ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ಖಂಡಿತ ಜಯಿಸುವಿರಿ!

ನೀವು ಖಂಡಿತ ಜಯಿಸುವಿರಿ!

ನೀವು ಖಂಡಿತ ಜಯಿಸುವಿರಿ!

ನೀವೀಗ ‘ಧೈರ್ಯದಿಂದ ಕೆಲಸಕ್ಕೆ ಕೈಹಚ್ಚುವ’ ಸಮಯ ಬಂದಿದೆ. (1 ಪೂರ್ವಕಾಲವೃತ್ತಾಂತ 28:10) ಸಫಲರಾಗುವ ಸಾಧ್ಯತೆಯನ್ನು ಹೆಚ್ಚಿಸಲು ಕೊನೆಯಲ್ಲಿ ನೀವು ಯಾವ ಹೆಜ್ಜೆಗಳನ್ನು ತೆಗೆದುಕೊಳ್ಳಬೇಕು?

ತಾರೀಖು ಗೊತ್ತುಪಡಿಸಿ. ಧೂಮಪಾನ ನಿಲ್ಲಿಸಲು ಒಂದು ತಾರೀಖನ್ನು ಗೊತ್ತುಪಡಿಸಿ. ಆ ತಾರೀಖು ನೀವು ಚಟ ಬಿಡುವ ನಿರ್ಣಯ ತಕ್ಕೊಂಡ ಎರಡು ವಾರಗಳೊಳಗೆ ಇರಬೇಕೆಂದು ಆರೋಗ್ಯಕ್ಕೆ ಸಂಬಂಧಪಟ್ಟ ಯು.ಎಸ್‌. ಇಲಾಖೆ ಶಿಫಾರಸ್ಸು ಮಾಡುತ್ತದೆ. ಏಕೆಂದರೆ ಆ ಸಮಯಾವಧಿಯಲ್ಲಿ ನಿಮ್ಮ ದೃಢಸಂಕಲ್ಪ ಕಡಿಮೆಯಾಗಿರುವುದಿಲ್ಲ. ಆ ದಿನವನ್ನು ಕ್ಯಾಲೆಂಡರ್‌ನಲ್ಲಿ ಗುರುತಿಸಿಡಿ. ಮಿತ್ರರಿಗೂ ತಿಳಿಸಿ. ಬಳಿಕ ಏನೇ ಆದರೂ ಆ ತಾರೀಖನ್ನು ಮುಂದೂಡಬೇಡಿ.

“ಚಟ ಬಿಡಲು ನೆರವಾಗುವ ಕಾರ್ಡು” ತಯಾರಿಸಿ. ಈ ಕಾರ್ಡಲ್ಲಿ ಕೆಳಕಂಡ ಮಾಹಿತಿಯನ್ನಲ್ಲದೆ ನಿಮ್ಮ ದೃಢಸಂಕಲ್ಪವನ್ನು ಬಲಪಡಿಸುವ ವಿಷಯವನ್ನೂ ಸೇರಿಸಬಹುದು:

● ನೀವು ಧೂಮಪಾನ ನಿಲ್ಲಿಸಲು ಕಾರಣಗಳು

● ಸಿಗರೇಟ್‌ ಸೇದಲು ಮನಸ್ಸಾದಾಗ ಆ ಆಸೆಯನ್ನು ಹೊಸಕಿಹಾಕಲು ನೆರವಾಗುವವರ ಫೋನ್‌ ನಂಬರುಗಳು

● ನಿಮ್ಮ ಗುರಿಯನ್ನು ಸಾಧಿಸಲು ನೆರವಾಗುವ ವಿಚಾರಗಳು. ಗಲಾತ್ಯ 5:22, 23ರಂಥ ಬೈಬಲ್‌ ವಚನಗಳನ್ನೂ ಸೇರಿಸಬಹುದು.

ಈ ಕಾರ್ಡ್‌ ಯಾವಾಗಲೂ ನಿಮ್ಮ ಬಳಿ ಇರಲಿ. ಅದನ್ನು ಆಗಾಗ್ಗೆ ಓದಿ. ಆ ಚಟ ಬಿಟ್ಟ ಬಳಿಕವೂ ಧೂಮಪಾನ ಮಾಡಲು ಮನಸ್ಸಾದಾಗಲೆಲ್ಲ ಆ ಕಾರ್ಡನ್ನು ಓದಿ.

