ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪೂರ್ವಗ್ರಹಕ್ಕೆ ಪ್ರೀತಿಯೇ ಮದ್ದು

ಪೂರ್ವಗ್ರಹಕ್ಕೆ ಪ್ರೀತಿಯೇ ಮದ್ದು

ಪೂರ್ವಗ್ರಹಕ್ಕೆ ಪ್ರೀತಿಯೇ ಮದ್ದು

“ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಒಂದು ಹೊಸ ರೀತಿಯ ಧಾರ್ಮಿಕ ಸಮುದಾಯ ತಲೆದೋರಿತು. ದೇಶಪ್ರೇಮ ಅವರ ಉಪಾಸನೆಯಾಗಿರಲಿಲ್ಲ. ಈ ಗುಂಪಿನವರು ಸ್ವಇಚ್ಛೆಯಿಂದ ಸಮಾಜ, ಕುಲ, ರಾಷ್ಟ್ರ ಎಂಬ ಭೇದಗಳನ್ನು ಮೆಟ್ಟಿನಿಂತರು. ಯಾವುದೇ ತಾರತಮ್ಯವಿಲ್ಲದೆ ತಮ್ಮ ದೇವರನ್ನು ಆರಾಧಿಸಲು ಸೇರಿಬರುವ ವ್ಯಕ್ತಿಗಳು ಅವರಾಗಿದ್ದರು.”—ಕ್ರೈಸ್ತಧರ್ಮದ ಇತಿಹಾಸ, (ಇಂಗ್ಲಿಷ್‌) ಲೇಖಕ ಪೌಲ್‌ ಜಾನ್ಸನ್‌.

ರೋಮನ್‌ ಸಾಮ್ರಾಜ್ಯದಾದ್ಯಂತ ನಿಜ ಕ್ರೈಸ್ತಧರ್ಮ ಹಬ್ಬುತ್ತಾ ಬಂದಂತೆ ಅಚ್ಚರಿಮೂಡಿಸಿದ ಸಂಗತಿಯೊಂದನ್ನು ಜನರು ಗಮನಿಸಿದರು. ಅದೇನಂದರೆ, ಈ ಧರ್ಮದಲ್ಲಿ ಬೇರೆ ಬೇರೆ ರಾಷ್ಟ್ರಗಳ ಜನರು ನಿಜ ಶಾಂತಿ ಐಕ್ಯದಿಂದ ಬದುಕಲು ಕಲಿತು ದೇವರನ್ನು ಆರಾಧಿಸುತ್ತಿದ್ದರು. ಇದರ ರಹಸ್ಯ ಅವರಲ್ಲಿದ್ದ ಯಥಾರ್ಥ ಪ್ರೀತಿಯೇ ಆಗಿತ್ತು. ಈ ಪ್ರೀತಿ ಬರೀ ಭಾವುಕತೆಯಾಗಿರದೆ, ದೇವರ ಮೂಲತತ್ತ್ವಗಳ ಮೇಲೆ ಆಧಾರಿತವಾಗಿತ್ತು.

ಈ ಮೂಲತತ್ತ್ವಗಳನ್ನೇ ಯೇಸು ಕ್ರಿಸ್ತನು ತನ್ನ ನಡೆನುಡಿಯ ಮೂಲಕ ಕಲಿಸಿದ್ದನು. ಅವನು ಕೂಡ ದ್ವೇಷ ಮತ್ತು ಹಿಂಸಾತ್ಮಕ ಪೂರ್ವಗ್ರಹಕ್ಕೆ ಗುರಿಯಾಗಿದ್ದನು. (1 ಪೇತ್ರ 2:21-23) ಇದಕ್ಕೆ ಒಂದು ಕಾರಣ ಅವನು ಗಲಿಲಾಯ ಎಂಬ ಊರಿನವನಾಗಿದ್ದದ್ದೇ. ಗಲಿಲಾಯದವರು ಹೆಚ್ಚಾಗಿ ರೈತರೂ ಬೆಸ್ತರೂ ಆಗಿದ್ದರು. ಇಂಥ ಜನರನ್ನು ಯೆರೂಸಲೇಮಿನ ಯೆಹೂದಿ ಧಾರ್ಮಿಕ ಮುಖಂಡರು ಕಾಲುಕಸದಂತೆ ಕಾಣುತ್ತಿದ್ದರು. (ಯೋಹಾನ 7:45-52) ಅಷ್ಟುಮಾತ್ರವಲ್ಲ, ಗಮನಾರ್ಹ ಬೋಧಕನಾಗಿದ್ದ ಯೇಸುವನ್ನು ಜನಸಾಮಾನ್ಯರು ತುಂಬ ಪ್ರೀತಿಸಿ ಗೌರವಿಸುತ್ತಿದ್ದರು. ಆದ್ದರಿಂದಲೇ ಧಾರ್ಮಿಕ ಮುಖಂಡರಿಗೆ ಅವನನ್ನು ಕಂಡರೆ ಹೊಟ್ಟೆಉರಿಯುತ್ತಿತ್ತು. ಎಷ್ಟರಮಟ್ಟಿಗೆ ಅಂದರೆ ಅವನ ಬಗ್ಗೆ ಸುಳ್ಳು ವದಂತಿಗಳನ್ನು ಹಬ್ಬಿಸಿದರು, ಕೊಲ್ಲಲೂ ಹೊಂಚುಹಾಕಿದರು.—ಮಾರ್ಕ 15:9, 10; ಯೋಹಾನ 9:16, 22; 11:45-53.

