ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನನ್ನ ಹೆತ್ತವರೊಬ್ಬರ ಸಾವಿನ ನೋವನ್ನು ಹೇಗೆ ಸಹಿಸಲಿ?

ನನ್ನ ಹೆತ್ತವರೊಬ್ಬರ ಸಾವಿನ ನೋವನ್ನು ಹೇಗೆ ಸಹಿಸಲಿ?

ಯುವ ಜನರು ಪ್ರಶ್ನಿಸುವುದು

ನನ್ನ ಹೆತ್ತವರೊಬ್ಬರ ಸಾವಿನ ನೋವನ್ನು ಹೇಗೆ ಸಹಿಸಲಿ?

“ಮಮ್ಮಿ ತೀರಿಹೋದಾಗ ಆಕಾಶವೇ ಕಳಚಿ ಬಿದ್ದಂತಾಯಿತು. ಸರ್ವಸ್ವವನ್ನೂ ಕಳಕೊಂಡಂತೆ ಅನಿಸಿತು. ಮನೆಯವರನ್ನೆಲ್ಲ ಪ್ರೀತಿಯ ಬಂಧದಲ್ಲಿ ಬೆಸೆದು ಐಕ್ಯವಾಗಿರಿಸಿದ್ದು ಮಮ್ಮಿಯೇ.”—ಕ್ಯಾರನ್‌. *

ಅಪ್ಪ ಇಲ್ಲವೆ ಅಮ್ಮನ ಸಾವು ನಿಮಗೆ ಕಡಲಾಳದಷ್ಟು ನೋವನ್ನು ತಂದಿರಬಹುದು. ಅದರಂಥ ನೋವು ಬೇರೊಂದಿಲ್ಲ. ಒಂದೆಡೆ ಅಪ್ಪ/ಅಮ್ಮ ಇನ್ನಿಲ್ಲವೆಂಬ ದುಃಖವನ್ನು ನೀವೀಗ ತಾಳಿಕೊಳ್ಳಬೇಕು. ಇನ್ನೊಂದೆಡೆ ನಿಮ್ಮ ಎಣಿಕೆಗಳೆಲ್ಲಾ ತಲೆಕೆಳಗಾದ ಕರಾಳ ಭವಿಷ್ಯವನ್ನು ಎದುರಿಸಬೇಕು.

ನೀವು ಪದವೀಧರರಾಗುವ ದಿನ, ನಿಮಗೆ ಕೆಲಸ ಸಿಗುವ ದಿನ ಅಥವಾ ನಿಮ್ಮ ಮದುವೆ ದಿನದ ಸಂತೋಷ ಸಂಭ್ರಮದಲ್ಲಿ ಪ್ರೀತಿಯ ಅಪ್ಪ-ಅಮ್ಮ ಇಬ್ಬರೂ ನಿಮ್ಮ ಜೊತೆಗಿರುವರು ಎಂದೆಲ್ಲಾ ನೀವು ಕನಸು ಕಂಡಿರಬಹುದು. ಆದರೆ ಈಗ ಅವರಲ್ಲೊಬ್ಬರ ಸಾವು ಆ ಕನಸುಗಳನ್ನೆಲ್ಲಾ ನುಚ್ಚುನೂರಾಗಿಸಿದೆ, ನಿಮ್ಮನ್ನು ದುಃಖದ ಕೂಪಕ್ಕೆ ದೂಡಿದೆ, ನಿರಾಶೆಯಲ್ಲಿ ಮುಳುಗಿಸಿದೆ, ಬಹುಶಃ ಸಿಟ್ಟನ್ನೂ ಬರಿಸಿದೆ. ಈ ದುಃಖದ ಪ್ರವಾಹದಲ್ಲಿ ಕೊಚ್ಚಿಹೋಗದಿರಲು ಏನು ಮಾಡಬಲ್ಲಿರಿ?

‘ನನ್ನ ಪ್ರತಿಕ್ರಿಯೆ ಸಹಜವೇ?’

ಅಪ್ಪ ಇಲ್ಲವೆ ಅಮ್ಮ ಸತ್ತಿದ್ದಾರೆಂದು ಮೊದಲು ಗೊತ್ತಾದಾಗ ನಿಮ್ಮಲ್ಲಿ ನಾನಾ ರೀತಿಯ ಭಾವನೆಗಳ ಅಲೆ ಎದ್ದಿರಬಹುದು. ಭಾಸ್ಕರ್‌ ಎಂಬ ಹುಡುಗನ ತಂದೆ ಹಾರ್ಟ್‌ಅಟ್ಯಾಕ್‌ನಿಂದ ತೀರಿಹೋದರು. ಆಗ ಭಾಸ್ಕರ್‌ಗೆ ಕೇವಲ 13 ವರ್ಷ. ಅವನು ಹೇಳುವುದು: “ಅಪ್ಪ ಸತ್ತರೆಂದು ಅವತ್ತು ರಾತ್ರಿ ಗೊತ್ತಾದಾಗ ನಮಗೆ ಏನು ಮಾಡಬೇಕೆಂದೇ ತೋಚಲಿಲ್ಲ. ಎಲ್ಲರೂ ಒಬ್ಬರನ್ನೊಬ್ಬರು ತಬ್ಬಿಕೊಂಡು ಅತ್ತೆವು.” ನಳಿನಿಯ ತಂದೆ ಕ್ಯಾನ್ಸರ್‌ನಿಂದ ಸತ್ತಾಗ ಅವಳಿಗೆ ಬರೀ 10 ವರ್ಷ. “ನನಗೆ ಅಳಬೇಕಾ ಬಿಡಬೇಕಾ ಒಂದೂ ಗೊತ್ತಾಗಲಿಲ್ಲ. ಕಲ್ಲಿನಂತಾದೆ. ಭಾವಶೂನ್ಯಳಾದೆ” ಎಂದಾಕೆ ನೆನಪಿಸಿಕೊಳ್ಳುತ್ತಾಳೆ.

