ನಾವು ಒಳ್ಳೆಯವರು ಅಥವಾ ಕೆಟ್ಟವರಾಗಲು ಕಾರಣವೇನು?
ಬೈಬಲಿನ ದೃಷ್ಟಿಕೋನ
ನಾವು ಒಳ್ಳೆಯವರು ಅಥವಾ ಕೆಟ್ಟವರಾಗಲು ಕಾರಣವೇನು?
ಚರಿತ್ರೆಯ ಪುಟಗಳು ದ್ವೇಷ, ರಕ್ತಪಾತಗಳ ಕಥೆಗಳಿಂದ ತುಂಬಿವೆ. ಆದರೆ ಕೆಲವು ಮಾನವರು ತೋರಿಸಿರುವ ಅಸಾಧಾರಣ ದಯೆ ಮತ್ತು ಸ್ವತ್ಯಾಗದ ಕಥೆಗಳನ್ನೂ ನಾವು ಕೇಳುತ್ತೇವೆ. ಹೀಗೆ ಕೆಲವರು ಕರುಣೆಯಿಲ್ಲದ ಕಟುಕರಾಗಿದ್ದರೆ ಇನ್ನು ಕೆಲವರು ಮಾನವೀಯತೆಯುಳ್ಳ ಮೃದುಹೃದಯಿಗಳು ಆಗಿರಲು ಕಾರಣವೇನು? ಕೆಲವು ಮನುಷ್ಯರು ಮೃಗಗಳಂತೆ ವರ್ತಿಸುವುದೇಕೆ?
ಅಪರಿಪೂರ್ಣತೆ ಮತ್ತು ಮನಸ್ಸಾಕ್ಷಿ
“ಮನುಷ್ಯರ ಮನಸ್ಸಂಕಲ್ಪವು ಚಿಕ್ಕಂದಿನಿಂದಲೇ ಕೆಟ್ಟದ್ದು” ಎಂದು ಬೈಬಲ್ ನೇರವಾಗಿ ಹೇಳುತ್ತದೆ. (ಆದಿಕಾಂಡ 8:21) ಆದ್ದರಿಂದಲೇ ಮಕ್ಕಳು ಸಹ ಕಿಡಿಗೇಡಿ ಕೃತ್ಯಗಳನ್ನು ಮಾಡುತ್ತಾರೆ. (ಜ್ಞಾನೋಕ್ತಿ 22:15) ಕೆಟ್ಟದ್ದನ್ನು ಮಾಡುವ ಪ್ರವೃತ್ತಿ ನಮ್ಮೆಲ್ಲರಲ್ಲೂ ಹುಟ್ಟಿನಿಂದಲೇ ಬಂದಿದೆ. (ಕೀರ್ತನೆ 51:5) ಹೀಗಿರುವುದರಿಂದ ಪ್ರವಾಹದ ಎದುರಾಗಿ ಈಜಲು ಹೇಗೆ ತುಂಬ ಪ್ರಯತ್ನಮಾಡಬೇಕೋ ಹಾಗೆ ಒಳ್ಳೆಯದನ್ನು ಮಾಡಲು ನಾವು ಶತಪ್ರಯತ್ನಮಾಡಬೇಕು.
