ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಪ್ಪಅಮ್ಮನನ್ನು ಇನ್ನೂ ಚೆನ್ನಾಗಿ ಹೇಗೆ ತಿಳಿದುಕೊಳ್ಳಲಿ?

ಅಪ್ಪಅಮ್ಮನನ್ನು ಇನ್ನೂ ಚೆನ್ನಾಗಿ ಹೇಗೆ ತಿಳಿದುಕೊಳ್ಳಲಿ?

ಯುವ ಜನರು ಪ್ರಶ್ನಿಸುವುದು

ಅಪ್ಪಅಮ್ಮನನ್ನು ಇನ್ನೂ ಚೆನ್ನಾಗಿ ಹೇಗೆ ತಿಳಿದುಕೊಳ್ಳಲಿ?

ಜೆಸ್ಸಿಕ ಮತ್ತು ಅವಳ ಅಪ್ಪಅಮ್ಮ ಸ್ನೇಹಿತರೊಂದಿಗೆ ಊಟಮಾಡುತ್ತಿದ್ದಾರೆ. ಅವರಲ್ಲೊಬ್ಬರು ಜೆಸ್ಸಿಕಳ ತಾಯಿಗೆ, “ಏನ್‌ ಗೊತ್ತಾ? ಅವತ್ತೊಂದು ದಿನ ರಿಚರ್ಡ್‌ನನ್ನು ನೋಡಿದೆ. ಅದೇ ನೀನು ಹೈಸ್ಕೂಲ್‌ನಲ್ಲಿದ್ದಾಗ ನಿನ್ನ ಹಿಂದೆ ಬಿದ್ದಿದ್ದನಲ್ಲಾ ಅವನು” ಎನ್ನುತ್ತಾರೆ.

ಇದನ್ನು ಕೇಳಿ ಜೆಸ್ಸಿಕಗೆ ಷಾಕ್‌! ಈ ರಿಚರ್ಡ್‌ ಬಗ್ಗೆ ಅವಳೆಂದೂ ಕೇಳಿಯೇ ಇರಲಿಲ್ಲ.

“ವ್ಹಾವ್‌ ಮಮ್ಮೀ . . . ನಿಮ್ಮ ಮದುವೆಗೆ ಮುಂಚೆ ಬೇರೊಬ್ಬರು ನಿಮ್ಮ ಹಿಂದೆ ಬಿದ್ದಿದ್ದರಾ? ನನಗೆ ಗೊತ್ತೇ ಇರಲಿಲ್ಲ!”

ಜೆಸ್ಸಿಕಳಂತೆ ನಿಮಗೆ ನಿಮ್ಮ ಹೆತ್ತವರ ಬಗ್ಗೆ ಹಿಂದೆಂದೂ ಗೊತ್ತಿಲ್ಲದ ಸಂಗತಿ ತಿಳಿದುಬಂದಾಗ ಆಶ್ಚರ್ಯವಾದದ್ದುಂಟೋ? ಹಾಗಿದ್ದಲ್ಲಿ ಅವರ ಬಗ್ಗೆ ಗೊತ್ತಿಲ್ಲದ ಇನ್ನೆಷ್ಟು ವಿಷಯಗಳಿವೆಯೋ ಎಂಬ ಯೋಚನೆ ನಿಮಗೆ ಬಂದಿರಬಹುದು.

ನಿಮ್ಮ ಹೆತ್ತವರನ್ನು ಚೆನ್ನಾಗಿ ತಿಳಿಯದಿರಲು ಕಾರಣವೇನಿರಬಹುದು? ಅವರ ಬಗ್ಗೆ ಹೆಚ್ಚು ತಿಳಿಯುವುದರ ಪ್ರಯೋಜನಗಳೇನು? ಅವರ ಬಗ್ಗೆ ತಿಳಿಯುವುದಾದರೂ ಹೇಗೆ?

ತಿಳಿಯಲು ಬಹಳಷ್ಟಿದೆ

ನಿಮ್ಮ ಹೆತ್ತವರ ಬಗ್ಗೆ ಅನೇಕ ವಿಷಯಗಳು ನಿಮಗೆ ತಿಳಿಯದಿರಲು ಕಾರಣವೇನಿರಬಹುದು? ಬಹುಶಃ ನೀವೊಂದು ಕಡೆ ನಿಮ್ಮ ಹೆತ್ತವರೊಂದು ಕಡೆ ವಾಸಿಸುತ್ತಿರಬಹುದು. “ನಾನು ಎಂಟು ವರ್ಷದವನಿದ್ದಾಗ ನನ್ನ ಅಪ್ಪಅಮ್ಮ ವಿಚ್ಛೇದಪಡೆದು ಅಗಲಿದರು. ಬಳಿಕ ನಾನು ಅಪ್ಪನನ್ನು ಭೇಟಿಯಾಗುತ್ತಿದ್ದದ್ದು ವರ್ಷದಲ್ಲಿ ಕೆಲವೇ ಬಾರಿ. ಅವರ ಬಗ್ಗೆ ತಿಳಿಯಲು ಇನ್ನೆಷ್ಟೋ ಇತ್ತು” ಎಂದು ಹೇಳುತ್ತಾನೆ 22ರ ಪ್ರಾಯದ ಜೀವನ್‌. *

ಆದರೆ ನೀವು ಎಷ್ಟೋ ವರ್ಷಗಳಿಂದ ಅಪ್ಪಅಮ್ಮನ ಜೊತೆಗೇ ಇದ್ದರೂ ಅವರು ತಮ್ಮ ಬಗ್ಗೆ ಎಲ್ಲವನ್ನೂ ನಿಮಗೆ ಹೇಳಿರಲಿಕ್ಕಿಲ್ಲ. ಯಾಕಿರಬಹುದು? ಹಿಂದೆ ಅವರು ಮಾಡಿದ ತಪ್ಪುಗಳ ಬಗ್ಗೆ ಹೇಳಲು ಎಲ್ಲರಂತೆ ಅವರಿಗೂ ಮುಜುಗರವೆನಿಸಬಹುದು. (ರೋಮನ್ನರಿಗೆ 3:23) ಇಲ್ಲವೆ ನಿಮಗೆ ಅವರ ಮೇಲಿನ ಗೌರವ ಎಲ್ಲಿ ಕಡಿಮೆಯಾಗುವುದೋ ಎಂಬ ಆತಂಕವಿರಬಹುದು. ಅಥವಾ ನೀವು ಅವರಿಗಿಂತಲೂ ಹೆಚ್ಚಿನ ಅಚಾತುರ್ಯಗಳನ್ನು ನಡೆಸುವ ಧೈರ್ಯಮಾಡುವಿರೋ ಎಂಬ ಅಳುಕೂ ಇರಬಹುದು.

