ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನನ್ನ ಗುರಿಗಳನ್ನು ಹೇಗೆ ಮುಟ್ಟಲಿ?

ನನ್ನ ಗುರಿಗಳನ್ನು ಹೇಗೆ ಮುಟ್ಟಲಿ?

ಯುವಜನರ ಪ್ರಶ್ನೆ

ನನ್ನ ಗುರಿಗಳನ್ನು ಹೇಗೆ ಮುಟ್ಟಲಿ?

ಇವುಗಳಲ್ಲಿ ಯಾವುದನ್ನು ಪಡೆಯಲು ಬಯಸುತ್ತೀರಿ?

● ಇನ್ನಷ್ಟು ಆತ್ಮವಿಶ್ವಾಸ

● ಮತ್ತಷ್ಟು ಸ್ನೇಹಿತರು

● ಇನ್ನಷ್ಟು ಸಂತೋಷ

ಗುರಿಗಳನ್ನಿಟ್ಟು ಅವುಗಳನ್ನು ಮುಟ್ಟಿದರೆ ಈ ಮೂರನ್ನೂ ಪಡೆಯಬಲ್ಲಿರಿ! ಹೇಗೆಂದು ನೋಡೋಣ.

ಇನ್ನಷ್ಟು ಆತ್ಮವಿಶ್ವಾಸ ಚಿಕ್ಕಪುಟ್ಟ ಗುರಿಗಳನ್ನು ಇಡುತ್ತಾ ಅವುಗಳನ್ನು ಮುಟ್ಟುತ್ತಾ ಹೋದಂತೆ ದೊಡ್ಡ ದೊಡ್ಡ ಗುರಿಗಳನ್ನಿಡಲು ಬೇಕಾದ ಆತ್ಮವಿಶ್ವಾಸ ಮೂಡುತ್ತದೆ. ಪ್ರತಿದಿನ ಎದುರಾಗುವ ಸಮಪ್ರಾಯದವರ ಒತ್ತಾಯವನ್ನು ಹಾಗೂ ಇತರ ಸವಾಲುಗಳನ್ನು ಜಯಿಸಲು ಬೇಕಾದ ಧೈರ್ಯ ನಿಮಗೆ ಸಿಗುತ್ತದೆ. ನಿಮ್ಮ ಈ ಆತ್ಮವಿಶ್ವಾಸ ಗಮನಿಸಿ ಇತರರಲ್ಲಿ ನಿಮಗಾಗಿ ಗೌರವ ಹುಟ್ಟಬಹುದು. ಕೆಲವರು ಒತ್ತಡ ಹೇರುವುದನ್ನೂ ಕಡಿಮೆಗೊಳಿಸಬಹುದು. ಅಷ್ಟೇಕೆ ಅವರು ನಿಮ್ಮನ್ನು ಮೆಚ್ಚಲೂಬಹುದು.—ಮತ್ತಾಯ 5:14-16 ಹೋಲಿಸಿ.

ಮತ್ತಷ್ಟು ಸ್ನೇಹಿತರು ಗುರಿ ಸಾಧಿಸುವ ಛಲವಿರುವವರೊಂದಿಗೆ ಅಂದರೆ ತಮಗೆ ಏನು ಬೇಕೆಂಬುದರ ಅರಿವಿದ್ದು ಅದನ್ನು ಸಾಧಿಸಲು ಶ್ರಮಿಸುವವರೊಂದಿಗೆ ಬೆರೆಯಲು ಜನರು ಇಷ್ಟಪಡುತ್ತಾರೆ. ನೀವಿಟ್ಟಿರುವ ಗುರಿಗಳಿಂದ ಆಕರ್ಷಿತರಾದವರು ಅವುಗಳನ್ನು ಸಾಧಿಸಲು ಬೇಕಾದ ಬೆಂಬಲ ನೀಡುತ್ತಾರೆ.—ಪ್ರಸಂಗಿ 4:9, 10.

