ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ನಿಮ್ಮನ್ನು ಕೆಲಸದಿಂದ ತೆಗೆದುಹಾಕುತ್ತಿದ್ದೇವೆ”

“ನಿಮ್ಮನ್ನು ಕೆಲಸದಿಂದ ತೆಗೆದುಹಾಕುತ್ತಿದ್ದೇವೆ”

“ನಿಮ್ಮನ್ನು ಕೆಲಸದಿಂದ ತೆಗೆದುಹಾಕುತ್ತಿದ್ದೇವೆ”

ಮ್ಯಾನೇಜ್‌ಮೆಂಟ್‌ನವರು ಅವನನ್ನು ‘ಸೂಪರ್‌ ಸುಪ್ರೀತ್‌’ * ಎಂದೇ ಕರೆಯುತ್ತಿದ್ದರು. ಈ ಕಂಪೆನಿಯಲ್ಲಿ ಅವನು ಕಳೆದ ಆರು ವರ್ಷಗಳಿಂದ ಕೆಲಸಮಾಡುತ್ತಿದ್ದನು. ಅವನು ಕೊಟ್ಟ ಹೊಸ ಹೊಸ ಐಡಿಯಾಗಳಿಂದ ಕಂಪೆನಿಗೆ ತುಂಬ ಹಣ ಉಳಿತಾಯ ಆಗಿತ್ತು. ಆದುದರಿಂದ ಅವನಿಗೆ ನಿರ್ವಾಹಕ ಅಧಿಕಾರಿಯ ಆಫೀಸಿಗೆ ಬರಲು ಕರೆಬಂದಾಗ, ತನ್ನ ಸಂಬಳ ಹೆಚ್ಚಿಸುತ್ತಿದ್ದಾರೆ ಇಲ್ಲವೆ ಬಡತಿ ಕೊಡುತ್ತಿದ್ದಾರೆಂದು ನೆನಸಿ ಸುಪ್ರೀತ್‌ ಲಗುಬಗೆಯಿಂದ ಒಳನಡೆದನು. ಆದರೆ ಆ ಅಧಿಕಾರಿಯು, “ನಿಮ್ಮನ್ನು ಕೆಲಸದಿಂದ ತೆಗೆದುಹಾಕುತ್ತಿದ್ದೇವೆ” ಎಂದು ಕಡ್ಡಿ ಮುರಿದಂತೆ ಹೇಳಿಬಿಟ್ಟನು.

ಸುಪ್ರೀತ್‌ಗೆ ತನ್ನ ಕಿವಿಯನ್ನೇ ನಂಬಲಿಕ್ಕಾಗಲಿಲ್ಲ. “ಆ ಕೆಲಸ ನನಗೆ ತುಂಬ ಇಷ್ಟವಾಗುತ್ತಿತ್ತು, ಸಂಬಳವೂ ಒಳ್ಳೇದಿತ್ತು. ಆದರೆ ಒಂದೇ ಕ್ಷಣದಲ್ಲಿ ಎಲ್ಲವೂ ತಲೆಕೆಳಗಾಯಿತು” ಎಂದನವನು. ಈ ವಿಷಯವನ್ನು ಆಮೇಲೆ ತನ್ನ ಹೆಂಡತಿ ಅನಿತಾಳಿಗೆ ಹೇಳಿದಾಗ ಆಕೆಗೂ ಆಘಾತವಾಯಿತು. “ನನಗೆ ನಿಂತ ನೆಲವೇ ಕುಸಿದಂತಾಯಿತು. ಏನು ಮಾಡುವುದೆಂದು ದಿಕ್ಕೇ ತೋಚಲಿಲ್ಲ” ಎನ್ನುತ್ತಾ ಆ ಕ್ಷಣವನ್ನು ನೆನಪಿಸಿಕೊಳ್ಳುತ್ತಾಳೆ ಆಕೆ.

ಸುಪ್ರೀತ್‌ನಂತೆ ಕೆಲಸ ಕಳಕೊಂಡಿರುವ ಲಕ್ಷಾಂತರ ಜನರ ಸಂಖ್ಯೆಯನ್ನು ಕೆಳಗಿನ ನಕ್ಷೆ ತೋರಿಸುತ್ತದಾದರೂ ಅಂಥವರ ಭಾವನಾತ್ಮಕ ನೋವನ್ನು ಅದರಲ್ಲಿ ನೋಡಲಾರೆವು. ರೌಲ್‌ ಎಂಬವನ ಕುರಿತು ಮಾತಾಡೋಣ. ಅವನು ಪೆರುವಿನಿಂದ ನ್ಯೂ ಯಾರ್ಕ್‌ ನಗರಕ್ಕೆ ವಲಸೆಬಂದು ದೊಡ್ಡ ಹೋಟೇಲೊಂದರಲ್ಲಿ 18 ವರ್ಷ ದುಡಿದನು. ಆದರೂ ಅವನನ್ನು ಆ ಕೆಲಸದಿಂದ ತೆಗೆಯಲಾಯಿತು. ಬೇರೆ ಕೆಲಸಕ್ಕಾಗಿ ತುಂಬ ಅಲೆದಾಡಿದನು. ಏನೂ ಪ್ರಯೋಜನವಾಗಲಿಲ್ಲ. “ಸುಮಾರು 30 ವರ್ಷಗಳಿಂದ ಕುಟುಂಬವನ್ನು ಪೋಷಿಸಿದ್ದ ನನಗೆ ಕೆಲಸವಿಲ್ಲದಿದ್ದಾಗ ನಾನು ನಾಲಾಯಕ್ಕು ಎಂದನಿಸಿತು” ಅನ್ನುತ್ತಾನೆ ರೌಲ್‌.

