ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹುಡುಗಿಯರಿಗೆ ನಾನಿಷ್ಟವಿಲ್ಲ ಯಾಕೊ?

ಹುಡುಗಿಯರಿಗೆ ನಾನಿಷ್ಟವಿಲ್ಲ ಯಾಕೊ?

ಯುವ ಜನರು ಪ್ರಶ್ನಿಸುವುದು

ಹುಡುಗಿಯರಿಗೆ ನಾನಿಷ್ಟವಿಲ್ಲ ಯಾಕೊ?

ಅವಳ ಮನಸ್ಸನ್ನು ಗೆಲ್ಲಲು ನಾನು ಪಟ್ಟ ಪ್ರಯತ್ನ ಅಷ್ಟಿಷ್ಟಲ್ಲ. ನನ್ನಲ್ಲಿರುವ ವಸ್ತುಗಳು, ನೋಡಿರುವ ಸ್ಥಳಗಳು, ನನ್ನ ಪರಿಚಯಸ್ಥರು ಹೀಗೆ ನನ್ನ ಬಗ್ಗೆ ಒಂದೂ ಬಿಡದೆ ಎಲ್ಲ ಹೇಳಿದ್ದೇನೆ. ನನ್ನೊಂದಿಗೆ ಡೇಟ್‌ ಮಾಡಲು ಈಗ ಅವಳು ತುದಿಗಾಲಲ್ಲಿ ನಿಂತಿರಬೇಕು!

ಯಾಕಪ್ಪಾ ಇವನು ನನ್ನ ಹಿಂದೆ ಬಿದ್ದಿದ್ದಾನೆ? ಇಷ್ಟವಿಲ್ಲವೆಂದು ಎಷ್ಟು ಹೇಳಿದರೂ ಅವನಿಗೆ ಅರ್ಥವೇ ಆಗ್ತಾಯಿಲ್ಲ. ಇವನಿಂದ ಜಾರಿಕೊಳ್ಳುವುದು ಹೇಗೆ?

ನಿಮಗೀಗ ಡೇಟ್‌ ಮಾಡುವ ವಯಸ್ಸು. ಚೆಲುವಾದ ಸಂಗಾತಿ ನಿಮಗೆ ಬೇಕು. ಅವಳು ನಿಮ್ಮ ಜೊತೆವಿಶ್ವಾಸಿಯೂ ಆಗಿರಬೇಕು. (1 ಕೊರಿಂಥ 7:39) ಹಿಂದೆ ಪ್ರೇಮಬಂಧ ಬೆಸೆಯಲು ಪ್ರಯತ್ನಿಸಿದ ಪ್ರತಿಸಲವೂ ಅದು ಭಗ್ನವಾಗಿ ನುಚ್ಚುನೂರಾಗಿದೆ.

ನೀವು ಹುಡುಗಿಯೊಬ್ಬಳನ್ನು ಸರಿ ತಿಳುಕೊಳ್ಳಬೇಕಾದರೆ ನಿಮಗೆ ಏನೆಲ್ಲಾ ಗೊತ್ತಿರಬೇಕು? ಯಾವ ಬೈಬಲ್‌ ಮೂಲತತ್ತ್ವಗಳು ನೆನಪಿರಬೇಕು?

ಮೊದಲ ಹೆಜ್ಜೆ

ನಿರ್ದಿಷ್ಟ ಹುಡುಗಿಯೊಂದಿಗೆ ಸ್ನೇಹಸಂಬಂಧ ಮಾಡುವ ಮೊದಲು ನೀವು ಕೆಲವು ಕೌಶಲಗಳನ್ನು ಬೆಳೆಸಿಕೊಳ್ಳುವ ಅಗತ್ಯವಿದೆ. ಅವು ಮುಂದಕ್ಕೆ ಯಾರೊಂದಿಗೂ ಸ್ನೇಹ ಬೆಳೆಸಲು ಸಹಾಯಕರ. ಕೆಳಗಿನವುಗಳನ್ನು ಪರಿಗಣಿಸಿ.