ಇನ್ನಷ್ಟು ಸಂತೋಷ ಮುಂದೆ ನಡೆಯೋದು ನಡೆಯುತ್ತೆ ಎಂದು ಸುಮ್ಮನೆ ಕುಳಿತುಕೊಳ್ಳುವುದರಲ್ಲಿ ಮಜಾ ಏನಿದೆ ಹೇಳಿ. ‘ಗುಡ್ಡ ಹತ್ತಿದವನೆ ಬಯಲು ಕಾಣಬಲ್ಲ’ ಎಂಬಂತೆ ಗುರಿಗಳನ್ನು ಇಟ್ಟು ಅದನ್ನು ಮುಟ್ಟಿದವರೇ ಸಾಧನೆಯ ರುಚಿಯನ್ನು ಅನುಭವಿಸುವರು. ಆದ್ದರಿಂದಲೇ “ನಾನು ಗೊತ್ತುಗುರಿಯಿಲ್ಲದೆ ಓಡುತ್ತಿಲ್ಲ” ಎಂದು 1ನೇ ಶತಮಾನದಲ್ಲಿ ಜೀವಿಸಿದ ಅಪೊಸ್ತಲ ಪೌಲನೊಮ್ಮೆ ಹೇಳಿದ. (1 ಕೊರಿಂಥ 9:26) ನೀವು ದೊಡ್ಡ ದೊಡ್ಡ ಗುರಿಗಳನ್ನಿಟ್ಟು ಅವನ್ನು ಮುಟ್ಟಿದ್ದಂತೆ ಸಾಧನೆಯ ತೃಪ್ತಿಯು ಹೆಚ್ಚೆಚ್ಚಾಗುತ್ತದೆ.

ಹಾಗಾದರೆ ರೆಡಿನಾ? ಮೊದಲು ಮುಂದಿನ ಪುಟವನ್ನು ಕತ್ತರಿಸಿ ಮಡಿಚಿರಿ. ಈಗ ಪಟ್ಟಿಮಾಡಲಾಗಿರುವ ಹೆಜ್ಜೆಗಳನ್ನು ಅನುಸರಿಸಿರಿ. * (g10-KA 10)

“ಯುವಜನರ ಪ್ರಶ್ನೆ” ಲೇಖನಮಾಲೆಯ ಹೆಚ್ಚಿನ ಲೇಖನಗಳು www.watchtower.org/ype ವೆಬ್‌ಸೈಟ್‌ನಲ್ಲಿವೆ

[ಪಾದಟಿಪ್ಪಣಿ]

^ ನೀವು ಕೆಲವೇ ವಾರಗಳಲ್ಲಿ ಅಥವಾ ತಿಂಗಳುಗಳಲ್ಲಿ ಮುಟ್ಟಬಹುದಾದ ಗುರಿಗಳನ್ನು ಮನಸ್ಸಿನಲ್ಲಿಟ್ಟು ಈ ಸಲಹೆಗಳನ್ನು ನೀಡಿರುವುದಾದರೂ ಅದರಲ್ಲಿರುವ ಮೂಲತತ್ತ್ವಗಳು ದೊಡ್ಡ ಗುರಿಗಳಿಗೂ ಅನ್ವಯ.

Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.

ಯೋಚಿಸಿ ನೋಡಿ

● ತುಂಬಾ ಗುರಿಗಳನ್ನು ಒಮ್ಮೆಲೇ ಇಡಬಹುದೋ?—ಫಿಲಿಪ್ಪಿ 1:10.

● ಗುರಿಗಳನ್ನು ಇಡುವುದರ ಅರ್ಥ ಪ್ರತಿಯೊಂದು ಕ್ಷಣದಲ್ಲಿ ಏನು ಮಾಡಬೇಕೆಂಬುದನ್ನು ಯೋಜಿಸುವುದೋ?—ಫಿಲಿಪ್ಪಿ 4:5.

[ಪುಟ 21ರಲ್ಲಿರುವ ಚೌಕ/ಚಿತ್ರಗಳು]

ನಿಮ್ಮ ಗುರಿಗಳನ್ನು ಮುಟ್ಟಲು ಮೆಟ್ಟಿಲು

ಗುರುತಿಸಿ ಜ್ಞಾನೋಕ್ತಿ 4:25, 26 1

“ದೊಡ್ಡ ಗುರಿಗಳನ್ನಿಡಲು ಹೆದರಬೇಡಿ. ಇತರರು ಅಂಥದ್ದೇ ಗುರಿಗಳನ್ನು ಮುಟ್ಟಿರುವುದರಿಂದ ನಿಮ್ಮಿಂದಲೂ ಅದು ಸಾಧ್ಯ.”—ರಾಬೆನ್‌.

