ನಂಬಿಕೆಗರ್ಹರಾದ ಜನರು
ನಂಬಿಕೆಗರ್ಹರಾದ ಜನರು
ಆರ್ಜೆಂಟೀನದಲ್ಲಿ ಸಾಂಟ್ಯಾಗೋ ಎಂಬವನು ಒಬ್ಬ ಟ್ಯಾಕ್ಸಿ ಡ್ರೈವರ್. ಒಮ್ಮೆ ಯಾರೋ ಅವನ ಗಾಡಿಯಲ್ಲಿ ಹಣದ ಬ್ಯಾಗನ್ನು ಬಿಟ್ಟುಹೋಗಿದ್ದರು. ಏನು ಮಾಡಬೇಕೆಂದು ಅವನು ಅರೆ ಗಳಿಗೆಯೂ ಯೋಚಿಸಲಿಲ್ಲ. ನೇರವಾಗಿ ಅದರ ಮಾಲೀಕನಿಗೆ ಅದನ್ನು ಹಿಂದಿರುಗಿಸಿದ. ಅದರಲ್ಲೇನು ಮಹಾ ಎನ್ನುತ್ತೀರಾ? ಅದರಲ್ಲಿದ್ದದ್ದು 32,000ಕ್ಕಿಂತಲೂ ಹೆಚ್ಚು ಡಾಲರುಗಳು!
ಈ ಜಗತ್ತು, ನಂಬಿಕೆಯಿಡಬಹುದಾದ ಜನರಿಂದಲೇ ತುಂಬಿರುವುದನ್ನು ಕಲ್ಪಿಸಿಕೊಳ್ಳಬಲ್ಲಿರೋ? ಹಾಗಿರುತ್ತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತಲ್ಲವೇ? ಮಕ್ಕಳನ್ನು ನೋಡಿಕೊಳ್ಳುವವರ ತೆಕ್ಕೆಯಲ್ಲಿ ನಿಮ್ಮ ಮಗುವನ್ನು ನಿಶ್ಚಿಂತೆಯಿಂದ ಬಿಟ್ಟು ಹೋಗಬಹುದು. ಮನೆಬಾಗಿಲನ್ನು ಭದ್ರಪಡಿಸಲು ಬೀಗಗಳೇ ಬೇಕಾಗಿರುವುದಿಲ್ಲ. ಆದರೆ ಇದೆಲ್ಲಾ ಬರೀ ಕನಸೇ?
ನೈತಿಕ ಮೌಲ್ಯಗಳು ಬೀರುವ ಪರಿಣಾಮ
ಕ್ರೈಸ್ತನಾದ ಅಪೊಸ್ತಲ ಪೌಲನು ತನ್ನ ಬಗ್ಗೆ ಮತ್ತು ತನ್ನ ಕ್ರೈಸ್ತಬಾಂಧವರ ಬಗ್ಗೆ ಹೀಗಂದನು: ‘ನಾವು ಎಲ್ಲ ವಿಷಯಗಳಲ್ಲಿ ಪ್ರಾಮಾಣಿಕರಾಗಿ ನಡೆದುಕೊಳ್ಳಲು ಬಯಸುತ್ತೇವೆ.’ (ಇಬ್ರಿಯ 13:18) ಅದನ್ನೇ ಮಾಡಲು ಯೆಹೋವನ ಸಾಕ್ಷಿಗಳು ಶ್ರಮಿಸುತ್ತಾರೆ. ಯೆಶಾಯ 33:15ರಲ್ಲಿ ತಿಳಿಸಿರುವಂತೆ ‘ಸನ್ಮಾರ್ಗದಲ್ಲಿ ನಡೆದು ಯಥಾರ್ಥವಾಗಿ ನುಡಿದು ದೋಚಿಕೊಂಡ ಲಾಭ ಬೇಡವೆಂದು ಲಂಚಮುಟ್ಟದೆ’ ಜೀವಿಸುವುದೇ ಅವರ ಗುರಿ. ಇದನ್ನು ಮಾಡಿರುವವರ ಉದಾಹರಣೆಗಳಲ್ಲಿ ಕೆಲವು ಇಲ್ಲಿವೆ.
