ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹಾರಿಹೋಗುತ್ತಿರುವ ಸಮಯವನ್ನು ಹೇಗೆ ಬಿಗಿಹಿಡಿಯಲಿ?

ಹಾರಿಹೋಗುತ್ತಿರುವ ಸಮಯವನ್ನು ಹೇಗೆ ಬಿಗಿಹಿಡಿಯಲಿ?

ಯುವ ಜನರು ಪ್ರಶ್ನಿಸುವುದು

ಹಾರಿಹೋಗುತ್ತಿರುವ ಸಮಯವನ್ನು ಹೇಗೆ ಬಿಗಿಹಿಡಿಯಲಿ?

“‘ಇವನನ್ನು ನಾಲ್ಕು ಗಂಟೆಗೆ ಮನೆಗೆ ಕರೆಯಬೇಕಾದರೆ ಮೂರು ಗಂಟೆಯೊಳಗೇ ಮನೆಗೆ ಬಾ ಅನ್ನಬೇಕು, ಇಲ್ಲವಾದರೆ ಅವನು ನಾಪತ್ತೆ’ ಎಂದು ಕೆಲವರು ನನಗೆ ಕೀಟಲೆ ಮಾಡುತ್ತಿದ್ದರು. ಹಾರಿಹೋಗುತ್ತಿರುವ ಸಮಯವನ್ನು ನಿಯಂತ್ರಿಸಿ ನಿರ್ವಹಿಸಬೇಕೆಂಬ ಭಾವನೆ ನನ್ನಲ್ಲಿ ಹುಟ್ಟಿದ್ದು ಆಗಲೇ.”—ರಿಕೀ. *

ದಿನವೊಂದರಲ್ಲಿ ಇನ್ನೆಷ್ಟು ಹೆಚ್ಚು ತಾಸು ಇರಬೇಕೆಂದು ನಿಮಗನಿಸುತ್ತದೆ? ಈ ಹೆಚ್ಚಿನ ಸಮಯವನ್ನು ನೀವು ಯಾವುದಕ್ಕಾಗಿ ಬಳಸುವಿರಿ?

❑ ಮಿತ್ರರೊಂದಿಗೆ ಅಡ್ಡಾಡಲು

❑ ನಿದ್ದೆಮಾಡಲಿಕ್ಕೆ

❑ ಓದಲು

❑ ವ್ಯಾಯಾಮಕ್ಕೆ

❑ ಇತರೆ .....

ದಿನದಲ್ಲಿ ಇನ್ನೆರಡು ತಾಸುಗಳು ಹೆಚ್ಚಿದ್ದರೆ ಆಹಾ ಅದೆಷ್ಟು ಚೆನ್ನ! ಆದರೆ ಅದು ಕನ್ನಡಿಯೊಳಗಿನ ಗಂಟಷ್ಟೇ! ಹಾಗಾಗಿ ಮಾಡುವುದೇನು? ಅನೇಕ ಯುವ ಜನರು ತಮಗೆ ಅತ್ಯಗತ್ಯವಾಗಿ ಬೇಕಾದ ಕೆಲವು ತಾಸುಗಳನ್ನು ಕಂಡುಕೊಳ್ಳಲು ಸಮಯದ ಉತ್ತಮ ನಿರ್ವಹಣೆಯು ಸಹಾಯಮಾಡಿದೆ ಎಂಬುದನ್ನು ಕಲಿತಿದ್ದಾರೆ. ಹಾರಿಹೋಗುತ್ತಿರುವ ಸಮಯವನ್ನು ಬಿಗಿಹಿಡಿಯುವ ಮೂಲಕ ಅವರು ತಮ್ಮ ಮೇಲಿನ ಒತ್ತಡವನ್ನು ಕಡಿಮೆಗೊಳಿಸಿದ್ದಾರೆ, ಕ್ಲಾಸ್‌ನಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ, ಹೆತ್ತವರ ಅಧಿಕ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ ಎಂಬುದೂ ಅವರ ಗಮನಕ್ಕೆ ಬಂದಿದೆ. ಸಮಯದ ಜಾಗರೂಕ ನಿರ್ವಹಣೆಯಿಂದಾಗಿ ನಿಮಗೆ ದೊರೆಯುವ ಪ್ರಯೋಜನಗಳನ್ನು ಈಗ ನೋಡೋಣ.

