ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯಶಸ್ವಿಯಾದವರ ಕಿರುಪರಿಚಯ ಭಾಗ - I

ಯಶಸ್ವಿಯಾದವರ ಕಿರುಪರಿಚಯ ಭಾಗ - I

ಯಶಸ್ವಿಯಾದವರ ಕಿರುಪರಿಚಯ ಭಾಗ - I

ಎಚ್ಚರ! ಪತ್ರಿಕೆಯ ಈ ವಿಶೇಷ ಸಂಚಿಕೆ ಈ ಮುಂಚೆಯೇ ತೋರಿಸಿರುವಂತೆ ಯಶಸ್ವೀ ಕುಟುಂಬಗಳು ಸಹ ಸಮಸ್ಯೆಮುಕ್ತವಲ್ಲ. ಇದು ಅಚ್ಚರಿಯ ಸಂಗತಿಯಲ್ಲ ಏಕೆಂದರೆ ಬೈಬಲ್‌ ವರ್ಣಿಸುವಂತೆ ನಾವು ‘ನಿಭಾಯಿಸಲು ಕಷ್ಟಕರವಾದ ಕಠಿನಕಾಲಗಳಲ್ಲಿ’ ಜೀವಿಸುತ್ತಿದ್ದೇವೆ. (2 ತಿಮೊಥೆಯ 3:1) ಪ್ರತಿಯೊಂದು ಕುಟುಂಬದಲ್ಲಿ ಒಂದಲ್ಲಾ ಒಂದು ರೀತಿಯ ಸಮಸ್ಯೆಗಳೇಳುವುದು ಸಹಜ.

ಆದರೆ ನೆನಪಿಡಿ, ಕುಟುಂಬ ಜೀವನದಲ್ಲಿ ಯಶಸ್ಸು ಇಲ್ಲವೆ ಸಂತೋಷ ಪಡೆಯಲು ಪರಿಸ್ಥಿತಿಗಳು ಪರಿಪೂರ್ಣ ಆಗಿರಬೇಕೆಂದಿಲ್ಲ. ಬದಲಾಗಿ “ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು ಸಂತೋಷಿತರು” ಎಂದನು ಯೇಸು. (ಮತ್ತಾಯ 5:3) ಬೈಬಲ್‌ ಮೂಲತತ್ತ್ವಗಳನ್ನು ಪಾಲಿಸಿ ತಮ್ಮ ಆಧ್ಯಾತ್ಮಿಕ ಅಗತ್ಯವನ್ನು ಪೂರೈಸಿರುವ ಕುಟುಂಬಗಳು ಕಷ್ಟಕಾರ್ಪಣ್ಯಗಳ ಮಧ್ಯೆಯೂ ಯಶಸ್ಸನ್ನು ಪಡೆದಿವೆ. ಕೆಲವು ನಿದರ್ಶನಗಳು ಇಲ್ಲಿವೆ.

ಬುದ್ಧಿವೈಕಲ್ಯ ಮಗುವಿನ ಆರೈಕೆ. ಸ್ವಂತ ಕುಟುಂಬದವರನ್ನು ಪರಾಮರಿಸುವ ವಿಷಯಕ್ಕೆ ಬೈಬಲ್‌ ಆದ್ಯತೆ ಕೊಡುತ್ತದೆ. ಅವರಲ್ಲಿ ವಿಶೇಷ ಆರೈಕೆಯ ಅಗತ್ಯವಿರುವ ಕುಟುಂಬ ಸದಸ್ಯರೂ ಸೇರಿದ್ದಾರೆ. ಬೈಬಲ್‌ ಹೇಳುವುದು: “ಯಾವನಾದರೂ ತನ್ನ ಸ್ವಂತದವರಿಗೆ, ವಿಶೇಷವಾಗಿ ತನ್ನ ಮನೆವಾರ್ತೆಯ ಸದಸ್ಯರಿಗೆ ಅಗತ್ಯವಿರುವುದನ್ನು ಒದಗಿಸದಿದ್ದರೆ ಅವನು ನಂಬಿಕೆಯನ್ನು ನಿರಾಕರಿಸಿದವನೂ ನಂಬದವನಿಗಿಂತ ಕಡೆಯಾದವನೂ ಆಗಿದ್ದಾನೆ.”—1 ತಿಮೊಥೆಯ 5:8.

ಪುಟ 15ರಲ್ಲಿ, ದಕ್ಷಿಣ ಆಫ್ರಿಕಾದ ವಿಕ್ಟರ್‌ ಮತ್ತು ಅವರ ಪತ್ನಿ ಬುದ್ಧಿವೈಕಲ್ಯವಿರುವ ತಮ್ಮ ಮಗನನ್ನು 40ಕ್ಕಿಂತಲೂ ಹೆಚ್ಚು ವರ್ಷಗಳಿಂದ ಹೇಗೆ ಆರೈಕೆ ಮಾಡಿದ್ದಾರೆಂದು ತಿಳಿಸುತ್ತಾರೆ.

ದತ್ತುಮಗುವಾಗಿ ಬೆಳೆಯುವುದು. ಹೆತ್ತ ತಂದೆತಾಯಿಂದ ತೊರೆಯಲ್ಪಟ್ಟರೂ ಆತ್ಮಗೌರವ ಗಳಿಸಲು ಬೈಬಲ್‌ ಮೂಲತತ್ತ್ವಗಳು ಸಹಾಯಮಾಡುತ್ತವೆ. ವಾಸ್ತವದಲ್ಲಿ ಯೆಹೋವ ದೇವರು ಅನಾಥರಂಥ ‘ದಿಕ್ಕಿಲ್ಲದವರಿಗೆ ದಿಕ್ಕು’ ಎಂದು ಬೈಬಲ್‌ ಹೇಳುತ್ತದೆ.—ಕೀರ್ತನೆ 10:14.