● ‘ನುಡಿ ಯಥಾರ್ಥವಾಗಿರಲಿ.’ ಫಿಲಿಪ್ಪೀನ್ಸ್‌ನಲ್ಲಿ ವಾಸಿಸುತ್ತಿರುವ ಡೊಮಿಂಗೋ ಒಬ್ಬ ಯೆಹೋವನ ಸಾಕ್ಷಿ. ತೆಂಗಿನ ತೋಟದಲ್ಲಿ ಆತನ ಕಾಯಕ. ಆತ ಹೇಳುವುದು: “ಹೆಚ್ಚಿನವರು ತಮ್ಮ ಧಣಿಗಳೊಂದಿಗೆ ಪ್ರಾಮಾಣಿಕರಾಗಿರುವುದಿಲ್ಲ. ಉದಾಹರಣೆಗೆ, ತೋಟದಲ್ಲಿ ಕೆಲಸಮಾಡುವವರು ತಾವು ಎಷ್ಟು ಗೋಣಿ ಕೊಬ್ಬರಿಯನ್ನು ಒಟ್ಟುಗೂಡಿಸಿದ್ದೇವೆಂದು ಧಣಿಗಳಿಗೆ ಸರಿಯಾದ ಲೆಕ್ಕಕೊಡುವುದಿಲ್ಲ. ಹಾಗೆ ಮಾಡಿ ಕೆಲವೊಂದು ಗೋಣಿಗಳನ್ನು ಕದ್ದುಮುಚ್ಚಿ ಮಾರುತ್ತಾರೆ.”
ಡೊಮಿಂಗೋ ಮತ್ತವನ ಕುಟುಂಬ ಇನ್ನೊಂದು ವಿಧದಲ್ಲೂ ಪ್ರಾಮಾಣಿಕತೆ ತೋರಿಸಿದರು. ಅವರು ತಮ್ಮ ಧಣಿಯ ಲಾಭಕ್ಕೋಸ್ಕರ ಕೊಬ್ಬರಿ ಉತ್ಪಾದನೆಯ ಬಗ್ಗೆ ಅಧಿಕಾರಿಗಳಿಗೆ ಸುಳ್ಳು ಲೆಕ್ಕ ಕೊಡಲು ನಿರಾಕರಿಸಿದರು. ಇದರಿಂದಾಗಿ ಧಣಿ ಅವರನ್ನು ತೋಟದಿಂದ ಒಕ್ಕಲೆಬ್ಬಿಸಲಿದ್ದರು. “ಹೊರದಬ್ಬಿದರೂ ನಾವು ಸುಳ್ಳು ಹೇಳುವುದಿಲ್ಲ ಎಂದು ಧಣಿಗೆ ಹೇಳಿದೆವು. ಕೊನೆಗೆ ಅವರು ಯೆಹೋವನ ಸಾಕ್ಷಿಗಳು ತುಂಬ ಒಳ್ಳೆಯವರು, ಭರವಸೆಗೆ ಯೋಗ್ಯರು ಎಂದು ಹೊಗಳಿದ್ದಲ್ಲದೆ, ವ್ಯವಸಾಯಕ್ಕಾಗಿ ಹೆಚ್ಚುವರಿ ಭೂಮಿಯನ್ನೂ ನಮಗೆ ಕೊಟ್ಟರು” ಎನ್ನುತ್ತಾನೆ ಡೊಮಿಂಗೋ.
