ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿ ಇರುವುದೆಲ್ಲವೂ ನಮ್ಮ ಕಾಲಕ್ಕೆ ಪ್ರಸ್ತುತವೇ?

ಬೈಬಲಿನಲ್ಲಿ ಇರುವುದೆಲ್ಲವೂ ನಮ್ಮ ಕಾಲಕ್ಕೆ ಪ್ರಸ್ತುತವೇ?

ಬೈಬಲಿನ ದೃಷ್ಟಿಕೋನ

ಬೈಬಲಿನಲ್ಲಿ ಇರುವುದೆಲ್ಲವೂ ನಮ್ಮ ಕಾಲಕ್ಕೆ ಪ್ರಸ್ತುತವೇ?

“ಬೈಬಲಿನಲ್ಲಿ, ಪದಬಂಧಗಳನ್ನು ಬಿಡಿಸಲು ಇಲ್ಲವೆ ಕ್ವಿಜ್‌ ಕಾರ್ಯಕ್ರಮಗಳಲ್ಲಿ ಸರಿಯಾದ ಉತ್ತರಗಳನ್ನು ಹೇಳಲು ಬೇಕಾದ ಕೆಲವು ವಿವರಗಳನ್ನು ಬಿಟ್ಟರೆ ಆಧುನಿಕ ಮನುಷ್ಯನಿಗೆ ಪ್ರಾಯೋಗಿಕ ಮೌಲ್ಯವಿರುವಂಥದ್ದೇನೂ ಇಲ್ಲ.”

“ಕುಟುಂಬ ವಂಶಾವಳಿ, ಕನ್ಯತ್ವ, ದೇವಭಯ ಇವೆಲ್ಲ ಬೈಬಲ್‌ ಕಾಲಗಳಲ್ಲಿ ಪ್ರಸಕ್ತ ಸಾಂಸ್ಕೃತಿಕ ವಿಚಾರಗಳಾಗಿದ್ದವೇನೋ ನಿಜ. ಆದರೆ ಈ ಇಪ್ಪತ್ತೊಂದನೇ ಶತಮಾನಕ್ಕೆ ಅದು ಪ್ರಸಕ್ತವಲ್ಲ.”

“ಬೈಬಲಿನ ಪ್ರಥಮ ಮುದ್ರಣ ಮಾಡುವಷ್ಟರಲ್ಲೇ ಅದು ಓಬೀರಾಯನ ಕಾಲದ್ದಾಗಿ ಬಿಟ್ಟಿತು.”

ಈ ಹೇಳಿಕೆಗಳು ಇದದ್ದು ಇತ್ತೀಚಿನ ಇಂಟರ್‌ನೆಟ್‌ ವೆಬ್‌ಸೈಟ್‌ವೊಂದರಲ್ಲಿ. ಆ ಸೈಟ್‌ ಚರ್ಚಿಸಿದ ವಿಷಯ “ಬೈಬಲ್‌ ಹಳೆಯಕಾಲದ್ದೂ ಅಪ್ರಸ್ತುತವೂ ಆಗಿದೆಯೋ?” ಎಂದಾಗಿತ್ತು. ಆ ಅಭಿಪ್ರಾಯಗಳ ಬಗ್ಗೆ ನಿಮಗೆ ಹೇಗನಿಸುತ್ತದೆ? ನೀವು ಒಪ್ಪುತ್ತೀರೋ?

