ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿವಾಹಕ್ಕೆ ಮುಂಚೆ ಒಟ್ಟಿಗೆ ಬಾಳುವುದು ಸರಿಯೋ?

ವಿವಾಹಕ್ಕೆ ಮುಂಚೆ ಒಟ್ಟಿಗೆ ಬಾಳುವುದು ಸರಿಯೋ?

ಬೈಬಲಿನ ದೃಷ್ಟಿಕೋನ

ವಿವಾಹಕ್ಕೆ ಮುಂಚೆ ಒಟ್ಟಿಗೆ ಬಾಳುವುದು ಸರಿಯೋ?

ನೀವು ಒಂದು ಸೂಟ್‌ ಅಥವಾ ಒಂದು ಡ್ರೆಸ್ಸ್‌ ಅನ್ನು ಮೊದಲು ಧರಿಸಿ ನೋಡದೆ ಖರೀದಿಸುವಿರೋ? ಖಂಡಿತ ಇಲ್ಲ. ಏಕೆಂದರೆ ಆ ಬಟ್ಟೆ ನಿಮ್ಮ ಅಳತೆಯದ್ದಲ್ಲ ಎಂದು ಆಮೇಲೆ ಗೊತ್ತಾದರೆ ನೀವು ವ್ಯಯಿಸಿದ ಸಮಯವೂ ವ್ಯರ್ಥ ಹಣವೂ ವ್ಯರ್ಥ.

ಇಂಥ ತರ್ಕವನ್ನು ಅನೇಕ ಜನರು ವಿವಾಹಕ್ಕೆ ಅನ್ವಯಿಸುತ್ತಾರೆ. ವೈವಾಹಿಕ ಜೀವನಕ್ಕೆ ಕಾಲಿಡುವ ಮುನ್ನ ಗಂಡುಹೆಣ್ಣು ಸ್ವಲ್ಪ ಕಾಲ ಜೊತೆಯಾಗಿ ಜೀವಿಸಿ ಕಲೆತು ಬಾಳಲು ಸಾಧ್ಯವೋ ಎಂದು ನೋಡುವುದು ಒಳ್ಳೇದೆಂಬುದು ಅವರೆಣಿಕೆ. ‘ಇಬ್ಬರಿಗೂ ಒಗ್ಗದಿರುವಲ್ಲಿ ಅವರು ತಮ್ಮ ತಮ್ಮ ದಾರಿ ಹಿಡಿಯಬಹುದು. ಕೋರ್ಟ್‌ಕಛೇರಿ ಅಲೆದಾಡಿ, ಹಣ ಸುರಿದು ವಿಚ್ಛೇದ ಪಡೆಯುವ ಗೋಜು ಇಲ್ಲ’ ಎಂದವರ ತರ್ಕ.

ಕೆಲವರಿಗೆ ಹಾಗನಿಸಲು ಕಾರಣವೇನು? ಪ್ರಾಯಶಃ ಮಿತ್ರರೊಬ್ಬರು ಸಂಗಾತಿಯ ದಬ್ಬಾಳಿಕೆಯನ್ನು ಸಹಿಸಿಕೊಳ್ಳುವುದನ್ನು ಅವರು ನೋಡಿರಬಹುದು. ಅಥವಾ ಪ್ರೀತಿಯಿಲ್ಲದ ನಿಸ್ಸಾರ ವೈವಾಹಿಕ ಬದುಕಿನ ಹಾನಿಕರ ಪರಿಣಾಮಗಳನ್ನು ಕಣ್ಣಾರೆ ಕಂಡಿರಬಹುದು. ಹೀಗಿರುವುದರಿಂದ ಇದನ್ನೆಲ್ಲಾ ತಪ್ಪಿಸಲಿಕ್ಕಾಗಿ ವಿವಾಹಕ್ಕೆ ಮುಂಚೆ ಒಟ್ಟಿಗೆ ಬಾಳುವುದೇ ಬುದ್ಧಿವಂತಿಕೆ ಎಂದವರು ತೀರ್ಮಾನಿಸ್ಯಾರು.

ಈ ವಿಷಯದಲ್ಲಿ ದೇವರ ವಾಕ್ಯವಾದ ಬೈಬಲಿನ ದೃಷ್ಟಿಕೋನವೇನು? ಇದಕ್ಕೆ ಉತ್ತರ ತಿಳಿಯುವ ಮುಂಚೆ ವಿವಾಹ ಏರ್ಪಾಡಿನ ಕುರಿತು ಬೈಬಲ್‌ ಏನನ್ನುತ್ತದೆಂದು ನೋಡೋಣ.

