ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಡೆದ ಸಂಸಾರ ಹೈರಾಣಾಗುವ ಹದಿಹರೆಯದವರು

ಒಡೆದ ಸಂಸಾರ ಹೈರಾಣಾಗುವ ಹದಿಹರೆಯದವರು

ಒಡೆದ ಸಂಸಾರ ಹೈರಾಣಾಗುವ ಹದಿಹರೆಯದವರು

ಒಂದು ಕಾಲದಲ್ಲಿ ವಿವಾಹ ಸಲಹೆಗಾರರು ವೈವಾಹಿಕ ಸಮಸ್ಯೆಗಳಿದ್ದವರಿಗೆ, ‘ಮೊದಲು ನಿಮ್ಮ ಸಂತೋಷ ನೋಡಿಕೊಳ್ಳಿ. ಮಕ್ಕಳ ಬಗ್ಗೆ ಯೋಚನೆ ಮಾಡಬೇಡಿ. ಅವರು ಹೇಗೋ ಒಗ್ಗಿಕೊಳ್ಳುತ್ತಾರೆ. ಯಾವಾಗಲೂ ಕಿತ್ತಾಡುವ ಹೆತ್ತವರೊಂದಿಗೆ ಇರುವುದಕ್ಕಿಂತ ವಿಚ್ಛೇದ ಪಡೆದ ಅಪ್ಪ/ಅಮ್ಮನೊಂದಿಗೆ ಜೀವಿಸಲು ಅವರಿಗೆ ಹೆಚ್ಚು ಸುಲಭ!’ ಎಂಬ ಸಲಹೆ ಕೊಡುತ್ತಿದ್ದರು. ಈ ಸಲಹೆ ಅತ್ಯುತ್ತಮವೆಂದು ಆಗ ಅವರಿಗನಿಸಿತ್ತು.

ಆದರೆ ವಿಚ್ಛೇದದ ಬಗ್ಗೆ ಹಾಡಿಹೊಗಳುತ್ತಿದ್ದ ಕೆಲವು ಆಪ್ತಸಲಹೆಗಾರರು ಈಗ ರಾಗ ಬದಲಾಯಿಸಿದ್ದಾರೆ. ‘ವಿಚ್ಛೇದವೆಂದರೆ ಒಂದು ಯುದ್ಧ. ಎರಡೂ ಪಕ್ಷದವರಿಗೆ ನೋವುಗಾಯ ಖಂಡಿತ, ಮಕ್ಕಳಿಗೂ ಇದು ತಪ್ಪಿದ್ದಲ್ಲ’ ಎಂದನ್ನುತ್ತಾರೆ ಅವರು.

ವಿಚ್ಛೇದವೇ ಸುಲಭ ಪರಿಹಾರ ಎಂಬ ಭ್ರಮೆ

ಈ ಮುಂದಿನ ಕಥಾವಸ್ತುವುಳ್ಳ ಟಿ.ವಿ. ಹಾಸ್ಯ ಧಾರಾವಾಹಿ ಜನಪ್ರಿಯವಾಗಬಲ್ಲದು: ಗಂಡಹೆಂಡತಿಗೆ ವಿಚ್ಛೇದನ ಆಗುತ್ತದೆ. ಮಕ್ಕಳನ್ನು ತಾಯಿಯ ವಶಕ್ಕೆ ಕೊಡಲಾಗುತ್ತದೆ. ಬಳಿಕ ಆಕೆ ಒಬ್ಬ ವಿಧುರನನ್ನು ಮದುವೆಯಾಗುತ್ತಾಳೆ. ಅವನಿಗೂ ಮಕ್ಕಳಿರುತ್ತಾರೆ. ಹೊಂದಿಕೆಯಿಲ್ಲದ ಈ ಕುಟುಂಬದಲ್ಲಿ ಪ್ರತಿ ವಾರವೂ ನಗೆಗೀಡುಮಾಡುವ ನಾನಾ ಸಮಸ್ಯೆ. ಪ್ರೇಕ್ಷಕರನ್ನು ಹೊಟ್ಟೆಹುಣ್ಣಾಗುವಷ್ಟು ನಗಿಸಿ ಪ್ರತಿಯೊಂದು ಸಮಸ್ಯೆ ಬರೇ 30 ನಿಮಿಷದೊಳಗೆ ಪರಿಹಾರವಾಗುತ್ತದೆ!