ಆದರೂ ಯೇಸು “ಕೆಟ್ಟದ್ದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು” ಮಾಡಲಿಲ್ಲ. (ರೋಮನ್ನರಿಗೆ 12:17) ಉದಾಹರಣೆಗೆ ಫರಿಸಾಯರು ಎಂಬ ಯೆಹೂದ್ಯರ ಒಂದು ವರ್ಗ ಯೇಸುವನ್ನು ವಿರೋಧಿಸುತ್ತಿತ್ತು. ಆದರೆ ಆ ವರ್ಗದ ಕೆಲವರು ಒಳ್ಳೇ ಮನಸ್ಸಿನಿಂದ ವೈಯಕ್ತಿಕವಾಗಿ ಯೇಸುವನ್ನು ಭೇಟಿಮಾಡಿ ಪ್ರಶ್ನೆ ಕೇಳಿದಾಗ ಅವನು ವಿನಯಪೂರ್ವಕವಾಗಿ ಉತ್ತರಿಸಿದನು. (ಯೋಹಾನ 3:1-21) ಅಷ್ಟೇ ಏಕೆ, ಫರಿಸಾಯರೊಂದಿಗೆ ಊಟವನ್ನೂ ಮಾಡಿದನು. ಹೀಗೆ ಒಮ್ಮೆ ಊಟಕ್ಕೆ ಆಮಂತ್ರಿಸಿದ ಫರಿಸಾಯರಲ್ಲಿ ಒಬ್ಬನು ಯೇಸುವಿಗೆ ಸ್ವಲ್ಪಮಟ್ಟಿಗೆ ಪೂರ್ವಗ್ರಹವನ್ನು ತೋರಿಸಿದ್ದನು. ಹೇಗೆ? ಮನೆಗೆ ಬಂದ ಅತಿಥಿಗಳ ಪಾದತೊಳೆಯುವುದು ಆ ಕಾಲದ ವಾಡಿಕೆಯಾಗಿತ್ತು. ಆದರೆ ಈ ಫರಿಸಾಯನು ಯೇಸುವಿಗೆ ಹಾಗೆ ಮಾಡಲಿಲ್ಲ. ಅದಕ್ಕಾಗಿ ಯೇಸು ಸಿಟ್ಟುಗೊಂಡನೋ? ಖಂಡಿತ ಇಲ್ಲ. ಅದಕ್ಕೆ ಬದಲಾಗಿ ಆ ಸಂಜೆ ಕರುಣೆ ಮತ್ತು ಕ್ಷಮೆಯ ಬಗ್ಗೆ ಸೊಗಸಾದ ಪಾಠವೊಂದನ್ನು ಕಲಿಸಿದನು.—ಲೂಕ 7:36-50; 11:37.