● ‘ಅನ್ಯಾಯದ ಲಾಭ ಬೇಡ.’ ಕ್ಯಾಮರೂನ್‌ನ ಒಂದು ಭಾಗದಲ್ಲಿ ಪಿಯೆರ್ ಎಂಬವರು ಮುಖ್ಯ ತೆರಿಗೆ ಅಧಿಕಾರಿ. ಅವರಿಗೆ ಲಂಚ ತೆಗೆದುಕೊಂಡು ಹಣಮಾಡುವ ಅವಕಾಶ ಬಹಳಷ್ಟಿದ್ದವು. ತಾತ್ಕಾಲಿಕ ಕೆಲಸಗಾರರಿಗೆ ಸಂಬಳ ಕೊಡುವ ಜವಾಬ್ದಾರಿ ಅವರಿಗೆ ನೇಮಿಸಲ್ಪಟ್ಟಾಗ ಏನೋ ಎಡವಟ್ಟಾಗುತ್ತಿದೆ ಎಂದು ಅವರಿಗೆ ಗೊತ್ತಾಯಿತು. ಅವರು ವಿವರಿಸಿದ್ದು: “ಗುತ್ತಿಗೆ ಕೊನೆಗೊಂಡಿದ್ದ ಸಿಬ್ಬಂದಿಯವರ ಅಥವಾ ತೀರಿಕೊಂಡಿದ್ದ ಸಿಬ್ಬಂದಿಯವರ ಹೆಸರಿನಲ್ಲೂ ಸಂಬಳ ಪಾವತಿ ಮಾಡಲಾಗುತ್ತಿತ್ತು.” ಆದರೆ “ನಾನು ಆ ಹಣವನ್ನು ಬಳಸಿಕೊಳ್ಳದೆ ಹಣಕಾಸಿನ ನಿಖರ ದಾಖಲೆಯನ್ನಿಟ್ಟು ಆ ದುಡ್ಡನ್ನು ತಿಜೋರಿಯಲ್ಲಿ ಭದ್ರವಾಗಿಟ್ಟೆ” ಎನ್ನುತ್ತಾರೆ ಪಿಯೆರ್.
ಇದರ ಫಲಿತಾಂಶ? “ಎರಡು ವರ್ಷಗಳ ನಂತರ ಆಡಿಟರ್‌ಗಳು
ಬಂದು ವಿಚಾರಣೆ ನಡೆಸಿದಾಗ ಕಿಂಚಿತ್ತೂ ಅಳುಕಿಲ್ಲದೆ ನಿಖರವಾದ ದಾಖಲೆಯನ್ನು ಅವರ ಮುಂದಿಡಲು ಸಾಧ್ಯವಾಯಿತು. ಅಲ್ಲದೆ, ತಿಜೋರಿಯಲ್ಲಿ ಸಂಗ್ರಹವಾದ ಆ ಭಾರೀ ಮೊತ್ತದ ದುಡ್ಡನ್ನು ಅವರಿಗೆ ಹಸ್ತಾಂತರಿಸಿದೆ. ಬಂದಿದ್ದ ಆಡಿಟರ್‌ಗಳು ನನ್ನ ಪ್ರಾಮಾಣಿಕತೆಯನ್ನು ನೋಡಿ ಬಾಯಿತುಂಬ ಹೊಗಳಿದರು” ಎಂದು ಪಿಯೆರ್ ಹೇಳುತ್ತಾರೆ.● ‘ಲಂಚಮುಟ್ಟದಿರಿ.’ ಬ್ರಸಿಲ್‌ನ ರಿಯೋ ಡೇ ಜನೆರೋದಲ್ಲಿ ರಿಕಾರ್ಡೋ ಎಂಬವರು ನೋಟರಿಯಾಗಿ ಕೆಲಸಮಾಡುತ್ತಿದ್ದಾಗ ಜನರು ಅವರಿಗೆ ಲಂಚ ಕೊಡಲು ಪ್ರಯತ್ನಿಸಿದರು. ಅವರು ಜ್ಞಾಪಿಸಿಕೊಳ್ಳುವುದು: “ಒಮ್ಮೆ ಒಬ್ಬ ವಕೀಲ ಲಂಚ ಕೊಡಲು ಪ್ರಯತ್ನಿಸಿದ. ಹೇಳದೆಕೇಳದೆ ಮನೆಗೆ ಒಂದು ಸಿ.ಡಿ. ಪ್ಲೇಯರ್ ಕಳುಹಿಸಿದ. ಸಿ.ಡಿ. ಪ್ಲೇಯರ್‌ಗಳು ಆಗಷ್ಟೇ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದವು. ಸಾಮಾನ್ಯ ಜನರ ಕೈಗೆಟಕದ ವಸ್ತು ಅದಾಗಿತ್ತು.”
