ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದಾಪುಗಾಲಿಡುತ್ತಿರುವ ತಂತ್ರಜ್ಞಾನ

ದಾಪುಗಾಲಿಡುತ್ತಿರುವ ತಂತ್ರಜ್ಞಾನ

ದಾಪುಗಾಲಿಡುತ್ತಿರುವ ತಂತ್ರಜ್ಞಾನ

ಅಲ್ಬೇನಿಯದಲ್ಲಿ ಒಬ್ಬ ವೃದ್ಧ ವ್ಯಕ್ತಿ ಕತ್ತೆ ಮೇಲೆ ಹೋಗುತ್ತಾ ಸೆಲ್‌ಫೋನ್‌ನಲ್ಲಿ ಮಾತಾಡುತ್ತಿರುವ ದೃಶ್ಯ ಕಾಣಸಿಗುವುದು ಸಾಮಾನ್ಯ. ಭಾರತದಲ್ಲಿ ಭಿಕ್ಷುಕನೊಬ್ಬನು ಭಿಕ್ಷೆಬೇಡಲಿಕ್ಕಾಗಿ ಚಾಚಿರುವ ಕೈಯನ್ನು ಸರ್ರನೆ ಹಿಂದೆಕ್ಕೆಳೆದು, ಕಿಸೆಯಲ್ಲಿರುವ ತನ್ನ ಮೊಬೈಲನ್ನು ಕೈಗೆತ್ತಿ ಕರೆ ಸ್ವೀಕರಿಸುವುದನ್ನೋ ಕರೆ ಮಾಡುವುದನ್ನೋ ನೋಡಬಹುದು. ಸೆಲ್‌ಫೋನ್‌, ಕಂಪ್ಯೂಟರ್‌, ಟಿವಿ ಹೀಗೆ ತಂತ್ರಜ್ಞಾನವು ಜಗತ್ತಿನ ಮೂಲೆಮೂಲೆಗೂ ಲಗ್ಗೆಹಾಕಿದೆ. ಬಡವಬಲ್ಲಿದರೆನ್ನದೆ ಎಲ್ಲರ ಕೈಗೂ ತಲಪಿದೆ. ಅನೇಕರ ಜೀವನದ ಅವಿಭಾಜ್ಯ ಅಂಗವಾಗಿದೆ.

ತಂತ್ರಜ್ಞಾನ ಎಷ್ಟು ಸರ್ವವ್ಯಾಪಿ ಎಂಬುದು ಮೊಬೈಲ್‌ ಫೋನ್‌ಗಳ ಹೆಚ್ಚಳದಿಂದ ಸ್ಪಷ್ಟ. ಹೆಚ್ಚಿನ ಸೆಲ್‌ಫೋನ್‌ಗಳು ಬರೀ ಫೋನ್‌ಗಳಲ್ಲ. ನವನವೀನ ಮಾದರಿಯ ಸೆಲ್‌ಫೋನ್‌ಗಳಲ್ಲಿ ಅಂತರ್ಜಾಲವನ್ನು ಜಾಲಾಡಬಹುದು, ಇ-ಮೇಲ್‌ ಎಸ್‌.ಎಮ್‌.ಎಸ್‌. ಕಳುಹಿಸಬಹುದು ಇಲ್ಲವೆ ಪಡೆಯಬಹುದು, ಟಿವಿ ನೋಡಬಹುದು, ಸಂಗೀತ ಆಲಿಸಬಹುದು, ಫೋಟೋ ಕ್ಲಿಕ್ಕಿಸಬಹುದು. ಅದರಲ್ಲಿರುವ ಗ್ಲೋಬಲ್‌ ಪೊಸಿಷನಿಂಗ್‌ ಸಿಸ್ಟಮ್‌ನ (GPS-ಜಾಗತಿಕ ನೆಲೆ ಸೂಚಕ) ಸಹಾಯದಿಂದ ಬೇಕಾದೆಡೆಗೆ ಸಂಚರಿಸಬಹುದು. ಹಾಂ, ಫೋನ್‌ ಕೂಡ ಮಾಡಲಿಕ್ಕಾಗುತ್ತದೆ ಅನ್ನುವುದನ್ನು ಮರೆಯಸಾಧ್ಯವೇ?

