ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸ್ವಲ್ಪ ಏಕಾಂತ ಬಯಸುವುದು ತಪ್ಪಾ?

ಸ್ವಲ್ಪ ಏಕಾಂತ ಬಯಸುವುದು ತಪ್ಪಾ?

ಯುವ ಜನರು ಪ್ರಶ್ನಿಸುವುದು

ಸ್ವಲ್ಪ ಏಕಾಂತ ಬಯಸುವುದು ತಪ್ಪಾ?

ಕೆಳಗಿನ ಸನ್ನಿವೇಶಗಳಲ್ಲಿ ಏನು ಹೇಳುತ್ತಿದ್ದಿರಿ ಎಂಬದಕ್ಕೆ ✓ ಹಾಕಿ.

1. ನಿಮ್ಮ ಕೋಣೆಯ ಬಾಗಿಲನ್ನು ಮುಚ್ಚಿ ಒಳಗಿದ್ದೀರಿ. ತಂಗಿಯೋ ತಮ್ಮನೋ ಬಾಗಿಲು ತಟ್ಟದೆ ಒಳಗೆ ನುಗ್ಗುತ್ತಾರೆ.

❍ ‘ಪರ್ವಾಗಿಲ್ಲ . . . ನಾನೂ ಅದನ್ನೇ ಮಾಡುತ್ತೇನೆ.’

❍ ‘ಅಬ್ಬಾ! ಸ್ವಲ್ಪನೂ ಶಿಸ್ತಿಲ್ಲ. ನಾನೊಂದು ವೇಳೆ ಬಟ್ಟೆ ಬದಲಾಯಿಸುತ್ತಿದ್ದರೆ. . .’

2. ನಿಮ್ಮ ಫ್ರೆಂಡ್‌ ಜೊತೆ ಫೋನಲ್ಲಿ ಮಾತಾಡುವಾಗ ಅಮ್ಮ ಸ್ವಲ್ಪ ದೂರದಲ್ಲೇ ನಿಂತು ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದಾರೆ.

❍ ‘ಪರ್ವಾಗಿಲ್ಲ . . . ಮುಚ್ಚಿಡುವಂಥ ವಿಷಯ ಏನೂ ಇಲ್ಲ.’

❍ ‘ತುಂಬ ಬೇಜಾರಾಗುತ್ತದೆ. ನನ್ನ ಬಗ್ಗೆ ಪತ್ತೇದಾರಿ ಕೆಲಸ ಮಾಡುತ್ತಿರುವ ಹಾಗಿದೆ.’

3. ಮನೆಯೊಳಗೆ ಕಾಲಿಟ್ಟಿದ್ದೀರಿ ಅಷ್ಟೆ. “ಎಲ್ಲಿಗೆ ಹೋಗಿದ್ದೆ?” “ಏನು ಮಾಡ್ತಿದ್ದೆ?” “ಯಾರ ಜೊತೆ ಹೋಗಿದ್ದೆ?” ಎಂದು ಅಪ್ಪಅಮ್ಮ ಇಬ್ಬರೂ ಪ್ರಶ್ನೆಗಳ ಬಾಣಗಳನ್ನು ಎಸೆಯುತ್ತಾರೆ.

❍ ‘ಪರ್ವಾಗಿಲ್ಲ. . . ಹೇಗಿದ್ದರೂ ನಾನು ಅವರಿಗೆ ಎಲ್ಲವನ್ನೂ ಹೇಳುತ್ತೇನಲ್ಲ.’

❍ ‘ಉಸಿರುಗಟ್ಟುವ ಹಾಗಿದೆ! ಅಪ್ಪಅಮ್ಮಗೆ ನನ್ನ ಮೇಲೆ ಸ್ವಲ್ಪನೂ ನಂಬಿಕೆ

ಚಿಕ್ಕವರಿದ್ದಾಗ ನಿಮಗೆ ಏಕಾಂತ ಬೇಕೆಂದು ಅನಿಸಿರಲಿಕ್ಕಿಲ್ಲ. ನಿಮ್ಮ ತಮ್ಮನೋ ತಂಗಿಯೋ ಹೇಳದೆ ಕೇಳದೆ ನಿಮ್ಮ ಕೋಣೆಗೆ ನುಗ್ಗಿದಾಗ ನಿಮಗೇನೂ ಬೇಜಾರಾಗುತ್ತಿರಲಿಲ್ಲ. ಅಪ್ಪಅಮ್ಮ ಏನಾದರೂ ಕೇಳಿದರೆ ಏನನ್ನೂ ಮುಚ್ಚಿಡದೆ ಎಲ್ಲ ಹೇಳಿಬಿಡುತ್ತಿದ್ದಿರಿ. ನಿಮ್ಮ ಜೀವನ ತೆರೆದ ಪುಸ್ತಕದಂತಿತ್ತು. ಆದರೆ ಈಗ ಅದರ ಕೆಲವೊಂದು ಪುಟಗಳನ್ನು ಯಾರೂ ಓದಬಾರದೆಂದು, ನಿಮ್ಮ ಏಕಾಂತ ಭಂಗವಾಗುತ್ತಿದೆ ಎಂದು ನಿಮಗೆ ಅನಿಸುತ್ತಿದೆ. 14ರ ಹರೆಯದ ಕಿರಣ್‌ಗೂ * ಹೀಗೇ ಅನಿಸಿದೆ. “ಕೆಲವು ವಿಷಯಗಳನ್ನು ಯಾರಿಗೂ ತಿಳಿಸದಿರಲು ನನಗಿಷ್ಟ” ಎನ್ನುತ್ತಾನೆ ಅವನು.