ಮರಣ ಒಬ್ಬೊಬ್ಬರನ್ನು ಒಂದೊಂದು ರೀತಿಯಲ್ಲಿ ಬಾಧಿಸುತ್ತದೆ. ನಿಮ್ಮ ಹೆತ್ತವರಲ್ಲೊಬ್ಬರ ಮರಣ ನಿಮ್ಮನ್ನು ಹೇಗೆ ಬಾಧಿಸಿದೆ ಎಂದು ಕೆಲವು ಕ್ಷಣ ಯೋಚಿಸಿ. ಕೆಳಗಿನ ಸಾಲುಗಳಲ್ಲಿ, (1) ಆ ಕೆಟ್ಟ ಸುದ್ದಿ ತಿಳಿದಾಗ ನಿಮಗೆ ಮೊದಲು ಹೇಗನಿಸಿತು ಮತ್ತು (2) ಈಗ ಹೇಗನಿಸುತ್ತದೆ ಎಂದು ಬರೆಯಿರಿ.#

(1) .....

(2) .....

ನಿಮ್ಮ ಭಾವನೆಗಳು ಸ್ವಲ್ಪಮಟ್ಟಿಗೆ ತಹಬಂದಿಗೆ ಬರುತ್ತಿವೆಯೆಂದು ನಿಮ್ಮ ಉತ್ತರಗಳು ತೋರಿಸಬಹುದು. ಇದು ಸಹಜ. ಇದರರ್ಥ ನೀವು ನಿಮ್ಮ ಅಪ್ಪ/ಅಮ್ಮನನ್ನು ಮರೆತಿದ್ದೀರಿ ಎಂದಲ್ಲ. ಇನ್ನೊಂದು ಕಡೆ, ನಿಮ್ಮ ದುಃಖ ಕಡಿಮೆಯಾಗಿರಲಿಕ್ಕಿಲ್ಲ. ಬಹುಶಃ ಮುಂಚೆಗಿಂತ ಇನ್ನೂ ಜಾಸ್ತಿಯಾಗಿರಬಹುದು. ನಿಮ್ಮ ಮನದಾಳದ ನೋವು ಒಮ್ಮೊಮ್ಮೆ ತೀರ ಕಡಿಮೆಯಾದಂತೆ ಕಂಡರೂ, ಆಮೇಲೆ ಥಟ್ಟನೆ ದಡಕ್ಕೆ ಅಪ್ಪಳಿಸುವ ಸಮುದ್ರದ ಅಲೆಗಳಂತೆ ಇದ್ದಕ್ಕಿದ್ದಂತೆ ಉಮ್ಮಳಿಸಿ ಬರಬಹುದು. ಅಪ್ಪ/ಅಮ್ಮ ಸತ್ತು ಹಲವು ವರ್ಷಗಳ ನಂತರವೂ ಹೀಗನಿಸಬಹುದು. ಇದೆಲ್ಲವೂ ಸಹಜ. ಆದರೆ ಪ್ರಶ್ನೆಯೇನೆಂದರೆ, ನಿಮ್ಮ ದುಃಖ ಯಾವುದೇ ರೀತಿಯದ್ದಾಗಿರಲಿ ಅದನ್ನು ನಿಭಾಯಿಸುವುದು ಹೇಗೆ?

ನಿಭಾಯಿಸುವ ಮಾರ್ಗಗಳು

ಅಳುವನ್ನು ಅದುಮಿಡಬೇಡಿ! ಮಡುಗಟ್ಟಿರುವ ನೋವು ಅತ್ತಾಗ ಕರಗಿ ಮನಸ್ಸು ಹಗುರವಾಗುತ್ತದೆ. ಆದರೆ ಅಕ್ಷತಾಳಂತೆ ನಿಮಗನಿಸಬಹುದು. ಅವಳ ಅಮ್ಮ ತೀರಿಹೋದಾಗ ಅಕ್ಷತಾಳಿಗೆ 19 ವರ್ಷ. ಅವಳನ್ನುವುದು: “ತುಂಬ ಅತ್ತರೆ ನನಗೆ ದೇವರಲ್ಲಿ ನಂಬಿಕೆಯಿಲ್ಲವೆಂದು ಬೇರೆಯವರು ನೆನಸಬಹುದೇನೋ ಎಂದೆಣಿಸಿದ್ದೆ.” ಇದನ್ನು ಸ್ವಲ್ಪ ಯೋಚಿಸಿ: ಯೇಸು ಕ್ರಿಸ್ತನು ದೇವರಲ್ಲಿ ನಂಬಿಕೆಯಿದ್ದ ಪರಿಪೂರ್ಣ ವ್ಯಕ್ತಿಯಾಗಿದ್ದನು. ಹಾಗಿದ್ದರೂ ತನ್ನ ಪ್ರಿಯ ಸ್ನೇಹಿತ ಲಾಜರನು ಸತ್ತಾಗ “ಕಣ್ಣೀರು ಸುರಿಸಿದನು.” (ಯೋಹಾನ 11:35) ಆದುದರಿಂದ ಅಳಲು ಅಂಜಬೇಡಿ. ಅತ್ತರೆ ದೇವರಲ್ಲಿ ನಂಬಿಕೆ ಕಳಕೊಂಡಿದ್ದೀರಿ ಎಂದರ್ಥವಲ್ಲ! ಅಕ್ಷತಾ ಹೇಳುವುದು: “ಕೊನೆಗೂ ನಾನು ಅತ್ತುಬಿಟ್ಟೆ. ತುಂಬ ಅತ್ತೆ, ಪ್ರತಿ ದಿನ ಅತ್ತೆ!” *