ಇಂಥ ಪ್ರಸಂಗಗಳು ಮನೋರಂಜನೆಗಾಗಿ ಟಿ.ವಿ.ಯಲ್ಲಿ ನೋಡಲಿಕ್ಕೇನೋ ಚೆನ್ನ. ಆದರೆ ನಿಜಜೀವನದಲ್ಲಿ ವಿಚ್ಛೇದವೆಂಬುದು ನಗುವನ್ನಲ್ಲ ಬದಲಿಗೆ ತುಂಬ ನೋವನ್ನು ಬರಿಸುತ್ತದೆ. ಭಾವನಾತ್ಮಕ ದಾಂಪತ್ಯದ್ರೋಹ (ಇಂಗ್ಲಿಷ್‌) ಎಂಬ ಪುಸ್ತಕದಲ್ಲಿ ಲೇಖಕ ಎಮ್‌. ಗ್ಯಾರಿ ನ್ಯೂಮನ್‌ ಬರೆಯುವುದು: “ವಿಚ್ಛೇದವು ಒಂದು ಕಾನೂನು ಪ್ರಕ್ರಿಯೆ. ಒಬ್ಬರು ಇನ್ನೊಬ್ಬರ ಮೇಲೆ ಕೇಸು ಹಾಕುತ್ತಾರೆ. ನೀವು ವಿಚ್ಛೇದಪಡೆಯಲು ನಿರ್ಣಯಿಸುವ ಕ್ಷಣದಿಂದ ನಿಮ್ಮ ಮಗು, ನಿಮ್ಮ ಹಣ ಮತ್ತು ಬಹುಶಃ ನೀವೆಲ್ಲಿ ವಾಸಿಸುವಿರಿ ಎಂಬ ಸಂಗತಿಯೂ ನಿಮ್ಮ ನಿಯಂತ್ರಣದಲ್ಲಿರುವುದಿಲ್ಲ. ಕೋರ್ಟ್‌ನಲ್ಲಿ ನಿಮ್ಮ ಸಮಸ್ಯೆಗಳು ಇತ್ಯರ್ಥ ಆಗಲೂಬಹುದು ಆಗದಿರಲೂಬಹುದು. ಕೊನೆಯಲ್ಲಿ, ನಿಮ್ಮ ಮಗುವನ್ನು ನೀವೆಷ್ಟು ಸಲ ಭೇಟಿಯಾಗಬಹುದು ಮತ್ತು ನಿಮ್ಮ ಹಣದಲ್ಲಿ ನೀವೆಷ್ಟನ್ನು ಇಟ್ಟುಕೊಳ್ಳಬೇಕು ಎಷ್ಟನ್ನು ನಿಮ್ಮ ಸಂಗಾತಿಗೆ ಕೊಡಬೇಕೆಂದು ಹೇಳುವವರು ನ್ಯಾಯಾಧೀಶರೆಂಬ ಅಪರಿಚಿತ ವ್ಯಕ್ತಿ. ದುಃಖದ ಸಂಗತಿಯೇನೆಂದರೆ ಆ ಅಪರಿಚಿತ ವ್ಯಕ್ತಿ ನಿಮ್ಮ ಹಾಗೆ ಯೋಚನೆಮಾಡುವುದಿಲ್ಲ.”

ಎಷ್ಟೋ ಸಲ ವಿಚ್ಛೇದದಿಂದ ಸಮಸ್ಯೆಗಳ ಒಂದು ಸರಮಾಲೆ ಕೊನೆಗೊಂಡು ಇನ್ನೊಂದು ಶುರುವಾಗುತ್ತದೆ ಅಷ್ಟೇ. ವಾಸದ ಏರ್ಪಾಡುಗಳಿಂದ ಹಿಡಿದು ಆರ್ಥಿಕ ಅಂತಸ್ತಿನ ವರೆಗೆ ಎಲ್ಲವೂ ಬದಲಾಗಬಹುದು. ಇದರಿಂದ ಒಳಿತಿಗಿಂತ ಕೆಡುಕಾಗುವುದೇ ಹೆಚ್ಚು. ಅಲ್ಲದೆ, ವಿಚ್ಛೇದದ ಬಿಸಿ ಮಕ್ಕಳಿಗೂ ತಟ್ಟುತ್ತದೆ.

ಹದಿಹರೆಯದವರ ಮೇಲೆ ವಿಚ್ಛೇದದ ಪ್ರಭಾವ

‘ಗಂಡಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು’ ಎಂಬ ಗಾದೆಯಂತೆ ಹೆತ್ತವರ ವಿಚ್ಛೇದವು ಯಾವುದೇ ವಯಸ್ಸಿನ ಮಕ್ಕಳ ಮನಸ್ಸನ್ನು ಛಿದ್ರಛಿದ್ರಗೊಳಿಸಬಲ್ಲದು. ಆದರೆ ಹದಿಹರೆಯದವರಿಗೆ ಅಷ್ಟೇನೂ ಹಾನಿ ತಟ್ಟದೆಂಬುದು ಕೆಲವರ ಅಂಬೋಣ. ಏಕೆಂದರೆ ಹದಿಹರೆಯದವರು ಚಿಕ್ಕ ಮಕ್ಕಳಿಗಿಂತ ಪ್ರೌಢರೂ, ಸ್ವಲ್ಪದರಲ್ಲೇ ಹೇಗೂ ತಮ್ಮ ಹೆತ್ತವರಿಂದ ಬೇರ್ಪಡಲಿರುವರೂ ಎಂಬುದು ಅವರ ತರ್ಕ. ಸಂಶೋಧಕರಾದರೊ ಈ ವಯಸ್ಸಿನವರ ಮೇಲಾಗುವ ನಕಾರಾತ್ಮಕ ಪರಿಣಾಮಗಳನ್ನು ಹೇಳುತ್ತಾರೆ. ಅದೇನೆಂದರೆ, ಮೇಲೆ ತಿಳಿಸಲಾದ ಅದೇ ಕಾರಣಕ್ಕಾಗಿ ಹದಿಹರೆಯದವರು ಬೇರಾವ ವಯಸ್ಸಿನ ಮಕ್ಕಳಿಗಿಂತಲೂ ಹೆಚ್ಚು ಬಾಧಿಸಲ್ಪಡುತ್ತಾರೆಂದೇ. * ಈ ಮುಂದಿನ ವಿಷಯಗಳನ್ನು ಪರಿಗಣಿಸಿರಿ:

◼ ವಯಸ್ಕರಾಗುವ ದಿಕ್ಕಿನತ್ತ ಸಾಗುತ್ತಿರುವ ಹದಿಹರೆಯದವರಿಗೆ, ಚಿಕ್ಕವರಿದ್ದಾಗ ಇದ್ದದಕ್ಕಿಂತಲೂ ಹೆಚ್ಚು ಅಭದ್ರ ಅನಿಸಿಕೆಯಿರುತ್ತದೆ. ಅವರು ಸ್ವತಂತ್ರರಾಗಿರಬಲ್ಲರು ಎಂಬಂತೆ ವರ್ತಿಸುವುದನ್ನು ನೋಡಿ ಮೋಸಹೋಗಬೇಡಿ. ವಾಸ್ತವದಲ್ಲಿ ಹಿಂದೆಂದಿಗಿಂತಲೂ ಹೆಚ್ಚಾಗಿ ಈ ವಯಸ್ಸಿನಲ್ಲೇ ಅವರಿಗೆ ಕೌಟುಂಬಿಕ ಸ್ಥಿರತೆ ಎಂಬ ಲಂಗರು ಅತ್ಯಗತ್ಯ.