◼ ಸದ್ವರ್ತನೆಗಳನ್ನು ಬೆಳೆಸಿಕೊಳ್ಳಿ. ಪ್ರೀತಿಯು “ಅಸಭ್ಯವಾಗಿ ವರ್ತಿಸುವುದಿಲ್ಲ” ಎನ್ನುತ್ತದೆ ಬೈಬಲ್‌. (1 ಕೊರಿಂಥ 13:5) ಇತರರನ್ನು ಗೌರವಿಸುತ್ತೀರಿ, ಕ್ರಿಸ್ತನಂಥ ಪ್ರೌಢ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುತ್ತಿದ್ದೀರಿ ಎಂದು ಸಭ್ಯ ವರ್ತನೆ ತೋರಿಸುತ್ತದೆ. ಸದ್ವರ್ತನೆ ಎಂಬುದು ಬೇರೆಯವರನ್ನು ಮೆಚ್ಚಿಸಲಿಕ್ಕಾಗಿ ಧರಿಸುವ ಮತ್ತು ಮನೆಗೆ ಹೋಗಿ ಬಿಚ್ಚಿಹಾಕುವ ಸೂಟ್‌ನಂತಲ್ಲ. ‘ಮನೆಮಂದಿಯೊಂದಿಗೆ ನಾನು ಸಭ್ಯವಾಗಿ ವರ್ತಿಸುತ್ತೇನೋ?’ ಎಂದು ಮೊದಲು ನಿಮ್ಮನ್ನು ಕೇಳಿಕೊಳ್ಳಿ. ಇಲ್ಲವಾದರೆ ಮನೆಯ ಹೊರಗಿನವರೊಂದಿಗೆ ವರ್ತಿಸುವಾಗ ಅದು ಬರೇ ನಟನೆಯಾಗಿ ಕಂಡುಬಂದೀತು. ವಿವೇಚನೆಯುಳ್ಳ ಹುಡುಗಿಯು ನೀವು ಮನೆಮಂದಿಯನ್ನು ಹೇಗೆ ಉಪಚರಿಸುತ್ತೀರಿ ಎಂಬುದರ ಮೇಲೆ ಕಣ್ಣಿಡುವಳು. ಆಗ ನಿಜವಾಗಿ ನೀವು ಎಂಥಾ ವ್ಯಕ್ತಿಯೆಂದು ಅವಳಿಗೆ ತಿಳಿದುಬರುವುದು.—ಎಫೆಸ 6:1, 2.

ಹುಡುಗಿಯರು ಹೇಳುವುದು: “ಒಬ್ಬ ಹುಡುಗನು ಚಿಕ್ಕಪುಟ್ಟ ವಿಷಯಗಳಲ್ಲಿ ನನಗೆ ಪರಿಗಣನೆ ತೋರಿಸುವಾಗ ಮತ್ತು ನನ್ನ ಕುಟುಂಬವನ್ನೂ ಪ್ರೀತಿಸುವಂಥ ದೊಡ್ಡ ವಿಷಯಗಳಲ್ಲೂ ಸಭ್ಯನಾಗಿ ವರ್ತಿಸುವಾಗ ನಾನು ತುಂಬ ಮೆಚ್ಚುತ್ತೇನೆ.”—ಟೀನ, 20 ವಯಸ್ಸು. *

“ನನ್ನನ್ನು ಭೇಟಿಯಾದಾಕ್ಷಣ ‘ನೀನು ಡೇಟ್‌ ಮಾಡುತ್ತಿದ್ದಿಯಾ?’ ಮತ್ತು ‘ನಿನ್ನ ಹೆಬ್ಬಯಕೆಗಳೇನು?’ ಎಂದು ಯಾರಾದರೂ ಕೇಳಿದರಂತೂ ನನ್ನ ಸಿಟ್ಟು ನೆತ್ತಿಗೇರುತ್ತೆ. ಅದು ತೀರಾ ಒರಟುತನ, ನನಗೆ ಒಂದಿಷ್ಟೂ ಹಿಡಿಸುವುದಿಲ್ಲ.”—ಕ್ಯಾಥಿ, 19 ವಯಸ್ಸು.

ಸ್ವಚ್ಛವಾಗಿರ್ರಿ. ಸ್ವಚ್ಛತೆಯು ಇತರರಿಗೆ ಮಾತ್ರವಲ್ಲ ನಿಮಗೂ ಗೌರವ. (ಮತ್ತಾಯ 7:12) ನಿಮಗೆ ನೀವೇ ಗೌರವ ತೋರಿಸಿದಲ್ಲಿ ಬೇರೆಯವರು ಸಹ ನಿಮ್ಮನ್ನು ಗೌರವಿಸಾರು. ನೀವೇ ಸ್ವಚ್ಛವಾಗಿರದಿದ್ದಲ್ಲಿ ಹುಡುಗಿಯನ್ನು ಮೆಚ್ಚಿಸಲು ನೀವು ಮಾಡುವ ಪ್ರಯತ್ನ ನಿಷ್ಫಲವಾಗಬಹುದು.