ನಿಮ್ಮ ದೋಷಿಭಾವನೆಯ ಕುರಿತು ಮಾತಾಡಿ. ಕ್ಯಾರನ್‌ 13 ವರ್ಷದವಳಾಗಿದ್ದಾಗ ಅವಳ ಅಮ್ಮ ತೀರಿಹೋದರು. ಅವಳಂದದ್ದು: “ನಾನು ಪ್ರತಿದಿನ ಮಹಡಿ ಮೇಲೆ ಮಮ್ಮಿಯ ರೂಮ್‌ಗೆ ಹೋಗಿ ಅವರಿಗೆ ಮುದ್ದಿಟ್ಟು ಗುಡ್‌ನೈಟ್‌ ಹೇಳುತ್ತಿದ್ದೆ. ಒಂದು ದಿನ ಮಾತ್ರ ಅವರ ರೂಮ್‌ಗೆ ಹೋಗಲಿಕ್ಕೆ ಆಗಲಿಲ್ಲ. ಮರುದಿನ ಬೆಳಗ್ಗೆಯೇ ಮಮ್ಮಿ ಕೊನೆಯುಸಿರೆಳೆದಿದ್ದರು. ನನ್ನಲ್ಲಿ ದೋಷಿಭಾವನೆ ಇರಬಾರದೆಂದು ನನಗೆ ಗೊತ್ತಿದ್ದರೂ ಹಿಂದಿನ ರಾತ್ರಿ ನಾನವರನ್ನು ನೋಡಲಿಲ್ಲವಲ್ಲಾ ಅಂತ ಮನಸ್ಸು ಚುಚ್ಚುತ್ತಾ ಇರುತ್ತದೆ. ಡ್ಯಾಡಿ ಬಿಸ್‌ನೆಸ್‌ ಮೇಲೆ ಬೇರೆ ಊರಿಗೆ ಹೋಗಿದ್ದರು. ಹೋಗುವ ಮುಂಚೆ, ‘ಮಮ್ಮಿಯನ್ನು ಹುಷಾರಾಗಿ ನೋಡಿಕೊಳ್ಳಿ’ ಎಂದು ನನಗೂ ಅಕ್ಕನಿಗೂ ಹೇಳಿದ್ದರು. ಆದರೆ ಆ ರಾತ್ರಿ ನಾವಿಬ್ಬರು ಮಲಗಲಿಕ್ಕೆ ತಡವಾಯಿತು. ಬೆಳಗ್ಗೆ ಹೋಗಿ ನೋಡಿದರೆ ಮಮ್ಮಿಯ ಉಸಿರು ನಿಂತುಹೋಗಿತ್ತು. ಡ್ಯಾಡಿ ಹೋಗುವಾಗ ಚೆನ್ನಾಗಿದ್ದ ಮಮ್ಮಿಗೆ ಹೀಗಾದಾಗ ನನಗೆ ನನ್ನ ಮೇಲೆ ಜಿಗುಪ್ಸೆ ಹುಟ್ಟಿತು!”

ನೀವು ಮಾಡಬೇಕಾಗಿದ್ದ ಸಂಗತಿಗಳನ್ನು ಮಾಡದಿದ್ದದಕ್ಕಾಗಿ ಕ್ಯಾರನ್‌ಳಿಗಿರುವಂತೆ ನಿಮಗೂ ದೋಷಿಭಾವನೆ ಇರಬಹುದು. ‘ನಾನು ಹಾಗೆ ಮಾಡಬೇಕಿತ್ತು, ಹೀಗೆ ಮಾಡಬೇಕಿತ್ತು’ ಎಂಬ ಯೋಚನೆ ನಿಮ್ಮನ್ನು ಕಾಡಬಹುದು. ‘ಡಾಕ್ಟರ್‌ ಹತ್ತಿರ ಹೋಗೋಣ ಅಂತ ಡ್ಯಾಡಿಗೆ ಹೇಳಬೇಕಿತ್ತು’ ಅಥವಾ ‘ಮಮ್ಮಿ ಹೇಗಿದ್ದಾರೆ ಅಂತ ನಾನು ಮುಂಚೆಯೇ ಹೋಗಿ ನೋಡಬೇಕಿತ್ತು’ ಎಂಬಂಥ ಯೋಚನೆಗಳು ಬರಬಹುದು. ಹೀಗೆ ವಿಷಾದಿಸುವುದು ಸಹಜ. ಆದರೆ ನೆನಪಿಡಿ: ಮುಂದೆ ಏನಾಗಲಿಕ್ಕಿದೆ ಎಂದು ನಿಮಗೆ ಗೊತ್ತಿರುತ್ತಿದ್ದರೆ ಖಂಡಿತ ಏನಾದರೂ ಮಾಡುತ್ತಿದ್ದೀರಿ. ಆದರೆ ನಿಮಗೆ ಗೊತ್ತಿರಲಿಲ್ಲವಲ್ಲಾ. ಆದುದರಿಂದ ನೀವು ಅದೆಲ್ಲವನ್ನು ನೆನಸಿ ಕೊರಗಬೇಡಿ. ಅವರ ಸಾವಿಗೆ ಖಂಡಿತ ನೀವು ಕಾರಣರಲ್ಲ! *