ಪುಟ 16ರಲ್ಲಿ, ಯುನೈಟೆಡ್‌ ಸ್ಟೇಟ್ಸ್‌ನ ಕೆನ್ಯಾಟಾ ಎಂಬ ಯುವತಿ ಹೆತ್ತ ತಂದೆತಾಯಿಯನ್ನು ಎಂದೂ ಕಾಣದಿದ್ದದರಿಂದ ತನಗಾಗುವ ಭಾವನಾತ್ಮಕ ನೋವನ್ನು ನುಂಗಿ ಮುಂದೆಸಾಗಲು ಹೇಗೆ ಸಾಧ್ಯವಾಯಿತೆಂದು ತಿಳಿಸುತ್ತಾಳೆ.

ಹೆತ್ತವರಲ್ಲೊಬ್ಬರ ಸಾವಿನ ದುಃಖ ನಿಭಾಯಿಸುವುದು. ತಂದೆ ಅಥವಾ ತಾಯಿಯ ಸಾವು ಮನಸ್ಸಿನ ಮೇಲೆ ನೋವಿನ ಮಾಸದ ಕಲೆಯನ್ನು ಬಿಟ್ಟುಹೋಗುತ್ತದೆ. ಇಂಥ ಸಂದರ್ಭದಲ್ಲೂ ಬೈಬಲ್‌ ಸಹಾಯ ನೀಡುತ್ತದೆ. ಏಕೆಂದರೆ ಅದರ ಕರ್ತೃವಾದ ಯೆಹೋವನು ‘ಸಕಲ ಸಾಂತ್ವನದ ದೇವರು.’—2 ಕೊರಿಂಥ 1:3.

ಪುಟ 17ರಲ್ಲಿ, ಆಸ್ಟ್ರೇಲಿಯದ ಆಂಜೇಲಾ ಎಂಬ ಯುವತಿ ತನ್ನ ತಂದೆಯನ್ನು ಕಳಕೊಂಡ ದುಃಖವನ್ನು ನಿಭಾಯಿಸಲು ದೇವರೊಂದಿಗಿನ ಆಪ್ತಸ್ನೇಹ ತನಗೆ ಹೇಗೆ ಸಹಾಯಮಾಡುತ್ತಿದೆ ಎಂದು ವಿವರಿಸುತ್ತಾಳೆ.

ಎಲ್ಲ ಕುಟುಂಬಗಳಲ್ಲಿ ಯಾವುದಾದರೂ ಕಷ್ಟಸಮಸ್ಯೆ ಇದ್ದೇ ಇರುತ್ತದೆ. ಹಾಗಿದ್ದರೂ ಬೈಬಲ್‌ ಮೂಲತತ್ತ್ವಗಳ ಅನ್ವಯದಿಂದ ಯಾವುದೇ ಸವಾಲುಗಳನ್ನು ಯಶಸ್ವಿಕರವಾಗಿ ನಿಭಾಯಿಸಸಾಧ್ಯವಿದೆ. ಇದರ ನಿದರ್ಶನಗಳನ್ನು ಮುಂದಿನ ಪುಟಗಳಲ್ಲಿ ಓದಿ. (g09-E 10)

[ಪುಟ 15ರಲ್ಲಿರುವ ಚೌಕ/ಚಿತ್ರಗಳು]

ಬುದ್ಧಿವೈಕಲ್ಯ ಮಗುವಿನ ಆರೈಕೆ

ದಕ್ಷಿಣ ಆಫ್ರಿಕದ ವಿಕ್ಟರ್‌ ಮೇಯ್‌ನ್ಸ್‌ ಹೇಳಿದಂತೆ

“ನಮ್ಮ ಆ್ಯಂಡ್ರೂಗೆ ಈಗ 44 ವರ್ಷ. ಹುಟ್ಟಿದಂದಿನಿಂದ ಇವತ್ತಿನ ವರೆಗೆ ಅವನಿಗೆ ಬಟ್ಟೆ ತೊಡಿಸುವುದು, ಸ್ನಾನ ಮಾಡಿಸುವುದು ಎಲ್ಲ ನಾವೇ. ಕೆಲವೊಮ್ಮೆ ಊಟ ಕೂಡ ಮಾಡಿಸಬೇಕು.”

ನಮ್ಮ ಮಗ ಆ್ಯಂಡ್ರೂ ಹುಟ್ಟಿ ಒಂದು ವರ್ಷ ತುಂಬಿದರೂ ನಡೆಯಲು ಆರಂಭಿಸಲಿಲ್ಲ. ಅವನಲ್ಲೇನೋ ತೊಂದರೆಯಿದೆ ಎಂಬ ಸಂಶಯ ನಮ್ಮಲ್ಲಿ ಇಣುಕಿದ್ದು ಆಗಲೇ. ಒಮ್ಮೆ ಅವನಿಗೆ ಸೆಳವು ಉಂಟಾಗಿ ಮೂರ್ಛೆಹೋದ. ಕೂಡಲೆ ಅವನನ್ನು ಎತ್ತಿಕೊಂಡು ಆಸ್ಪತ್ರೆಗೆ ಧಾವಿಸಿದೆವು. ಅವನಿಗೆ ಫಿಟ್ಸ್‌ (ಎಪಿಲೆಪ್ಸಿ) ಇದೆಯೆಂದು ನಮಗೆ ಆಗ ತಿಳಿದುಬಂತು. ಆದರೆ ಅಷ್ಟೇ ಅಲ್ಲ. ನಂತರ ನಡೆಸಲಾದ ಅನೇಕ ವೈದ್ಯಕೀಯ ಪರೀಕ್ಷೆಗಳಿಂದ ಅವನ ಮಿದುಳಿನ ಬೆಳವಣಿಗೆ ಕುಂಠಿತವಾಗಿದೆ ಎಂದೂ ಪತ್ತೆಯಾಯಿತು.