◼ ಹದಿಹರೆಯದವರು ಪ್ರಬುದ್ಧ ಸ್ನೇಹಸಂಬಂಧಗಳನ್ನು ಬೆಸೆಯಲು ಕಲಿಯುವುದು ಜೀವನದ ಈ ಘಟ್ಟದಲ್ಲೇ. ಅಂಥದ್ದರಲ್ಲಿ ಹೆತ್ತವರ ವಿಚ್ಛೇದವು ಭರವಸೆ, ನಿಷ್ಠೆ, ಪ್ರೀತಿ ಎಂಬ ಮೌಲ್ಯಗಳನ್ನು ಹದಿಹರೆಯದವರು ಶಂಕಿಸುವಂತೆ ಮಾಡುತ್ತದೆ. ವಯಸ್ಕರಾದಾಗ ಅವರು ಯಾರೊಟ್ಟಿಗೂ ಆಪ್ತ ಸಂಬಂಧಗಳನ್ನು ಬೆಸೆಯದಿರಬಹುದು.

◼ ಎಲ್ಲ ವಯಸ್ಸಿನ ಮಕ್ಕಳು ತಮ್ಮ ನೋವನ್ನು ಒಂದಲ್ಲ ಒಂದು ವಿಧದಲ್ಲಿ ಹೊರಹಾಕುವುದು ಸಾಮಾನ್ಯ. ಹದಿಹರೆಯದವರಂತೂ ಅದನ್ನು ಅಪಾಯಕಾರಿ ವಿಧಗಳಲ್ಲಿ ಮಾಡುವ ಸಾಧ್ಯತೆ ಹೆಚ್ಚು. ಅಪರಾಧವೆಸೆಗುವ ಮೂಲಕವೋ, ಮದ್ಯ ಇಲ್ಲವೆ ಮಾದಕದ್ರವ್ಯ ವ್ಯಸನಿಗಳಾಗುವ ಮೂಲಕವೋ ಅವರಿದನ್ನು ಮಾಡಬಹುದು.

ಇದರರ್ಥ ವಿಚ್ಛೇದಿತ ಹೆತ್ತವರುಳ್ಳ ಎಲ್ಲ ಹದಿಹರೆಯದವರು ಯಾರೊಂದಿಗೂ ಆಪ್ತ ಸಂಬಂಧಗಳನ್ನು ಬೆಸೆಯಲಾರರು ಇಲ್ಲವೆ ಅವರ ಭವಿಷ್ಯತ್ತು ಯಶಸ್ವಿ ಆಗಲಾರದು ಎಂದಲ್ಲ. ಅವರು ಖಂಡಿತ ಯಶಸ್ವಿ ಆಗಬಲ್ಲರು. ಅವರಿಗೆ ತಂದೆತಾಯಿ ಇಬ್ಬರೊಟ್ಟಿಗೂ ಒಳ್ಳೇ ಸಂಬಂಧವಿದ್ದರೆ ಇದು ಸಾಧ್ಯ. * ಆದರೆ ಕೆಲವರು ಹೇಳುವಂತೆ ವಿಚ್ಛೇದದಿಂದಾಗಿ ಮಕ್ಕಳಿಗೆ ಒಳಿತಾಗುವುದು ಇಲ್ಲವೆ ಗಂಡಹೆಂಡಿರ ಎಲ್ಲ ಟೆನ್ಷನ್‌ ಕೊನೆಗೊಳ್ಳುವುದೆಂದು ನೆನಸುವುದು ಭೋಳೆತನ. ವಾಸ್ತವದಲ್ಲಿ ಕೆಲವರಿಗೆ, ವಿಚ್ಛೇದದ ಮುಂಚೆಗಿಂತಲೂ ವಿಚ್ಛೇದದ ಬಳಿಕವೇ ತಮ್ಮ “ಅಸಹನೀಯ” ಸಂಗಾತಿಯೊಂದಿಗೆ ಹೆಚ್ಚು ಸಂಪರ್ಕವನ್ನಿಡಬೇಕಾಗಿ ಬರುತ್ತದೆ. ಅದು ಸಹ, ಆರ್ಥಿಕ ಬೆಂಬಲ ಹಾಗೂ ಮಗು ಯಾರೊಟ್ಟಿಗೆ ಇರಬೇಕೆನ್ನುವಂಥ ಹೆಚ್ಚು ಸ್ಫೋಟಕ ವಿವಾದಾಂಶಗಳ ಸಂಬಂಧದಲ್ಲಿ. ಇಂಥ ವಿದ್ಯಮಾನಗಳಲ್ಲಿ ವಿಚ್ಛೇದದಿಂದ ಕುಟುಂಬ ಸಮಸ್ಯೆಗಳು ಕೊನೆಗೊಳ್ಳುವುದಿಲ್ಲ, ಬರೀ ಇನ್ನೊಂದು ರಣರಂಗಕ್ಕೆ ವರ್ಗಾಯಿಸಲ್ಪಡುತ್ತವೆ ಅಷ್ಟೇ!