“ಒಂದೇ ಶರೀರ”

ನಾವು ವಿವಾಹ ಏರ್ಪಾಡನ್ನು ಗೌರವಿಸುವಂತೆ ಬೈಬಲ್‌ ಉತ್ತೇಜಿಸುತ್ತದೆ ಏಕೆಂದರೆ ಅದನ್ನು ಸ್ಥಾಪಿಸಿ ಅಧಿಕೃತಗೊಳಿಸಿದಾತನು ಯೆಹೋವ ದೇವರೇ. (ಆದಿಕಾಂಡ 2:21-24) ವಿವಾಹದ ಮುಖಾಂತರ ಗಂಡುಹೆಣ್ಣು “ಒಂದೇ ಶರೀರ” ಆಗಬೇಕೆಂಬುದು ಆರಂಭದಲ್ಲೇ ಯೆಹೋವನ ಉದ್ದೇಶವಾಗಿತ್ತು. (ಆದಿಕಾಂಡ 2:24) ಈ ಬೈಬಲ್‌ ವಚನವನ್ನು ಉಲ್ಲೇಖಿಸಿದ ಬಳಿಕ ಯೇಸು ಕೂಡಿಸಿ ಹೇಳಿದ್ದು: “ದೇವರು ಒಟ್ಟುಗೂಡಿಸಿದ್ದನ್ನು ಯಾವ ಮನುಷ್ಯನೂ ಅಗಲಿಸದಿರಲಿ.”—ಮತ್ತಾಯ 19:6.

ವಿವಾಹವಾಗುವವರಲ್ಲಿ ಕೆಲವರು ಆಮೇಲೆ ವಿಚ್ಛೇದ ಪಡೆಯುತ್ತಾರೇನೋ ನಿಜ. * ಇದಕ್ಕೆ ಕಾರಣ ವಿವಾಹದ ಏರ್ಪಾಡಿನಲ್ಲಿ ಏನೋ ತಪ್ಪಿದೆ ಎಂದಲ್ಲ, ಬದಲಾಗಿ ಗಂಡಹೆಂಡತಿಯರಲ್ಲಿ ಒಬ್ಬರು ಇಲ್ಲವೆ ಇಬ್ಬರೂ ತಮ್ಮ ವಿವಾಹ ಪ್ರತಿಜ್ಞೆಯನ್ನು ಪಾಲಿಸಲು ತಪ್ಪಿರುವುದೇ ಆಗಿರುತ್ತದೆ.

ದೃಷ್ಟಾಂತಕ್ಕೆ, ಒಂದು ದಂಪತಿಯ ಬಳಿ ಸ್ವಂತ ಕಾರು ಇದೆ ಎಂದಿಟ್ಟುಕೊಳ್ಳಿ. ಆದರೆ ಅವರು ಆ ಕಾರಿನ ಉತ್ಪಾದಕನು ಕೊಟ್ಟಿರುವ ನಿರ್ದೇಶನಗಳಿಗನುಸಾರ ಅದನ್ನು ಸುಸ್ಥಿತಿಯಲ್ಲಿಡುವುದಿಲ್ಲ. ಒಂದುವೇಳೆ ಕಾರು ಹಾಳಾದರೆ ಅದಕ್ಕೆ ಯಾರು ಕಾರಣ? ಕಾರಿನ ಉತ್ಪಾದಕನೋ, ಕ್ರಮವಾಗಿ ಮೆಂಟೇನೆನ್ಸ್‌ ಮಾಡದಿದ್ದ ದಂಪತಿಯೋ?

ಇದೇ ಸೂತ್ರ ವಿವಾಹಕ್ಕೂ ಅನ್ವಯವಾಗುತ್ತದೆ. ಗಂಡಹೆಂಡತಿ ತಮ್ಮ ಸಂಬಂಧವನ್ನು ಸುಸ್ಥಿತಿಯಲ್ಲಿಡುವಾಗ ಮತ್ತು ಬೈಬಲ್‌ ಮೂಲತತ್ತ್ವಗಳನ್ನು ಪಾಲಿಸುತ್ತಾ ಸಮಸ್ಯೆಗಳನ್ನು ಬಗೆಹರಿಸಲು ಗಟ್ಟಿಮನಸ್ಸು ಮಾಡಿರುವಾಗ, ವಿಚ್ಛೇದದ ಸಾಧ್ಯತೆ ತೀರ ಕಡಿಮೆ. ಒಂದು ಗಂಡುಹೆಣ್ಣು ಮದುವೆಯಾಗುವಾಗ ತಾವು ಪರಸ್ಪರರಿಗೆ ಬದ್ಧರೆಂದು ಪ್ರತಿಜ್ಞೆಮಾಡುವುದರಿಂದ ಭದ್ರತೆಯ ಅನಿಸಿಕೆ ಇರುತ್ತದೆ. ಹೀಗೆ ವಿವಾಹವು ಒಂದು ಪ್ರೀತಿಪರ ಸಂಬಂಧಕ್ಕೆ ತಳಪಾಯವಾಗುತ್ತದೆ.