ತಿರಸ್ಕೃತರನ್ನು ಯೇಸು ಪ್ರೀತಿಸಿದನು

ಯೇಸುವಿನ ಜನಪ್ರಿಯ ನೀತಿಕಥೆಗಳಲ್ಲಿ ಒಳ್ಳೇ ಸಮಾರ್ಯದವನ ಕುರಿತ ಕಥೆಯೂ ಒಂದು. ಆ ಕಥೆಯಲ್ಲಿ ಒಬ್ಬ ಯೆಹೂದ್ಯನನ್ನು ಕಳ್ಳರು ಲೂಟಿಮಾಡಿ ಹೊಡೆದು ಹಾಕಿದ್ದರು. ಸಮಾರ್ಯ ಧರ್ಮಕ್ಕೆ ಸೇರಿದವನಾಗಿದ್ದ ಒಬ್ಬ ವ್ಯಕ್ತಿ ತನ್ನ ಸ್ವಂತ ಖರ್ಚಲ್ಲಿ ಅವನ ಆರೈಕೆಮಾಡಿದನು. (ಲೂಕ 10:30-37) ಅವನು ಮಾಡಿದ್ದೆಲ್ಲವೂ ಸತ್ಕಾರ್ಯವಾಗಿತ್ತೇಕೆ? ನಿಜಜೀವನದಲ್ಲಿ ಯೆಹೂದಿ ಧರ್ಮದವರ ಮತ್ತು ಸಮಾರ್ಯ ಧರ್ಮದವರ ಮಧ್ಯೆ ಹಗೆತನವಿತ್ತು. “ಸಮಾರ್ಯದವ” ಎಂಬ ಪದವನ್ನು ಯೆಹೂದ್ಯರು ಹೆಚ್ಚಾಗಿ ಬೈಗುಳವಾಗಿ ಬಳಸುತ್ತಿದ್ದರು. ಯೇಸುವಿಗೂ ಆ ಪದವನ್ನು ಬಳಸಲಾಗಿತ್ತು. (ಯೋಹಾನ 8:48) ಈ ಹಿನ್ನೆಲೆಯಲ್ಲಿ, ಭೇದಭಾವವಿಲ್ಲದೆ ಎಲ್ಲರನ್ನೂ ಪ್ರೀತಿಸಬೇಕೆಂಬ ಪಾಠವನ್ನು ಕಲಿಸಲು ಯೇಸು ಬಳಸಿದ ಈ ದೃಷ್ಟಾಂತ ಅತಿ ಪ್ರಬಲವಾಗಿತ್ತು.

ಯೇಸು ತಾನೇನು ಕಲಿಸಿದನೋ ಅದರಂತೆ ನಡೆದನು. ಒಮ್ಮೆ, ಸಮಾರ್ಯದವನಾದ ಕುಷ್ಠರೋಗಿಯೊಬ್ಬನನ್ನು ಅವನು ವಾಸಿಮಾಡಿದನು. (ಲೂಕ 17:11-19) ಒಳ್ಳೇ ಮನಸ್ಸಿನ ಇತರ ಸಮಾರ್ಯದವರಿಗೆ ಬೋಧಿಸಿದನು ಕೂಡ. ಅದರಲ್ಲೂ ಒಬ್ಬಾಕೆ ಸಮಾರ್ಯ ಸ್ತ್ರೀಯೊಂದಿಗೆ ಒಂದು ದೀರ್ಘ ಸಂಭಾಷಣೆ ನಡೆಸಿದನು. ಇದೊಂದು ಗಮನಸೆಳೆಯುವ ಘಟನೆಯಾಗಿತ್ತು. (ಯೋಹಾನ 4:7-30, 39-42) ಏಕೆ? ಕಟ್ಟುನಿಟ್ಟಿನ ಯೆಹೂದಿ ಗುರುಗಳು ಸಾರ್ವಜನಿಕವಾಗಿ ಯಾವ ಸ್ತ್ರೀಯೊಂದಿಗೂ, ಆಕೆ ಆಪ್ತಬಂಧುವಾಗಿದ್ದರೂ ಮಾತಾಡುತ್ತಿರಲಿಲ್ಲ. ಅದರಲ್ಲೂ ಸಮಾರ್ಯದ ಸ್ತ್ರೀಯೊಬ್ಬಳೊಂದಿಗೆ ಮಾತಾಡುವುದಂತೂ ದೂರದ ಮಾತು!

ಆದರೆ ತನ್ನ ಮನಸ್ಸಿನಿಂದ ಪೂರ್ವಗ್ರಹವನ್ನು ತೆಗೆದುಹಾಕಲು ಹೆಣಗಾಡುತ್ತಿರುವ ಒಬ್ಬ ವ್ಯಕ್ತಿಯ ಬಗ್ಗೆ ದೇವರಿಗೆ ಹೇಗನಿಸುತ್ತದೆ? ಈ ವಿಷಯದಲ್ಲೂ ಬೈಬಲ್‌ ಕೊಡುವ ಒಳನೋಟ ಸಾಂತ್ವನದಾಯಕ.