ಮೂರನೇ ಆಯ್ಕೆ

ಗಂಡಹೆಂಡಿರಾದ ನಿಮ್ಮ ಮಧ್ಯದಲ್ಲಿ ತುಂಬ ತೊಂದರೆಗಳಿದ್ದು ವಿಚ್ಛೇದದ ಬಗ್ಗೆ ನೀವು ಈಗಾಗಲೇ ಯೋಚಿಸಿರುವಲ್ಲಿ ಆಗೇನು? ವಿಚ್ಛೇದಕ್ಕೆ ಕೈಹಾಕುವ ಮುಂಚೆ ನೀವು ಪುನಃ ಪರಿಗಣಿಸಲೇಬೇಕಾದ ಬಲವಾದ ಅಂಶಗಳನ್ನು ಈ ಲೇಖನ ನಿಮ್ಮ ಮುಂದಿಟ್ಟಿದೆ. ನೆನಪಿಡಿ, ವಿಚ್ಛೇದವು ವೈವಾಹಿಕ ಕಲಹಗಳಿಗೆ ಸಿದ್ಧೌಷಧವಲ್ಲ.

ಆದರೆ ವೈವಾಹಿಕ ಕಲಹಗಳನ್ನು ಸುಮ್ಮನೆ ಬಾಯ್ಮುಚ್ಚಿ ಸಹಿಸಿಕೊಂಡರೆ ಎಲ್ಲ ಸರಿಹೋಗುತ್ತದೆಂದು ತಪ್ಪುತಿಳಿದುಕೊಳ್ಳಬೇಡಿ. ಮೂರನೇ ಆಯ್ಕೆ ಇದೆ. ನಿಮ್ಮ ತೊಂದರೆಗ್ರಸ್ತ ವೈವಾಹಿಕ ಜೀವನವನ್ನು ಸುಧಾರಿಸಲು ಪ್ರಯತ್ನಮಾಡಿ. ‘ಇದಂತೂ ಅಸಾಧ್ಯ’ ಎಂದು ಹೇಳಿ ಈ ಸಲಹೆಯನ್ನು ತಳ್ಳಿಹಾಕಬೇಡಿ. ನಿಮ್ಮದು ಎಂದೂ ಸರಿಪಡಿಸಲಾಗದ ಸಮಸ್ಯೆಗಳೆಂದು ಸಹ ಎಣಿಸಬೇಡಿ. ಈ ಪ್ರಶ್ನೆಗಳನ್ನು ಕೇಳಿಕೊಳ್ಳಿ:

◼ ‘ಆರಂಭದಲ್ಲಿ ನನ್ನ ಸಂಗಾತಿಯ ಯಾವ ಗುಣಗಳನ್ನು ನೋಡಿ ಮನಸೋತೆ? ಆ ಗುಣಗಳು ಆಕೆಯಲ್ಲಿ/ಅವರಲ್ಲಿ ಸ್ವಲ್ಪಮಟ್ಟಿಗಾದರೂ ಇವೆಯಲ್ಲವೇ?’—ಜ್ಞಾನೋಕ್ತಿ 31:10, 29.

◼ ‘ಮದುವೆ ಮುಂಚೆ ಅವಳೆಡೆಗೆ/ಅವರೆಡೆಗೆ ಇದ್ದ ಮಧುರ ಭಾವನೆಗಳನ್ನು ಪುನಃ ಅರಳುವಂತೆ ಮಾಡಬಲ್ಲೆನೋ?’—ಪರಮ ಗೀತ 2:2; 4:7.

◼ ‘ನನ್ನ ಸಂಗಾತಿ ಹೇಗೆಯೇ ವರ್ತಿಸಿದ್ದಿರಲಿ, ಈ ಪತ್ರಿಕೆಯ ಪುಟ 3-9ರಲ್ಲಿರುವ ಸಲಹೆಗಳನ್ನು ಅನ್ವಯಿಸಲು ನಾನು ಏನು ಮಾಡಬಲ್ಲೆ?’—ರೋಮನ್ನರಿಗೆ 12:18.

◼ ‘ನಮ್ಮ ಸಂಬಂಧದಲ್ಲಿ ಯಾವ ಸುಧಾರಣೆ ಆಗಬೇಕೆಂದು ನನ್ನ ಸಂಗಾತಿಗೆ (ಮುಖಾಮುಖಿಯಾಗಿ ಇಲ್ಲವೆ ಬರಹದಲ್ಲಿ) ವಿವರಿಸಬಲ್ಲೆನೋ?’—ಯೋಬ 10:1.

◼ ‘ಒಬ್ಬ ಪ್ರೌಢ ಸ್ನೇಹಿತರೊಂದಿಗೆ ಕೂತು ಮಾತಾಡಿ, ನಮ್ಮ ವೈವಾಹಿಕ ಜೀವನವನ್ನು ಉತ್ತಮಗೊಳಿಸುವ ವಾಸ್ತವಿಕ ಗುರಿಗಳನ್ನಿಡಲು ಅವರಿಂದ ಸಹಾಯ ಪಡೆಯಬಹುದೋ?’—ಜ್ಞಾನೋಕ್ತಿ 27:17.

“ಜಾಣನು ಹೆಜ್ಜೆಯಿಡುವ ಮೊದಲು ಚೆನ್ನಾಗಿ ಯೋಚಿಸುವನು” ಎಂದು ಬೈಬಲ್‌ ಹೇಳುತ್ತದೆ. (ಜ್ಞಾನೋಕ್ತಿ 14:15, NW) ಈ ಸೂತ್ರ ಬಾಳಸಂಗಾತಿಯನ್ನು ಆರಿಸುವಾಗ ಮಾತ್ರವಲ್ಲ, ವಿವಾಹ ಸಂಬಂಧ ಗಂಡಾಂತರದಲ್ಲಿದ್ದು ಏನು ಮಾಡಬೇಕೆಂದು ಪರಿಗಣಿಸುವಾಗಲೂ ಅನ್ವಯವಾಗುತ್ತದೆ. ಈ ಪತ್ರಿಕೆಯ ಪುಟ 9ರಲ್ಲಿ ತೋರಿಸಲಾದಂತೆ ಯಶಸ್ವೀ ಕುಟುಂಬಗಳಿಗೂ ಸಮಸ್ಯೆಗಳು ತಪ್ಪಿದ್ದಲ್ಲ. ಆದರೆ ವಿಶೇಷವೇನೆಂದರೆ ಅವರು ಸಮಸ್ಯೆಗಳನ್ನು ನಿಭಾಯಿಸಲು ದಾರಿ ಕಂಡುಹಿಡಿಯುತ್ತಾರೆ.