ಸವಾಲು #1 ಶೆಡ್ಯೂಲ್‌ ಮಾಡುವಿಕೆ

ಅಡೆತಡೆಗಳು. ಶೆಡ್ಯೂಲ್‌ ಮಾಡುವ ವಿಚಾರವು ತಾನೇ ನಿಮ್ಮನ್ನು ಪಂಜರದೊಳಗೆ ಬಂದಿಸಿದಂತೆ! ಸ್ವಇಷ್ಟದಿಂದ ಕೆಲಸಮಾಡಬೇಕು, ಬದುಕಿನ ಪ್ರತಿಯೊಂದು ನಿಮಿಷವೂ ಶೆಡ್ಯೂಲಿನ ಬಿಗಿತವಿಲ್ಲದೆ ಸಮಯವನ್ನು ಉಪಯೋಗಿಸಬೇಕೆಂದು ನಿಮಗಿಷ್ಟ.

ಏಕೆ ಮಾಡಬೇಕು? “ಶ್ರಮಶೀಲರಿಗೆ ತಮ್ಮ ಯತ್ನಗಳಿಂದ ಸಮೃದ್ಧಿ” ಎಂದು ಬರೆದನು ರಾಜ ಸೊಲೊಮೋನ. (ಜ್ಞಾನೋಕ್ತಿ 21:5) ಸೊಲೊಮೋನನು ತುಂಬ ಕಾರ್ಯಮಗ್ನ ವ್ಯಕ್ತಿಯಾಗಿದ್ದನು ನಿಜ. 20 ವಯಸ್ಸಿನೊಳಗೇ ಅವನು ಪ್ರಾಯಶಃ ಗಂಡನಾಗಿ, ತಂದೆಯಾಗಿ ಮತ್ತು ಒಬ್ಬ ಅರಸನಾಗಿಯೂ ಇದ್ದನು! ಆಮೇಲಂತೂ ಅವನದ್ದು ಬಿಡುವೇ ಇಲ್ಲದ ಬದುಕು. ಅದೇ ರೀತಿ ನಿಮ್ಮ ಜೀವನ ಈಗ ಬಿಡುವಿಲ್ಲದ್ದು. ದೊಡ್ಡವರಾದಂತೆ ಇನ್ನೂ ಹೆಚ್ಚು ಕೆಲಸಕಾರ್ಯಗಳಿಂದಾಗಿ ನೀವು ಬ್ಯುಸಿಯಾಗಿರುತ್ತೀರಿ. ಆದ್ದರಿಂದ ಮುಂದಕ್ಕೆ ಕ್ರಮಬದ್ಧತೆಯನ್ನು ಕಲಿಯುವುದಕ್ಕಿಂತ ಈಗಲೇ ಕಲಿಯುವುದು ಎಷ್ಟು ಉತ್ತಮ!

ನಿಮ್ಮ ಸಮಪ್ರಾಯದವರು ಹೇಳುವುದು. “ಸುಮಾರು ಆರು ತಿಂಗಳಿನಿಂದ ನಾನು ಕ್ರಮವಾಗಿ ಶೆಡ್ಯೂಲ್‌ ಮಾಡಿ ಪಾಲಿಸಿದೆ. ಕೆಲಸಗಳನ್ನು ಹೆಚ್ಚು ಸುಲಭವಾಗಿ ಮಾಡಿಮುಗಿಸಲು ಪ್ರಯತ್ನಿಸಿದೆ. ಸಮಯದ ನಿರ್ವಹಣೆಗೆ ಶೆಡ್ಯೂಲ್‌ ಮಾಡುವುದೇ ಉತ್ತಮ ಉಪಾಯವೆಂದು ಕಂಡಿತು.”—ಜೋಯೀ.