ರಿಕಾರ್ಡೋ ಏನು ಮಾಡಿದರು? “ಆ ಪಾರ್ಸಲನ್ನು ಬಿಚ್ಚುವುದೂ ಬೇಡವೆಂದು ನಾನೂ ನನ್ನ ಶ್ರೀಮತಿಯೂ ತೀರ್ಮಾನಿಸಿದೆವು. ಆ ವಕೀಲನ ಆಫೀಸಿಗೆ ಹೋಗಿ ಆ ಪಾರ್ಸಲನ್ನು ಅವರ ಮೇಜಿನ ಮೇಲಿಟ್ಟೆ. ಅವರಿಗೆ ತಮ್ಮ ಕಣ್ಣನ್ನೇ ನಂಬಲಿಕ್ಕಾಗಲಿಲ್ಲ. ಅದನ್ನು ಏಕೆ ಹಿಂದಿರುಗಿಸುತ್ತಿದ್ದೇನೆಂದು ಅವರಿಗೆ ವಿವರಿಸಲು ನನಗೊಂದು ಸದವಕಾಶ ಸಿಕ್ಕಿತು. ಅವರ ಸೆಕ್ರೆಟರಿಯಂತೂ ನಾನು ಮಾಡಿದ್ದನ್ನು ನೋಡಿ ತುಂಬ ಪ್ರಭಾವಿತಳಾದಳು.”
ಯೆಹೋವನ ಸಾಕ್ಷಿಗಳು ಮಾತ್ರ ಪ್ರಾಮಾಣಿಕರೆಂದಲ್ಲ.
ಇತರರೂ ಇದ್ದಾರೆ. ಆದರೆ ಯೆಹೋವನ ಸಾಕ್ಷಿಗಳು ಒಂದು ಸಮುದಾಯದೋಪಾದಿ ಭರವಸಯೋಗ್ಯರು ಎಂಬ ಹೆಸರನ್ನು ಗಳಿಸಿದ್ದಾರೆ. ಹೀಗಿರುವುದರಿಂದಲೇ ಇತ್ತೀಚೆಗೆ, ಪೋಲೆಂಡಿನಲ್ಲಿ ಹಲವಾರು ಬಟ್ಟೆ ಅಂಗಡಿಗಳಿರುವ ಕಂಪೆನಿಯೊಂದು ಯೆಹೋವನ ಸಾಕ್ಷಿಗಳಿಗೆ ಮಾತ್ರ ಕೆಲಸ ನೀಡಲು ನಿರ್ಧರಿಸಿತು. “ನಿಯತ್ತಿನಿಂದ ದುಡಿಯುವವರು ಎಲ್ಲ ಕಡೆ ಇದ್ದಾರೆ ನಿಜ. ಆದರೆ ಯೆಹೋವನ ಸಾಕ್ಷಿಗಳಿಗೆ ಆದರ್ಶಗಳಿವೆ, ಏನೇ ಬಂದರೂ ಅವರು ಅವುಗಳನ್ನು ಬಿಟ್ಟುಕೊಡುವುದಿಲ್ಲ” ಎಂದು ಅಲ್ಲಿನ ಸೇಲ್ಸ್ ಮ್ಯಾನೇಜರ್ ಹೇಳಿದರು.ಬಡತನವಿದ್ದರೂ ಭರವಸಯೋಗ್ಯರು
ಹೊಟ್ಟೆಪಾಡಿಗಾಗಿ ಬಡ ವ್ಯಕ್ತಿ ಎಷ್ಟು ಸುಳ್ಳು ಹೇಳಿದರೂ ತಪ್ಪಲ್ಲ ಎಂಬುದು ಅನೇಕ ಜನರ ಅನಿಸಿಕೆ. ಉದಾಹರಣೆಗಾಗಿ, ಸಿಎನ್‌ಎನ್ ವರದಿಯೊಂದು ನೈಜೀರಿಯಾದಲ್ಲಿನ 14ರ ಬಾಲಕನೊಬ್ಬನ ಬಗ್ಗೆ ಹೇಳುತ್ತದೆ. ಇಂಟರ್‌ನೆಟ್ ಮೂಲಕ ಜನರನ್ನು ಮೋಸಮಾಡುವುದೇ ಅವನ ಕೆಲಸ. “ಮತ್ತೇನು ಮಾಡಲಿ? ಅಪ್ಪ, ಅಮ್ಮ, ತಂಗಿಗೆ ನಾನೇ ಗತಿ. ಬದುಕಲು ಏನಾದರೂ ಮಾಡಬೇಕಲ್ಲ” ಎಂದು ಹೇಳುತ್ತಾ ತಾನು ಮಾಡುವುದು ಸರಿಯೆಂದು ಸಮರ್ಥಿಸುತ್ತಾನೆ ಆ ಬಾಲಕ.