ಅನೇಕವೇಳೆ ಹೆತ್ತವರು ಕೆಲವೊಂದು ವಿಷಯ ಹೇಳದಿರಲು ಕಾರಣ ಆ ಬಗ್ಗೆ ತಿಳಿಸುವ ಪ್ರಸಂಗ ಬಾರದಿದ್ದದ್ದೇ ಆಗಿರಬಹುದು. “ವರ್ಷಗಟ್ಟಲೆ ನಾವು ಹೆತ್ತವರೊಂದಿಗಿದ್ದರೂ ಅವರ ಬಗ್ಗೆ ಇನ್ನು ಎಷ್ಟೋ ವಿಷಯಗಳನ್ನು ತಿಳಿಯಲಿಕ್ಕಿದೆ ಅನ್ನುವುದು ಆಶ್ಚರ್ಯ ಅಲ್ವಾ!” ಎನ್ನುತ್ತಾನೆ ಕಿಶೋರ್‌ ಎಂಬ ಯುವಕ. ನಿಮ್ಮ ಹೆತ್ತವರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ನೀವೇ ಏಕೆ ಮುಂದಾಗಬಾರದು? ಇದರಿಂದ ನಿಮಗೆ ಸಿಗಬಹುದಾದ ನಾಲ್ಕು ಪ್ರಯೋಜನಗಳು ಇಲ್ಲಿವೆ.

ಪ್ರಯೋಜನ #1: ನಿಮ್ಮ ಆಸಕ್ತಿ ನೋಡಿ ಹೆತ್ತವರಿಗೆ ಖುಷಿಯಾಗಬಹುದು. ಅವರ ಜೀವನದ ಬಗ್ಗೆ ತಿಳಿಯುವಷ್ಟು ಕಾಳಜಿ ತೋರಿಸಿದ್ದಕ್ಕೆ ಅವರು ಖಂಡಿತ ಸಂತೋಷಪಡುವರು. ನಿಮಗೂ ನಿಮ್ಮ ಭಾವನೆಗಳಿಗೂ ಅವರು ಹೆಚ್ಚು ಅನುಭೂತಿಯಿಂದ ಸ್ಪಂದಿಸಲೂಬಹುದು.—ಮತ್ತಾಯ 7:12.

ಪ್ರಯೋಜನ #2: ನಿಮ್ಮ ಹೆತ್ತವರ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳುವಿರಿ. ಉದಾಹರಣೆಗೆ ನಿಮ್ಮ ಹೆತ್ತವರು ‘ಹಣ ಬಿಚ್ಚುವುದೇ ಇಲ್ಲ’ ಎಂದು ನಿಮಗನಿಸಬಹುದು. ಆದರೆ ಹಿಂದೆ ನಿಮ್ಮ ಹೆತ್ತವರು ಈಗಿನಷ್ಟು ಅನುಕೂಲ ಸ್ಥಿತಿಯಲ್ಲಿ ಇರಲಿಲ್ಲ ಎಂಬುದನ್ನು ತಿಳಿದಾಗ, ಅವರೇಕೆ ಒಂದೊಂದು ರೂಪಾಯಿಯನ್ನೂ ಜಾಗ್ರತೆಯಿಂದ ಖರ್ಚುಮಾಡುತ್ತಾರೆ ಎಂದು ನೀವು ಅರ್ಥಮಾಡಿಕೊಳ್ಳುವಿರಿ.

ಹೀಗೆ ನಿಮ್ಮ ಹೆತ್ತವರ ಯೋಚನಾರೀತಿಗೆ ಕಾರಣವೇನೆಂದು ತಿಳಿಯುವುದು ಸಹಾಯಕಾರಿ. “ನನ್ನ ಹೆತ್ತವರ ದೃಷ್ಟಿಕೋನವನ್ನು ತಿಳಿದದ್ದರಿಂದ ಅವರಿಗೆ ನೋವಾಗದಂತೆ ಮಾತಾಡಲು ಸಹಾಯವಾಗಿದೆ” ಎಂದು ಕುನಾಲ್‌ ಎಂಬ ಯುವಕ ಹೇಳುತ್ತಾನೆ.—ಜ್ಞಾನೋಕ್ತಿ 15:23.

ಪ್ರಯೋಜನ #3: ನಿಮ್ಮ ಬಗ್ಗೆಯೂ ನಿಸ್ಸಂಕೋಚವಾಗಿ ಮಾತಾಡಲು ಆದೀತು. 18 ವರ್ಷದ ಭವ್ಯ ಹೇಳುವುದು: “ನಾನು ಇಷ್ಟಪಟ್ಟ ಹುಡುಗನ ಬಗ್ಗೆ ಅಪ್ಪನಿಗೆ ಹೇಗೆ ಹೇಳುವುದೆಂದು ನನಗೆ ಮುಜುಗರವಾಯಿತು. ಆದರೆ ಅದರ ಕುರಿತು ಹೇಗೋ ಅವರಿಗೆ ಹೇಳಿಬಿಟ್ಟಾಗ ಅವರು ಮೊದಲ ಬಾರಿ ಒಂದು ಹುಡುಗಿಯನ್ನು ಪ್ರೀತಿಸಿದಾಗ ಆದಂಥ ರೋಮಾಂಚಕ ಅನುಭವವನ್ನು ತಿಳಿಸಿದರು. ಮಾತ್ರವಲ್ಲ ಆ ಪ್ರೇಮ ಭಗ್ನವಾದಾಗ ತಮಗಾದ ವೇದನೆಯನ್ನೂ ಹೇಳಿದರು. ಆಗ ನನಗೂ ನನ್ನ ಬಗ್ಗೆ ಹೆಚ್ಚನ್ನು ಹೇಳಲು ಧೈರ್ಯಬಂತು.”