“ಕೆಲಸಗಳ ಪಟ್ಟಿಮಾಡುವುದು ತುಂಬ ಸಹಾಯಕರ. ಹೆಚ್ಚು ಕೆಲಸ ಇರುವಾಗ ನಾನು ಮತ್ತು ನನ್ನ ಅಮ್ಮ ಅವುಗಳನ್ನೆಲ್ಲಾ ಬರೆದಿಟ್ಟುಕೊಂಡು ಅವನ್ನು ಮಾಡಿಮುಗಿಸಲು ಒಬ್ಬರಿಗೊಬ್ಬರು ಹೇಗೆ ನೆರವಾಗುವುದೆಂದು ಯೋಜಿಸಿದೆವು.”—ಮಾಲರೀ.

ಯಾವುದು ಸಹಾಯಕರ? ನೀವು ಪ್ರವಾಸಕ್ಕೆ ಹೋಗುತ್ತೀರಿ ಎಂದು ಭಾವಿಸಿ. ಮನೆಮಂದಿಯಲ್ಲಿ ಪ್ರತಿಯೊಬ್ಬನು ತಮ್ಮ ತಮ್ಮ ಬ್ಯಾಗ್‌ಗಳನ್ನು ಕಾರಿನ ಡಿಕ್ಕಿಯಲ್ಲಿ ಹಾಕುತ್ತಾರೆ. ಎಲ್ಲ ವಸ್ತುಗಳಿಗೆ ಅದರಲ್ಲಿ ಸ್ಥಳವಿಲ್ಲದಂತೆ ಕಾಣುತ್ತದೆ. ಆಗ ಏನು ಮಾಡುವಿರಿ? ಪ್ರಾಯಶಃ ನೀವು ಎಲ್ಲ ಬ್ಯಾಗ್‌ಗಳನ್ನು ಹೊರತೆಗೆದು ದೊಡ್ಡ ಬ್ಯಾಗ್‌ಗಳನ್ನು ಮೊದಲಾಗಿ ಇಟ್ಟು ನಂತರ ಚಿಕ್ಕವುಗಳನ್ನು ತುರುಕಿಸುತ್ತೀರಿ. ಹಾಗೆ ಮಾಡಿದಷ್ಟಕ್ಕೆ ಹೆಚ್ಚು ಸ್ಥಳ ನಿಮಗೆ ಸಿಗುತ್ತದೆ.

ನಿಮ್ಮ ಜೀವಿತದಲ್ಲೂ ಇದು ಸತ್ಯ. ನಿಮ್ಮ ಸಮಯವನ್ನು ಚಿಕ್ಕಪುಟ್ಟ ವಿಷಯಗಳಿಂದ ತುಂಬಿಸುವುದಾದರೆ ಮುಖ್ಯ ವಿಷಯಗಳಿಗೆ ಸಮಯವೆಲ್ಲಿಂದ ಸಿಕ್ಕೀತು? ಮೊದಲು ಪ್ರಮುಖ ವಿಷಯಗಳಿಗೆ ಸ್ಥಳ ಮಾಡಿರಿ. ಅನಂತರ ಉಳಿದವುಗಳಿಗೆ ಎಷ್ಟು ಹೆಚ್ಚು ಸಮಯ ಸಿಗುವುದೆಂದು ನೋಡಿ ನಿಮಗೇ ಅಚ್ಚರಿಯಾಗುವುದು!—ಫಿಲಿಪ್ಪಿ 1:10.

ನೀವು ಅಗತ್ಯವಾಗಿ ಮಾಡಬೇಕಾದ ಅತೀ ಪ್ರಾಮುಖ್ಯ ವಿಷಯಗಳು ಯಾವುವು?

.....