ದೇವರು ತಾಳ್ಮೆ ತೋರಿಸುತ್ತಾನೆ

ಒಂದನೇ ಶತಮಾನದಲ್ಲಿ, ಯೆಹೂದಿ ಹಿನ್ನೆಲೆಯಿಂದ ಬಂದ ಕ್ರೈಸ್ತರಿಗೆ ಹೆಚ್ಚೆಚ್ಚು ಸಂಖ್ಯೆಯಲ್ಲಿ ಕ್ರಿಸ್ತನ ಹಿಂಬಾಲಕರಾಗುತ್ತಿದ್ದ ಅನ್ಯ ಧರ್ಮದವರ ಬಗ್ಗೆ ಆರಂಭದಲ್ಲಿ ತೀವ್ರ ಪೂರ್ವಗ್ರಹವಿತ್ತು. ಇದು ಕ್ರೈಸ್ತ ಸಭೆಯೊಳಗೆ ಒಡಕನ್ನು ಉಂಟುಮಾಡಸಾಧ್ಯವಿತ್ತು. ಹಾಗಾಗಿ ಯೆಹೋವ ದೇವರು ಏನು ಮಾಡಿದನು? ಆತನು ಆ ಕ್ರೈಸ್ತ ಸಭೆಗೆ ತಾಳ್ಮೆಯಿಂದ ಕಲಿಸಿದನು. (ಅ. ಕಾರ್ಯಗಳು 15:1-5) ಈ ತಾಳ್ಮೆಗೆ ಸಿಕ್ಕಿದ ಪ್ರತಿಫಲ ಒಳ್ಳೇದಾಗಿತ್ತು. ಈ ಲೇಖನದ ಆರಂಭದಲ್ಲಿ ತಿಳಿಸಲಾದಂತೆ ಕ್ರೈಸ್ತರು “ಸಮಾಜ, ಕುಲ, ರಾಷ್ಟ್ರ ಎಂಬ ಭೇದಗಳನ್ನು ಮೆಟ್ಟಿನಿಂತರು.” ಫಲಿತಾಂಶವಾಗಿ “ಸಭೆಗಳು ನಂಬಿಕೆಯಲ್ಲಿ ಬಲಗೊಳಿಸಲ್ಪಡುತ್ತಾ ದಿನೇ ದಿನೇ ಸಂಖ್ಯೆಯಲ್ಲಿ ಹೆಚ್ಚುತ್ತಾ ಬಂದವು.”—ಅ. ಕಾರ್ಯಗಳು 16:5.

ಇದರಿಂದ ಪಾಠ? ನಿಮ್ಮ ಪ್ರಯತ್ನವನ್ನು ಕೈಬಿಡಬೇಡಿ. ಯಾವಾಗಲೂ ದೇವರ ಮೇಲೆ ಅವಲಂಬಿಸಿ. ‘ನಂಬಿಕೆಯಿಂದ ಕೇಳಿಕೊಳ್ಳುತ್ತಾ ಇರುವವರಿಗೆ’ ಆತನು ವಿವೇಕ ಮತ್ತು ನೈತಿಕ ಬಲವನ್ನು ಉದಾರವಾಗಿ ದಯಪಾಲಿಸುವನು. (ಯಾಕೋಬ 1:5, 6) ಮೊದಲನೇ ಲೇಖನದಲ್ಲಿ ತಿಳಿಸಲಾದ ಜೆನಿಫರ್‌, ತಿಮಥಿ, ಜಾನ್‌ ಮತ್ತು ಒಲ್ಗಾ ಎಂಬವರನ್ನು ನೆನಪಿಸಿಕೊಳ್ಳಿ. ಜೆನಿಫರ್‌ ಪ್ರೌಢ ಶಾಲೆಯ ಮೆಟ್ಟಿಲೇರುವಷ್ಟರಲ್ಲಿ ಆಧ್ಯಾತ್ಮಿಕವಾಗಿ ಪ್ರಬುದ್ಧಳಾದ ಕಾರಣ ಜನಾಂಗೀಯ ನಿಂದನೆ ಮತ್ತು ತನ್ನ ಎತ್ತರದ ಕುರಿತ ಬೇರೆಯವರ ಅವಹೇಳನಕಾರಿ ಮಾತುಗಳನ್ನು ಕಿವಿಗೆ ಹಾಕಿಕೊಳ್ಳದಿರಲು ಕಲಿತಳು. ಕ್ಲಾಸ್‌ನಲ್ಲಿ ಇನ್ನೊಂದು ಹುಡುಗಿ ಇಂಥದ್ದೇ ನಿಂದೆಯ ಮಾತುಗಳಿಗೆ ಗುರಿಯಾದಾಗ ಜೆನಿಫರ್‌ ಅವಳ ಪರವಹಿಸಿ ಮಾತಾಡಿದಳು ಮತ್ತು ಅವಳನ್ನು ಸಂತೈಸಿದಳು.