ಪ್ರಯೋಜನ #4: ಹಲವಾರು ವಿಷಯಗಳನ್ನು ಕಲಿಯಬಲ್ಲಿರಿ. ನಿಮಗಾಗುವ ಹತಾಶೆ, ಎದುರಾಗುವ ಸವಾಲುಗಳನ್ನು ಜಯಿಸಲು ಹೆತ್ತವರ ಜೀವನಾನುಭವಗಳು ಸಹಾಯಮಾಡಬಲ್ಲವು. “ತುಂಬಿದ ಸಂಸಾರದಲ್ಲಿ ಪ್ರತಿಯೊಬ್ಬರ ಭಿನ್ನ ಭಿನ್ನ ಶಾರೀರಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಅಗತ್ಯಗಳನ್ನು ನನ್ನ ಹೆತ್ತವರು ಹೇಗೆ ಪೂರೈಸುತ್ತಾರೆಂಬುದನ್ನು ನಾನು ಕಲಿಯಬೇಕು. ಖಂಡಿತವಾಗಿಯೂ ಮಹತ್ತ್ವದ ಪಾಠಗಳನ್ನು ಅವರಿಂದ ಕಲಿಯುವೆ” ಎಂದು ಹೇಳುತ್ತಾನೆ 16ರ ಪ್ರಾಯದ ಜೋಶುವ. “ಮುದುಕರಲ್ಲಿ ಜ್ಞಾನವು ಇರುವುದಿಲ್ಲವೋ? ಜೀವನವು ತಿಳುವಳಿಕೆಯನ್ನು ತರುವುದಿಲ್ಲವೋ?” ಎಂದು ಬೈಬಲ್‌ ಕೇಳುತ್ತದೆ.—ಯೋಬ 12:12, NIBV.

ಮಾತಾಡಲು ನೀವೇ ಮುಂದಾಗಿ

ನಿಮ್ಮ ಹೆತ್ತವರ ಬಗ್ಗೆ ನಿಮಗೆ ತಿಳಿಯಲು ಮನಸ್ಸಿದೆ. ಆದರೆ ಹೇಗೆ ಮಾತು ಶುರುಮಾಡಲಿ ಎನ್ನುತ್ತೀರೋ? ಅದಕ್ಕೆ ಸಹಾಯ ಇಲ್ಲಿದೆ.

ಸಮಯ ನೋಡಿ ಮಾತಾಡಿ. ಸಂದರ್ಭ ಯಾವಾಗಲೂ ಔಪಚಾರಿಕವಾಗಿ ಇರಬೇಕಾಗಿಲ್ಲ. ಬೇರಾವುದೇ ಚಟುವಟಿಕೆಯಲ್ಲಿ ತೊಡಗಿರುವಾಗಲೇ ಇಂಥ ಮಾತುಕತೆ ನಡೆಸಿ. ಉದಾಹರಣೆಗೆ ಹೆತ್ತವರೊಂದಿಗೆ ಆಟವಾಡುವಾಗ, ಒಟ್ಟಾಗಿ ಕೆಲಸಮಾಡುತ್ತಿರುವಾಗ, ಅವರೊಂದಿಗೆ ನಡೆದುಕೊಂಡು ಹೋಗುವಾಗ ಅಥವಾ ಪ್ರಯಾಣಿಸುವಾಗ ಮಾತಾಡಬಹುದು. “ದೂರ ದೂರದ ಪ್ರಯಾಣಗಳನ್ನು ಮಾಡುತ್ತಿರುವಾಗ ನಾನೂ ನನ್ನ ಹೆತ್ತವರೂ ತುಂಬ ಮಾತಾಡುತ್ತಿದ್ದೆವು. ಇಯರ್‌ಫೋನ್‌ ಸಿಕ್ಕಿಸಿಕೊಂಡು ಸಂಗೀತ ಆಲಿಸುವುದು, ನಿದ್ದೆ ಮಾಡುವುದು ತುಂಬ ಸುಲಭ. ಹಾಗೆ ಮಾಡುವ ಬದಲು ಹೆತ್ತವರೊಂದಿಗೆ ಸಂಭಾಷಣೆ ಆರಂಭಿಸುವುದರಿಂದ ನಿಜಕ್ಕೂ ತುಂಬ ತುಂಬ ಪ್ರಯೋಜನ ಇದೆಯೆಂದು ಕಂಡುಕೊಂಡಿದ್ದೇನೆ!” ಎಂದು ಈ ಮೊದಲು ತಿಳಿಸಲಾದ ಕುನಾಲ್‌ ಹೇಳುತ್ತಾನೆ.