ಆದರೆ ಮನಸ್ಸಾಕ್ಷಿಯೆಂಬ ವರದಾನವೂ ನಮಗಿದೆ. ಇದು ಹುಟ್ಟಿನಿಂದಲೇ ನಮಗಿರುವ ಸರಿತಪ್ಪಿನ ಅರಿವು. ಇದರಿಂದಾಗಿಯೇ ನಮ್ಮಲ್ಲಿ ಹೆಚ್ಚಿನವರು ಸಭ್ಯರಾಗಿ ನಡೆದುಕೊಳ್ಳುತ್ತೇವೆ. ನೈತಿಕ ಶಿಕ್ಷಣವಿಲ್ಲದ ಜನರು ಕೂಡ ಪರೋಪಕಾರಕ್ಕೆ ಖ್ಯಾತರಾಗಿದ್ದಾರೆ. (ರೋಮನ್ನರಿಗೆ 2:14, 15) ಆದರೆ ಮೇಲೆ ತಿಳಿಸಿದಂತೆ ಕೆಟ್ಟದ್ದನ್ನು ಮಾಡುವ ಪ್ರವೃತ್ತಿ ನಮ್ಮಲ್ಲಿರುವುದರಿಂದ ಒಳ್ಳೇದನ್ನು ಮಾಡಲು ನಮ್ಮೊಳಗೆ ಸಂಘರ್ಷ ನಡೆಯುತ್ತಿರುತ್ತದೆ. ಈ ಸಂಘರ್ಷಕ್ಕೆ ಕುಮ್ಮಕ್ಕು ಕೊಡುವ ವಿಷಯಗಳಾವುವು?
ಕೆಟ್ಟ ವಾತಾವರಣ
ಊಸರವಳ್ಳಿ ತಾನಿರುವ ವಾತಾವರಣಕ್ಕೆ ತಕ್ಕಂಥ ಬಣ್ಣ ಹಾಕಿಕೊಳ್ಳುತ್ತದೆ. ಹಾಗೆಯೇ ದುಷ್ಕೃತ್ಯಗಳನ್ನು ಮಾಡುವವರೊಂದಿಗೆ ಸೇರುವವರು ದುಷ್ಟ ಗುಣಗಳನ್ನೇ ಮೈಗೂಡಿಸಿಕೊಳ್ಳುತ್ತಾರೆ. ಆದರೆ ‘ದುಷ್ಕಾರ್ಯವನ್ನು ಮಾಡುವವರ ಜೊತೆಯಲ್ಲಿ ಸೇರಬಾರದು’ ಎಂದು ಬೈಬಲ್ ಎಚ್ಚರಿಸುತ್ತದೆ. (ವಿಮೋಚನಕಾಂಡ 23:2) ಇನ್ನೊಂದು ಕಡೆಯಲ್ಲಿ, ಪ್ರಾಮಾಣಿಕರೂ ನ್ಯಾಯವಂತರೂ ನೈತಿಕವಾಗಿ ಶುದ್ಧರೂ ಆದ ಜನರ ಸಹವಾಸವು ಒಳ್ಳೆಯದನ್ನು ಮಾಡಲು ಇಂಬುಕೊಡುತ್ತದೆ.—ಜ್ಞಾನೋಕ್ತಿ 13:20.
ದುಷ್ಕೃತ್ಯಗಳನ್ನು ಮಾಡುವವರೊಂದಿಗೆ ನೇರವಾಗಿ ಸಹವಾಸ ಮಾಡುತ್ತಿಲ್ಲ ಎಂದಮಾತ್ರಕ್ಕೆ ನಮಗೆ ಅವರ ಪ್ರಭಾವ ತಟ್ಟುವುದಿಲ್ಲವೆಂದು ನಾವು ನೆನಸಬಾರದು. ನಾವು ಪಾಪಪೂರ್ಣರು. ಆದ್ದರಿಂದ ಕೆಟ್ಟದ್ದು ಮಾಡಬೇಕೆಂಬ ಪ್ರವೃತ್ತಿ ನಮ್ಮ ಮನಸ್ಸಿನಾಳದಲ್ಲಿ ಅವಿತುಕೊಂಡಿದ್ದು ಹೊರಬರಲು ಅವಕಾಶಕ್ಕಾಗಿ ಕಾಯುತ್ತಿರುತ್ತದೆ. (ಆದಿಕಾಂಡ 4:7) ಅಷ್ಟೇ ಅಲ್ಲ ಸಮೂಹ ಮಾಧ್ಯಮದ ಮೂಲಕವೂ ಕೆಟ್ಟದ್ದು ನಮ್ಮ ಮನೆಯೊಳಗೆ ಸೇರಬಹುದು. ವಿಡಿಯೋ ಗೇಮ್ಸ್, ಟಿವಿ ಕಾರ್ಯಕ್ರಮಗಳು, ಚಲನಚಿತ್ರಗಳು ಹೆಚ್ಚಾಗಿ ಕ್ರೌರ್ಯ ಮತ್ತು ಸೇಡನ್ನು ವೈಭವೀಕರಿಸುತ್ತವೆ. ನಮ್ಮ ಸುತ್ತಮುತ್ತ ಮತ್ತು ಜಗತ್ತಿನಾದ್ಯಂತ ನಡೆಯುವಂಥ ಘಟನೆಗಳ ಕುರಿತ ವಾರ್ತೆಗಳನ್ನು ನಿರಂತರವಾಗಿ ಓದುತ್ತಾ ನೋಡುತ್ತಾ ಇರುವುದರಿಂದ ಮಾನವರ ನೋವು ನರಳಾಟದ ವಿಷಯದಲ್ಲಿ ನಮ್ಮ ಮನಸ್ಸು ಕಲ್ಲಾಗಬಹುದು.