ಇದ್ದಕ್ಕಿದ್ದ ಹಾಗೆ ಏಕಾಂತ ಬೇಕೆಂದು ನಿಮಗೆ ಅನಿಸುವುದೇಕೆ? ನೀವು ದೊಡ್ಡವರಾಗುತ್ತಿರುವುದೇ ಅದಕ್ಕೆ ಒಂದು ಕಾರಣ. ಉದಾಹರಣೆಗೆ ಹದಿಹರೆಯದಲ್ಲಿ ನಿಮ್ಮಲ್ಲಾಗುವ ದೈಹಿಕ ಬದಲಾವಣೆಗಳಿಂದಾಗಿ ನಿಮಗೆ ಮುಜುಗರ ಆಗುತ್ತಿರಬಹುದು. ಮನೆಯವರ ಮುಂದೆಯೂ ಹಾಗಾಗುತ್ತಿರಬಹುದು. ಅಲ್ಲದೆ ಈಗೀಗ ಕೆಲವು ವಿಷಯಗಳ ಬಗ್ಗೆ ನಿಮ್ಮಷ್ಟಕ್ಕೆ ಕೂತು ಆಲೋಚಿಸಲು ನೀವು ಇಷ್ಟಪಡಬಹುದು. ಇದು, ನೀವೀಗ “ಬುದ್ಧಿ” ಅಂದರೆ ಯೋಚನಾ ಸಾಮರ್ಥ್ಯವನ್ನು ಬೆಳೆಸಿಕೊಳ್ಳುತ್ತಿದ್ದೀರಿ ಎಂದು ತೋರಿಸುತ್ತದೆ. ಇಂಥ ಸಾಮರ್ಥ್ಯವುಳ್ಳ ಯುವ ವ್ಯಕ್ತಿಯನ್ನು ಬೈಬಲ್‌ ಪ್ರಶಂಸಿಸುತ್ತದೆ ಕೂಡ. (ಜ್ಞಾನೋಕ್ತಿ 1:1, 4; ಧರ್ಮೋಪದೇಶಕಾಂಡ 32:29) ಯೇಸು ಸಹ ‘ಏಕಾಂತವಾದ ಒಂದು ಸ್ಥಳಕ್ಕೆ’ ಹೋಗಿ ಗಾಢವಾಗಿ ಆಲೋಚಿಸುತ್ತಿದ್ದನು.—ಮತ್ತಾಯ 14:13.

ಹೀಗಿದ್ದರೂ ನೀವೀಗಲೂ ನಿಮ್ಮ ಹೆತ್ತವರ ಅಧಿಕಾರದ ಕೆಳಗಿದ್ದೀರಿ. ಆದ್ದರಿಂದ ನಿಮ್ಮ ಜೀವನದಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುದನ್ನು ತಿಳಿಯುವ ಹಕ್ಕು ಅವರಿಗಿದೆ. (ಎಫೆಸ 6:1) ಒಂದು ಕಡೆ ನೀವು ದೊಡ್ಡವರಾಗುತ್ತಾ ಏಕಾಂತ ಬಯಸುತ್ತೀರಿ, ಇನ್ನೊಂದು ಕಡೆ ಹೆತ್ತವರು ಎಲ್ಲವನ್ನು ತಿಳಿಯಲು ಬಯಸುತ್ತಾರೆ. ಘರ್ಷಣೆಯಾಗುವುದು ಇಲ್ಲೇ. ಈ ಸವಾಲನ್ನು ಹೇಗೆ ಎದುರಿಸುವಿರಿ? ಸಮಸ್ಯೆಗಳು ಏಳುವ ಎರಡು ಕ್ಷೇತ್ರಗಳನ್ನು ಪರಿಗಣಿಸೋಣ.

