ಯಯನಮಾಡಿದ ನಂತರ ಅಮೆರಿಕದ ವಾಷಿಂಗ್ಟನ್ನ ಸೀಯಾಟಲ್ನಲ್ಲಿರುವ ಮಕ್ಕಳ ಆಸ್ಪತ್ರೆಯ ಸಂಶೋಧಕರು ಇದನ್ನು ಗಮನಿಸಿದರೆಂದು ಟೈಮ್ಸ್ ವಾರ್ತಾಪತ್ರಿಕೆ ಹೇಳಿತು: “ಒಂದರಿಂದ ಮೂರು ವರ್ಷದ ಪುಟಾಣಿಗಳು ಎಷ್ಟು ಹೆಚ್ಚಾಗಿ ಟಿವಿ ವೀಕ್ಷಿಸಿದರೋ ಅಷ್ಟು ಹೆಚ್ಚಾಗಿ ತಮ್ಮ ಏಳನೇ ವಯಸ್ಸಿನಲ್ಲಿ ಏಕಾಗ್ರತೆಯ ಸಮಸ್ಯೆಗಳನ್ನು ಎದುರಿಸಿದರು.” ಅಂಥ ಮಕ್ಕಳು ಹೆಚ್ಚು ಜಗಳಗಂಟರೂ, ಮುಂಗೋಪಿಗಳೂ ಹಾಗೂ ಏಕಾಗ್ರತೆಯ ಕೊರತೆಯುಳ್ಳವರೂ ಆದರು. ಶೈಕ್ಷಣಿಕ ಮನೋತಜ್ಞರಾದ ಡಾಕ್ಟರ್ ಜೇನ್ ಎಮ್. ಹೀಲಿ ಅವರಿಗನುಸಾರವಾಗಿ “ಏಕಾಗ್ರತೆಯಲ್ಲಿ ಕೊರತೆಯ ಕಾಯಿಲೆಯಿದ್ದ ಮಕ್ಕಳ ಅನೇಕ ಹೆತ್ತವರು ಟೆಲಿವಿಷನ್ ವೀಕ್ಷಣೆಯನ್ನು ತಡೆದಾಗ ಮಕ್ಕಳಲ್ಲಿ ಏಕಾಗ್ರತೆಯು ಗಮನಾರ್ಹವಾಗಿ ಹೆಚ್ಚಿದ್ದನ್ನು ಕಂಡುಕೊಂಡರು.”
ಟಿವಿ ನೋಡುವುದರಲ್ಲಿ ಕಳೆಯುವ ಸಮಯವನ್ನು ಕಡಿಮೆಗೊಳಿಸಲು ಹೆತ್ತವರು ಏನು ಮಾಡಬಲ್ಲರು? ಆ ವರದಿಯು ಕೆಳಗಿನ ಸಲಹೆಯನ್ನು ಕೊಟ್ಟಿತು: ನಿಮ್ಮ ಮಗು ಪ್ರತಿ ದಿನ ಯಾವಾಗ ಮತ್ತು ಎಷ್ಟು ಹೊತ್ತು ಟಿವಿ ನೋಡಬಹುದೆಂದು ಸಮಯ ನಿರ್ಧರಿಸಿ. ಟೆಲಿವಿಷನನ್ನು ಕೂಸು ಆಡಿಸುವ ಸಾಧನವಾಗಿ ಉಪಯೋಗಿಸಬೇಡಿ. ಬದಲಾಗಿ ನಿಮ್ಮ ಮಗುವನ್ನು ಮನೆ ಕೆಲಸದಲ್ಲಿ ಹೆಚ್ಚೆಚ್ಚಾಗಿ ಒಳಗೂಡಿಸಿರಿ. ನಿಮ್ಮ ಮಗು ನೋಡಲು ಸೂಕ್ತವಾದ ಕಾರ್ಯಕ್ರಮವನ್ನು ಆರಿಸಿ. ಅದು ಮುಗಿದ ಕೂಡಲೇ ಟಿವಿಯನ್ನು ಆಫ್ ಮಾಡಿ. ಸಾಧ್ಯವಾದಾಗಲೆಲ್ಲಾ ಮಗುವಿನೊಂದಿಗೆ ನೀವೂ ಆ ಕಾರ್ಯಕ್ರಮವನ್ನು ನೋಡಿರಿ. ಮತ್ತು ನೀವು ನೋಡುವಂಥ ವಿಷಯಗಳ ಕುರಿತು ಮಾತಾಡಿರಿ. ಸ್ವತಃ ನೀವು ಟಿವಿ ನೋಡುವುದನ್ನು ಕಡಿಮೆಮಾಡಿ.