ನಾನಾ ಬಗೆಯ ಚಿಕಿತ್ಸೆ ಪ್ರಯತ್ನಿಸಿದ ಬಳಿಕ ಆ್ಯಂಡ್ರೂನ ಫಿಟ್ಸ್‌ ಹೇಗೋ ಹಿಡಿತಕ್ಕೆ ಬಂತು. ಸ್ವಲ್ಪ ಕಾಲ ಅವನು ದಿನಕ್ಕೆ ಮೂರಾವರ್ತಿ ನಾಲ್ಕು ಬಗೆಯ ಮದ್ದನ್ನು ಸೇವಿಸಬೇಕಿತ್ತು. ಅವನ ಮಾನಸಿಕ ವಿಕಲತೆ ಔಷಧಿಯಿಂದ ಗುಣಪಡಿಸಲಾಗದ್ದು ಎಂಬುದು ಕಹಿ ಸತ್ಯ. ಈಗ 44ರ ಪ್ರಾಯದ ಆ್ಯಂಡ್ರೂಗೆ ಬರೀ ಐದು-ಆರು ವರ್ಷದ ಮಗುವಿಗಿರುವ ಮಾನಸಿಕ ಸಾಮರ್ಥ್ಯವಿದೆಯಷ್ಟೇ.

ಅಂಥ ಮಕ್ಕಳನ್ನು ನೋಡಿಕೊಳ್ಳಲಿಕ್ಕೆಂದೇ ಇರುವ ಕೇಂದ್ರಗಳಲ್ಲಿ ಆ್ಯಂಡ್ರೂ ಅನ್ನು ಸೇರಿಸುವಂತೆ ಡಾಕ್ಟರ್ಸ್‌ ಸಲಹೆಯಿತ್ತರು. ಆದರೆ ಅವನ ಅಗತ್ಯಗಳನ್ನು ಪೂರೈಸಲು ನಾವು ಶಕ್ತರಾಗಿದದ್ದರಿಂದ, ಅವನ ಆರೈಕೆ ಸುಲಭವಲ್ಲ ಎಂದು ಗೊತ್ತಿದ್ದರೂ ಮನೆಯಲ್ಲೇ ಅವನನ್ನು ನೋಡಿಕೊಳ್ಳುವ ನಿರ್ಧಾರಮಾಡಿದೆವು.

ಅವನ ಆರೈಕೆಗೆ ಮನೆಯಲ್ಲಿ ಎಲ್ಲರೂ ಕೈಜೋಡಿಸಿದರು. ಆಗ ನಮ್ಮೊಟ್ಟಿಗಿದ್ದ ನಮ್ಮ ಇಬ್ಬರು ಹೆಣ್ಣುಮಕ್ಕಳು ಮತ್ತು ಇನ್ನೊಬ್ಬ ಮಗ ಕೊಟ್ಟ ಬೆಂಬಲ ಅಪಾರ. ನಾನು ಅವರಿಗೆ ಆಭಾರಿ! ಅಲ್ಲದೆ, ಯೆಹೋವನ ಸಾಕ್ಷಿಗಳಾದ ನಮಗೆ ನಮ್ಮ ಕ್ರೈಸ್ತ ಸಭೆಯವರು ಅತ್ಯಧಿಕ ಬೆಂಬಲ ನೀಡುತ್ತಾರೆ. ಕೆಲವೊಮ್ಮೆ ಅವರು ನಮಗೆ ಊಟೋಪಚಾರ ಮಾಡಿದ್ದಾರೆ. ನಾವು ಶುಶ್ರೂಷೆಯಲ್ಲಿ ಭಾಗವಹಿಸುವಾಗ ಅಥವಾ ನಮಗೆ ಬೇರೆ ಕೆಲಸಗಳಿರುವಾಗ ಆ್ಯಂಡ್ರೂ ಅನ್ನು ನೋಡಿಕೊಂಡಿದ್ದಾರೆ.

‘ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳದ’ ದಿನ ಬರಲಿರುವ ಕುರಿತು ಯೆಶಾಯ 33:24ರಲ್ಲಿರುವ ದೇವರ ವಾಗ್ದಾನವನ್ನು ನಾವು ಯಾವಾಗಲೂ ಮನಸ್ಸಿನಲ್ಲಿಡುತ್ತೇವೆ. ಒಂದು ಹೊಸ ಲೋಕವನ್ನು ತರುವ ಮತ್ತು ಎಲ್ಲ ಅಸ್ವಸ್ಥತೆಗಳನ್ನು ಹೇಳಹೆಸರಿಲ್ಲದ ಹಾಗೆ ಮಾಡುವ ದೇವರ ಉದ್ದೇಶವು ಖಂಡಿತ ಈಡೇರುವುದೆಂಬ ಪೂರ್ಣ ಭರವಸೆ ನಮಗಿದೆ. (2 ಪೇತ್ರ 3:13) ಆದುದರಿಂದ ಆ್ಯಂಡ್ರೂ ಗುಣಮುಖನಾಗುವ ಆ ದಿನಕ್ಕಾಗಿ ನಾವು ಎದುರುನೋಡುತ್ತೇವೆ. ಅಲ್ಲಿ ವರೆಗೆ ದೇವರ ರಾಜ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ನಮ್ಮ ಬದುಕಿನಲ್ಲಿ ಆದ್ಯತೆ ಕೊಡುವಲ್ಲಿ ಯೇಸು ಹೇಳಿದಂತೆ ನಮ್ಮ ಬೇರೆಲ್ಲ ಅಗತ್ಯಗಳನ್ನು ದೇವರು ಪೂರೈಸುವನೆಂದೂ ನಾವು ನಂಬುತ್ತೇವೆ. (ಮತ್ತಾಯ 6:33) ಇದನ್ನು ನಾವು ಸ್ವತಃ ಅನುಭವಿಸಿ ನೋಡಿದ್ದೇವೆ. ನಮಗೆ ಎಂದೂ ಯಾವುದಕ್ಕೂ ಕೊರತೆಯಾಗಿಲ್ಲ.