1. ಮನಸ್ಸಿಗೆ ಹೊಳೆದ ಗುರಿಗಳನ್ನು ಬರೆದಿಡಿ. ತಲೆಚಚ್ಚಿಕೊಳ್ಳಬೇಡಿ. ತುಂಬ ಯೋಚಿಸದೆ ನಿಮ್ಮ ಮನಸ್ಸಿಗೆ ಹೊಳೆದದ್ದನ್ನೆಲ್ಲ ಬರೆದಿಡಿ. ಕಡಿಮೆಪಕ್ಷ 10-20 ಗುರಿಗಳನ್ನು ಬರೆಯಲು ಪ್ರಯತ್ನಿಸಿ.

2. ಗುರಿಗಳನ್ನು ತೂಗಿನೋಡಿ. ನಿಮಗೆ ಯಾವ ಗುರಿಗಳ ಬಗ್ಗೆ ತುಂಬ ಉತ್ಸುಕತೆ ಇದೆ? ಯಾವ್ಯಾವುದು ದೊಡ್ಡ ಸವಾಲಿನಂತಿವೆ? ಯಾವ ಗುರಿಗಳನ್ನು ಮುಟ್ಟಿದರೆ ಹೆಮ್ಮೆಪಡುವಿರಿ? ನೆನಪಿಡಿ, ನಿಮಗೆ ಪ್ರಾಮುಖ್ಯವಾದವುಗಳೇ ಅತ್ಯುತ್ತಮ ಗುರಿಗಳು.

3. ಆದ್ಯತೆ ನೀಡಿ. ಕೆಲವೇ ದಿನಗಳಲ್ಲಿ ಮುಟ್ಟಬಹುದಾದ ಅಲ್ಪಾವಧಿಯ ಗುರಿಗಳನ್ನು ಮೊದಲು ಆರಿಸಿ. ನಂತರ ದೀರ್ಘಾವಧಿಯ (ಕೆಲವು ವಾರ ಅಥವಾ ತಿಂಗಳಲ್ಲಿ ಮುಟ್ಟಬಹುದಾದ) ಗುರಿಗಳನ್ನು ಆರಿಸಿ. ನೀವು ಮುಟ್ಟಲು ಇಷ್ಟಪಡುವಂಥ ಗುರಿಗಳನ್ನು ಆದ್ಯತೆಗನುಸಾರ ಪಟ್ಟಿಮಾಡಿ.

ಗುರಿಗಳು ಹೀಗಿರಬಹುದು:

ಗೆಳೆತನ ನನಗಿಂತ ದೊಡ್ಡವರೊಬ್ಬರೊಂದಿಗೆ ಸ್ನೇಹ ಬೆಳೆಸಬೇಕು. ಹಳೇ ಮಿತ್ರರೊಬ್ಬರೊಂದಿಗೆ ಪುನಃ ಸ್ನೇಹ ಬೆಳೆಸಬೇಕು.

ಆರೋಗ್ಯ ಪ್ರತಿವಾರ ಒಟ್ಟಿನಲ್ಲಿ 90 ನಿಮಿಷ ವ್ಯಾಯಾಮ. ಪ್ರತಿ ರಾತ್ರಿ ಎಂಟು ತಾಸು ನಿದ್ದೆ.

ಶಾಲೆ ಗಣಿತದಲ್ಲಿ ಹೆಚ್ಚು ಅಂಕ ಪಡೆಯಬೇಕು. ಪರೀಕ್ಷೆಯಲ್ಲಿ ಕಾಪಿಹೊಡೆಯಲು ಒತ್ತಡವಿದ್ದರೂ ಹಾಗೆ ಮಾಡದಂತೆ ದೃಢ ನಿಲ್ಲಬೇಕು.