ತಿಮಥಿಯನ್ನು ವಿದ್ಯಾರ್ಥಿಗಳು ಜನಾಂಗೀಯ ನಿಂದನೆಯ ಮಾತುಗಳಿಂದ ಕೆಣಕಿದಾಗ ಕೋಪಕ್ಕೆ ಕಡಿವಾಣ ಹಾಕಲು ಅವನಿಗೆ ಯಾವುದು ಸಹಾಯಮಾಡಿತು? ಅವನು ಹೇಳುವುದು: “ನಾನು ಸಿಟ್ಟುಗೊಳ್ಳುವುದರಿಂದ ಯೆಹೋವ ದೇವರ ಹೆಸರಿಗೆ ಬರುವ ಕಳಂಕದ ಬಗ್ಗೆ ಯೋಚಿಸಿದೆ. ನಾವು ‘ಒಳ್ಳೇದರಿಂದ ಕೆಟ್ಟದ್ದನ್ನು ಜಯಿಸುತ್ತಾ ಇರಬೇಕು’ ಮತ್ತು ಕೆಟ್ಟದ್ದು ನಮ್ಮ ಮೇಲೆ ಜಯಸಾಧಿಸುವಂತೆ ಬಿಡಬಾರದು ಎಂಬುದನ್ನು ಯಾವಾಗಲೂ ನೆನಪಿನಲ್ಲಿಡುತ್ತಿದ್ದೆ.”—ರೋಮನ್ನರಿಗೆ 12:21.

ಹೌಸ ಜನಾಂಗಕ್ಕೆ ಸೇರಿದ ತನ್ನ ಸಹಪಾಠಿ ಮೇಲಿದ್ದ ಪೂರ್ವಗ್ರಹವನ್ನು ಜಾನ್‌ ಕಿತ್ತೊಗೆದನು. ಅವನು ಹೇಳುವುದು: “ಹದಿವಯಸ್ಕನಾಗಿದ್ದಾಗ ಕೆಲವು ಹೌಸ ವಿದ್ಯಾರ್ಥಿಗಳ ಪರಿಚಯವಾಯಿತು. ಅವರು ನನ್ನ ಸ್ನೇಹಿತರಾದರು. ಒಬ್ಬ ಹೌಸ ವಿದ್ಯಾರ್ಥಿಯೊಂದಿಗೆ ಸೇರಿ ಒಂದು ಪ್ರಾಜೆಕ್ಟ್‌ ಅನ್ನು ಮಾಡಿದೆ. ನಾವಿಬ್ಬರೂ ಚೆನ್ನಾಗಿ ಹೊಂದಿಕೊಂಡು ಹೋಗುತ್ತಿದ್ದೆವು. ನಾನೀಗ ಒಬ್ಬ ವ್ಯಕ್ತಿಯ ಜಾತಿ, ಕುಲ ಯಾವುದೆಂದು ನೋಡದೆ ಅವನನ್ನು ಒಬ್ಬ ಮಾನವನನ್ನಾಗಿ ನೋಡುತ್ತೇನೆ.”