ದೃಷ್ಟಾಂತಕ್ಕೆ ನೀವು ಕಾರಲ್ಲಿ ದೂರ ಎಲ್ಲಿಗೋ ಪ್ರಯಾಣ ಹೊರಟಿದ್ದೀರಿ ಎಂದಿಟ್ಟುಕೊಳ್ಳಿ. ದಾರಿಯುದ್ದಕ್ಕೂ ಅಡ್ಡಿಅಡಚಣೆಗಳು ಅನಿವಾರ್ಯ. ಹವಾಮಾನದ ಏರುಪೇರುಗಳು, ಟ್ರಾಫಿಕ್‌ ಜ್ಯಾಮ್‌ಗಳು ಮತ್ತು ರಸ್ತೆ ತಡೆಗಳಿರಬಹುದು. ಒಮ್ಮೊಮ್ಮೆ ನೀವು ದಾರಿತಪ್ಪಲೂಬಹುದು. ಆಗೇನು ಮಾಡುವಿರಿ? ಪ್ರಯಾಣವನ್ನು ಅರ್ಧಕ್ಕೆ ನಿಲ್ಲಿಸಿ ವಾಪಸ್ಸು ಮನೆಗೆ ಹೋಗುವಿರೋ ಅಥವಾ ಎದುರಾಗಿರುವ ತಡೆಯನ್ನು ದಾಟಿ ಮುಂದೆ ಸಾಗುವಿರೋ? ಹಾಗೆಯೇ ನಿಮ್ಮ ಮದುವೆ ದಿನದಂದು ನೀವು ನಿಮ್ಮ ಸಂಗಾತಿಯೊಂದಿಗೆ ಬಾಳಪಯಣವನ್ನು ಆರಂಭಿಸಿದ್ದೀರಿ. ಈ ಪಯಣದುದ್ದಕ್ಕೂ ಸಮಸ್ಯೆಗಳು ತಪ್ಪಿದ್ದಲ್ಲ ಏಕೆಂದರೆ, ‘ಮದುವೆ ಮಾಡಿಕೊಳ್ಳುವವರು ತೊಂದರೆಗಳನ್ನು ಅನುಭವಿಸುವರು’ ಎಂದು ಬೈಬಲ್‌ ಹೇಳುತ್ತದೆ. (1 ಕೊರಿಂಥ 7:28, NIBV) ಆದುದರಿಂದ ಪ್ರಶ್ನೆಯೇನೆಂದರೆ, ಸಮಸ್ಯೆಗಳು ಏಳುವವೋ ಎಂಬುದಲ್ಲ ಬದಲಾಗಿ ಅವು ಏಳುವಾಗ ಹೇಗೆ ನಿಭಾಯಿಸಬೇಕೆಂಬುದೇ. ಆ ಅಡ್ಡಿಅಡಚಣೆಗಳನ್ನು ದಾಟಿ ಮುಂದೆ ಸಾಗುವ ಮಾರ್ಗವನ್ನು ನೀವು ಕಂಡುಹಿಡಿಯುವಿರೋ? ನಿಮ್ಮ ಬಾಳಪಯಣ ಅರ್ಧಕ್ಕೆ ಕೊನೆಗಾಣಲಿದೆ ಎಂದು ನಿಮಗನಿಸಿದರೂ, ಸಹಾಯ ಪಡೆಯಲು ಪ್ರಯತ್ನಿಸುವಿರಾ?—ಯಾಕೋಬ 5:14.

ದೇವರ ಏರ್ಪಾಡು

ವಿವಾಹ ದೇವರ ಏರ್ಪಾಡು. ಅದನ್ನು ಹಗುರವಾಗಿ ಕಾಣಬಾರದು. (ಆದಿಕಾಂಡ 2:24) ಸಮಸ್ಯೆಗಳು ದುಸ್ತರ ಎಂಬಂತೆ ತೋರುವಾಗ ಈ ಲೇಖನದಲ್ಲಿ ಚರ್ಚಿಸಲಾದ ಅಂಶಗಳನ್ನು ನೆನಪಿಸಿಕೊಳ್ಳಿ.

1. ಒಂದೊಮ್ಮೆ ನಿಮಗೆ ಸಂಗಾತಿ ಮೇಲಿದ್ದ ಆ ಪ್ರೀತಿ ಪುನಃ ಅರಳುವಂತೆ ಮಾಡಿ.—ಪರಮ ಗೀತ 8:6.

2. ನಿಮ್ಮ ವಿವಾಹಜೀವನವನ್ನು ಸುಧಾರಿಸಲು ನೀವು ಏನು ಮಾಡುವಿರೆಂದು ನಿರ್ಣಯಿಸಿ, ಅದನ್ನು ಕಾರ್ಯರೂಪಕ್ಕೆ ಹಾಕಿ.—ಯಾಕೋಬ 1:22.

3. ನಿಮ್ಮ ವಿವಾಹಜೀವನದಲ್ಲಿ ಯಾವ ಸುಧಾರಣೆಗಳನ್ನು ಮಾಡಬೇಕೆಂಬುದನ್ನು ಗೌರವದಿಂದ ಸ್ಪಷ್ಟವಾಗಿ ಸಂಗಾತಿಗೆ ಮುಖಾಮುಖಿಯಾಗಿ ಇಲ್ಲವೆ ಬರಹರೂಪದಲ್ಲಿ ತಿಳಿಸಿ.—ಯೋಬ 7:11.