ಈಗ ಪುನಃ ನೀವು ಮಾಡತಕ್ಕ ವಿಷಯಗಳನ್ನು ಪ್ರಮುಖತೆಗನುಸಾರ ಪಟ್ಟಿಮಾಡಿ. ದೊಡ್ಡ ಕೆಲಸಗಳನ್ನು ಮಾಡಿಮುಗಿಸಿದ ಮೇಲೆ ಚಿಕ್ಕ ಕೆಲಸಗಳನ್ನು ಮಾಡಲು ದೊರೆಯುವ ಸಮಯವನ್ನು ಕಾಣುವಾಗ ನಿಮಗೇ ಆಶ್ಚರ್ಯವಾಗುವುದು. ಆದರೆ ನೆನಪಿಡಿ, ದೊಡ್ಡ ಕೆಲಸಗಳನ್ನು ಬದಿಗಿಟ್ಟು ಮೊದಲು ಸಣ್ಣಪುಟ್ಟ ಕೆಲಸಗಳನ್ನು ಮಾಡಿದಲ್ಲಿ ಇದೇ ಯಶಸ್ಸು ನಿಮಗೆ ಸಿಗಲಾರದು!

ನೀವೇನು ಮಾಡಬಹುದು? ಒಂದು ಪಾಕಿಟ್‌ ಬುಕ್‌ ತಕ್ಕೊಂಡು ಮೊದಲು ಮಾಡಬೇಕೆಂದಿರುವ ವಿಷಯಗಳನ್ನು ಬರೆದಿಡಿ. ಇಲ್ಲವಾದರೆ ಕೆಳಗಿನವುಗಳಲ್ಲಿ ಒಂದನ್ನು ಬಳಸುವುದು ಸಹಾಯಕಾರಿ.

❑ ಸೆಲ್‌ ಫೋನ್‌ ಕ್ಯಾಲೆಂಡರ್‌

❑ ಚಿಕ್ಕ ನೋಟ್‌ಪ್ಯಾಡ್‌

❑ ಕಂಪ್ಯೂಟರ್‌ ಕ್ಯಾಲೆಂಡರ್‌

❑ ಡೆಸ್ಕ್‌ ಕ್ಯಾಲೆಂಡರ್‌

ಸವಾಲು #2 ಶೆಡ್ಯೂಲನ್ನು ತಪ್ಪದೆ ಪಾಲಿಸುವುದು

ಅಡೆತಡೆಗಳು. ಶಾಲಾ ನಂತರ ಸ್ವಲ್ಪ ವಿರಮಿಸಬೇಕು, ಕೆಲವು ನಿಮಿಷ ಟಿವಿ ನೋಡಬೇಕು ಎಂದು ಹೇಳಿ ಗಂಟೆಗಟ್ಟಲೆ ನೀವು ಅದರಲ್ಲೇ ಕಳೆಯುತ್ತೀರಿ. ಅಥವಾ ಶಾಲಾ ಪಾಠಗಳನ್ನು ಓದಲು ಯೋಜಿಸುತ್ತಿರುವಾಗ ‘ಮೂವಿ’ ನೋಡಲು ಬರುವಂತೆ ಯಾರೋ ಮೆಸೆಜ್‌ ಕಳುಹಿಸುತ್ತಾರೆ. ನೀವು ಅಂದುಕೊಳ್ಳುವುದು: ‘ಮೂವಿ ನನಗಾಗಿ ಕಾಯುವುದಿಲ್ಲ. ಆದರೆ ಪಾಠವನ್ನು ರಾತ್ರಿಯಲ್ಲಿ ಬೇಕಾದರೂ ಓದಬಹುದು. ಕೊನೇ ಗಳಿಗೆಯಲ್ಲೇ ಅದು ನನಗೆ ಚೆನ್ನಾಗಿ ತಲೆಗೆ ಹಿಡಿಯುತ್ತದೆ.’