ಪ್ರಶ್ನೆ ಕೇಳಿ. ನೀವು ಆಯ್ಕೆ ಮಾಡಿದ ಸಂದರ್ಭ ಒಳ್ಳೇದಿದ್ದರೂ ನಿಮ್ಮ ಅಮ್ಮ ತಮಗೆ ಪ್ರಥಮ ಬಾರಿ ಹುಟ್ಟಿದ ವ್ಯಾಮೋಹದ ಬಗ್ಗೆ ಇದ್ದಕ್ಕಿದ್ದಂತೆ ಮಾತಾಡಲಿಕ್ಕಿಲ್ಲ ಅಥವಾ ತಾವು ಅಜ್ಜನ ಗಾಡಿ ಹಾಳುಮಾಡಿದ್ದರ ಬಗ್ಗೆ ಅಪ್ಪ ಹೇಳಲಿಕ್ಕಿಲ್ಲ. ಆದರೆ ನೀವೇ ಕೇಳಿದರೆ ಈ ವಿಷಯಗಳ ಬಗ್ಗೆ ಒಂದುವೇಳೆ ಹೇಳಿಯಾರು!—ಕೇಳಬಹುದಾದ ಪ್ರಶ್ನೆಗಳಿಗೆ ಪುಟ 12ರ ಚೌಕ ನೋಡಿ.

ಹೊಂದಿಸಿಕೊಳ್ಳಿ. ನೀವು ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ನಿಮ್ಮ ಹೆತ್ತವರು ಮಾತಾಡುತ್ತಾ ಮಾತಾಡುತ್ತಾ ಬೇರಾವುದೋ ವಿಷಯಕ್ಕೆ ಹೋಗಬಹುದು. ಆಗ ಅವರನ್ನು ಪುನಃ ವಿಷಯಕ್ಕೆ ತರಲು ನಿಮಗೆ ತುಂಬ ಮನಸ್ಸಾಗಬಹುದು. ಆದರೆ ಸ್ವಲ್ಪ ತಡೆದುಕೊಳ್ಳಿ! ನೆನಪಿಡಿ, ನಿಮ್ಮ ಉದ್ದೇಶ ಮಾಹಿತಿ ಕಲೆಹಾಕುವುದಲ್ಲ ಬದಲಾಗಿ ಹೆತ್ತವರೊಂದಿಗೆ ಇನ್ನೂ ಆಪ್ತವಾದ ನಂಟನ್ನು ಬೆಸೆಯುವುದಾಗಿದೆ. ಇದನ್ನು ಮಾಡುವ ಅತ್ಯುತ್ತಮ ವಿಧ ನಿಮ್ಮ ಹೆತ್ತವರು ಇಷ್ಟಪಡುವ ವಿಷಯಗಳ ಬಗ್ಗೆ ಮಾತಾಡುವುದೇ ಆಗಿದೆ.—ಫಿಲಿಪ್ಪಿ 2:4.

ವಿವೇಚನೆ ತೋರಿಸಿ. “ಮನುಷ್ಯನ ಹೃದಯಸಂಕಲ್ಪವು ಆಳವಾದ [ಬಾವಿಯ] ನೀರು. ಆದರೆ ವಿವೇಕಿಯು ಅದನ್ನು ಸೇದಬಲ್ಲನು.” (ಜ್ಞಾನೋಕ್ತಿ 20:5) ಮುಖ್ಯವಾಗಿ ನಿಮ್ಮ ಹೆತ್ತವರೊಂದಿಗೆ ನಾಜೂಕಾದ ವಿಷಯಗಳ ಬಗ್ಗೆ ಮಾತೆತ್ತುವಾಗ ವಿವೇಚನೆ ತೋರಿಸಿ. ಉದಾಹರಣೆಗೆ ನಿಮ್ಮ ಪ್ರಾಯದವರಾಗಿದ್ದಾಗ ತಂದೆ ಏನೇನು ತಪ್ಪು ಮಾಡಿದರು, ಅದರಿಂದೆಷ್ಟು ಮುಜುಗರವಾಯಿತು ಮತ್ತು ಒಂದುವೇಳೆ ಆ ಪ್ರಾಯಕ್ಕೆ ಹಿಂದೆಹೋಗುವ ಹಾಗಿದ್ದರೆ ಆ ತಪ್ಪುಗಳಾಗದಂತೆ ಹೇಗೆ ನೋಡಿಕೊಳ್ಳುತ್ತಿದ್ದರು ಎಂದು ತಿಳಿಯುವ ಕುತೂಹಲ ನಿಮಗಿರಬಹುದು. ಆದರೆ ಅಂಥ ವಿಷಯಗಳ ಬಗ್ಗೆ ಹೆತ್ತವರೊಂದಿಗೆ ಮಾತಾಡುವ ಮೊದಲು, “ಒಂದು ವಿಷಯ ಕೇಳಿದರೆ ನಿಮಗೆ ಬೇಜಾರಾಗುವುದಿಲ್ಲ ತಾನೇ?” ಎಂದು ಅನುಮತಿ ಕೇಳಿ.

ಜಾಣ್ಮೆಯಿಂದಿರಿ. ಹೆತ್ತವರು ತಮ್ಮ ಬಗ್ಗೆ ಹೇಳುತ್ತಿರುವಾಗ ನೀವು ‘ಕಿವಿಗೊಡುವುದರಲ್ಲಿ ಶೀಘ್ರರೂ ಮಾತಾಡುವುದರಲ್ಲಿ ನಿಧಾನಿಗಳೂ ಆಗಿರಬೇಕು.’ (ಯಾಕೋಬ 1:19) ಅವರು ಹೇಳಿದ ಸಂಗತಿಗಾಗಿ ಅವರನ್ನು ಅಪಹಾಸ್ಯಮಾಡಬೇಡಿ ಅಥವಾ ಅವಮಾನಿಸಬೇಡಿ. “ಅಬ್ಬಾ! ನೀವು ಹೀಗೆ ಮಾಡಿದ್ದೀರೆಂದು ನಂಬಲಿಕ್ಕೇ ಆಗುತ್ತಿಲ್ಲ” ಅಥವಾ “ಅದಕ್ಕೆ ನೀವು ನನ್ನೊಟ್ಟಿಗೆ ಇಷ್ಟು ಸ್ಟ್ರಿಕ್ಟ್‌ ಇದ್ದೀರಾ? ಈಗ ಗೊತ್ತಾಯಿತು!” ಎಂಬಂಥ ಟೀಕೆ-ಟಿಪ್ಪಣಿಗಳನ್ನು ಮಾಡುವಲ್ಲಿ ಅಥವಾ ಇಂಥ ವೈಯಕ್ತಿಕ ವಿಚಾರಗಳನ್ನು ಬೇರೆಯವರ ಮುಂದೆ ಬಾಯಿಬಿಡುವಲ್ಲಿ ನಿಮ್ಮ ತಂದೆ/ತಾಯಿ ಮುಂದೆಂದೂ ಅಂಥ ವಿಷಯಗಳನ್ನು ಹೇಳರು.