‘ಹಾದರದಿಂದ ದೂರವಿರಿ’

ಕೆಲವರಿಗೆ ಹೀಗನಿಸಬಹುದು: ‘ಇಬ್ಬರಿಗೂ ಬಾಳ್ವೆ ನಡೆಸಲು ಸಾಧ್ಯವೇ ಎಂದು ಪರೀಕ್ಷಿಸಲಿಕ್ಕಾಗಿ, ಮದುವೆಗೆ ಮುಂಚೆಯೇ ಒಟ್ಟಾಗಿ ಜೀವಿಸಿ ನೋಡಿದರೆ ಮದುವೆಯೆಂಬ ಪವಿತ್ರ ಬಂಧಕ್ಕೆ ಗೌರವ ತೋರಿಸಿದಂತೆ ಆಗುವುದಲ್ಲವೇ?’

ಈ ವಿಷಯದಲ್ಲಿ ಬೈಬಲಿನ ಉತ್ತರ ಸ್ಪಷ್ಟ. ‘ಹಾದರದಿಂದ ದೂರವಿರಿ’ ಎಂದು ಅಪೊಸ್ತಲ ಪೌಲನು ಬರೆದನು. (1 ಥೆಸಲೊನೀಕ 4:3) “ಹಾದರ” ಎಂಬ ಪದವು ವಿವಾಹಬಾಹಿರವಾದ ಯಾವುದೇ ಲೈಂಗಿಕ ಸಂಬಂಧಕ್ಕೆ ಸೂಚಿಸುತ್ತದೆ. ಇದರಲ್ಲಿ ಮದುವೆಯಾಗದೆ ಒಟ್ಟಿಗಿರುವ ಗಂಡುಹೆಣ್ಣಿನ ನಡುವಿನ ಲೈಂಗಿಕತೆಯೂ ಸೇರಿರುತ್ತದೆ. ಹೀಗಿರುವುದರಿಂದ ಮುಂದೆ ಮದುವೆಯಾಗುವ ಉದ್ದೇಶವಿದ್ದರೂ, ಗಂಡುಹೆಣ್ಣು ವಿವಾಹಕ್ಕೆ ಮುಂಚೆ ಒಟ್ಟಿಗೆ ಜೀವಿಸುವುದು ಬೈಬಲಿಗನುಸಾರ ತಪ್ಪು.

ಬೈಬಲಿನ ಈ ನೋಟವು ಹಳೇಕಾಲದ್ದೋ? ಕೆಲವರು ಹಾಗೆ ನೆನಸ್ಯಾರು. ಅನೇಕ ದೇಶಗಳಲ್ಲಿ, ಮದುವೆಯಾಗುವ ಉದ್ದೇಶವಿರಲಿ ಇಲ್ಲದಿರಲಿ ಗಂಡುಹೆಣ್ಣು ಒಟ್ಟಿಗೆ ಜೀವಿಸುವುದು ಮಾಮೂಲಾಗಿದೆ. ಆದರೆ ಫಲಿತಾಂಶಗಳ ಕುರಿತು ಯೋಚಿಸಿ. ಆ ರೀತಿಯಲ್ಲಿ ಜೀವಿಸುವವರು ಕುಟುಂಬ ಯಶಸ್ಸಿನ ಗುಟ್ಟನ್ನು ಕಂಡುಹಿಡಿದಿದ್ದಾರೋ? ವಿವಾಹಿತರಿಗಿಂತ ಹೆಚ್ಚು ಸುಖಿಗಳಾಗಿದ್ದಾರೋ? ವಿವಾಹದ ಬಳಿಕ ಪರಸ್ಪರರಿಗೆ ನಿಷ್ಠರಾಗಿ ಉಳಿಯುತ್ತಾರೋ? ಇಲ್ಲವೆಂದು ಅಧ್ಯಯನಗಳು ತೋರಿಸುತ್ತವೆ. ವಾಸ್ತವದಲ್ಲಿ, ಮೊದಲು ಒಟ್ಟಿಗೆ ಜೀವಿಸಿ ನಂತರ ವಿವಾಹವಾದವರ ಜೀವನದಲ್ಲಿ ಸಮಸ್ಯೆಗಳ ಬಿರುಗಾಳಿ ಎದ್ದು ವಿಚ್ಛೇದದಲ್ಲಿ ಕೊನೆಗೊಳ್ಳುವ ಸಂಭವ ಹೆಚ್ಚು ಎಂದು ಕಂಡುಕೊಳ್ಳಲಾಗಿದೆ.