ಈ ಜಗತ್ತಿನ ವಾತಾವರಣ ಇಷ್ಟೊಂದು ಕೆಟ್ಟುಹೋಗಲು ಮುಖ್ಯ ಕಾರಣವೇನು? ಬೈಬಲ್ ಕೊಡುವ ಉತ್ತರ: “ಇಡೀ ಲೋಕವು ಕೆಡುಕನ ವಶದಲ್ಲಿ ಬಿದ್ದಿದೆ.” (1 ಯೋಹಾನ 5:19) ಈ ‘ಕೆಡುಕನು’ ಪಿಶಾಚನಾದ ಸೈತಾನನೇ. ಬೈಬಲ್ ಅವನನ್ನು ಸುಳ್ಳುಗಾರನೂ ನರಹಂತಕನೂ ಎಂದು ಕರೆಯುತ್ತಾ ಅವನ ನಿಜ ಸ್ವರೂಪವನ್ನು ಬಯಲುಗೊಳಿಸುತ್ತದೆ. (ಯೋಹಾನ 8:44) ಅವನು ತನ್ನ ವಶದಲ್ಲಿರುವ ಈ ಲೋಕದ ಮೂಲಕ ಕೆಟ್ಟದ್ದನ್ನು ಹಬ್ಬಿಸುತ್ತಿದ್ದಾನೆ.
ಈ ಎಲ್ಲ ಅಂಶಗಳು ನಮ್ಮ ಮನೋಭಾವ ಮತ್ತು ಕ್ರಿಯೆಗಳನ್ನು ರೂಪಿಸುತ್ತವೆ. ಆದ್ದರಿಂದ ತಮ್ಮ ದುಷ್ಕೃತ್ಯಗಳಿಗೆ ತಾವು ಕಾರಣರಲ್ಲ ಎಂದು ಕೆಲವರು ತರ್ಕಿಸಬಹುದು. ಅದು ಸರಿಯೋ? ಕಾರನ್ನು ಅದರ ಸ್ಟೀಯರಿಂಗ್ ವ್ಹೀಲ್ ಹಾಗೂ ದೋಣಿಯನ್ನು ಅದರ ಚುಕ್ಕಾಣಿಯು ಹೇಗೆ ನಿಯಂತ್ರಿಸುತ್ತದೋ ಹಾಗೇ ಒಬ್ಬ ವ್ಯಕ್ತಿಯನ್ನು ನಿಯಂತ್ರಿಸುವಂಥದ್ದು ಅವನ ಮನಸ್ಸೇ.