ಏಕೆ ಮಾಡಬೇಕು? ನಿಮ್ಮ ಮನಸ್ಸು ಹೆಚ್ಚು ಚುರುಕಿರುವಾಗ ಪಾಠಗಳನ್ನು ಓದುವುದಾದರೆ ಒಳ್ಳೆಯ ಗ್ರೇಡ್‌ಗಳು ನಿಮಗೆ ದೊರಕಬಹುದು. ಅಷ್ಟಲ್ಲದೆ ಮಾಡತಕ್ಕ ಅನೇಕ ಕೆಲಸಗಳ ಒತ್ತಡವು ನಿಮಗೀಗಲೇ ಇದೆಯಲ್ಲಾ. ಹೀಗಿರುವಲ್ಲಿ ರಾತ್ರಿಯಿಡೀ ಕೂತು ಓದುವ ಟೆನ್ಷನ್‌ ಏಕೆ? ನಾಳೆಯ ದಿನ ಏನಾಗುವುದೆಂದು ನಿಮಗೇ ಗೊತ್ತಿಲ್ಲ. ಒಂದುವೇಳೆ ನೀವು ಹೊತ್ತು ಮೀರಿ ನಿದ್ರಿಸಬಹುದು, ನಿಮ್ಮ ಒತ್ತಡ ಹೆಚ್ಚಾಗಬಹುದು, ಅವಸರದಿಂದ ಎದ್ದು ಓಡುವಾಗ ಶಾಲೆಗೂ ಲೇಟ್‌ ಆಗಬಹುದು.—ಜ್ಞಾನೋಕ್ತಿ 6:10, 11.

ನಿಮ್ಮ ಸಮಪ್ರಾಯದವರು ಹೇಳುವುದು. “ಟಿವಿ ನೋಡುವುದು, ಗಿಟಾರ್‌ ಬಾರಿಸುವುದು, ಸ್ನೇಹಿತರೊಂದಿಗೆ ಅಡ್ಡಾಡುವುದು ಅಂದರೆ ನನಗೆ ಬಲು ಇಷ್ಟ. ಇವುಗಳಲ್ಲಿ ಏನೂ ತಪ್ಪಿಲ್ಲ ನಿಜ. ಆದರೆ ಕೆಲವೊಮ್ಮೆ ಅವು ಪ್ರಮುಖವಾದ ವಿಷಯಗಳನ್ನು ಬದಿಗೊತ್ತುತ್ತವೆ. ಅವನ್ನು ಗಡಿಬಿಡಿಯಿಂದ ಮಾಡಿಮುಗಿಸಬೇಕಾಗುತ್ತದೆ.”—ಜೂಲ್ಯನ್‌.

ಯಾವುದು ಸಹಾಯಕರ? ಮಾಡಲೇ ಬೇಕಿರುವ ವಿಷಯಗಳನ್ನು ಮಾತ್ರವಲ್ಲ, ನೀವು ಆನಂದಿಸಬಲ್ಲ ವಿಷಯಗಳನ್ನೂ ಶೆಡ್ಯೂಲ್‌ ಮಾಡಿ. “ನನಗಿಷ್ಟವಾದದ್ದನ್ನು ತದನಂತರ ಮಾಡಲಿಕ್ಕಿದೆ ಎಂದು ತಿಳಿದಿರುವಾಗ ಮಾಡಲೇಬೇಕಾಗಿರುವ ವಿಷಯಗಳನ್ನು ಹೆಚ್ಚು ಖುಷಿಯಿಂದ ಮಾಡಲು ಸಾಧ್ಯವಾಗುತ್ತದೆ.”—ಜೂಲ್ಯನ್‌.