ಅಂಥ ಅಧ್ಯಯನಗಳು ದೋಷಯುಕ್ತವೆಂದು ಕೆಲವು ತಜ್ಞರು ಹೇಳುತ್ತಾರೆ. ಉದಾಹರಣೆಗೆ ಒಬ್ಬಾಕೆ ಮನಶ್ಶಾಸ್ತ್ರಜ್ಞೆ ವಾದಿಸಿದ್ದೇನೆಂದರೆ, ಮೊದಲು ಒಟ್ಟಿಗೆ ಬಾಳಿ ನಂತರ ಮದುವೆಯಾದವರ ಪರಿಸ್ಥಿತಿಗಳು ಮತ್ತು ಹಾಗೆ ಮಾಡದೆ ಮದುವೆಯಾದವರ ಪರಿಸ್ಥಿತಿಗಳು ಭಿನ್ನಭಿನ್ನವಾಗಿರುತ್ತವೆ; ಈ ವ್ಯತ್ಯಾಸಗಳೇ ವಿಚ್ಛೇದಕ್ಕೆ ಕಾರಣವಾಗಿದೆ ಹೊರತು ಅವರು ಮದುವೆ ಮುಂಚೆ ಒಟ್ಟಿಗೆ ಜೀವಿಸಿದ್ದು ಅಲ್ಲ. ವಿವಾಹಿತರಾಗಿ ಉಳಿಯಲು ಅವರು ಮಹತ್ತ್ವ ಕೊಡಲಿಲ್ಲ ಎನ್ನುತ್ತಾರೆ ಆ ಮನಶ್ಶಾಸ್ತ್ರಜ್ಞೆ.

ಒಂದುವೇಳೆ ಅವರ ಮಾತು ಸತ್ಯವಾಗಿದ್ದರೂ, ವಿವಾಹದ ಕುರಿತ ದೇವರ ನೋಟ ನಮಗೆ ಇರಬೇಕೆಂಬುದರ ಮಹತ್ತ್ವವನ್ನು ಅದು ಎತ್ತಿತೋರಿಸುತ್ತದೆ. “ವಿವಾಹವು ಎಲ್ಲರಲ್ಲಿಯೂ ಗೌರವಾರ್ಹವಾಗಿರಲಿ” ಎಂದು ಬೈಬಲ್‌ ಹೇಳುತ್ತದೆ. (ಇಬ್ರಿಯ 13:4) ಒಂದು ಗಂಡು ಒಂದು ಹೆಣ್ಣು ಒಂದೇ ಶರೀರವಾಗಿ ಉಳಿಯುವ ಪ್ರತಿಜ್ಞೆಮಾಡುವಾಗ ಮತ್ತು ವಿವಾಹ ಏರ್ಪಾಡಿಗೆ ಗೌರವ ತೋರಿಸುವಾಗ ಅವರ ಮಧ್ಯೆ ಬೆಸೆಯುವ ಬಂಧ ಸುಲಭವಾಗಿ ಕಡಿದುಹೋಗದು.—ಪ್ರಸಂಗಿ 4:12.

ಆರಂಭದಲ್ಲಿ ತಿಳಿಸಲಾದ ಹೋಲಿಕೆಗೆ ತೆರಳೋಣ. ಒಂದು ಸೂಟ್‌ ಅನ್ನೋ ಡ್ರೆಸ್ಸ್‌ ಅನ್ನೋ ಖರೀದಿಸುವ ಮುಂಚೆ ಅದನ್ನು ಮೊದಲು ಧರಿಸಿ ನೋಡುವುದು ಬುದ್ಧಿವಂತಿಕೆ ಏನೋ ಹೌದು. ಆದರೆ ಇದು, ವಿವಾಹಕ್ಕೆ ಮುಂಚೆ ಒಟ್ಟಿಗೆ ಬಾಳುವುದಕ್ಕಲ್ಲ ಬದಲಿಗೆ ನೀವು ಮದುವೆಯಾಗಲು ಇಚ್ಛಿಸುವ ವ್ಯಕ್ತಿಯ ಪರಿಚಯಮಾಡಲು ಸಾಕಷ್ಟು ಸಮಯ ತೆಗೆದುಕೊಳ್ಳುವುದಕ್ಕೆ ಹೋಲಿಕೆಯಾಗಿದೆ. ಎಷ್ಟೋ ಜನರು ನಿರ್ಲಕ್ಷಿಸುವ ಈ ಪ್ರಮುಖ ಹೆಜ್ಜೆಯೇ ಕುಟುಂಬ ಯಶಸ್ಸಿನ ಒಂದು ಗುಟ್ಟು. (g09-E 10)