ಹುಡುಗಿಯರು ಹೇಳುವುದು: “ನನ್ನನ್ನು ಇಷ್ಟಪಟ್ಟಿದ್ದ ಒಬ್ಬ ಹುಡುಗನ ಬಾಯುಸಿರು ದುರ್ವಾಸನೆ. ಪಕ್ಕದಲ್ಲಿ ನಿಂತುಕೊಳ್ಳಲೂ ಆಗುತ್ತಿರಲಿಲ್ಲ.”—ಕೆಲೀ, 24 ವಯಸ್ಸು.

◼ ಸಂಭಾಷಣಾ ಕಲೆ ಕಲಿಯಿರಿ. ಬಾಳುವ ಸಂಬಂಧಕ್ಕೆ ಒಳ್ಳೆಯ ಸಂವಾದವೇ ಬುನಾದಿ. ಇದರಲ್ಲಿ ನಿಮ್ಮ ಅಭಿರುಚಿಗಳು ಮಾತ್ರವಲ್ಲ ನಿಮ್ಮ ಸ್ನೇಹಿತರ ಅಭಿರುಚಿಗಳನ್ನು ಚರ್ಚಿಸುವುದೂ ಕೂಡಿದೆ.—ಫಿಲಿಪ್ಪಿ 2:3, 4.

ಹುಡುಗಿಯರು ಹೇಳುವುದು: “ಸರಾಗವಾಗಿ ಸಂಭಾಷಣೆ ಮಾಡುವ ಹುಡುಗ ನನಗೆ ಇಷ್ಟ. ನಾನು ಹೇಳಿದ ವಿಷಯಗಳನ್ನು ನೆನಪಿನಲ್ಲಿಟ್ಟು ಪ್ರಶ್ನೆಗಳನ್ನು ಕೇಳುತ್ತಾ ಸಂಭಾಷಣೆಯನ್ನು ಅವನು ಮುಂದುವರಿಸಬೇಕು.”—ಕ್ರಿಸ್ಟೀನ್‌, 20 ವಯಸ್ಸು.

“ಹುಡುಗರು ತಾವು ನೋಡುವ ವಿಷಯಗಳಿಂದ ಆಕರ್ಷಿತರಾಗುತ್ತಾರೆ. ಆದರೆ ಹುಡುಗಿಯರು ಹೆಚ್ಚು ಆಕರ್ಷಿತರಾಗುವುದು ತಾವು ಕೇಳಿಸಿಕೊಳ್ಳುವ ವಿಷಯಗಳಿಂದಲೇ ಎಂದು ನನ್ನೆಣಿಕೆ.”—ಲಾರ, 22 ವಯಸ್ಸು.

“‘ಗಿಫ್ಟ್‌’ ಕೊಡುವುದು ತುಂಬ ಒಳ್ಳೆಯದು. ಆದರೆ ಹುಡುಗನೊಬ್ಬನು ಒಳ್ಳೇ ಸಂವಾದ ಮಾಡುತ್ತಾ ತನ್ನ ಮಾತುಗಳಿಂದ ಸಾಂತ್ವನ, ಉತ್ತೇಜನ ಕೊಡುವುದಾದರೆ . . . ವ್ಹಾವ್‌, ಅದು ಇನ್ನಷ್ಟೂ ಆಕರ್ಷಕ!”—ಏಮೀ, 21 ವಯಸ್ಸು.

“ಹಾಸ್ಯಪ್ರಜ್ಞೆಯುಳ್ಳ ಹುಡುಗ ನನಗಿಷ್ಟ. ಆದರೆ ಅವನು ಗಂಭೀರವಾದ ವಿಷಯಗಳನ್ನೂ ಮಾತಾಡಬೇಕು, ಬಣ್ಣಕಟ್ಟಿ ರಂಗುರಂಗಾಗಿ ಅಲ್ಲ.”—ಕೆಲೀ, 24 ವಯಸ್ಸು.