ವಾಷಿಂಗ್ಟನ್‌ ಪೋಸ್ಟ್‌ ವಾರ್ತಾಪತ್ರಿಕೆಯ ಒಂದು ವರದಿಗನುಸಾರ ಮಲ್ಟಿಮೀಡಿಯ ಸ್ಮಾರ್ಟ್‌ಫೋನ್‌ನ ಮಾಹಿತಿ ವಿನಿಮಯ ಸಾಮರ್ಥ್ಯವು “1965ರಲ್ಲಿ ಉತ್ತರ ಅಮೆರಿಕದ ವಾಯುಪಡೆಯಲ್ಲಿದ್ದ ಕಂಪ್ಯೂಟರ್‌ ವ್ಯವಸ್ಥೆಗಿಂತ ಹೆಚ್ಚು ಪ್ರಬಲವಾಗಿದೆ.” ಆ ವಾರ್ತಾಪತ್ರಿಕೆ ಇನ್ನೂ ತಿಳಿಸಿದ್ದು: “ಇಂದು ಜಗತ್ತಿನಲ್ಲಿ ಪ್ರತಿ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬರ ಹತ್ತಿರ ಮೊಬೈಲ್‌ ಇದೆ!” ಕಡಿಮೆಪಕ್ಷ 30 ರಾಷ್ಟ್ರಗಳಲ್ಲಿ ಜನಸಂಖ್ಯೆಗಿಂತಲೂ ಮೊಬೈಲ್‌ ಫೋನ್‌ಗಳ ಸಂಖ್ಯೆಯೇ ಜಾಸ್ತಿ. “ತಂತ್ರಜ್ಞಾನವು ಜಗತ್ತಿನಾದ್ಯಂತ ಶರವೇಗದಲ್ಲಿ ಹಬ್ಬುತ್ತಿರುವುದು ಮಾನವ ಇತಿಹಾಸದಲ್ಲಿ ಇದೇ ಪ್ರಥಮ” ಎಂದು ಅದೇ ವಾರ್ತಾಪತ್ರಿಕೆ ಹೇಳುತ್ತದೆ.

ಲೋಕದಾದ್ಯಂತ ಸೆಲ್‌ಫೋನ್‌ ಬಳಕೆದಾರರಲ್ಲಿ ಬಹುಮಟ್ಟಿಗೆ 60 ಪ್ರತಿಶತ ಜನರು ಅಭಿವೃದ್ಧಿಶೀಲ ದೇಶಗಳಲ್ಲಿ ಇರುವವರು. ಈ ದೇಶಗಳಲ್ಲಿ ಉಚ್ಚ ತಂತ್ರಜ್ಞಾನದ ಉಪಕರಣಗಳ ಪೈಕಿ ಅತ್ಯಧಿಕ ಬಳಕೆದಾರರನ್ನು ಹೊಂದಿರುವ ಕೀರ್ತಿ ಸೆಲ್‌ಫೋನ್‌ಗೆ ಸಲ್ಲುತ್ತದೆ. ಉದಾಹರಣೆಗೆ, ಅಫ್ಘಾನಿಸ್ತಾನದಲ್ಲಿ ಇಸವಿ 2008ರಲ್ಲಿ ತಿಂಗಳಿಗೆ 1,40,000ದಷ್ಟು ಚಂದಾದಾರರು ಸೇರ್ಪಡೆಯಾಗುತ್ತಿದ್ದರು. ಆಫ್ರಿಕದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸೆಲ್‌ಫೋನ್‌ ಬಳಕೆ ವಾರ್ಷಿಕವಾಗಿ ಸರಿಸುಮಾರು 50 ಪ್ರತಿಶತ ಹೆಚ್ಚಾಗುತ್ತಿದೆ.