ಇನ್ನೊಂದು ಐಡಿಯ: ಮೊದಲು ದೊಡ್ಡ ಗುರಿಗಳನ್ನಿಡಿರಿ, ಆಮೇಲೆ ಚಿಕ್ಕ ಚಿಕ್ಕ ಗುರಿಗಳನ್ನು ಇಡುತ್ತಾ ಆ ದೊಡ್ಡ ಗುರಿಯನ್ನು ಬೆನ್ನಟ್ಟುತ್ತೀರೋ ಎಂದು ನೋಡಿ. ಈ ಹಿಂದೆ ತಿಳಿಸಿದ 16 ವರ್ಷದ ಜೋಯೀ ಹೇಳುವುದು: “ಪೂರ್ಣ ಸಮಯದ ಬೈಬಲ್‌ ಬೋಧಕನಾಗುವುದು ನನ್ನ ಗುರಿ. ಆ ಗುರಿಯು ನನ್ನ ಶೆಡ್ಯೂಲನ್ನು ಈಗ ತಪ್ಪದೆ ಪಾಲಿಸುವಂತೆ ನೆರವಾಗುತ್ತದೆ. ಹೀಗೆ ನಾನು ಮುಂದಿನ ಇನ್ನಷ್ಟು ಕಾರ್ಯಮಗ್ನ ಜೀವನಕ್ಕೆ ಸಿದ್ಧನಾಗುತ್ತೇನೆ.”

ನೀವೇನು ಮಾಡಬಹುದು? ಮುಂದಿನ ಆರು ತಿಂಗಳಲ್ಲಿ ನೀವು ಮುಟ್ಟಸಾಧ್ಯವಿರುವ ಒಂದೆರಡು ವಾಸ್ತವಿಕ ಗುರಿಗಳು ಯಾವುವು?

.....

ಮುಂದಿನ ಎರಡು ವರ್ಷಗಳಲ್ಲಿ ನೀವು ಮುಟ್ಟಬಲ್ಲ ಒಂದು ವಾಸ್ತವಿಕ ಗುರಿ ಯಾವುದು? ಮತ್ತು ಆ ಗುರಿ ಮುಟ್ಟಲು ನೀವು ಈಗಲೇ ಏನನ್ನು ಮಾಡಲಾರಂಭಿಸುವ ಅಗತ್ಯವಿದೆ?

.....

ಸವಾಲು #3 ನೀಟಾಗಿಯೂ ಕ್ರಮಬದ್ಧರಾಗಿಯೂ ಇರುವುದು

ಅಡೆತಡೆಗಳು. ನೀಟಾಗಿಯೂ ಕ್ರಮಬದ್ಧರಾಗಿಯೂ ಇರುವುದರಿಂದ ಸಮಯವನ್ನು ವಿವೇಚನೆಯಿಂದ ಬಳಸಸಾಧ್ಯವಿದೆ. ಇದು ಒಂದುವೇಳೆ ನಿಮಗೆ ಗೊತ್ತಿರಲಿಕ್ಕಿಲ್ಲ. ಅಸ್ತವ್ಯಸ್ತತೆಯಿಂದ ಇರುವುದೇ ತುಂಬಾ ಸುಲಭವೆನಿಸಬಹುದು. ರೂಮನ್ನು ನಾಳೆ ಶುಚಿ ಮಾಡಿದರೂ ಸರಿ ಮಾಡದೇ ಇದ್ದರೂ ಸರಿ ಎಂದು ನಿಮಗನಿಸೀತು! ರೂಮ್‌ ಕೊಳಕಾಗಿದ್ದರೂ ಚಿಂತೆಯಿಲ್ಲ, ಅದೇನೂ ದೊಡ್ಡ ವಿಷಯವಲ್ಲ ಎಂದನ್ನುತ್ತೀರೋ? ಇಲ್ಲವೆ ನಿಮಗದು ದೊಡ್ಡ ವಿಷಯವೋ?

ಏಕೆ ಮಾಡಬೇಕು? ಎಲ್ಲವನ್ನೂ ನೀಟಾಗಿಯೂ ಕ್ರಮವಾಗಿಯೂ ಇಟ್ಟಲ್ಲಿ ಏನನ್ನಾದರೂ ಹುಡುಕುವಾಗ ಅದು ಬೇಗನೆ ಸಿಗುವುದು. ಹೀಗೆ ಸಮಯ ಉಳಿಯುವುದು ಮಾತ್ರವಲ್ಲ ನಿಮಗಾಗುವ ಕಿರಿಕಿರಿಯೂ ತಪ್ಪುವುದು.—1 ಕೊರಿಂಥ 14:40.