ಅಸ್ವಸ್ಥ ಕುಟುಂಬ ಸದಸ್ಯರನ್ನು ಎಲ್ಲರೂ ಮನೆಯಲ್ಲಿ ಆರೈಕೆಮಾಡಲು ಶಕ್ತರಲ್ಲ ನಿಜ. ಹಾಗೆ ಆರೈಕೆ ಮಾಡುತ್ತಿರುವವರಿಗಾದರೋ ನಾನು ಕೆಲವು ವಿಷಯಗಳನ್ನು ಶಿಫಾರಸ್ಸು ಮಾಡಲಿಚ್ಛಿಸುತ್ತೇನೆ. ಒಂದು, ಕ್ರಮವಾಗಿ ಕಟ್ಟಾಸಕ್ತಿಯಿಂದ ಪ್ರಾರ್ಥಿಸಿರಿ. (1 ಪೇತ್ರ 5:6, 7) ಎರಡು, ನಿಮ್ಮ ಮಗುವಿಗೆ ನಿಮ್ಮ ಪ್ರೀತಿವಾತ್ಸಲ್ಯದ ಮಹಾಪೂರವನ್ನು ಹರಿಸಿರಿ ಮತ್ತು ಯೆಹೋವ ದೇವರ ಕುರಿತು ಕಲಿಯುವ ಸಾಮರ್ಥ್ಯ ಅವರಿಗಿಲ್ಲ ಎಂದೆಣಿಸಬೇಡಿ. (ಎಫೆಸ 6:4) ಮೂರು, ಅವರ ಆರೈಕೆಯಲ್ಲಿ ಇಡೀ ಕುಟುಂಬವನ್ನು ಒಳಗೂಡಿಸಿ, ಸಹಾಯಮಾಡಲು ಅವಕಾಶಕೊಡಿ. ನಾಲ್ಕು, ನಿಮ್ಮ ಮಗುವಿಗೆ ಅತಿ ಹೆಚ್ಚಿನ ಪ್ರೀತಿವಾತ್ಸಲ್ಯ ಸಿಗುವುದು ನಿಮ್ಮ ಮನೆಯಲ್ಲೇ ಎಂದು ಮರೆಯದಿರಿ. ಎಲ್ಲರ ಪರಿಸ್ಥಿತಿಗಳೂ ಬೇರೆ ಬೇರೆ ನಿಜ. ನಾವಂತೂ ಮನೆಯಲ್ಲೇ ಆ್ಯಂಡ್ರೂ ಅನ್ನು ಆರೈಕೆ ಮಾಡುತ್ತಿರುವುದಕ್ಕೆ ಯಾವತ್ತೂ ವಿಷಾದಿಸಿಲ್ಲ. ಅವನು ನನ್ನ ಮುದ್ದಿನ ಮಗ. ದೊಡ್ಡ ಗಂಡಸೂ ಹೌದು! (g09-E 10)

[ಪುಟ 16ರಲ್ಲಿರುವ ಚೌಕ/ಚಿತ್ರಗಳು]

ದತ್ತುಮಗುವಾಗಿ ಬೆಳೆಯುವುದು

ಯುನೈಟೆಡ್‌ ಸ್ಟೇಟ್ಸ್‌ನ ಕೆನ್ಯಾಟಾ ಯಂಗ್‌ ಹೇಳಿದಂತೆ

“ಮಲಮಗುವಿಗೆ ಹೆತ್ತವರಲ್ಲಿ ಒಬ್ಬರಾದರೂ ರಕ್ತಸಂಬಂಧಿ ಆಗಿರುತ್ತಾರೆ. ದತ್ತು ಮಗಳಾದ ನನಗೆ ಅದೂ ಇಲ್ಲ. ನಾನು ಯಾರನ್ನು ಹೋಲುತ್ತೇನೆಂದು ಕೂಡ ನನಗೆ ತಿಳಿದಿಲ್ಲ.”

ನನಗೆ ನನ್ನ ತಂದೆ ಯಾರೆಂದು ಗೊತ್ತಿಲ್ಲ, ಹೆತ್ತ ತಾಯಿಯ ಮುಖವನ್ನೂ ನೋಡಿಲ್ಲ. ನಾನು ನನ್ನ ಅಮ್ಮನ ಹೊಟ್ಟೆಯಲ್ಲಿದ್ದಾಗ ಅವರು ಮದ್ಯ, ಮಾದಕವಸ್ತುಗಳನ್ನು ಸೇವಿಸಿದ್ದರು. ಹುಟ್ಟಿದ ಬಳಿಕ ನನ್ನನ್ನು ಅನಾಥಾಲಯದಲ್ಲಿ ಬಿಡಲಾಗಿತ್ತು. ಬಳಿಕ ಒಂದರ ನಂತರ ಇನ್ನೊಂದರಂತೆ ಹಲವಾರು ಅನಾಥಾಲಯಗಳಲ್ಲಿ ವಾಸ. ಎರಡು ವರ್ಷ ತುಂಬುವಷ್ಟರಲ್ಲಿ ಒಂದು ದಂಪತಿ ನನ್ನನ್ನು ದತ್ತುತೆಗೆದುಕೊಂಡರು.

