ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸೂತ್ರ 2 ವಚನಬದ್ಧರಾಗಿರಿ

ಸೂತ್ರ 2 ವಚನಬದ್ಧರಾಗಿರಿ

ಸೂತ್ರ 2 ವಚನಬದ್ಧರಾಗಿರಿ

“ದೇವರು ಒಟ್ಟುಗೂಡಿಸಿದ್ದನ್ನು ಯಾವ ಮನುಷ್ಯನೂ ಅಗಲಿಸದಿರಲಿ.”—ಮತ್ತಾಯ 19:6.

ಅರ್ಥವೇನು? ಯಶಸ್ವೀ ವೈವಾಹಿಕ ಜೀವನ ನಡೆಸುತ್ತಿರುವ ದಂಪತಿಗಳು ತಮ್ಮ ವಿವಾಹವನ್ನು ಬಾಳಿನುದ್ದದ ಬಾಂಧವ್ಯವಾಗಿ ವೀಕ್ಷಿಸುತ್ತಾರೆ. ಸಮಸ್ಯೆ ಏಳುವಾಗ ಅದನ್ನೇ ನೆಪವಾಗಿ ಬಳಸಿ ವಿವಾಹಬಂಧವನ್ನು ಮುರಿಯದೆ ಸಮಸ್ಯೆಯನ್ನು ಬಗೆಹರಿಸಲು ತಮ್ಮಿಂದಾದದ್ದೆಲ್ಲವನ್ನು ಮಾಡುತ್ತಾರೆ. ಬಾಳಪಯಣದಲ್ಲಿ ಜೊತೆಜೊತೆಯಾಗಿ ನಡೆಯುವೆವೆಂಬ ವಿವಾಹ ಪ್ರತಿಜ್ಞೆಗೆ ಇಬ್ಬರೂ ಬದ್ಧರಾಗಿರುವಾಗ ಅವರಲ್ಲಿ ಸುರಕ್ಷೆಯ ಭಾವನೆ ಇರುತ್ತದೆ. ತನ್ನ ಸಂಗಾತಿ ಕೊನೆವರೆಗೂ ವಿವಾಹಬಂಧಕ್ಕೆ ನಿಷ್ಠರಾಗಿ ಇರುವರೆಂಬ ಭರವಸೆ ಅವರಿಗಿರುತ್ತದೆ.

ಪ್ರಾಮುಖ್ಯವೇಕೆ? ವಚನಬದ್ಧತೆ ಅನೇಕ ವಿಧಗಳಲ್ಲಿ ವೈವಾಹಿಕ ಬಂಧಕ್ಕೆ ಬೆನ್ನೆಲುಬಿನಂತಿದೆ. ಆದರೆ ವಿರಸಗಳು ಮತ್ತೆ ಮತ್ತೆ ಕಾಣಿಸಿಕೊಳ್ಳುವಾಗ ಇದೇ ಬದ್ಧತೆಯು ದಂಪತಿಯಲ್ಲಿ ಭರವಸೆಯನ್ನು ಮೂಡಿಸುವ ಬದಲು ಬೋನಿನೊಳಗೆ ಸಿಕ್ಕಿಬಿದ್ದ ಅನಿಸಿಕೆ ಹುಟ್ಟಿಸಬಹುದು. ಅಂಥವರಿಗೆ ವಿವಾಹ ಪ್ರತಿಜ್ಞೆ ಬರೀ ಒಂದು ಕರ್ತವ್ಯವಾಗಿ ಬಿಡುತ್ತದೆ. ಇಬ್ಬರು ಒಂದೊಂದು ದಿಕ್ಕುಹಿಡಿದು ಪ್ರತ್ಯೇಕರಾಗದಿದ್ದರೂ ಒಂದೇ ಸೂರಿನಡಿ ಅಪರಿಚಿತರಂತೆ ಜೀವಿಸುತ್ತಿರಬಹುದು. ಉದಾಹರಣೆಗೆ, ಗಂಭೀರ ಸಮಸ್ಯೆಗಳಿರುವಾಗ ಕೂಡ ಇಬ್ಬರೂ ಮೌನಕ್ಕೆ ಶರಣಾಗಬಹುದು.

