ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಮತೆಯ ಮಹತ್ವ

ಮಮತೆಯ ಮಹತ್ವ

ಮಮತೆಯ ಮಹತ್ವ

“ಕಂದಮ್ಮಗಳನ್ನು ಎದೆಗಪ್ಪಿಕೊಳ್ಳುತ್ತಾ ಇರು!” ಇದು, ಮಕ್ಕಳ ಮನೋವಿಜ್ಞಾನದ ಪ್ರೊಫೆಸರರೊಬ್ಬರು ಅವಳಿ ಮಕ್ಕಳ ತಾಯಿಗೆ ನೀಡಿದ ಸಲಹೆಯಾಗಿತ್ತು. ಆಕೆಗೆ ಇದು ಮೊದಲ ಹೆರಿಗೆಯಾಗಿದ್ದು, ಮಕ್ಕಳನ್ನು ಒಳ್ಳೆಯ ರೀತಿಯಲ್ಲಿ ಬೆಳೆಸಲು ಆಕೆ ಅವರ ಬಳಿ ಸಲಹೆ ಕೇಳಿದ್ದಳು. ಪ್ರೊಫೆಸರ್‌ ಇನ್ನೂ ಹೇಳಿದ್ದು: “ಅಪ್ಪಿಕೊಳ್ಳುವುದು, ಮುದ್ದಿಡುವುದು, ಸೌಹಾರ್ದತೆ, ಸಹಾನುಭೂತಿ, ಸಂತಸ, ಉದಾರತೆ ಮತ್ತು ಕ್ಷಮಾಭಾವವನ್ನು ವ್ಯಕ್ತಪಡಿಸುವುದು, ಅಗತ್ಯವಿದ್ದಾಗ ಶಿಸ್ತು ಕೊಡುವುದು, ಹೀಗೆ ಮಕ್ಕಳ ಕಡೆಗೆ ಬೇರೆ ಬೇರೆ ರೀತಿಯಲ್ಲಿ ಪ್ರೀತಿಮಮತೆ ವ್ಯಕ್ತಪಡಿಸಬೇಕು. ಮಕ್ಕಳ ಮೇಲೆ ನಮಗಿರುವ ಪ್ರೀತಿಯನ್ನು ಅವರು ತನ್ನಿಂದತಾನೇ ಅರಿತುಕೊಳ್ಳುತ್ತಾರೆ ಎಂದು ನಾವೆಂದಿಗೂ ಭಾವಿಸಬಾರದು.”

ಅಮೆರಿಕಾದ ಫ್ಲೋರಿಡಾದಲ್ಲಿರುವ ಮಿಯಾಮಿ ವಿಶ್ವವಿದ್ಯಾಲಯದ ‘ಟಚ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌’ನ ನಿರ್ದೇಶಕಿಯಾಗಿರುವ ಟಿಫಾನಿ ಫೀಲ್ಡ್‌ ಎಂಬವರು ಸಹ ಮೇಲಿನ ಸಲಹೆಯನ್ನು ಒಪ್ಪಿಕೊಳ್ಳುತ್ತಿರುವಂತೆ ಕಾಣುತ್ತದೆ. “ಒಂದು ಮಗುವಿನ ಬೆಳವಣಿಗೆ ಹಾಗೂ ಹಿತಕ್ಷೇಮಕ್ಕೆ ಆಹಾರ, ವ್ಯಾಯಾಮ ಎಷ್ಟು ಆವಶ್ಯಕವೋ, ಸ್ಪರ್ಶವೂ ಅಷ್ಟೇ ಆವಶ್ಯಕ” ಎಂದು ಅವರು ಹೇಳುತ್ತಾರೆ.