ಸೃಜನಾತ್ಮಕ ಮತ್ತು ಸಾಮಾಜಿಕ ಕೌಶಲವನ್ನು ಮಕ್ಕಳಲ್ಲಿ ಬೆಳೆಸಲು ಸಮಯ, ದೃಢನಿರ್ಧಾರ ಮತ್ತು ಸ್ವಶಿಸ್ತು ಅವಶ್ಯ. ಸಕಾರಾತ್ಮಕ ಫಲಿತಾಂಶಗಳು ನಿಮ್ಮ ಪ್ರಯತ್ನವನ್ನು ಸಾರ್ಥಕಗೊಳಿಸುತ್ತದೆ. ಇದರ ಕುರಿತು ಪ್ರಾಚೀನ ಜ್ಞಾನೋಕ್ತಿಯೊಂದು ಹೀಗನ್ನುತ್ತದೆ: “ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು; ಮುಪ್ಪಿನಲ್ಲಿಯೂ ಓರೆಯಾಗನು.” (ಜ್ಞಾನೋಕ್ತಿ 22:6) ಅಂಥ ತರಬೇತಿಯ ಪ್ರಧಾನ ಭಾಗವು ಯಾವುದೆಂದರೆ ಮಕ್ಕಳಿಗೆ ಯೋಗ್ಯವಾದ ನೈತಿಕ ಮೌಲ್ಯಗಳನ್ನು ಕಲಿಸುವುದೇ.
ತಮ್ಮ ಮಕ್ಕಳಿಗೆ ಸದ್ವರ್ತನೆಗಳ ಪಾಠಗಳನ್ನು ಕಲಿಸಲು ಯೆಹೋವನ ಸಾಕ್ಷಿಗಳು ಮಹಾ ಬೋಧಕನಿಂದ ಕಲಿಯಿರಿ (ಇಂಗ್ಲಿಷ್) ಎಂಬ ಪುಸ್ತಕವನ್ನು ಯಶಸ್ವಿಯಾಗಿ ಬಳಸುತ್ತಾರೆ. ಮಕ್ಕಳ ಬಾಲ್ಯದ ದಿನಗಳಲ್ಲಿ ಹೆತ್ತವರು ಕೊಡುವ ಒಳ್ಳೆಯ ಸಂವಾದ ಮತ್ತು ಪ್ರೀತಿಯ ಗಮನವು ಮುಂದಕ್ಕೆ ಬಾಳುವ ಪ್ರಯೋಜನಗಳನ್ನು ತರುತ್ತವೆ ನಿಶ್ಚಯ. ತಮ್ಮ ಮಕ್ಕಳು ಗೌರವಾನ್ವಿತ ಮತ್ತು ಜವಾಬ್ದಾರಿಯುತ ಪ್ರೌಢರಾಗಿ ಬೆಳೆಯುವುದನ್ನು ಕಾಣುವುದಕ್ಕಿಂತ ಹೆಚ್ಚಿನ ಸಂತೃಪ್ತಿ ಹೆತ್ತವರಿಗೆ ಬೇರಾವುದಿದೆ? (g 6/09)