ನೀವು ಏಕಾಂತ ಬಯಸುವ ಸಂದರ್ಭಗಳು

ಅನೇಕ ಸಂದರ್ಭಗಳಲ್ಲಿ ನಿಮಗೆ ಏಕಾಂತ ಬೇಕು ಎಂದು ತೋಚಬಹುದು. ಇದಕ್ಕೆ ಸೂಕ್ತ ಕಾರಣಗಳೂ ಇರಬಹುದು. ಬಹುಶಃ ನಿಮಗೆ ‘ತುಸು ದಣಿವಾರಿಸಿಕೊಳ್ಳಬೇಕು.’ (ಮಾರ್ಕ 6:31) ಅಥವಾ ಯೇಸು ತನ್ನ ಶಿಷ್ಯರಿಗೆ ಸಲಹೆಯಿತ್ತಂತೆ ‘ಖಾಸಗಿ ಕೋಣೆಯೊಳಗೆ ಹೋಗಿ ಬಾಗಿಲು ಮುಚ್ಚಿ ಪ್ರಾರ್ಥನೆಮಾಡಲು’ ನೀವು ಬಯಸಬಹುದು. (ಮತ್ತಾಯ 6:6; ಮಾರ್ಕ 1:35) ಆದರೆ ಸಮಸ್ಯೆಯೇನೆಂದರೆ ನಿಮ್ಮ ಕೋಣೆಯ ಬಾಗಿಲು ಮುಚ್ಚಿದರೆ ನೀವು ಪ್ರಾರ್ಥಿಸುವುದನ್ನು ಬಿಟ್ಟು ಬೇರೇನೋ ಮಾಡುತ್ತಿದ್ದೀರೆಂದು ಹೆತ್ತವರಿಗನಿಸುತ್ತದೆ! ಅಷ್ಟೇ ಅಲ್ಲ ನೀವು ಸುಮ್‌ಸುಮ್ಮನೆ ಬಾಗಿಲು ಹಾಕಿಕೊಂಡು ಒಬ್ಬರೇ ಯಾಕೆ ಕೋಣೆಯೊಳಗೆ ಇದ್ದೀರಿ ಎಂದು ನಿಮ್ಮ ತಮ್ಮನಿಗೋ ತಂಗಿಗೋ ಅರ್ಥವಾಗುವುದಿಲ್ಲ.

ನೀವೇನು ಮಾಡಬೇಕು? ನಿಮ್ಮ ಕೋಣೆಯನ್ನು ರಣರಂಗವನ್ನಾಗಿ ಮಾಡುವ ಬದಲು ಕೆಳಗೆ ಕೊಟ್ಟ ಸಲಹೆಗಳನ್ನು ಪಾಲಿಸಿನೋಡಿ.

● ಮೊದಲು ನಿಮ್ಮ ಒಡಹುಟ್ಟಿದವರನ್ನು ತಕ್ಕೊಳ್ಳೋಣ. ನಿಮಗೆಷ್ಟು ಸಮಯ ಏಕಾಂತವಾಗಿರಬೇಕು ಎಂಬ ವಿಷಯದಲ್ಲಿ ಹಿತಮಿತವಾದ ಕೆಲವು ರೂಲ್ಸ್‌ ಮಾಡಿ. ಬೇಕಾದರೆ ಅಪ್ಪಅಮ್ಮನ ಸಹಾಯ ತಕ್ಕೊಳ್ಳಿ.

● ಇನ್ನು ನಿಮ್ಮ ಹೆತ್ತವರ ವಿಷಯಕ್ಕೆ ಬರೋಣ. ಅವರ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. “ನಾನು ಎಲ್ಲಿದ್ದೇನೆ, ಏನು ಮಾಡ್ತಾ ಇದ್ದೇನೆ ಎಂದು ನನ್ನ ಹೆತ್ತವರು ಕೆಲವೊಮ್ಮೆ ಚೆಕ್‌ ಮಾಡುತ್ತಿರುತ್ತಾರೆ. ನಿಜ ಹೇಳಬೇಕೆಂದರೆ ಒಂದುವೇಳೆ ನಾನು ತಾಯಿಯಾಗಿದ್ದರೆ ಅದನ್ನೇ ಮಾಡುತ್ತಿದ್ದೆ. ವಿಶೇಷವಾಗಿ ಇಂದು ಹದಿಹರೆಯದವರು ಎದುರಿಸುತ್ತಿರುವ ಸಮಸ್ಯೆಗಳನ್ನು ನೋಡಿದರೆ ಹಾಗೆ ಮಾಡಲೇ ಬೇಕಾಗುತ್ತದೆ” ಎಂದು 16 ವರ್ಷದ ರೇಖಾ ಹೇಳುತ್ತಾಳೆ. ಅದೇ ರೀತಿಯಲ್ಲಿ ಹೆತ್ತವರು ನಿಮ್ಮನ್ನು ‘ಯಾಕೆ? ಏನು?’ ಎಂದೆಲ್ಲ ವಿಚಾರಿಸುವಾಗ ಅದರ ಹಿಂದಿರುವ ಕಾರಣಗಳನ್ನು ಅರ್ಥಮಾಡಿಕೊಳ್ಳುತ್ತೀರಾ?—ಜ್ಞಾನೋಕ್ತಿ 19:11.

