ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾನು ಆತ್ಮಗೌರವವನ್ನು ಹೇಗೆ ಹೆಚ್ಚಿಸಲಿ?

ನಾನು ಆತ್ಮಗೌರವವನ್ನು ಹೇಗೆ ಹೆಚ್ಚಿಸಲಿ?

ಯುವಜನರ ಪ್ರಶ್ನೆ

ನಾನು ಆತ್ಮಗೌರವವನ್ನು ಹೇಗೆ ಹೆಚ್ಚಿಸಲಿ?

ಹೌದು ಇಲ್ಲ

ಕನ್ನಡಿಯಲ್ಲಿ ಕಾಣುವ ನಿಮ್ಮ ಪ್ರತಿಬಿಂಬವನ್ನು ❍ ❍

ಇಷ್ಟಪಡುತ್ತೀರಾ?

ಮೆಚ್ಚಿಕೆಗೆ ಅರ್ಹವಾದ ಕೌಶಲಗಳು ❍ ❍

ನಿಮಗಿವೆ ಎಂದನಿಸುತ್ತದಾ?

ಸಮಪ್ರಾಯದವರ ಒತ್ತಡವನ್ನು ಎದುರಿಸಬಲ್ಲಿರಾ? ❍ ❍

ಸೂಕ್ತವಾದ ಟೀಕೆಟಿಪ್ಪಣಿಗಳನ್ನು ಒಪ್ಪಿಕೊಳ್ಳುತ್ತೀರಾ? ❍ ❍

ನಿಮ್ಮ ಕುರಿತ ಇಲ್ಲಸಲ್ಲದ ಮಾತುಗಳನ್ನು ನಿರ್ಲಕ್ಷಿಸಿಬಿಡುತ್ತೀರಾ? ❍ ❍

ನಿಮ್ಮನ್ನು ಪ್ರೀತಿಸುವವರಿದ್ದಾರೆಂದು ನಿಮಗನಿಸುತ್ತದಾ? ❍ ❍

ನಿಮ್ಮ ಆರೋಗ್ಯ ಚೆನ್ನಾಗಿ ನೋಡಿಕೊಳ್ಳುತ್ತಿದ್ದೀರಾ? ❍ ❍

ಬೇರೆಯವರ ಯಶಸ್ಸು ನೋಡಿ ಸಂತೋಷಪಡುತ್ತೀರಾ? ❍ ❍

ಹೆಚ್ಚಿನ ವಿಷಯಗಳಲ್ಲಿ ಯಶಸ್ಸು ಗಳಿಸಿದ್ದೀರಿ ಎಂದು ಅನಿಸುತ್ತದಾ? ❍ ❍

ಮೇಲಿನವುಗಳಲ್ಲಿ ಹೆಚ್ಚಿನದ್ದಕ್ಕೆ ಇಲ್ಲ ಎಂದುತ್ತರಿಸಿದ್ದಲ್ಲಿ ಇದಕ್ಕೆ ಕಾರಣ ಆತ್ಮಗೌರವದ ಕೊರತೆಯೇ. ಹೀಗಾಗಿ ನಿಮ್ಮ ಸಾಮರ್ಥ್ಯಗಳು ನಿಮಗೇ ಕಾಣಿಸದಿರಬಹುದು. ಆ ಸಾಮರ್ಥ್ಯಗಳನ್ನು ಗುರುತಿಸಲು ಈ ಲೇಖನ ನಿಮಗೆ ನೆರವಾಗುವುದು.

ಹೆಚ್ಚಿನ ಯುವ ಜನರು ತಮ್ಮ ರೂಪ, ಸಾಮರ್ಥ್ಯದ ಬಗ್ಗೆ ಸಂಶಯಪಡುತ್ತಾರೆ. ಇಲ್ಲವೆ ತಮ್ಮನ್ನೇ ಸಮಪ್ರಾಯದವರೊಂದಿಗೆ ಹೋಲಿಕೆ ಮಾಡುತ್ತಿರುತ್ತಾರೆ. ನೀವೂ ಹಾಗೆ ಮಾಡುತ್ತೀರೋ? ಇದು ಸಹಜವೇ, ನಿಮ್ಮಂತೆಯೇ ಅನೇಕರು ಮಾಡುತ್ತಾರೆ.