ಇಡೀ ಬೈಬಲನ್ನೇ ತಿರಸ್ಕರಿಸುವ ಅಂಥವರೊಂದಿಗೆ ನೀವು ಸಮ್ಮತಿಸಲಿಕ್ಕಿಲ್ಲ. ಆದರೂ, ಬೈಬಲಿನಲ್ಲಿರುವ ಎಲ್ಲ ವಿಷಯಗಳೂ ಈ ಕಾಲಕ್ಕೆ ಪ್ರಸ್ತುತವೊ ಎಂಬ ಪ್ರಶ್ನೆ ಯಾವತ್ತಾದರೂ ನಿಮ್ಮ ಮನಸ್ಸಿಗೆ ಬಂದಿರಬಹುದು. ಏಕೆಂದರೆ ಹೆಚ್ಚಿನ ಚರ್ಚುಗಳಲ್ಲಿ ಬಳಸಲಾಗುವ ಬೈಬಲುಗಳನ್ನು ಸಾಮಾನ್ಯವಾಗಿ ‘ಹಳೇ ಒಡಂಬಡಿಕೆ’ ‘ಹೊಸ ಒಡಂಬಡಿಕೆ’ ಎಂದು ವಿಭಾಗಿಸಲಾಗಿದೆ. ಇದರಿಂದ, ಬೈಬಲಿನ 75%ಕ್ಕಿಂತಲೂ ಹೆಚ್ಚಿನ ಭಾಗ ಹಳೆಯದ್ದೂ ಕೆಲಸಕ್ಕೆ ಬಾರದಂಥದ್ದೂ ಎಂಬ ಅಭಿಪ್ರಾಯ ಮೂಡುತ್ತದೆ.

ಮೋಶೆಯ ಧರ್ಮಶಾಸ್ತ್ರದಲ್ಲಿ ಹೇಳಲಾಗಿರುವ ಪ್ರಾಣಿ ಯಜ್ಞಗಳನ್ನು ಇಂದು ಯಾರೂ ಅರ್ಪಿಸುವುದಿಲ್ಲ. ಹೀಗಿರುವುದರಿಂದ ಆ ಎಲ್ಲ ವಿವರಗಳನ್ನು ಯಾಜಕಕಾಂಡ ಪುಸ್ತಕದಲ್ಲಿ ಬರೆದಿಟ್ಟು ಏನು ಲಾಭ? (ಯಾಜಕಕಾಂಡ 1:1–7:38) ಒಂದನೇ ಪೂರ್ವಕಾಲವೃತ್ತಾಂತದ ಆರಂಭದ ಅಧ್ಯಾಯಗಳಲ್ಲಿ ಹೆಚ್ಚಾಗಿ ವಂಶಾವಳಿಯ ಪಟ್ಟಿಗಳೇ ಇವೆ. ಅವುಗಳಿಂದ ನಮಗೇನು ಪ್ರಯೋಜನ? (1 ಪೂರ್ವಕಾಲವೃತ್ತಾಂತ 1:1–9:44) ಆ ಅಧ್ಯಾಯಗಳಲ್ಲಿ ತಿಳಿಸಲಾಗಿರುವವರ ಪೈಕಿ ಒಬ್ಬರನ್ನೂ ತನ್ನ ವಂಶಜನೆಂದು ಗುರುತಿಸಲು ಇಂದು ಯಾರಿಗೂ ಸಾಧ್ಯವಾಗದಿರುವಾಗ ಆ ಪಟ್ಟಿಗಳು ಇದ್ದೇನು ಪ್ರಯೋಜನ?

ಹೀಗೆ ಯೋಚಿಸಿ: ನೀವೊಂದು ಸೇಬಿನ ಮರದಿಂದ ಹಣ್ಣನ್ನು ಕಿತ್ತುಕೊಂಡಿದ್ದೀರಿ. ಸೇಬು ನಿಮ್ಮ ಕೈಗೆ ಸೇರಿದ ಬಳಿಕ ಆ ಮರ ಈಗ ಅಗತ್ಯವಿಲ್ಲವೆಂದು ನಿಮಗನಿಸುತ್ತದೋ? ಹೆಚ್ಚು ಹಣ್ಣು ಬೇಕಾಗಿರುವಲ್ಲಿ ನೀವು ಹಾಗೆಣಿಸಲಿಕ್ಕಿಲ್ಲ. ಬೈಬಲು ಕೆಲವೊಂದು ವಿಧಗಳಲ್ಲಿ ಆ ಸೇಬಿನ ಮರದ ಹಾಗಿದೆ. ಉದಾಹರಣೆಗೆ ಕೀರ್ತನೆಗಳು ಅಥವಾ ಪರ್ವತ ಪ್ರಸಂಗದಂಥ ಬೈಬಲ್‌ ಭಾಗಗಳನ್ನು ಕೂಡಲೇ ತೆರೆಯಲು ಸಾಧ್ಯವೆಂಬಂತೆ ಮತ್ತು ಅವು ಸ್ವಾರಸ್ಯಕರವೂ ಆಗಿರುವಂತೆ ತೋರಬಹುದು. ನಮಗಿಷ್ಟವಾದ ಹಣ್ಣಿನಂತೆ ಆ ಭಾಗಗಳು ನಮಗೆ ಅಚ್ಚುಮೆಚ್ಚಿನದ್ದಾಗಿರಬಹುದು. ಆದರೆ ಅದೇ ಸಮಯ ನಾವು ಬೈಬಲಿನ ಉಳಿದ ಭಾಗಗಳನ್ನು ಉಪೇಕ್ಷಿಸಬಹುದೋ? ಇದರ ಬಗ್ಗೆ ಸ್ವತಃ ಬೈಬಲ್‌ ಏನನ್ನುತ್ತದೆ?