● ನಿಮ್ಮನ್ನೇ ಸತ್ಯವಾಗಿ ಕೇಳಿಕೊಳ್ಳಿ: ‘ನಾನು ಕೋಣೆಯ ಬಾಗಿಲು ಮುಚ್ಚಿಕೊಂಡು ಏನೋ ಕಿತಾಪತಿ ನಡೆಸುತ್ತಿದ್ದೇನೆಂದು ಹೆತ್ತವರು ಸಂಶಯಪಡಲು ನಾನೇ ಕಾರಣನೋ? ನಾನು ಎಲ್ಲವನ್ನೂ ಗುಟ್ಟಾಗಿಡುವುದರಿಂದ ನನ್ನ ಬಗ್ಗೆ ತಿಳಿಯಲು ಹೆತ್ತವರು ಬೇರೆ ವಿಧಾನಗಳನ್ನು ಬಳಸಬೇಕಾಗುತ್ತದೋ?’ ಸಾಮಾನ್ಯವಾಗಿ ಹೆತ್ತವರೊಂದಿಗೆ ನೀವೆಷ್ಟು ಹೃದಯ ಬಿಚ್ಚಿ ಮಾತಾಡುತ್ತೀರೋ ಅವರೂ ನಿಮ್ಮ ಮೇಲೆ ಅಷ್ಟೇ ಭರವಸೆ ಇಡುತ್ತಾರೆ. *

ಕ್ರಿಯೆಯಲ್ಲಿ. . . ಇದರ ಬಗ್ಗೆ ಅಪ್ಪಅಮ್ಮನ ಹತ್ತಿರ ಹೇಗೆ ಮಾತು ಆರಂಭಿಸುವಿರಿ ಎಂದು ಕೆಳಗೆ ಬರೆಯಿರಿ.

.....

ನಿಮ್ಮ ಸ್ನೇಹಿತರು

ನಿಮ್ಮ ಮನೆಯವರಲ್ಲದೆ ಹೊರಗೆ ಇತರರೊಂದಿಗೂ ನೀವು ಸ್ನೇಹ ಬೆಳೆಸುವುದು ಹದಿಹರೆಯದಲ್ಲಿ ಸಹಜ. ಹಾಗೆಯೇ ನಿಮ್ಮ ಸ್ನೇಹಿತರು ಯಾರು, ಅವರೊಂದಿಗೆ ನೀವು ಏನೇನು ಮಾಡುತ್ತೀರೆಂದು ನಿಮ್ಮ ಹೆತ್ತವರು ತಿಳಿಯಲಿಚ್ಛಿಸುವುದೂ ಸಹಜವೇ. ಅದು ಅವರ ಕರ್ತವ್ಯವೂ ಹೌದು. ಆದರೆ ನಿಮಗಂತೂ ಹೆತ್ತವರ ಚಿಂತೆ ಅತಿಯಾಯ್ತು ಎಂದು ಅನಿಸಬಹುದು. “ನಾನು ಸೆಲ್‌ ಫೋನ್‌, ಇ-ಮೇಲ್‌ ಬಳಸುತ್ತಿರುವಾಗೆಲ್ಲ ನನ್ನ ಹೆತ್ತವರು ಹತ್ತು ನಿಮಿಷಕ್ಕೊಮ್ಮೆ ಬಂದು ನಾನು ಯಾರೊಂದಿಗೆ ಮಾತಾಡುತ್ತಿದ್ದೇನೆಂದು ಕೇಳ್ತಾ ಇರಬಾರದು. ನನಗೆ ಅದೇ ಬೇಕು” ಎಂದು 16 ವರ್ಷದ ಆಶಾ ಹೇಳುತ್ತಾಳೆ.

ನೀವೇನು ಮಾಡಬೇಕು? ನಿಮ್ಮ ಸ್ನೇಹಿತರಿಂದಾಗಿ ನಿಮ್ಮ ಮತ್ತು ಹೆತ್ತವರ ಮಧ್ಯೆ ಸಮಸ್ಯೆಗಳೇಳದಿರಲು ಹೀಗೆ ಮಾಡಬಹುದು.

● ಹೆತ್ತವರಿಗೆ ನಿಮ್ಮ ಸ್ನೇಹಿತರು ಯಾರೆಂದು ಮುಚ್ಚುಮರೆಯಿಲ್ಲದೆ ಹೇಳಿ ಅವರ ಪರಿಚಯಮಾಡಿಸಿ. ನಿಮ್ಮ ಸ್ನೇಹಿತರನ್ನು ಗುಟ್ಟಾಗಿಡುವಲ್ಲಿ ಹೆತ್ತವರು ಪತ್ತೆದಾರಿ ಕೆಲಸಮಾಡದೆ ಬೇರಾವ ದಾರಿಯಿದೆ ಹೇಳಿ? ನೆನಪಿಡಿ, ಸ್ನೇಹಿತರು ನಿಮ್ಮ ಮೇಲೆ ಬಹಳಷ್ಟು ಪ್ರಭಾವಬೀರುತ್ತಾರೆಂದು ಹೆತ್ತವರಿಗೆ ತಿಳಿದಿದೆ. (1 ಕೊರಿಂಥ 15:33) ನಿಮ್ಮ ಸ್ನೇಹಿತರ ಬಗ್ಗೆ ಹೆತ್ತವರಿಗೆ ಎಷ್ಟು ಹೆಚ್ಚು ತಿಳಿಸುತ್ತೀರೋ ಅವರ ಚಿಂತೆಯೂ ಅಷ್ಟೇ ಕಡಿಮೆಯಾಗುವುದು.

