ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹೆತ್ತವರೇ, ನಿಮ್ಮ ಮಕ್ಕಳನ್ನು ಮಾರ್ಗದರ್ಶಿಸಿ

ಹೆತ್ತವರೇ, ನಿಮ್ಮ ಮಕ್ಕಳನ್ನು ಮಾರ್ಗದರ್ಶಿಸಿ

ಹೆತ್ತವರೇ, ನಿಮ್ಮ ಮಕ್ಕಳನ್ನು ಮಾರ್ಗದರ್ಶಿಸಿ

“ಹಿಂದೆಲ್ಲಾ ಮಕ್ಕಳನ್ನು ಜಾಸ್ತಿ ಟಿವಿ ನೋಡಲು ಬಿಡಬಾರದೆಂಬ ಒಂದೇ ಚಿಂತೆಯಿತ್ತು. ಆದರೆ ಈಗ ವಿಡಿಯೋ ಗೇಮ್ಸ್‌, ಕಂಪ್ಯೂಟರ್‌, ಸೆಲ್‌ಫೋನ್‌ಗಳೆಲ್ಲ ಬಂದಿವೆ. ಇವು ಎಳೆಯ ಮಕ್ಕಳನ್ನು ಅತಿಯಾಗಿ ಬಾಧಿಸುತ್ತಿವೆ. ಅವುಗಳಿಗೆ ವ್ಯಸನಿಗಳಾಗಿರುವ ಲಕ್ಷಣಗಳು ಮಕ್ಕಳಲ್ಲಿ ತೋರಿಬರುತ್ತಿವೆ. . . . ಯಾವಾಗಲೂ ಏನಾದರೂ ನೋಡುತ್ತಾ, ಕೇಳುತ್ತಾ ಇರುವುದಕ್ಕೆ ಅವರ ಮಿದುಳು ಒಗ್ಗಿಹೋಗುತ್ತಿದೆ. ಇದ್ಯಾವುದೂ ಇಲ್ಲದಿದ್ದರೆ ಏನು ಮಾಡಬೇಕೆಂದು ತೋಚದೆ ಬೆಪ್ಪಾಗುತ್ತಾರೆ.”—ಮಾಲೀ ಮನ್‌, ಎಮ್‌.ಡಿ.

ಸಂಪರ್ಕ ತಂತ್ರಜ್ಞಾನ ಮತ್ತು ಇಂಟರ್‌ನೆಟ್‌ ದಾಪುಗಾಲಿಡುತ್ತಿರುವ ಜಗತ್ತಿನಲ್ಲಿ ನಾವಿಂದು ಜೀವಿಸುತ್ತಿದ್ದೇವೆ. ಅನೇಕ ಯುವ ಜನರು ಸೆಲ್‌ಫೋನ್‌ ಅಥವಾ ಪೋರ್ಟಬಲ್‌ ಮೀಡಿಯಾ ಪ್ಲೇಯರ್‌ ಇಲ್ಲದೆ ಮನೆಯಿಂದ ಹೊರಗೆ ಕಾಲಿಡುವುದಿಲ್ಲ. ಇಂಥ ಸಾಧನಗಳು ಹೆಚ್ಚೆಚ್ಚು ಶಕ್ತಿಯುತವೂ ಬಹುಪಯೋಗಿಯೂ ಅಗ್ಗವೂ ಆದಂತೆ ತಂತ್ರಜ್ಞಾನದ ಮಹಾಪೂರ ಇನ್ನಷ್ಟೂ ರಭಸವಾಗಿ ಹರಿಯುವುದೇ ಹೊರತು ನಿಂತುಹೋಗದು. ಇದು ಹೆತ್ತವರಿಗೆ ಮಕ್ಕಳ ಮೇಲೆ ನಿಗಾಯಿಡುವ, ತರಬೇತಿ ಮತ್ತು ಶಿಸ್ತು ನೀಡುವ ವಿಷಯದಲ್ಲಿ ಇನ್ನಷ್ಟೂ ಸವಾಲುಗಳನ್ನು ಹುಟ್ಟುಹಾಕುವುದು.