ಇನ್ನೂ ಕಾಲ ಮಿಂಚಿಲ್ಲ!

ಮೇಲಿನ ಸಲಹೆಗಳು, ನೀವು ಹೆತ್ತವರೊಟ್ಟಿಗೆ ವಾಸಿಸುತ್ತಿರುವಾಗಲೇ ಅವರ ಬಗ್ಗೆ ಹೆಚ್ಚನ್ನು ತಿಳಿದುಕೊಳ್ಳಲು ಸಹಾಯಮಾಡುವುದು. ಆದರೆ ನೀವೀಗ ಹೆತ್ತವರ ಜೊತೆಯಲ್ಲಿಲ್ಲದಿದ್ದರೆ? ಆಗಲೂ ಅದೇ ಸಲಹೆಗಳು ಸಹಾಯಕರ. ಅಲ್ಲದೆ, ನೀವೆಂದೂ ತಿಳಿದುಕೊಳ್ಳಲು ಅವಕಾಶ ಸಿಗದಿದ್ದ ಅಪ್ಪ ಅಥವಾ ಅಮ್ಮನೊಂದಿಗೂ ಆಪ್ತಸಂಬಂಧ ಬೆಸೆಯಲು ಅವು ನೆರವಾಗುವವು. ಈ ಮೊದಲು ತಿಳಿಸಲಾದ ಜೀವನ್‌ ಕೂಡ ಇದನ್ನೇ ಮಾಡಿದನು. ಈಗ ಪ್ರತ್ಯೇಕವಾಗಿ ವಾಸಿಸುತ್ತಿರುವ ಅವನು ಹೇಳುವುದು: “ಅಪ್ಪನನ್ನು ಈಚೀಚೆಗೆ ಹೆಚ್ಚು ತಿಳಿದುಕೊಳ್ಳಲು ಆರಂಭಿಸಿದೆನಾದರೂ ನನಗೆ ಖುಷಿಯಾಗುತ್ತಿದೆ.”

ನೀವೀಗ ಹೆತ್ತವರೊಂದಿಗಿರಲಿ ಇಲ್ಲದಿರಲಿ ಅವರನ್ನು ತಿಳಿದುಕೊಳ್ಳಲು ಇನ್ನೂ ಕಾಲ ಮಿಂಚಿಲ್ಲ. ಈ ಸಹಾಯಕಾರಿ ಸಲಹೆಗಳನ್ನು ನೀವು ಅನ್ವಯಿಸಿ ನೋಡಬಹುದಲ್ಲಾ? (g09-E 10)

“ಯುವ ಜನರು ಪ್ರಶ್ನಿಸುವುದು . . . ” ಲೇಖನಮಾಲೆಯ ಹೆಚ್ಚಿನ ಲೇಖನಗಳು www.watchtower.org/ype ವೆಬ್‌ಸೈಟ್‌ನಲ್ಲಿವೆ

[ಪಾದಟಿಪ್ಪಣಿ]

^ ಹೆಸರುಗಳನ್ನು ಬದಲಾಯಿಸಲಾಗಿದೆ.

ಯೋಚಿಸಿ

◼ ಈ ಲೇಖನದಲ್ಲಿ ತಿಳಿಸಲಾದ ಯಾವ ವಿಷಯಗಳ ಬಗ್ಗೆ ನಿಮ್ಮ ಹೆತ್ತವರಿಗೆ ಕೇಳಲು ಇಷ್ಟಪಡುತ್ತೀರಿ?

◼ ನಿಮ್ಮ ಹೆತ್ತವರನ್ನು ಚೆನ್ನಾಗಿ ತಿಳಿಯುವುದರಿಂದ ನಿಮ್ಮನ್ನೇ ನೀವು ಹೆಚ್ಚು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಹೇಗೆ ಸಹಾಯವಾಗುವುದು?

[ಪುಟ 12ರಲ್ಲಿರುವ ಚೌಕ/ಚಿತ್ರ]

ನಿಮ್ಮ ಹೆತ್ತವರಿಗೆ ಇಂಥ ಪ್ರಶ್ನೆಗಳನ್ನು ಕೇಳಬಹುದು:

ಮದುವೆ: ನಿಮಗೆ ಅಮ್ಮನ/ಅಪ್ಪನ ಪರಿಚಯವಾದದ್ದು ಹೇಗೆ? ನಿಮಗೆ ಅವರಲ್ಲಿ ಏನು ಇಷ್ಟವಾಯಿತು? ಮದುವೆಯಾದ ಮೇಲೆ ನೀವಿದ್ದದ್ದು ಎಲ್ಲಿ?

ಬಾಲ್ಯ: ನೀವೆಲ್ಲಿ ಹುಟ್ಟಿದ್ರಿ? ಒಡಹುಟ್ಟಿದವರೊಟ್ಟಿಗೆ ಹೇಗಿದ್ರಿ? ಅಜ್ಜಅಜ್ಜಿ ಕಟ್ಟುನಿಟ್ಟಾಗಿದ್ರಾ ಅಥವಾ ನಿಮ್ಮನ್ನು ಸಡಿಲು ಬಿಟ್ಟಿದ್ರಾ?