ಕ್ರಿ.ಶ. 65ರಷ್ಟಕ್ಕೆ ಅಪೊಸ್ತಲ ಪೌಲನು ತಿಮೊಥೆಯನಿಗೆ ಬರೆದ ಎರಡನೇ ಪತ್ರದಲ್ಲಿ ಹೀಗೆ ಜ್ಞಾಪಕಹುಟ್ಟಿಸಿದನು: “ಶೈಶವದಿಂದಲೇ ನೀನು ಪವಿತ್ರ ಬರಹಗಳನ್ನು ತಿಳಿದುಕೊಂಡಿದ್ದೀ; ಇವು ನಿನ್ನನ್ನು ಕ್ರಿಸ್ತ ಯೇಸುವಿನ ಸಂಬಂಧದಲ್ಲಿರುವ ನಂಬಿಕೆಯ ಮೂಲಕ ರಕ್ಷಣೆಗಾಗಿ ವಿವೇಕಿಯನ್ನಾಗಿ ಮಾಡಬಲ್ಲವು.” ಅವನು ಮುಂದೆ ಹೀಗಂದನು: “ಇಡೀ ಶಾಸ್ತ್ರಗ್ರಂಥವು ದೇವರಿಂದ ಪ್ರೇರಿತವಾಗಿದೆ ಮತ್ತು ಬೋಧಿಸುವುದಕ್ಕೂ ಖಂಡಿಸುವುದಕ್ಕೂ ವಿಷಯಗಳನ್ನು ಸರಿಪಡಿಸುವುದಕ್ಕೂ ನೀತಿಯಲ್ಲಿ ಶಿಸ್ತುಗೊಳಿಸುವುದಕ್ಕೂ ಉಪಯುಕ್ತವಾಗಿದೆ.” (2 ತಿಮೊಥೆಯ 3:15, 16) ‘ಇಡೀ ಶಾಸ್ತ್ರಗ್ರಂಥವು ದೇವರಿಂದ ಪ್ರೇರಿತವಾಗಿದೆ ಮತ್ತು ಉಪಯುಕ್ತವಾಗಿದೆ’ ಎಂದು ಪೌಲನು ಬರೆದಾಗ ಅವನು ಬರೇ ಹೊಸ ಒಡಂಬಡಿಕೆಯ ಬಗ್ಗೆ ಮಾತಾಡುತ್ತಿದ್ದನೋ?