ನಿಮ್ಮ ಭಾವನೆಗಳನ್ನು ತೋಡಿಕೊಳ್ಳಿ. ‘ಕನಿಕರದ ಮಾತು ಮನಸ್ಸನ್ನು ಹಿಗ್ಗಿಸುವದು’ ಎನ್ನುತ್ತದೆ ಜ್ಞಾನೋಕ್ತಿ 12:25. ನಿಮ್ಮ ಭಾವನೆಗಳನ್ನು ಒಳಗೊಳಗೆ ಹೂತಿಟ್ಟರೆ ದುಃಖದಿಂದ ಹೊರಬರಲಾರಿರಿ. ಆದರೆ ನಿಮ್ಮ ವಿಶ್ವಾಸಪಾತ್ರರೊಂದಿಗೆ ಭಾವನೆಗಳನ್ನು ತೋಡಿಕೊಳ್ಳುವಾಗ ಅಗತ್ಯವಿರುವ ಪ್ರೋತ್ಸಾಹನೆಯ “ಕನಿಕರದ ಮಾತು” ಸಿಗುವುದು. ಆದಕಾರಣ, ಕೆಳಗಿನ ಒಂದೆರಡು ಸಲಹೆಗಳನ್ನು ಅನ್ವಯಿಸಿ ನೋಡಿ.

ಬದುಕಿರುವ ಅಪ್ಪ/ಅಮ್ಮನೊಂದಿಗೆ ಮಾತಾಡಿ. ಇಂಥ ಸಮಯದಲ್ಲಿ ಅವರು ಸಹ ತುಂಬ ದುಃಖದಲ್ಲಿದ್ದರೂ ಖಂಡಿತ ನಿಮಗೆ ಸಹಾಯ ಮಾಡಲಿಚ್ಛಿಸುವರು. ಆದ್ದರಿಂದ ನಿಮಗೆ ಅನಿಸುವುದನ್ನೆಲ್ಲ ಅವರಿಗೆ ಹೇಳಿ. ಹಾಗೆ ಮನಬಿಚ್ಚಿ ಮಾತಾಡುವುದರಿಂದ ನಿಮ್ಮ ಮನಸ್ಸಿನ ಭಾರ ಕಡಿಮೆಯಾಗುವುದು ಅಲ್ಲದೆ ನೀವಿಬ್ಬರು ಇನ್ನಷ್ಟೂ ಆಪ್ತರಾಗುವಿರಿ.

ಸಂಭಾಷಣೆ ಆರಂಭಿಸಲು ಇದನ್ನು ಪ್ರಯತ್ನಿಸಿ ನೋಡಿ: ಮೃತಪಟ್ಟ ಅಪ್ಪ/ಅಮ್ಮನ ಕುರಿತು ನೀವು ತಿಳಿಯಲು ಇಚ್ಛಿಸುತ್ತಿದ್ದ ಎರಡು-ಮೂರು ವಿಷಯಗಳನ್ನು ಕೆಳಗೆ ಬರೆಯಿರಿ. ಬಳಿಕ ಅವುಗಳಲ್ಲಿ ಒಂದರ ಕುರಿತು ಬದುಕಿರುವ ಅಪ್ಪ/ಅಮ್ಮನ ಬಳಿ ಅನುಮತಿ ಕೇಳಿ ಮಾತಾಡಿ. *

.....

ಆಪ್ತ ಸ್ನೇಹಿತರೊಂದಿಗೆ ಮಾತಾಡಿ. ನಿಜ ಮಿತ್ರರ “ಪ್ರೀತಿಯು ನಿರಂತರ” ಎನ್ನುತ್ತದೆ ಬೈಬಲ್‌. (ಜ್ಞಾನೋಕ್ತಿ 17:17) ಇದು ವಿಶೇಷವಾಗಿ ಕಷ್ಟದ ಸಮಯದಲ್ಲಿ ಸತ್ಯ. “ನೀವು ನಿರೀಕ್ಷಿಸಿರದ ಸ್ನೇಹಿತರೊಬ್ಬರು ನಿಮಗೆ ಸಹಾಯ ಕೊಡಬಹುದು. ಆದ್ದರಿಂದ ಮಾತಾಡಲು ಹಿಂದೇಟು ಹಾಕಬೇಡಿ” ಎನ್ನುತ್ತಾಳೆ ಅಕ್ಷತಾ. ಮಾತಾಡಲು ನಿಮಗೆ ಸ್ವಲ್ಪ ಮುಜುಗರವಾದೀತು. ನಿಮಗೂ ನಿಮ್ಮ ಸ್ನೇಹಿತರಿಗೂ ಏನು ಮಾತಾಡುವುದೆಂದೇ ತೋಚದಿರಬಹುದು. ಆದರೆ ಈಗ ನೀವು ಇತರರೊಂದಿಗೆ ನೋವನ್ನು ಹಂಚಿಕೊಂಡರೆ ಮುಂದಕ್ಕೆ ನಿಮಗೇ ಒಳಿತಾಗುವುದು. ದೀಪಕ್‌ ಬರೀ 9 ವರ್ಷದವನಾಗಿದ್ದಾಗ ಅವನ ತಂದೆ ಹಾರ್ಟ್‌ಅಟ್ಯಾಕ್‌ನಿಂದ ಕಣ್ಮುಚ್ಚಿದರು. ಅವನು ನೆನಪಿಸಿಕೊಳ್ಳುವುದು: “ನಾನು ನನ್ನ ಭಾವನೆಗಳನ್ನು ಬೇರೆಯವರೊಂದಿಗೆ ತೋಡಿಕೊಳ್ಳುತ್ತಿರಲಿಲ್ಲ. ಅದು ಒಳಗೊಳಗೇ ನನ್ನನ್ನು ಸುಡುತ್ತಿತ್ತು. ನಾನಾಗ ಬೇರೆಯವರೊಂದಿಗೆ ಮಾತಾಡುತ್ತಿದ್ದಲ್ಲಿ ನನ್ನ ಭಾವಾತ್ಮಕ ಮತ್ತು ದೈಹಿಕ ಕ್ಷೇಮಕ್ಕೆ ಒಳ್ಳೇದಾಗುತ್ತಿತ್ತು. ದುಃಖವನ್ನು ಹೆಚ್ಚು ಉತ್ತಮವಾಗಿ ನಿಭಾಯಿಸಲು ಶಕ್ತನಾಗುತ್ತಿದ್ದೆ.”