ಆ ಸವಾಲುಗಳನ್ನು ಹೆತ್ತವರು ಹೇಗೆ ನಿಭಾಯಿಸಸಾಧ್ಯ? ಮುಖ್ಯವಾಗಿ ಎರಡು ವಿಷಯಗಳನ್ನು ಮಾಡುವ ಮೂಲಕ. ಒಂದು, “ಮಕ್ಕಳು ಮೂಢಕಾರ್ಯಗಳನ್ನು ಮಾಡುವರು. ನೀವು ಅವರನ್ನು ಶಿಕ್ಷಿಸಿದರೆ, ಅವುಗಳನ್ನು ಮಾಡಬಾರದೆಂದು ಅವರಿಗೆ ಗೊತ್ತಾಗುವುದು” ಎಂಬ ಜ್ಞಾನೋಕ್ತಿ 22:15ರಲ್ಲಿರುವ (ಪರಿಶುದ್ಧ ಬೈಬಲ್‌ *) ಸತ್ಯಾಂಶವನ್ನು ಒಪ್ಪಿಕೊಳ್ಳಿ. ಎರಡು, ತಂತ್ರಜ್ಞಾನದಿಂದ ಮಕ್ಕಳಿಗೆ ಒಳಿತೂ ಆಗಬಹುದು ಅಥವಾ ಕೆಡುಕೂ ಆಗಬಹುದು ಎಂಬುದನ್ನು ಅರ್ಥಮಾಡಿಕೊಂಡು, ಅದರಿಂದ ಅವರಿಗೆ ಒಳಿತೇ ಆಗುವಂತೆ ಶ್ರಮಿಸಿ.

ಶೈಶವದಲ್ಲೇ ಶುರುಮಾಡಿ!

ಹೆಚ್ಚಿನ ಮನೆಗಳಲ್ಲಿ ಮಕ್ಕಳಿಗೆ ಪರಿಚಯವಾಗುವ ಪ್ರಪ್ರಥಮ ತಂತ್ರಜ್ಞಾನ ಸಾಧನ ಟಿವಿ. ಬ್ಯುಸಿಯಾಗಿರುವ ಹೆತ್ತವರು ಪುಟ್ಟ ಮಕ್ಕಳನ್ನು ತೆಪ್ಪಗಿರಿಸಲು ಹೆಚ್ಚಾಗಿ ಟಿವಿ ಮುಂದೆ ಕೂರಿಸಿಬಿಡುತ್ತಾರೆ. ಆದರೆ ಎಳೆಯ ವಯಸ್ಸಿನಲ್ಲಿ ಟಿವಿಯನ್ನು ವಿಪರೀತ ನೋಡುವುದರಿಂದ ಮಕ್ಕಳಿಗೆ ದೈಹಿಕ ಚಟುವಟಿಕೆಯಲ್ಲಿ ನಿರಾಸಕ್ತಿ, ವಾಸ್ತವ ಮತ್ತು ಕಾಲ್ಪನಿಕ ಲೋಕಕ್ಕಿರುವ ವ್ಯತ್ಯಾಸದ ಬಗ್ಗೆ ಗೊಂದಲ, ಭಾವನಾತ್ಮಕ ತೊಂದರೆಗಳು ಅಷ್ಟೇ ಅಲ್ಲ ಶಾಲೆಗೆ ಹೋಗಲಾರಂಭಿಸುವಾಗ ಏಕಾಗ್ರತೆ ನಷ್ಟ ಇತ್ಯಾದಿ ಸಮಸ್ಯೆಗಳು ಉಂಟಾಗುತ್ತವೆ ಎಂದು ಕೆಲವು ಮಾನಸಿಕ-ಆರೋಗ್ಯ ತಜ್ಞರು ತಿಳಿಸುತ್ತಾರೆ. ಕೆಲವೊಮ್ಮೆ, ಅಂಥ ಮಕ್ಕಳಿಗೆ “ಏಕಾಗ್ರತೆ ಕೊರತೆ ಕಾಯಿಲೆ [ADD], ಗಮನರಹಿತ ಅತಿಚೇಷ್ಟೆ ದೋಷ [ADHD] ಇದೆಯೆಂದು ವೈದ್ಯರು ತಪ್ಪಾಗಿ ನಿರ್ಣಯಿಸುತ್ತಾರೆ. ಕೆಲವರಿಗಂತೂ ಬೈಪೋಲರ್‌ ಡಿಸ್‌ಆರ್ಡರ್‌ ಮನೋರೋಗವಿದೆಯೆಂಬ ಹಣೆಪಟ್ಟಿಯನ್ನೂ ಹಚ್ಚಲಾಗುತ್ತದೆ” ಎನ್ನುತ್ತಾರೆ ಡಾಕ್ಟರ್‌ ಮಾಲೀ ಮನ್‌. ಆದುದರಿಂದ ಎರಡು ವರ್ಷದೊಳಗಿನ ಮಕ್ಕಳಿಗೆ ಟಿವಿ ನೋಡಲು ಬಿಡಬಾರದೆಂದು ಕೆಲವು ತಜ್ಞರು ಶಿಫಾರಸು ಮಾಡುತ್ತಾರೆ.