ಒಳ್ಳೆಯವರಾಗುವುದು ಕೆಟ್ಟವರಾಗುವುದು ನಮ್ಮ ಕೈಯಲ್ಲಿದೆ
ನಾವು ಒಳ್ಳೇದನ್ನೇ ಮಾಡಲಿ ಕೆಟ್ಟದ್ದನ್ನೇ ಮಾಡಲಿ ಅದಕ್ಕೆ ಪ್ರೇರಣೆ ಮನಸ್ಸಿನ ಆಲೋಚನೆ. ಆದ್ದರಿಂದ ನಮ್ಮ ಮನಸ್ಸಿನಲ್ಲಿ ಒಳ್ಳೇ ವಿಚಾರಗಳನ್ನು ತುಂಬಿಸಿದರೆ ನಮ್ಮ ಕೆಲಸಗಳೂ ಒಳ್ಳೇದಾಗಿರುತ್ತವೆ. ಲೂಕ 6:43-45; ಯಾಕೋಬ 1:14, 15) ಆದ್ದರಿಂದಲೇ ಮನುಷ್ಯ ಒಳ್ಳೆಯವನಾಗುವುದು ಅಥವಾ ಕೆಟ್ಟವನಾಗುವುದು ಅವನ ಕೈಯಲ್ಲಿದೆ ಎಂದು ಹೇಳಬಹುದು.
ಆದರೆ ನಮ್ಮ ಮನಸ್ಸಿನಲ್ಲಿ ಸ್ವಾರ್ಥ ಆಸೆ ಬೆಳೆಯುವಂತೆ ಬಿಟ್ಟರೆ ಅನೇಕ ದುಷ್ಕೃತ್ಯಗಳೇ ಫಲಿಸುವವು. (ಸಂತೋಷದ ವಿಷಯವೇನೆಂದರೆ ಸದಾಚಾರವನ್ನು ಅಂದರೆ ಒಳ್ಳೇತನವನ್ನು ಕಲಿತುಕೊಳ್ಳಸಾಧ್ಯವಿದೆ. (ಯೆಶಾಯ 1:16, 17) ‘ಪ್ರೀತಿಯು ನೆರೆಯವನಿಗೆ ಕೆಡುಕನ್ನು ಮಾಡುವುದಿಲ್ಲ.’ ಆದ್ದರಿಂದ ಒಳ್ಳೇದನ್ನು ಮಾಡಲು ಪ್ರೀತಿಯೇ ನಮಗೆ ಸ್ಫೂರ್ತಿ. (ರೋಮನ್ನರಿಗೆ 13:10) ನಾವು ಜನರ ಮೇಲೆ ಪ್ರೀತಿಯನ್ನು ಬೆಳೆಸಿಕೊಂಡರೆ ಯಾರಿಗೂ ಕೇಡುಬಗೆಯುವುದರ ಬಗ್ಗೆ ಯೋಚಿಸುವುದೂ ಇಲ್ಲ.
ಇದನ್ನೇ ಯು.ಎಸ್.ಎ. ಪೆನ್ಸಿಲ್ವೇನಿಯದ ರೇ ಎಂಬವನು ಕಲಿತನು. ಚಿಕ್ಕಂದಿನಲ್ಲೇ ಅವನು ಗುದ್ದಾಟ ಬಡಿದಾಟಕ್ಕೆ ಹೆಸರುವಾಸಿಯಾಗಿ ಒಂದು ಅಡ್ಡಹೆಸರನ್ನೂ ಪಡೆದುಕೊಂಡನು. ಜೊತೆಗೆ ಅವನಿಗೆ ಮೂಗಿನ ತುದಿಯಲ್ಲೇ ಕೋಪ. ಆದರೆ ಬೈಬಲಿನ ಮೂಲತತ್ತ್ವಗಳನ್ನು ಅನ್ವಯಿಸಿದಾಗ ಅದೆಲ್ಲವನ್ನೂ ನಿಧಾನವಾಗಿ ಬಿಟ್ಟುಬಿಟ್ಟನು. ಇದು ಅಷ್ಟೊಂದು ಸುಲಭವಾಗಿರಲಿಲ್ಲ. “ನಾನು ಒಳ್ಳೇದನ್ನು ಮಾಡಲು ಬಯಸುವುದಾದರೂ ಕೆಟ್ಟದ್ದೇ ನನ್ನಲ್ಲಿ ಇದೆ ಎಂಬ ನಿಯಮವು ನನಗೆ ಕಂಡುಬರುತ್ತದೆ” ಎಂದು ಬೈಬಲಿನ ಒಬ್ಬ ಬರಹಗಾರನಾದ ಪೌಲನಂತೆ ಅವನಿಗೂ ಎಷ್ಟೋ ಸಲ ಅನಿಸಿತು. (ರೋಮನ್ನರಿಗೆ 7:21) ಅನೇಕ ವರ್ಷಗಳ ವರೆಗೆ ಪಟ್ಟುಬಿಡದೆ ಮಾಡಿದ ಪ್ರಯತ್ನದ ಫಲವಾಗಿ ‘ಒಳ್ಳೇದರಿಂದ ಕೆಟ್ಟದ್ದನ್ನು ಜಯಿಸಲು’ ಅವನಿಗೆ ಸಾಧ್ಯವಾಗಿದೆ.—ರೋಮನ್ನರಿಗೆ 12:21.