ಮೇಲಿನ ಸಲಹೆಗಳನ್ನು ಪಾಲಿಸುವುದರಿಂದ ಒಳ್ಳೇ ಸ್ನೇಹಿತರನ್ನು ಸಂಪಾದಿಸಲು ನಿಮಗೆ ಸಹಾಯಕರ. ಆದರೂ ನಿರ್ದಿಷ್ಟ ಹುಡುಗಿಯೊಂದಿಗೆ ವಿವಾಹ ಸಂಬಂಧವನ್ನು ಆರಂಭಿಸಲು ನೀವು ಸಿದ್ಧರಿದ್ದರೆ ಏನು ಮಾಡಬೇಕು?

ಮುಂದಿನ ಹೆಜ್ಜೆ

ನೀವೇ ಮುಂದಡಿಯಿಡಿ. ನೀವು ಮೆಚ್ಚುವ ಸ್ನೇಹಿತೆಯೊಬ್ಬಳು ನಿಮ್ಮ ಬಾಳಸಂಗಾತಿಯಾಗಲು ತಕ್ಕವಳೆಂದು ನೀವು ಎಣಿಸುವುದಾದರೆ, ನೀವು ಅವಳನ್ನು ಇಷ್ಟಪಡುತ್ತೀರೆಂದು ತಿಳಿಸಿರಿ. ನಿಮ್ಮ ಭಾವನೆಗಳನ್ನು ಸ್ಪಷ್ಟವಾಗಿ, ನೇರವಾಗಿ ತಿಳಿಯಪಡಿಸಿರಿ. ಅದು ತುಂಬ ಕಷ್ಟಕರ ನಿಜ. ಯಾಕಂದರೆ ಅವಳೆಲ್ಲಿ ತಿರಸ್ಕರಿಸಿಯಾಳೋ ಎಂಬ ಭಯ ನಿಮಗಿದೆ. ಆದರೆ ನೀವು ಮಾತಾಡಲು ಮುಂದಡಿಯಿಡುವುದು ನಿಮ್ಮ ಪ್ರೌಢತೆಯ ಗುರುತು.

ಹುಡುಗಿಯರು ಹೇಳುವುದು: “ಒಬ್ಬರ ಮನಸ್ಸಿನಲ್ಲಿ ಏನಿದೆ ಎಂದು ತಿಳಿಯಲು ಸಾಧ್ಯವಿಲ್ಲ ನಿಜ. ಆದ್ದರಿಂದ ಯಾರಾದರೂ ನನ್ನನ್ನು ತಮ್ಮ ಬಾಳಸಂಗಾತಿಯನ್ನಾಗಿಸಲು ಬಯಸುವುದಾದರೆ ಅವನು ಪ್ರಾಮಾಣಿಕತೆಯಿಂದ ಮುಂದೆ ಬಂದು ಮುಚ್ಚುಮರೆಯಿಲ್ಲದೆ ನನಗದನ್ನು ಹೇಳಬೇಕು ಅಷ್ಟೇ.”—ನೀನ, 23 ವಯಸ್ಸು.

“ಇಬ್ಬರೂ ಈ ಮೊದಲೇ ಸ್ನೇಹಿತರಾಗಿದ್ದಲ್ಲಿ ಮದುವೆ ಪ್ರಸ್ತಾಪ ಮಾಡುವುದು ಪೇಚಾಟದ ವಿಷಯ. ಆದರೂ, ‘ನಿನ್ನನ್ನು ಸ್ನೇಹಿತೆಯಾಗಿ ಅಲ್ಲ ಪ್ರೇಯಸಿಯಾಗಿ ಬಯಸುತ್ತೇನೆ’ ಎಂದು ಒಬ್ಬನು ಸೀದಾ ಹೇಳಿಬಿಟ್ಟಲ್ಲಿ ನಾನು ಅವನನ್ನು ಗೌರವಿಸುವೆ.”—ಹೆಲನ್‌, 25 ವಯಸ್ಸು.