ಸಮಾಜಸೇವಕಿಯೊಬ್ಬರು ನನ್ನ ದತ್ತು ತಂದೆಗೆ ನನ್ನ ಫೋಟೋ ತೋರಿಸಿದ ಕೂಡಲೆ ದತ್ತುತೆಗೆದುಕೊಳ್ಳಲು ಒಪ್ಪಿಕೊಂಡರಂತೆ. ನನಗೂ ಹೊಸ ಅಮ್ಮ ತುಂಬ ಇಷ್ಟವಾದರು. ‘ನೀವೇ ನನ್ನ ಅಮ್ಮ, ನಾನು ನಿಮ್ಮ ಜೊತೆ ಮನೆಗೆ ಬರುತ್ತೇನೆ’ ಎಂದು ಆಗ ಅವರಿಗೆ ಹೇಳಿದ್ದೆನಂತೆ.

ನಾನೇನಾದರೂ ತಪ್ಪು ಮಾಡಿದರೆ ಮತ್ತೆ ಎಲ್ಲಿ ಅನಾಥಾಲಯದಲ್ಲಿ ಬಿಟ್ಟುಬರುತ್ತಾರೋ ಎಂಬ ಭಯ ಚಿಕ್ಕದರಲ್ಲಿ ಇದ್ದದ್ದು ನನಗಿನ್ನೂ ನೆನಪಿದೆ. ಸಪ್ಪಗೆ ಇರಬಾರದು ಅಥವಾ ಬೇರೆ ಮಕ್ಕಳಂತೆ ಕಾಯಿಲೆ ಬೀಳಬಾರದು ಎಂದೆಲ್ಲಾ ನೆನಸುತ್ತಿದ್ದೆ. ನೆಗಡಿ ಕೂಡ ಬಾರದಂತೆ ಜಾಗ್ರತೆ ವಹಿಸುತ್ತಿದ್ದೆ! ಆದರೆ ನನ್ನ ಹೆತ್ತವರು ನನ್ನನ್ನು ಪ್ರೀತಿಸುತ್ತಾರೆಂದೂ ನನ್ನನ್ನೆಂದು ಬಿಟ್ಟುಬಿಡುವುದಿಲ್ಲವೆಂದೂ ಆಗಾಗ್ಗೆ ಧೈರ್ಯ ತುಂಬಿಸುತ್ತಿದ್ದರು.

ಈಗ ಬೆಳೆದು ದೊಡ್ಡವಳಾದ ಮೇಲೂ ಕೆಲವೊಮ್ಮೆ, ಹೆತ್ತ ತಂದೆತಾಯಿಯಿಂದ ಬೆಳೆಸಲ್ಪಟ್ಟ ಮಕ್ಕಳಷ್ಟು ನಾನು ಅಮೂಲ್ಯಳಲ್ಲ ಎಂಬ ಭಾವನೆ ಕಾಡುತ್ತಿರುತ್ತದೆ. ನಾನು ಸ್ವಲ್ಪ ಸಾವರಿಸಿಕೊಳ್ಳುವಷ್ಟರಲ್ಲಿ ಯಾರಾದರೂ ಬಂದು, “ನಿನ್ನನ್ನು ದತ್ತುತೆಗೆದುಕೊಳ್ಳಲು ಮನಸ್ಸುಮಾಡಿದ ಇಷ್ಟು ಒಳ್ಳೇ ಅಪ್ಪಅಮ್ಮಗೆ ನೀನು ಋಣಿಯಾಗಿರಬೇಕು!” ಎಂದು ಹೇಳಿಬಿಡುತ್ತಾರೆ. ನಾನು ಖಂಡಿತ ನನ್ನ ಅಪ್ಪಅಮ್ಮಗೆ ಆಭಾರಿ, ಇಲ್ಲಾಂತ ಅಲ್ಲ. ಆದರೆ ಅಂಥ ಮಾತುಗಳು, ನಾನು ಅಯೋಗ್ಯಳು ಹಾಗಾಗಿ ನನಗೆ ಪ್ರೀತಿ ತೋರಿಸಲು ಅವರು ಅಸಾಧಾರಣ ಪ್ರಯತ್ನ ಮಾಡಬೇಕಾಯಿತೇನೋ ಎಂದು ನೆನಸುವಂತೆ ಮಾಡಿ ಮನನೋಯಿಸುತ್ತವೆ.