4. ಸಹಾಯ ಪಡೆದುಕೊಳ್ಳಿ. ನಿಮ್ಮ ವಿವಾಹಜೀವನವನ್ನು ಉಳಿಸಲು ನೀವು ಒಂಟಿಪ್ರಯತ್ನ ಮಾಡಬೇಕೆಂದಿಲ್ಲ! (g09-E 10)

[ಪಾದಟಿಪ್ಪಣಿಗಳು]

^ ವಿಚ್ಛೇದವು ಎಳೆಯ ಮಕ್ಕಳನ್ನು ಬಾಧಿಸುತ್ತದಾದರೂ ಈ ಲೇಖನವು ಹದಿಹರೆಯದವರಿಗೆ ಹೆಚ್ಚು ಗಮನಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ ಎಚ್ಚರ! (ಇಂಗ್ಲಿಷ್‌) ಪತ್ರಿಕೆಯ ಈ ಸಂಚಿಕೆಗಳನ್ನು ನೋಡಿ: ಡಿಸೆಂಬರ್‌ 8, 1997 ಪುಟ 3-12 ಮತ್ತು ಏಪ್ರಿಲ್‌ 22, 1991 ಪುಟ 3-11.

^ ಇದು ಯಾವಾಗಲೂ ಸಾಧ್ಯವಿಲ್ಲ ಎಂಬುದು ಒಪ್ಪತಕ್ಕ ಮಾತು. ವಿಶೇಷವಾಗಿ, ತಂದೆ ಅಥವಾ ತಾಯಿ ಕುಟುಂಬವನ್ನು ತೊರೆದುಬಿಟ್ಟಿರುವಲ್ಲಿ ಇಲ್ಲವೆ ಬೇಜವಾಬ್ದಾರಿಯಿಂದಲೋ ಅಪಾಯಕಾರಿ ವಿಧದಲ್ಲೋ ನಡೆದುಕೊಳ್ಳುವಲ್ಲಿ ಇದು ಸತ್ಯ.—1 ತಿಮೊಥೆಯ 5:8.

[ಪುಟ 19ರಲ್ಲಿರುವ ಚೌಕ/ಚಿತ್ರ]

‘ಈ ಸಲ ನನ್ನ ಮದುವೆ ಖಂಡಿತ ಯಶಸ್ವಿಯಾಗುತ್ತದೆ’

ಮೊದಲನೇ ಮದುವೆಗಿಂತ ಎರಡನೇ ಮದುವೆ ನೆಲಕಚ್ಚುವ ಪ್ರಮಾಣ ಜಾಸ್ತಿ, ಮೂರನೇ ಮದುವೆ ಅದಕ್ಕಿಂತಲೂ ಕಡೆ ಎಂದು ಅಧ್ಯಯನಗಳು ತೋರಿಸಿಕೊಡುತ್ತವೆ. ಇದಕ್ಕಿರುವ ಒಂದು ಕಾರಣವನ್ನು ಭಾವನಾತ್ಮಕ ದಾಂಪತ್ಯದ್ರೋಹ (ಇಂಗ್ಲಿಷ್‌) ಎಂಬ ಪುಸ್ತಕದಲ್ಲಿ ಲೇಖಕ ಎಮ್‌. ಗ್ಯಾರಿ ನ್ಯೂಮನ್‌ ತಿಳಿಸುತ್ತಾ ಬರೆದದ್ದು: “ನಿಮ್ಮ ಮೊದಲನೆ ಮದುವೆಯಲ್ಲಿ ಸಮಸ್ಯೆಗಳಿರುವಲ್ಲಿ, ಅದರರ್ಥ ನೀವು ಕೈಹಿಡಿದ ಸಂಗಾತಿ ಸರಿ ಇಲ್ಲವೆಂದಲ್ಲ. ಸಮಸ್ಯೆಯಿರುವುದು ನಿಮ್ಮಲ್ಲೇ. ಆ ವ್ಯಕ್ತಿಯಲ್ಲಿ ಅನುರಕ್ತರಾದವರು ನೀವು. ನಿಮ್ಮ ವಿವಾಹಜೀವನದಲ್ಲಿ ಏನಿದೆ ಏನಿಲ್ಲವೆಂದು ಈಗ ಕೊರಗುತ್ತೀರೋ ಅದು ನೀವು ಆ ವ್ಯಕ್ತಿಯೊಂದಿಗೆ ಸೇರಿಮಾಡಿದ್ದರ ಫಲ.” ನ್ಯೂಮನ್‌ ಅವರ ತೀರ್ಮಾನ? “ಸಂಗಾತಿಯನ್ನು ತೊಲಗಿಸಿ ಸಮಸ್ಯೆಯನ್ನಿಡುವುದಕ್ಕಿಂತ ಸಮಸ್ಯೆಯನ್ನು ತೊಲಗಿಸಿ ನಿಮ್ಮ ಸಂಗಾತಿಯನ್ನು ಇಟ್ಟುಕೊಳ್ಳುವುದೇ ಲೇಸು.”

[ಪುಟ 21ರಲ್ಲಿರುವ ಚೌಕ]

ವಿವಾಹಬಂಧ ಕಡಿದುಹೋಗುವಲ್ಲಿ

ಸನ್ನಿವೇಶ ವಿಪರೀತಕ್ಕೆ ಹೋದಾಗ ದಂಪತಿಗಳು ವಿಚ್ಛೇದ ಪಡೆಯುವುದನ್ನು ಬೈಬಲ್‌ ಸಮ್ಮತಿಸುತ್ತದೆ. * ನಿಮ್ಮ ಕುಟುಂಬದಲ್ಲಿ ಹೀಗಾಗಿರುವಲ್ಲಿ, ಸನ್ನಿವೇಶಕ್ಕೆ ಹೊಂದಿಕೊಳ್ಳಲು ಹದಿಹರೆಯದ ಮಕ್ಕಳಿಗೆ ಹೇಗೆ ಸಹಾಯಮಾಡಬಲ್ಲಿರಿ?