ಹುಡುಗಿಯ ನಿರ್ಣಯವನ್ನು ಗೌರವಿಸಿ. ‘ನಿನ್ನೊಂದಿಗೆ ಮದುವೆ ಇಷ್ಟವಿಲ್ಲ’ ಎಂದು ನಿಮ್ಮ ಸ್ನೇಹಿತೆ ಹೇಳುವುದಾದರೆ ಆಗೇನು? ಅವಳು ಇಷ್ಟವಿಲ್ಲವೆಂದು ಹೇಳುವುದು ಯಾಕಂದರೆ ಅವಳ ಹೃದಯವು ನಿಮ್ಮನ್ನು ಇಷ್ಟಪಡುವುದಿಲ್ಲ. ಅದನ್ನು ನಂಬಿರಿ. ಈ ಮೂಲಕ ಅವಳನ್ನು ಗೌರವಿಸಿ. ಅವಳ ಸಂಬಂಧಕ್ಕಾಗಿ ಮತ್ತೂ ಪೀಡಿಸುತ್ತಿರುವುದಾದರೆ ನೀವು ಪ್ರೌಢರಲ್ಲ ಎಂಬುದನ್ನು ತೋರಿಸಿಕೊಡುತ್ತೀರಿ. ಹುಡುಗಿಯ ಸ್ಪಷ್ಟ ತಿರಸ್ಕಾರವನ್ನು ಸ್ವೀಕರಿಸುವ ಬದಲು ನೀವು ಸಿಟ್ಟಿಗೇರುವುದಾದರೆ ಆಗೇನು? ನಿಮ್ಮ ಸ್ವಾರ್ಥವನ್ನು ಚಿಂತಿಸುತ್ತೀರೇ ಹೊರತು ಅವಳ ಹಿತವನ್ನಲ್ಲ ಎಂಬದು ತೋರಿಬರುತ್ತದೆ ಅಲ್ಲವೆ?—1 ಕೊರಿಂಥ 13:11.

ಹುಡುಗಿಯರು ಹೇಳುವುದು: “ಖಂಡಿತ ಇಲ್ಲ ಎಂದು ಹೇಳಿದ ಮೇಲೂ ಅವನು ಮತ್ತೆ ಮತ್ತೆ ನನ್ನನ್ನು ಒತ್ತಾಯಪಡಿಸುತ್ತಾನೆ, ಇದು ನನ್ನನ್ನು ತುಂಬ ರೇಗಿಸುತ್ತದೆ.”—ಕೊಲೀನ್‌, 20 ವಯಸ್ಸು.

“‘ನನಗೆ ನಿನ್ನ ಮೇಲೆ ಮನಸ್ಸಿಲ್ಲ’ ಎಂದು ಒಬ್ಬ ಹುಡುಗನಿಗೆ ನಾನು ಹೇಳಿದೆ. ಆದರೆ ಅವ ನನ್ನ ಫೋನ್‌ ನಂಬರಿಗಾಗಿ ಪೀಡಿಸುತ್ತಾ ಇದ್ದ. ಒಳ್ಳೇದಾಗಿ ಮಾತಾಡಿ ಬಿಟ್ಟುಬಿಡಲು ನೆನಸಿದೆ. ಎಷ್ಟೆಂದರೂ ತನ್ನ ಪ್ರೇಮವನ್ನು ವ್ಯಕ್ತಪಡಿಸಲು ಧೈರ್ಯದಿಂದ ಮುಂದೆ ಬರುವುದು ಅವನಿಗೆ ಸುಲಭವಾಗಿದ್ದಿರಲಿಕ್ಕಿಲ್ಲ. ಆದರೂ ಕೊನೆಗೆ ನಾನು ಖಡಾಖಂಡಿತವಾಗಿ ಹೇಳಬೇಕಾಯಿತು.”—ಸೇರ, 23 ವಯಸ್ಸು.

ಏನು ಮಾಡಬಾರದು?

ಹುಡುಗಿಯರನ್ನು ಪಟಾಯಿಸುವುದು ತುಂಬಾ ಸುಲಭ ಎಂಬುದು ಕೆಲವು ಯುವಕರ ಎಣಿಕೆ. ಇನ್ನು ಕೆಲವು ಹುಡುಗರಂತೂ ಯಾರು ಹೆಚ್ಚು ಹುಡುಗಿಯರನ್ನು ಒಲಿಸಿಕೊಳ್ಳುತ್ತಾರೆಂಬ ವಿಷಯದಲ್ಲಿ ಪೈಪೋಟಿಗೂ ಇಳಿಯುತ್ತಾರೆ. ಅಂಥ ಪೈಪೋಟಿ ಕಠೋರ, ನಿಮಗೆ ಕೆಟ್ಟ ಹೆಸರನ್ನೂ ತರುತ್ತದೆ. (ಜ್ಞಾನೋಕ್ತಿ 20:11) ಕೆಳಗಿನವುಗಳನ್ನು ಪಾಲಿಸುವುದಾದರೆ ನೀವು ಆ ಕುಖ್ಯಾತಿಯನ್ನು ತಡೆಯಬಲ್ಲಿರಿ.