“ನನಗಿರುವ ಕುಂದುಕೊರತೆಗಳಿಂದಾಗಿ ನನ್ನಲ್ಲಿ ಕೀಳರಿಮೆ ಇದೆ. ನನ್ನ ಬಗ್ಗೆ ನಾನೇ ಟೀಕಿಸಿಕೊಳ್ಳುವುದು ಜಾಸ್ತಿ.”—ಲತೀಷಾ. *

“ನೀವೆಷ್ಟೇ ಸುಂದರವಾಗಿದ್ದರೂ ನೋಡೋದಕ್ಕೆ ನಿಮಗಿಂತ ಚೆನ್ನಾಗಿರುವವರು ಇದ್ದಾರೆಂದು ನಿಮಗನಿಸುತ್ತದೆ.”—ಹಿಮಾನಿ.

“ಬೇರೆಯವರ ಮುಂದೆ ನನಗೆ ತುಂಬ ಮುಜುಗರವಾಗುತ್ತದೆ. ಎಲ್ಲರೂ ನನ್ನನ್ನು ಪ್ರಯೋಜನಕ್ಕೆ ಬಾರದವಳೆಂದು ನೆನಸುತ್ತಾರೆಂಬ ಅಳುಕು ನನಗೆ.”—ರೇಚಲ್‌.

ನಿಮಗೂ ಈ ರೀತಿ ಅನಿಸುತ್ತಿದೆಯಾ? ಚಿಂತಿಸಬೇಡಿ. ನಿಮ್ಮ ಸಹಾಯಕ್ಕೆಂದೇ ಈ ಲೇಖನವಿದೆ. ಇದರಲ್ಲಿ ‘ಆತ್ಮಗೌರವ-ವರ್ಧಕ’ಗಳಾದ ಮೂರು ವಿಷಯಗಳನ್ನು ಕೊಡಲಾಗಿದೆ. ನೀವು ನಿಮ್ಮ ಬಗ್ಗೆ ಸಕಾರಾತ್ಮಕವಾಗಿ ಯೋಚಿಸುವಂತೆ ಅವು ಮಾಡುವವು.

1. ಸ್ನೇಹಿತರನ್ನು ಮಾಡಿಕೊಳ್ಳಿ

ಬೈಬಲ್‌ನ ನುಡಿಮುತ್ತು. “ಮಿತ್ರನ ಪ್ರೀತಿಯು ನಿರಂತರ.”—ಜ್ಞಾನೋಕ್ತಿ 17:17.

ಪ್ರಯೋಜನ? ಕಷ್ಟಕಾಲದಲ್ಲಿ ಒಬ್ಬ ಒಳ್ಳೇ ಮಿತ್ರನು ಆಧಾರಸ್ತಂಭದಂತೆ ಇರುವನು. (1 ಸಮುವೇಲ 18:1; 19:2) ನಮ್ಮ ಬಗ್ಗೆ ಚಿಂತಿಸುವ ಒಬ್ಬ ವ್ಯಕ್ತಿ ಇದ್ದಾರೆಂಬ ಅರಿವು ಮನಕ್ಕೆ ಉಲ್ಲಾಸ ತರುತ್ತದೆ. (1 ಕೊರಿಂಥ 16:17, 18) ಆದ್ದರಿಂದ ನಿಮ್ಮ ಮೇಲೆ ಒಳ್ಳೇ ಪ್ರಭಾವ ಬೀರುವವರೊಂದಿಗೆ ಮಿತ್ರತ್ವ ಬೆಳೆಸಿಕೊಳ್ಳಿ.

“ನಿಜ ಮಿತ್ರರು ನಿಮಗಿರುವ ಕೀಳರಿಮೆಯನ್ನು ಹೊಡೆದೋಡಿಸಲು ಸಹಾಯಮಾಡುತ್ತಾರೆ.”—ದೀಪಕ್‌.