ದೇವರೊಂದಿಗೆ ಮಾತಾಡಿ. ಪ್ರಾರ್ಥನೆಯಲ್ಲಿ ಯೆಹೋವ ದೇವರ ಮುಂದೆ ‘ಹೃದಯ ಬಿಚ್ಚಿ’ ಮಾತಾಡುವಲ್ಲಿ ನೀವು ಚೇತರಿಸಿಕೊಳ್ಳುವಿರಿ. (ಕೀರ್ತನೆ 62:8) ಇದು ಕೇವಲ ಮನಸ್ಸು ಹಗುರಮಾಡುವ ತೆರಪಿ ಅಲ್ಲ. ನೀವು ಪ್ರಾರ್ಥನೆ ಮಾಡುವುದು “ಸಕಲ ಸಾಂತ್ವನದ” ದೇವರಿಗೆ. “ಎಲ್ಲ ಸಂಕಟಗಳಲ್ಲಿ ಆತನು ನಮ್ಮನ್ನು ಸಾಂತ್ವನಗೊಳಿಸುತ್ತಾನೆ.”—2 ಕೊರಿಂಥ 1:3, 4.

ದೇವರು ತನ್ನ ಪವಿತ್ರಾತ್ಮದ ಮೂಲಕ ಸಾಂತ್ವನ ಕೊಡುತ್ತಾನೆ. ಅದು ನಿಮಗೆ ‘ಸಹಜ ಶಕ್ತಿಗಿಂತ ಹೆಚ್ಚಿನ ಶಕ್ತಿಯನ್ನು’ ಕೊಟ್ಟು ದುಃಖವನ್ನು ಸಹಿಸಿಕೊಳ್ಳಲು ಸಾಧ್ಯಗೊಳಿಸಬಲ್ಲದು. (2 ಕೊರಿಂಥ 4:7) ದೇವರು ‘ಶಾಸ್ತ್ರಗ್ರಂಥದ ಮೂಲಕವೂ ಸಾಂತ್ವನ’ ಕೊಡುತ್ತಾನೆ. (ರೋಮನ್ನರಿಗೆ 15:4) ಆದ್ದರಿಂದ ಆತನ ಪವಿತ್ರಾತ್ಮಕ್ಕಾಗಿ ಕೇಳಿಕೊಳ್ಳಿ ಮತ್ತು ಆತನ ವಾಕ್ಯವಾದ ಬೈಬಲಿನಲ್ಲಿರುವ ಪ್ರೋತ್ಸಾಹಕರ ಮಾತುಗಳನ್ನು ಓದಲು ಸಮಯ ಕೊಡಿ. (2 ಥೆಸಲೊನೀಕ 2:16, 17) ವಿಶೇಷವಾಗಿ ನಿಮಗೆ ಸಾಂತ್ವನ ಕೊಡುವ ಬೈಬಲ್‌ ವಚನಗಳ ಪಟ್ಟಿಯನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಬಹುದಲ್ಲ? *

ಈ ದುಃಖ ಕೊನೆಗೊಳ್ಳುವುದೋ?

ಸಾವು ತರುವ ದುಃಖ ದಿನಬೆಳಗಾಗುವುದರೊಳಗೆ ಉಪಶಮನ ಆಗುವಂಥದ್ದಲ್ಲ. 16ರ ಪ್ರಾಯದಲ್ಲಿ ತನ್ನ ತಾಯಿಯನ್ನು ಕಳಕೊಂಡ ಭಾವನಾ ಹೀಗನ್ನುತ್ತಾಳೆ: “ಆ ನೋವು ನಾವೆಣಿಸಿದಷ್ಟು ಬೇಗನೆ ಮರೆಯಾಗುವುದಿಲ್ಲ. ನಾನೀಗಲೂ ಅಮ್ಮನನ್ನು ನೆನಸಿಕೊಂಡು ಒಂದೊಂದು ಸಲ ಅಳುತ್ತಾ ನಿದ್ದೆಹೋಗುತ್ತೇನೆ. ಕೆಲವೊಮ್ಮೆ, ನನಗಾದ ನಷ್ಟದ ಕುರಿತು ಯೋಚಿಸುವ ಬದಲು ಅಮ್ಮನೊಂದಿಗೆ ಪುನಃ ನಕ್ಕು ನಲಿಯಲು ಸಾಧ್ಯವಿರುವ ಪರದೈಸ್‌ ಕುರಿತು ಯೆಹೋವನು ಮಾಡಿರುವ ವಾಗ್ದಾನಗಳನ್ನು ಮನಸ್ಸಿಗೆ ತಂದುಕೊಳ್ಳುತ್ತೇನೆ.”