“ಮಗುವಿನ ಜೀವನದ ಆರಂಭದ ಒಂದೆರಡು ವರ್ಷಗಳಲ್ಲಿ ಆಗುವ ಅತಿ ಪ್ರಾಮುಖ್ಯ ವಿಷಯವು, ಮಗು ಮತ್ತು ಹೆತ್ತವರ ಮಧ್ಯೆ ರೂಪುಗೊಳ್ಳುವ ಬಲವಾದ ಸಂಬಂಧವೇ” ಎನ್ನುತ್ತಾರೆ ಅಮೆರಿಕದ ಶಿಶು ಅಧ್ಯಯನ ಪರಿಷತ್‌ನ ವಕ್ತಾರರಾದ ಡಾಕ್ಟರ್‌ ಕೆನೆತ್‌ ಗಿನ್ಸ್‌ಬರ್ಗ್‌. ಅಂಥ ಸಂಬಂಧವು ಹೆತ್ತವರು ತಮ್ಮ ಪುಟಾಣಿಗಳೊಂದಿಗೆ ಮಾತಾಡುವಾಗ, ಆಟವಾಡುವಾಗ, ಓದಿಹೇಳುವಾಗ ಬೆಸೆಯುತ್ತದೆ. ಹೆಚ್ಚಿನ ಹೆತ್ತವರಿಗೆ ತಿಳಿದಿರುವಂತೆ ಮಕ್ಕಳಿಗೆ ಕ್ರಮವಾಗಿ ಓದಿಹೇಳುವಲ್ಲಿ ಅವರು ಮುಂದೆ ವಾಚನಪ್ರಿಯರಾಗುವರು. ಹೀಗೆ ವಾಚನಕ್ಕಾಗಿ ಪ್ರೀತಿ ಬೆಳೆಸುವುದು ಕೂಡ ಹೆತ್ತವರು ಅವರಿಗೆ ಕೊಡಬಹುದಾದ ಒಂದು ಅಮೂಲ್ಯ ಆಸ್ತಿ.

ಕಂಪ್ಯೂಟರ್‌ ಮತ್ತು ಅದಕ್ಕೆ ಸಂಬಂಧಿಸಿದ ತಂತ್ರಜ್ಞಾನದ ತಿಳಿವಳಿಕೆ ಲಕ್ಷಾಂತರ ಮಕ್ಕಳಿಗೆ ಪ್ರಾಮುಖ್ಯ, ಅತ್ಯವಶ್ಯವೂ ಆಗಿರಬಹುದು ನಿಜ. ಆದರೆ ನಿಮ್ಮ ಮಕ್ಕಳು ಕಂಪ್ಯೂಟರ್‌, ಕಂಪ್ಯೂಟರ್‌ ಗೇಮ್ಸ್‌, ಇಂಟರ್‌ನೆಟ್‌ ಇತ್ಯಾದಿಗಳಲ್ಲಿ ಅತಿರೇಕವಾಗಿ ಮುಳುಗಿದ್ದಾರೆಂದು ನಿಮಗೆ ತಿಳಿದೊಡನೆ ನೀವು ಹೊಸ ಹೊಸ ವಿಷಯಗಳಲ್ಲಿ ಅವರ ಆಸಕ್ತಿಯನ್ನು ಹುಟ್ಟಿಸುವುದು ವಿವೇಕಯುತ. ಅದನ್ನು ಮಾಡುವುದು ಹೇಗೆ? ಭಿನ್ನವಾದ, ಗಮನಹಿಡಿದಿಡುವ, ಚುರುಕುಗೊಳಿಸುವ ಯಾವುದೇ ಹಿತಕರ ಚಟುವಟಿಕೆಗಳನ್ನು ಮಕ್ಕಳಿಗೆ ಪರಿಚಯಿಸಿ. ಉದಾಹರಣೆಗೆ, ಯಾವುದಾದರೂ ಸ್ವಾರಸ್ಯಕರ ಕಲೆಯಲ್ಲೊ ಸಂಗೀತ ವಾದ್ಯ ನುಡಿಸುವುದರಲ್ಲೊ ಆಸಕ್ತಿ ಹುಟ್ಟಿಸಬಹುದು.