ಪ್ರಾಮಾಣಿಕರಾಗಿದ್ದರೆ ಧನೈಶ್ವರ್ಯ ಸಿಗುವುದೆಂದು ಬೈಬಲ್ ಮಾತು ಕೊಡುವುದಿಲ್ಲ. ಆದರೆ ಅಂಥವರ ಮೂಲಭೂತ ಜೀವನಾವಶ್ಯಕತೆಗಳು ಖಂಡಿತ ಪೂರೈಸಲ್ಪಡುವವೆಂಬ ಆಶ್ವಾಸನೆಯನ್ನು ಅದು ನೀಡುತ್ತದೆ. “ರೊಟ್ಟಿಯು ಅವನಿಗೆ ಕೊಡಲ್ಪಡುವುದು, ನೀರು ತಪ್ಪುವುದಿಲ್ಲ” ಎನ್ನುತ್ತದೆ ಯೆಶಾಯ 33:16 (NIBV).
ಆದರೆ ‘ಬಡತನವಿದ್ದಾಗ ಭರವಸಯೋಗ್ಯರಾಗಿ ಉಳಿಯುವುದರಲ್ಲಿ ಏನು ಲಾಭ? ಪ್ರತಿದಿನ ಒಂದೊಂದು ತುತ್ತಿಗೂ ಕಷ್ಟಪಡುತ್ತಿರುವವರ ಕುರಿತೇನು?’ ಎಂದು ಕೆಲವರು ಕೇಳಬಹುದು.
ಕ್ಯಾಮರೂನ್‌ನಲ್ಲಿರುವ ಬರ್ಟ್ ಎಂಬಾಕೆ ವಿಧವೆ. ಮರಗೆಣಸಿನಿಂದ ತಯಾರಿಸಿದ ಕಾರ ಕಡ್ಡಿಯ ಕಟ್ಟುಗಳನ್ನು ಅವಳ ಪುಟ್ಟ ಅಂಗಡಿಯಲ್ಲಿ ಮಾರುತ್ತಿದ್ದಳು. “ಪ್ರತಿ ಕಟ್ಟಿನಲ್ಲಿ 20 ಗೆಣಸು ಕಡ್ಡಿಗಳಿರಬೇಕು. ಆದರೆ ಮಾರುವವರು ಬರೀ 17, 18ನ್ನು ಹಾಕಿ ಮೋಸಮಾಡುತ್ತಾರೆ. ನಾನು ಹಾಗೆ ಮೋಸದ ಹಣ ಮಾಡಲು ಇಷ್ಟಪಡುವುದಿಲ್ಲ” ಎನ್ನುತ್ತಾಳೆ ಆಕೆ.
ಬರ್ಟ್‌ಳ ವ್ಯಾಪಾರ ಭರಾಟೆಯಿಂದ ನಡೆಯುತ್ತಿದೆಯೋ? ಎಲ್ಲ ಸಮಯದಲ್ಲಲ್ಲ. “ಒಂದೇ ಒಂದು ಕಟ್ಟು ಸಹ ಮಾರಾಟ ಆಗದ ಎಷ್ಟೋ ದಿನಗಳಿವೆ. ಇಂಥ ಸಮಯದಲ್ಲಿ ನನ್ನ ಬಳಿ ಹಣವಿಲ್ಲವೆಂದು ತಿಳಿದಿದ್ದರೂ ಆಹಾರ ಮಾರುವವರು ನನಗೆ ಊಟ ಕೊಡುತ್ತಾರೆ. ನನಗೆ ಹಣ ಸಿಕ್ಕಿದಾಕ್ಷಣ ಅವರ ಹಣ ಕೊಟ್ಟುಬಿಡುತ್ತೇನೆಂಬ ನಂಬಿಕೆ ಅವರಿಗಿದೆ. ಇಂಥ ನಂಬಿಕೆ ಸಂಪಾದಿಸಲು ಸಮಯ ಹಿಡಿಯುತ್ತದೆ” ಎನ್ನುತ್ತಾಳೆ ಬರ್ಟ್.