ಶಿಕ್ಷಣ: ಶಾಲೆಯಲ್ಲಿ ನಿಮ್ಮ ನೆಚ್ಚಿನ ಸಬ್ಜೆಕ್ಟ್‌ ಯಾವುದಾಗಿತ್ತು? ಯಾವ ಸಬ್ಜೆಕ್ಟ್‌ ಅಂದರೆ ನಿಮಗೆ ತುಂಬ ತಲೆಬಿಸಿಯಾಗುತ್ತಿತ್ತು? ನಿಮಗೆ ಇಷ್ಟವಾದ ಟೀಚರ್‌ ಯಾರಾದರೂ ಇದ್ದರೋ? ನಿಮಗೆ ಅವರು ಯಾಕೆ ಇಷ್ಟವಾಗುತ್ತಿದ್ದರು?

ಉದ್ಯೋಗ: ನಿಮ್ಮ ಮೊತ್ತಮೊದಲ ಉದ್ಯೋಗ ಯಾವುದಾಗಿತ್ತು? ಆ ಕೆಲಸ ಹಿಡಿಸಿತ್ತಾ? ಯಾವುದಾದರೂ ಕೆಲಸವನ್ನು ಆಯ್ಕೆಮಾಡುವ ಅವಕಾಶ ನಿಮಗಿದ್ದಲ್ಲಿ ಯಾವುದನ್ನು ಆರಿಸುವಿರಿ?

ಅಭಿರುಚಿಗಳು: ಪ್ರಪಂಚದಲ್ಲಿ ಯಾವ ಸ್ಥಳಕ್ಕೆ ಭೇಟಿ ನೀಡಲು ಆಶಿಸುತ್ತೀರಿ? ಯಾವ ಹವ್ಯಾಸ ಅಥವಾ ಕೌಶಲವನ್ನು ಬೆಳೆಸಲು ಇಚ್ಛಿಸುತ್ತೀರಿ?

ಆಧ್ಯಾತ್ಮಿಕ ಹಿನ್ನೆಲೆ: ನೀವು ಚಿಕ್ಕಂದಿನಿಂದಲೇ ಯೆಹೋವನ ಸಾಕ್ಷಿಯಾಗಿದ್ರಾ? ಇಲ್ಲವಾದರೆ, ಬೈಬಲಲ್ಲಿ ಆಸಕ್ತಿ ಹುಟ್ಟಿದ್ದು ಹೇಗೆ? ಬೈಬಲಿನ ತತ್ತ್ವಗಳನ್ನು ಪಾಲಿಸುವಾಗ ನಿಮಗೆದುರಾದ ಸವಾಲುಗಳಾವುವು?

ಮೌಲ್ಯಗಳು: ಒಳ್ಳೇ ಸ್ನೇಹಬಂಧ, ಸುಖೀ ಜೀವನ ಮತ್ತು ಯಶಸ್ವೀ ವಿವಾಹ ಜೀವನ ಹೊಂದಲು ಏನೆಲ್ಲಾ ಮುಖ್ಯವೆಂದು ನಿಮಗನಿಸುತ್ತದೆ? ನಿಮಗೆ ಸಿಕ್ಕಿರುವ ಅತ್ಯುತ್ತಮ ಹಿತೋಪದೇಶ ಯಾವುದು?

ಮಾಡಿ ನೋಡಿ: ಮೇಲಿನವುಗಳಲ್ಲಿ ನಿಮ್ಮ ಹೆತ್ತವರಿಗೆ ಕೇಳಲು ಕೆಲವು ಪ್ರಶ್ನೆಗಳನ್ನು ಆರಿಸಿಕೊಳ್ಳಿ. ಅವರೇನು ಉತ್ತರ ಕೊಡಬಹುದೆಂದು ಊಹಿಸಿ. ಬಳಿಕ ಹೆತ್ತವರಿಗೆ ಪ್ರಶ್ನೆಗಳನ್ನು ಕೇಳಿ ಅವರ ಉತ್ತರಗಳನ್ನೂ ನೀವು ಮೊದಲೇ ಊಹಿಸಿದ್ದ ಉತ್ತರಗಳನ್ನೂ ತುಲನೆಮಾಡಿ.

[ಪುಟ 13ರಲ್ಲಿರುವ ಚೌಕ]

ಹೆತ್ತವರಿಗೊಂದು ಕಿವಿಮಾತು

ಈ ಸನ್ನಿವೇಶವನ್ನು ಊಹಿಸಿ. ನೀವು ನಿಮ್ಮ ಗಂಡ, ಮಗಳು ಮತ್ತು ಕೆಲವು ಮಿತ್ರರೊಂದಿಗೆ ಊಟಮಾಡುತ್ತಿದ್ದೀರಿ. ಮಾತಾಡುತ್ತಾ ಇರುವಾಗ ಅವರಲ್ಲೊಬ್ಬರು ನಿಮ್ಮ ಮದುವೆಗೆ ಮುಂಚೆ ನಿಮ್ಮ ಹಿಂದೆ ಬಿದ್ದಿದ್ದ ಒಬ್ಬ ವ್ಯಕ್ತಿಯ ಹೆಸರೆತ್ತುತ್ತಾರೆ. ಈ ವಿಷಯವನ್ನು ನೀವು ನಿಮ್ಮ ಮಗಳಿಗೆಂದೂ ಹೇಳಿರಲಿಲ್ಲ. ಆದರೆ ಅವಳಿಗೀಗ ಅದರ ಬಗ್ಗೆ ಇನ್ನೂ ತಿಳಿಯುವ ಕುತೂಹಲ. ನೀವೇನು ಮಾಡುವಿರಿ?