ಚೆನ್ನಾಗಿ ಯೋಚಿಸಿ ಆಯ್ಕೆಮಾಡುವ ಚಟುವಟಿಕೆಯೊಂದು ಮಕ್ಕಳಿಗೆ ಚೈತನ್ಯಕರ ಮಾತ್ರವಲ್ಲ ಒಳ್ಳೇದು ಕೂಡ. ನಿಮ್ಮ ಮಕ್ಕಳು ತಾಳ್ಮೆ, ಛಲ, ಸ್ವನಿಯಂತ್ರಣ, ಸೃಜನಶೀಲತೆ ಎಂಬ ಗುಣಗಳನ್ನು ಬೆಳೆಸಿಕೊಳ್ಳಲು ಸಹಾಯಮಾಡೀತು. ಈ ಗುಣಗಳು ಬಾಳಿನ ಯಶಸ್ಸಿಗೆ ಅತ್ಯಗತ್ಯ. ಏಕೆಂದರೆ ನಿಜಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ಯಾವಾಗಲೂ ಪರಿಹಾರ ಕಂಡುಕೊಳ್ಳುವುದು ಕಂಪ್ಯೂಟರ್‌ ಮೌಸ್‌ ಅನ್ನು ಕ್ಲಿಕ್ಕಿಸಿದಷ್ಟು ಸುಲಭವಲ್ಲ.

ಮಕ್ಕಳಿಗೆ ಅಗತ್ಯ ‘ಸುಜ್ಞಾನ, ಬುದ್ಧಿ’

ಹಿರಿಕಿರಿಯರೆಲ್ಲರೂ “ವಿವೇಚನಾಶಕ್ತಿ” ಅಂದರೆ ಯೋಚನಾ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವಂತೆ ಬೈಬಲ್‌ ಉತ್ತೇಜಿಸುತ್ತದೆ. (ರೋಮನ್ನರಿಗೆ 12:1; ಜ್ಞಾನೋಕ್ತಿ 1:8, 9; 3:21) ಆ ಗುಣವಿದ್ದರೆ ಸರಿತಪ್ಪಿನ ಭೇದವನ್ನು ತಿಳುಕೊಳ್ಳುವೆವು ಮಾತ್ರವಲ್ಲ ಯಾವುದು ವಿವೇಕಯುತ ಯಾವುದು ಮೂರ್ಖತನ ಎಂಬುದನ್ನು ಕೂಡ ನಿರ್ಣಯಿಸಶಕ್ತರಾಗುವೆವು. ಉದಾಹರಣೆಗೆ, ಗಂಟೆಗಟ್ಟಲೆ ಕಂಪ್ಯೂಟರ್‌ ಗೇಮ್ಸ್‌ ಆಡುವುದು ಅಥವಾ ಟಿವಿ ನೋಡುವುದು ಕಾನೂನುಬಾಹಿರವಲ್ಲ ನಿಜ, ಆದರೆ ಅದು ವಿವೇಕಯುತವೋ? ನವನವೀನ ಮಾದರಿಯ ಎಲೆಕ್ಟ್ರಾನಿಕ್‌ ಸಾಧನಗಳನ್ನು ಅಥವಾ ಸಾಫ್ಟ್‌ವೇರ್‌ಗಳನ್ನು ಕೊಳ್ಳುವುದು ಕಾನೂನುಬಾಹಿರವಲ್ಲ, ಆದರೆ ಅದೂ ವಿವೇಕಯುತವೋ? ಈ ವಿಷಯಗಳಲ್ಲಿ ವಿವೇಕದ ನಿರ್ಣಯಗಳನ್ನು ಮಾಡುವ ಸಾಮರ್ಥ್ಯವನ್ನು ನಿಮ್ಮ ಮಕ್ಕಳು ಬೆಳೆಸಿಕೊಳ್ಳುವಂತೆ ಹೇಗೆ ನೆರವಾಗುವಿರಿ?