ನನ್ನ ಹೆತ್ತ ತಂದೆ ಯಾರೆಂದು ತಿಳಿಯದೇ ಹೋಗಬಹುದು ಎಂಬ ಸಂಗತಿ ನನ್ನಿಂದ ಅರಗಿಸಿಕೊಳ್ಳಲು ಆಗುತ್ತಿಲ್ಲ. ನನ್ನ ಹೆತ್ತ ತಾಯಿ ನನ್ನನ್ನು ಬೆಳೆಸಲಿಕ್ಕಾದರೂ ತನ್ನ ದುಶ್ಚಟಗಳನ್ನು ಬಿಡಲಿಲ್ಲ, ನನಗಿಂತಲೂ ಮದ್ಯ ಮಾದಕಗಳೇ ಆಕೆಗೆ ಮುಖ್ಯವಾಯಿತಲ್ಲಾ ಎಂದು ನೆನಸಿ ಕೆಲವೊಮ್ಮೆ ದುಃಖ ಉಮ್ಮಳಿಸಿ ಬರುತ್ತದೆ. ಬೇರೆ ಸಮಯದಲ್ಲಿ ಆಕೆಯನ್ನು ನೆನಸಿ ಮರುಕ ಹುಟ್ಟುತ್ತದೆ. ಎಂದಾದರೂ ಆಕೆಯನ್ನು ಭೇಟಿಯಾದರೆ, ನಾನು ಸಾರ್ಥಕ ಬದುಕು ನಡಿಸುತ್ತಿದ್ದೇನೆ ಮತ್ತು ನನ್ನನ್ನು ಅನಾಥಾಲಯದಲ್ಲಿ ಬಿಟ್ಟದ್ದಕ್ಕಾಗಿ ವಿಷಾದಿಸಬೇಡಿ ಎಂದು ಹೇಳಬೇಕೆನ್ನುವ ಯೋಚನೆ ಆಗಾಗ್ಗೆ ಬರುತ್ತದೆ.

ನನ್ನ ದತ್ತು ಹೆತ್ತವರು ಯೆಹೋವನ ಸಾಕ್ಷಿಗಳು. ನಾನು ಅವರಿಂದ ಪಡೆದಿರುವ ಅತ್ಯುತ್ತಮ ಉಡುಗೊರೆಗಳಲ್ಲಿ ಒಂದು ಬೈಬಲ್‌ ಜ್ಞಾನವೇ. ಕೀರ್ತನೆ 27:10ರಲ್ಲಿರುವ ಮಾತುಗಳು ಯಾವಾಗಲೂ ನನಗೆ ಸಾಂತ್ವನ ಕೊಟ್ಟಿವೆ. ಅದನ್ನುವುದು: “ತಂದೆತಾಯಿಗಳು ನನ್ನನ್ನು ತೊರೆದುಬಿಟ್ಟರೇನು; ಯೆಹೋವನು ನನ್ನನ್ನು ಸೇರಿಸಿಕೊಳ್ಳುವನು.” ಈ ಮಾತು ನನ್ನ ಬದುಕಿನಲ್ಲಿ ಸತ್ಯ. ದತ್ತು ಮಗಳಾಗಿರುವುದರಿಂದ ಪ್ರಯೋಜನಗಳೂ ಸಿಕ್ಕಿವೆ. ಉದಾಹರಣೆಗೆ, ನನ್ನ ಸ್ವಂತ ಕುಟುಂಬದ ಬಗ್ಗೆ ತಿಳಿದಿಲ್ಲ ಅನ್ನುವುದಕ್ಕೊ ಏನೋ ನನಗೆ ಜನರ ಬಗ್ಗೆ, ಅವರ ಹಿನ್ನೆಲೆ ಮತ್ತು ಬದುಕಿನ ಕುರಿತು ತಿಳಿಯಲು ತುಂಬ ಆಸಕ್ತಿ. ನನಗೆ ಜನರ ಮೇಲೆ ಪ್ರೀತಿಯಿದೆ ಮತ್ತು ಇದು ಕ್ರೈಸ್ತ ಶುಶ್ರೂಷೆಯಲ್ಲಿ ಅತಿ ಪ್ರಾಮುಖ್ಯ. ಯೆಹೋವನ ಸಾಕ್ಷಿಯಾಗಿರುವುದೂ ಬೈಬಲ್‌ ಕುರಿತು ಇತರರೊಂದಿಗೆ ಮಾತಾಡುವುದೂ ಆತ್ಮಗೌರವ ಗಳಿಸಲು ಸಹಾಯಮಾಡಿದೆ ಹಾಗೂ ಬದುಕಿಗೊಂದು ಅರ್ಥಕೊಟ್ಟಿದೆ. ಖಿನ್ನಳಾಗುವಾಗ ಮನೆಯಲ್ಲಿ ಕೂರದೆ ಬೇರೆಯವರಿಗೆ ಸಹಾಯಮಾಡಲು ಹೋಗುತ್ತೇನೆ. ಜನರಿಗೆ ಬೈಬಲ್‌ ಕುರಿತು ಬೋಧಿಸುವುದು ಅವರೊಂದಿಗೆ ಸ್ನೇಹಸಂಬಂಧ ಬೆಸೆಯಲು ಸಾಧ್ಯಮಾಡುತ್ತದೆ. ಪ್ರತಿಯೊಬ್ಬರಿಗೂ ತಮ್ಮ ಬದುಕಿನ ಕುರಿತು ಹೇಳಲು ಒಂದಲ್ಲಾ ಒಂದು ಕಥೆಯಿರುತ್ತದೆ. (g09-E 10)

[ಪುಟ 17ರಲ್ಲಿರುವ ಚೌಕ/ಚಿತ್ರಗಳು]

ಹೆತ್ತವರಲ್ಲೊಬ್ಬರ ಸಾವಿನ ದುಃಖ ನಿಭಾಯಿಸುವುದು

ಆಸ್ಟ್ರೇಲಿಯದ ಆಂಜೇಲಾ ರಟ್‌ಗರ್ಸ್‌ ಹೇಳಿದಂತೆ

“ನನ್ನ ಅಪ್ಪ ಸತ್ತಾಗ, ನನಗಿದ್ದ ಭದ್ರ ಕೋಟೆಯನ್ನು ಯಾರೋ ಕೆಡವಿಹಾಕಿದಂತೆ ಅನಿಸಿತು. ನನ್ನ ಬಗ್ಗೆ ಎಲ್ಲ ತಿಳಿದಿದ್ದ, ನನ್ನ ಬದುಕಿನಲ್ಲಿ ಏನೇ ಎಡವಟ್ಟಾದರೂ ಅದನ್ನು ಸರಿಪಡಿಸುತ್ತಿದ್ದ ಏಕೈಕ ವ್ಯಕ್ತಿ ಇನ್ನಿಲ್ಲವಾದರು.”