ಆಧ್ಯಾತ್ಮಿಕತೆ ಪ್ರತಿದಿನ 15 ನಿಮಿಷ ಬೈಬಲ್‌ ಓದಬೇಕು. ಈ ವಾರ ಒಬ್ಬ ಕ್ಲಾಸ್‌ಮೇಟ್‌ಗೆ ನನ್ನ ನಂಬಿಕೆಗಳ ಬಗ್ಗೆ ತಿಳಿಸಬೇಕು.

ಯೋಜಿಸಿ ಜ್ಞಾನೋಕ್ತಿ 21:5 2

“ಗುರಿಗಳನ್ನಿಡುವುದು ಒಳ್ಳೇದೇ. ಆದರೆ ಅವನ್ನು ಮುಟ್ಟಲು ಯೋಜನೆಯೂ ಅಗತ್ಯ. ಇಲ್ಲದಿದ್ದರೆ ಗುರಿಗಳು ಗುರಿಗಳಾಗಿಯೇ ಉಳಿಯುತ್ತವೆ.” —ಡೆರ್ರಿಕ್‌.

ನೀವು ಆಯ್ಕೆ ಮಾಡಿರುವ ಪ್ರತಿಯೊಂದು ಗುರಿಯ ವಿಷಯದಲ್ಲಿ ಹೀಗೆ ಮಾಡಿ:

1. ಗುರಿಯನ್ನು ಬರೆಯಿರಿ.

2. ಕೊನೆ ತಾರೀಖು ನಿಗದಿಪಡಿಸಿ. ಕಾಲಮಿತಿ ಇಲ್ಲದ ಗುರಿ ಕನಸಾಗಿಯೇ ಉಳಿದುಬಿಡುತ್ತದೆ.

3. ತೆಗೆದುಕೊಳ್ಳಬೇಕಾದ ಹೆಜ್ಜೆಗಳ ಬಗ್ಗೆ ಯೋಜಿಸಿ.

4. ತಡೆಗಳನ್ನು ಮುನ್ನೋಡಿ. ನಂತರ ಅವುಗಳನ್ನು ಹೇಗೆ ಜಯಿಸುವಿರೆಂದು ಯೋಚಿಸಿ.

5. ಬದ್ಧರಾಗಿರಿ. ಈ ಗುರಿ ಮುಟ್ಟಲು ನಿಮ್ಮಿಂದಾದುದೆಲ್ಲವನ್ನು ಮಾಡುವಿರಿ ಎಂದು ಪ್ರತಿಜ್ಞೆಮಾಡಿಕೊಳ್ಳಿ. ಈಗ ಸಹಿ ಹಾಕಿ ದಿನಾಂಕ ಬರೆಯಿರಿ.

ನೇಪಾಳ ಟ್ರಿಪ್‌ ಹೋಗಲಿಕ್ಕೆ ನೇಪಾಳಿ ಭಾಷೆ ಕಲಿಯಬೇಕು ಜುಲೈ 1

ಹೆಜ್ಜೆಗಳು

1. ನೇಪಾಳಿ ಭಾಷೆ ಕಲಿಸುವ ಪುಸ್ತಕ ಖರೀದಿಸಬೇಕು.

2. ಪ್ರತಿ ವಾರ ಹತ್ತು ಹೊಸ ಪದಗಳನ್ನು ಕಲಿಯಬೇಕು.

3. ಈ ಭಾಷೆಯನ್ನಾಡುವವರಿಗೆ ಕಿವಿಗೊಡಬೇಕು.

4. ನನ್ನ ವ್ಯಾಕರಣ, ಉಚ್ಚಾರಣೆ ಸರಿಯಿದೆಯೋ ಎಂದು ನೋಡಲು ಯಾರಿಗಾದರೂ ಹೇಳಬೇಕು.

ಸಂಭಾವ್ಯ ತಡೆಗಳು

ನನ್ನ ಪರಿಚಯಸ್ಥರಲ್ಲಿ ಯಾರಿಗೂ ನೇಪಾಳಿ ಭಾಷೆ ಗೊತ್ತಿಲ್ಲ

ನಾನು ಇವನ್ನು ಜಯಿಸಬೇಕೆಂದರೆ

ಆಡಿಯೋ ರೆಕಾರ್ಡ್‌ಗಳನ್ನು ಕೇಳಬೇಕು.