ಚೆಲ್ಲಾಟವಾಡಬೇಡಿ. ಮೋಡಿ ಮಾತು, ಉದ್ರೇಕಕಾರಿ ಹಾವಭಾವದ ಮೂಲಕ ಕೆಲವು ಹುಡುಗರು ಚೆಲ್ಲಾಟವಾಡುತ್ತಾರೆ. ಗೌರವಯುತವಾದ ಪ್ರಣಯ ಸಂಬಂಧವನ್ನು ಬೆಳೆಸುವ ಯಾವ ಇಚ್ಛೆಯೂ ಅವರಿಗಿಲ್ಲ. ಅವರ ಕ್ರಿಯೆಗಳು ಮತ್ತು ಭಾವನೆಗಳು, “ಯೌವನಸ್ಥೆಯರನ್ನು ಸಹೋದರಿಯರಂತೆಯೂ ಪರಿಗಣಿಸಿ ಪೂರ್ಣ ನೈತಿಕ ಶುದ್ಧಭಾವದಿಂದ” ಉಪಚರಿಸಬೇಕೆಂಬ ಬೈಬಲ್‌ನ ಸಲಹೆಯನ್ನು ನಿರ್ಲಕ್ಷಿಸುತ್ತವೆ. (1 ತಿಮೊಥೆಯ 5:2) ಪ್ರಣಯ ಚೆಲ್ಲಾಟವಾಡುವವರು ಕಳಪೆ ಮಿತ್ರರು, ವಿವಾಹ ಸಂಗಾತಿಗಳಾಗಲಂತೂ ಯೋಗ್ಯರೇ ಅಲ್ಲ. ವಿವೇಚನೆಯುಳ್ಳ ಹುಡುಗಿಯರಿಗೆ ಅದು ತಿಳಿದಿದೆ.

ಹುಡುಗಿಯರು ಹೇಳುವುದು: “ಮೋಡಿ ಮಾತುಗಳಿಂದ ತುಂಬ ಹೊಗಳುವವನು ನನಗೆ ಹಿಡಿಸುವುದಿಲ್ಲ. ಕಳೆದ ತಿಂಗಳಲ್ಲೇ ಅವನು ಆ ಮಾತುಗಳನ್ನು ನನ್ನ ಇನ್ನೊಬ್ಬ ಸ್ನೇಹಿತೆಗೂ ಹೇಳಿದ್ದಾನೆ.”—ಹೆಲನ್‌, 25 ವಯಸ್ಸು.

“ಮನಮೋಹಕ ಹುಡುಗನೊಬ್ಬನು ನನ್ನೊಡನೆ ಚೆಲ್ಲಾಟ ಆರಂಭಿಸಿದ. ಇಡೀ ದಿವಸ ತನ್ನ ಕುರಿತೇ ಕೊಚ್ಚಿಕೊಂಡ. ಇನ್ನೊಬ್ಬ ಹುಡುಗಿ ನಮ್ಮ ಗುಂಪಿಗೆ ಸೇರಿದಾಗ ಅವಳೊಡನೆಯೂ ಚೆಲ್ಲಾಟವಾಡಿದ. ಮೂರನೆಯ ಹುಡುಗಿ ಬಂದಾಗಲೂ ಅದೇ ಚೇಷ್ಟೆ. ಅಂಥ ನಡತೆ ನನಗೆ ಅಸಹ್ಯ!”—ಟೀನ, 20 ವಯಸ್ಸು.