ನನ್ನ ತಂದೆ ಸತ್ತು ಹತ್ತು ವರ್ಷಗಳಾದವು. ಆಗ ನನಗಿನ್ನು ಹದಿವಯಸ್ಸು. ಸಾಯುವುದಕ್ಕೆ ಆರು ತಿಂಗಳ ಮುಂಚೆ ಅವರಿಗೆ ಆಪರೇಷನ್‌ ಆಗಿತ್ತು. ಅವರಿನ್ನು ಆಸ್ಪತ್ರೆಯಲ್ಲಿರುವಾಗಲೇ ಡಾಕ್ಟರ್‌ ತಮ್ಮಿಂದ ಇನ್ನೇನೂ ಮಾಡಲಾಗದೆಂದು ಹೇಳಿದರು. ಇದನ್ನು ಕೇಳಿ ಬೇರೇನಾದರೂ ದಾರಿಯಿದೆಯೋ ಎಂದು ಅಮ್ಮ ತಿಳಿಯಲು ಪ್ರಯತ್ನಿಸಿದರು, ಅಣ್ಣ ಅಲ್ಲೇ ಪ್ರಜ್ಞೆತಪ್ಪಿ ಬಿದ್ದ, ನನಗಂತೂ ಆಕಾಶವೇ ತಲೆ ಮೇಲೆ ಕಳಚಿಬಿದ್ದಂತಾಯಿತು. ಆರು ತಿಂಗಳ ಬಳಿಕ ನನ್ನ ತಂದೆ ತೀರಿಹೋದರು.

ಸ್ವಲ್ಪ ಸಮಯ ನನ್ನಲ್ಲಿ ಗೊಂದಲಮಯ ಭಾವನೆಗಳು ಮನೆಮಾಡಿದವು. ಉದಾಹರಣೆಗೆ, ಸ್ನೇಹಿತರು ನನ್ನನ್ನು ಅರ್ಥಮಾಡಿಕೊಳ್ಳಬೇಕೆಂದು ಬಯಸಿದೆನಾದರೂ ಅವರು ನನಗೆ ‘ಅಯ್ಯೋ ಪಾಪ’ ಅನ್ನುವುದು ಇಷ್ಟವಿರಲಿಲ್ಲ. ಆದುದರಿಂದ ನನ್ನ ದುಃಖವನ್ನು ಮನಸ್ಸಿನಲ್ಲೇ ಅದುಮಿಟ್ಟುಕೊಂಡೆ. ಇನ್ನೊಂದೆಡೆ, ಒಳಗೊಳಗೆ ಕೊರಗುತ್ತಿದ್ದರೂ ಅವರೊಂದಿಗೆ ಬೆರೆತು ನಗುನಗುತ್ತಾ ಇದ್ದರೆ ಮೊದಲಿನಂತೆ ಆಗಿದ್ದೇನೆಂದು ನೆನಸ್ಯಾರು ಎಂಬ ಭಯ ಕೂಡ ಇತ್ತು. ಹೀಗೆಲ್ಲಾ ಮಾಡಿದಾಗ ನನ್ನ ಸ್ನೇಹಿತರಿಗೆ ಎಷ್ಟು ಕಷ್ಟ ಆಗಿದ್ದಿರಬೇಕೆಂದು ನಾನೀಗ ಯೋಚಿಸುತ್ತೇನೆ!

ಅಪ್ಪನ ಸಾವಿನ ಬಗ್ಗೆ ಈಗಲೂ ತಪ್ಪಿತಸ್ಥ ಭಾವನೆಗಳು ನನ್ನನ್ನು ಕಾಡುತ್ತಿವೆ. ನಾನು ಅವರಿಗೆ, “ನಿಮ್ಮನ್ನು ತುಂಬ ಪ್ರೀತಿಸುತ್ತೇನೆ ಅಪ್ಪಾ” ಎಂದು ಇನ್ನಷ್ಟು ಸಲ ಹೇಳಬೇಕಿತ್ತು, ಇನ್ನಷ್ಟು ಸಲ ಅಪ್ಪಿಕೊಳ್ಳಬೇಕಿತ್ತು, ಇನ್ನಷ್ಟು ಸಮಯ ಕಳೆಯಬೇಕಿತ್ತು ಎಂದು ಈಗ ಅನಿಸುತ್ತದೆ. ‘ಒಂದುವೇಳೆ ಅಪ್ಪ ಬದುಕಿರುತ್ತಿದ್ದರೆ ಹಾಗೆ ಯೋಚಿಸುವಂತೆ ಬಿಡುತ್ತಿರಲಿಲ್ಲ’ ಎಂದು ನನಗೇ ಹೇಳಿಕೊಳ್ಳುತ್ತೇನಾದರೂ ಅದು ನನ್ನ ಮನಸ್ಸನ್ನು ಕೊರೆಯುತ್ತಾ ಇರುತ್ತದೆ.