ಹೀಗೆ ಮಾಡಿ. ನೀವು ಎಷ್ಟರ ಮಟ್ಟಿಗೆ ವಿವಾಹ ಪ್ರತಿಜ್ಞೆಗೆ ಬದ್ಧರಾಗಿದ್ದೀರೆಂದು ಪರಿಶೀಲಿಸಲು ಈ ಕೆಳಗಿನ ಪ್ರಶ್ನೆಗಳನ್ನು ಕೇಳಿಕೊಳ್ಳಿ.

ನಮ್ಮಿಬ್ಬರಲ್ಲಿ ಜಗಳವಾಗುತ್ತಿರುವಾಗ, ಇವಳನ್ನು/ಇವರನ್ನು ಮದುವೆಯಾಗಿ ದೊಡ್ಡ ತಪ್ಪು ಮಾಡಿದೆ ಎಂದು ವಿಷಾದಿಸುತ್ತೇನೋ?

ನನ್ನ ವಿವಾಹ ಸಂಗಾತಿಯನ್ನು ಬಿಟ್ಟು ಬೇರೆಯವರೊಂದಿಗೆ ಸಂಬಂಧ ಇಟ್ಟುಕೊಳ್ಳುವ ಬಗ್ಗೆ ಹಗಲುಗನಸು ಕಾಣುತ್ತಿರುತ್ತೇನೋ?

“ನಿನ್ನನ್ನು ಬಿಟ್ಟು ಹೋಗುತ್ತೇನೆ” ಅಥವಾ “ನನಗೆ ಬೆಲೆಕೊಡುವ ಬೇರೆ ಯಾರನ್ನಾದರೂ ಹುಡುಕಿಕೊಳ್ಳುತ್ತೇನೆ” ಎಂದು ನನ್ನ ಸಂಗಾತಿಗೆ ಆಗಾಗ್ಗೆ ಹೇಳುತ್ತೇನೋ?

ದೃಢನಿರ್ಣಯ ಮಾಡಿ. ನಿಮ್ಮ ವಿವಾಹ ಪ್ರತಿಜ್ಞೆಗೆ ಬದ್ಧರಾಗಿರಲು ನೀವು ತೆಗೆದುಕೊಳ್ಳಬಹುದಾದ ಒಂದೆರಡು ಹೆಜ್ಜೆಗಳನ್ನು ಯೋಚಿಸಿ. (ಸಲಹೆ: ನಿಮ್ಮ ಸಂಗಾತಿಯೊಂದಿಗೆ ಸಂಪರ್ಕವನ್ನಿಡಲು ಕೆಲವೊಮ್ಮೆ ಅವರಿಗೊಂದು ಚೀಟಿ ಬರೆದಿಡಿ, ಕೆಲಸದ ಸ್ಥಳದಲ್ಲಿ ಅವರ ಫೋಟೋಗಳನ್ನು ಕಾಣುವಂತೆ ಇಡಿ ಅಥವಾ ಅಲ್ಲಿಂದ ಅವರಿಗೆ ಪ್ರತಿದಿನ ಫೋನ್‌ ಮಾಡಿ.)

ಹಲವಾರು ಸಲಹೆಗಳನ್ನು ನಿಮ್ಮ ಸಂಗಾತಿಯ ಮುಂದಿಟ್ಟು ಅವರಿಗೆ ಯಾವುದು ಹಿಡಿಸುತ್ತದೆಂದು ಕೇಳಬಾರದೇಕೆ? (g09-E 10)

[ಪುಟ 4ರಲ್ಲಿರುವ ಚಿತ್ರ]

ವಚನಬದ್ಧತೆಯು ವೈವಾಹಿಕ ಜೀವನ ಹಾದಿತಪ್ಪದಂತೆ ತಡೆಯುವ ರಸ್ತೆಬದಿಯ ತಡೆಗೋಡೆಯಂತಿದೆ

[ಕೃಪೆ]

© Corbis/age fotostock