‘ಒಳ್ಳೆಯವರ ನಡತೆಯನ್ನು ಅನುಸರಿಸುವುದು’ ಪ್ರಯೋಜನಕರ ಏಕೆ? (ಜ್ಞಾನೋಕ್ತಿ 2:20-22) ಏಕೆಂದರೆ ಕೊನೆಗೆ ಒಳ್ಳೆಯದಕ್ಕೆ ಜಯ ಸಿಗುವುದು. “ಕೆಡುಕರು ತೆಗೆದುಹಾಕಲ್ಪಡುವರು; . . . ಇನ್ನು ಸ್ವಲ್ಪಕಾಲದೊಳಗೆ ದುಷ್ಟನು ಕಾಣಿಸದೆ ಹೋಗುವನು; . . . ಆದರೆ ದೀನರು ದೇಶವನ್ನು ಅನುಭವಿಸುವರು; ಅವರು ಮಹಾಸೌಖ್ಯದಿಂದ ಆನಂದಿಸುವರು” ಎನ್ನುತ್ತದೆ ಬೈಬಲ್. (ಕೀರ್ತನೆ 37:9-11) ದೇವರು ಕೆಟ್ಟತನವನ್ನು ಹೇಳಹೆಸರಿಲ್ಲದಂತೆ ಮಾಡುವನು. ಒಳ್ಳೇದನ್ನು ಮಾಡಲು ಶ್ರದ್ಧೆಯಿಂದ ಪ್ರಯತ್ನಿಸುವವರಿಗಾಗಿ ಭವ್ಯ ಭವಿಷ್ಯತ್ತು ಕಾದಿದೆ! (g10-E 04)
ನೀವೇನು ಹೇಳುತ್ತೀರಿ?
● ನಮ್ಮ ಕೃತ್ಯಗಳಿಗೆ ಯಾರು ಜವಾಬ್ದಾರರು?—ಯಾಕೋಬ 1:14.
● ನಮ್ಮ ನಡವಳಿಕೆಯನ್ನು ಬದಲಾಯಿಸಲು ಸಾಧ್ಯವಿದೆಯೋ?—ಯೆಶಾಯ 1:16, 17.
● ಕೆಡುಕಿಗೆ ಕೊನೆಯಿದೆಯೋ?—ಕೀರ್ತನೆ 37:9, 10; ಜ್ಞಾನೋಕ್ತಿ 2:20-22.
[ಪುಟ 31ರಲ್ಲಿರುವ ಚಿತ್ರಗಳು]
ಒಬ್ಬ ಮನುಷ್ಯ ಒಳ್ಳೆಯವನಾಗುವುದು ಅಥವಾ ಕೆಟ್ಟವನಾಗುವುದು ಅವನ ಕೈಯಲ್ಲಿದೆ