● ಈ ವಿಷಯದ ಬಗ್ಗೆ ಹೆತ್ತವರೊಂದಿಗೆ ಗೌರವಪೂರ್ವಕವಾಗಿ ಮಾತಾಡಿ. ನಿಮ್ಮ ವಿಷಯದಲ್ಲಿ ಮೂಗು ತೂರಿಸುತ್ತಿದ್ದಾರೆಂದು ಆರೋಪಿಸಬೇಡಿ. ಅದರ ಬದಲು, “ಸ್ನೇಹಿತರೊಂದಿಗೆ ನಾನಾಡುವ ಒಂದೊಂದು ಮಾತನ್ನು ಕೇಳಿಸಿಕೊಂಡು ಏನೇನೊ ಕಲ್ಪಿಸಿಕೊಳ್ಳುತ್ತೀರೆಂದು ನನಗನಿಸುತ್ತದೆ. ಆದ್ದರಿಂದ ನನಗೆ ಅವರೊಂದಿಗೆ ಸಣ್ಣಪುಟ್ಟ ವಿಷಯಗಳನ್ನು ಮಾತಾಡಲೂ ತುಂಬ ಕಷ್ಟವಾಗುತ್ತದೆ” ಎಂದು ಹೇಳಿ ನೋಡಿ. ಆಗ ಹೆತ್ತವರು ನಿಮಗೆ ಈ ವಿಷಯದಲ್ಲಿ ಇನ್ನು ಹೆಚ್ಚಿನ ಏಕಾಂತ ಕೊಡಬಹುದು.—ಜ್ಞಾನೋಕ್ತಿ 16:23.

● ನಿಮಗೆ ನಿಜವಾಗಿಯೂ ಬೇಕಾಗಿರುವುದು ಏಕಾಂತವೋ ಅಥವಾ ಏನಾದರೂ ಗುಟ್ಟಾಗಿಡಲು ಪ್ರಯತ್ನಿಸುತ್ತಿದ್ದೀರೋ ಎಂದು ಮೊದಲು ನೀವೇ ಕೇಳಿಕೊಳ್ಳಿ. “ನೀವು ಹೆತ್ತವರೊಂದಿಗೆ ವಾಸಿಸುತ್ತಿರುವಲ್ಲಿ, ನಿಮಗೆ ಸಂಬಂಧಪಟ್ಟ ಯಾವುದೋ ವಿಷಯದ ಬಗ್ಗೆ ಅವರು ಚಿಂತೆ ವ್ಯಕ್ತಪಡಿಸಬಹುದು. ನೀವೇನೂ ತಪ್ಪು ಕೆಲಸಮಾಡದಿದ್ದರೆ ನಿಮ್ಮ ವರ್ತನೆಗೆ ಕಾರಣವೇನೆಂಬುದನ್ನು ಮುಚ್ಚಿಡದೆ ವಿವರಿಸುವಿರಿ. ಆದರೆ ಒಂದುವೇಳೆ ನೀವೇನಾದರೂ ಮುಚ್ಚಿಡಲು ಪ್ರಯತ್ನಿಸುತ್ತಿರುವಲ್ಲಿ ಏನೋ ತಪ್ಪು ನಡೆಯುತ್ತಿದೆ ಎಂದರ್ಥ” ಎನ್ನುತ್ತಾಳೆ 22 ವರ್ಷದ ಬೃಂದಾ.

ಕ್ರಿಯೆಯಲ್ಲಿ. . . ಇದರ ಬಗ್ಗೆ ಅಪ್ಪಅಮ್ಮನ ಹತ್ತಿರ ಹೇಗೆ ಮಾತು ಆರಂಭಿಸುವಿರಿ ಎಂದು ಕೆಳಗೆ ಬರೆಯಿರಿ.

.....

ಏಕಾಂತ ಬೇಕಾದರೆ ಏನು ಮಾಡಬೇಕು?

ಯಾವ ವಿಷಯದಲ್ಲಿ ನಿಮಗೆ ಏಕಾಂತ ಬೇಕು ಎಂದು ನಿರ್ಧರಿಸಲು ಈ ಕೆಳಗಿನವುಗಳು ನಿಮಗೆ ಸಹಾಯಮಾಡಬಲ್ಲವು.

ಹೆಜ್ಜೆ 1: ಸಮಸ್ಯೆಯನ್ನು ಗುರುತಿಸಿ.

ಯಾವ ವಿಷಯದಲ್ಲಿ ನಿಮಗೆ ಏಕಾಂತ ಬೇಕು ಎಂದನಿಸುತ್ತದೆ?

.....

ಹೆಜ್ಜೆ 2: ಹೆತ್ತವರ ದೃಷ್ಟಿಕೋನವನ್ನು ಗಣನೆಗೆ ತೆಗೆದುಕೊಳ್ಳಿ.

ನಿಮ್ಮನ್ನು ‘ಯಾಕೆ? ಏನು?’ ಎಂದು ವಿಚಾರಿಸುವಾಗ ಅದರ ಹಿಂದಿರುವ ಕಾರಣವೇನೆಂದು ನೆನಸುತ್ತೀರಿ?

