“ನಿನ್ನೊಟ್ಟಿಗೆ ಬಾಳಲಾರೆ!”
“ನಿನ್ನೊಟ್ಟಿಗೆ ಬಾಳಲಾರೆ!”
ಹಾಳುಬಿದ್ದಿರುವ ಈ ಮನೆಯನ್ನು ನೋಡಿದ್ರಾ? ಮನೆಯವರಾರೂ ಅದರ ಕಡೆ ಗಮನಹರಿಸಿಲ್ಲ. ವರ್ಷಗಳಿಂದ ಈ ಮನೆ ಕಂಡ ಬಿರುಗಾಳಿಮಳೆಗಳಲ್ಲಿ ಹೆಚ್ಚಿನವುಗಳಿಂದ ಅದಕ್ಕೆ ಹಾನಿಯಾಗಿದೆ. ಇವತ್ತೊ ನಾಳೆಯೊ ಬಿದ್ದುಹೋಗುವಂತೆ ಕಾಣುತ್ತಿದೆ.
ಇಂದು ಅನೇಕರ ವೈವಾಹಿಕ ಜೀವನವೂ ಅದೇ ಸ್ಥಿತಿಯಲ್ಲಿದೆ. ನಿಮ್ಮ ವಿವಾಹವೂ ಅಂಥ ಸ್ಥಿತಿಗೆ ಇಳಿಯುತ್ತಿದೆಯೆಂದು ನಿಮಗೆ ಎಂದಾದರೂ ಅನಿಸಿದೆಯೇ? ಹೌದಾದರೆ, ನೆನಪಿಡಿ ‘ಎಲ್ಲರ ಮನೆ ದೋಸೆ ತೂತು’ ಎಂಬ ಗಾದೆಯಂತೆ ಸಮಸ್ಯೆಗಳಿಲ್ಲದ ಸಂಸಾರವಿಲ್ಲ. ವಾಸ್ತವದಲ್ಲಿ, ಮದುವೆಯಾಗುವವರಿಗೆ ‘ತೊಂದರೆಗಳಿರುವವು’ ಎಂದು ಬೈಬಲ್ ನೇರವಾಗಿ ಹೇಳುತ್ತದೆ.—1 ಕೊರಿಂಥ 7:28, NIBV.
ಈ ಮಾತುಗಳ ಸತ್ಯತೆಗೆ ಸಂಶೋಧಕರ ಒಂದು ತಂಡದ ಮುಂದಿನ ಹೇಳಿಕೆ ಒತ್ತುನೀಡುತ್ತದೆ: “ವಿವಾಹದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆಂದು ತಿಳಿದಿದ್ದರೂ ಸಮಾಜದಲ್ಲಿ ವಾಡಿಕೆಯಾಗಿ ಹೆಚ್ಚೆಚ್ಚು ಮಂದಿ ವಿವಾಹ ಜೀವನಕ್ಕೆ ಅಡಿಯಿಡುತ್ತಾರೆ. ಆರಂಭದಲ್ಲಿ ಹೊಂಗನಸುಗಳಿಂದ ಕೂಡಿದ ಈ ಹೂವಿನ ಹಾದಿಯು ಸಮಯಾನಂತರ ಬಾಳುದ್ದಕ್ಕೂ ಮುಳ್ಳಿನ ಹಾದಿಯಾಗುವ ಸಾಧ್ಯತೆಯಿದೆ.”
ನಿಮ್ಮ ದಾಂಪತ್ಯದ ಕುರಿತೇನು? ಕೆಳಗಿನ ಒಂದು ಅಥವಾ ಹೆಚ್ಚಿನ ಲಕ್ಷಣಗಳನ್ನು ನಿಮ್ಮ ವೈವಾಹಿಕ ಜೀವನದಲ್ಲಿ ಕಾಣುತ್ತೀರೋ?
● ಮಾತು ಮಾತಿಗೆ ಜಗಳ
● ಚುಚ್ಚು ಮಾತು
● ದಾಂಪತ್ಯ ದ್ರೋಹ
● ಎಲ್ಲದಕ್ಕೂ ಕೋಪ
ನಿಮ್ಮ ವಿವಾಹಬಂಧವು ದುರ್ಬಲಗೊಂಡು ಇವತ್ತೊ ನಾಳೆಯೊ ಮುರಿದುಬೀಳಲಿದೆ ಎಂದು ತೋರುವಲ್ಲಿ ನೀವೇನು ಮಾಡಬೇಕು? ಇದಕ್ಕೆ ವಿವಾಹ ವಿಚ್ಛೇದನವೊಂದೇ ಪರಿಹಾರವೋ? (g10-E 02)
[ಪುಟ 3ರಲ್ಲಿರುವ ಚೌಕ/ಚಿತ್ರ]
‘ವಿರಳವಾಗಿದ್ದದ್ದು ಈಗ ಸರ್ವೇಸಾಮಾನ್ಯ’
ಕೆಲವು ದೇಶಗಳಲ್ಲಿ ವಿವಾಹ ವಿಚ್ಛೇದನದ ಸಂಖ್ಯೆ ಗಗನಕ್ಕೇರಿದೆ. ಉದಾಹರಣೆಗೆ ಯುನೈಟೆಡ್ ಸ್ಟೇಟ್ಸ್ ಅನ್ನು ತಕ್ಕೊಳ್ಳಿ. ಅಲ್ಲಿ ಅನೇಕ ವರ್ಷಗಳ ಹಿಂದೆ ವಿಚ್ಛೇದನದ ಕುರಿತು ಎಲ್ಲೋ ಒಮ್ಮೊಮ್ಮೆ ಕೇಳಿಬರುತ್ತಿತ್ತು. ಆದರೆ ವಿವಾಹ ವಿಚ್ಛೇದನ ಸಂಸ್ಕೃತಿ (ಇಂಗ್ಲಿಷ್) ಎಂಬ ಪುಸ್ತಕದಲ್ಲಿ ಬಾಬ್ರ ಡಫೋ ವೈಟ್ಹೆಡ್ ಬರೆದಂತೆ, 1960ರ ಬಳಿಕ “ವಿಚ್ಛೇದನದ ಸಂಖ್ಯೆ ಹಠಾತ್ತನೆ ಮೇಲಕ್ಕೇರಿ ಹತ್ತು ವರ್ಷಗಳೊಳಗೆ ಆ ಸಂಖ್ಯೆ ಇಮ್ಮಡಿಯಾಯಿತು. ಬಳಿಕ 1980ರ ದಶಕದ ಆರಂಭದ ವರೆಗೆ ಆ ಸಂಖ್ಯೆ ಏರುತ್ತ ಏರುತ್ತ ಪ್ರಗತಿಶೀಲ ಪಾಶ್ಚಾತ್ಯ ದೇಶಗಳಲ್ಲೇ ಅತ್ಯುಚ್ಚವಾದ ಸಂಖ್ಯೆಗೆ ತಲಪಿತು. ಹೀಗೆ ಅಮೆರಿಕನ್ನರಲ್ಲಿ ಹಿಂದೊಮ್ಮೆ ತೀರ ವಿರಳವಾಗಿದ್ದ ವಿವಾಹ ವಿಚ್ಛೇದನವು 30 ವರ್ಷಗಳಲ್ಲಿ ತೀವ್ರಗತಿಯಲ್ಲಿ ಹೆಚ್ಚುತ್ತಾ ಈಗ ಸರ್ವೇಸಾಮಾನ್ಯ ಸಂಗತಿಯಾಗಿದೆ.”