“ನಮ್ಮ ಬಗ್ಗೆ ಕಾಳಜಿವಹಿಸುವ ಒಬ್ಬರಿದ್ದಾರೆ ಎಂದು ತಿಳಿದಿರುವಾಗ ನಾವು ಅಮೂಲ್ಯರು ಎಂಬ ಭಾವನೆ ಮೂಡುತ್ತದೆ.”—ಹಂಸ.

ಎಚ್ಚರಿಕೆ: ಮಿತ್ರರೊಂದಿಗೆ ಹೊಂದಿಕೊಳ್ಳಲಿಕ್ಕಾಗಿ ನಿಮ್ಮ ನಿಜ ವ್ಯಕ್ತಿತ್ವವನ್ನು ಮರೆಮಾಚಿ ಅವರ ತಾಳಕ್ಕೆ ತಕ್ಕಂತೆ ಕುಣಿಯಬೇಡಿ. (ಜ್ಞಾನೋಕ್ತಿ 13:20; 18:24; 1 ಕೊರಿಂಥ 15:33) ಬೇರೆಯವರನ್ನು ಮೆಚ್ಚಿಸಲಿಕ್ಕಾಗಿ ತಿಳಿಗೇಡಿಕೃತ್ಯಗಳಲ್ಲಿ ತೊಡಗಿದರೆ ನಿಮ್ಮ ಕೀಳರಿಮೆ ಇನ್ನೂ ಹೆಚ್ಚಾಗಿ, ಇತರರು ನಿಮ್ಮನ್ನು ತಮ್ಮ ಲಾಭಕ್ಕಾಗಿ ಬಳಸಿಕೊಂಡರೆಂಬ ನೋವೂ ಆಗುವುದು.—ರೋಮನ್ನರಿಗೆ 6:21.

ಈಗ ನಿಮ್ಮ ಸರದಿ. ನಿಮ್ಮ ಆತ್ಮಗೌರವವನ್ನು ಹೆಚ್ಚಿಸಬಲ್ಲ ಒಬ್ಬ ಮಿತ್ರನ ಹೆಸರನ್ನು ಕೆಳಗೆ ಬರೆಯಿರಿ.

.....

ಆ ವ್ಯಕ್ತಿಯೊಂದಿಗೆ ಸ್ವಲ್ಪ ಸಮಯ ಕಳೆಯಲು ಏನಾದರೂ ಏರ್ಪಾಡು ಮಾಡಬಹುದಾ? ಸೂಚನೆ: ಈ ಮಿತ್ರನು ನಿಮ್ಮ ಪ್ರಾಯದವನೇ ಆಗಿರಬೇಕೆಂದಿಲ್ಲ.

2. ಬೇರೆಯವರಿಗೆ ಸಹಾಯಮಾಡಿ

ಬೈಬಲ್‌ನ ನುಡಿಮುತ್ತು. “ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ.”—ಅ. ಕಾರ್ಯಗಳು 20:35.

ಪ್ರಯೋಜನ? ಬೇರೆಯವರಿಗೆ ಸಹಾಯಮಾಡಿದರೆ ನೀವು ನಿಮಗೇ ಸಹಾಯ ಮಾಡಿಕೊಂಡಂತಾಗುತ್ತದೆ. ಹೇಗೆ? “ಉದಾರಿಯು ಪುಷ್ಟನಾಗುವನು; ನೀರು ಹಾಯಿಸುವವನಿಗೆ ನೀರು ಸಿಕ್ಕುವದು” ಎನ್ನುತ್ತದೆ ಬೈಬಲಿನ ಒಂದು ನಾಣ್ಣುಡಿ. (ಜ್ಞಾನೋಕ್ತಿ 11:25) ಈ ಮಾತು ಸತ್ಯ ಏಕೆಂದರೆ ನೀವು ಯಾರಿಗಾದರೂ ಸಹಾಯಮಾಡಿದರೆ ನಿಮ್ಮ ದೃಷ್ಟಿಯಲ್ಲಿ ನೀವೇ ಮೇಲಕ್ಕೇರುತ್ತೀರಿ. *

