ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕವಡೆ ಕಾಸಿನ ಬೆಲೆಯಿಲ್ಲವೇ?

ಕವಡೆ ಕಾಸಿನ ಬೆಲೆಯಿಲ್ಲವೇ?

ಕವಡೆ ಕಾಸಿನ ಬೆಲೆಯಿಲ್ಲವೇ?

“ನಾನಾಗ ಸ್ಪೆಯಿನ್‌ನಲ್ಲಿ ಒಂದನೇ ತರಗತಿ ಓದುತ್ತಿದ್ದೆ. ಕ್ಲಾಸ್‌ನಲ್ಲಿ ಎಲ್ಲರಿಗಿಂತ ನಾನು ತುಂಬ ಗಿಡ್ಡ ಇದ್ದ ಕಾರಣ ಮಕ್ಕಳು ನನಗೆ ಏನೇನೋ ಹೆಸರಿಟ್ಟು ಗೋಳುಹುಯ್ಯುತ್ತಿದ್ದರು. ಪ್ರತಿದಿನ ಸ್ಕೂಲ್‌ ಮುಗಿಸಿ ಮನೆಗೆ ಅಳುತ್ತಾ ಬರುತ್ತಿದ್ದೆ.”—ಜೆನಿಫರ್‌, ಹೆತ್ತವರು ಫಿಲಿಪಿನೋ ವಲಸಿಗರು.

“ನಾನು ಹೊಸದಾಗಿ ಸೇರಿಕೊಂಡ ಶಾಲೆಯಲ್ಲಿದ್ದ ವಿದ್ಯಾರ್ಥಿಗಳೆಲ್ಲ ಬಿಳಿಯರು. ನಾನು ಕರಿಯನಾದ್ದರಿಂದ ಒಬ್ಬೊಬ್ಬರೂ ಒಂದೊಂದು ಹೆಸರಿಟ್ಟು ಅಣಕಿಸುತ್ತಿದ್ದರು. ಇದೆಲ್ಲಾ ನನ್ನನ್ನು ಕೆಣಕಿ ಜಗಳಕ್ಕೆಳೆಯುವ ಪ್ರಯತ್ನವೆಂದು ನನಗೆ ಗೊತ್ತಿತ್ತು. ಹೇಗೋ ನಾನು ‘ಕೂಲ್‌’ ಆಗಿರುತ್ತಿದ್ದೆ. ಆದರೆ ಮನದಲ್ಲಿ ಕೀಳರಿಮೆ, ನೋವು ತುಂಬಿತ್ತು.” —ತಿಮಥಿ, ಆಫ್ರಿಕನ್‌-ಅಮೆರಿಕನ್‌.

“ನಾನು ಏಳು ವರ್ಷದವನಾಗಿದ್ದಾಗ ನೈಜೀರಿಯದಲ್ಲಿ ಇಗ್ಬೋ ಮತ್ತು ಹೌಸ ಜನರ ಮಧ್ಯೆ ಕಾದಾಟ ನಡೆಯುತ್ತಿತ್ತು. ಆ ವೈಷಮ್ಯದ ಸೋಂಕು ನನಗೂ ತಗಲಿತ್ತು. ಎಷ್ಟೆಂದರೆ ಕ್ಲಾಸ್‌ನಲ್ಲಿ ಹೌಸ ಜನಾಂಗಕ್ಕೆ ಸೇರಿದ ನನ್ನ ಸ್ನೇಹಿತನನ್ನೇ ಗೇಲಿ ಮಾಡಲಾರಂಭಿಸಿದೆ.”—ಜಾನ್‌, ಇಗ್ಬೋ ಜನಾಂಗದವನು.

“ನಾನು ಮತ್ತು ನನ್ನ ಜೊತೆಗಾರ್ತಿ ಇನ್ನೊಂದು ದೇಶದಲ್ಲಿ ಜನರಿಗೆ ಬೈಬಲ್‌ ಸಂದೇಶವನ್ನು ತಿಳಿಸುತ್ತಿದ್ದಾಗ ಸ್ಥಳಿಕ ಪಾದ್ರಿಗಳು ಚಿತಾಯಿಸಿದ್ದ ಮಕ್ಕಳು ನಮ್ಮನ್ನು ಹಿಂಬಾಲಿಸಿ ನಮ್ಮ ಮೇಲೆ ಕಲ್ಲುತೂರಿದರು. ನಾವು ಊರನ್ನೇ ಬಿಟ್ಟುಹೋಗಬೇಕೆಂದು ಆ ಪಾದ್ರಿಗಳು ಹೀಗೆ ಮಾಡಿಸಿದ್ದರು.” —ಒಲ್ಗಾ.