ಅಪಾಯಗಳ ಅರಿವು ಮೂಡಿಸಿ. ಮಕ್ಕಳು ತಂತ್ರಜ್ಞಾನ ಮತ್ತು ಇಂಟರ್‌ನೆಟ್‌ ವಿಷಯಗಳನ್ನು ಕಲಿಯುವುದರಲ್ಲಿ ತುಂಬ ಚುರುಕಾಗಿರಬಹುದು. ಆದರೆ ವಿವೇಚನೆ ಮತ್ತು ಅನುಭವವಿಲ್ಲದ ಕಾರಣ ಅವರು ಮುಗ್ಧರು. ಆದ್ದರಿಂದ ಅಪಾಯಗಳೇನು ಮತ್ತು ಅವುಗಳನ್ನು ಎದುರಿಸುವುದು ಹೇಗೆಂದು ತೋರಿಸಿಕೊಡಿ. ಉದಾಹರಣೆಗೆ, ಆನ್‌ಲೈನ್‌ ಸೋಷಿಯಲ್‌ ನೆಟ್‌ವರ್ಕ್‌ ಅನ್ನು ತಕ್ಕೊಳ್ಳಿ. ಇಂಥ ನೆಟ್‌ವರ್ಕ್‌ಗಳಲ್ಲಿ ಮಕ್ಕಳು ತಮ್ಮ ವೈಯಕ್ತಿಕ ವಿಚಾರಗಳನ್ನು ಹೇಳಲಿಕ್ಕೆ ಮತ್ತು ಬೇರೆ ಬೇರೆ ಯುವ ಜನರ ಪರಿಚಯ ಮಾಡಿಕೊಳ್ಳಲಿಕ್ಕೆ ಆಗುತ್ತದೆ. ಆದರೆ ಈ ವೆಬ್‌ಸೈಟ್‌ಗಳ ಮೂಲಕವೇ ವಿಕೃತಕಾಮಿಗಳು ಮತ್ತು ದುರುದ್ದೇಶವುಳ್ಳ ಜನರು ಸಹ ಮಕ್ಕಳ ಬೇಟೆಗಾಗಿ ಹೊಂಚುಹಾಕುತ್ತಿರುತ್ತಾರೆ. * (1 ಕೊರಿಂಥ 15:33) ಆದ್ದರಿಂದಲೇ ಇಂಟರ್‌ನೆಟ್‌ನಲ್ಲಿ ವೈಯಕ್ತಿಕ ವಿವರಗಳನ್ನು ತಿಳಿಸಬಾರದೆಂದು ಜಾಣ್ಮೆಯ ಹೆತ್ತವರು ಮಕ್ಕಳಿಗೆ ಕಲಿಸುತ್ತಾರೆ. *

ಮಕ್ಕಳ ಪ್ರೌಢತೆಗೆ ತಕ್ಕಂತೆ ಏಕಾಂತವಾಗಿರುವ ಹಕ್ಕು ಅವರಿಗಿದೆ ನಿಜ. ಆದರೆ ನಿಮ್ಮ ಮಕ್ಕಳಿಗೆ ತರಬೇತಿ ನೀಡುವ ಮತ್ತು ಮೇಲ್ವಿಚಾರಣೆ ಮಾಡುವ ದೇವದತ್ತ ಅಧಿಕಾರ ಹಾಗೂ ಹೊಣೆ ಹೆತ್ತವರಾದ ನಿಮಗಿದೆ. (ಜ್ಞಾನೋಕ್ತಿ 22:6; ಎಫೆಸ 6:4) ನೀವೀಗ ಕಳಕಳಿಯನ್ನು ತೋರಿಸುತ್ತಿರುವುದು ಅನಾವಶ್ಯಕವಾಗಿ ‘ಅವರ ವಿಷಯದಲ್ಲಿ ತಲೆಹಾಕಲಿಕ್ಕಲ್ಲ’ ಬದಲಾಗಿ ನಿಸ್ವಾರ್ಥ ಪ್ರೀತಿಯಿಂದಾಗಿಯೇ ಎಂದು ಮಕ್ಕಳು ಒಂದು ದಿನ ಮನಗಾಣಬಹುದು.