ಕೊಂಡಿಗಳನ್ನು ಕಳಚಿಹಾಕಿ. ನೀವು ಗೊತ್ತುಪಡಿಸಿರುವ ತಾರೀಖಿನ ಮುಂಚೆಯೇ, ಧೂಮಪಾನದೊಂದಿಗೆ ಜೋಡಿಸಿರುವ ನಿಮ್ಮ ರೂಢಿಗಳನ್ನೆಲ್ಲ ಬಿಟ್ಟುಬಿಡಲಾರಂಭಿಸಿ. ಉದಾಹರಣೆಗೆ ಬೆಳಗ್ಗೆ ಎದ್ದ ಕೂಡಲೇ ಧೂಮಪಾನ ಮಾಡುವ ಅಭ್ಯಾಸವಿರುವಲ್ಲಿ, ಅದನ್ನು ಒಂದು ತಾಸು ಇಲ್ಲವೆ ಹೆಚ್ಚು ಸಮಯಕ್ಕೆ ಮುಂದೂಡಿರಿ. ಊಟ ಮಾಡುತ್ತಿರುವಾಗಲೊ ನಂತರವೊ ಧೂಮಪಾನ ಮಾಡುವ ರೂಢಿಯಿದ್ದಲ್ಲಿ ಅದನ್ನೂ ಬಿಟ್ಟುಬಿಡಿ. ಧೂಮಪಾನಿಗಳಿರುವ ಸ್ಥಳಗಳಿಂದ ದೂರವಿರಿ. ಅಲ್ಲದೆ, ಯಾರಾದರೂ ನಿಮಗೆ ಸಿಗರೇಟ್‌ ನೀಡಿದರೆ “ಬೇಡ, ಧೂಮಪಾನ ಬಿಟ್ಟುಬಿಟ್ಟಿದ್ದೇನೆ” ಎಂದು ಹೇಳಲಿಕ್ಕಾಗಿ ಆ ಮಾತುಗಳನ್ನು ನೀವೊಬ್ಬರೇ ಇರುವಾಗ ಗಟ್ಟಿಯಾಗಿ ಪ್ರ್ಯಾಕ್ಟಿಸ್‌ ಮಾಡಿ. ಇಂಥ ಹೆಜ್ಜೆಗಳು ಆ ದಿನಕ್ಕಾಗಿ ನಿಮ್ಮನ್ನು ತಯಾರಾಗಿಸುವುದು ಮಾತ್ರವಲ್ಲ ನೀವು ‘ಮಾಜಿ ಧೂಮಪಾನಿ’ ಆಗುವ ದಿನ ದೂರವಿಲ್ಲವೆಂದು ನಿಮಗೆ ನೆನಪುಹುಟ್ಟಿಸುತ್ತಿರುವವು.