.....

ಹೆಜ್ಜೆ 3: ಪರಿಹಾರ ಹುಡುಕಿ.

(ಎ) ನಿಮಗರಿವಿಲ್ಲದೆ ನೀವು ಸಮಸ್ಯೆಗೆ ಕಾರಣರಾಗುತ್ತಿರಬಹುದಾದ ಒಂದು ವಿಧವನ್ನು ಕೆಳಗೆ ಬರೆಯಿರಿ.

.....

(ಬಿ) ಇದನ್ನು ಸರಿಪಡಿಸಲು ಯಾವ ಬದಲಾವಣೆ ಮಾಡಬಲ್ಲಿರಿ?

.....

(ಸಿ) ನಿಮಗೆ ಹೆತ್ತವರ ಬಗ್ಗೆ ಇರುವ ದೂರುಗಳನ್ನು ಅವರು ಹೇಗೆ ದೂರಮಾಡಬೇಕೆಂದು ಇಷ್ಟಪಡುತ್ತೀರಿ?

.....

ಹೆಜ್ಜೆ 4: ಮುಚ್ಚುಮರೆಯಿಲ್ಲದೆ ಮಾತಾಡಿ.

ಮೇಲೆ ಬರೆದಿರುವ ವಿಷಯಗಳ ಬಗ್ಗೆ ಸೂಕ್ತ ಸಮಯದಲ್ಲಿ ಹೆತ್ತವರೊಂದಿಗೆ ಮಾತಾಡಿ. (g10-E 03)

“ಯುವ ಜನರು ಪ್ರಶ್ನಿಸುವುದು” ಲೇಖನಮಾಲೆಯ ಹೆಚ್ಚಿನ ಲೇಖನಗಳು www.watchtower.org/ype ವೆಬ್‌ಸೈಟ್‌ನಲ್ಲಿವೆ

[ಪಾದಟಿಪ್ಪಣಿಗಳು]

^ ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.

^ ಹೀಗೆ ಮಾಡಿದರೂ ಹೆತ್ತವರು ನಿಮ್ಮನ್ನು ನಂಬುತ್ತಿಲ್ಲವೆಂದು ನಿಮಗನಿಸುತ್ತಿದೆಯಾ? ಹಾಗಿದ್ದರೆ ಈ ಬಗ್ಗೆ ನಿಮಗೆ ಹೇಗನಿಸುತ್ತದೆಂದು ಅವರೊಂದಿಗೆ ಕೂತು ಶಾಂತವಾಗಿ ಗೌರವಪೂರ್ವಕವಾಗಿ ಮಾತಾಡಿ. ಅವರು ತಮ್ಮ ಚಿಂತೆಗಿರುವ ಕಾರಣಗಳನ್ನು ಹೇಳುವಾಗ ಗಮನಕೊಟ್ಟು ಕೇಳಿ. ಈ ಸಮಸ್ಯೆಗೆ ಕಾರಣವಾಗುವಂಥ ಯಾವುದನ್ನೂ ನೀವು ಮಾಡುತ್ತಿಲ್ಲವೆಂದು ಖಚಿತಪಡಿಸಿಕೊಳ್ಳಿ.—ಯಾಕೋಬ 1:19.

ಯೋಚಿಸಿ

● ನಿಮ್ಮ ಜೀವನದ ಬಗ್ಗೆ ತಿಳಿಯುವ ಹಕ್ಕು ಹೆತ್ತವರಿಗಿದೆ ಏಕೆ?

● ಹೆತ್ತವರೊಂದಿಗೆ ಮಾತಾಡಲು ಬೆಳೆಸಿಕೊಳ್ಳುವ ಕೌಶಲವು ಮುಂದೆ ಇತರ ವಯಸ್ಕರೊಂದಿಗೆ ಸಂವಾದಿಸಲು ನಿಮಗೆ ಹೇಗೆ ನೆರವಾಗಬಲ್ಲದು?

[ಪುಟ 10ರಲ್ಲಿರುವ ಚೌಕ/ಚಿತ್ರ]

ನಿಮ್ಮ ಸಮಪ್ರಾಯದವರು ಹೇಳುವುದು

“ಯುವ ಜನರು ಹೆತ್ತವರೊಂದಿಗೆ ಮುಕ್ತವಾಗಿ ಮಾತಾಡಿದರೆ ಹೆತ್ತವರು ತಮ್ಮ ಮಕ್ಕಳ ಬದುಕಿನಲ್ಲಿ ಏನು ನಡೆಯುತ್ತಿದೆ ಎಂದು ತಿಳಿಯಲು ಅವರ ಇ-ಮೇಲ್‌, ಮೊಬೈಲ್‌ ಚೆಕ್‌ ಮಾಡಬೇಕಾಗುವುದಿಲ್ಲ.”