ನಮ್ಮ ನಂಬಿಕೆಗೆ ಅರ್ಹನಾದ ದೇವರು
ಒಬ್ಬ ವ್ಯಕ್ತಿ ತನ್ನ ಮಾತಿನಂತೆ ನಡೆದುಕೊಂಡಾಗ ಅವನ ಮೇಲಿನ ನಮ್ಮ ನಂಬಿಕೆ ಹೆಚ್ಚಾಗುತ್ತದೆ. “ಯೆಹೋವನು . . . ಮಾಡಿದ ಅತಿ ಶ್ರೇಷ್ಠವಾಗ್ದಾನಗಳಲ್ಲಿ ಒಂದೂ ತಪ್ಪಿಹೋಗಲಿಲ್ಲ. ಎಲ್ಲಾ ನೆರವೇರಿದವು” ಎಂದು ದೇವರ ಬಗ್ಗೆ ಪ್ರಾಚೀನ ಇಸ್ರಾಯೇಲ್‌ನ ನಾಯಕ ಯೆಹೋಶುವ ಹೇಳಿದನು. (ಯೆಹೋಶುವ 21:44, 45) ದೇವರ ಮೇಲೆ ಈ ರೀತಿಯ ಭರವಸೆ ಇಡಲು ನಮಗೂ ಸಕಾರಣಗಳಿವೆಯೋ?
ದೇವರ ವಾಗ್ದಾನಗಳು ಎಷ್ಟು ಭರವಸಾರ್ಹವೆಂದರೆ ಅವುಗಳನ್ನು ದೇವರು ಮಳೆಗೆ ಹೋಲಿಸುತ್ತಾನೆ. (ಯೆಶಾಯ 55:10, 11) ಮಳೆಯು ಮೇಲಿಂದ ಸುರಿದು, ಮಣ್ಣನ್ನು ತೋಯಿಸಿ, ಬೆಳೆ ಬೆಳೆಯುವಂತೆ ಮಾಡುತ್ತದೆ. ಇದನ್ನು ಯಾರಿಂದಾದರೂ ತಡೆಯ ಸಾಧ್ಯವೇ? ಸಾಧ್ಯವೇ ಇಲ್ಲ! ಅಂತೆಯೇ ದೇವರ ಮಾತುಗಳು ನೆರವೇರದಂತೆ ತಡೆಯುವ ಶಕ್ತಿ ಯಾವುದಕ್ಕೂ ಇಲ್ಲ.
ಅಂಥ ಒಂದು ವಾಗ್ದಾನ 2 ಪೇತ್ರ 3:13ರಲ್ಲಿದೆ: “ನಾವು ನೂತನ ಆಕಾಶವನ್ನೂ ನೂತನ ಭೂಮಿಯನ್ನೂ ಎದುರುನೋಡುತ್ತಿದ್ದೇವೆ ಮತ್ತು ಇವುಗಳಲ್ಲಿ ನೀತಿಯು ವಾಸವಾಗಿರುವುದು.” ಇತರರನ್ನು ಶೋಷಿಸುವ ಮನುಷ್ಯರನ್ನು ದೇವರು ನಾಶಮಾಡಲಿದ್ದಾನೆ. ದೇವರು ಇದನ್ನು ಹೇಗೆ ಮಾಡಲಿದ್ದಾನೆಂದು ನೀವು ತಿಳಿಯಲಿಚ್ಛಿಸುತ್ತೀರೋ? ಸ್ಥಳೀಯ ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸಿ ಇಲ್ಲವೆ ಪುಟ 5ರಲ್ಲಿರುವ ಸೂಕ್ತ ವಿಳಾಸಕ್ಕೆ ಪತ್ರ ಬರೆಯಿರಿ. (g10-E 10)