ಒಲ್ಗಾ ಮತ್ತು ಆಕೆಯ ಮಿಷನೆರಿ ಸಂಗಾತಿಯನ್ನು ದ್ವೇಷತುಂಬಿದ ವಿರೋಧಿಗಳು ಹಿಂಸಿಸಿದಾಗ ಅವರು ಹೆದರಿಕೆಯಿಂದ ಮುದುರಿಹೋಗಲಿಲ್ಲ. ತಾವು ಹೇಳುತ್ತಿದ್ದ ಬೈಬಲ್‌ ಸಂದೇಶವನ್ನು ಕೆಲವರಾದರೂ ಕೇಳಬಹುದೆಂಬ ಭರವಸೆಯಿಂದ ಸ್ಥಿರಚಿತ್ತರಾಗಿದ್ದರು. ಅಂತೆಯೇ ಅನೇಕರು ಬೈಬಲ್‌ ಸಂದೇಶವನ್ನು ಕೇಳಿದರು. ಒಲ್ಗಾ ಹೇಳುವುದು: “ಸುಮಾರು ಐವತ್ತು ವರ್ಷಗಳ ನಂತರ ಒಬ್ಬ ವ್ಯಕ್ತಿ ನನ್ನನ್ನು ಭೇಟಿಯಾಗಿ ಅಂದವಾದ ಪುಟ್ಟ ಚೀಲವನ್ನು ನನ್ನ ಕೈಗಿತ್ತನು. ಅದರೊಳಗೆ ಸಣ್ಣ ಸಣ್ಣ ಕಲ್ಲುಗಳಿದ್ದವು. ಅವುಗಳ ಮೇಲೆ ಕ್ರೈಸ್ತ ಗುಣಗಳಾದ ಒಳ್ಳೇತನ, ದಯೆ, ಪ್ರೀತಿ, ಶಾಂತಿ ಎಂಬ ಪದಗಳನ್ನು ಕೆತ್ತಲಾಗಿತ್ತು. ಹಿಂದೆ ನನಗೆ ಕಲ್ಲೆಸೆದಿದ್ದ ಆ ಹುಡುಗರ ಗುಂಪಿನಲ್ಲಿ ತಾನು ಇದ್ದೆನೆಂದೂ ಈಗ ನನ್ನ ಕ್ರೈಸ್ತ ಸಹೋದರನೆಂದೂ ಅವನು ನನಗೆ ಹೇಳಿದನು. ಕಲ್ಲುಗಳಿದ್ದ ಆ ಚೀಲದ ಜೊತೆಗೆ ಎರಡು ಡಜನ್‌ ಬಿಳಿ ಗುಲಾಬಿಗಳನ್ನು ಅವನು ಮತ್ತು ಅವನ ಪತ್ನಿ ನನಗೆ ಕೊಟ್ಟರು.”

ಪೂರ್ವಗ್ರಹ ಮತ್ತು ಪಕ್ಷಪಾತವಿಲ್ಲದ ಲೋಕ!

ಸದ್ಯದಲ್ಲೇ ಪೂರ್ವಗ್ರಹ ಮತ್ತು ತಾರತಮ್ಯಕ್ಕೆ ಪೂರ್ಣ ವಿರಾಮ ಬೀಳಲಿದೆ. ಅದು ಹೇಗೆ? ಮೊದಲನೆಯದಾಗಿ, “ಕಣ್ಣಿಗೆ ಕಂಡಂತೆ ತೀರ್ಪುಮಾಡುವದಿಲ್ಲ” ಎಂದು ಈಗಾಗಲೇ ತೋರಿಸಿಕೊಟ್ಟಿರುವಾತನು ಇಡೀ ಜಗತ್ತನ್ನು ಆಳಲಿದ್ದಾನೆ. ಆತನು ಮತ್ತಾರೂ ಅಲ್ಲ, ಯೇಸು ಕ್ರಿಸ್ತನೇ. (ಯೆಶಾಯ 11:1-5) ಅಷ್ಟೇ ಅಲ್ಲ, ಅವನ ಭೂಪ್ರಜೆಗಳು ಅವನ ಮನೋಭಾವವನ್ನೇ ಪರಿಪೂರ್ಣವಾಗಿ ಪ್ರತಿಫಲಿಸುವರು. ಏಕೆಂದರೆ ಅವರು ಅವನಿಂದಲೂ ಅವನ ತಂದೆಯಾದ ಯೆಹೋವ ದೇವರಿಂದಲೂ ಶಿಕ್ಷಣ ಪಡೆದಿರುವರು.—ಯೆಶಾಯ 11:9.