ತಿಮೊಥೆಯನು ‘ಶೈಶವದಿಂದಲೇ ಪವಿತ್ರ ಬರಹಗಳನ್ನು ತಿಳಿದುಕೊಂಡಿದ್ದನು’ ಎಂದು ಪೌಲನು ಹೇಳಿದ ಮಾತಿಗೆ ಗಮನಕೊಡಿ. ಪೌಲನು ಈ ಪತ್ರ ಬರೆದಾಗ ಕೆಲವರು ನಂಬುವಂತೆ ತಿಮೊಥೆಯನಿಗೆ 30 ವಯಸ್ಸು ದಾಟಿರಬಹುದೆಂದು ಇಟ್ಟುಕೊಳ್ಳಿ. ಹಾಗಿದ್ದರೆ ಅದರರ್ಥ ಯೇಸುವಿನ ಮರಣದ ಸಮಯದಷ್ಟಕ್ಕೆ ತಿಮೊಥೆಯನು ಚಿಕ್ಕ ಮಗು. ಆ ಸಮಯದಲ್ಲಿ ಹೊಸ ಒಡಂಬಡಿಕೆ ಅಂದರೆ ಗ್ರೀಕ್‌ ಶಾಸ್ತ್ರಗಳ ಯಾವುದೇ ಭಾಗವು ಬರೆಯಲ್ಪಟ್ಟಿರಲಿಲ್ಲ. ತಿಮೊಥೆಯನ ತಾಯಿ ಯೆಹೂದ್ಯಳಾಗಿದ್ದಳು. ಹೀಗಿರುವುದರಿಂದ ಅವನೊಬ್ಬ ಎಳೆಯ ಮಗುವಾಗಿದ್ದಾಗ ಆಕೆ ಅವನಿಗೆ ಹಳೇ ಒಡಂಬಡಿಕೆ ಅಂದರೆ ಹೀಬ್ರು ಶಾಸ್ತ್ರಗಳಿಂದಲೇ ಕಲಿಸಿದ್ದಿರಬೇಕು. (ಅ. ಕಾರ್ಯಗಳು 16:1) ಹಾಗಾದರೆ ಪೌಲನು ‘ಇಡೀ ಶಾಸ್ತ್ರಗ್ರಂಥ’ ಎಂದು ಹೇಳಿದಾಗ, ಅದರಲ್ಲಿ ನಿಸ್ಸಂದೇಹವಾಗಿಯೂ ಯಜ್ಞಗಳ ಕುರಿತಾದ ಸೂಚನೆಗಳು ಮತ್ತು ವಂಶಾವಳಿ ಪಟ್ಟಿಗಳಿರುವ ಇಡೀ ‘ಹಳೇ ಒಡಂಬಡಿಕೆ’ ಸೇರಿತ್ತು.

ಅಂದಿನಿಂದ 1,900 ವರ್ಷಗಳ ಬಳಿಕ ಅಂದರೆ ಈಗಲೂ ನಾವು ಬೈಬಲಿನ ಆ ಭಾಗಗಳಿಂದ ಹಲವಾರು ವಿಧಗಳಲ್ಲಿ ಪ್ರಯೋಜನ ಪಡೆಯುತ್ತೇವೆ. ಇಂದು ನಮ್ಮ ಬೈಬಲ್‌ ಇರುವುದು ಮುಖ್ಯವಾಗಿ ದೇವರು ತಾನು ಆಯ್ಕೆಮಾಡಿದ್ದ ಜನಾಂಗದವರ ಮೂಲಕ ಅದನ್ನು ಬರೆಸಿ ಸಂರಕ್ಷಿಸಿಟ್ಟದ್ದರಿಂದಲೇ. (ರೋಮನ್ನರಿಗೆ 3:1, 2) ಆ ಜನಾಂಗವಾಗಿದ್ದ ಪ್ರಾಚೀನ ಇಸ್ರಾಯೇಲಿನಲ್ಲಿ ಮೋಶೆಯ ಧರ್ಮಶಾಸ್ತ್ರವು ಮುಂದಿನ ಪೀಳಿಗೆಗಳಿಗಾಗಿ ಜೋಪಾನವಾಗಿ ಇಡಬೇಕಾಗಿದ್ದ ಒಂದು ಪವಿತ್ರ ಅವಶೇಷ ಆಗಿರಲಿಲ್ಲ. ಅದು ಕಾರ್ಯತಃ ಆ ಜನಾಂಗದ ಸಂವಿಧಾನವೇ ಆಗಿತ್ತು. ಆ ಧರ್ಮಶಾಸ್ತ್ರದಲ್ಲಿ ನಮಗಿಂದು ಅನಾವಶ್ಯವೆಂದು ತೋರುವ ವಿವರಗಳು ಪ್ರಾಚೀನ ಇಸ್ರಾಯೇಲ್‌ ಜನಾಂಗದ ಉಳಿವಿಗಾಗಿಯೂ ಅವರ ಕೆಲಸಕಾರ್ಯಗಳೆಲ್ಲವೂ ಸುಗಮವಾಗಿ ನಡೆಯಲಿಕ್ಕಾಗಿಯೂ ಅಗತ್ಯವಾಗಿದ್ದವು. ಅಷ್ಟುಮಾತ್ರವಲ್ಲ, ಬೈಬಲಿನಲ್ಲಿರುವ ವಂಶಾವಳಿಯ ದಾಖಲೆಗಳು ಮೆಸ್ಸೀಯನನ್ನು ಗುರುತಿಸಲಿಕ್ಕಾಗಿ ಅತ್ಯಗತ್ಯವಾಗಿದ್ದವು. ಏಕೆಂದರೆ ಮೆಸ್ಸೀಯನು ರಾಜ ದಾವೀದನ ವಂಶದಿಂದಲೇ ಬರುವನೆಂದು ಮುಂತಿಳಿಸಲಾಗಿತ್ತು.—2 ಸಮುವೇಲ 7:12, 13; ಲೂಕ 1:32; 3:23-31.