“ಹೆತ್ತವರು ನನ್ನ ಇ-ಮೇಲ್‌ ಓದಿದರೆ ನನಗೇನೂ ಬೇಜಾರಿಲ್ಲ. ಉದ್ಯೋಗಿಗಳ ಇ-ಮೇಲ್‌ ಓದಲು ಬಾಸ್‌ಗೆ ಅಧಿಕಾರ ಇರುವಾಗ ತಮ್ಮ ಮಕ್ಕಳ ಇ-ಮೇಲ್‌ ಓದುವ ಅಧಿಕಾರ ಅಪ್ಪಅಮ್ಮಂದಿರಿಗೆ ಯಾಕಿರಬಾರದು?”

“ನಮಗೇನೂ ಆಗಬಾರದೆಂಬುದು ಹೆತ್ತವರ ಆಶಯ. ಆದರೆ ಕೆಲವೊಮ್ಮೆ ಅವರು ನಮ್ಮ ಏಕಾಂತಭಂಗ ಮಾಡುತ್ತಿದ್ದಾರೆ, ಅದು ಸರಿಯಲ್ಲ ಎಂದನಿಸಬಹುದು. ನಿಜ ಹೇಳಬೇಕೆಂದರೆ ಒಂದುವೇಳೆ ನಾನು ತಾಯಿಯಾಗಿರುತ್ತಿದ್ದರೆ ನಾನೂ ಅದನ್ನೇ ಮಾಡುತ್ತಿದ್ದೆ.”

[ಚಿತ್ರಗಳು]

ಈಡನ್‌

ಕೆವಿನ್‌

ಆ್ಯಲೆನ

[ಪುಟ 13ರಲ್ಲಿರುವ ಚೌಕ]

ಹೆತ್ತವರಿಗೊಂದು ಕಿವಿಮಾತು

● ನಿಮ್ಮ ಮಗ ಬಾಗಿಲು ಮುಚ್ಚಿ ಕೋಣೆಯೊಳಗಿದ್ದಾನೆ. ಬಾಗಿಲು ತಟ್ಟದೆ ಒಳಗೆ ನುಗ್ಗುವಿರೋ?

● ನಿಮ್ಮ ಮಗಳು ಹೊರಡುವ ತರಾತುರಿಯಲ್ಲಿ ಮೊಬೈಲನ್ನು ಮನೆಯಲ್ಲೇ ಬಿಟ್ಟು ಹೋಗಿದ್ದಾಳೆ. ಅದರಲ್ಲಿರುವ ಮೆಸೆಜ್‌ಗಳನ್ನು ತೆರೆದು ಓದುವಿರೋ?

ಈ ಪ್ರಶ್ನೆಗಳನ್ನು ಉತ್ತರಿಸುವುದು ಸ್ವಲ್ಪ ಕಷ್ಟವೇ. ಒಂದು ಕಡೆ ನಿಮ್ಮ ಹದಿಹರೆಯದ ಮಗನ/ಳ ಜೀವನದಲ್ಲಿ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳುವ ಹಕ್ಕು ಮತ್ತು ಅವರನ್ನು ಸಂರಕ್ಷಿಸುವ ಕರ್ತವ್ಯ ನಿಮಗಿದೆ. ಇನ್ನೊಂದು ಕಡೆ ಅವರ ಪ್ರತಿ ಹೆಜ್ಜೆಯನ್ನೂ ಗಮನಿಸಲು ನೆರಳಿನಂತೆ ಸದಾ ಅವರನ್ನು ಹಿಂಬಾಲಿಸಲು ನಿಮ್ಮಿಂದಾಗದು. ಹಾಗಾದರೆ ಈ ವಿಷಯದಲ್ಲಿ ಸಮತೋಲನ ಕಾಪಾಡಲು ನೀವೇನು ಮಾಡಬೇಕು?

ಮೊದಲನೇದಾಗಿ, ಹದಿಹರೆಯದವರು ಏಕಾಂತ ಬಯಸುವುದು ಯಾವಾಗಲೂ ತಪ್ಪಲ್ಲ. ಇದು ಅವರ ಬೆಳವಣಿಗೆಯ ಭಾಗವಾಗಿದೆ. ಅವರಿಗೆ ಬೇಕಾದ ಏಕಾಂತವನ್ನು ಕೊಡುವಾಗ ಅವರು ಸ್ನೇಹಿತರನ್ನು ಮಾಡುವ ಸ್ವಾತಂತ್ರ್ಯ ಪಡೆಯುತ್ತಾರೆ ಮತ್ತು ಸಮಸ್ಯೆಗಳೇಳುವಾಗ ತಮ್ಮ “ವಿವೇಚನಾಶಕ್ತಿ” ಬಳಸಿ ಬಗೆಹರಿಸಲು ಕಲಿಯುತ್ತಾರೆ. (ರೋಮನ್ನರಿಗೆ 12:1, 2) ಅಷ್ಟೇ ಅಲ್ಲ ಒಬ್ಬ ಜವಾಬ್ದಾರಿಯುತ ವಯಸ್ಕನಾಗಲು ಬೇಕಾಗಿರುವ ಯೋಚನಾ ಸಾಮರ್ಥ್ಯ ಎಂಬ ಪ್ರಮುಖ ಗುಣವನ್ನು ಬೆಳೆಸಿಕೊಳ್ಳಲೂ ಏಕಾಂತ ಸಹಾಯಮಾಡುತ್ತದೆ. (1 ಕೊರಿಂಥ 13:11) ತಮ್ಮ ನಂಬಿಕೆ ಮತ್ತು ನೈತಿಕತೆ ಬಗ್ಗೆ ಎದುರಾಗುವ ಪ್ರಶ್ನೆಗಳನ್ನು ಉತ್ತರಿಸಲಿಕ್ಕಾಗುವಂತೆ ಚೆನ್ನಾಗಿ ಯೋಚಿಸಲು ಅವಕಾಶವೂ ಸಿಗುತ್ತದೆ.—ಜ್ಞಾನೋಕ್ತಿ 15:28.