ವಯಸ್ಕರಿಗೂ ಪ್ರೀತಿಮಮತೆಯನ್ನು ಸ್ಪರ್ಶದ ಮೂಲಕ ವ್ಯಕ್ತಪಡಿಸಬೇಕೋ? ಖಂಡಿತ. ನಾವು ಯಾವುದೇ ವಯೋಮಾನದವರಾಗಿರಲಿ, ಬಾಯಿಮಾತುಗಳಲ್ಲೂ ಸ್ಪರ್ಶದ ಮೂಲಕವೂ ಸಿಗುವ ಉತ್ತೇಜನ ನಮ್ಮ ಭಾವನಾತ್ಮಕ ಹಿತಕ್ಷೇಮಕ್ಕೆ ಅಗತ್ಯವೆಂದು ಮನಶ್ಶಾಸ್ತ್ರಜ್ಞರಾದ ಕ್ಲೋಡ್‌ ಸ್ಟೈನರ್‌ ತಮ್ಮ ಸಂಶೋಧನೆಯಿಂದ ಕಂಡುಕೊಂಡಿದ್ದಾರೆ. ಅನೇಕ ವೃದ್ಧರನ್ನು ನೋಡಿಕೊಳ್ಳುತ್ತಿರುವ ಲೋರ ಎಂಬ ದಾದಿಯು ಹೇಳುವುದು: “ವಯಸ್ಸಾದವರಿಗೆ ಮಮತೆ ತೋರಿಸುವಾಗ ಅದು ಅವರಲ್ಲಿ ಭಾರೀ ಸಂಚಲನ ಮೂಡಿಸಿದ್ದನ್ನು ನಾನು ನೋಡಿದ್ದೇನೆ. ಅವರನ್ನು ಮುಟ್ಟಿ ಪ್ರೀತಿ ತೋರಿಸುವಾಗ ನೀವು ಅವರ ಮನಗೆಲ್ಲುತ್ತೀರಿ. ನಿಮ್ಮ ಮಾತುಗಳನ್ನು ಅವರು ಹುಮ್ಮಸ್ಸಿನಿಂದ ಪಾಲಿಸುತ್ತಾರೆ. ಅಂಥ ಪ್ರೀತಿಯ ಉಪಚಾರವು ನೀವು ಅವರ ವಯಸ್ಸಿಗೆ ತೋರಿಸುವ ಗೌರವವಾಗಿದೆ.”

ಮಮತೆಯ ಭಾವನೆಗಳನ್ನು ವ್ಯಕ್ತಪಡಿಸುವುದು, ಅವನ್ನು ಸ್ವೀಕರಿಸುವವರಿಗೆ ಮಾತ್ರವಲ್ಲ ವ್ಯಕ್ತಪಡಿಸುವವರಿಗೂ ಪ್ರಯೋಜನಗಳನ್ನು ತರುತ್ತದೆ. “ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ” ಎಂದು ಯೇಸು ಸಹ ಒಮ್ಮೆ ಹೇಳಿದನು. (ಅ. ಕಾರ್ಯಗಳು 20:35) ಚಿಂತೆ, ಖಿನ್ನತೆ, ಅಭದ್ರತೆಯ ಭೀತಿಯಿಂದ ಬಳಲುತ್ತಿರುವ ಜನರೆಡೆಗೆ ಪ್ರೀತಿಮಮತೆ ತೋರಿಸುವಾಗಲಂತೂ ಹೆಚ್ಚಿನ ಪ್ರಯೋಜನಗಳು ಸಿಗಬಲ್ಲವು. ಈ ರೀತಿಯ ನೆರವನ್ನು ಪಡೆದುಕೊಂಡ ಹಲವಾರು ಜನರ ಉದಾಹರಣೆಗಳು ಬೈಬಲಿನಲ್ಲಿವೆ.

‘ಕುಷ್ಠರೋಗದಿಂದ ತುಂಬಿದ್ದು’ ಸಮಾಜದಿಂದ ಬಹಿಷ್ಕೃತನಾಗಿದ್ದ ಒಬ್ಬ ಮನುಷ್ಯನನ್ನು ಸ್ವತಃ ಯೇಸು ಕ್ರಿಸ್ತನೇ ಅನುಕಂಪದಿಂದ ಮುಟ್ಟಿದನು. ಆಗ ಆ ಮನುಷ್ಯನಿಗೆಷ್ಟು ನೆಮ್ಮದಿಯಾಗಿರಬೇಕು!—ಲೂಕ 5:12, 13; ಮತ್ತಾಯ 8:1-3.