ನಿಮ್ಮ ಸಮಪ್ರಾಯದವರು ಹೇಳುವುದು. “ಕೆಲವೊಮ್ಮೆ ನನ್ನ ಬಟ್ಟೆಬರೆಗಳನ್ನು ಓರಣವಾಗಿಡಲು ಸಮಯ ಸಿಕ್ಕುವುದಿಲ್ಲ. ಆಮೇಲೆ ನನಗೇನಾದರೂ ಬೇಕಾದರೆ ಬಟ್ಟೆಗಳ ರಾಶಿಯಿಂದಲೇ ಅದನ್ನು ಹುಡುಕಬೇಕಾಗುತ್ತದೆ!”—ಮ್ಯಾಂಡೀ.

“ನನ್ನ ಪರ್ಸ್‌ ಒಂದು ವಾರದ ತನಕ ಸಿಕ್ಕಲೇ ಇಲ್ಲ. ಹುಡುಕಿ ಹುಡುಕಿ ಸಾಕಾಯಿತು. ಕೊನೆಗೆ ನಾನು ರೂಮನ್ನು ಕ್ಲೀನ್‌ ಮಾಡಿದಾಗ ನನಗದು ದೊರೆಯಿತು.”—ಫ್ರ್ಯಾಂಕ್‌.

ಯಾವುದು ಸಹಾಯಕರ? ಆದಷ್ಟು ಬೇಗನೆ ವಸ್ತುಗಳನ್ನು ಅದರದರ ಸ್ಥಳದಲ್ಲಿ ಇಡಿರಿ. ವಸ್ತುಗಳನ್ನು ಅಲ್ಲಲ್ಲಿ ಬಿಸಾಡುತ್ತಾ ರಾಶಿಬೀಳುವ ತನಕ ಕಾಯುವ ಬದಲಾಗಿ ಕ್ರಮವಾಗಿ ಅದರದರ ಸ್ಥಳದಲ್ಲೇ ಇಡುವದರಿಂದ ನೀವು ಬೇಗನೆ ಕ್ಲೀನಿಂಗ್‌ ಮಾಡಬಹುದು ಮತ್ತು ವಸ್ತುಗಳು ನಿಮಗೆ ಬೇಗನೆ ಸಿಗುವವು.

ನೀವೇನು ಮಾಡಬಹುದು? ನೀಟುಗಾರಿಕೆ ನಿಮ್ಮ ಹವ್ಯಾಸವಾಗಿರಲಿ. ಎಲ್ಲವನ್ನು ಓರಣವಾಗಿಡಿರಿ. ಆಗ ನಿಮ್ಮ ಜೀವನವು ಎಷ್ಟು ಹೆಚ್ಚು ಸುಗಮವಾಗುವುದೆಂದು ನೀವೇ ಕಂಡುಕೊಳ್ಳುವಿರಿ.

ಸ್ವಲ್ಪ ಸ್ವಲ್ಪ ಮಾಡತೊಡಗಿ. ಆದರೆ ಇಂದೇ ಆರಂಭಿಸಿ! ಈ ಲೇಖನದಲ್ಲಿ ಯಾವ ಸಲಹೆ ನಿಮಗೆ ಹೆಚ್ಚು ಸಹಾಯಕಾರಿಯಾಗಿತ್ತು?

.....