ಎರಡನೇದಾಗಿ, ನಿಮ್ಮ ಹದಿಹರೆಯದ ಮಕ್ಕಳಿಗೆ ಹೆಜ್ಜೆಹೆಜ್ಜೆಗೂ ಏನು ಮಾಡಬೇಕೆಂದು ಹೇಳಿದರೆ ಅವರಲ್ಲಿ ಅಸಮಾಧಾನ ಮತ್ತು ಪ್ರತಿಭಟಿಸುವ ಸ್ವಭಾವ ಹುಟ್ಟಬಹುದು. (ಎಫೆಸ 6:4; ಕೊಲೊಸ್ಸೆ 3:21) ಹಾಗೆಂದು ಮಕ್ಕಳನ್ನು ಅವರ ಪಾಡಿಗೆ ಬಿಟ್ಟುಬಿಟ್ಟು ಸುಮ್ಮನೆ ನೋಡುತ್ತಿರಬೇಕೋ? ಇಲ್ಲ, ನೀವು ಅವರ ಹೆತ್ತವರು. ನಿಮ್ಮ ಗುರಿ ಅವರು ಮನಸ್ಸಾಕ್ಷಿಯನ್ನು ತರಬೇತುಗೊಳಿಸುವಂತೆ ಸಹಾಯಮಾಡುವುದೇ ಆಗಿರಬೇಕು. (ಧರ್ಮೋಪದೇಶಕಾಂಡ 6:6, 7; ಜ್ಞಾನೋಕ್ತಿ 22:6) ಬರೇ ಅವರ ಮೇಲೆ ಕಣ್ಣಿಡುವುದಕ್ಕಿಂತ ಮಾರ್ಗದರ್ಶನ ನೀಡುವುದು ಎಷ್ಟೋ ಒಳ್ಳೇದು.

ಮೂರನೇದಾಗಿ, ನಿಮ್ಮ ಹದಿಹರೆಯದ ಮಗ/ಮಗಳೊಂದಿಗೆ ಈ ವಿಷಯದ ಕುರಿತು ಮಾತಾಡಿ. ಅವನಿಗೆ/ಅವಳಿಗೆ ಏನು ಹೇಳಲಿದೆಯೆಂದು ಕೇಳಿ. ಅವರು ಹೇಳುವ ಕೆಲವು ವಿಷಯಗಳಿಗೆ ನೀವು ಮಣಿಯಬಹುದೋ? (ಫಿಲಿಪ್ಪಿ 4:5) ಎಲ್ಲಿಯ ತನಕ ಅವನು/ಳು ನೀವು ಅವರ ಮೇಲಿಟ್ಟಿರುವ ನಂಬಿಕೆಗೆ ದ್ರೋಹ ಎಸಗುವುದಿಲ್ಲವೋ ಅಲ್ಲಿಯ ವರೆಗೆ ಅವರಿಗೆ ತಕ್ಕಮಟ್ಟಿಗಿನ ಏಕಾಂತ ನೀಡುವಿರೆಂದು ಹೇಳಿ. ಅವರು ಅವಿಧೇಯರಾದರೆ ನೀವೇನು ಮಾಡುವಿರೆಂದು ವಿವರಿಸಿ. ಒಂದುವೇಳೆ ಅವರು ಅವಿಧೇಯರಾದರೆ ಹೇಳಿದಂತೆ ಮಾಡಿ. ಕಾಳಜಿವಹಿಸುವ ಹೆತ್ತವರಾಗಿ ನಿಮಗಿರುವ ಪಾತ್ರವನ್ನು ಬಿಟ್ಟುಕೊಡದೆ ನಿಮ್ಮ ಹದಿಹರೆಯದ ಮಗನಿಗೆ/ಳಿಗೆ ಸ್ವಲ್ಪ ಮಟ್ಟಿಗಿನ ಏಕಾಂತವನ್ನು ಖಂಡಿತ ಕೊಡಬಲ್ಲಿರಿ.

[ಪುಟ 12ರಲ್ಲಿರುವ ಚಿತ್ರ]

ಭರವಸೆಯನ್ನು ಸಂಪಾದಿಸಬೇಕು. ಅದು ನಿಮ್ಮ ಕೆಲಸಕ್ಕೆ ಸಿಗುವ ಸಂಬಳದಂತಿದೆ.