ಆದರೆ ‘ದೀಪದ ಕೆಳಗೆ ಕತ್ತಲಿದೆ’ ಎಂಬ ಮಾತಿನಂತೆ ಈ ಸಂಪರ್ಕ ಸಾಧನಗಳ ಕ್ರಾಂತಿಯಿಂದ ಸಮಸ್ಯೆಗಳೂ ಇವೆ. ಮೊಬೈಲ್‌, ಪೇಜರ್‌, ಲ್ಯಾಪ್‌ಟಾಪ್‌ ಕಂಪ್ಯೂಟರ್‌ಗಳ ಮೂಲಕ ಈಗ ಜನರನ್ನು ಹೊತ್ತುಗೊತ್ತಿಲ್ಲದೆ, ಎಲ್ಲೆಂದರಲ್ಲಿ ಸಂಪರ್ಕಿಸಬಹುದಾದ ಕಾರಣ ಕೆಲವು ಬಳಕೆದಾರರಿಗೆ ಒಂದು ಎಲೆಕ್ಟ್ರಾನಿಕ್‌ ಜಾಲದಲ್ಲಿ ಸಿಕ್ಕಿಬಿದ್ದಿರುವ ಅನಿಸಿಕೆಯಾಗುತ್ತಿದೆ. ಇನ್ನೊಂದು ಬದಿಯಲ್ಲಿ ತಂತ್ರಜ್ಞಾನದ “ವ್ಯಸನಿಗಳು” ಕೂಡ ಇದ್ದಾರೆ. ಇವರಿಗೆ ಯಾವಾಗಲೂ ಯಾರನ್ನಾದರೂ ಸಂಪರ್ಕಿಸುತ್ತಾ, ಎಲ್ಲೆಲ್ಲಿ ಏನೇನು ಆಗುತ್ತಿದೆ ಎಂದು ತಿಳಿಯುವ ಗೀಳು ಇರುತ್ತದೆ.

ಜನಪ್ರಿಯವಾದ ಸಂಪರ್ಕ ಹಾಗೂ ಸಮೂಹ ಮಾಧ್ಯಮ ತಂತ್ರಜ್ಞಾನದಿಂದ “ವ್ಯಸನ,” ಅಪಕರ್ಷಣೆ, ಅಡಚಣೆಯಂಥ ಸಮಸ್ಯೆಗಳಿವೆ ಎಂಬುದು ಸಾಮಾನ್ಯವಾಗಿ ಜನರಿಗೆ ತಿಳಿದಿದೆ. * ಆದರೆ ಇವುಗಳಿಂದ ತುಂಬ ಒಳಿತೂ ಇದೆ. ಹೀಗಿರುವುದರಿಂದ ನೀವು ಅವುಗಳನ್ನು ಸಮತೋಲನದಿಂದ, ವಿವೇಕಯುತವಾಗಿ, ಇತರರಿಗೆ ಪರಿಗಣನೆ ತೋರಿಸುವ ವಿಧದಲ್ಲಿ ಹೇಗೆ ಬಳಸಬಹುದು? ಮುಂದಿನ ಲೇಖನಗಳು ಈ ಪ್ರಶ್ನೆಯನ್ನು ಚರ್ಚಿಸುವವು. (g09-E 11)

[ಪಾದಟಿಪ್ಪಣಿ]

^ ಈ ಲೇಖನಮಾಲೆಯು ಮೊಬೈಲ್‌ ಫೋನ್‌, ಕಂಪ್ಯೂಟರ್‌, ಟಿವಿ ಮತ್ತು ಇಂಟರ್‌ನೆಟ್‌ ಮೇಲೆ ಕೇಂದ್ರೀಕರಿಸುತ್ತದೆ. ಬರೀ ಇವುಗಳಿಗೆ ಸೂಚಿಸಲು “ತಂತ್ರಜ್ಞಾನ” ಎಂಬ ಪದವನ್ನು ಬಳಸಲಾಗಿದೆ. ಬೇರೆ ತಂತ್ರಜ್ಞಾನಕ್ಕೆ ಸೂಚಿಸುವಾಗ ನಿರ್ದಿಷ್ಟವಾಗಿ ತಿಳಿಸಲಾಗಿದೆ.