“ಆದರೆ ನನ್ನ ಮಕ್ಕಳು ಬಳಸುವ ಎಲೆಕ್ಟ್ರಾನಿಕ್‌ ಸಾಧನಗಳ ಬಗ್ಗೆ ನನಗೆ ತಲೆಬುಡ ತಿಳಿದಿಲ್ಲ. ಹೀಗಿರುವಾಗ ನಾನು ಅವರಿಗೆ ಹೇಗೆ ಸಹಾಯಮಾಡಲಿ?” ಎಂದು ನೀವು ಹೇಳಬಹುದು. ಹಾಗಾದರೆ ಅವುಗಳ ಬಗ್ಗೆ ಕೆಲವು ಸರಳ ವಿಷಯಗಳನ್ನಾದರೂ ನೀವು ಕಲಿಯಬಹುದಲ್ಲ? ಮೆಲ್ಬ ಎಂಬಾಕೆಗೆ 80ರ ಪ್ರಾಯದಲ್ಲೂ ಕಂಪ್ಯೂಟರ್‌ನ ಗಂಧ ಇರಲಿಲ್ಲ. ಈಗ 90 ವರ್ಷ ದಾಟಿರುವ ಆಕೆ ಅನ್ನುವುದು: “ಕಂಪ್ಯೂಟರ್‌ ಬಳಸಲು ಆರಂಭಿಸಿದಾಗ ನನಗೆ ಎಷ್ಟು ತಲೆಚಿಟ್ಟು ಹಿಡಿಯಿತೆಂದರೆ ಅದನ್ನು ಎತ್ತಿ ಹೊರಗೆ ಬಿಸಾಡಿಬಿಡಬೇಕೆಂದು ಅನಿಸಿತು. ಆದರೆ ಕೆಲವು ತಿಂಗಳ ಬಳಿಕ ನನಗೆ ಸ್ವಲ್ಪ ಸ್ವಲ್ಪ ಅರ್ಥವಾಯಿತು. ಈಗ ನಾನು ಇ-ಮೇಲ್‌, ಇನ್ನಿತರ ವಿಷಯಗಳನ್ನು ಸುಲಭವಾಗಿ ನಿರ್ವಹಿಸುತ್ತೇನೆ.”

ತಂತ್ರಜ್ಞಾನ ಬಳಕೆಯ ವಿಷಯದಲ್ಲಿ ಮಕ್ಕಳಿಗೆ ಯೋಗ್ಯ ಮಿತಿಗಳನ್ನಿಡಿ. ನಿಮ್ಮ ಮಕ್ಕಳು ಟಿವಿ ನೋಡುವುದರಲ್ಲಿ, ಇಂಟರ್‌ನೆಟ್‌ ಜಾಲಾಡುವುದರಲ್ಲಿ, ಕಂಪ್ಯೂಟರ್‌ ಗೇಮ್ಸ್‌ ಆಡುವುದರಲ್ಲಿ ಒಬ್ಬೊಬ್ಬರೇ ಗಂಟೆಗಟ್ಟಲೆ ಕಾಲ ಕಳೆಯುತ್ತಿರುವುದಾದರೆ ಅವರು ಮನೆಯಲ್ಲಿ ಯಾವಾಗ ಮತ್ತು ಎಲ್ಲಿ ಎಲೆಕ್ಟ್ರಾನಿಕ್‌ ಸಾಧನಗಳನ್ನು ಬಳಸಬಾರದೆಂಬ ನಿಯಮಗಳನ್ನಿಡಿ. ಹೀಗೆ ಮಾಡುವುದರಿಂದ ನಿಮ್ಮ ಮಗ/ಮಗಳು ಬೈಬಲಿನ ಈ ಮೂಲತತ್ತ್ವವನ್ನು ಪಾಲಿಸುವ ಮೌಲ್ಯವನ್ನು ಕಲಿಯುವರು: “ಒಂದೊಂದು ಕೆಲಸಕ್ಕೂ ತಕ್ಕ ಸಮಯವುಂಟು.” ಅಂದರೆ ಕುಟುಂಬಕ್ಕಾಗಿ ಒಂದು ಸಮಯ, ಸ್ನೇಹಿತರಿಗೆ ಒಂದು ಸಮಯ, ಹೋಮ್‌ವರ್ಕ್‌ ಮಾಡಲು ಒಂದು ಸಮಯ, ತಿನ್ನಲು ಒಂದು ಸಮಯ, ವ್ಯಾಯಾಮಕ್ಕೆ ಒಂದು ಸಮಯ ಹೀಗೆ ಪ್ರತಿಯೊಂದಕ್ಕೂ ಒಂದೊಂದು ಸಮಯ ಇದೆ. (ಪ್ರಸಂಗಿ 3:1) ಹಿತಮಿತವಾದ ನಿಯಮಗಳನ್ನು ದೃಢತೆಯಿಂದ ಜಾರಿಗೆತಂದಲ್ಲಿ ಕುಟುಂಬ ಜೀವನ ಸ್ಥಿರವಾಗಿದ್ದು ಮಕ್ಕಳು ಶಿಷ್ಟಾಚಾರಗಳನ್ನು, ಇತರರಿಗೆ ಪರಿಗಣನೆ ತೋರಿಸುವುದನ್ನು, ಎಲ್ಲರೊಂದಿಗೆ ಬೆರೆಯುವುದನ್ನು ಕಲಿಯುವರು. (g09-E 11)