[ಪಾದಟಿಪ್ಪಣಿ]

^ ಬೈಬಲಿಗನುಸಾರ, ವಿವಾಹಬಾಹಿರ ಲೈಂಗಿಕ ಸಂಬಂಧ ಮಾತ್ರ ವಿಚ್ಛೇದ ಮತ್ತು ಮರುವಿವಾಹಕ್ಕೆ ಆಧಾರ.—ಮತ್ತಾಯ 19:9.

ನೀವೇನು ಹೇಳುತ್ತೀರಿ?

◼ ವಿವಾಹ ಸಂಗಾತಿಯೊಂದಿಗೆ ಮಾತ್ರ ಲೈಂಗಿಕ ಸಂಬಂಧವಿಡಬೇಕೆಂದು ಬೈಬಲ್‌ ಏಕೆ ಹೇಳುತ್ತದೆ?—ಕೀರ್ತನೆ 84:11; 1 ಕೊರಿಂಥ 6:18.

◼ ನೀವು ವಿವಾಹವಾಗಲು ಇಚ್ಛಿಸುವ ವ್ಯಕ್ತಿಯಲ್ಲಿ ಯಾವ ಗುಣಗಳಿಗಾಗಿ ನೋಡಬೇಕು?—ರೂತಳು 1:16, 17; ಜ್ಞಾನೋಕ್ತಿ 31:10-31.

[ಪುಟ 29ರಲ್ಲಿರುವ ಚೌಕ]

‘ತನ್ನ ದೇಹಕ್ಕೇ ವಿರುದ್ಧವಾಗಿ ಮಾಡುವ ಪಾಪ’

“ಜಾರತ್ವವನ್ನು ರೂಢಿಮಾಡಿಕೊಂಡಿರುವವನು ತನ್ನ ದೇಹಕ್ಕೇ ವಿರುದ್ಧವಾಗಿ ಪಾಪಮಾಡುವವನಾಗಿದ್ದಾನೆ” ಅನ್ನುತ್ತದೆ ಬೈಬಲ್‌. (1 ಕೊರಿಂಥ 6:18) ಈ ಮಾತುಗಳು ಎಷ್ಟು ಸತ್ಯ ಎಂಬುದನ್ನು, ಇತ್ತೀಚಿನ ದಶಕಗಳಲ್ಲಿ ಏಡ್ಸ್‌ ಹಾಗೂ ಇತರ ರತಿರವಾನಿತ ರೋಗಗಳಿಗೆ ಬಲಿಯಾಗಿರುವ ಲಕ್ಷಾಂತರ ಜನರ ಸಾವುಗಳು ತೋರಿಸಿಕೊಟ್ಟಿವೆ. ಅಷ್ಟುಮಾತ್ರವಲ್ಲ, ಲೈಂಗಿಕತೆಯಲ್ಲಿ ತೊಡಗಿರುವ ಯುವಜನರಲ್ಲಿ ಖಿನ್ನತೆ ಹಾಗೂ ಆತ್ಮಹತ್ಯೆ ಪ್ರಯತ್ನಗಳು ಅತಿ ಹೆಚ್ಚು ಎಂದು ಅಧ್ಯಯನಗಳು ತೋರಿಸಿವೆ. ಸ್ವಚ್ಛಂದ ಲೈಂಗಿಕತೆಯಿಂದಾಗಿ ಅನಪೇಕ್ಷಿತ ಗರ್ಭಧಾರಣೆಗಳೂ ಆಗುತ್ತವೆ. ಇದರಿಂದಾಗಿ ಕೆಲವರು ಗರ್ಭಪಾತವನ್ನೂ ಮಾಡಿಸುತ್ತಾರೆ. ಈ ವಾಸ್ತವಾಂಶಗಳ ಹಿನ್ನಲೆಯಲ್ಲಿ ಬೈಬಲಿನ ನೈತಿಕ ನಿಯಮಾವಳಿಯು ಹಳೇಕಾಲದ್ದಲ್ಲ ನಮ್ಮೀ ಕಾಲಕ್ಕೂ ಅನ್ವಯವಾಗುತ್ತದೆಂಬುದು ಸ್ಫಟಿಕ ಸ್ಪಷ್ಟ.