ಭಾವನಾ ತಿಳಿಸಿದ ಪರದೈಸ್‌ನಲ್ಲಿ “ಮರಣವಿರುವುದಿಲ್ಲ . . . ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವುದಿಲ್ಲ” ಎಂದು ಬೈಬಲ್‌ ಆಶ್ವಾಸನೆ ಕೊಡುತ್ತದೆ. (ಪ್ರಕಟನೆ 21:3, 4) ಇಂಥ ವಾಗ್ದಾನಗಳ ಕುರಿತು ಯೋಚಿಸುವುದರಿಂದ ನಿಮ್ಮ ಹೆತ್ತವರೊಬ್ಬರ ಸಾವಿನಿಂದಾದ ನೋವನ್ನು ಸಹಿಸಿಕೊಳ್ಳಲು ನಿಮಗೂ ಸಹಾಯವಾಗುವುದು. (g09-E 08)

“ಯುವ ಜನರು ಪ್ರಶ್ನಿಸುವುದು” ಲೇಖನಮಾಲೆಯ ಹೆಚ್ಚಿನ ಲೇಖನಗಳು www.watchtower.org/ype ವೆಬ್‌ಸೈಟ್‌ನಲ್ಲಿವೆ

[ಪಾದಟಿಪ್ಪಣಿಗಳು]

^ ಈ ಲೇಖನದಲ್ಲಿ ಹೆಸರುಗಳನ್ನು ಬದಲಾಯಿಸಲಾಗಿದೆ.

^ ಸದ್ಯಕ್ಕೆ ಉತ್ತರ ಬರೆಯಲು ನಿಮಗೆ ತುಂಬ ಕಷ್ಟವಾದರೆ ಮುಂದೆಂದಾದರೂ ಬರೆಯಬಹುದು.

^ ದುಃಖ ವ್ಯಕ್ತಪಡಿಸಲಿಕ್ಕಾಗಿ ಅಳಲೇಬೇಕು ಎಂದೆಣಿಸಬೇಡಿ. ಜನರು ಬೇರೆ ಬೇರೆ ವಿಧಗಳಲ್ಲಿ ದುಃಖಿಸುತ್ತಾರೆ. ಪ್ರಾಮುಖ್ಯ ವಿಷಯವೇನೆಂದರೆ ಅಳು ಬರುವಲ್ಲಿ ಅದು “ಅಳುವ ಸಮಯ,” ಆದ್ದರಿಂದ ಅಳುವನ್ನು ಬಲವಂತವಾಗಿ ಹಿಡಿದಿಡಬೇಡಿ.—ಪ್ರಸಂಗಿ 3:4.

^ ಅಂಥ ಯೋಚನೆಗಳು ಇನ್ನೂ ನಿಮ್ಮನ್ನು ಕಾಡುತ್ತಾ ಇದ್ದರೆ ಬದುಕಿರುವ ಅಮ್ಮ/ಅಪ್ಪನೊಂದಿಗೆ ಆ ಕುರಿತು ಮಾತಾಡಿ. ಸಮಯಾನಂತರ ಸಮತೋಲನದ ನೋಟವನ್ನು ಪಡೆಯುವಿರಿ.

^ ಸಾವನ್ನಪ್ಪಿರುವ ನಿಮ್ಮ ಅಪ್ಪ/ಅಮ್ಮ ಒಂಟಿ ಹೆತ್ತವರಾಗಿದ್ದಲ್ಲಿ ಅಥವಾ ಬದುಕಿರುವ ಅಪ್ಪ/ಅಮ್ಮನೊಂದಿಗೆ ಕಾರಣಾಂತರ ನಿಮಗೆ ಯಾವ ನಂಟೂ ಇಲ್ಲದಿರುವಲ್ಲಿ ಪ್ರೌಢ ವಯಸ್ಕರೊಬ್ಬರ ಬಳಿ ನಿಮ್ಮ ಭಾವನೆಗಳನ್ನು ತೋಡಿಕೊಳ್ಳಿ.

ಕೆಲವರಿಗೆ ಸಾಂತ್ವನ ಕೊಟ್ಟ ವಚನಗಳು: ಕೀರ್ತನೆ 34:18; 102:15; 147:3; ಯೆಶಾಯ 25:8; ಯೋಹಾನ 5:28, 29.

ಯೋಚಿಸಿ

◼ ಈ ಲೇಖನದ ಯಾವ ಸಲಹೆಗಳನ್ನು ನೀವು ಉಪಯೋಗಿಸುವಿರಿ? .....

◼ ದುಃಖದಲ್ಲಿ ಮುಳುಗಿರುವಾಗ ನೀವು ಓದಿ ಸಾಂತ್ವನ ಪಡೆಯಬಹುದಾದ ಕೆಲವು ವಚನಗಳನ್ನು ಕೆಳಗೆ ಬರೆಯಿರಿ. .....

[ಪುಟ 11ರಲ್ಲಿರುವ ಚೌಕ]

ಪರವಾಗಿಲ್ಲ ಅತ್ತುಬಿಡಿ . . . ಇವರೂ ಅತ್ತರು!

ಅಬ್ರಹಾಮ—ಆದಿಕಾಂಡ 23:2.

ಯೋಸೇಫ—ಆದಿಕಾಂಡ 50:1.

ದಾವೀದ—2 ಸಮುವೇಲ 1:11, 12; 18:33.

ಲಾಜರನ ಅಕ್ಕ ಮರಿಯ—ಯೋಹಾನ 11:32, 33.