ಸಿದ್ಧರಾಗಿ. ನೀವು ಗೊತ್ತುಪಡಿಸಿರುವ ತಾರೀಖು ಹತ್ತಿರಬಂದಂತೆ ಕ್ಯಾರೆಟ್‌ ತುಂಡುಗಳು, ಚೂಯಿಂಗ್‌ ಗಮ್‌, ಬೀಜಗಳು (ಗೇರುಬೀಜ, ಬಾದಾಮಿ ಇತ್ಯಾದಿ) ಮುಂತಾದ ತಿನಿಸುಗಳನ್ನು ತಂದಿಡಿ. ಇವುಗಳನ್ನು ಧೂಮಪಾನ ಮಾಡುವ ಆಸೆ ಬಂದಾಗಲೆಲ್ಲ ಬಾಯಿಗೆ ಹಾಕಿ ಮೆಲ್ಲುತ್ತಾ ಇರಿ. ನಿಮ್ಮ ಸ್ನೇಹಿತರಿಗೂ ಕುಟುಂಬದವರಿಗೂ ನೀವು ಗೊತ್ತುಪಡಿಸಿರುವ ತಾರೀಖಿನ ಬಗ್ಗೆ ನೆನಪುಹುಟ್ಟಿಸಿ, ಅವರಿಂದ ಯಾವ ನೆರವು ಬಯಸುತ್ತೀರೆಂದು ತಿಳಿಸಿ. ಆ ತಾರೀಖಿನ ಹಿಂದಿನ ದಿನ ಆ್ಯಶ್‌ಟ್ರೇಗಳನ್ನು, ಲೈಟರ್‌ಗಳನ್ನು ತೆಗೆದುಹಾಕಿ. ಅಷ್ಟುಮಾತ್ರವಲ್ಲದೆ ಅನಿರೀಕ್ಷಿತವಾಗಿ ನಿಮ್ಮ ಕಣ್ಣಿಗೆ ಬಿದ್ದು ಧೂಮಪಾನಕ್ಕೆ ಪ್ರೇರಿಸುವ ವಸ್ತುಗಳನ್ನು ಹುಡುಕಿ ಎಸೆದುಬಿಡಿ. ಉದಾಹರಣೆಗೆ ಮನೆಯಲ್ಲೋ, ಕಾರ್‌ನಲ್ಲೊ, ಜೇಬುಗಳಲ್ಲೋ, ಕೆಲಸದ ಸ್ಥಳದಲ್ಲೋ ಉಳಿದಿರಬಹುದಾದ ಸಿಗರೇಟ್‌ಗಳನ್ನು ಎಸೆದುಬಿಡಿ. ಏಕೆಂದರೆ ಸಿಗರೇಟ್‌ ಸೇದಲು ಮನಸ್ಸಾದಾಗ ಡ್ರಾಅರ್‌ ತೆರೆದಾಕ್ಷಣ ಅದು ಕೈಗೆ ಸಿಕ್ಕಿದರೆ ಸೇದದೇ ಇರಲು ಕಷ್ಟವಾದೀತಲ್ಲವೇ? ಆದರೆ ಸಿಗದೆ ಹೋದರೆ ಮಿತ್ರನ ಬಳಿ ಸಿಗರೇಟ್‌ ಕೇಳುವ ಅಥವಾ ಸಿಗರೇಟ್‌ ಪ್ಯಾಕ್‌ ಅನ್ನು ಖರೀದಿಸಿ ತರುವ ಗೋಜಿಗೆ ಹೋಗದಿರುವಿರಿ. ಅಲ್ಲದೆ ದೇವರ ಬೆಂಬಲಕ್ಕಾಗಿ ಪ್ರಾರ್ಥಿಸುತ್ತಾ ಇರಿ. ಇದನ್ನು ನಿಮ್ಮ ಕೊನೆಯ ಸಿಗರೇಟ್‌ ಸೇದಿದ ಬಳಿಕವಂತೂ ಇನ್ನಷ್ಟು ಕಟ್ಟಾಸಕ್ತಿಯಿಂದ ಮಾಡಿ.—ಲೂಕ 11:13.

ಅಸಂಖ್ಯಾತ ಜನರು ಒಂದುಕಾಲದಲ್ಲಿ ತಮ್ಮ ದುಷ್ಟ ಮಿತ್ರನಾಗಿದ್ದ ಸಿಗರೇಟ್‌ನೊಂದಿಗಿನ “ಸಂಬಂಧ ಮುರಿದುಹಾಕಿದ್ದಾರೆ.” ನೀವೂ ಹಾಗೆ ಮಾಡಬಲ್ಲಿರಿ. ಈ ಚಟವನ್ನು ಕೈಬಿಟ್ಟರೆ ಉತ್ತಮ ಆರೋಗ್ಯ ನಿಮ್ಮ ಕೈಗೆಟಕುವುದು ಮಾತ್ರವಲ್ಲದೆ ಆ ಚಟದ ಕಪಿಮುಷ್ಟಿಯಿಂದ ಮುಕ್ತರಾದ ನೆಮ್ಮದಿ ನಿಮ್ಮದಾಗುವುದು! (g10-E 05)

[ಪುಟ 32ರಲ್ಲಿರುವ ಚಿತ್ರ]

ಚಟ ಬಿಡಲು ನೆರವಾಗುವ ಕಾರ್ಡ್‌ ಯಾವಾಗಲೂ ನಿಮ್ಮ ಬಳಿ ಇರಲಿ. ಅದನ್ನು ಆಗಾಗ್ಗೆ ಓದಿ