ಪೂರ್ವಗ್ರಹಪೀಡಿತ ಪಕ್ಷಪಾತಕ್ಕೆ ನೀವೆಂದಾದರೂ ಗುರಿಯಾಗಿದ್ದೀರೋ? ಪ್ರಾಯಶಃ ನಿಮ್ಮ ಮೈಬಣ್ಣ, ಧರ್ಮ, ಆರ್ಥಿಕ ಅಂತಸ್ತು, ಲಿಂಗ ಇಲ್ಲವೆ ಪ್ರಾಯ ಇದಕ್ಕೆ ಕಾರಣವಾಗಿದ್ದೀತು. ಎಲ್ಲೆಡೆಯೂ ಪೂರ್ವಗ್ರಹದ ಕಹಿ ಉಂಡವರು ಮುಂದೆ ಇನ್ನಷ್ಟು ತಾತ್ಸಾರಕ್ಕೆ ಒಳಗಾಗುವೆವೋ ಏನೋ ಎಂಬ ಭಯದಲ್ಲೇ ಬದುಕುತ್ತಾರೆ. ಅಂಥವರಿಗೆ ಜನರ ಗುಂಪಿನಲ್ಲಿರಲಿ, ಅಂಗಡಿಗೆ ಹೋಗಲಿ, ಇನ್ನೊಂದು ಶಾಲೆಗೆ ಸೇರಲಿ, ಸಾಮಾಜಿಕ ಒಕ್ಕೂಟಗಳಿಗೆ ಹಾಜರಾಗಲಿ ಹೀಗೆ ಎಲ್ಲೇ ಇರಲಿ ಒಂದು ರೀತಿಯ ಆತಂಕ ಮನದಲ್ಲಿರುತ್ತದೆ.

ಮಾತ್ರವಲ್ಲ, ಪೂರ್ವಗ್ರಹ ಮತ್ತು ತಾರತಮ್ಯಕ್ಕೆ ಬಲಿಯಾದವರಿಗೆ ಕವಡೆ ಕಾಸಿನಷ್ಟೂ ಬೆಲೆಯಿರುವುದಿಲ್ಲ. ಅವರಿಗೆ ನೌಕರಿ ಸಿಗುವುದು ಕಷ್ಟವಾದೀತು. ಉತ್ತಮ ಔಷಧೋಪಚಾರ ದಕ್ಕದಿರಬಹುದು. ಉತ್ತಮ ವಿದ್ಯಾಭ್ಯಾಸ ಅವರ ಪಾಲಿಗೆ ಗಗನಕುಸುಮ. ಅವರಿಗೆ ಸಿಗುವ ಸಾಮಾಜಿಕ ಸೌಕರ್ಯ-ಸವಲತ್ತುಗಳು, ಕಾನೂನುಬದ್ಧ ಹಕ್ಕುಗಳು ಬೆರಳೆಣಿಕೆಯಷ್ಟು. ಅಧಿಕಾರಿಗಳ ಮನ್ನಣೆ ಇರುವಾಗಲಂತೂ ಪೂರ್ವಗ್ರಹವು ಜನಾಂಗೀಯ ಹತ್ಯೆಯಂಥ ಕೆಡುಕಿಗೂ ಕಾರಣವಾಗಬಲ್ಲದು. ಇಂಥ ಒಂದು ಪ್ರಯತ್ನದ ಕುರಿತ ಪ್ರಾಚೀನ ಉದಾಹರಣೆ ಬೈಬಲಿನಲ್ಲಿರುವ ಎಸ್ತೇರಳು ಎಂಬ ಪುಸ್ತಕದಲ್ಲಿದೆ. ಈ ಘಟನೆಯಲ್ಲೂ ದ್ವೇಷ, ಪೂರ್ವಗ್ರಹ ಪಾತ್ರವಹಿಸಿತು.—ಎಸ್ತೇರಳು 3:5, 6.

ಕೆಲವು ಸ್ಥಳಗಳಲ್ಲಿ ತಾರತಮ್ಯದ ವಿರುದ್ಧ ಕಾನೂನುಗಳಿದ್ದರೂ ಕುರುಡು ಮತಾಭಿಮಾನ ಮತ್ತು ಅಸಹಿಷ್ಣುತೆ ಇನ್ನೂ ನೆಲೆಯೂರಿರಬಹುದು. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಾಜಿ ಹೈ ಕಮಿಷನರ್‌ ಅನ್ನುವುದು: “ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯನ್ನು ಅಂಗೀಕರಿಸಿ ಅರುವತ್ತು ವರ್ಷಗಳಾದರೂ . . . ಇನ್ನೂ ಸಮಾನತೆ, ನಿಷ್ಪಕ್ಷಪಾತ ಎಲ್ಲೆಡೆ ಎಲ್ಲರಿಗೆ ತೋರಿಸಲಾಗುತ್ತಿಲ್ಲ.” ಇದು ಆತಂಕಕಾರಿ ಸಂಗತಿ. ಏಕೆಂದರೆ ಅನೇಕ ದೇಶಗಳಲ್ಲಿ ವಲಸೆಗಾರರಾಗಿ ಮತ್ತು ನಿರಾಶ್ರಿತರಾಗಿ ಒಳಬರುತ್ತಿರುವವರ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿದೆ.

ಹಾಗಾದರೆ, ಎಲ್ಲರೂ ಸಮಾನರಾಗಿ ಬಾಳುವ ಸಮಾಜ ಬರೀ ಕನಸೇ? ಅಥವಾ ಪೂರ್ವಗ್ರಹ ಮತ್ತು ಪಕ್ಷಪಾತವನ್ನು ಮೆಟ್ಟಿನಿಲ್ಲಲು ಸಾಧ್ಯವೇ? ಈ ಪ್ರಶ್ನೆಗಳನ್ನು ಮುಂದಿನ ಲೇಖನಗಳು ಉತ್ತರಿಸುತ್ತವೆ. (g09-E 08)