ಯೇಸು—ಯೋಹಾನ 11:35.

ಮಗ್ದಲದ ಮರಿಯ—ಯೋಹಾನ 20:11.

[ಪುಟ 12ರಲ್ಲಿರುವ ಚೌಕ/ಚಿತ್ರ]

ಡೈರಿ ಬರೆಯಿರಿ

ನೀವು ಕಳಕೊಂಡಿರುವ ಅಪ್ಪ/ಅಮ್ಮನ ಕುರಿತು ನಿಮ್ಮ ಮನಸ್ಸಿಗೆ ಬರುವ ಯೋಚನೆಗಳನ್ನು ಬರೆದಿಡುವುದು ನೋವನ್ನು ಸಹಿಸಿಕೊಳ್ಳಲು ತುಂಬ ತುಂಬ ಸಹಾಯಕರ. ನೀವೇನನ್ನು ಬರೆಯಬಹುದು? ಇಲ್ಲಿದೆ ಕೆಲವು ಸಲಹೆ.

◼ ಅವರ ಬಗ್ಗೆ ಕೆಲವು ಸವಿನೆನಪುಗಳನ್ನು ಬರೆಯಿರಿ.

◼ ಮರಣಹೊಂದಿದ ನಿಮ್ಮ ಅಪ್ಪ/ಅಮ್ಮ ಬದುಕಿದ್ದಾಗ ನೀವು ಏನು ಹೇಳಿದ್ದರೆ ಚೆನ್ನಾಗಿರುತ್ತಿತ್ತೆಂದು ನೆನಸುತ್ತೀರೋ ಅದನ್ನು ಬರೆಯಿರಿ.

◼ ಅಪ್ಪ/ಅಮ್ಮನ ಸಾವಿಗೆ ತಾನೇ ಕಾರಣ ಎಂಬ ದೋಷಿಭಾವನೆಯುಳ್ಳ ತಂಗಿ ಅಥವಾ ತಮ್ಮ ನಿಮಗಿದ್ದಾರೆಂದು ನೆನಸಿ. ಅವಳನ್ನು/ನನ್ನು ಸಂತೈಸಲು ನೀವೇನು ಹೇಳುತ್ತಿದ್ದೀರೆಂದು ಬರೆಯಿರಿ. ಇದು ನಿಮಗಿರುವ ದೋಷಿಭಾವನೆಯನ್ನು ನಿಯಂತ್ರಿಸಲು ಸಹಾಯ ಮಾಡಬಲ್ಲದು.

[ಪುಟ 13ರಲ್ಲಿರುವ ಚೌಕ]

ಬದುಕಿರುವ ತಂದೆ/ತಾಯಿಗೊಂದು ಕಿವಿಮಾತು

ನಿಮ್ಮ ಬಾಳಸಂಗಾತಿಯ ಸಾವಿನ ದುಃಖದಿಂದ ನೀವಿನ್ನೂ ಹೊರಬಂದಿರಲಿಕ್ಕಿಲ್ಲ. ಇಂಥ ಪರಿಸ್ಥಿತಿಯಲ್ಲಿ ನಿಮ್ಮ ಹದಿಹರೆಯದ ಮಗನಿಗೂ ಸಹಾಯ ಮಾಡಬೇಕಾಗಿ ಬಂದಿದೆ. ನಿಮ್ಮ ದುಃಖವನ್ನು ಕಡೆಗಣಿಸದೆ, ಅದೇ ಸಮಯದಲ್ಲಿ ತನ್ನ ದುಃಖವನ್ನು ಸಹಿಸಿಕೊಳ್ಳಲು ಮಗನಿಗೆ ಹೇಗೆ ಸಹಾಯಮಾಡುವಿರಿ? *

ನಿಮ್ಮ ಭಾವನೆಗಳನ್ನು ಮುಚ್ಚಿಡಬೇಡಿ. ನಿಮ್ಮ ಮಗ ಬದುಕಿನ ಅತ್ಯಮೂಲ್ಯ ಪಾಠಗಳಲ್ಲಿ ಹೆಚ್ಚಿನದ್ದನ್ನು ನಿಮ್ಮಿಂದ ಕಲಿತಿದ್ದಾನೆ. ಸಾವು ತರುವ ನೋವನ್ನು ತಾಳಿಕೊಳ್ಳುವುದು ಹೇಗೆಂಬುದನ್ನೂ ನಿಮ್ಮಿಂದಲೇ ಕಲಿಯುವನು. ಆದ್ದರಿಂದ ನಿಮ್ಮ ಮಗನಿಗಾಗಿ ಮನಸ್ಸು ಗಟ್ಟಿಮಾಡಿಕೊಳ್ಳಬೇಕೆಂದು ನೆನಸಿ ಅವನಿಂದ ನಿಮ್ಮ ದುಃಖವನ್ನು ಮರೆಮಾಚಬೇಡಿ. ಅವನೂ ಹಾಗೆಯೇ ಮಾಡಿಯಾನು. ಆದರೆ ನೀವು ನಿಮ್ಮ ದುಃಖವನ್ನು ಹೇಳಿಕೊಂಡಲ್ಲಿ ಮಗನು ಕೂಡ ತನ್ನ ಮನದಾಳದ ನೋವನ್ನು ಅದುಮಿಡುವುದಕ್ಕಿಂತ ತೋಡಿಕೊಳ್ಳುವುದೇ ಒಳ್ಳೇದು ಎಂದು ಕಲಿತುಕೊಳ್ಳುವನು. ಅಲ್ಲದೆ, ಇಂಥ ಸಮಯದಲ್ಲಿ ದುಃಖ, ನಿರಾಶೆ ಅಥವಾ ಕೆಲವೊಮ್ಮೆ ಕೋಪವೂ ಬರುವುದು ಸಹಜವೆಂದು ತಿಳುಕೊಳ್ಳುವನು.