ನಿಮ್ಮಿಬ್ಬರ ಮಧ್ಯೆ ಏನು ನಡೆಯುತ್ತಿದೆಯೆಂದು ನಿಮ್ಮ ಹದಿಹರೆಯದ ಮಗನಿಗೆ/ಳಿಗೆ ಹೇಳಿ. ಸಾಧ್ಯವಾದರೆ ತಂದೆತಾಯಿ ಇಬ್ಬರೂ ಹೇಳುವುದು ಉತ್ತಮ. ವಿಚ್ಛೇದ ಪಡೆಯುವ ನಿರ್ಣಯ ಮಾಡಿ ಆಗಿದೆಯೆಂದು ಜೊತೆಗೂಡಿ ಹೇಳಿ. ಅವನಾಗಲಿ ಅವಳಾಗಲಿ ಇದಕ್ಕೆ ಕಾರಣರಲ್ಲವೆಂದೂ ಅವನನ್ನು/ಳನ್ನು ನೀವಿಬ್ಬರು ಪ್ರೀತಿಸುತ್ತಾ ಇರುವೀರೆಂದೂ ಅಭಯ ನೀಡಿ.

ಕದನ ಮುಗಿಯಿತು, ರಣರಂಗದಿಂದ ಹೊರಬನ್ನಿ. ಕೆಲವು ಹೆತ್ತವರು ವಿಚ್ಛೇದದ ಬಳಿಕವೂ ದೀರ್ಘಕಾಲ ಕಚ್ಚಾಡುತ್ತಲೇ ಇರುತ್ತಾರೆ. ಹೀಗೆ ಪರಿಣತರೊಬ್ಬರು ಹೇಳುವಂತೆ ಅವರು “ಕಾನೂನುಬದ್ಧವಾಗಿ ವಿಚ್ಛೇದಿತರಾಗಿದ್ದರೂ ಭಾವನಾತ್ಮಕ ನಂಟುಳ್ಳವರು; ಕದನ ನಿಲ್ಲಿಸಲು ಶಾಂತಿಸಂಧಾನ ಮಾಡದ ಯೋಧರಂತಿರುತ್ತಾರೆ.” ಹೀಗೆ ಅಪ್ಪಅಮ್ಮ ಯಾವಾಗಲೂ ಒಂದಲ್ಲ ಒಂದು ತಿಕ್ಕಾಟದಲ್ಲಿ ಸಿಕ್ಕಿಕೊಂಡಿರುವುದರಿಂದ ಹದಿಹರೆಯದವರು ತಮ್ಮ ಹೆತ್ತವರ ಒಡನಾಟವನ್ನು ಕಳೆದುಕೊಳ್ಳುತ್ತಾರೆ. ಅಷ್ಟುಮಾತ್ರವಲ್ಲ, ಅವರು ಹೆತ್ತವರಲ್ಲಿ ಒಬ್ಬರ ವಿರುದ್ಧ ಇನ್ನೊಬ್ಬರನ್ನು ಎತ್ತಿಕಟ್ಟಿ ತಮ್ಮ ಕೆಲಸ ಪೂರೈಸಿಕೊಳ್ಳುವಂತೆ ಎಡೆಮಾಡಿಕೊಡುತ್ತದೆ. ಉದಾಹರಣೆಗೆ, ಹುಡುಗನು ತನ್ನ ತಾಯಿಗೆ, “ನಾನೆಷ್ಟು ತಡವಾಗಿ ಬಂದರೂ ಅಪ್ಪ ಏನೂ ಅನ್ನುವುದಿಲ್ಲ, ನೀವ್ಯಾಕೆ ರಂಪಮಾಡುತ್ತೀರಾ?” ಎಂದು ಹೇಳುವಾಗ, ಮಗ ಎಲ್ಲಿ ತನ್ನನ್ನು ಬಿಟ್ಟು ‘ಶತ್ರುಪಕ್ಷ’ ಹಿಡಿಯುವನೋ ಎಂಬ ಭಯದಿಂದ ತಾಯಿ ಅವನಿಗೆ ಮಣಿಯುತ್ತಾಳೆ.

ನಿಮ್ಮ ಹದಿಹರೆಯದ ಮಗನಿಗೆ/ಳಿಗೆ ಮಾತಾಡಲು ಬಿಡಿ. ‘ಈಗ ಅಪ್ಪಅಮ್ಮನ ಮಧ್ಯದಲ್ಲೇ ಪ್ರೀತಿಯಿಲ್ಲ, ನನ್ನ ಮೇಲೂ ಅವರಿಗೆ ಪ್ರೀತಿ ಇರಲಿಕ್ಕಿಲ್ಲ’ ಅಥವಾ ‘ನನ್ನ ಹೆತ್ತವರೇ ನಿಯಮಗಳನ್ನು ಮುರಿದಿದ್ದಾರೆ, ನಾನು ಮುರಿದರೆ ಏನು ಮಹಾ?’ ಎಂದು ಹದಿಹರೆಯದವರು ತರ್ಕಿಸಬಹುದು. ಅವರ ಭಯ ನಿವಾರಿಸಿ, ಅವರ ತಪ್ಪು ಯೋಚನೆಗಳನ್ನು ತಿದ್ದಲಿಕ್ಕಾಗಿ ಅವರಿಗೆ ಮಾತಾಡಲು ತುಂಬ ಅವಕಾಶ ಕೊಡಿ. ಆದರೆ ಈ ಎಚ್ಚರಿಕೆ ವಹಿಸಿ: ಭಾವನಾತ್ಮಕ ಬೆಂಬಲಕ್ಕಾಗಿ ನಿಮ್ಮ ಹದಿಹರೆಯದ ಮಗ/ಮಗಳಲ್ಲಿ ನಿಮ್ಮ ಹೃದಯದ ನೋವನ್ನೆಲ್ಲ ತೋಡಿಕೊಳ್ಳಬೇಡಿ. ಅವರು ಮಕ್ಕಳು, ನಿಮ್ಮ ಸಮಸ್ಯೆಗಳ ಹೊರೆಯನ್ನು ಹೊರಬಲ್ಲ ವಯಸ್ಕರಲ್ಲ.