..... .....

ಸಹಿ ದಿನಾಂಕ

ಕಾರ್ಯಕ್ಕಿಳಿಸಿ! ಯೋಹಾನ 13:17 3

“ಗಮನ ಬೇರೆಡೆಗೆ ಹೋಗಿ ನಾವು ಗುರಿಗಳನ್ನು ಸುಲಭವಾಗಿ ಮರೆತುಬಿಡಬಹುದು. ಹಾಗಾಗಿ ನಮ್ಮ ಗಮನವನ್ನು ಗುರಿಗಳ ಮೇಲೆಯೇ ಕೇಂದ್ರೀಕರಿಸಿ ಅವನ್ನು ಮುಟ್ಟಲು ಶ್ರಮಿಸುತ್ತಾ ಇರಬೇಕು.”—ಎರಿಕಾ.

ಒಡನೆ ಪ್ರಾರಂಭಿಸಿ. ಹೀಗೆ ಕೇಳಿಕೊಳ್ಳಿ: ‘ನನ್ನ ಗುರಿ ಮುಟ್ಟಲು ಇವತ್ತೇನು ಮಾಡಲಿ?’ ಅದನ್ನು ಮುಟ್ಟಲು ಬೇಕಾದ ಎಲ್ಲ ವಿವರಗಳನ್ನು ನೀವು ಬರೆದಿಟ್ಟಿರಲಿಕ್ಕಿಲ್ಲ. ಪರ್ವಾಗಿಲ್ಲ. “ಒಳ್ಳೆಯ ಹವಾಮಾನಕ್ಕಾಗಿ ಕಾದುಕೊಂಡಿರುವವನು ಬೀಜ ಬಿತ್ತುವುದಿಲ್ಲ; ಮಳೆ ಬರಬಹುದೆಂದು ಮೋಡವನ್ನು ನೋಡುತ್ತಿರುವವನು ಪೈರು ಕೊಯ್ಯನು” ಎನ್ನುತ್ತದೆ ಬೈಬಲ್‌. (ಪ್ರಸಂಗಿ 11:4, ಪರಿಶುದ್ಧ ಬೈಬಲ್‌*) ನೀವು ಇಂದು ಏನು ಮಾಡಬಹುದೆಂದು ಯೋಚಿಸಿ. ಚಿಕ್ಕ ವಿಷಯವಾದರೂ ಸರಿ ಅದನ್ನು ಮಾಡಿ.

ಗುರಿಗಳ ಪಟ್ಟಿಯನ್ನು ಪ್ರತಿದಿನ ನೋಡಿ. ಪ್ರತಿಯೊಂದು ಗುರಿ ನಿಮಗೇಕೆ ಪ್ರಾಮುಖ್ಯ ಎಂಬುದನ್ನು ನೆನಪಿಸಿಕೊಳ್ಳಿ. ಗುರಿಯ ಯಾವ ಹಂತಕ್ಕೆ ತಲುಪಿದ್ದೀರೆಂದು ತಿಳಿಯಲು ಪ್ರತಿಯೊಂದು ಹೆಜ್ಜೆ ತೆಗೆದುಕೊಂಡ ನಂತರ ಹಾಕಿ ಅಥವಾ ಮುಗಿಸಿದ ದಿನಾಂಕ ಬರೆಯಿರಿ.

ಹೊಂದಿಸಿಕೊಳ್ಳಿ. ನೀವು ಪಕ್ಕಾ ಯೋಜನೆಗಳನ್ನು ಮಾಡಿದ್ದರೂ ಕೆಲವೊಮ್ಮೆ ಅದರಲ್ಲಿ ಬದಲಾವಣೆಗಳನ್ನು ಮಾಡಬೇಕಾದೀತು. ಪರ್ವಾಗಿಲ್ಲ. ಪ್ರತಿ ಅಂಶವನ್ನೂ ಚಾಚೂತಪ್ಪದೆ ಪಾಲಿಸುವುದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಕೊನೆ ಗುರಿ ಮುಟ್ಟುವ ದಿಶೆಯತ್ತ ಸಾಗುತ್ತಾ ಇರಿ.