[ಪುಟ 8ರಲ್ಲಿರುವ ಚೌಕ/ಚಿತ್ರ]
ಪ್ರಾಮಾಣಿಕತೆಗೆ ಪ್ರತಿಫಲ
ಲೂಸಿಯೋ ಎಂಬವನು ಫಿಲಿಪ್ಪೀನ್ಸ್‌ನ ಒಬ್ಬ ಯೆಹೋವನ ಸಾಕ್ಷಿ. ಅವನಿಗೆ ತನ್ನ ಪ್ರಾಮಾಣಿಕತೆಯನ್ನು ಬದಿಗೊತ್ತಿ ಹಣಮಾಡುವ ಅವಕಾಶ ಸಿಕ್ಕಿತು. ಧಣಿಯ ಆಫೀಸೊಂದರಲ್ಲಿ ಫೈಲುಗಳನ್ನು ಇಡಲಾಗುತ್ತಿದ್ದ ಹಳೆಯ ಬೀರು ಶುಚಿಮಾಡುತ್ತಿದ್ದಾಗ ಅವನಿಗೆ 27,500 ಡಾಲರುಗಳು ಸಿಕ್ಕಿದವು. ಅವನ ಧಣಿ ಕೆಲಸದ ಮೇಲೆ ಪರವೂರಿಗೆ ಹೋಗಿದ್ದರು. “ನಾನು ಈ ಮುಂಚೆ ಡಾಲರನ್ನೇ ನೋಡಿರಲಿಲ್ಲ. ಇದೇ ಮೊದಲು!” ಎನ್ನುತ್ತಾನೆ ಲೂಸಿಯೋ.
ತನ್ನ ಧಣಿ ಹಿಂದಿರುಗಿದಾಗ ಲೂಸಿಯೋ ಆ ಹಣವನ್ನು ಅವರಿಗೆ ಒಪ್ಪಿಸಿದನು. ಫಲಿತಾಂಶ? “ಇನ್ನೂ ಹೆಚ್ಚಿನ ಜವಾಬ್ದಾರಿಯನ್ನು ನನಗೆ ವಹಿಸಿಕೊಟ್ಟರು. ಅಷ್ಟೇ ಅಲ್ಲ ನನಗೆ ಕುಟುಂಬ ಸಮೇತ ವಾಸಿಸಲು ಒಂದು ದೊಡ್ಡ ಕೋಣೆ ಕೊಟ್ಟರು. ಫಿಲಿಪ್ಪೀನ್ಸ್‌ನಲ್ಲಿ ಜೀವನ ಸಾಗಿಸುವುದು ತುಂಬ ಕಷ್ಟವಾದರೂ ಯೆಹೋವ ದೇವರ ನಿಯಮಗಳನ್ನು ಪಾಲಿಸಿದ್ದರಿಂದ ಆತನೇ ನಮ್ಮನ್ನು ನೋಡಿಕೊಳ್ಳುತ್ತಿದ್ದಾನೆಂದು ಮನಃಪೂರ್ವಕವಾಗಿ ನಂಬುತ್ತೇನೆ.”