ಅವನ ಮಾತು, ಕೆಲಸ ಕಳಕೊಂಡವರು ಅನುಭವಿಸುವ ಒಂದು ಕಹಿ ಸತ್ಯಕ್ಕೆ ಹಿಡಿದ ಕನ್ನಡಿಯಂತಿದೆ. ಅದೇನೆಂದರೆ, ಕೆಲಸ ಕಳಕೊಂಡವರ ಜೇಬು ಖಾಲಿಯಾಗುತ್ತದಷ್ಟೇ ಅಲ್ಲ ಅವರಿಗೆ ಅಪಾರ ಭಾವನಾತ್ಮಕ ನೋವೂ ಆಗುತ್ತದೆ. ಮೂರಕ್ಕಿಂತ ಹೆಚ್ಚು ವರ್ಷಗಳ ವರೆಗೆ ಕೆಲಸವಿಲ್ಲದೆ ಇದ್ದ ಮನು ಎಂಬವನ ಪತ್ನಿ ರೀನಾ ಹೇಳುವುದು: “ನಾನು ಕೆಲಸಕ್ಕೆ ಬಾರದವಳು ಎಂದು ಅನಿಸತೊಡಗಿತು. ಯಾಕೆಂದರೆ ಕೈಯಲ್ಲಿ ಕಾಸಿಲ್ಲದಿದ್ದರೆ ಜನರು ನಮ್ಮನ್ನು ಕಾಲಕಸದಂತೆ ನೋಡುತ್ತಾರೆ. ಸ್ವಲ್ಪ ಸಮಯದಲ್ಲಿ ನಾವು ಸಹ ನಮ್ಮ ಬಗ್ಗೆ ಹಾಗೆಯೇ ನೆನಸಿಕೊಳ್ಳುತ್ತೇವೆ.”

ಈ ಭಾವನಾತ್ಮಕ ನೋವು ಸಾಲದೋ ಎಂಬಂತೆ ಇನ್ನೊಂದು ಹೊರೆಯೂ ಅಂಥವರ ಹೆಗಲೇರುತ್ತದೆ. ಅದು, ಕಡಿಮೆ ಹಣದಲ್ಲಿ ಜೀವನ ಸಾಗಿಸುವ ಸವಾಲೇ. “ಹಣವಿದ್ದಾಗ ಬಿಂದಾಸ್‌ ಖರ್ಚುಮಾಡುತ್ತಿದ್ದೆವು, ಜೀವನ ಸರಳಗೊಳಿಸುವ ಯೋಚನೆಯೇ ಇರಲಿಲ್ಲ. ಆದರೆ ಕೆಲಸ ಕಳಕೊಂಡಾಗ ಸಂಪಾದನೆ ಇಲ್ಲದ್ದರಿಂದ ಖರ್ಚುಗಳನ್ನು ಭರಿಸುವುದು ಕಷ್ಟವಾಯಿತು. ಆಗ ನಮ್ಮ ಜೀವನವನ್ನು ಸರಳಗೊಳಿಸದೇ ಅನ್ಯಮಾರ್ಗವಿರಲಿಲ್ಲ.”

ನೀವು ಇನ್ನೊಂದು ಕೆಲಸಕ್ಕಾಗಿ ಹುಡುಕುತ್ತಿರಬಹುದು. ಆದರೆ ಸದ್ಯಕ್ಕೆ ನಿರುದ್ಯೋಗದ ಕಾರಣ ಮಾನಸಿಕ, ಭಾವನಾತ್ಮಕ ಬೇಗುದಿಯನ್ನು ನಿಭಾಯಿಸಬೇಕಾದೀತು. ಸ್ವಲ್ಪ ಹಣದಲ್ಲೇ ಜೀವನ ನಡೆಸಬೇಕಾದೀತು. ಈ ಭಾವನಾತ್ಮಕ ಸವಾಲುಗಳನ್ನು ನಿಭಾಯಿಸಲು ತೆಗೆದುಕೊಳ್ಳಬಹುದಾದ ಎರಡು ಪ್ರಾಯೋಗಿಕ ಹೆಜ್ಜೆಗಳ ಬಗ್ಗೆ ಮೊದಲು ಚರ್ಚಿಸೋಣ. (g10-E 07)

[ಪಾದಟಿಪ್ಪಣಿ]

^ ಈ ಲೇಖನಮಾಲೆಯಲ್ಲಿ ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.

[ಪುಟ 3ರಲ್ಲಿರುವ ನಕ್ಷೆ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

2008ರಲ್ಲಿ ಬರೀ ಮೂರು ದೇಶಗಳಲ್ಲಿ ಕೆಲಸ ಕಳಕೊಂಡವರ ಸಂಖ್ಯೆ

ಜಪಾನ್‌ 26,50,000

ಸ್ಪೇನ್‌ 25,90,000

ಯುನೈಟೆಡ್‌ ಸ್ಟೇಟ್ಸ್‌ 89,24,000