ನಿಮ್ಮ ಮಕ್ಕಳ ಪ್ರಶ್ನೆಗಳನ್ನು ಉತ್ತರಿಸಲು ಹಿಂದೇಟು ಹಾಕದಿರುವುದು ಒಳ್ಳೇದು. ಏಕೆಂದರೆ ಮಕ್ಕಳು ಪ್ರಶ್ನೆ ಕೇಳುವಾಗ ಅವರೊಂದಿಗೆ ಸಂವಾದಮಾಡುವ ಅವಕಾಶ ಸಿಗುತ್ತದೆ. ಇದನ್ನೇ ಹೆಚ್ಚಿನ ಹೆತ್ತವರು ಬಯಸುತ್ತಾರಲ್ಲವೆ?

ನಿಮ್ಮ ಬದುಕಿನಲ್ಲಿ ಹಿಂದೆ ನಡೆದ ವಿಷಯಗಳ ಬಗ್ಗೆ ಮಗ/ಮಗಳಿಗೆ ಏನೆಲ್ಲಾ ಹೇಳಬೇಕು? ಸ್ವಾಭಾವಿಕವಾಗಿಯೇ ನೀವು ಕೆಲವೊಂದು ಮುಜುಗರದ ಸಂಗತಿಗಳನ್ನು ಹೇಳದಿರಬಹುದು. ಆದರೆ ಸೂಕ್ತವಿರುವಲ್ಲೆಲ್ಲ ನಿಮ್ಮ ತಪ್ಪುಗಳನ್ನೋ ಹೆಣಗಾಟಗಳನ್ನೋ ಹೇಳಿದರೆ ಅದರಿಂದ ಮಕ್ಕಳಿಗೆ ಪ್ರಯೋಜನವಾಗಬಲ್ಲದು. ಹೇಗೆ?

ಈ ಉದಾಹರಣೆ ಪರಿಗಣಿಸಿ. “ನಾನು ಒಳ್ಳೇದನ್ನು ಮಾಡಲು ಬಯಸುವುದಾದರೂ ಕೆಟ್ಟದ್ದೇ ನನ್ನಲ್ಲಿ ಇದೆ . . . ನಾನು ಎಂಥ ದುರವಸ್ಥೆಯಲ್ಲಿ ಬಿದ್ದಿರುವ ಮನುಷ್ಯನು!” ಎಂದು ಅಪೊಸ್ತಲ ಪೌಲನು ತನ್ನ ಬಗ್ಗೆ ತಿಳಿಸಿದನು. (ರೋಮನ್ನರಿಗೆ 7:​21-24) ಆ ಮಾತುಗಳನ್ನು ಬರೆಯುವಂತೆ ಯೆಹೋವ ದೇವರೇ ಅವನನ್ನು ಪ್ರೇರಿಸಿ ನಮ್ಮ ಪ್ರಯೋಜನಕ್ಕಾಗಿ ಇಂದಿನವರೆಗೂ ಬೈಬಲಿನಲ್ಲಿ ಸಂರಕ್ಷಿಸಿಟ್ಟಿದ್ದಾನೆ. (2 ತಿಮೊಥೆಯ 3:16) ನಾವು ಅದರಿಂದ ಪ್ರಯೋಜನ ಪಡೆಯುತ್ತೇವೆಂಬದರಲ್ಲಿ ಸಂಶಯವಿಲ್ಲ. ಏಕೆಂದರೆ ಪೌಲನ ಆ ಹೇಳಿಕೆ ನಮ್ಮ ಅನಿಸಿಕೆಗಳಿಗೆ ಹಿಡಿದ ಕನ್ನಡಿಯಂತಿದೆ ಅಲ್ಲವೇ?

ಅದೇ ರೀತಿಯಲ್ಲಿ ಮಕ್ಕಳಿಗೆ ನಿಮ್ಮ ಒಳ್ಳೇ ಆಯ್ಕೆಗಳು ಮಾತ್ರವಲ್ಲ ತಪ್ಪುಗಳ ಬಗ್ಗೆಯೂ ತಿಳಿದುಬರುವಾಗ ನೀವು ಅವರನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವಿರೆಂಬ ಭರವಸೆ ಅವರಲ್ಲಿ ಮೂಡುವುದು. ಆಗಿನ ನಿಮ್ಮ ಕಾಲ ಬೇರೆಯಾಗಿತ್ತೇನೋ ನಿಜ. ಈಗ ಕಾಲ ಬದಲಾಗಿದೆ. ಆದರೆ ಮಾನವ ಸ್ವಭಾವವಾಗಲಿ ಬೈಬಲಿನ ತತ್ತ್ವಗಳಾಗಲಿ ಬದಲಾಗಿಲ್ಲ. (ಕೀರ್ತನೆ 119:144) ನಿಮಗೆದುರಾದ ಸವಾಲುಗಳನ್ನು ಹೇಗೆ ಜಯಿಸಿದ್ದೀರೆಂದು ನಿಮ್ಮ ಹದಿವಯಸ್ಸಿನ ಮಕ್ಕಳಿಗೆ ಹೇಳುವುದರಿಂದ ಅವರ ಸಮಸ್ಯೆಗಳನ್ನು ಬಗೆಹರಿಸಲು ಅವರಿಗೆ ಸಹಾಯ ಸಿಗುವುದು. “ನಮ್ಮ ಹೆತ್ತವರೂ ನಮ್ಮಂಥದ್ದೇ ಸಮಸ್ಯೆಗಳನ್ನು ಎದುರಿಸಿದ್ದರು ಎಂದು ತಿಳಿದುಬಂದಾಗ ಅವರು ‘ಮೇಲಿಂದ ಬಂದವರಲ್ಲ, ಅವರೂ ನಮ್ಮ ಹಾಗೆಯೇ’ ಎಂದು ಅರ್ಥಮಾಡಿಕೊಳ್ಳುವೆವು” ಎಂದು ಕಿಶೋರ್‌ ಎಂಬ ಯುವಕ ಹೇಳುತ್ತಾನೆ. ಅವನು ಕೂಡಿಸಿ ಹೇಳುವುದು: “ಮುಂದಿನ ಬಾರಿ ಏನಾದರೂ ಸಮಸ್ಯೆ ಬರುವಾಗ ‘ನನ್ನ ಹೆತ್ತವರಿಗೂ ಇದೇ ಸಮಸ್ಯೆ ಇತ್ತೋ’ ಎಂದು ಯೋಚಿಸುವೆವು.”