[ಪುಟ 9ರಲ್ಲಿರುವ ಚೌಕ/ಚಿತ್ರ]
ಪ್ರಾಮಾಣಿಕ ತಕ್ಕಡಿ
ಕ್ಯಾಮರೂನ್‌ನ ಡೂಆಲಾ ನಗರದಲ್ಲಿ ಮೊಯಿಸ್‌ನ ಮೀನಿನಂಗಡಿ ಅಂದರೆ ಮಾರ್ಕೆಟ್‌ನಲ್ಲಿ ಎಲ್ಲರಿಗೂ ಗೊತ್ತು. ಮೊಯಿಸ್ ಹೇಳುವುದು: “ನನ್ನ ಚಿಕ್ಕ ಅಂಗಡಿಗೆ ‘ತಕ್ಕಡಿ’ ಎಂದು ಹೆಸರು ಇಟ್ಟಿದ್ದೇನೆ. ಇಡೀ ಮಾರ್ಕೆಟ್‌ನಲ್ಲಿ ಸರಿಯಾದ ತೂಕ ತೋರಿಸುವ ತಕ್ಕಡಿಗಳು ಬೆರಳಣಿಕೆಯಷ್ಟು. ಅವುಗಳಲ್ಲಿ ನನ್ನದೊಂದು. ಆದ್ದರಿಂದಲೇ ಆ ಹೆಸರು. ಸರಿಯಾಗಿ ತೂಕ ಮಾಡಿಕೊಡುತ್ತೇನೋ ಇಲ್ಲವೋ ಎಂದು ಜನರು ಕೆಲವೊಮ್ಮೆ ಪರೀಕ್ಷಿಸುತ್ತಾರೆ. 1 ಕೆಜಿ ಮೀನು ತೆಗೆದುಕೊಂಡ ಬಳಿಕ ಅದನ್ನು ಬೇರೆಲ್ಲಾದರೂ ತೂಕಮಾಡಿ ನೋಡುತ್ತಾರೆ. ಅದರಲ್ಲಿ 1 ಕೆಜಿಗೂ ಹೆಚ್ಚು ಇರುವುದನ್ನು ನೋಡಿ ಆಶ್ಚರ್ಯಪಡುತ್ತಾರೆ. ನಾನವರಿಗೆ ಮೋಸ ಮಾಡಿಲ್ಲವೆಂದು ಅವರಿಗೆ ಖಚಿತವಾಗುತ್ತದೆ. ‘ನೀನು ಮೋಸಮಾಡುವುದಿಲ್ಲ. ಅದಕ್ಕೆ ನಿನ್ನ ಅಂಗಡಿಗೇ ಬರುತ್ತೇವೆ’ ಎಂದು ಎಷ್ಟೋ ಜನರು ಹೇಳುತ್ತಾರೆ.”
[ಪುಟ 7ರಲ್ಲಿರುವ ಚಿತ್ರ]
“ಹೊರದಬ್ಬಿದರೂ ನಾವು ಸುಳ್ಳು ಹೇಳುವುದಿಲ್ಲ ಎಂದು ಧಣಿಗೆ ಹೇಳಿದೆವು.”—ಡೊಮಿಂಗೋ, ಫಿಲಿಪ್ಪೀನ್ಸ್.
[ಪುಟ 7ರಲ್ಲಿರುವ ಚಿತ್ರ]
“ಆಡಿಟರುಗಳು ನನ್ನ ಪ್ರಾಮಾಣಿಕತೆಯನ್ನು ನೋಡಿ ಬಾಯಿತುಂಬ ಹೊಗಳಿದರು.”—ಪಿಯೆರ್, ಕ್ಯಾಮರೂನ್.
[ಪುಟ 7ರಲ್ಲಿರುವ ಚಿತ್ರ]
“ಒಮ್ಮೆ ಒಬ್ಬ ವಕೀಲ ಲಂಚ ಕೊಡಲು ಪ್ರಯತ್ನಿಸಿದ. . . . ಆ ಪಾರ್ಸಲನ್ನು ಬಿಚ್ಚುವುದೂ ಬೇಡವೆಂದು ನಾನೂ ನನ್ನ ಶ್ರೀಮತಿಯೂ ತೀರ್ಮಾನಿಸಿದೆವು.”—ರಿಕಾರ್ಡೋ, ಬ್ರಸಿಲ್.
[ಪುಟ 7ರಲ್ಲಿರುವ ಚಿತ್ರ]
ಕೆಲವೊಂದು ದಿನ ಬರ್ಟ್‌ಳಿಗೆ ವ್ಯಾಪಾರವೇ ಆಗುವುದಿಲ್ಲ. ಇಂಥ ಸಮಯದಲ್ಲಿ ಅವಳ ಬಳಿ ಹಣವಿಲ್ಲವೆಂದು ತಿಳಿದಿದ್ದರೂ ಆಹಾರ ಮಾರುವವರು ಊಟ ಕೊಡುತ್ತಾರೆ. ಹಣ ಸಿಕ್ಕಿದಾಕ್ಷಣ ಅವರ ಹಣ ಕೊಟ್ಟುಬಿಡುತ್ತಾಳೆಂಬ ನಂಬಿಕೆ ಅವರಿಗಿದೆ.