ನಿಮ್ಮ ಹದಿಪ್ರಾಯದ ಮಗನನ್ನು ಮಾತಾಡುವಂತೆ ಉತ್ತೇಜಿಸಿ. ಹೃದಯಬಿಚ್ಚಿ ಮಾತಾಡುವಂತೆ ಅವನನ್ನು ಉತ್ತೇಜಿಸಿ. ಆದರೆ ಒತ್ತಾಯಿಸಬೇಡಿ. ಅವನು ಮಾತಾಡಲು ಹಿಂಜರಿಯುವಲ್ಲಿ ಈ ಲೇಖನವನ್ನು ನೀವಿಬ್ಬರು ಒಟ್ಟಿಗೆ ಚರ್ಚಿಸಬಾರದೇಕೆ? ಮಾತ್ರವಲ್ಲ, ಅಗಲಿದ ಸಂಗಾತಿಯ ಕುರಿತು ನಿಮಗಿರುವ ಸವಿನೆನಪುಗಳನ್ನು ಅವನಿಗೆ ತಿಳಿಸಿರಿ. ಅವರಿಲ್ಲದೆ ನಿಮಗೆ ಮುಂದಕ್ಕೆ ಎಷ್ಟು ಕಷ್ಟವಾಗುವುದೆಂದೂ ತಿಳಿಸಿ. ಈ ರೀತಿ ನೀವು ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದನ್ನು ನೋಡಿ ಅವನೂ ಹಾಗೆ ಮಾಡಲು ಕಲಿಯುವನು.

ನಿಮ್ಮ ಇತಿಮಿತಿಗಳನ್ನು ಮನಸ್ಸಿನಲ್ಲಿಡಿ. ಈ ಕಷ್ಟದ ಸಮಯದಲ್ಲಿ ನಿಮ್ಮ ಹದಿಪ್ರಾಯದ ಮಗನಿಗೆ ನಿರಂತರ ಬೆಂಬಲಕೊಡಲು ನೀವು ಬಯಸುವುದು ಸಹಜ. ಆದರೆ ನಿಮ್ಮ ಪ್ರೀತಿಯ ಸಂಗಾತಿಯ ಮರಣದಿಂದ ನಿಮಗೆ ತೀವ್ರ ನಷ್ಟವಾಗಿದೆ ಎಂದು ಮರೆಯದಿರಿ. ನಿಮ್ಮ ಭಾವನಾತ್ಮಕ, ಮಾನಸಿಕ ಮತ್ತು ದೈಹಿಕ ಬಲ ಸ್ವಲ್ಪ ಸಮಯಕ್ಕೆ ಉಡುಗಿ ಹೋಗಿರಬಹುದು. (ಜ್ಞಾನೋಕ್ತಿ 24:10) ಆದ್ದರಿಂದ ನೀವು ಕುಟುಂಬದ ಇತರ ವಯಸ್ಕರ ಮತ್ತು ಪ್ರೌಢ ಸ್ನೇಹಿತರ ಬೆಂಬಲ, ಸಹಾಯವನ್ನು ಕೇಳಿ ಪಡಕೊಳ್ಳಬಹುದು. ಇದು ಪ್ರೌಢತೆಯ ಗುರುತು. “ದೀನರಲ್ಲಿ ಜ್ಞಾನ” ಎನ್ನುತ್ತದೆ ಜ್ಞಾನೋಕ್ತಿ 11:2.

ಎಲ್ಲರಿಗಿಂತ ಉತ್ತಮ ಬೆಂಬಲವನ್ನು ಕೊಡಬಲ್ಲಾತನು ಯೆಹೋವ ದೇವರೇ. ಆತನು ತನ್ನ ಭಕ್ತರಿಗೆ ಹೀಗೆ ವಚನವಿತ್ತಿದ್ದಾನೆ: “ಭಯಪಡಬೇಡ, ನಿನಗೆ ಸಹಾಯಮಾಡುತ್ತೇನೆ ಎಂದು ನಿನಗೆ ಹೇಳುವ ನಿನ್ನ ದೇವರಾದ ಯೆಹೋವನೆಂಬ ನಾನೇ ನಿನ್ನ ಕೈಹಿಡಿಯುತ್ತೇನಲ್ಲಾ.”—ಯೆಶಾಯ 41:13.

[ಪಾದಟಿಪ್ಪಣಿ]

^ ಈ ಚೌಕದಲ್ಲಿ ಗಂಡುಮಕ್ಕಳಿಗೆ ಸೂಚಿಸಿ ಹೇಳಲಾಗಿದೆಯಾದರೂ ಇಲ್ಲಿರುವ ಸೂತ್ರಗಳು ಹೆಣ್ಣುಮಕ್ಕಳಿಗೂ ಅನ್ವಯಿಸುತ್ತವೆ.

[ಪುಟ 11ರಲ್ಲಿರುವ ಚಿತ್ರ]

ಥಟ್ಟನೆ ದಡಕ್ಕೆ ಅಪ್ಪಳಿಸುವ ಸಮುದ್ರದ ಅಲೆಗಳಂತೆ ದುಃಖವು ಇದ್ದಕ್ಕಿದ್ದಂತೆ ಉಮ್ಮಳಿಸಿ ಬರಬಹುದು