“ನಮ್ಮ ಸಭೆಯಲ್ಲಿ ಯಾರಿಗಾದರೂ ಸಹಾಯಬೇಕಾ ಎಂದು ನೋಡಿ ಅವರಿಗೆ ನನ್ನಿಂದಾದ ಸಹಾಯಮಾಡುತ್ತೇನೆ. ಅವರಿಗೆ ಪ್ರೀತಿ ತೋರಿಸಿ, ಅವರೊಂದಿಗೆ ಸಮಯಕಳೆಯುವಾಗ ನನಗೆ ತುಂಬ ಹಿತವೆನಿಸುತ್ತದೆ.”—ಭಾಮಿನಿ.

“ಕ್ರೈಸ್ತ ಶುಶ್ರೂಷೆಯು ಒಂದು ವರದಾನ. ಏಕೆಂದರೆ ಅದು ನಾವು ನಮ್ಮ ಬಗ್ಗೆ ಮಾತ್ರ ಯೋಚಿಸುವುದನ್ನು ಬಿಟ್ಟು ಬೇರೆಯವರ ಬಗ್ಗೆ ಯೋಚಿಸುವಂತೆ ಮಾಡುತ್ತದೆ.”—ಜೀವನ್‌.

ಎಚ್ಚರಿಕೆ: ಲಾಭಕ್ಕಾಗಿ ಬೇರೆಯವರಿಗೆ ಸಹಾಯಮಾಡಬಾರದು. (ಮತ್ತಾಯ 6:2-4) ಕೆಟ್ಟ ಇರಾದೆಯಿಟ್ಟು ಸಹಾಯಮಾಡಿದರೆ ನಿಮಗೇನೂ ಸಹಾಯವಾಗದು. ಏಕೆಂದರೆ ಒಬ್ಬ ವ್ಯಕ್ತಿ ಯಾವ ಉದ್ದೇಶದಿಂದ ಸಹಾಯ ಮಾಡುತ್ತಾನೆಂಬುದನ್ನು ಸಾಮಾನ್ಯವಾಗಿ ಜನರು ಗ್ರಹಿಸಬಲ್ಲರು.—1 ಥೆಸಲೊನೀಕ 2:5, 6.

ಈಗ ನಿಮ್ಮ ಸರದಿ. ಹಿಂದೆ ನೀವು ಸಹಾಯಮಾಡಿದ ಒಬ್ಬರನ್ನು ನೆನಪಿಸಿಕೊಳ್ಳಿ. ಅವರ ಹೆಸರೇನು? ಅವರಿಗೆ ಯಾವ ಸಹಾಯ ಮಾಡಿದಿರಿ?

.....

ಸಹಾಯಮಾಡಿದ ಮೇಲೆ ನಿಮಗೆ ಹೇಗನಿಸಿತು?

.....

ನೀವೀಗ ಸಹಾಯಮಾಡಬಲ್ಲ ಒಬ್ಬರ ಹೆಸರನ್ನೂ ಯಾವ ಸಹಾಯ ಮಾಡಬಹುದೆಂಬುದನ್ನೂ ಕೆಳಗೆ ಬರೆಯಿರಿ.

.....

3. ತಪ್ಪುಗಳನ್ನು ಹಿಂದೆಯೇ ಬಿಟ್ಟು ಮುಂದೆ ಸಾಗಿ

ಬೈಬಲ್‌ನ ನುಡಿಮುತ್ತು. “ಎಲ್ಲರೂ ಪಾಪಮಾಡಿದ್ದಾರೆ ಮತ್ತು ದೇವರ ಮಹಿಮೆಯನ್ನು ಹೊಂದಲು ತಪ್ಪಿಹೋಗಿದ್ದಾರೆ.”—ರೋಮನ್ನರಿಗೆ 3:23.