ಹುಡುಗಿಯರ ಭಾವನೆಗಳೊಂದಿಗೆ ಆಟ ಬೇಡ. ಹುಡುಗರ ಸ್ನೇಹ ಹೇಗೋ ಹಾಗೆ ಹುಡುಗಿಯರೊಂದಿಗೆ ಸ್ನೇಹಮಾಡಬಹುದು ಎಂದು ನೆನಸಬೇಡಿ. ಏಕೆ? ಉದಾಹರಣೆಗೆ, ನಿಮ್ಮ ಸ್ನೇಹಿತ ಹೊಸ ಸೂಟ್‌ನಲ್ಲಿ ಅಂದವಾಗಿ ಕಾಣುತ್ತಾನೆ ಎಂದು ನೀವು ಅವನಿಗೆ ಹೇಳಿದ್ದಲ್ಲಿ ಅಥವಾ ಅವನೊಂದಿಗೆ ನೀವು ನಿಮ್ಮ ಗುಟ್ಟುಮಾತನ್ನು ತಿಳಿಸುತ್ತಿರುವಲ್ಲಿ ನಿಮಗೆ ಅವನಲ್ಲಿ ಪ್ರಣಯಪ್ರೇಮವಿದೆ ಎಂದು ಅವ ನೆನಸಲಾರ. ಆದರೆ ಹುಡುಗಿಯೊಬ್ಬಳ ಅಂದಚೆಂದವನ್ನು ನೀವು ಹೊಗಳಿದ್ದಲ್ಲಿ ಮತ್ತು ನಿಮ್ಮ ಗುಟ್ಟನ್ನೆಲ್ಲಾ ಅವಳಿಗೆ ತಿಳಿಸಿದ್ದಲ್ಲಿ ನಿಮಗೆ ಅವಳಲ್ಲಿ ಪ್ರಣಯಪ್ರೇಮವಿದೆ ಎಂದು ಅವಳು ನೆನಸಬಹುದು.

ಹುಡುಗಿಯರು ಹೇಳುವುದು: “ಹುಡುಗರನ್ನು ಉಪಚರಿಸುವಂಥ ರೀತಿ ಬೇರೆ. ಅದೇ ರೀತಿ ಹುಡುಗಿಯರನ್ನು ಉಪಚರಿಸಸಾಧ್ಯವಿಲ್ಲ ಎಂಬುದು ಹುಡುಗರಿಗೆ ಗೊತ್ತಿಲ್ಲ ಎಂದು ನನ್ನೆಣಿಕೆ.”—ಶೆರಿಲ್‌, 26 ವಯಸ್ಸು.

“ಹುಡುಗನಿಗೆ ಹೇಗೋ ನನ್ನ ಫೋನ್‌ ನಂಬರ್‌ ಸಿಗುತ್ತದೆ, ಅವನಿಂದ ಎಸ್ಸೆಮ್ಮೆಸ್‌ ಬರುತ್ತದೆ. ಅವನು ಯಾಕೆ ಕಳುಹಿಸಿರಬಹುದು . . . ? ಕೆಲವೊಮ್ಮೆ ಎಸ್ಸೆಮ್ಮೆಸ್‌ ಮಾಡುವ ಮೂಲಕ ನಮ್ಮ ಭಾವನಾತ್ಮಕ ಆಪ್ತತೆ ಬೆಳೆಯಸಾಧ್ಯವಿದೆ. ಆದರೆ ಎಸ್ಸೆಮ್ಮೆಸ್‌ನಲ್ಲಿ ನಾವು ಎಷ್ಟು ಮಾತಾಡಿಯೇವು?”—ಮ್ಯಾಲರಿ, 19 ವಯಸ್ಸು.

“ಹುಡುಗಿಯೊಬ್ಬಳು ಎಷ್ಟು ಬೇಗನೆ ಭಾವನಾತ್ಮಕವಾಗಿ ಒಳಗೂಡಬಲ್ಲಳು ಎಂಬದು ಹುಡುಗನಿಗೆ ತಿಳಿದಿಲ್ಲ ಎಂದು ನನ್ನ ಅನಿಸಿಕೆ. ವಿಶೇಷವಾಗಿ, ಹುಡುಗನು ಕಳಕಳಿಯಿಂದಲೂ ಮುಕ್ತವಾಗಿಯೂ ಮಾತಾಡುವಾಗ ಅವಳಿಗೆ ಹಾಗನಿಸುತ್ತದೆ. ಅವನ ನಿಜ ಸ್ನೇಹಕ್ಕಾಗಿ ಅವಳು ಉತ್ಕಟವಾಗಿ ಇಚ್ಛಿಸದಿದ್ದರೂ ಭಾವನಾತ್ಮಕವಾಗಿ ಅವಳು ಒಳಗೂಡುತ್ತಾಳೆ. ಹೆಚ್ಚಿನ ಹುಡುಗಿಯರಾದರೋ ಪ್ರೇಮದಲ್ಲಿ ಬೀಳಲು ಬಯಸುತ್ತಾರೆ. ತಮ್ಮ ‘ಮೆಚ್ಚಿನ’ ಹುಡುಗನಿಗಾಗಿ ಅವರು ಯಾವಾಗಲೂ ಹುಡುಕುತ್ತಿರುತ್ತಾರೆ.”—ಆ್ಯಲಿಸನ್‌, 25 ವಯಸ್ಸು.