ಕಲ್ಪನಾಶಕ್ತಿ ಬಳಸಿ. “ಫಾಸ್ಟ್‌ ಫಾರ್ವರ್ಡ್‌” ಮಾಡಿ ನಿಮ್ಮ ಗುರಿ ಮುಟ್ಟಿರುವುದನ್ನು ಕಲ್ಪಿಸಿಕೊಳ್ಳಿ. ಸಾಧನೆಯ ರುಚಿ ಸವಿಯಿರಿ. ಈಗ “ರಿವೈಂಡ್‌” ಮಾಡಿ ಪ್ರತಿಯೊಂದು ಹೆಜ್ಜೆಯನ್ನು ಒಂದೊಂದಾಗಿ ಊಹಿಸಿಕೊಳ್ಳಿ. ಈಗ “ಪ್ಲೇ” ಒತ್ತಿ, ನೀವು ಪ್ರತಿಯೊಂದು ಹೆಜ್ಜೆಯನ್ನು ಪೂರೈಸಿ ಗುರಿ ಮುಟ್ಟಿದಾಗ ಆಗುವ ಹೆಮ್ಮೆಯನ್ನು ಕಲ್ಪಿಸಿಕೊಳ್ಳಿ. ಈಗ ಗುರಿಯತ್ತ ಸಾಗಲಾರಂಭಿಸಿ!

[ಚಿತ್ರ]

ಗುರಿಗಳು ನೀಲಿನಕ್ಷೆ ಇದ್ದಂತೆ. ಅವುಗಳನ್ನು ಸಾಕಾರಗೊಳಿಸಲು ಶ್ರಮ ಅಗತ್ಯ!

[ಪುಟ 21ರಲ್ಲಿರುವ ಚೌಕ/ಚಿತ್ರಗಳು]

ನಿಮ್ಮ ಸಮಪ್ರಾಯದವರು ಏನನ್ನುತ್ತಾರೆ? 4

ಎದುರುನೋಡುವಂಥ, ಗಮನ ಸೆಳೆದಿಡುವಂಥ ವಿಷಯವೊಂದಿಲ್ಲದಿದ್ದರೆ ಬೇಸರವಾಗೋದು ಸಹಜ. ಆದರೆ ಗುರಿಗಳನ್ನಿಟ್ಟು ಅವನ್ನು ಮುಟ್ಟಿದರೆ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತೆ.—ರೀಡ್‌.

ನೆನಸಿದ ರೀತಿಯಲ್ಲಿ, ಸಮಯದಲ್ಲಿ ಗುರಿಗಳನ್ನು ತಲುಪಲು ಆಗದಿದ್ದರೆ ಕೀಳರಿಮೆ ಬೇಡ. ಚಿಂತಿಸಿ ಫಲವಿಲ್ಲ. ಬಿಡದೆ ಗುರಿಮುಟ್ಟಲು ಶ್ರಮಿಸಿ.—ಕೊರೀ.

ನಿಮ್ಮಂಥದ್ದೆ ಗುರಿಗಳನ್ನಿಟ್ಟು ಮುಟ್ಟಿದವರೊಂದಿಗೆ ಮಾತಾಡಿ. ಅವರು ನಿಮ್ಮಲ್ಲಿ ಸ್ಫೂರ್ತಿ ತುಂಬಿಸಿ ಪ್ರಾಯೋಗಿಕ ಸಲಹೆ ನೀಡುವರು. ನಿಮ್ಮ ಕುಟುಂಬದವರಿಗೂ ನಿಮ್ಮ ಗುರಿಗಳ ಬಗ್ಗೆ ತಿಳಿಸಿ. ಅವರ ಬೆಂಬಲವೂ ಸಿಗುವುದು. —ಜೂಲ್ಯಾ.

[ಪುಟ 21ರಲ್ಲಿರುವ ರೇಖಾಕೃತಿ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಕತ್ತರಿಸಿ

ಮಡಿಚಿ