ಎಚ್ಚರಿಕೆ: ನಿಮ್ಮ ಕಥೆ ಹೇಳಿ ಕೊನೆಗೆ ಯಾವಾಗಲೂ ಬುದ್ಧಿವಾದ ಕೊಡಲೇಬೇಕೆಂದಿಲ್ಲ. ಪ್ರಾಯಕ್ಕೆ ಬಂದ ಮಗ/ಮಗಳು ತಪ್ಪು ತೀರ್ಮಾನಕ್ಕೆ ಬಂದಾರು ಅಥವಾ ಅದೇ ತಪ್ಪುಮಾಡಲು ಧೈರ್ಯಮಾಡಾರು ಎಂಬ ಚಿಂತೆ ನಿಮಗಿರಬಹುದು. ಹಾಗಿದ್ದರೂ ನಿಮ್ಮ ಅನುಭವ ಹೇಳಿದ ನಂತರ ಮಕ್ಕಳು ಯಾವ ಪಾಠ ಕಲಿಯಬೇಕು (“ಆದ್ದರಿಂದ ನೀನು ಹಾಗೆ ಮಾಡಬಾರದು”) ಎಂದು ಹೇಳುವ ಬದಲು ನಿಮಗೆ ಏನು ಅನಿಸುತ್ತದೋ (“ನನಗೀಗ ಪಶ್ಚಾತ್ತಾಪ ಆಗುತ್ತಿದೆ, ನಾನು ಹಾಗೆ ಮಾಡಬಾರದಿತ್ತು ಯಾಕೆಂದರೆ . . . ”) ಅದನ್ನು ಹೇಳಿ. ಹೀಗೆ ಮಾಡುವಾಗ ನೀವು ಭಾಷಣ ಬಿಗಿಯುತ್ತಿದ್ದೀರೆಂದು ನಿಮ್ಮ ಮಗ/ಮಗಳಿಗೆ ಅನಿಸದೆ ನಿಮ್ಮ ಅನುಭವದಿಂದ ಅಮೂಲ್ಯ ಪಾಠ ಕಲಿಯುವರು.​—⁠ಎಫೆಸ 6:⁠4.

[ಪುಟ 13ರಲ್ಲಿರುವ ಚೌಕ]

“ಜೊತೆ ಕ್ರೈಸ್ತರಿಗಿಂತ ನನ್ನ ಸಹಪಾಠಿಗಳ ಜೊತೆಗಿರುವುದು ಹೆಚ್ಚು ಹಿತವೆನಿಸುತ್ತದೆ ಎಂದು ಒಂದು ದಿನ ಅಮ್ಮನಿಗೆ ಹೇಳಿದೆ. ಮರುದಿನ ನನ್ನ ಮೇಜಿನ ಮೇಲೆ ಅವರು ಬರೆದಿಟ್ಟ ಪತ್ರ ಇತ್ತು. ಒಂದು ಕಾಲದಲ್ಲಿ ಅವರಿಗೂ ಜೊತೆ ವಿಶ್ವಾಸಿಗಳಲ್ಲಿ ಮಿತ್ರರೇ ಇಲ್ಲ ಎಂಬ ಅನಿಸಿಕೆಯಿತ್ತೆಂದು ಪತ್ರದಲ್ಲಿ ಬರೆದಿದ್ದರು. ಬೈಬಲ್‌ ಕಾಲದಲ್ಲಿ ತಮ್ಮನ್ನು ಉತ್ತೇಜಿಸಲು ಯಾರೂ ಇಲ್ಲದಿದ್ದಾಗಲೂ ದೇವರನ್ನು ಆರಾಧಿಸಿದ ವ್ಯಕ್ತಿಗಳ ಬಗ್ಗೆ ಅಮ್ಮ ಆ ಪತ್ರದಲ್ಲಿ ನನಗೆ ನೆನಪು ಹುಟ್ಟಿಸಿದರು. ಒಳ್ಳೆಯವರ ಸ್ನೇಹಮಾಡಲು ಪ್ರಯತ್ನಿಸಿದ್ದಕ್ಕಾಗಿ ನನ್ನನ್ನು ಶ್ಲಾಘಿಸಿದರು. ನನಗಿದ್ದ ಸಮಸ್ಯೆಯೇ ಅಮ್ಮನಿಗೂ ಇತ್ತೆಂದು ತಿಳಿದಾಗ ನನಗೆ ಆಶ್ಚರ್ಯವಾಯಿತು. ಸಂತೋಷದಿಂದ ಅತ್ತುಬಿಟ್ಟೆ. ಅಮ್ಮ ಹೇಳಿದ ವಿಷಯಗಳಿಂದ ನನಗೆ ತುಂಬ ಉತ್ತೇಜನ ಮಾತ್ರವಲ್ಲ ಒಳ್ಳೇದನ್ನು ಮಾಡುತ್ತಾ ಇರಲು ಬಲವೂ ಸಿಕ್ಕಿತು.”​—⁠ಜೂನ್ಕೋ, 17 ವರ್ಷ, ಜಪಾನ್‌.

[ಪುಟ 11ರಲ್ಲಿರುವ ಚಿತ್ರ]

ನಿಮ್ಮ ಹೆತ್ತವರಿಗೆ, ಅವರ ಹಳೇ ಫೋಟೋಗಳನ್ನೋ ವಸ್ತುಗಳನ್ನೋ ತೋರಿಸುವಂತೆ ಕೇಳಿ. ಇದು ಹೆಚ್ಚಾಗಿ ಸ್ವಾರಸ್ಯಕರ ಮಾತುಕತೆಗಳಿಗೆ ಎಡೆಮಾಡುತ್ತದೆ