ಪ್ರಯೋಜನ? ಎಲ್ಲರಂತೆ ನೀವೂ ಅಪರಿಪೂರ್ಣರಾಗಿದ್ದು ತಪ್ಪುಗಳನ್ನು ಮಾಡುತ್ತೀರಿ. ಹೀಗಿರುವುದರಿಂದ ನಡೆನುಡಿಯಲ್ಲಿ ತಪ್ಪಾಗುವುದು ಸಹಜ. (ರೋಮನ್ನರಿಗೆ 7:21-23; ಯಾಕೋಬ 3:2) ತಪ್ಪುಮಾಡದೇ ಇರುವುದು ನಿಮ್ಮಿಂದ ಅಸಾಧ್ಯವಾದರೂ ತಪ್ಪಾದ ಮೇಲೆ ಹೇಗೆ ಪ್ರತಿವರ್ತಿಸುವಿರಿ ಎಂಬುದು ನಿಮ್ಮ ಕೈಯಲ್ಲೇ ಇದೆ. “ನೀತಿವಂತನು ಏಳು ಸಾರಿ ಬಿದ್ದರೂ ಮತ್ತೆ ಏಳುತ್ತಾನೆ” ಎಂದು ಹೇಳುತ್ತದೆ ಬೈಬಲ್‌.—ಜ್ಞಾನೋಕ್ತಿ 24:16, NIBV.

“ನಮ್ಮ ದೌರ್ಬಲ್ಯವನ್ನು ಇತರರ ಸಾಮರ್ಥ್ಯದೊಂದಿಗೆ ಹೋಲಿಸಿ ನೋಡುವುದೇ ನಮ್ಮ ಕೀಳರಿಮೆಗೆ ಕೆಲವೊಮ್ಮೆ ಕಾರಣವಾಗಿರುತ್ತದೆ.”—ಕೆವಿನ್‌.

“ಪ್ರತಿಯೊಬ್ಬರಲ್ಲೂ ಒಳ್ಳೇ ಗುಣ ಕೆಟ್ಟ ಗುಣ ಎರಡೂ ಇರುತ್ತದೆ. ನಮ್ಮಲ್ಲಿರುವ ಒಳ್ಳೇ ಗುಣಕ್ಕಾಗಿ ಹೆಮ್ಮೆಪಟ್ಟು ಕೆಟ್ಟ ಗುಣಗಳನ್ನು ತೆಗೆಯಲು ಶ್ರಮಿಸಬೇಕು.”—ಲೋರೆನ್‌.

ಎಚ್ಚರಿಕೆ: ಅಪರಿಪೂರ್ಣತೆಯ ನೆಪಕೊಟ್ಟು ದೇವರಿಗೆ ವಿರುದ್ಧವಾದ ತಪ್ಪನ್ನು ಮಾಡುತ್ತಾ ಇರಬೇಡಿ. (ಗಲಾತ್ಯ 5:13) ಬೇಕುಬೇಕೆಂದೇ ಇಂಥ ತಪ್ಪುಮಾಡಿದರೆ, ಜೀವನದಲ್ಲಿ ಅತಿ ಪ್ರಾಮುಖ್ಯವಾಗಿ ಬೇಕಾದ ಯೆಹೋವ ದೇವರ ಅನುಗ್ರಹವನ್ನು ಕಳಕೊಳ್ಳುವಿರಿ.—ರೋಮನ್ನರಿಗೆ 1:24, 28.

ಈಗ ನಿಮ್ಮ ಸರದಿ. ನೀವು ಬೆಳೆಸಿಕೊಳ್ಳಲು ಇಚ್ಛಿಸುವ ಒಂದು ಗುಣವನ್ನು ಕೆಳಗೆ ಬರೆಯಿರಿ.

.....

ಆ ಗುಣದ ಪಕ್ಕದಲ್ಲೇ ಇವತ್ತಿನ ದಿನಾಂಕವನ್ನೂ ಬರೆಯಿರಿ. ಅದನ್ನು ಬೆಳೆಸಿಕೊಳ್ಳುವುದು ಹೇಗೆಂದು ತಿಳಿಯಲು ಕಾವಲಿನಬುರುಜು ಪ್ರಕಾಶನಗಳಲ್ಲಿ ಸಂಶೋಧನೆ ಮಾಡಿ. ಒಂದು ತಿಂಗಳ ನಂತರ ಎಷ್ಟು ಪ್ರಗತಿ ಮಾಡಿದ್ದೀರೆಂದು ಪರಿಶೀಲಿಸಿ.