ವಾಸ್ತವಿಕತೆಯಿಂದಿರಿ

ಎಲ್ಲಾ ಹುಡುಗಿಯರು ನಿಮ್ಮನ್ನು ಇಷ್ಟಪಡುವರು ಎಂದು ನೆನಸುವುದು ಕೇವಲ ಭ್ರಮೆ, ಅಹಂಭಾವವೂ ಆಗಿದೆ. ಕೆಲವರು ನಿಮ್ಮನ್ನು ಇಷ್ಟಪಡಬಹುದು ಆದರೆ ನೀವಿದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು: ನಿಮ್ಮ ಹೊರಗಣ ತೋರಿಕೆಯು ಅಷ್ಟು ಮಹತ್ವವಲ್ಲ, ನಿಮ್ಮ ಒಳಗಣ ವ್ಯಕ್ತಿತ್ವವೇ ಹೆಚ್ಚು ಮಹತ್ವವುಳ್ಳದ್ದು. ಆದ್ದರಿಂದ “ಹೊಸ ವ್ಯಕ್ತಿತ್ವವನ್ನು” ಬೆಳೆಸಿಕೊಳ್ಳುವಂತೆ ಬೈಬಲ್‌ ಒತ್ತಿಹೇಳುವುದರಲ್ಲಿ ಆಶ್ಚರ್ಯವೇನಿಲ್ಲ.—ಎಫೆಸ 4:24.

ಕೇಟ್‌ ಎಂಬ 21 ವಯಸ್ಸಿನ ಹುಡುಗಿ ಕೊನೆಯದಾಗಿ ಹೇಳುವುದು: “ಹುಡುಗಿಯರ ಮನಗೆಲ್ಲಲು ನಿರ್ದಿಷ್ಟ ಸ್ಟೈಲಿನ, ಅಂದದ ಉಡುಪು ಧರಿಸಬೇಕೆಂದು ಹುಡುಗರು ನೆನಸುತ್ತಾರೆ. ಇದು ಸ್ವಲ್ಪ ಮಟ್ಟಿಗೆ ನಿಜವಾದರೂ ಹೆಚ್ಚಿನ ಹುಡುಗಿಯರು ಆಕರ್ಷಿತರಾಗುವುದು ಒಳ್ಳೇ ವ್ಯಕ್ತಿತ್ವವಿರುವ ಹುಡುಗರೆಡೆಗೇ.” * (g 5/09)

“ಯುವ ಜನರು ಪ್ರಶ್ನಿಸುವುದು . . . ” ಲೇಖನಮಾಲೆಯ ಹೆಚ್ಚಿನ ಲೇಖನಗಳನ್ನು www.watchtower.org/ype ವೆಬ್‌ಸೈಟ್‌ನಲ್ಲಿ ಕಂಡುಕೊಳ್ಳಬಹುದು

[ಪಾದಟಿಪ್ಪಣಿಗಳು]

^ ಹೆಸರುಗಳು ಬದಲಾಗಿವೆ.

^ ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾದ ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು, ಸಂಪುಟ 2 (ಇಂಗ್ಲಿಷ್‌) ಪುಸ್ತಕದ ಅಧ್ಯಾಯ 3 ನೋಡಿ.

ಯೋಚಿಸಿ

◼ ನಿಮ್ಮ ಬಗ್ಗೆ ನಿಮಗೇ ಗೌರವವಿದೆ ಎಂದು ಹೇಗೆ ತೋರಿಸುತ್ತೀರಿ?

◼ ಹುಡುಗಿಯ ಆಲೋಚನೆ ಮತ್ತು ಭಾವನೆಗಳನ್ನು ಗೌರವಿಸುತ್ತೀರೆಂದು ಹೇಗೆ ತೋರಿಸುತ್ತೀರಿ?

[ಪುಟ 11ರಲ್ಲಿರುವ ಚಿತ್ರ]

ಸದ್ವರ್ತನೆ ಎಂಬುದು ಬೇರೆಯವರನ್ನು ಮೆಚ್ಚಿಸಲಿಕ್ಕಾಗಿ ಧರಿಸುವ ಮತ್ತು ಮನೆಗೆ ಹೋಗಿ ಬಿಚ್ಚಿಹಾಕುವ ಸೂಟ್‌ನಂತಲ್ಲ