ಈ ಆಧ್ಯಾತ್ಮಿಕ ಶಿಕ್ಷಣ ಈಗಾಗಲೇ ನಡೆಯುತ್ತಿದೆ. ಇದು, ಹೊಚ್ಚ ಹೊಸದಾಗಲಿರುವ ಇದೇ ಲೋಕದಲ್ಲಿನ ಜೀವನಕ್ಕಾಗಿ ದೇವಜನರನ್ನು ತಯಾರಿಸುತ್ತಿದೆ. ನಿಮ್ಮೊಂದಿಗೆ ಯಾರಾದರೂ ಬೈಬಲ್‌ ಅಧ್ಯಯನ ಮಾಡುವಂತೆ ಕೇಳಿಕೊಳ್ಳುವ ಮೂಲಕ ಆ ಉಚಿತ ಶೈಕ್ಷಣಿಕ ಕಾರ್ಯದಿಂದ ನೀವೂ ಪ್ರಯೋಜನ ಪಡೆಯಬಾರದೇಕೆ? * ದೇವರು ನಿಷ್ಪಕ್ಷಪಾತಿ ಎಂಬುದರಲ್ಲಿ ಸಂಶಯವಿಲ್ಲ. “ಎಲ್ಲ ರೀತಿಯ ಜನರು ರಕ್ಷಣೆಯನ್ನು ಹೊಂದಬೇಕು ಮತ್ತು ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಬೇಕು ಎಂಬುದು ಆತನ ಚಿತ್ತವಾಗಿದೆ.”—1 ತಿಮೊಥೆಯ 2:3, 4. (g09-E 08)

[ಪಾದಟಿಪ್ಪಣಿ]

^ ನಿಮಗೆ ಅನುಕೂಲವಾದ ಸಮಯ ಮತ್ತು ಸ್ಥಳದಲ್ಲಿ ಯೆಹೋವನ ಸಾಕ್ಷಿಗಳಲ್ಲಿ ಒಬ್ಬರು ನಿಮ್ಮೊಂದಿಗೆ ಬೈಬಲನ್ನು ಉಚಿತವಾಗಿ ಅಧ್ಯಯನ ಮಾಡಲು ನೀವು ಇಚ್ಛಿಸುವಲ್ಲಿ ಪುಟ 5ರಲ್ಲಿರುವ ಅವರ ಬ್ರಾಂಚ್‌ ಆಫೀಸಿನ ವಿಳಾಸವೊಂದಕ್ಕೆ ಬರೆಯಿರಿ. ಇಲ್ಲವೆ www.watchtower.orgನಲ್ಲಿ ಯೆಹೋವನ ಸಾಕ್ಷಿಗಳ ವೆಬ್‌ಸೈಟ್‌ ಅನ್ನು ಸಂಪರ್ಕಿಸಿ.

[ಪುಟ 8ರಲ್ಲಿರುವ ಸಂಕ್ಷಿಪ್ತ ವಿವರಣೆ]

ಮಾನವಕುಲವನ್ನು ಕಾಡುತ್ತಿರುವ ಪೂರ್ವಗ್ರಹ, ಪಕ್ಷಪಾತವೆಂಬ ಪೀಡೆ ಶೀಘ್ರದಲ್ಲೇ ತೊಲಗಲಿದೆ

[ಪುಟ 8, 9ರಲ್ಲಿರುವ ಚೌಕ/ಚಿತ್ರ]

ದೇವರು ಕೊಟ್ಟ ಜೀವನ ಸೂತ್ರಗಳು

‘ಯಾರಿಗೂ ಕೆಟ್ಟದ್ದಕ್ಕೆ ಪ್ರತಿಯಾಗಿ ಕೆಟ್ಟದ್ದನ್ನು ಮಾಡಬೇಡಿ. ಒಳ್ಳೇದರಿಂದ ಕೆಟ್ಟದ್ದನ್ನು ಜಯಿಸುತ್ತಾ ಇರಿ.’ (ರೋಮನ್ನರಿಗೆ 12:17-21) ಏನಿದರ ಅರ್ಥ? ಇತರರು ನಿಮ್ಮೊಂದಿಗೆ ಕೆಟ್ಟದಾಗಿ ವರ್ತಿಸುವಾಗಲೂ ಒಳ್ಳೇ ರೀತಿಯಲ್ಲಿ ಪ್ರತಿಕ್ರಿಯಿಸಲು ಕಲಿಯಿರಿ. “ಯಾವುದೇ ಕಾರಣವಿಲ್ಲದೆ ಅವರು ನನ್ನನ್ನು ದ್ವೇಷಿಸಿದರು” ಎಂದನು ಯೇಸು ಕ್ರಿಸ್ತ. ಹಾಗಿದ್ದರೂ ಅವನು ಅವರನ್ನು ದ್ವೇಷಿಸಲಿಲ್ಲ.—ಯೋಹಾನ 15:25.