ಸತ್ತವರು ಪುನಃ ಜೀವಿತರಾಗಿ ಬರುವರೆಂದು ಬೈಬಲ್‌ ಕೊಡುವ ನಿರೀಕ್ಷೆಯು ಯೆಹೋವನ ಸಾಕ್ಷಿಯಾದ ನನಗೆ ಬಹಳ ಸಾಂತ್ವನ ನೀಡಿದೆ. (ಯೋಹಾನ 5:28, 29) ನನ್ನ ಅಪ್ಪ ವಿದೇಶಕ್ಕೆ ಹೋಗಿದ್ದಾರೆಂದು ನಾನು ಕಲ್ಪಿಸಿಕೊಳ್ಳುತ್ತೇನೆ. ಅವರು ಖಂಡಿತ ಮನೆಗೆ ಹಿಂದಿರುಗುವರು ಆದರೆ ಆ ದಿನ ಯಾವತ್ತು ಅಂತ ಮಾತ್ರ ತಿಳಿದಿಲ್ಲ. ವಿಚಿತ್ರ ಏನೆಂದರೆ, ಅಪ್ಪ ಸತ್ತಾಗ ಇತರರು ನನಗೆ “ನಿನ್ನ ಅಪ್ಪ ಪುನರುತ್ಥಾನವಾಗಿ ಬರಲಿಕ್ಕಿದ್ದಾರೆ” ಎಂದಾಗ ನನಗದರಿಂದ ಮೊದಮೊದಲು ಸಾಂತ್ವನ ಸಿಗಲಿಲ್ಲ. “ಅವರು ನನಗೆ ಈಗಲೇ ಬೇಕು” ಎಂದು ಅನಿಸುತ್ತಿತ್ತು. ಆದರೆ, ಅವರು ವಿದೇಶಕ್ಕೆ ಹೋಗಿದ್ದಾರೆಂಬ ದೃಷ್ಟಾಂತ ನನಗೆ ಸಹಾಯಮಾಡಿತು. ಅದು, ಪುನರುತ್ಥಾನ ಭವಿಷ್ಯದಲ್ಲಾಗಲಿದೆ ಎಂಬುದನ್ನು ದೃಷ್ಟಾಂತಿಸಿ, ಅದೇ ಸಮಯದಲ್ಲಿ ದುಃಖವನ್ನು ನಿಭಾಯಿಸಲು ನನ್ನನ್ನು ಶಕ್ತಗೊಳಿಸಿದೆ.

ಜೊತೆ ಕ್ರೈಸ್ತರು ಕೊಟ್ಟ ಬೆಂಬಲ ಅಪಾರ. ಅವರಲ್ಲಿ ಒಬ್ಬರು ಹೇಳಿದ ಮಾತಂತೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಅವರಿಗೆ ನನ್ನ ತಂದೆಯ ಸಾವಿನ ಕುರಿತು ಮಾತಾಡಲಿಕ್ಕೂ ತುಂಬ ದುಃಖವಾಗುತ್ತದೆ ಆದರೆ ನನ್ನ ಬಗ್ಗೆ ಮತ್ತು ನನ್ನ ಕುಟುಂಬದ ಬಗ್ಗೆ ಯೋಚಿಸುತ್ತಿರುತ್ತಾರೆಂದು ಅವರು ಹೇಳಿದರು. ನಾನು ಯಾವಾಗಲೂ ಅವರ ಮಾತನ್ನು ನೆನಪಿಸಿಕೊಳ್ಳುತ್ತಿದ್ದೆ. ಇದು, ಬೇರೆಯವರು ನನ್ನ ತಂದೆ ಬಗ್ಗೆ ಮಾತಾಡದಿದ್ದರೂ ನಮ್ಮ ಮತ್ತು ನಮ್ಮ ಕುಟುಂಬದ ಬಗ್ಗೆ ಯೋಚಿಸುತ್ತಾರೆಂದು ಅರ್ಥಮಾಡಿಕೊಳ್ಳಲು ಸಹಾಯಮಾಡಿತು. ಈ ವಿಚಾರ ನನಗೆ ಎಷ್ಟೋ ನೆಮ್ಮದಿ ತಂದಿತು!

ತಂದೆ ಸತ್ತು ನಾಲ್ಕು ತಿಂಗಳ ಬಳಿಕ ಅಮ್ಮ ಇತರರಿಗೆ ದೇವರ ಕುರಿತು ತಿಳಿಸುವುದರಲ್ಲಿ ಹೆಚ್ಚು ಸಮಯ ಕಳೆಯಲಾರಂಭಿಸಿದರು ಮತ್ತು ಅದರಿಂದ ಅವರಿಗೆ ಭಾರೀ ಸಂತೋಷ ಸಿಗುತ್ತಿರುವುದನ್ನು ನೋಡಿದೆ. ಹಾಗಾಗಿ ನಾನೂ ಅವರನ್ನು ಜೊತೆಗೂಡಿದೆ. ಇತರರಿಗೆ ಸಹಾಯ ಮಾಡುವುದರಿಂದ ಸ್ವತಃ ನಮಗೆ ದುಃಖ ನಿಭಾಯಿಸಲು ಸಾಧ್ಯವಾಗುವುದನ್ನು ನೋಡಿ ಆಶ್ಚರ್ಯವಾಗುತ್ತದೆ. ಇದು, ಯೆಹೋವ ದೇವರ ವಾಕ್ಯದಲ್ಲಿ ಮತ್ತು ಆತನ ವಾಗ್ದಾನಗಳಲ್ಲಿ ನನ್ನ ನಂಬಿಕೆಯನ್ನು ಬಲಪಡಿಸಿದೆ. ಅಲ್ಲದೆ ನನ್ನ ನೋವಿಗಿಂತಲೂ ಬೇರೆಯವರ ಕುರಿತು ಹೆಚ್ಚು ಯೋಚಿಸಲು ಅದು ನನಗೆ ಇವತ್ತಿಗೂ ಸಹಾಯಮಾಡಿದೆ. (g09-E 10)