ಅದೇ ರೀತಿ ಪ್ರವಾದಿಯಾಗಿದ್ದ ವೃದ್ಧ ದಾನಿಯೇಲನನ್ನು ಒಬ್ಬ ದೇವದೂತನು ಮೂರು ಬಾರಿ ಮುಟ್ಟಿ ಸಾಂತ್ವನದ ನುಡಿಗಳನ್ನಾಡಿ ಬಲಪಡಿಸಿದನು. ದಾನಿಯೇಲನಿಗೆಷ್ಟು ಸುಭದ್ರ ಅನಿಸಿಕೆಯಾಗಿರಬೇಕು? ದೈಹಿಕವಾಗಿಯೂ ಮಾನಸಿಕವಾಗಿಯೂ ಬತ್ತಿ ಹೋದಂತ್ತಿದ್ದ ದಾನಿಯೇಲನಿಗೆ ಚೇತರಿಸಿಕೊಳ್ಳಲು ಆ ಪ್ರೀತಿಯ ಸ್ಪರ್ಶ ಹಾಗೂ ಧೈರ್ಯದ ಮಾತುಗಳು ಸಾಕಾಗಿದ್ದವು.—ದಾನಿಯೇಲ 10:9-11, 15, 16, 18, 19.

ಒಂದು ಸಂದರ್ಭದಲ್ಲಿ ಅಪೊಸ್ತಲ ಪೌಲನ ಆತ್ಮೀಯ ಗೆಳೆಯರು ಅವನನ್ನು ನೋಡಲಿಕ್ಕಾಗಿ ಎಫೆಸ ಪಟ್ಟಣದಿಂದ ಸುಮಾರು 50 ಕಿ.ಮೀ. ದೂರದಲ್ಲಿರುವ ಮಿಲೇತಕ್ಕೆ ಪ್ರಯಾಣಿಸಿದರು. ಬಹುಶಃ ಇನ್ನೊಮ್ಮೆ ತನ್ನನ್ನು ಕಾಣಸಾಧ್ಯವಿಲ್ಲ ಎಂಬಂತೆ ಪೌಲನು ಅವರೊಂದಿಗೆ ಮಾತಾಡಿದನು. ಆ ಸಂದರ್ಭದಲ್ಲಿ, ಆ ನಿಷ್ಠಾವಂತ ಮಿತ್ರರು “ಪೌಲನ ಕೊರಳನ್ನು ಅಪ್ಪಿಕೊಂಡು ಅವನಿಗೆ ಕೋಮಲವಾಗಿ ಮುದ್ದಿಟ್ಟರು.” ಅದು ಅವನಲ್ಲೆಷ್ಟು ಧೈರ್ಯತುಂಬಿಸಿರಬೇಕು!—ಅ. ಕಾರ್ಯಗಳು 20:36, 37.

ಹೀಗೆ, ನಾವು ಪರಸ್ಪರ ಮಮತೆ ತೋರಿಸುವಂತೆ ಬೈಬಲ್‌ ಹಾಗೂ ಆಧುನಿಕ ಸಂಶೋಧನೆ ಇವೆರಡೂ ಉತ್ತೇಜಿಸುತ್ತವೆ. ಹಾಗೆ ಮಾಡುವುದು ದೈಹಿಕವಾಗಿಯೂ ಭಾವನಾತ್ಮಕವಾಗಿಯೂ ಲಾಭಕರ. ನಿಜಕ್ಕೂ, ಪ್ರಾಮಾಣಿಕ ಹಾಗೂ ಯೋಗ್ಯರೀತಿಯ ಮಮತೆ ಕೇವಲ ಮಕ್ಕಳಿಗೆ ಸೀಮಿತವಲ್ಲ. (g09-E 12)