[ಪಾದಟಿಪ್ಪಣಿಗಳು]

^ Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.

^ 2009ರ ಜನವರಿ-ಮಾರ್ಚ್‌ ಎಚ್ಚರ! ಪತ್ರಿಕೆಯಲ್ಲಿ “ಮಕ್ಕಳು ಆನ್‌ಲೈನ್‌ನಲ್ಲಿ . . . ಹೆತ್ತವರು ಏನು ತಿಳಿದಿರಬೇಕು?” ಎಂಬ ಲೇಖನ ಓದುವುದು ಹೆತ್ತವರಿಗೆ ಸಹಾಯಕರ. 2007ರ ಮಾರ್ಚ್‌, ಡಿಸೆಂಬರ್‌ (ಇಂಗ್ಲಿಷ್‌) ಹಾಗೂ 2008ರ ಜನವರಿ-ಮಾರ್ಚ್‌ ಎಚ್ಚರ! ಪತ್ರಿಕೆಯಲ್ಲಿ ಅಶ್ಲೀಲ ಚಿತ್ರಣ, ವಿಡಿಯೋ ಗೇಮ್ಸ್‌, ಇಂಟರ್‌ನೆಟ್‌ ಬಗ್ಗೆ ಉಪಯುಕ್ತ ಲೇಖನಗಳಿವೆ.

^ ಕೆಲವು ಹದಿವಯಸ್ಕರು ತಮ್ಮ ಸ್ನೇಹಿತರಿಗೆ ಮೊಬೈಲ್‌ಗಳ ಮೂಲಕ ತಮ್ಮ ಸ್ವಂತ ಅಶ್ಲೀಲ ಫೋಟೋಗಳನ್ನು ಕಳುಹಿಸುತ್ತಾರೆ. ಈ ಚಾಳಿ ನೀಚವಾದದ್ದು ಮಾತ್ರವಲ್ಲ ಮೂರ್ಖತನವೂ ಆಗಿದೆ ಏಕೆಂದರೆ ಅಂಥ ಫೋಟೋಗಳನ್ನು ಯಾವುದೇ ಉದ್ದೇಶದಿಂದ ಕಳುಹಿಸಿದರೂ ಅವನ್ನು ಪಡೆಯುವವರು ಹೆಚ್ಚಾಗಿ ಇತರರಿಗೂ ತೋರಿಸುತ್ತಾರೆ.

[ಪುಟ 17ರಲ್ಲಿರುವ ಚಿತ್ರ]

ಮನಸ್ಸನ್ನು ಚುರುಕುಗೊಳಿಸುವ ಮತ್ತು ತಾಳ್ಮೆ, ಛಲ ಇತ್ಯಾದಿ ಗುಣಗಳನ್ನು ಬೆಳೆಸಲು ನೆರವಾಗುವ ವಿವಿಧ ಚಟುವಟಿಕೆಗಳು ಮಕ್ಕಳಿಗೆ ಅಗತ್ಯ