“ಅಹಂಕಾರಿಗಳೂ . . . ಅಸೂಯೆಪಡುವವರೂ ಆಗದೆ ಇರೋಣ.” (ಗಲಾತ್ಯ 5:26) ಅಸೂಯೆ ಮತ್ತು ಒಣ ಹೆಮ್ಮೆ ಆಧ್ಯಾತ್ಮಿಕವಾಗಿ ಹಾನಿಕರ. ಮನಸ್ಸಿನಲ್ಲಿ ದ್ವೇಷ, ಪೂರ್ವಗ್ರಹಗಳನ್ನು ಹುಟ್ಟಿಸುತ್ತವೆ.—ಮಾರ್ಕ 7:20-23.

“ಜನರು ನಿಮಗೆ ಏನು ಮಾಡಬೇಕೆಂದು ನೀವು ಬಯಸುತ್ತೀರೋ ಅವುಗಳೆಲ್ಲವನ್ನು ನೀವು ಸಹ ಅವರಿಗೆ ಮಾಡಬೇಕು.” (ಮತ್ತಾಯ 7:12) ನಿಮ್ಮನ್ನು ಹೀಗೆ ಕೇಳಿಕೊಳ್ಳಿ: ‘ಬೇರೆಯವರು ನನ್ನೊಟ್ಟಿಗೆ ಹೇಗೆ ನಡೆದುಕೊಳ್ಳಬೇಕೆಂದು ಬಯಸುತ್ತೇನೆ?’ ಅದೇ ರೀತಿಯಲ್ಲಿ ಇತರರೊಂದಿಗೆ ನಡೆದುಕೊಳ್ಳಿ. ಅವರ ವಯಸ್ಸು, ವರ್ಣ, ಭಾಷೆ, ಸಂಸ್ಕೃತಿ ಯಾವುದೂ ಅಡ್ಡಬಾರದಿರಲಿ.

“ಕ್ರಿಸ್ತನು ನಮ್ಮನ್ನು ಸೇರಿಸಿಕೊಂಡಂತೆ ನೀವು ಸಹ ಒಬ್ಬರನ್ನೊಬ್ಬರು ಸೇರಿಸಿಕೊಳ್ಳಿರಿ.” (ರೋಮನ್ನರಿಗೆ 15:7) ಇದಕ್ಕಾಗಿ ಬೇರೆ ಬೇರೆ ಹಿನ್ನೆಲೆ ಮತ್ತು ಸಂಸ್ಕೃತಿಯ ಜನರ, ಅದರಲ್ಲೂ ಜೊತೆ ಆರಾಧಕರ ಪರಿಚಯಮಾಡಿಕೊಳ್ಳಲು ಪ್ರಯತ್ನಿಸುತ್ತೀರಾ?—2 ಕೊರಿಂಥ 6:11.

“ತಂದೆತಾಯಿಗಳು ನನ್ನನ್ನು ತೊರೆದುಬಿಟ್ಟರೇನು; ಯೆಹೋವನು ನನ್ನನ್ನು ಸೇರಿಸಿಕೊಳ್ಳುವನು.” (ಕೀರ್ತನೆ 27:10) ಇತರರು ನಿಮ್ಮೊಟ್ಟಿಗೆ ಹೇಗೇ ನಡೆದುಕೊಳ್ಳಲಿ ನೀವು ದೇವರಿಗೆ ನಿಷ್ಠಾವಂತರಾಗಿ ಉಳಿಯುವಲ್ಲಿ ಆತನು ಎಂದೂ ನಿಮ್ಮ ಕೈಬಿಡನು.

[ಪುಟ 7ರಲ್ಲಿರುವ ಚಿತ್ರ]

ಕಳ್ಳರು ಲೂಟಿಮಾಡಿ ಥಳಿಸಿದ್ದ ಯೆಹೂದ್ಯನ ಸಹಾಯಕ್ಕೆ ಬಂದವನು ಒಬ್ಬ ಸಮಾರ್ಯದವ