ನಿಮ್ಮ ನಿಜ ಮೌಲ್ಯ

“ದೇವರು ನಮ್ಮ ಹೃದಯಗಳಿಗಿಂತ ಹೆಚ್ಚು ಶ್ರೇಷ್ಠನಾಗಿದ್ದಾನೆ” ಎನ್ನುತ್ತದೆ ಬೈಬಲ್‌. (1 ಯೋಹಾನ 3:20) ಅಂದರೆ ನೀವೆಷ್ಟು ಅಮೂಲ್ಯರಾಗಿದ್ದೀರೆಂದು ನಿಮಗೆ ಗೊತ್ತಿಲ್ಲದಿದ್ದರೂ ದೇವರಿಗೆ ಗೊತ್ತಿದೆ. ನಿಮ್ಮಲ್ಲಿ ಕುಂದುಕೊರತೆಗಳಿವೆ ಎಂದಮಾತ್ರಕ್ಕೆ ನಿಮ್ಮ ಮೌಲ್ಯ ಕಡಿಮೆಯಾಗುತ್ತದಾ? ನಿಮ್ಮ ಬಳಿ 100 ರೂಪಾಯಿಯ ನೋಟಿದೆ ಎಂದಿಟ್ಟುಕೊಳ್ಳಿ. ಆದರೆ ಅದು ಒಂದು ಕಡೆ ಹರಿದಿದೆ. ಅಷ್ಟಕ್ಕೇ ಅದನ್ನು ಬಿಸಾಡುವಿರಾ? ಇಲ್ಲ ತಾನೇ? ಏಕೆಂದರೆ ಆ ನೋಟು ಹರಿದಿದ್ದರೂ ಅದರ ಮೌಲ್ಯ ಕಡಿಮೆಯಾಗದು.

ದೇವರ ದೃಷ್ಟಿಯಲ್ಲಿ ನಿಮಗಿರುವ ಮೌಲ್ಯವೂ ಹಾಗೆಯೇ. ದೇವರನ್ನು ಸಂತೋಷಪಡಿಸಲು ನೀವು ಮಾಡುವ ಪ್ರಯತ್ನಗಳು ನಿಮಗೆ ಎಷ್ಟೇ ಕ್ಷುಲ್ಲಕವಾಗಿ ತೋರಿದರೂ ಆತನದನ್ನು ಗಮನಿಸಿ ತುಂಬ ಅಮೂಲ್ಯವೆಂದೆಣಿಸುತ್ತಾನೆ. “ನಿಮ್ಮ ಈ ಕೆಲಸವನ್ನೂ ದೇವರ ಹೆಸರಿಗಾಗಿ ನೀವು ತೋರಿಸಿದ ಪ್ರೀತಿಯನ್ನೂ ಮರೆಯುವುದಕ್ಕೆ ಆತನು ಅನೀತಿವಂತನಲ್ಲ” ಎಂದು ಬೈಬಲ್‌ ನಮಗೆ ಆಶ್ವಾಸನೆ ಕೊಡುತ್ತದೆ.—ಇಬ್ರಿಯ 6:10. (g10-E 05)

“ಯುವ ಜನರ ಪ್ರಶ್ನೆ” ಲೇಖನಮಾಲೆಯ ಹೆಚ್ಚಿನ ಲೇಖನಗಳು www.watchtower.org/ype ವೆಬ್‌ಸೈಟ್‌ನಲ್ಲಿವೆ

[ಪಾದಟಿಪ್ಪಣಿಗಳು]

^ ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.

^ ನೀವು ಯೆಹೋವನ ಸಾಕ್ಷಿಯಾಗಿರುವಲ್ಲಿ ದೇವರ ರಾಜ್ಯದ ಸಂದೇಶವನ್ನು ತಿಳಿಸುವುದರಿಂದ ನಿಮಗೆ ಮಹದಾನಂದ ಸಿಗಬಲ್ಲದು.—ಯೆಶಾಯ 52:7.