ಕ್ರೈಸ್ತರು ಇಂದು ಮೋಶೆಯ ಧರ್ಮಶಾಸ್ತ್ರಕ್ಕನುಸಾರ ಜೀವಿಸಬೇಕಾಗಿಲ್ಲ. ಆದರೂ ಮುಂತಿಳಿಸಲ್ಪಟ್ಟ ಮೆಸ್ಸೀಯನಾದ ಯೇಸು ಕ್ರಿಸ್ತನಲ್ಲಿ ಅವರು ನಂಬಿಕೆಯನ್ನಿಡಲೇಬೇಕು. ಬೈಬಲಿನಲ್ಲಿರುವ ಪ್ರಾಚೀನ ವಂಶಾವಳಿ ಪಟ್ಟಿಗಳು, ಯೇಸು ನಿಶ್ಚಯವಾಗಿಯೂ ‘ದಾವೀದನ ಪುತ್ರ’ನಾಗಿದ್ದನೆಂದು ರುಜುಪಡಿಸುತ್ತವೆ. ಅಲ್ಲದೆ, ಯಜ್ಞಗಳ ಕುರಿತು ಕೊಡಲಾಗಿರುವ ವಿವರಗಳು, ಅವುಗಳಿಗಿಂತ ಎಷ್ಟೋ ಮಿಗಿಲಾದ ಯೇಸುವಿನ ಯಜ್ಞಕ್ಕಾಗಿ ನಮ್ಮ ಮಾನ್ಯತೆಯನ್ನು ಹೆಚ್ಚಿಸುತ್ತಾ ಅದರ ಮೌಲ್ಯದಲ್ಲಿ ನಮ್ಮ ನಂಬಿಕೆಯನ್ನು ಕಟ್ಟುತ್ತವೆ.—ಇಬ್ರಿಯ 9:11, 12.