ನಾನು ಈ ಸಲಹೆಯನ್ನು ․․․․․․ ವಾರ(ಗಳ) ತನಕ ಮಾಡಿನೋಡುತ್ತೇನೆ. (g 6/09)

“ಯುವ ಜನರು ಪ್ರಶ್ನಿಸುವುದು . . . ” ಲೇಖನಮಾಲೆಯ ಹೆಚ್ಚಿನ ಲೇಖನಗಳನ್ನು www.watchtower.org/ype ವೆಬ್‌ಸೈಟ್‌ನಲ್ಲಿ ಕಂಡುಕೊಳ್ಳಬಹುದು

[ಪಾದಟಿಪ್ಪಣಿ]

^ ಈ ಲೇಖನದಲ್ಲಿ ಹೆಸರುಗಳು ಬದಲಾಗಿವೆ.

ಯೋಚಿಸಿ

◼ ಚುರುಕಾಗಿ ಕೆಲಸಮಾಡಲು ನಿಮಗೆ ದಿನಕ್ಕೆ ಎಷ್ಟು ತಾಸು ನಿದ್ದೆ ಬೇಕು?

◼ ಶೆಡ್ಯೂಲ್‌ ಪಾಲಿಸಲು ನೀವು ಯಾರ ಸಹಾಯವನ್ನು ಕೇಳಬಹುದು?

◼ ನೀವು ಈ ಮೊದಲೇ ಶೆಡ್ಯೂಲನ್ನು ಪಾಲಿಸುತ್ತಿರುವುದಾದರೆ ಯಾವ ಹೊಂದಾಣಿಕೆಯನ್ನು ಮಾಡುವ ಅಗತ್ಯವಿದೆ?

[ಪುಟ 22ರಲ್ಲಿರುವ ಚೌಕ/ಚಿತ್ರ]

8ರಿಂದ 18 ವಯಸ್ಸಿನ ಮಕ್ಕಳು ವಾರದಲ್ಲಿ ಸಮಯ ಕಳೆಯುವುದು ಹೀಗೆ:

17

ತಮ್ಮ ಹೆತ್ತವರೊಂದಿಗೆ

30

ಶಾಲೆಯಲ್ಲಿ

44

ಟಿವಿ ನೋಡುವುದರಲ್ಲಿ, ವಿಡಿಯೋ ಗೇಮ್ಸ್‌ ಆಡುವುದರಲ್ಲಿ, ಇನ್‌ಸ್ಟಂಟ್‌ ಮೆಸೆಜ್‌ ಕಳುಹಿಸುವುದರಲ್ಲಿ ಮತ್ತು ಮ್ಯೂಸಿಕ್‌ ಕೇಳುವುದರಲ್ಲಿ

ನನ್ನ ಸಮಯ ಹೇಗೆ ಹಾರಿಹೋಗುತ್ತಿದೆ?

ಕೆಳಗಿನವುಗಳಿಗೆ ಪ್ರತಿ ವಾರ ನೀವು ವ್ಯಯಿಸುವ ತಾಸು ಎಷ್ಟೆಂದು ನೋಡಿ

ಟಿವಿ ನೋಡಲು: .....

ವಿಡಿಯೋ ಗೇಮ್ಸ್‌: .....

ಕಂಪ್ಯೂಟರ್‌ ಮುಂದೆ: .....

ಮ್ಯೂಸಿಕ್‌ ಕೇಳಲು: .....

ಒಟ್ಟು:

ಹೆಚ್ಚು ಪ್ರಮುಖವಾದ ವಿಷಯಗಳಿಗೆ ನಾನು ಸುಲಭವಾಗಿ ಬಳಸಬಲ್ಲ ತಾಸುಗಳು:

[ಪುಟ 22ರಲ್ಲಿರುವ ಚಿತ್ರ]

ನೀವು ಚಿಕ್ಕ ಚಿಕ್ಕ ವಸ್ತುಗಳನ್ನು ಮೊದಲು ತುರಿಕಿಸಿಟ್ಟಲ್ಲಿ ಹೆಚ್ಚು ಮುಖ್ಯವಾದ ವಸ್ತುಗಳನ್ನಿಡಲು ಅಲ್ಲಿ ಸ್ಥಳವಿರುವುದಿಲ್ಲ