ಯೋಚಿಸಿ

ಕೆಳಕಂಡ ಕಾರಣಗಳಿಂದ ಮನಗುಂದಿದಾಗ ಏನು ಮಾಡುವಿರಿ?

● ಸಮಪ್ರಾಯದವರು ನಿಮ್ಮನ್ನು ಹೀಯಾಳಿಸಿದಾಗ

● ನೀವು ಬೇರೆಯವರಷ್ಟು ಒಳ್ಳೆಯವರಲ್ಲ ಎಂದನಿಸಿದಾಗ

● ನಿಮಗೆ ನಿಮ್ಮ ಕುಂದುಕೊರತೆಗಳೇ ಕಣ್ಣಿಗೆ ಬೀಳುವಾಗ

[ಪುಟ 11ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಅಂದವಿರುವ ವ್ಯಕ್ತಿಗೆ ತಾನು ಅಂದವಾಗಿಲ್ಲ ಎಂದನಿಸಬಹುದು, ಅಷ್ಟೇನೂ ಅಂದವಿಲ್ಲದ ವ್ಯಕ್ತಿಗೆ ತನಗಿರುವಷ್ಟು ಸೌಂದರ್ಯ ಬೇರಾರಿಗೂ ಇಲ್ಲ ಎಂದನಿಸಬಹುದು. ಅದೆಲ್ಲ ಅವರವರ ಮನೋಭಾವವಷ್ಟೆ.”—ಅಲಿಸಾ

[ಪುಟ 11ರಲ್ಲಿರುವ ಚೌಕ/ಚಿತ್ರಗಳು]

ನಿಮ್ಮ ಸಮಪ್ರಾಯದವರು ಏನನ್ನುತ್ತಾರೆ?

“ಗಟ್ಟಿಮುಟ್ಟಾದ ಕಟ್ಟಡಕ್ಕೂ ಬೇಕು ಆಧಾರ. ಕೆಲವೊಮ್ಮೆ ರಿಪೇರಿಯೂ ಅಗತ್ಯ. ಹಾಗೆಯೇ ನನ್ನ ಫ್ರೆಂಡ್‌ನ ಅಕ್ಕರೆಯ ಮಾತುಗಳು ಇಲ್ಲವೆ ಮುಗುಳ್ನಗು ಇಲ್ಲವೆ ಅಪ್ಪುಗೆ ನನಗೆ ಆಧಾರ ಕೊಟ್ಟವು.”

“ನಮ್ಮ ಒಳ್ಳೇ ಗುಣಗಳಿಂದ ಬೇರೆಯವರಿಗೆ ಹೇಗೆ ಪ್ರಯೋಜನ ಆಗುತ್ತದೋ ಹಾಗೆಯೇ ಬೇರೆಯವರ ಒಳ್ಳೇ ಗುಣಗಳನ್ನು ನೋಡಿ ‘ಅವು ನಮ್ಮಲ್ಲಿಲ್ಲವಲ್ಲ’ ಎಂದು ಕೊರಗುವ ಬದಲು ಅವುಗಳಿಂದ ನಾವೂ ಪ್ರಯೋಜನ ಪಡೆಯಬೇಕು.”

[ಚಿತ್ರಗಳು]

ಓಬ್ರೆ

ಲೋರೆನ್‌

[ಪುಟ 12ರಲ್ಲಿರುವ ಚಿತ್ರ]

ನೋಟು ಹರಿದರೆ ಅದರ ಮೌಲ್ಯ ಕಡಿಮೆಯಾಗದು. ಹಾಗೆಯೇ ಕುಂದುಕೊರತೆಗಳಿದ್ದ ಮಾತ್ರಕ್ಕೆ ದೇವರ ದೃಷ್ಟಿಯಲ್ಲಿ ನಿಮ್ಮ ಮೌಲ್ಯ ಕಡಿಮೆಯಾಗದು