ಪ್ರಥಮ ಶತಮಾನದಲ್ಲಿ ರೋಮ್‌ನಲ್ಲಿದ್ದ ಕ್ರೈಸ್ತ ಸಭೆಗೆ ಪೌಲನು ಹೀಗೆ ಬರೆದನು: “ಪೂರ್ವದಲ್ಲಿ ಬರೆದಿರುವ ಎಲ್ಲ ವಿಷಯಗಳು ನಮ್ಮನ್ನು ಉಪದೇಶಿಸುವುದಕ್ಕಾಗಿ ಬರೆಯಲ್ಪಟ್ಟವು; ನಮ್ಮ ತಾಳ್ಮೆಯಿಂದಲೂ ಶಾಸ್ತ್ರಗ್ರಂಥದ ಮೂಲಕ ದೊರಕುವ ಸಾಂತ್ವನದಿಂದಲೂ ನಾವು ನಿರೀಕ್ಷೆಯುಳ್ಳವರಾಗುವಂತೆ ಅವು ಬರೆಯಲ್ಪಟ್ಟವು.” (ರೋಮನ್ನರಿಗೆ 15:4) ಈ ವಚನವು ಬೈಬಲನ್ನು ನಮ್ಮ ಪ್ರಯೋಜನಕ್ಕಾಗಿ ಬರೆಯಲಾಗಿತ್ತೆಂಬ ಮಾತನ್ನು ನೆನಪಿಗೆ ತರುತ್ತದೆ. ಆದರೆ ಇದರಿಂದ ಬರೇ ನಮಗೆ ಪ್ರಯೋಜನವಾಗಿಲ್ಲ. ಅವುಗಳಲ್ಲಿರುವ ಪ್ರೇರಿತ ಮಾತುಗಳು ದೇವಜನರು ಸೀನಾಯಿ ಅರಣ್ಯದಲ್ಲಿದ್ದಾಗ, ವಾಗ್ದತ್ತ ದೇಶದಲ್ಲಿದ್ದಾಗ, ಬಾಬೆಲಿನಲ್ಲಿ ಬಂಧಿಗಳಾಗಿದ್ದಾಗ, ರೋಮನ್‌ ಸಾಮ್ರಾಜ್ಯದಲ್ಲಿದ್ದಾಗ 3,500ಕ್ಕಿಂತಲೂ ಹೆಚ್ಚು ವರ್ಷಗಳಿಂದ ಅವರನ್ನು ನಿರ್ದೇಶಿಸಿದೆ, ಸಲಹೆಕೊಟ್ಟಿದೆ ಮತ್ತು ತಿದ್ದುಪಾಟನ್ನೂ ನೀಡಿದೆ. ಈಗಲೂ ಅದನ್ನೇ ಭೂವ್ಯಾಪಕವಾಗಿ ಮಾಡುತ್ತಿದೆ. ಬೇರಾವ ಪುಸ್ತಕವೂ ಹಾಗೆ ಮಾಡಿಲ್ಲ. ಸೇಬಿನ ಮರದ ಬೇರುಗಳಂತೆಯೇ ಬೈಬಲಿನ ಕೆಲವೊಂದು ಭಾಗಗಳ ಮೌಲ್ಯವನ್ನು ಕೂಡಲೇ ನೋಡಲು ಆಗಲಿಕ್ಕಿಲ್ಲ. ಆದರೆ ಪ್ರಯತ್ನಿಸುವಲ್ಲಿ ಅಪಾರ ಪ್ರತಿಫಲ ಸಿಗುವುದು ಖಂಡಿತ! (g10-E 03)

ನೀವೇನು ಹೇಳುತ್ತೀರಿ?

● ತಿಮೊಥೆಯನಿಗೆ ಎಂದಿನಿಂದ ‘ಪವಿತ್ರ ಬರಹಗಳು’ ತಿಳಿದಿದ್ದವು?—2 ತಿಮೊಥೆಯ 3:15.

● ಬೈಬಲಿನ ಯಾವ ಭಾಗಗಳು ದೇವರಿಂದ ಪ್ರೇರಿತವಾಗಿವೆ ಮತ್ತು ಉಪಯುಕ್ತವಾಗಿವೆ?—2 ತಿಮೊಥೆಯ 3:16.

● ‘ಪೂರ್ವದಲ್ಲಿ ಬರೆದಿರುವ ಎಲ್ಲ ವಿಷಯಗಳಿಂದ’ ನಾವು ಹೇಗೆ ಪ್ರಯೋಜನ ಪಡೆಯಬಲ್ಲೆವು?—ರೋಮನ್ನರಿಗೆ 15:4.

[ಪುಟ 25ರಲ್ಲಿರುವ ಚಿತ್ರಗಳು]

ಯಜ್ಞಗಳ ಬಗ್ಗೆ ಬೈಬಲಿನಲ್ಲಿರುವ ವಿವರಗಳು ಯೇಸು ಕೊಟ್ಟ ಯಜ್ಞಕ್ಕಾಗಿ ನಮ್ಮ ಮಾನ್ಯತೆಯನ್ನು ಹೆಚ್ಚಿಸುತ್ತವೆ