ಹದಿಹರೆಯದವನಿಗೆ/ಳಿಗೆ ನಿಮ್ಮ ಮಾಜಿ ಸಂಗಾತಿಯೊಂದಿಗೆ ಒಳ್ಳೇ ಸಂಬಂಧವನ್ನಿಡಲು ಉತ್ತೇಜಿಸಿ. ನೀವು ವಿಚ್ಛೇದಕೊಟ್ಟಿರುವ ವ್ಯಕ್ತಿ ನಿಮಗೆ ಮಾಜಿ ಸಂಗಾತಿಯಾಗಿದ್ದರೂ ನಿಮ್ಮ ಮಕ್ಕಳಿಗೆ ಮಾಜಿ ತಂದೆ/ತಾಯಿ ಅಲ್ಲ. ಅವರ ಬಗ್ಗೆ ನಿಮ್ಮ ಮಕ್ಕಳ ಹತ್ತಿರ ಕೆಟ್ಟಕೆಟ್ಟ ಮಾತುಗಳನ್ನಾಡುವುದು ಸಹ ಹಾನಿಕರ. “ವಿಚ್ಛೇದವೆಂಬ ರಣರಂಗದಲ್ಲಿ ಹೆತ್ತವರು ತಮ್ಮ ಮಕ್ಕಳನ್ನು ಅಸ್ತ್ರಗಳನ್ನಾಗಿ ಬಳಸುವುದಾದರೆ ಅಪಾಯಕಾರಿ ಪರಿಣಾಮಗಳು ಕಟ್ಟಿಟ್ಟಬುತ್ತಿ” ಎನ್ನುತ್ತದೆ ಕಂಗೆಟ್ಟಿರುವ ಹದಿಹರೆಯದವರು—ಹೆತ್ತವರು, ಹದಿಹರೆಯದವರು ಮತ್ತವರ ಕುಟುಂಬಗಳು ಬದಲಿಸಬೇಕಾದ ಪಥ (ಇಂಗ್ಲಿಷ್‌) ಎಂಬ ಪುಸ್ತಕ.

ನಿಮ್ಮ ಜಾಗ್ರತೆವಹಿಸಿ. ಕೆಲವೊಮ್ಮೆ ನೀವು ಭಾವನೆಗಳಡಿ ಹೂತುಹೋಗಬಹುದು. ಆದರೆ ಸೋತುಹೋಗಬೇಡಿ. ಒಳ್ಳೇ ನಿಯತಕ್ರಮ ಕಾಪಾಡಿಕೊಳ್ಳಿ. ನೀವು ಯೆಹೋವನ ಸಾಕ್ಷಿ ಆಗಿರುವಲ್ಲಿ, ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಮಗ್ನರಾಗಿರ್ರಿ. ಇದು ನಿಮಗೂ ನಿಮ್ಮ ಹದಿಹರೆಯದವನಿಗೂ/ಳಿಗೂ ಸಮತೋಲನ ಕಾಪಾಡಿಕೊಳ್ಳಲು ಸಹಾಯಮಾಡುವುದು.—ಕೀರ್ತನೆ 18:2; ಮತ್ತಾಯ 28:19, 20; ಇಬ್ರಿಯ 10:24, 25.

[ಪಾದಟಿಪ್ಪಣಿ]

^ ಬೈಬಲಿಗನುಸಾರ, ಸಂಗಾತಿಗೆ ವಿವಾಹಬಾಹಿರ ಲೈಂಗಿಕ ಸಂಬಂಧಗಳಿದ್ದಲ್ಲಿ ಮಾತ್ರ ಒಬ್ಬ ವ್ಯಕ್ತಿ ವಿಚ್ಛೇದಪಡೆದು ಬೇಕಾದರೆ ಪುನಃ ಮದುವೆಯಾಗಬಹುದು. (ಮತ್ತಾಯ 19:9) ಆದರೆ ದಾಂಪತ್ಯದ್ರೋಹ ಆಗಿರುವಾಗ, ವಿಚ್ಛೇದಮಾಡಬೇಕೋ ಇಲ್ಲವೋ ಎಂದು ನಿರ್ಣಯಿಸುವವರು ಕುಟುಂಬ ಸದಸ್ಯರೂ ಅಲ್ಲ ಬೇರೆಯವರೂ ಅಲ್ಲ ಬದಲಾಗಿ ನಿರ್ದೋಷಿ ಸಂಗಾತಿಯೇ.—ಗಲಾತ್ಯ 6:5.

[ಪುಟ 20ರಲ್ಲಿರುವ ಚಿತ್ರ]

ಮದುವೆ ದಿನದಂದು ನೀವು ಕೊಟ್ಟ ಮಾತನ್ನು ಪಾಲಿಸಲು ಶ್ರಮಿಸಿರಿ

[ಪುಟ 21ರಲ್ಲಿರುವ ಚಿತ್ರ]

ವಿಚ್ಛೇದದ ಬಳಿಕ ನಿಮ್ಮ ಮಗುವಿನ ಪಾಲನೆಮಾಡುವ ಹಕ್ಕು ಇಬ್ಬರಿಗೂ ಸಿಕ್ಕಿರುವಲ್ಲಿ, ಮಗನು/ಳು ನಿಮ್ಮ ಮಾಜಿ ಸಂಗಾತಿಯೊಂದಿಗೆ ಒಳ್ಳೇ ಸಂಬಂಧವನ್ನಿಡಲು ಉತ್ತೇಜಿಸಿರಿ